• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

'ಭಕ್ತ ಕುಂಬಾರ' ಚಿತ್ರದಲ್ಲಿ ಒಂದು ಅದ್ಭುತವಾದ ಹಾಡಿನ ಸಾಹಿತ್ಯ "ಮಾನವ ಮೂಳೆ ಮಾಂಸದ ತಡಿಕೆ" ಅಂತ ಇದೆ. ಬರೀ ಮೂಳೆಯೇ ಆದರೆ ಅದೊಂದು ಅಸ್ತಿಪಂಜರವಾದೀತು. ಮಾಂಸವೂ ಸೇರಿ ಅದಕ್ಕೊಂದು ಜೀವವನ್ನೂ ಕೊಟ್ಟ ಭಗವಂತ ನಂತರ ತೊಗಲಿನ ಹೊದಿಕೆ ಹೊದಿಸಿದ.

ಮೂಳೆಯ ಆಕಾರ ಒಂದೇ ಆಗಿದ್ದರೂ ಗಾತ್ರ ಭಿನ್ನವಾಯ್ತು. ವಯಸ್ಸಿಗೆ ಅನುಗುಣವಾಗಿ ಬೆಳೆಯುವ ಕಾಲಕ್ಕೆ ಮೂಳೆಯ ಗಾತ್ರವೂ ಬೆಳೆಯಬೇಕಾದರೂ ಅಲ್ಲೇನೋ ಹರತಾಳ. ಹಾಗಾಗಿ ಒಬ್ಬರು ಎತ್ತರ ಅನಿಸಿಕೊಂಡರೆ ಮತ್ತೊಬ್ಬರು ಗಿಡ್ಡ. ಇವೆಲ್ಲಾ ಹೀಗಾದ ಮೇಲೆ ಮಾಂಸ ಸುಮ್ಮನಿದ್ದೀತೇ? ಕೆಲವರಿಗೆ ಚಮಚೆಯಲ್ಲಿ ತುಂಬುವಷ್ಟು ಮಾಂಸವಾದರೆ ಕೆಲವರಿಗೆ ಬಕೀಟು ತುಂಬುವಷ್ಟು ಮತ್ತೂ ಕೆಲವರಿಗೆ ಒಂದು ಲಾರಿ ಲೋಡ್ ಅನ್ನುವಷ್ಟು. ಒಬ್ಬೊಬ್ಬರದ್ದೂ ಒಂದೊಂದು ಆಕಾರವಾದ ಮೇಲೆ ಬಂತು ನೋಡಿ ಹೊದಿಕೆ.

ನಮ್ಮ ನಿಮ್ಮೊಳಗೊಬ್ಬ ಇದ್ದೇ ಇದ್ದಾನೆ 'ಲೇಟ್ ಲತೀಫ್'!

ಮೂಳೆ ಮಾಂಸ ಇರೋ ತನಕ ಎಲ್ಲರೂ ಒಂದೇ ತರನಾಗಿ ಕಾಣ ತೊಡಗಿದರೂ ಒಮ್ಮೆ ತೊಗಲಿನ ಹೊದಿಕೆ ಬೀಳುತ್ತಿದ್ದಂತೆ ಮಾನವ ಸ್ವರೂಪವೇ ಬದಲಾಗಿ ಹೋಯ್ತು. ಇದರಲ್ಲಿ ಭಗವಂತನ ತಪ್ಪೇನಿಲ್ಲ ಬಿಡಿ. ಆಯಾ ಸ್ಥಳಗಳಲ್ಲಿನ ವಾತಾವರಣದ ಅವಲಂಬಿತವಾಗಿ ಕಾಲಾನಂತರ ಆ ತೊಗಲೂ ಬಣ್ಣ ಬದಲಿಸತೊಡಗಿತು. ಹೊಟ್ಟೆಗೆ ಹಿಟ್ಟು, ಇರಲು ಸೂರು ಅಂತೆಲ್ಲಾ ಜನ settle ಆದ ಮೇಲೆ ಭೋಗಗಳ ಕಡೆ ಮನ ಹರಿದಾಗ ಜಗತ್ತು ಪಲ್ಲಟಗೊಳ್ಳಲು ಆರಂಭವಾಯಿತು ಎನ್ನಬಹುದು.

ಜಗತ್ತಿನಲ್ಲಿನ ಜನರ ಭಾವನೆಗಳ ಜೊತೆ ಆಟ ಆಡಿದ್ದೇ ಈ ಹೊದಿಕೆ. ಇಬ್ಬರಲ್ಲಿ ಮೇಲು ಕೀಳು ಅಂತ ಭಾವನೆ ಮೂಡಿಸಿದ್ದೇ ಈ ಹೊದಿಕೆ. ಒಬ್ಬರು ಕಪ್ಪು, ಒಬ್ಬರು ಬಿಳುಪು, ಒಬ್ಬರು ಕಂದು ಅಂತೆಲ್ಲಾ ಬಣ್ಣಗಳ ಹೊದಿಕೆ. ಈ ಹೊದಿಕೆಯ ಆಧಾರದ ಮೇಲೆ ತಾರತಮ್ಯಗಳು ಶುರುವಾಯ್ತು.

ಸಾಂಗತ್ಯದ ವಿಷಯ ಬಂದಾಗ, ಕಪ್ಪು ಗಂಡಿಗೂ ಬಿಳೀ ಹೆಣ್ಣು ಬೇಕು. ಕಪ್ಪು ಹೆಣ್ಣಿಗೂ ಬಿಳೀ ಗಂಡು ಬೇಕು. ಬಿಳೀ ಹುಡುಗನಿಗೂ ಬಿಳೀ ಹುಡುಗಿಯೇ ಬೇಕು. ಅಲ್ಲಿಗೆ ಮೊದಲ ಹಂತ ದಾಟಿತು. ಮುಂದೆ ಮೂಳೆಯ ಆಟ. ತಾನು ಆರಡಿ ಅವನೋ / ಅವಳೋ ಮೂರಡಿ ಎಂಬುವರು. ಅದೂ ಆದ ಮೇಲೆ ಮುಂದಿನ ಹಂತವೇ ಮಾಂಸದ ತೂಕ. ಎಲ್ಲೆಲ್ಲಿ ಎಷ್ಟೆಷ್ಟು ಇರಬೇಕೋ ಅಷ್ಟೇ ಇದ್ದರೆ ವಿಶ್ವಸುಂದರಿಯಂತೆ . . . ಇಲ್ಲದಿದ್ದರೆ ಕುರೂಪಿಗಳಂತೆ.

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ಮೂಳೆಯಾಗಲಿ, ಮಾಂಸವಾಗಲಿ ಅಥವಾ ಹೊದಿಕೆಯಾಗಲಿ ಒಂದು ಭಿನ್ನವಾಗಿದ್ದರೂ ಕೀಳರಿಮೆ ಹುಟ್ಟುಹಾಕುತ್ತದೆ. ಸುಂದರಿ, ಸಪೂರ ಆದರೆ ಗಿಡ್ಡು ಎಂಬ ಮೂದಲಿಕೆ. ಎತ್ತರ ಗಾತ್ರ ಎಲ್ಲಾ ಓಕೆ ಆದರೆ ಕಪ್ಪು. ಕತ್ತಲಲ್ಲಿ ಕಾಣೋದೇ ಇಲ್ಲ ಎಂಬ ಮಾತು. ಇನ್ನು ಮಾಂಸದ ವಿಷಯಕ್ಕೆ ಬಂದರೆ, ಎಲ್ಲಾ ಓಕೆ ಆದರೆ ನಿನ್ನ ಪಕ್ಕ ಅವಳು ನಿಂತರೆ ತಾಯಿ ಮಗ ಅಂದಾರೇನೋ ಅಂತ ಯೋಚನೆ ಎನ್ನಬಹುದು.

ಈ ಮೂಳೆ, ಮಾಂಸ, ಹೊದಿಕೆಯನ್ನು ಕುರಿತೇ ಅಮಿತಾಬ್ ಅಭಿನಯದ 'ಲಾವಾರಿಸ್' ಚಿತ್ರದಲ್ಲಿ "ಮೇರೇ ಅಂಗನೆ ನೇ ಮೇ" ಅಂತ ಒಂದು ಹಾಡಿದೆ. ಹಾಸ್ಯಮಯವಾದ ಈ ಹಾಡಿನಲ್ಲಿ ನ್ಯೂನತೆಗಳನ್ನು ಹೇಗೆ ಬಳಸಿಕೊಂಡರೆ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು ಅಂತ ಹೇಳಲಾಗಿದೆ. ಹಾಡನ್ನು ಕೇಳಿದವರು ಅದನ್ನು ಪಾಲಿಸುತ್ತಾರೆ ಎಂದೇನೂ ಗ್ಯಾರಂಟಿ ಇಲ್ಲ.

ಮೈಕಲ್ ಜ್ಯಾಕ್ಸನ್ ತನ್ನ ದೇಹವನ್ನು ಬಿಳುಪು ಮಾಡಿಕೊಂಡರೂ ಜಗತ್ತು ಹೇಳಿದ್ದು 'ಕಪ್ಪಗಿದ್ದವ ಬೆಳ್ಳಗೆ ಕಾಣುವಂತೆ ಮಾಡಿಕೊಂಡ' ಅಂತಷ್ಟೇ. ಅವನನ್ನು ಬಿಳಿಯರ ಗುಂಪಿಗೆ ಸೇರಿಸಲೇ ಇಲ್ಲ. ಮಾನವ ಕೇವಲ ಮೂಳೆ ಮಾಂಸದ ತಡಿಕೆಯಾಗಿದ್ದು ಅದರ ಮೇಲೆ ತೊಗಲಿನ ಹೊದಿಕೆ ಅಷ್ಟೇ ಇದ್ದಿದ್ದರೆ ಅದರ ವಿಷಯವೇ ಬೇರೆ ಇರ್ತಿತ್ತು.

ವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನ

ಈ ಮೂರು ಅಂಶಗಳ ಜೊತೆಗೆ ಹುಟ್ಟಿನಿಂದ ಸಾವಿನವರೆಗೂ ಭೇದಭಾವ ತೋರದೆ ನೆರಳಿನಂತೆ ಜೊತೆಯಾಗಿಯೇ ಇರುವುದು ಖಾಯಿಲೆ. ಯಾವುದು ease ಅಲ್ಲವೋ ಅದು disease ಅಷ್ಟೇ. ಒಂದು ಸಣ್ಣ ನೆಗಡಿಯೂ ನಮ್ಮ ನೆಮ್ಮದಿಯನ್ನು ಹಾಳು ಮಾಡಬಹುದು. Unease leads to Disease.

ಕೆಲವನ್ನು ಹೊರತುಪಡಿಸಿದರೆ, ಹೊರನೋಟಕ್ಕೆ ಕಾಣದ ಯಾವುದಾದರೂ ಒಂದು ಖಾಯಿಲೆ ಎಲ್ಲರನ್ನೂ ಕಾಡುತ್ತಿರುತ್ತದೆ. ಒಂದು ಉದಾಹರಣೆ ಎಂದರೆ Back pain. ಇತ್ತೀಚಿನ ದಿನಗಳಲ್ಲಿನ ಸರ್ವೇಸಾಮಾನ್ಯ ಎನ್ನಬಹುದಾದದ್ದು ಇದು. ಹೊರನೋಟಕ್ಕೆ ಒಬ್ಬರಿಗೆ ಬೆನ್ನು ನೋವು, ಕುತ್ತಿಗೆ ನೋವು ಅಥವಾ lower back ನೋವು ಇರುತ್ತದೆ ಎಂದು ಅರಿವಿಗೆ ಬರುವುದಿಲ್ಲ. ಬೆಳಗ್ಗಿನಿಂದ ವಿಪರೀತ ಕೆಲಸ ಹಾಗಾಗಿ ಬೆನ್ನು ಹಿಡಿದುಕೊಂಡಿತು ಎಂತಲೋ, ದಿನವೂ ಬೆನ್ನು ಮುರಿಯೋ ಕೆಲಸ ಹಾಗಾಗಿ ನೋವು ನಿಂತೇ ಇಲ್ಲ ಅಂತಲೋ back pain ಅನ್ನೋದನ್ನು ಕಡೆಗಣಿಸಲಾಗದು.

ಕಲೆಯನ್ನು ತೆಗೆಯೋ ಬಟ್ಟೆ ಒಗೆಯೋದೂ ಒಂದು ಅದ್ಭುತ ಕಲೆ!

ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೆ, "ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಆಯಾಸ ಆದಂತಾಯ್ತು. ಬೆವರು ಬಂದು ಕೈಕಾಲು ನಡುಗಲು ಆರಂಭವಾಯ್ತು. ಕುರ್ಚಿಯ ಮೇಲೆ ಕೂತು ತಣ್ಣಗೆ ಫ್ಯಾನ್ ಗಾಳಿಗೆ ಕೂತೆ. ಆಮೇಲೆ ಸರಿ ಹೋಯ್ತು. ಮುಂದಿನ ತಿಂಗಳು ಹೇಗಿದ್ರೂ ಚೆಕ್ ಅಪ್ ಇದೆ ಆಗ ಕೇಳ್ತೀನಿ ಡಾಕ್ಟರ್ ಹತ್ತಿರ" ಅಂದರು ಒಬ್ಬರು. ಅವರ ಅಭಿಪ್ರಾಯದಲ್ಲಿ ಬೇಸಿಗೆಯ ಬಿಸಿಲಿಗೆ ಇವರಿಗೆ ಕೈಕಾಲು ನಡುಗಿತು ಅಂತ.

ಸ್ವಯಂ ವೈದ್ಯಕೀಯ ತಪ್ಪು ಆದರೆ ದೇಹದಲ್ಲಿ ಏನಾಗುತ್ತಿದೆ ಎಂಬುವುದರ ಬಗ್ಗೆ ಸಾಮಾನ್ಯ ಅರಿವೂ ಇಲ್ಲದೆ ಹೋಗೋದು ತರವಲ್ಲ. ಇದು ಮಾಹಿತಿ ಯುಗ. ಎಲ್ಲೆಲ್ಲೂ ಮಾಹಿತಿಗಳು ಸುಲಭದರಲ್ಲಿ ಲಭ್ಯ. ನಮ್ಮ ದೇಹದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗಿಂತ ಇನ್ನೊಬ್ಬರಿಗೆ ಅರಿವಿರುವುದಕ್ಕೆ ಸಾಧ್ಯವಿಲ್ಲ. ಅರ್ಥಾತ್ ಏನೋ ವ್ಯತ್ಯಾಸವಾದರೆ ಮೊದಲು ನಮ್ಮ ಅರಿವಿಗೆ ಬರುತ್ತದೆ ಎಂಬುದು ನಿಜ. ಆದರೆ ಏಕಾಗುತ್ತಿದೆ ಎಂಬುದಕ್ಕೆ ಧನ್ವಂತ್ರಿಗಳೇ ಬೇಕು.

ಅಂತರ್ಜಾಲದಲ್ಲಿ ವಿಷಯಗಳು ಧಾರಾಳವಾಗಿ ಸಿಗುತ್ತದೆ. ನಮ್ಮ ದೇಹದಲ್ಲಿನ ವ್ಯತ್ಯಾಸಗಳ ಕುರಿತು ಒಂದಷ್ಟು ಓದಿಕೊಂಡು, ಯಾವ ತೊಂದರೆಯಿಂದ ಯಾವ ಪರಿಣಾಮ ಅಂತ ತಿಳಿದಿರಲಿ. ಆಗ ವೈದ್ಯರ ಬಳಿ ನಿಮ್ಮಲ್ಲಾಗುವ ತೊಂದರೆಯನ್ನು ಸರಿಯಾದ ರೀತಿಯಲ್ಲಿ ವಿವರಿಸಬಹುದು. ಆದರೆ, ಅಂತರ್ಜಾಲದಲ್ಲಿ ಇರುವ ಏನೆಲ್ಲಾ ಮಾಹಿತಿಗಳನ್ನು ವೈದ್ಯರ ಮುಂದೆ ಅರುಹಿ ಅವರಿಗೆ ಸವಾಲೊಡ್ಡುವಂತೆ ಪ್ರಶ್ನೆ ಮಾಡಿದಲ್ಲಿ ಬಹುಶ: ವೈದ್ಯರಿಗೆ ಇಷ್ಟವಾಗದೇ ಇರಬಹುದು. ಗೂಗಲ್ patients ಅಂತ ನಿಮ್ಮನ್ನೇ ಜರಿಯಬಹುದು ಎಚ್ಚರ.

ತೀರಾ ಸುಸ್ತಾಗುವುದು, ಬೆವರಿಟ್ಟುಕೊಂಡು ಬರುವುದು, ಕೈಕಾಲುಗಳಲ್ಲಿ ಸಣ್ಣದಾಗಿ ನಡುಕ, ಎದೆಯಲ್ಲಿ ಛಳುಕು, ಎಡಭುಜದಲ್ಲಿ ಬಿಡದೇ ಬರುವ ನೋವು ಇತ್ಯಾದಿಗಳು ಆದಾಗ ಉಲ್ಲಂಘನೆ ಮಾಡುವುದು ಬೇಡ. ಮುಖ್ಯವಾಗಿ ನಮಗೇನೂ ಆಗಿಲ್ಲ ಎಂಬ ಹುಂಬತನ ಬೇಡ. ಯಾರೊಂದಿಗೆ ನಿಮ್ಮ ವಿಷಯ ಹಂಚಿಕೊಳ್ಳುವಿರೋ ಇಲ್ಲವೋ ಅದು ನಿಮಗೆ ಬಿಟ್ಟದ್ದು ಆದರೆ ನಿಮ್ಮನ್ನೇ ನೀವು ವಂಚಿಸಿಕೊಳ್ಳದಿರಿ.

ಮಾನವ ಮೂಳೆ ಮಾಂಸದ ತಡಿಕೆ ಜೊತೆಗೆ ತೊಗಲಿನ ಹೊದಿಕೆ ಅಂಬೋದು ಆಧ್ಯಾತ್ಮಿಕ. ಕನಸು ಮನಸ್ಸಿನಲ್ಲೂ ಆಸೆ ಮತ್ತು ಆಶಯಗಳನ್ನು ಹೊತ್ತ ನಮ್ಮಂತಹ ಅಸಮಾನ್ಯ ವರ್ಗದವರು ನಮ್ಮ ನಮ್ಮ ದೇಹದ ಬಗ್ಗೆ ಕಾಳಜಿವಹಿಸೋದು ಅತ್ಯವಶ್ಯಕ. ಮೂಳೆ, ಮಾಂಸ ಮತ್ತು ತೊಗಲಿನ ಹೊರತಾಗಿ ಮಾನ ದೇಹದಲ್ಲೊಂದು ವಿಶ್ವವೇ ಇದೆ.

ದಿನದ ಇಪ್ಪತ್ತನಾಲ್ಕು ಘಂಟೆಗಳೂ ತೊಗಲಿನ ಒಳಗೇ ಹುದುಗಿಕೊಂಡು ಪ್ರತಿ ಕ್ಷಣವೂ ತನಗೆ ವಹಿಸಿದ ಕೆಲಸವನ್ನು ನಿರ್ವಹಿಸುತ್ತಾ ಸಾಗುವ ನಮ್ಮ ವಿಶ್ವವನ್ನು ಕಾಪಾಡಿಕೊಳ್ಳುವ ಪ್ರತೀ ದಿನವನ್ನು 'ಕಾಳಜಿ ದಿನ'ವನ್ನಾಗಿಸಿಕೊಳ್ಳೋಣ.

ಮಾರ್ಚ್ ತಿಂಗಳ ಕೊನೆಯ ಮಂಗಳವಾರ ಅಮೇರಿಕದಲ್ಲಿ diabetes alert day. ದೇಹಕ್ಕೆ ಬೇಕಿರೋ ಚೈತನ್ಯ ನೀಡಲು ರಕ್ತದಲ್ಲಿ ಗ್ಲೂಕೋಸ್ ಇರಬೇಕು. ಅತಿಯಾದರೆ ಅಮೃತವೂ ವಿಷ ಎಂದು ಆಗಲೇ ಹೇಳಿದಂತೆ, ಈ ಗ್ಲೂಕೋಸ್ ಅಂಶ ಹೆಚ್ಚಾದರೆ ದೇಹದ ಯಾವುದೇ ಭಾಗವನ್ನೂ ಊನ ಮಾಡುವಷ್ಟು ಮಾರಕ. ಯಾವುದೋ ಒಂದು ಅಂಗ ಅಂತಲ್ಲ, ಹಲವಾರು ಅಂಗಗಳನ್ನೂ ಒಮ್ಮೆಲೇ ನಿಷ್ಕ್ರಿಯ ಮಾಡುವಷ್ಟು ಶಕ್ತಿಯುತ. ಇರಲಿ, ಈ alert day ಎಂಬುದನ್ನು ನೋಡಿದಾಗ ನನಗನ್ನಿಸಿದ್ದು ನಮ್ಮಲ್ಲಿ ದಿನನಿತ್ಯವೂ alert ಬೆಳೆಸಿಕೊಳ್ಳಬೇಕು ಅಂತ.

Let's care to take care of ourselves. ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ. ಏನಂತೀರಿ?

English summary
Though, we say God has created human with different size, color, even God will not know what is happening inside our body. Don't neglect your health, take good care of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X