ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಒಂದು ಟೀ ಕುಡ್ಕೊಂಡು ಒಂಟಿ ಬಗ್ಗೆ ಮಾತನಾಡೋಣ

|
Google Oneindia Kannada News

ಮೊನ್ನೆ ಒಂದು ಬರಹದಲ್ಲಿ ಲೆಕ್ಕದ ಬಗ್ಗೆ ಮಾತನಾಡಿದ್ದೆ. ಜೀವಮಾನದಲ್ಲಿ ಎಷ್ಟು ಬಾರಿ ಟೀ ಅಥವಾ ಕಾಫಿ ಕುಡಿದಿರಬಹುದು, ಎಷು ಬಾರಿ ಚಿತ್ರಾನ್ನ, ಉಪ್ಪಿಟ್ಟು ತಿಂದಿರಬಹುದು ಅಂತೆಲ್ಲಾ ಒಂದು ಐಡಿಯಾ ಇದೆಯಾ ಎಂಬ ಕೆಲಸಕ್ಕೆ ಬಾರದ ಲೆಕ್ಕ. ಆದರೆ ಇಲ್ಲೊಂದು ಸೂಕ್ಷ್ಮ ಅಡಗಿತ್ತು. ಪ್ರತೀ ಬಾರಿ, ತಯಾರಿಸಿದ ಪದಾರ್ಥಗಳೆಲ್ಲಾ ಉಂಡಿದ್ದೇವೆಯೇ? ಕುಡಿದಿದ್ದೇವೆಯೇ? ಉದಾಹರಣೆಗೆ, ಕಾಫಿ ಕುಡಿಯುವಾಗ ಬೇರೇನೋ ಕೆಲಸ ಬಂದು ಆ ಕಾಫಿ ಅಲ್ಲೇ ಉಳಿದು ಆ ನಂತರ ಚೆಲ್ಲಿರಬಹುದು.

ಅನ್ನ ಅಥವಾ ಹುಳಿ ಹಳಸಿದೆ ಎಂದು ಹೊರಕ್ಕೆ ಹಾಕಿರಬಹುದು ಕೂಡ. ಉಳಿದ ಅನ್ನ ಬೇರೆಯವರಿಗೆ ನೀಡಿರಬಹುದು ಆದರೆ ಇಲ್ಲಿ ಲೆಕ್ಕಕ್ಕೆ ಇಲ್ಲ. ನಿಮ್ಮ ಅನಿಸಿಕೆಯ ಪ್ರಕಾರ ಅವರು ಅದನ್ನು ಉಂಡಿರುತ್ತಾರೆ. ಆದರೆ ಆ ಇನ್ನೊಬ್ಬರು ಅದನ್ನು ಹೊರಕ್ಕೆ ಹಾಕಿರಬಹುದು. ಒಂದೇ ಸಾಲಿನಲ್ಲಿ ಹೇಳಬೇಕು ಎಂದರೆ, ಉಂಡಿದ್ದೆಷ್ಟು, ಕುಡಿದಿದ್ದೆಷ್ಟು ಎಂಬ ಲೆಕ್ಕದಂತೆಯೇ ಚೆಲ್ಲಿದ್ದೆಷ್ಟು ಅಂತ ಲೆಕ್ಕ ಹಾಕಬಹುದೇ? ಬೇಡಾ ಬಿಡಿ. ಈಗ ಇಂದಿನ ಮಾತಿಗೆ ಬರೋಣ.

ಒನ್ ಟೀ ಅನ್ನೋದು ಬಾಲ್ಯಾವಸ್ಥೆ
ಮೇಲಿನ ಬರಹಕ್ಕೆ ಒಬ್ಬರೊಂದಿಗೆ ಪ್ರತಿಕ್ರಿಯೆ ವಿಷಯ ಹಂಚಿಕೊಳ್ಳುವಾಗ, ನನ್ನಂತೆಯೇ ಅವರೂ ದಿನವೊಂದರಲ್ಲಿ ಎರಡು ಕಾಫಿ ಮತ್ತು ಒಂದು ಟೀ ಎಂದು ಅರಿವಾಯ್ತು. ಆಗ ತಲೆಗೆ ಬಂದಿದ್ದೇ ಇಂದಿನ ವಿಷಯ, ಒನ್ ಟೀ ಮತ್ತು ಒಂಟಿ. ಮೊದಲಲ್ಲಿ, ಈ ಒನ್ ಟೀ ವಿಷಯಕ್ಕೆ ಮೊದಲು ಬರೋಣ. ಈ ಒನ್ ಟೀ ಅನ್ನೋದು ಬಾಲ್ಯಾವಸ್ಥೆ. ಜಗತ್ತಿನ ವಿಷಯವನ್ನೇ ತಲೆಗೆ ಹಾಕಿಕೊಳ್ಳದ ವಯೋಮಾನ ಈ ಒನ್ ಟೀ ಯದ್ದು. ಇದರಾಚೆಗಿನ ಜೀವನವೇ ಥರ್ ಟೀ, ಸಿಕ್ಸ್ ಟೀ ಮತ್ತು ನೈನ್ ಟೀ ಅನ್ನೋದು 'ಬೇರೆಯೇ ಪಾನೀಯ' ಕುರಿತಾದ ಸಪ್ಪೆ ಜೋಕು. ಈಗ ಮತ್ತೆ ಗಂಭೀರ, ಆಯ್ತಾ?

Srinath Bhalle Column: Lets Have aTea And Talk About Loneliness

ಒಂದು ಕಪ್ ಚಹಾ ಅಥವಾ ಒನ್ ಟೀ ಅಂದ್ರೆ ಒಂದು ಕಪ್ ಚಹಾ ಅಷ್ಟೇ! ಇಲ್ಲಿನ ಪ್ರಮಾಣ ಗೊತ್ತಿಲ್ಲ. ಸಣ್ಣ ಕಪ್‌ನಲ್ಲಿ ಕುಡಿದರೂ ಅದು ಒನ್ ಟೀ, ಒಂದು ಹಂಡೆ ಭರ್ತಿ ಕುಡಿದರೂ ಅದು ಒನ್ ಟೀ. ಇಲ್ಲಿ ಒನ್ ಅನ್ನೋದು ಒಂದು ಬಾರಿ ಅಂತಷ್ಟೇ ವಿನಃ ಇಂತಿಷ್ಟು ಅಂತ ಪ್ರಮಾಣ ಅಲ್ಲ. ಹಾಗಾಗಿ ಯಾರಾದರೂ ನಾನು ಒಂದೇ ಹೊತ್ತು ಊಟ ಮಾಡೋದು ಅಂತ ಹೇಳಿದಾಗ ಶ್ಲಾಘಿಸುವ ಮುನ್ನ ಆ ಒಂದು ಹೊತ್ತಿನ ಪ್ರಮಾಣ ಎಷ್ಟು ಅಂತ ತಿಳಿದುಕೊಂಡು ಆ ನಂತರ ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು.

ಬ್ರಹ್ಮಚಾರಿ ಜಂಟಿಯಾದಾಗ ಒಂಟಿ ಜನಿವಾರದ ಮೂರು ಎಳೆಗಳು
ಈಗ ಈ ಒನ್ ಟೀಯನ್ನು ಅಲ್ಲೇ ಬಿಟ್ಟು ಒಂಟಿ ಬಗ್ಗೆ ಮಾತನಾಡೋಣ. ಉಪನಯನ ಅಥವಾ ಮುಂಜಿಯಾದವರು ಒಂಟಿ ಜನಿವಾರ ಹಾಕುತ್ತಾರೆ. ಇಲ್ಲಿನ ವಿಷಯ ಏನಪ್ಪಾ ಅಂದ್ರೆ ಇಲ್ಲಿನ ಒಂಟಿ ಎಂದರೆ ಮೂರು ಎಳೆಗಳು. ಕಾಲವೊಂದಿತ್ತು, ಎಂಟು ವರ್ಷಕ್ಕೆ ಉಪನಯನ ಶಾಸ್ತ್ರ ಮುಗಿಸಿ ವಿದ್ಯಾಭ್ಯಾಸಕ್ಕೆ ಅಂತ ಗುರುಕುಲಕ್ಕೆ ಕಳುಹಿಸಿಕೊಡುತ್ತಿದ್ದರು. ವಿದ್ಯಾಭ್ಯಾಸ ಮುಗಿಸಿ, ಪಂಡಿತನಾಗಿ ತಿರುಗಿ ಬಂದವನು Upgrade ಆಗುತ್ತಾನೆ. ಮೂರೆಳೆಗೆ ಮತ್ತೊಂದು ಮೂರೆಳೆ ಸೇರಿ ಆರೆಳೆಯಾಗುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಬ್ರಹ್ಮಚಾರಿಯು ಜಂಟಿಯಾದಾಗ ಒಂಟಿ ಜನಿವಾರದ ಮೂರು ಎಳೆಗಳು, ಎರಡು ಜೊತೆ ಮೂರು ಎಳೆಗಳು ಸೇರಿ ಆರಾಗುತ್ತದೆ.

ಒಂಟಿ ಆಯ್ತು ಈಗ ಜಂಟಿ ಬಗ್ಗೆ ಮಾತನಾಡೋಣ ಬನ್ನಿ. ಒಂದಾನೊಂದು ಕಾಲದಲ್ಲಿ, ಬೆಂಗಳೂರಿನಲ್ಲಿ ಜಂಟಿ ಬಸ್‌ಗಳು ಇರುತ್ತಿದ್ದವು. ಮಹಡಿ ಬಸ್ ಎಂದರೆ, ಒಂದರ ಮೇಲೊಂದು ಬಸ್ ಆದರೆ ಜಂಟಿ ಬಸ್‌ನಲ್ಲಿ ಒಂದರ ಹಿಂದೆ ಮತ್ತೊಂದು ಬಸ್. ಈ ಜಂಟಿ ಬಸ್ ಮತ್ತು ಮಹಡಿ ಬಸ್‌ಗಳ ವೈಶಿಷ್ಟ್ಯ ಏನಪ್ಪಾ ಅಂದ್ರೆ ದೇಹವೆರಡು ಜೀವವೊಂದು. ಇದಕ್ಕೂ ರಾಜ್ಯ ಸಾರಿಗೆ ಸಂಸ್ಥೆಯ ಲಾಂಛನವಾದ ಗಂಡಭೇರುಂಡಕ್ಕೂ ಸಂಬಂಧವಿದೆಯೇ ಅಂತ ಕೇಳದಿರಿ. ಹೂ ಅಂದ್ರೆ ಹೂ, ಇಲ್ಲಾ ಅಂದ್ರೆ ಇಲ್ಲ. ಬೀದಿಯಲ್ಲಿ, ಅರ್ಧ ಗಂಟೆಗೆ ಒಮ್ಮೆ ಒಂದು ಬಸ್ ಓಡಾಡುತ್ತಿದ್ದ ಕಾಲಕ್ಕೆ ಈ ಎರಡೂ ರೀತಿ ಜಂಟಿಗಳು ಕಾರ್ಯಾಚರಣೆ ನಡೆಸಿತ್ತು ನಿಜ. ನಿಮಿಷಕ್ಕೆ ಸಾವಿರ ವಾಹನ ರಸ್ತೆಯನ್ನು ಆಕ್ರಮಿಸಿಕೊಳ್ಳುವ ದಿನಗಳಲ್ಲಿ ಜಂಟಿಗಳಿಗೆ ಸ್ಥಾನವೇ ಇಲ್ಲ ಹಾಗಾಗಿ ಇಂದಿನ ಬಸ್‌ಗಳು ಬರೀ ಒಂಟಿ. ಅಂದು ಒಂಟಿಯೂ ಇತ್ತು ಆದರೆ ಇಂದು ಬರೀ ಒಂಟಿಯೇ ಇದೆ.

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು
ಒಂಟಿಯಾಗಿದ್ದವರು ಮದುವೆ ಅಂತಾಗಿ ಜಂಟಿಯಾಗುತ್ತಾರೆ. ಆದರೆ ಆ ಜಂಟಿತನದಲ್ಲಿ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂದಾಗ ಜಂಟಿಯು ಒಂಟಿಯಾಗುತ್ತದೆ. ಒಂದೇ ಸೂರಿನಡಿ ದಿನನಿತ್ಯದಲ್ಲಿ ಗಂಡ ಹೆಂಡಿರು, ಒಬ್ಬರು ಉತ್ತರ ಮತ್ತೊಬ್ಬರು ದಕ್ಷಿಣಕ್ಕೆ ಮುಖ ಮಾಡಿಕೊಂಡು ಇದ್ದು ಮನಃಶಾಂತಿ ಹಾಳುಗೆಡವಿಕೊಂಡು ಅದನ್ನು ಮಕ್ಕಳ ಮನಸ್ಸಿಗೂ ಹಸ್ತಾಂತರ ಮಾಡುವ ಬದಲು ಒಂಟಿಯಾಗಿದ್ದು, ನೆಮ್ಮದಿಯಾಗಿರಿ ಎಂದು ಒಂದು ವರ್ಗ ಹೇಳುತ್ತಾರೆ. ಎಂದೋ ಒಂದು ದಿನ ಈ ಅಹಂ ಅನ್ನೋದು ಕರಗಿ, ತಪ್ಪುಗಳು ಅರಿವಾಗಿ ಅಥವಾ ಮನಸ್ಸು, ಹೃದಯ ರಾಜಿಯಾಗಬಹುದು ಹಾಗಾಗಿ ಒಂಟಿಯಾಗಿ ನಿಂತು ಒದ್ದಾಡುವ ಬದಲು ಜಂಟಿಯಾಗಿ ಹೋರಾಡಿ ಎಂದು ಮತ್ತೊಂದು ವರ್ಗ ಹೇಳುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇಂಥಾ ಸನ್ನಿವೇಶದಲ್ಲಿ ಒಂಟಿಯೋ, ಜಂಟಿಯೋ ಒಟ್ಟು ಹೋರಾಟ ಎಂಬುದಂತೂ ಇದ್ದೇ ಇರುತ್ತದೆ.

ನಿಮಗೆ ಒಂಟಿ ಪಿಶಾಚಿ ಅಂದ್ರೆ ಗೊತ್ತಾ? ಗೊತ್ತಾ ಅಂದ್ರೆ ಮೀಟ್ ಮಾಡಿದ್ದೀರಾ ಅಥವಾ ಅಡ್ರೆಸ್ ಗೊತ್ತಾ ಅಂತಲ್ಲಾ ಕೇಳಿದ್ದು. ಒಂಟಿ ಪಿಶಾಚಿ ಅಂದ್ರೆ ಸಂಘಜೀವಿಗಳಲ್ಲದವರು ಅಂತ. ಜಂಟಿಯಾಗಿದ್ದವರು ಒಂಟಿಯಾದಾಗ ಒಂಟಿ ಪಿಶಾಚಿ ಆಗುವುದಿಲ್ಲ. ಕೆಲವರು ಒಂಟಿಯಾದಾಗ ತುಂಬಾ ಸಕ್ರಿಯವಾಗುತ್ತಾರೆ. ಆದರೆ ಹಲವರು ಒಂಟಿ ಪಿಶಾಚಿ ಎಂದು ಲೇಬಲ್ ಹಚ್ಚಿಕೊಂಡೇ ಹುಟ್ಟಿರುತ್ತಾರೆ. ಶಾಲೆಯಲ್ಲಿ ಅವರಾಯ್ತು, ಓದು- ಬರಹವಾಯ್ತು ಅಂತ ಇರುತ್ತಾರೆ. ಯಾರಾದರೂ ಮಾತನಾಡಿಸಿದರೆ ಕೇಳಿದ್ದಕ್ಕೆ ಅಷ್ಟೇ ಉತ್ತರ. ಕೆಲವೊಮ್ಮೆ ಸುಮ್ಮನೆ ಒಣನಗು. ಮನೆಯಿಂದ ಹೊರಡುವಾಗ ಹಾದಿಯಲ್ಲಿ ಯಾರೂ ಸಿಗದಿರಲಿ, ಮಾತನಾಡಿಸದಿರಲಿ ಎಂದು ಬೇಡಿಕೊಳ್ಳುವರೇನೋ ಗೊತ್ತಿಲ್ಲ. ಒಂಟಿ ಪಿಶಾಚಿಗಳಿಂದ ಜನಸ್ತೋಮಕ್ಕೆ ಯಾವ ಉಪಯೋಗವೂ ಇಲ್ಲ ಎನ್ನದಿರಿ. ಖಂಡಿತ ಬಾಧಕವೂ ಅಲ್ಲ ಅಂತಲೂ ಅನ್ನದಿರಿ. ಇದೂ ಅಲ್ಲ, ಅದೂ ಅಲ್ಲ ಅಂದ್ರೆ ಇವರಾರು?

ಜನ ಎಂದರೆ ಹೆದರಿಕೆ ಅಂತಲ್ಲ ಬದಲಿಗೆ ಬೇಕಿಲ್ಲ
ಒಂಟಿ ಪಿಶಾಚಿಗಳು ಹೇಗಪ್ಪಾ ಅಂದ್ರೆ ಸಾವಿರಾರು ಜನರ ಮಧ್ಯೆ ಇದ್ದರೂ ತಮ್ಮಷ್ಟಕ್ಕೆ ತಾವು ಇರಬಲ್ಲರು. ತಮ್ಮದೇ ಚಿಂತನೆಯಲ್ಲಿ ತೊಡಗಿರುತ್ತಾರೆ. ಸಾಮಾನ್ಯವಾಗಿ ಈ ಒಂಟಿ ಪಿಶಾಚಿಗಳು ಅಂದ್ರೆ introvertಗಳು. ಜನ ಎಂದರೆ ಹೆದರಿಕೆ ಅಂತಲ್ಲ ಬದಲಿಗೆ ಬೇಕಿಲ್ಲ ಅಂತ. ಕೆಲಸದಲ್ಲಿ ಇಂಥವರು ಒಂದೆಡೆ ಕೂತು ಹಗಲಿನಿಂದ ಇರುಳಿನವರೆಗೆ ಕೆಲಸ ಮಾಡಿ ಎದ್ದು ಹೋಗುತ್ತಾರೆ. ಹಲವೊಮ್ಮೆ ಮೀಟಿಂಗ್‌ಗಳಲ್ಲಿ ಸುಮ್ಮನೆ ಕೂತು ಆಲಿಸುತ್ತಾರೆ ಅಷ್ಟೇ. ಹೆಚ್ಚಿಗೆ ಮಾತನಾಡೋದಿಲ್ಲ. ಆಲ್ಬರ್ಟ್ ಐನ್ ಸ್ಟೀನ್, ಬಿಲ್ ಗೇಟ್ಸ್ ಇವೆರೆಲ್ಲಾ introvertಗಳು ಆದರೆ ಒಂಟಿ ಪಿಶಾಚಿಗಳಲ್ಲ. ಈ ಪಿಶಾಚಿಗಳು ಸಿಂಗಲ್ ಆಗಿ ಅಡ್ಡಗಟ್ಟುತ್ತದೆ ಅಥವಾ ತೊಂದರೆ ಕೊಡುತ್ತದೆ ಎಂಬರ್ಥದಲ್ಲಿ ಒಂಟಿ ಪಿಶಾಚಿ ಎನ್ನುತ್ತಾರೇನೋ ಗೊತ್ತಿಲ್ಲ.

ಎಲ್ಲಿಗಾದರೂ ಹೊರಟರೆ ಬೆಕ್ಕು ಅಡ್ಡ ಬಂದರೆ ಕೆಲಸ ಆಗೋದಿಲ್ಲಾ ಅಂತಾರೆ. ಹೋಗ್ಲಿ ಬಿಡಿ ಆದರೆ ಒಂಟಿ ಬ್ರಾಹ್ಮಣ ಅಡ್ಡ ಬರಬಾರದು ಅಂತ ಅನ್ನುವುದು ಯಾಕೆ? ಅಲ್ಲಾ, ನಾನು ಕೇಳೋದು, ಕೆಡುಕಾಗಬಹುದು ಅಂತ ಹೊರಗೆ ಹೋದಾಗಲೆಲ್ಲಾ ಹೆಂಡತಿಯನ್ನು ಕರೆದುಕೊಂಡು ಓಡಾಡಲು ಸಾಧ್ಯವೇ? ಪಾಪ, ಅವರಿಗೂ ಬೇರೆ ಕೆಲಸ ಇರೋದಿಲ್ವೇ? ಇಷ್ಟಕ್ಕೂ ಈ ಮಾತಿನ ಅರ್ಥವೇನು ಅಂತ ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ರೆ ಹಂಚಿಕೊಳ್ಳಿ.

ಎಲ್ಲರಿಗೂ ಸಲಗವನ್ನು ಕಂಡರೆ ಹೆದರಿಕೆ
ಆನೆ ನಡೆದದ್ದೇ ಹಾದಿ ಎನ್ನುವ ಮಾತು ಇದೆ. ಆನೆಗಳು ಹಿಂಡಿನಲ್ಲೇ ಓಡಾಡುತ್ತದೆ ಆದರೆ ಒಂಟಿ ಸಲಗ ಒಂಟಿಯೇ. ಒಂದು ಒಂಟಿ ಸಲಗಕ್ಕೆ ಕಾಡಿನ ಭಯವಿಲ್ಲ, ಅದರ ಹಾದಿಗೆ ಯಾರು ಅಡ್ಡ ಬರುವರೆಂಬ ಭೀತಿಯಿಲ್ಲ, ತಾನು ಒಂಟಿಯಾಗಿಯೇ ರಾಜಾರೋಷವಾಗಿ, ಧೀಮಂತವಾಗಿ ಓಡಾಡುತ್ತಿದ್ದರೂ ಒಳಗೆ ಅದು ಒಂಟಿ. ಕಾರಣ ಇಷ್ಟೇ, ಎಲ್ಲರಿಗೂ ಸಲಗವನ್ನು ಕಂಡರೆ ಹೆದರಿಕೆ ಎಂದಾದಾಗ ಸ್ನೇಹಿತರು ಹುಟ್ಟುವುದಾದರೂ ಎಲ್ಲಿಂದ? ವಯಸ್ಸಿನಲ್ಲಿ ಒಂಟಿ ಸಲಗವಾಗಿರಲು ಚೆನ್ನಾ. ಆದರೆ ಆ ರೋಷ ಇಳಿದ ಮೇಲೆ, ತನಗೂ ಸುತ್ತಲಿನವರ ಸ್ನೇಹ ಬೇಕು ಎಂದಾಗ ಯಾರೂ ಮುಗಿಬಿದ್ದು ಬರುವುದಿಲ್ಲ.

ಎಷ್ಟೋ ಸಾರಿ ಜೀವನದಲ್ಲಿ ನಮ್ಮ ಅಳಲು ಯಾರಿಗೂ ಕೇಳದಂತಾಗಿ ಅರಣ್ಯ ರೋದನವಾಗುತ್ತದೆ. ಆದರೆ ಎಲ್ಲವೂ ರೋದನವಲ್ಲ. ಕೆಲವೊಮ್ಮೆ ಯಾವುದೋ ಒಂದು ವಿಷಯಕ್ಕೆ ದನಿ ಎತ್ತಿದಾಗ ಅದಕ್ಕೆ ದನಿಗೂಡಿಸುವರೇ ಇಲ್ಲದಾದಾಗ, ಯಾರು ದನಿಗೂಡಿಸಿದರೇನು, ಯಾರು ದನಿಗೂಡಿಸದೇ ಇರಲೇನು, ದನಿ ಎತ್ತಿ ಸಾಗುವುದೇ ಒಂಟಿಧ್ವನಿ. ಹಲವೊಮ್ಮೆ ದನಿ ಎತ್ತಿದಾಗ ತೊಂದರೆಗಳಾಗುತ್ತವೆ, ಅದು ಒಂಟಿಧ್ವನಿಗೆ ಕಟ್ಟಿಟ್ಟ ಬುತ್ತಿ. ಒಂಟಿ ಧ್ವನಿಯಾದರೂ ದನಿ ಎತ್ತಲು ಹಿಂಜರಿಯದೇ ಸಾಗಬೇಕು.

English summary
Srinath Bhalle Column: Lets have a tea and talk about loneliness in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X