ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಆಂಗ್ಲದ GG ಬಗ್ಗೆ ಕನ್ನಡದಲ್ಲಿ ಗಂಟೆಗಟ್ಟಲೆ ಮಾತನಾಡೋಣ

|
Google Oneindia Kannada News

ಮೊದಲ ಸಾಲಲ್ಲೇ ಬಹುಶಃ ನಾನು ಏನು ಹೇಳಹೊರಟಿದ್ದೇನೆ ಅಂತ ಅರ್ಥವಾಗಿರಬಹುದು. ಕೆಲವು ಜೋಡಿ ಕನ್ನಡ ಪದಗಳನ್ನ ಕಂಗ್ಲಿಷ್‌ನಲ್ಲಿ ಬರೆಯೋಣ. ಆ ಜೋಡಿಪದಗಳ ಆರಂಭದ ಅಕ್ಷರ G ಆಗಿರುತ್ತದೆ. ಉದಾಹರಣೆಗೆ ಗಂಟೆಗಟ್ಟಲೆ. ಹಾಗೆ ಬರೆದು ಅದರ ಸುತ್ತಲೂ ಹಲವು ವಿಚಾರಗಳನ್ನು ಮಾತನಾಡುವಾ ಬನ್ನಿ.

ಮೊದಲಿಗೆ ಸೃಷ್ಟಿಕರ್ತನಾದ ಬ್ರಹ್ಮಲೋಕಕ್ಕೆ ಹೋಗೋಣ. ಚತುರ್ಮುಖ ಬ್ರಹ್ಮ ಸದಾ ಘನ-ಗಂಭೀರನಾದ GG. ಮನುಷ್ಯನ ಹೊರತಾದ ಸೃಷ್ಟಿಗಳ ಬಗ್ಗೆ ಮಾಹಿತಿ ಗೊತ್ತಿಲ್ಲ ಆದರೆ ಸೃಷ್ಟಿಯಾಗುವ ಮನುಷ್ಯಪ್ರಾಣಿಯ ವಿಚಾರದಲ್ಲಿ ವೀಣಾಪಾಣಿ ಸರಸ್ವತಮ್ಮನ ಕೃಪೆ ಖಂಡಿತ ಇದ್ದೇ ಇದೆ ಅಲ್ಲವೇ? ಕೆಲವು ಜೀವಿಗಳಿಗೆ ಈಕೆ ಧಾರಾಳಿ, ವಿದ್ಯೆ ಮತ್ತು ಕಲೆಗಳನ್ನು ಸಾಕಷ್ಟು ನೀಡಿರುತ್ತಾಳೆ. ಈ ಬರಹವನ್ನು ಓದುತ್ತಿದ್ದರೆ ಅದು ಆಕೆಯ ಕೃಪೆ. ಘನಗಂಭೀರನಾ ಪತ್ನಿ ಘನಗಂಭೀರೆಯೇ ಸರಿ.

ಮುಂದೆ 'ದಾರಿಯಾವುದಯ್ಯ ವೈಕುಂಠಕೆ ದಾರಿಯಾವುದಯ್ಯಾ', ಎಂದು ಕೇಳಿಕೊಂಡೇ ವೈಕುಂಠದ ಕಡೆ ಸಾಗಿ ಅಲ್ಲಿಗೆ ಹೋದಾಗ ನಮ್ಮ ಶ್ರೀಮನ್ನಾರಾಯಣನ ವಾಹನನಾದ ಗರುಡ ಕಣ್ಣಿಗೆ ಬಿದ್ದ. ಅವನೆಷ್ಟು ದೊಡ್ಡದಾಗಿದ್ದ ಎಂದರೆ, ಅವನ ಕಣ್ಣಿಗೆ ನಾನು ಬೀಳಲಿಲ್ಲ ಬಿಡಿ. ಇಂಥಾ ಗರುಡನ ಮೇಲೆ ಸಾಗುವವನೇ ನಮ್ಮ GG ಅರ್ಥಾತ್ ಗರುಡಗಮನ. ಪಟ್ನಮ್ ಸುಬ್ರಮಣ್ಯ ಐಯ್ಯರ್ ಅವರ "ಗರುಡಗಮನ ಸಮಯಮಿದೆ ಕರುಣಜೂಡ ರಾಧ' ಕೇಳದವರಾರು?

Srinath Bhalle Column: Let Us Talk For Hours in Kannada about GG

ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು
ಕೊನೆಯಲ್ಲಿ ನೋಡಲು ಹೊರಟಿದ್ದು ಗಂಡುಗಲಿ ರುದ್ರನನ್ನು. 'ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು, ದೋಷ ರಾಶಿ ನಾಶ ಮಾಡೋ ಶ್ರೀಶ ಕೇಶವ' ಎನುತ್ತಾ ಪಾಡುತ್ತಾ ಸಾಗಲು ಕಂಡವ ಗಂಗೆಗೌರಿ ಸಹಿತನಾದ ಈಶ. ಭಕುತಿಯಿಂದ ನಮಿಸುವಾಗ ಅನುಮಾನವಾಗಿದ್ದು ಕನಕರ ಈ ಕೃತಿ ಹರಿಯ ಕುರಿತಾಗಿಯೇ? ಹರನ ಕುರಿತಾಗಿಯೇ? "ಹರಿಯೇ ಹರ, ಹರನೇ ಹರಿ, ಹರಿಹರರ ಮಾಡು ಗುಣಗಾನ, ಬೇಡ ಮನದಲ್ಲಿ ಇಂಥಾ ಅನುಮಾನ' ಎಂದನಾ ಗೌರಿಸುತ.

ಫಣಿರಾಮಚಂದ್ರರ ಗೌರಿಗಣೇಶ ಚಿತ್ರ ನೋಡಿದ್ದೀರಾ? ಹೆಸರಿನಲ್ಲಿ ಗಣೇಶ ಇದ್ದರೂ ನಾಯಕನ ಹೆಸರು ಲಂಬೋದರ. ಹಾಗಾದರೆ ಈ ಗಣೇಶ ಯಾರು? ಫಣಿ ರಾಮಚಂದ್ರರ ಸಿನಿಮಾಗಳಲ್ಲಿ ಒಂದು ಡೈಲಾಗ್ common ಅಂತೆ. ಅವರು ಸಿನಿಮಾ ಶೂಟಿಂಗ್ ಆರಂಭಿಸಿದಾಗ ಆ ಪದಪ್ರಯೋಗದಿಂದಲೇ ಮೊದಲೇ ಸೀನ್ ಅನ್ನು ಚಿತ್ರೀಕರಣ ಮಾಡುತ್ತಿದ್ದರಂತೆ. ಆ ಪದ ಯಾವುದು ಗೊತ್ತೇ? Success ಎಂಬುದೇ ಆ ಪದ.

ಮದಿಸಿದ ಕರಿಯ ಮದವಡಗಿಸಿದ ಮದಕರಿನಾಯಕ
ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಆಳಿದವ ಮದಕರಿ ನಾಯಕ. ತರಾಸು ಅವರ ದುರ್ಗಾಸ್ತಮಾನ ಈ ನಾಯಕರ ಕುರಿತಾದ ಕಾದಂಬರಿ. ಈ ಕೃತಿಗೆ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರಕಿತ್ತು. ನಟ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದಲ್ಲಿ ಹಾಡುವ ಹಾಡಿನಲ್ಲಿ 'ಮದಿಸಿದ ಕರಿಯ ಮದವಡಗಿಸಿದ ಮದಕರಿನಾಯಕ' ಎನ್ನಲಾಗಿದೆ. ಈ ಚಿತ್ರವೂ ತರಾಸು ಅವರ ಕಾದಂಬರಿ ಆಧಾರಿತ ಚಿತ್ರವೇ ಆಗಿದೆ. ಇಂಥಾ ಮದಕರಿನಾಯಕರನ್ನು "ಗಂಡಗಲಿ' ಎಂದೂ ಹೆಮ್ಮೆಯಿಂದ ಕರೆಯುತ್ತಾರೆ.

ಸಾಮಾನ್ಯವಾಗಿ ಪಕ್ಷಿ ಕುಲವೇ ಒಂದು ಅದ್ಭುತವಾದ ದರ್ಜಿ ಕುಲ ಎನ್ನಬಹುದು. ಅದೆಲ್ಲೆಲ್ಲೋ ಇರುವ ಎಲೆಗಳು, ಕಡ್ಡಿಗಳನ್ನು ತಂದು ಮನೆಕಟ್ಟಿಕೊಳ್ಳುತ್ತವೆ, ಬೆಚ್ಚಗಿನ ಆ ಗೂಡಿನಲ್ಲಿ ಮೊಟ್ಟೆಗಳನ್ನು ಇಟ್ಟು, ಮರಿಗಳನ್ನೂ ಸಾಕುತ್ತವೆ. ಇಂಥಾ ಪಕ್ಷಿಗಳಲ್ಲೇ ಪ್ರಾವೀಣ್ಯತೆ ಸಾಧಿಸಿರುವ ಪಕ್ಷಿಗೆ ನೇಕಾರ ಪಕ್ಷಿ ಅಥವಾ weaver bird ಎಂಬ ಹೆಸರಿದೆ. ಯಾರ ಬಗ್ಗೆ ಹೇಳುತ್ತಿರುವೆ ಗೊತ್ತೇ? ಅದುವೇ ಗೀಜಗ. ಈ ಗೀಜಗ ಕಟ್ಟುವ ಮನೆಯೇ GG ಅರ್ಥಾತ್ ಗೀಜಗನ ಗೂಡು. ತೂಗಿಬಿಟ್ಟ ಆಳದ ಸೌಟಿನ ಆಕಾರದ ಈ ಗೂಡು ಬಲಿಷ್ಠವಾಗಿಯೂ ಇರುತ್ತದೆ.

ಮಧ್ಯೆ ಆಗಾಗ ಕಾಫಿ-ಚಹಾ ಸೇವನೆ
ಮನುಷ್ಯರ ಗುಣಗಳ ಬಗೆ ಅದೆಷ್ಟು ಹೇಳಿದರೂ ಮುಗಿಯೋದಿಲ್ಲ. ಕೆಲವರಿಗೆ ಮತ್ತೊಬ್ಬರ ಕುರಿತು ಆಸಕ್ತಿ. ಪ್ರಶ್ನೆ ಕೇಳೀ ಕೇಳೀ ತಿಳಿದುಕೊಳ್ಳುತ್ತಾರೆ ಆದರೆ ಅವರ ವಿಷಯ ಕೇಳಿದಾಗ ಮಾತ್ರ ತುಟಿ ಹೊಲೆದುಕೊಳ್ಳುತ್ತಾರೆ. ಇಂಥವರನ್ನು GG ಅಥವಾ ಗುಟ್ಟಿನಗೂಡು ಎನ್ನಬಹುದೇ? ಇದೇನೂ ದೊಡ್ಡ ವಿಷಯವಲ್ಲ ಬಿಡಿ. ಗುಟ್ಟಿನಗೂಡು ಎಂಬುವವರು ಖ್ಯಾತ ವ್ಯಕ್ತಿಗಳ ಮನೆಯಾಕೆ.

ಒಂದು ಉದಾಹರಣೆ ತೆಗೆದುಕೊಳ್ಳೋಣ. ಹಿರಿಯರು ಬೆಳಿಗ್ಗೆ ಏಳಕ್ಕೆ ಎದ್ದು ವಾಕಿಂಗ್ ಹೊರಟು ಎಂಟಕ್ಕೆ ಬಂದು ಸ್ನಾನ-ಪೂಜೆಗಳನ್ನು ಮುಗಿಸಿ ಬರೆಯಲು ಕೂತರೆ ಏಳುತ್ತಿದ್ದುದೇ ಮೂರು ಘಂಟೆಗೆ. ಅಲ್ಲಿಯವರೆಗೆ ಏನೂ ತಿನ್ನುತ್ತಿರಲಿಲ್ಲ ಅಥವಾ ಕುಡಿಯುತ್ತಿರಲಿಲ್ಲ. ಅವರು ಕೆಲಸವನ್ನು ತಪಸ್ಸು ಎಂದುಕೊಂಡಿದ್ದರು ಎಂಬುದು ಅವರ ಸಮೀಪವರ್ತಿಗಳು ಹೇಳುತ್ತಿದ್ದರು. ಮಧ್ಯೆ ಆಗಾಗ ಕಾಫಿ-ಚಹಾ ಸೇವನೆ. ಅವರನ್ನು ಕಾಣಲು ಬಂದವರಿಗೆ ತಿಂಡಿ-ಕಾಫಿ ಜೊತೆಗೆ ಇವರೂ ಸೇವಿಸುತ್ತಿದ್ದರು. ರಾತ್ರಿಯ ಊಟ ಹತ್ತು ಘಂಟೆಗೆ. ಈ ಸೇವೆ ಮಾಡುವವರು ಯಾರು ಅಂತ ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ? ಪತಿಯ ಊಟವಾಗುವಾ ತನಕ ಅವರ ಮನೆಯಾಕೆ ಒಂದು ಹನಿ ನೀರನ್ನೂ ಕುಡಿಯುತ್ತಿರಲಿಲ್ಲ.

ಪತಿಯ ಮಾತನ್ನು ಅಥವಾ ಶಿಸ್ತನ್ನು ಮೀರಿ ನಡೆಯಲಾದೀತೇ?
ಹಿರಿಯರ ಬಗ್ಗೆ ಕೇಳಲು ಚೆನ್ನ. ಅತೀವ ಗೌರವ ಕೂಡ ಮೂಡಬಹುದು. ಆದರೆ ಅವರ ಪತ್ನಿಯ ಬಗ್ಗೆ ಆಲೋಚಿಸುವುದಿಲ್ಲವೇಕೆ? ಇವರೇ ಅಲ್ಲವೇ ಗುಟ್ಟಿನಗೂಡು? ಹಿರಿಯರು ಮೂರು ಘಂಟೆಗೆ ಊಟ ಮಾಡುತ್ತಿದ್ದರು ಸರಿ ಆದರೆ ಅಲ್ಲಿಯವರೆಗೆ ಈಕೆಯ ಗತಿ? ದೈಹಿಕವಾಗಿ ಏನು ಸಮಸ್ಯೆ ಇತ್ತೋ ಏನೋ ಆದರೆ ಪತಿಯ ಮಾತನ್ನು ಅಥವಾ ಶಿಸ್ತನ್ನು ಮೀರಿ ನಡೆಯಲಾದೀತೇ? ಇದು ಒಂದು ಕಥೆಯಾದರೆ, ಆ ಪತ್ನಿಯೂ ಜ್ಞಾನಿಯೇ ಆಗಿರಬಹುದು, ಬರವಣಿಗೆಯಲ್ಲಿ ಆಸಕ್ತಿ ಹೊಂದಿದವರೂ ಆಗಿರಬಹುದು ಆದರೆ ಪತಿಯನ್ನು ಮೀರಿ ಬೆಳೆಯಲು ಸಾಧ್ಯವಿತ್ತೇ? ಇಷ್ಟಕ್ಕೂ ಚರ್ಚೆ ಮಾಡಲು ಪತಿಯ ಅಹಂ ಅಡ್ಡ ಬರಬಹುದು ಅಲ್ಲವೇ? ಇವೆಲ್ಲವನ್ನೂ ತಲೆಯ ಮೇಲೆ ಸೆರಗು ಹೊದ್ದು ಮುಚ್ಚಿಟ್ಟುಕೊಂಡ ಆ ಗುಟ್ಟಿನಗೂಡುಗಳ ಬಗ್ಗೆ ಎಂದಿಗೂ ಅರಿವು ಮೂಡಲೇ ಇಲ್ಲ ಅಲ್ಲವೇ?

ಒಲಿದ ಸ್ವರಗಳು ಒಂದಾದರೆ ಅದು ಇಂಪಾದ ಸಂಗೀತ
ರಾಘವೇಂದ್ರ ರಾಜಕುಮಾರರ ನಂಜುಂಡಿ ಕಲ್ಯಾಣದ ನಂತರದ ಚಿತ್ರ ನೆನಪಿದೆಯೇ? ಆ ಚಿತ್ರದ ಹೆಸರು ಗಜಪತಿ ಗರ್ವಭಂಗ. ಇದನ್ನು GG ಎನ್ನಬಹುದು ಕನ್ನಡದಲ್ಲಿ ಗಗ ಕೂಡ ಎನ್ನಬಹುದು. ಇರಲಿ ಚಿತ್ರದಲ್ಲಿ ಗಜಪತಿ ಪಾತ್ರವಹಿಸಿದ್ದು ಯಾರು? ಈ ಚಿತ್ರದ ಹಾಡುಗಳಲ್ಲಿ ನನಗೆ ಇಷ್ಟವಾದುದು ಎಂದರೆ 'ಒಲಿದ ಸ್ವರಗಳು ಒಂದಾದರೆ ಅದು ಇಂಪಾದ ಸಂಗೀತ'. ಹೇಗೆ ಒಂದು ಗೀತೆ ಹಾಡುವಾಗ ಶೃತಿ ಸರಿ ಇಲ್ಲದಿದ್ದರೆ ಇಂಪಾಗಿ ಕೇಳುವುದಿಲ್ಲವೋ ಹಾಗೆ ಸಂಸಾರ ಸರಿಗಮದಲ್ಲಿ ಶೃತಿ ತಪ್ಪಿದರೆ ಅಪಸ್ವರವೇ ಸರಿ.

ನವರಸಗಳಲ್ಲಿ ಯಾವುದೇ ರಸದ ಬಗ್ಗೆ ಮಾತನಾಡಿದರೂ ಹಾಸ್ಯರಸದ ಬಗ್ಗೆ ಮಾತನಾಡದಿದ್ದರೆ ಮಾತು ಪೂರ್ಣವಾಗುವುದೇ ಇಲ್ಲ. ಹಾಗಾಗಿ ಮುಂದಿನ ಮಾತು ಹಾಸ್ಯದ ಬಗ್ಗೆ. ಹಾಸ್ಯಲೋಕದ ಈ GG ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಅದುವೇ ಗಾಂಪರ ಗುಂಪು. ಈ ಗಾಂಪರ ಗುಂಪಿನ ಗುರುಗಳಿಗೆ ಮಡ್ಡಿ, ಮಡೆಯ, ಮುಠ್ಠಾಳ, ಮಂಕ ಮತ್ತು ಮೂಢ ಎಂಬ ಐವರು ಶಿಷ್ಯರು. ಎಲ್ಲರೂ ಸಕತ್ ಬುದ್ದಿವಂತರು ಅರ್ಥಾತ್ ಮಹಾಮೂರ್ಖರು. ಗುರುಗಳು ಹೇಳಿದ ಮಾತನ್ನು ಕೇಳಿ ಅದರಂತೆ ನಡೆದುಕೊಳ್ಳುತ್ತಿದ್ದರೇ ವಿನಃ ಸ್ವಂತ ಬುದ್ದಿ ಇರದವರು. ಹಾಗಂತ ಗುರುಗಳು ಹೇಳಿದ್ದನ್ನು ಸರಿಯಾಗಿ ಮಾಡುತ್ತಿದ್ದರು ಅಂತೇನಲ್ಲ. ನಿಮಗೆ ಗೊತ್ತಿರುವ ಗಾಂಪರೊಡೆಯರ ಕಥೆಯೊಂದನ್ನು ಹೇಳಿ ಮತ್ತೆ.

ನಾರದರ ಸಲಹೆಯಂತೆ ಗಾಂಧಾರಿಯ ಗೌರಿ ವ್ರತ
ಇನ್ನೂ ಹಲವಾರು GG ಗಳಲ್ಲಿ ಕೆಲವು ಹೀಗಿವೆ. ದ್ವಾಪರಕ್ಕೆ ಹೋದರೆ, ನಾರದರ ಸಲಹೆಯಂತೆ ಗಾಂಧಾರಿಯು ಗೌರಿ ವ್ರತ ಮಾಡುತ್ತಾಳೆ ಆದರೆ ಕುಂತಿಗೆ ಆಹ್ವಾನ ನೀಡುವುದಿಲ್ಲ. ಬೇಸರಗೊಂಡ ಕುಂತಿಗೆ ಸಮಾಧಾನ ಹೇಳಿ ಭೀಮಾರ್ಜುನರು ದೇವಲೋಕದ ಐರಾವತವನ್ನೇ ತರುತ್ತಾರೆ. ಇದೂ GG ಅರ್ಥಾತ್ ಗಜಗೌರಿ ವ್ರತ. ಕಲಿಯುಗಕ್ಕೆ ಮತ್ತೆ ಬಂದರೆ, GG ಎಂದರೆ ದಾಶರಥಿ ದೀಕ್ಷಿತ್ ಅವರ ಇಂಗ್ಲೆಂಡ್ ಪ್ರವಾಸ ಅನುಭವದ ಹಾಸ್ಯ ಸನ್ನಿವೇಶಗಳ ಕೃತಿಯಾದ 'ಗಾಂಪರ ಗುಂಪು' ನೆನಪಾಗುತ್ತದೆ. ಹೆಸರಾಂತ ಚಿತ್ರಕಾರ ಆದರೆ ಕೊನೆಯ ದಿನಗಳಲ್ಲಿ ವಿವಾದ ಸೃಷ್ಟಿಸಿಕೊಂಡ ಎಂ.ಎಫ್. ಹುಸೇನ್ ಅವರು ಒಂದು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೂ ಒಂದು GG ಆಲಿಯಾಸ್ ಗಜಗಾಮಿನಿ.

ನಮ್ಮ ಜೀವನದಲ್ಲಿನ ಅನೇಕಾನೇಕ GG ಗಳಲ್ಲಿ ಕೆಲವನ್ನು ಮಾತ್ರ ಹೇಳಿದ್ದೇನೆ. ಗೂಂಡಾಗಿರಿ, ಗುಂಪುಗಾರಿಕೆ, ಗೂಂಡಾಗುರು, ಗುಂಡ್ರುಗೋವಿ ವಿಚಾರಗಳನ್ನು ಬದಿಗಿರಿಸಿ ನಿಮ್ಮ ಅನಿಸಿಕೆಯ GG ಬಗ್ಗೆ ಒಂದೆರಡು ಮಾತು ಹೇಳ್ರಲ್ಲಾ ಮತ್ತೆ!

English summary
Srinath Bhalle Column: Let's write a few pairs of Kannada words in Kanglish and talk for hours in English about GG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X