• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದಷ್ಟು ವಾಕ್ಯಗಳನ್ನು ಭಾಗಿಸಿ, ವಿಭಾಗಿಸಿ, ಛೇದಿಸಿ, ಚಿಂದಿಚಿತ್ರಾನ್ನ ಮಾಡುವ ಬನ್ನಿ

|
Google Oneindia Kannada News

ಇಂದಿನ ವಿಷಯ ಇಂಥದ್ದು ಅಂತೇನಲ್ಲ ಬದಲಿಗೆ ಏನೇನೋ ಮಾತುಗಳು. ಹಲವಾರು ಪ್ರಶ್ನೆಗಳನ್ನೇ ಕೇಳುತ್ತಾ ಅದಕ್ಕೆ ಉತ್ತರಗಳನ್ನೂ ಹುಡುಕುತ್ತಾ ಸಾಗೋಣ. ಮೊದಲ ಪ್ರಶ್ನೆ ಒಂದು ವಿಚಿತ್ರ ಪ್ರಶ್ನೆ. ಅಲ್ಲಾ, ಸಚಿತ್ರ ಪ್ರಶ್ನೆ ಕೇಳಿದರೆ ಅದರಲ್ಲೇನು ಮಜಾ ಇರುತ್ತೆ ಅಂತೀನಿ?

ಅದು ಸರಿ, ವಿಚಿತ್ರ ಪ್ರಶ್ನೆಗೂ, ಸಚಿತ್ರ ಪ್ರಶ್ನೆಗೂ ಏನು ವ್ಯತ್ಯಾಸ? ನಿಮ್ಮ ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಆಂಗ್ಲದ V ಅಕ್ಷರದಂತೆ ಹಿಡಿದು ಚಿತ್ರ ತೆಗೆಸಿಕೊಂಡರೆ ಅದು ವಿ-ಚಿತ್ರ. ಬೆರಳು ತೋರುವಾಗ ಹೇಗೆ ತೋರಿಸುತ್ತೀರಿ ಎಂಬುದರ ಮೇಲೆ ಅದರರ್ಥ ಬದಲಾಗುತ್ತದೆ. ಹಸ್ತದ ಭಾಗದ ಬೆರಳುಗಳನ್ನು ವಿ ಆಕಾರದಲ್ಲಿ ತೋರಿಸಿದರೆ V for victory ಅರ್ಥಾತ್ ವಿಜಯ ಸಂಕೇತವಾಗುತ್ತದೆ. ಬಹಳ ಸಂತೋಷ. ಅದೇ ಆ ಎರಡು ಬೆರಳುಗಳನ್ನು ಉಲ್ಟಾ ತೋರಿಸಿದರೆ ಅಂದರೆ ಉಗುರುಗಳ ಭಾಗ ನಿಮ್ಮ ಎದುರು ಇರುವವರಿಗೆ ತೋರುವಂತೆ V ಆಕಾರ ತೋರಿದರೆ, ಟಾಯ್ಲೆಟ್‌ಗೆ ಹೋಗಲಿದೆ ಅಂತರ್ಥ. ಈವರೆಗೂ ನನಗೆ ಈ ಸನ್ನೆಗೂ ಟಾಯ್ಲೆಟ್‌ಗೂ ಏನು ಸಂಬಂಧ ಅಂತ ಅರ್ಥವಾಗಿಲ್ಲ. ನೀವು ಹೇಳುವಿರಾ?

ಚಿತ್ರ ತೆಗೆದರೆ ಅದು ವಿಚಿತ್ರ ಆಗಲಾರದು
ಅಂದ ಹಾಗೆ, ಟಾಯ್ಲೆಟ್‌ಗೆ ಹೋಗಬೇಕು ಅಂತ ಬೆರಳು ತೋರಿದಾಗ ಆ ಎದುರಿಗೆ ಇರುವವರ ಮುಖ ವಿಕಾರವಾದಾಗ ಆ ಚಿತ್ರ ತೆಗೆದರೆ ಅದು ವಿಚಿತ್ರ ಆಗಲಾರದು. ಚಿತ್ರದ ಸಹಿತ ಎಂದರೆ ಸಚಿತ್ರ. ಚಿತ್ರದ ವಿಹಿತ ಎಂದರೆ ವಿಚಿತ್ರ ಎನ್ನಬಹುದೇ? ಚಿಂತೆ ಮಾಡಿ ಹೇಳಿ ಅಥವಾ ಚಿಂತನೆ ಮಾಡಿ ಹೇಳಿ. ಒಟ್ಟಾರೆ ಹೇಳಿ.
Finally ಈಗ ಚಿತ್ರ ಸಹಿತ ಒಂದು ಪ್ರಶ್ನೆ ಕೇಳಿದರೆ ಅದು ಸಚಿತ್ರ ಪ್ರಶ್ನೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ಚಿತ್ರ ತೋರಿಸಿ, ಇದು ಯಾರು ಎಂದು ಗುರುತಿಸಿ ಎಂದು ಕೇಳೋದು. ಚಿತ್ರವೇ ಇಲ್ಲದೆ ಇವರಾರು ಎಂದು ಕೇಳೋದು ವಿಚಿತ್ರ ಪ್ರಶ್ನೆ.

ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸುವುದು
ಈಗ ಹಾಡೊಂದರ ಸಾಲನ್ನು ತೆಗೆದುಕೊಂಡು ಆಲೋಚಿಸಿ ನೋಡಿ, ಏನಿದು ಅಂತ 'ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರದು ರೀ'. ಮೊದಲಿಗೆ ಕತ್ತಲು, ಆ ನಂತರ ಕರಡಿ. ಈ ಎರಡೂ ಕಪ್ಪು ಎಂದಾದ ಮೇಲೆ ಜಾಮೂನು ಅನ್ನೋದೂ ಕಾಲಾ ಜಾಮೂನ್ ಅಂದುಕೊಳ್ಳೋದು ಸರಿಯೇ ತಪ್ಪೇ? ಕಾಲಾ ಜಾಮೂನ್ ಅಂತೇನಲ್ಲ ಬದಲಿಗೆ ರೆಗ್ಯುಲರ್ ಜಾಮೂನು ಎಂದರೆ ಕಂದು ಬಣ್ಣದ ಜಾಮೂನು ಅಂತಾದ್ರೆ ಕರಡಿಯೂ ಕಂದು ಬಣ್ಣದ್ದಾ? ಜಾಮೂನು ಡ್ರೈ ಜಾಮೂನೋ? ಅಥವಾ ಪಾಕದಲ್ಲಿ ಅದ್ದಿರುವ ಜಾಮೂನೋ? ಒಂದು ವೇಳೆ ಅದು ಪಾಕದಲ್ಲಿ ಅದ್ದಿರುವ ಜಾಮೂನು ಆಗಿದ್ದರೆ ಹಿಮಕರಡಿಗೆ ಮಾತ್ರ ತಿನ್ನಿಸದಿರಿ.

ಕರೀ ಇರುವೆ ಕರೀ ಕೂದಲ ನಡುವೆ ಸೇರಿಕೊಂಡರೆ
ಬೆಳ್ಳಗೆ ಕ್ಲೀನ್ ಆಗಿರುವ ಆ ದೇಹವನ್ನು ಅಂಟು ಮಾಡದಿರಿ. ಅದರಂತೆಯೇ ಕಪ್ಪು- ಬಿಳಿಪು ಕರಡಿಯಾದ ಪಾಂಡಾಗೆ ತಿನ್ನಿಸದಿರಿ. ಸದ್ಯಕ್ಕೆ ಕರೀ ಕರಡಿ ಬಗ್ಗೆ ಮಾತನಾಡೋಣ. ಬಹುಶಃ ಭಟ್ಟರು ಹೇಳಿರೋದು, ಕಪ್ಪು ಕತ್ತಲಲ್ಲಿ ಕರೀ ಕರಡಿಗೆ ಕರೀ ಜಾಮೂನು ತಿನ್ನಿಸದಿರಿ. ನನ್ನ ಅನಿಸಿಕೆ ಏನೆಂದರೆ, ಅದರ ಮೈಮೇಲೆ ಪಾಕ ಬಿದ್ದರೆ, ಆ ಪಾಕವನ್ನು ಮೆಲ್ಲಲು ಕರೀ ಇರುವೆ ಕರೀ ಕೂದಲ ನಡುವೆ ಸೇರಿಕೊಂಡರೆ ಪಾಪ ಕರೀ ಕರಡಿಗೆ ಹಿಂಸೆಯಾಗುತ್ತದೆ.

ಕಿವಿಗಳೇ ಇಲ್ಲದಿದ್ದರೆ ಮಾಸ್ಕ ಧರಿಸುವುದಾದರೂ ಹೇಗೆ
ಈಗ ನನ್ನ ಇಂದಿನ ಪ್ರಶ್ನೆಗೆ ಹೋಗೋಣ ಬನ್ನಿ. ಕಿವಿಗಳೇ ಇಲ್ಲದಿದ್ದರೆ ಕಣ್ಣಿನ ತೊಂದರೆ ಇರುವವರು ಕನ್ನಡಕ ಹೇಗೆ ಹಾಕಿಕೊಳ್ಳುತ್ತಿದ್ದರು? ಅಂದ್ರೆ ಕಿವಿ ಇಲ್ಲದಿದ್ರೆ ಕಣ್ಣು ಕಾಣುತ್ತಿತ್ತಾ? ಇದರಂತೆಯೇ, ಇಂದಿನ ದಿನಗಳಲ್ಲಿ ಕಿವಿಗಳೇ ಇಲ್ಲದಿದ್ದರೆ ಮಾಸ್ಕ ಧರಿಸುವುದಾದರೂ ಹೇಗೆ ಆಗಿರುತ್ತಿತ್ತು? ನಿಮಗೇನನ್ನಿಸುತ್ತೆ? ಈಗ ಒಮ್ಮೆ ದೀರ್ಘವಾಗಿ ಉಸಿರು ಎಳೆದುಕೊಂಡು, ಮುಖವನ್ನು ಗಂಭೀರವಾಗಿ ಮಾಡಿಕೊಂಡು ಆಲೋಚನೆ ಮಾಡಿದರೆ ತಕ್ಷಣ ಉತ್ತರ ಸಿಕ್ಕಿಯೇಬಿಡುತ್ತದೆ. Athleteಗಳು, ಟೆನಿಸ್ ಆಟಗಾರರು hairband ಬಳಸುತ್ತಾರೆ ನೋಡಿ ಅದರಂತೆ ಕನ್ನಡಕ, ಮಾಸ್ಕ ಎಲ್ಲವೂ ಆಗುತ್ತಿತ್ತು. ಕಿವಿ ಇತ್ತು ಅಂತ ಅದನ್ನು ಬಳಸಿಕೊಳ್ಳಲಾಯಿತು ಅಷ್ಟೇ. ಕೃತಯುಗದಲ್ಲೂ ಮಂದಿಗೆ ಕಿವಿಗಳಿತ್ತು ಆದರೆ ಕನ್ನಡಕ ಇರಲಿಲ್ಲ.

ಕಿಡ್ನಿಯಲ್ಲಿ ಕಲ್ಲಿದ್ದರೆ ಕಿವಿ ಕೇಳಿಸುತ್ತಾ?
ಪ್ರಶ್ನೆಗಳು ತುಂಬಾ ಆಯ್ತು ಎನ್ನದಿರಿ, ನಾನು ಇನ್ನೂ ನನ್ನ ಇಂದಿನ ಪ್ರಶ್ನೆ ಕೇಳಲು ಆಗುತ್ತಲೇ ಇಲ್ಲಾ ನೋಡಿ. ನನ್ನ ಪ್ರಶ್ನೆ "ಕಿಡ್ನಿಯಲ್ಲಿ ಕಲ್ಲಿದ್ದರೆ ಕಿವಿ ಕೇಳಿಸುತ್ತಾ?'. ಈ ಪ್ರಶ್ನೆಯಲ್ಲಿ ನಿಮಗೆ ಏನು ವಿಶೇಷ ಅನ್ನಿಸುತ್ತದೆ? ಇದೊಳ್ಳೆ ಐನಾತಿ ಪ್ರಶ್ನೆ ಅಲ್ಲವೇ? ಈ ಪ್ರಶ್ನೆ ಓದಿದ ಕೂಡಲೇ ಅಥವಾ ಕೇಳಿದ ಕೂಡಲೇ ನಿಮ್ಮ ತಲೆಗೆ ಹೇರಳವಾದ ವಿಚಾರಗಳು ನುಗ್ಗಿ ಬರುತ್ತದೆ ಅಲ್ಲವೇ? ಮೊದಲಿಗೆ ಅಲ್ಲಿ ಕಾಣಬೇಕಾದುದು ಪ್ರಶ್ನೆಯಲ್ಲಿ ನಾಲ್ಕು ಪದಗಳಿವೆ ಮತ್ತು ನಾಲ್ಕೂ ಪದಗಳ ಮೊದಲ ಅಕ್ಷರ ಕಾಗುಣಿತಾಕ್ಷರಗಳು. ಅದು ಬಿಡಿ, ಈಗ ನನ್ನ ಪ್ರಶ್ನೆ ಹೇಗಪ್ಪಾ ಅಂದ್ರೆ, ಒಂದು ಪುಟ್ಟ ಕಥೆ.

ನಿಮ್ಮ ನಾಯಿ ಕಚ್ಚುತ್ತದೆಯೇ?
ಹೋಟೆಲ್ ದ್ವಾರದ ಮುಂದೆ ಒಬ್ಬಾತ ಒಂದು ದೊಡ್ಡ ನಾಯಿಯನ್ನು ಹಿಡಿದುಕೊಂಡು ನಿಂತಿದ್ದನಂತೆ. ಅಲ್ಲೊಬ್ಬ ಗ್ರಾಹಕ ದ್ವಾರವನ್ನು ದಾಟುವ ಮುನ್ನ, "ನಿಮ್ಮ ನಾಯಿ ಕಚ್ಚುತ್ತದೆಯೇ?' ಎಂದು ಕೇಳುತ್ತಾನೆ. ಅದಕ್ಕವನು "ಇಲ್ಲಾ' ಎನ್ನುತ್ತಾನೆ. ಆ ಗ್ರಾಹಕ ನಾಯಿಯ ಬಾಲವನ್ನು ಎಳೆಯುತ್ತಾನೆ. ತಕ್ಷಣ ಆ ಗಡವಾ ನಾಯಿ ಅವನನ್ನು ಕಚ್ಚಲು ಅವನ ತೊಡೆಯ ಅರ್ಧ ಕೆಜಿ ಮಾಂಸ ನಾಯಿಯ ಬಾಯಲ್ಲಿ ಬಂತಂತೆ. 'ಲಬೋ ಲಬೋ' ಅಂತ ಬಡ್ಕೊಂಡವನು "ಯಾಕ್ರೀ ಸುಳ್ಳು ಹೇಳಿದ್ರಿ?' ಅಂತ ಕೇಳಲು, ನಾಯಿಯನ್ನು ಹಿಡಿದುಕೊಂಡವನು ಹೇಳುತ್ತಾನೆ " ನಾನು ಸುಳ್ಳು ಹೇಳಲಿಲ್ಲ. ನನ್ನ ನಾಯಿ ಕಚ್ಚುವುದಿಲ್ಲ. ಈ ನಾಯಿ ನನ್ನದಲ್ಲಾ'. ಇದೇ ಧಾಟಿಯಲ್ಲಿ 'ಕಿಡ್ನಿಯಲ್ಲಿ ಕಲ್ಲಿದ್ದರೆ ಕಿವಿ ಕೇಳಿಸುತ್ತಾ?' ಪ್ರಶ್ನೆಯನ್ನು ಅರ್ಥೈಸಿಕೊಂಡರೆ, ಅಲ್ಲೇ ಉತ್ತರವಿದೆ. ನನ್ನ ಪ್ರಶ್ನೆಯಲ್ಲಿನ ಮೊದಲ 'ಕಿ' ಒಬ್ಬರಿಗೆ ಸೇರಿದ್ದು, ಆ ಎರಡನೆಯ 'ಕಿ' ಮತ್ತೊಬ್ಬರಿಗೆ ಸೇರಿದ್ದು ಅಂತ ಅಂದುಕೊಂಡರೆ ಆಯ್ತು. ಕೀ ಬಳಸಿದರೆ ಪ್ರಶ್ನೆಯ ಲಾಕ್ ತೆರೆದುಕೊಳ್ಳುತ್ತೆ.

ಮಣ್ಣು ತಿನ್ನುವ ಕೆಲಸ ಮಾಡಿದರೆ, ಕಲ್ಲು ಸೇರುತ್ತೆ
ಈಗ ಈ ನನ್ನ ಪ್ರಶ್ನೆಯನ್ನು ಕೊಂಚ ಆಧ್ಯಾತ್ಮಿಕವಾಗಿ ಆಲೋಚಿಸಿದರೆ, 'ಮಣ್ಣು ತಿನ್ನುವ ಕೆಲಸ ಮಾಡಿದರೆ, ಕಲ್ಲು ಸೇರುತ್ತೆ, ಅಂಥವರ ಕಿವಿ ಖಂಡಿತ ಕೇಳಿಸುವುದಿಲ್ಲ'. ನೀವೇನಂತೀರಾ? ಇಲ್ಲಿಂದ ಮುಂದಿನ ಪ್ರಶ್ನೆಗೆ ಹೋಗೋಣ ಬನ್ನಿ.

ಮಣ್ಣು ತಿನ್ನುವ ಕೆಲಸ ಅಂದ್ರೇನು? ಅದೇನೂ ಬಿಸಿಬೇಳೆಬಾತ್ ತಿಂದಂತೆ ಅಲ್ಲ. ಹೀಗಿದ್ದಿದ್ರೆ, ಈ ಭೂಮಿಯ ಮೇಲೆ ಮಣ್ಣು ಇರುತ್ತಲೇ ಇರಲಿಲ್ಲ. ಅಂದ್ರೆ, ಮನುಷ್ಯರಿಗೆ ನೇರವಾಗಿ ಮಣ್ಣನ್ನು ತಿನ್ನಲು ಆಗುವುದಿಲ್ಲ. ಅದು ಸರಿ, "ಮನುಷ್ಯರು' ಅಂತೇಕೆ ಅಂದಿದ್ದು? ಬಹುಶಃ ನಮ್ಮೆಲ್ಲರ ಆರಾಧ್ಯದೈವ ಎನ್ನಬಹುದಾದ ಶ್ರೀಕೃಷ್ಣ ಪರಮಾತ್ಮನೇ ಮಣ್ಣು ತಿಂದಿದ್ದ ಅಲ್ಲವೇ? ಮಣ್ಣು ತಿಂದವರೆಲ್ಲಾ ಬಾಯಿ ತೆರೆದಾಗ ಭೂಮಿ ಕಾಣುವುದಿಲ್ಲಾ! ಅವನು ದೇವಾನುದೇವ. ಅವನು ಎಲ್ಲರೊಳಗೆ, ಅವನೊಳಗೇ ಎಲ್ಲರೂ. ಇದಕ್ಕೇ ನಾನು ಹೇಳಿದ್ದು ಮನುಷ್ಯರು ಅಂತ. ರಕ್ಕಸರು ಮತ್ತು ಇತರ ಪ್ರಾಣಿಗಳ ವಿಷಯ ಇಲ್ಲಿ ಬೇಡಾ ಬಿಡಿ.

ಪಾಪ- ಪುಣ್ಯ ಅಂತ ಉಪದೇಶ ಮಾಡಿದರೂ ಅವರ ಕಿವಿ ಕೇಳಲ್ಲ
ಒಬ್ಬರ ಮಣ್ಣನ್ನು ಕದಿಯುವ ಯಾರೇ ಆದರೂ ಅವರು ಮಣ್ಣು ತಿನ್ನುವ ಕೆಲಸ ಮಾಡಿದವರೇ ಎನ್ನಬಹುದು. ನಿಮ್ಮ 30 x 40 ಸೈಟಿನ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡು ಸುತ್ತಲೂ ಗಾಳಿ ಬೆಳಕಿಗಾಗಿ ಜಾಗವನ್ನೂ ಬಿಟ್ಟಿರುತ್ತೀರಿ. ಪಕ್ಕದ ಮನೆಯಾತ ಮನೆಕಟ್ಟುವಾಗ ಕಾಂಪೌಂಡ್ ಹಾಕುವಾಗ ನಿಮ್ಮ ಜಾಗದ ಒಂದಡಿ ಕಬಳಿಸಿದರೆ ಅದುವೇ ಮಣ್ಣು ತಿನ್ನುವ ಕೆಲಸ ಅನ್ನೋದು. ಇಂಥವರ ಮುಂದೆ ನೀವೇನು ಪಾಪ- ಪುಣ್ಯ ಅಂತ ಉಪದೇಶ ಮಾಡಿದರೂ ಅವರ ಕಿವಿ ಕೇಳಿಸುವುದಿಲ್ಲ.

ಇಂದಿನ ವಿಷಯಗಳು ಏನೇನೋ, ಎತ್ತೆತ್ತಲೋ ಸಾಗಿತ್ತು ಅಂತ ಅನ್ನಿಸಿದರೆ ವಿಷಯ ಅದಲ್ಲ. ಒಂದು ವಿಷಯವನ್ನು ಅಥವಾ ಒಂದು ಸಾಲನ್ನು ಹೇಗೆಲ್ಲಾ ಅರ್ಥಮಾಡಿಕೊಳ್ಳಬಹುದು, ಹೇಗೆಲ್ಲಾ ಒಂದು ವಾಕ್ಯವನ್ನು ಭಾಗಿಸಿ, ವಿಭಾಗಿಸಿ, ಛೇದಿಸಿ, ಚಿಂದಿಚಿತ್ರಾನ್ನ ಮಾಡಬಹುದು ಅಂತ ಒಂದು ಸಣ್ಣ ಉದಾಹರಣೆ ಅಷ್ಟೇ. ಅಂದ ಹಾಗೆ, ನಾನು ನಾಲ್ಕಾರು ಸಾಲುಗಳನ್ನು ಈ ಲೇಖನದಲ್ಲಿ ಹೇಳಿದ್ದೇನೆ. ನಿಮ್ಮಿಂದ ಒಂದು ಸಾಲು ಬರಲಿ.

English summary
Srinath Bhalle Column: Let Us Understand Some Sentences in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X