• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲರ ಜೀವನವೂ ಸಿಹಿಕಹಿಗಳ 'ಕಲಸುಮೇಲೋಗರ'

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಈ ಬರಹ ಅವರೇಕಾಳು/ಅವರೇಕಾಯಿ ಮೇಲೋಗರದ ಬಗ್ಗೆ ಅಂತೂ ಅಲ್ಲ.

ತಿನ್ನೋದೆಲ್ಲಾ ಹೊಟ್ಟೆಗೆ ಹೋಗುತ್ತೆ, ನಿಜಾ ತಾನೇ? ಒಂದು ಹಬ್ಬದೂಟ ಮಾಡುವಾಗ ಅಥವಾ ಮದುವೆ ಮನೆಯ ಊಟ ಮಾಡುವಾಗ ಅಲ್ಲಿನ ಬಾಳೆಯ ಎಲೆಯ ಮೇಲಿನ ನೋಟ ಹೇಗಿರುತ್ತೆ?

ಎಡಬದಿಯ ಮೇಲಿನ ಮೂಲೆಯಲ್ಲಿ ಉಪ್ಪು, ಬಲಬದಿಯ ಕೆಳಗಿನ ತುದಿಯಲ್ಲಿ ಒಂದು ಪಾಯಸದ ಜೊತೆಗೆ ತೊವ್ವೆ. ಅದು ಅಪ್ಪ ಮತ್ತು ಅಮ್ಮ. ಎರಡನ್ನೂ ತಿನ್ನಲೇಬೇಕು ಎನ್ನುತ್ತಿದ್ದರು ದೊಡ್ಡವರು. ಬಲಬದಿಯ ಮೇಲಿನ ತುದಿಯಲ್ಲಿ ಬಹುಶಃ ಪೈನಾಪಲ್ ಗೊಜ್ಜು ಮತ್ತು ಎಡಬದಿಯ ಕೆಳ ತುದಿಯಲ್ಲಿ ಒಂದು ಚಿತ್ರಾನ್ನ ಅಥವಾ ಕಲಸಿದ ಅನ್ನ ಜೊತೆಗೆ ಮೇಲೊಂದು ಹಪ್ಪಳ ಅಥವಾ ಆಂಬೋಡೆ ಅಥವಾ ಬೋಂಡಾ... ಹೀಗೆ ಒಟ್ಟಿನಲ್ಲಿ ಎಣ್ಣೆಯಲ್ಲಿ ಕರೆದ ಪದಾರ್ಥ ಅನ್ನಿ. ಮಿಕ್ಕದ್ದು ಎಂದರೆ ಒಂದೆರಡು ಪಲ್ಯ, ಒಂದೆರಡು ಕೋಸಂಬರಿ, ಮಧ್ಯೆ ಅನ್ನ - ಹುಳಿ - ಸಾಂಬಾರು - ಸಾರು ಅಂತೇನೋ. ಈಗ ಮತ್ತದೇ ಮಾತು 'ತಿನ್ನೋದೆಲ್ಲಾ ಹೊಟ್ಟೆಗೇ ಹೋಗೋದು' ಎಂದರೆ ಬಾಳೆಯ ಎಲೆಯ ಮೇಲಿರೋದೆಲ್ಲವನ್ನೂ ಒಟ್ಟುಗೂಡಿಸಿ ತಿಂದರೂ ಹೊಟ್ಟೆಗೇ ಹೋಗುತ್ತೆ ಅಂತ ಕಲಸಿ ತಿನ್ನೋಕ್ಕಾಗುತ್ಯೇ? ಹಾಗೆ ತಿಂದರೆ ಅಲ್ಲಲ್ಲ ಕಲಸಿದರೆ ಅದು "ಕಲಸುಮೇಲೋಗರ"...

ಮಿಕ್ಸೋ ಮಿಕ್ಸು... ಅಂದರೇನು? ಒಂದು mixieಯಾ ಕೆಲಸ ಇದೇ ಅಲ್ಲವೇ? ಕಡಲೆಪಪ್ಪು, ಮೆಣಸಿನಕಾಯಿ, ಉಪ್ಪು, ಒಂದಷ್ಟು ತುರಿದ ಕೊಬ್ಬರಿ, ಒಂದಷ್ಟು ಕೊತ್ತಂಬರಿ ಸೊಪ್ಪು ಜೊತೆಗೆ ಒಂದಷ್ಟು ನೀರು ಹಾಕಿ ಗರರ್ ಅಂತ ತಿರುಗಿಸಿದರೆ ಅಲ್ಲೊಂದು ಚಟ್ನಿ ರೆಡಿ. ಇಲ್ಲಿ ಕಲಸುಮೇಲೋಗರ ಮಾಡದೇ ಒಂದೊಂದೂ ಪದಾರ್ಥ ಅರ್ಥಾತ್ raw materialಗಳನ್ನು ಒಂದೊಂದೇ ತಿಂದು ಅಲ್ಲಾಡಿದರೆ ಹೊಟ್ಟೆಯಲ್ಲಿ ಚಟ್ನಿ ಆಗುತ್ತದೆಯೇ? ಆಗಬಹುದೇನೋ, ಕಂಡವರ್ಯಾರು?

ಶ್ರೀನಾಥ್ ಭಲ್ಲೆ ಅಂಕಣ: ಇಹದ ಓಕೆ, 'ಪರ'ದ ವಿಷಯ ಸುಮ್ನೆ ಯೋಚಿಸದಿರಿ

ಇದೇ ಲಾಜಿಕ್ ಅನ್ನು ಉಪ್ಪು ಕಡಿಮೆ ಹಾಕಿರುವ ಪದಾರ್ಥ ಉಂಡು ಆಮೇಲೆ ಉಪ್ಪು ತಿಂದು ಅಲ್ಲಾಡಿದರೆ ಮಿಕ್ಸ್ ಆಗುತ್ತದೆಯೇ? ಸಕ್ಕರೆ ಇಲ್ಲದೆ ಕಾಫಿ ಕುಡಿದು ಆನಂತರ ಸಕ್ಕರೆ ತಿಂದರೆ ಒಳಗೆ ಮಿಕ್ಸ್ ಆಗುತ್ತದೆಯೇ? ಜೋರಾಗಿ ತಲೆಯನ್ನು ಆಚೆ ಈಚೆ ಆಡಿಸಿದರೆ ತಲೆಯೊಳಗಿನ ಆಲೋಚನೆಗಳೆಲ್ಲಾ ಮಿಕ್ಸ್ ಆಗುತ್ತದೆಯೇ? ಸ್ವಲ್ಪ ಆಲೋಚನೆ ಮಾಡಿ ನೋಡಿ, ಇಲ್ಲೆಲ್ಲಾ ಏಕೆ ಈ ಕಲಸುಮೇಲೋಗರ ಕೆಲಸ ಮಾಡೋದಿಲ್ಲ ಅಂತ !

ಅಮೇರಿಕದಲ್ಲಿ 'ಚಿಪೊಟ್ಲೆ' (chipotle) ಎಂಬ ಒಂದು mexican ಚೈನ್ ರೆಸ್ಟೋರೆಂಟ್ ಇದೆ. ಒಂದು veggie bowl ಎಂದು ಕೇಳಿ ಅದರಲ್ಲಿ ಏನೇನು ಬೇಕು ಎಂದು ಹೇಳಬಹುದು ಅರ್ಥಾತ್ ಬಿಳಿ ಅಥವಾ ಕಂದು ಅನ್ನ, ಒಂದಷ್ಟು ಬೇಯಿಸಿದ ತರಕಾರಿ, Guocomole, ಹೀಗೆ ಒಂದಷ್ಟು ಸೇರಿಸಿದ ಮೇಲೆ ಅದನ್ನೆಲ್ಲ ತಿನ್ನುವ ಮುಂಚೆ ಅದನ್ನು ಕಲಸಿಕೊಂಡು ತಿನ್ನಬೇಕು. ಈಗ ಮೇಲೆ ಹೇಳಿದೆನಲ್ಲಾ ಹಾಗೆ, ಬಾಳೆಯ ಎಲೆಯ ಮೇಲಿನ ಪದಾರ್ಥಗಳನ್ನು ಕಲಸಿಕೊಂಡು ಒಮ್ಮೆಲೇ ಉಂಡಂತೆ.

ಇದೇ ಲಾಜಿಕ್, ಕುಡಿವ ಒಂದು ಪಾನೀಯಕ್ಕೂ ಆಗಬಹುದು. ಹಲವಾರನ್ನು ಸೇರಿಸಿದಾಗ ಅದು ಕಾಕ್ಟೇಲ್ ಆಗುತ್ತದೆ. ಈಗ ಅರ್ಥವಾಗಿರಬೇಕು ಈ 'ಕಲಸುಮೇಲೋಗರ' ಅಂದರೆ ಏನು ಅಂತ.

ಹಣ್ಣನ್ನು ಹಣ್ಣಾಗಿ ತಿನ್ನಬಹುದು ಅಥವಾ ಹಣ್ಣುಗಳನ್ನು ಹೆಚ್ಚಿ ಒಗ್ಗೂಡಿಸಿ fruit salad ಮಾಡಿಕೊಂಡೂ ತಿನ್ನಬಹುದು. ಒಂದು ತರಕಾರಿಯನ್ನು ಬಳಸಿ ಹುಳಿ ಮಾಡಬಹುದು ಅಥವಾ ಹಲವಾರು ತರಕಾರಿಗಳನ್ನು ಬಳಸಿಯೂ ಹುಳಿ ಅಥವಾ ಕೂಟು ಮಾಡಬಹುದು. ಒಂದು ಹಸಿ ತರಕಾರಿಯನ್ನು ಹಾಗೆಯೇ ತಿನ್ನಬಹುದು ಅಥವಾ ಕಳ್ಳೆಪುರಿ ಮತ್ತಿತರೇ ಕುರು೦ ಕುರು೦ನೊಂದಿಗೆ ಭೇಲ್ಪುರಿ ಮಾಡಿಕೊಂಡೂ ತಿನ್ನಬಹುದು. ಕೆಲವನ್ನು ಬಿಡಿ ಬಿಡಿಯಾಗಿ ತಿನ್ನಬೇಕು ಕೆಲವನ್ನು ಸೇರಿಸಿಯೇ ತಿನ್ನಬೇಕು.

ಶ್ರೀನಾಥ್ ಭಲ್ಲೆ ಅಂಕಣ; ಹೆಸರಿನಲ್ಲೇನಿದೆ ಬಿಡಿ...

'ಹಾವಿನ ಹೆಡೆ' ಸಿನಿಮಾದಲ್ಲಿ ಒಂದು ವಿಶೇಷ ಹಾಡಿದೆ. "ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ, ಮಾಡಿಕೊಡಲೇ ನಾನು" ಅಂತ. ಇದೇನಪ್ಪಾ ಈ ಹಾಡು ಇಲ್ಲೇಕೆ ಬಂತು? ಈ ಕಜ್ಜಾಯದ ಹಾಡಿನ ದೃಶ್ಯವನ್ನು ನೋಡಿದಾಗ ಅಲ್ಲಿ ಕಜ್ಜಾಯ ಬಿಟ್ಟು ಮಿಕ್ಕೆಲ್ಲಾ ಇದೆ ಅನ್ನೋದೇ ಮಜಾ. ಆ ಹಾಡಿನಲ್ಲಿ ನೃತ್ಯವಿದೆ, ಸಂಗೀತವಿದೆ, ಹಾಸ್ಯವಿದೆ, ಅಷ್ಟೇ ಅಲ್ಲದೇ fight ಇದೆ. ಕಜ್ಜಾಯ ಎಂದರೆ ಹೊಡೆತ ಎಂಬ slang ಅರ್ಥವೂ ಇದೆ ಎಂದು ತೋರಿಸಲಾಗಿದೆ. ಒಂದು ಹಾಡಿನಲ್ಲಿ ಇಷ್ಟೆಲ್ಲಾ ಇರೋದ್ರಿಂದ, ಇದೊಂದು "ಕಲಸುಮೇಲೋಗರ" ಹಾಡು ಎಂದರೆ ತಪ್ಪಾಗಲಾರದು.

ಒಂದಂತೂ ನಿಜ, 'ಕಲಸುಮೇಲೋಗರ' ಅಂದ ಮಾತ್ರಕ್ಕೆ ಅದೊಂದು ಚಿತ್ರಾನ್ನ ಅಂತೇನಲ್ಲಾ. ಇಡೀ ಬಾಳೆಯ ಎಲೆಯ ಮೇಲೆ ಬರೀ ಸಿಹಿ ತಿಂಡಿಗಳನ್ನೇ ಇಟ್ಟಲ್ಲಿ ಎಷ್ಟೂ ಅಂತ ತಿನ್ನಲಾದೀತು? ಮಧ್ಯೆ ಮತ್ತೊಂದು ಬೇರೆ ಸವಿ ಬೇಕು ಅನ್ನಿಸೋದು ನಿಜ. ಬರೀ ಖಾರವೇ ಇದ್ದರೆ ಮಧ್ಯೆ ಅಲ್ಲೊಂದು ಸಿಹಿ ಕೂತಿದ್ದರೆ ಆಗ ಸಿಹಿಗೂ ಮತ್ತು ಖಾರಕ್ಕೂ ಒಂದು ಮೆರುಗು.

ಈ ಕಲಸುಮೇಲೋಗರ ನಮ್ಮ ಜೀವನದಲ್ಲಿ ಹೇಗೆ ಅಂತ ಕೊಂಚ ನೋಡೋಣ ಬನ್ನಿ. ಬಹಳ ಹಿಂದೆ, ನಮ್ಮ ಕಚೇರಿಯಲ್ಲಿ ಒಂದು ಚಟುವಟಿಕೆ ನಡೆಸಲಾಯ್ತು. ಏನಪ್ಪಾ ಅಂದ್ರೆ, 'ಹುಟ್ಟಿನಿಂದ ಈವರೆಗೆ, ನಿಮ್ಮ ಜೀವನದಲ್ಲಿ ಏನೇನು ದೊಡ್ಡ ಘಟನೆಗಳು ಆಗಿವೆ ಅಂತ ನೆನಪಿಸಿಕೊಂಡು, ಗೆರೆಯನ್ನು ಎಳೆಯುತ್ತಾ ಸಾಗಬೇಕು. ಒಳಿತಾದರೆ ಗೆರೆಯನ್ನು ಮೇಲಕ್ಕೆ ಏರಿಸಬೇಕು, ದುಃಖಕರ/ಸೋಲು ಎಂಬುದಾದರೆ ಗೆರೆಯನ್ನು ಇಳಿಸಬೇಕು. ಉದಾಹರಣೆಗೆ ನಿಮ್ಮ ಹುಟ್ಟು ಅಂಬೋ ಗೆರೆ ಮೇಲಕ್ಕೆ ಸಾಗಿದರೆ, ಯಾವುದೋ ಸಾವು ಎಂದಾದರೆ ಏರಿದ ರೇಖೆಯನ್ನು ಇಳಿಸಬೇಕು, ಹೀಗೆ...

ಶ್ರೀನಾಥ್ ಭಲ್ಲೆ ಅಂಕಣ; ಒಂದೊಂದೂ ಬೆವರ ಹನಿ ಮುತ್ತಾಯ್ತದೋ...

ಎಲ್ಲರೂ ಅವರವರ chart ಸಿದ್ದ ಪಡಿಸಿದ ಮೇಲೆ, ಅದನ್ನು ತಂದು ಸಾಲಾಗಿ ಒಂದೆಡೆ ಇಡಬೇಕು. ಹಾಗೆ ಅಲ್ಲಿ ಇರಿಸಿದ chart ಗಮನಿಸಿದಾಗ ಒಂದಂಶ ಸಾಮಾನ್ಯವಾಗಿ ಕಂಡಿದ್ದು ಎಂದರೆ ಯಾರ ಜೀವನವೂ ಬರೀ ಏರಿಕೆಯ ಗೆರೆಯಾಗಿರಲಿಲ್ಲ, ಅಥವಾ ಬರೀ ಕೆಳಮುಖವಾಗಿಯೇ ಇರಲಿಲ್ಲ. ಇಂದಿನ ವಿಷಯದಲ್ಲಿ ಹೇಳುವುದಾದರೆ ಎಲ್ಲರ ಜೀವನವೂ ಸಿಹಿಕಹಿಗಳ 'ಕಲಸುಮೇಲೋಗರ'!

ಈ 'ಕಲಸುಮೇಲೋಗರ'ದ ಜೀವನದಲ್ಲಿ ಒಂದು ಸೋಲು ಎಂದರೆ ಪ್ರಪಾತಕ್ಕೆ ಬಿದ್ದಂತೆ ಅಂತೇನಲ್ಲ. ಹಾಗೆಯೇ ಗೆಲುವು ಎಂದ ಮಾತ್ರಕ್ಕೆ ಒಂದು ಕೋಟಿ ಗೆಲ್ಲಲೇಬೇಕು ಅಂತಲ್ಲ ಅಲ್ಲವೇ? ಕಚೇರಿಯ ಒಂದು ಸನ್ನಿವೇಶವನ್ನೇ ತೆಗೆದುಕೊಂಡರೆ, ಇಂಥಾ ದಿನ ಒಂದು ಕೆಲಸ ಮುಗಿಸಬೇಕು ಅಂತ ಅಂದುಕೊಂಡು ಆ ಕೆಲಸವನ್ನು ಆ ಸಮಯಕ್ಕೆ ಅಥವಾ ಅದಕ್ಕಿಂತಲೂ ಮುಂಚೆಯೇ ಮುಗಿಸಿದಾಗ ಅದು ಗೆಲುವು ತಾನೇ? ಈ ಗೆಲುವುಗಳು ಹೇಗೆ ಎಂದರೆ Bhelpuri ಯಲ್ಲಿ ಸಿಗುವ ಖಾರ ಹಚ್ಚಿದ ಕಡಲೆಕಾಯಿ ಬೀಜದಂತೆ. ಆಗಾಗ ಆನಂದ ಸಿಗುತ್ತಾ ಸಾಗಬೇಕು.

ಈವರೆಗೂ ಕಂಡ ಹಲವು ಸನ್ನಿವೇಶಗಳಿಂದ ಏನರ್ಥ ಮಾಡಿಕೊಳ್ಳಬಹುದು ಎಂದರೆ, ಕೆಲವು ಸಂದರ್ಭಗಳಲ್ಲಿ ವಿಂಗಡಣೆ ಅಂತ ಇರುವುದು ಚೆನ್ನ. ಹಲವು ಸಂದರ್ಭಗಳಲ್ಲಿ ಈ ಕಲಸುಮೇಲೋಗರ ಇದ್ದರೆ ಚೆನ್ನ. ಬಟ್ಟೆಯ ರಾಶಿಯಲ್ಲಿ ಒಂದು ಜೊತೆ ಸಾಕ್ಸ್ ಹುಡುಕುವ ಕ್ರಿಯೆಯಲ್ಲಿ ಕಲಸುಮೇಲೋಗರ ಬೇಡ, ಅದು ಹಿಂಸೆ. ಬಾಳೆಯ ಎಲೆಯಲ್ಲಿನ ಊಟವನ್ನು ಒಮ್ಮೆಲೇ ಕಲಸಿಕೊಂಡು ಉಣ್ಣುವುದರಲ್ಲಿ ಮಜಾ ಇರೋದಿಲ್ಲ. ಇಲ್ಲಿಯೂ ಕಲಸುಮೇಲೋಗರ ಬೇಡ. ಆದರೆ ಜೀವನವನ್ನು ಸವಿಯಬೇಕು, ಅನುಭವಗಳನ್ನು ಪಡೆಯುತ್ತಾ ಸವೆಯಬೇಕು ಎಂದಾಗ ಅಲ್ಲಿ ಕಲಸುಮೇಲೋಗರ ಬೇಕಾಗುತ್ತದೆ.

ಬರೀ ಸೋಲುಂಡವನಿಗೆ ಜೀವನದಲ್ಲಿ ಆಶಾಕಿರಣ ಕಾಣುವುದೇ ಇಲ್ಲ, ಅಥವಾ ಬರೀ ಗೆಲುವನ್ನೇ ಕಂಡವನಿಗೆ ಸೋತ ಹೃದಯವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗೋದಿಲ್ಲ. ಹುಟ್ಟಿದ ಕೂಸು ಒಂದು ವರ್ಷದ ಎಲ್ಲಾ ಮಾಸಗಳ ವಾತಾವರಣವನ್ನು ಮೈಗೂಡಿಸಿಕೊಂಡು ಬೆಳೆದು ನಿಲ್ಲುವಂತೆ, ಸೋಲು-ಗೆಲುವನ್ನು ಉಂಡು ಬೆಳೆಯೋಣ... ಬಂದ ದಾರಿಯ ಅನುಭವವನ್ನು ಮರೆಯದೇ ಬೆಳೆಯೋಣ...

English summary
Life is a mixture of both happiness and sadness. We have to take it in a same way
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X