• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಚ್ಛತೆ ಇರಬೇಕು ಅಂದರೆ ಆರಂಭ ಎಲ್ಲಿಂದ? ನಿಮ್ಮಿಂದಲೇ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಂದಿನ ಬರಹ, ಸ್ವಚ್ಛತಾ ಅಭಿಯಾನದ ಬಗ್ಗೆ ನೇರವಾಗಿ ಅಲ್ಲದಿದ್ದರೂ ಅದರದ್ದೇ ಒಂದು ಅಂಗ ಅಂದುಕೊಳ್ಳೋಣ.

ಕಾಲವೊಂದಿತ್ತು. ಬೆಳ್ ಬೆಳಿಗ್ಗೆ ಮನೆಯ ಹೆಂಗಸರು ಎದ್ದು ಅಂಗಳಕ್ಕೆ ನೀರು ಹಾಕಿ, ರಂಗವಲ್ಲಿ ಇಟ್ಟು ಅಂತೆಲ್ಲಾ ಕೆಲಸಗಳನ್ನು ಮಾಡುತ್ತಾ ದಿನ ಆರಂಭಿಸುತ್ತಿದ್ದರು. ಬಂದವರಿಗೆ ಮೊದಲು ಅಂಗಳ ಸ್ವಾಗತಿಸಬೇಕು. ಅದು ಸ್ವಚ್ಛವಾಗಿದ್ದರೆ ಮನೆಯ ಜನರ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂಬ ಭಾವ ಅಂದುಕೊಳ್ಳುತ್ತೇನೆ.

ಅಂದಿನ ಕಾಲದಲ್ಲಿ ಸಿನೆಮಾ ನೋಡುವ ಮಜವೇ ಮಸ್ತಾಗಿತ್ತು!

ಬಹಳಾ ಹಿಂದೆ, ಬಹುಶ: ಮಯೂರ'ದಲ್ಲಿ ಒಂದು ವ್ಯಂಗ್ಯಚಿತ್ರ ನೋಡಿದ್ದೆ. ಅಕ್ಕಪಕ್ಕದ ಮನೆಗಳ ಹಿತ್ತಲಲ್ಲಿ ಇಬ್ಬರು ಹೆಂಗಸರು ಕಸ ಬಳಿಯುತ್ತಾ ಇರುತ್ತಾರೆ. ಬಳಿದ ಕಸ ಮೊರದಲ್ಲಿ ಹೆಕ್ಕಿಕೊಂಡ ನಂತರ ಇಬ್ಬರೂ ಮತ್ತೊಬ್ಬರ ಕಾಂಪೌಂಡ್ ಒಳಗೆ ಕಸ ಕೊಡವಿ ಬೇಗ ಮನೆಯೊಳಗೇ ಸೇರಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಇದು ಕಠೋರ ಸತ್ಯವಾಗಿದೆ.

ಮೊರದಲ್ಲಿರೋ ಕಸವನ್ನೂ ಫೋನಿನಲ್ಲಿರೋ ಇಲೆಕ್ಟ್ರಾನಿಕ್ ಕಸವನ್ನೂ ತಾಳೆ ಹಾಕಿ ನೋಡಿ.

ಈ ಇಲೆಕ್ಟ್ರಾನಿಕ್ ಕಸ ಆರಂಭವಾಗಿದ್ದು ಈಮೇಲ್ ಯುಗದಲ್ಲಿ. ಇವರು ಓದಿದ ಜೋಕ್ ಮತ್ತೊಬ್ಬರಿಗೆ ಆ ಮತ್ತೊಬ್ಬರು ಇವರನ್ನೂ ಸೇರಿಸಿ ಇನ್ನೊಬ್ಬರಿಗೆ ಅಂತ ರವಾನಿಸತೊಡಗಿದರು. ಇದು ಮುಂದುವರೆದಿದ್ದು sms ಯುಗದಲ್ಲಿ. ಆ ನಂತರ ಫೇಸ್ಬುಕ್, ಟ್ವಿಟ್ಟರ್ . . ವಾಟ್ಸಾಪ್ ಬಂದ ಮೇಲಂತೂ ಕಸ ಕಸ ಕಸ ಎಲ್ಲೆಲ್ಲೂ ಕಸ. ಚುನಾವಣೆ, ಹಬ್ಬಹಾಡಿಗಳು, ಹೊಸವರ್ಷದ ಆರಂಭ ಸಮಯದಲ್ಲಂತೂ ಈ ಕಸವನ್ನು ಗುಡಿಸುವುದಕ್ಕೇ ಜನರನ್ನು ನೇಮಿಸಿಕೊಳ್ಳಬೇಕು ಎನಿಸುವಷ್ಟು ಕಸ.

ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?

ಬನ್ನಿ . . . ಕ್ಲೀನ್ ಅಪ್ ಮಾಡೋಣ!

ಈ 'ಕ್ಲೀನ್ ಅಪ್, ಕ್ಲೀನ್ ಅಪ್' ಎಂಬ ಪುಟ್ಟಮಕ್ಕಳ ಹಾಡನ್ನು ಕೇಳಿದ್ದು ಅಮೆರಿಕಕ್ಕೆ ಬಂದ ಮೇಲೆ. ಮಕ್ಕಳು ಒಂದೆಡೆ ಸೇರಿ ಆಟವಾಡಿದಾಗ ಸಹಜವಾಗಿ ಆಟದ ಸಾಮಾನುಗಳು ಚಲ್ಲಾಪಿಲ್ಲಿ. ಬಂದವರು ಹೊರಡುವ ಮುನ್ನ ಚಲ್ಲಾಪಿಲ್ಲಿಯನ್ನು ಸರಿಮಾಡಿ ಹೋಗಬೇಕು ಎಂಬುದು ನಿಯಮ. "cleanup cleanup everybody cleanup" ಅಂತ ಹಾಡು ಹಾಡಿಕೊಂಡು ಮಕ್ಕಳು ತಮಗೆ ತೋಚಿದ ರೀತಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರೋ ಆಟದ ವಸ್ತುಗಳನ್ನು ಒಂದೆಡೆ ಗುಡ್ಡೆ ಹಾಕಿ ಹೊರಡುತ್ತಿದ್ದರು.

ನಾವುಂಡ ತಟ್ಟೆಯನ್ನು ತೊಳೆಯುವ ಅಭ್ಯಾಸ ಮೊದಲಿಂದಲೂ ಇದೆ ನಮ್ಮ ಮನೆಯಲ್ಲಿ. ಹಲವಾರು ಜನರ ಮನೆಯಲ್ಲಿ ಇದು ಒಂದು ಸಂಪ್ರದಾಯ ಎನ್ನಬಹುದು. ಹೊರನಾಡು ಕ್ಷೇತ್ರದ ದೇವಾಲಯದಲ್ಲಿ ಈ ಪದ್ಧತಿ ಕಂಡು ಅಚ್ಚರಿಯಾಗಿತ್ತು. ಕೆಲವರ ಮನೆಯಲ್ಲಿ ತಿಂದ ತಟ್ಟೆಯಲ್ಲೇ ಕೈತೊಳೆದು ಎದ್ದು ಹೊರಟು ಸೋಫಾದ ಮೇಲೆ ಮೈ ಚೆಲ್ಲಿದರೂ ಅಂದ್ರೆ ಮುಗೀತು. ಆ ಮನೆಯಾಕೆಗೆ ಸಮಯವಾದಾಗ ಅದನ್ನು ಕ್ಲೀನ್ (?) ಮಾಡುತ್ತಾಳೆ.

ಶುಚಿತ್ವ, ಒಪ್ಪ-ಓರಣ ಇವೆಲ್ಲಾ ನನಗೆ ಬಹಳ ಪ್ರಿಯವಾದ ವಿಚಾರ. ವಾರಾಂತ್ಯದಲ್ಲಿ ಅಂಗಡಿ ಹೋಗಿ ಪದಾರ್ಥಗಳನ್ನು ಆ ಕೂಡಲೇ ಡಬ್ಬಗಳಿಗೆ ಸೇರಿಸದೇ ಹೋದರೆ ಏನೋ ಇರುಸುಮುರುಸು. ಇಲ್ಲಿ ಅಂತಲ್ಲಾ, ಅಲ್ಲಿದ್ದಾಗಲೂ ಅಷ್ಟೇ. ದಿನಸಿ ಅಂಗಡಿಗೆ ಚೀಟಿ ಕೊಟ್ಟು ಬಂದು, ಅವನು ಸಂಜೆಯ ವೇಳೆಗೆ ಸಾಮಾನು ತಂದು ಮನೆಗೆ ಕೊಟ್ಟ ಮೇಲೆ, ಎಲ್ಲವನ್ನೂ ಡಬ್ಬಿಗಳಿಗೆ ತುಂಬಿಡೋದು ಮನೆಯ ಕೆಲಸಗಳಲ್ಲಿ ಒಂದಾಗಿತ್ತು. ಕಡಲೇಕಾಯಿ ಬೀಜ, ಕಡಲೆಪಪ್ಪು ಇಂಥವೆಲ್ಲ ತುಂಬಿಡೋವಾಗ ಬಾಯಿಗೆ ಹಾಕಿಕೊಂಡರೇನೇ ಸಮಾಧಾನ.

ಎಷ್ಟೋ ಸಾರಿ ಏನಾಗುತ್ತೆ ಅಂದ್ರೆ, ಆಮೇಲೆ ಕ್ಲೀನ್ ಅಪ್ ಮಾಡೋಣ ಅಂತ ಅವನ್ನು ಒತ್ತರಿಸಿ ಇಟ್ಟುಬಿಡುತ್ತೇವೆ. ಅರ್ಥಾತ್ ನಮ್ಮ ಕಣ್ಣಿಗೆ ಕಾಣದಿದ್ದರೆ ಸಾಕು ಅಷ್ಟೇ. ಉದಾಹರಣೆಗೆ ಹಾಕಿಕೊಳ್ಳೋ ಬಟ್ಟೆಗಳು. ಟೈಮಿದ್ರೆ (ಮನಸ್ಸಿದ್ರೆ) ಮಡಚಿ ಇದೊಂದು. ಇಲ್ಲಾ ಅಂದ್ರೆ ಅಲ್ಲೇ ಎಲ್ಲೋ ಮೂಲೆಯಲ್ಲಿ ತುರುಕಿ closet ಬಾಗಿಲು ಹಾಕಿದ್ರೆ ಕ್ಲೀನ್. ಕ್ಲೀನ್ ಅಪ್ ಮಾಡದೆ ಕೆಲಸವನ್ನು ಮುಂದೂಡುವುದರಿಂದ ಕಸ ಹೆಚ್ಚುತ್ತೆ ಅನ್ನೋದು ನನ್ನ ಅಭಿಮತ. ಈ ವಿಷಯದಲ್ಲಿ ಪ್ರಜಾಮತ ಏನು ಅಂತ ತಿಳಿದುಕೊಳ್ಳುವಾಸೆ.

ಒಟ್ಟಾರೆ, ಆಗಾಗ್ಗೆ ಆಗಿರೋ ಮೆಸ್ ಅನ್ನು ಆಗಾಗ್ಗೆ ಕ್ಲೀನ್ ಅಪ್ ಆಗಬೇಕು. ಒಂದು ಪುಟ್ಟ ಪ್ರಶ್ನೆ. ಹಾಸ್ಟೆಲ್ ಊಟದ ಕೋಣೆಯನ್ನು 'ಮೆಸ್' ಅಂತ ಯಾಕೆ ಕರೀತಾರೆ?

ಒಮ್ಮೆ ಕ್ಲೀನ್ ಅಪ್ ಮಾಡಿಟ್ಟು, ಕೆಲಸ ಮುಗೀತು ಅಂತ ಕೂರುವ ಹಾಗಿಲ್ಲ. ನೆಲದಲ್ಲಿ ಗಿಡ ನೆಟ್ಟುಬಿಟ್ಟರೆ ಮುಗಿಯಿತೇ ಕೆಲಸ? ಒಂದು ದಿನ ಓದಿ ಇಟ್ಟರೆ ಆಯ್ತೆ ಕಲಿಕೆ? ಒಮ್ಮೆ ಉಂಡು ಬಿಟ್ಟರೆ ಹೊಟ್ಟೆ ತಣ್ಣಗಿದ್ದೀತೆ? ಹೇಗೆ ಈ ಕೆಲಸಗಳು repetition/follow up ಬಯಸುತ್ತೋ ಹಾಗೆಯೇ clean up'ಗೆ ಕೂಡ. ಅದಕ್ಕೆ regular maintenance ಆಗಲೇಬೇಕು. cleanup ಅನ್ನೋದು ಒಂದು ತಪಸ್ಸಿದ್ದಂತೆ. ಶ್ರದ್ಧೆಯಿಂದ ಮಾಡಿದರೆ ಕಸಕ್ಕೆ ಮುಕ್ತಿ ಸಿಗುತ್ತೆ ಅನ್ನೋದು ನಾನು ಅಂಬೋಣ.

ಆಗಲೇ ಕ್ಲೀನಪ್ ಮಾಡೋಣ ಬನ್ನಿ ಅಂತ ಕರೆ ಕೊಟ್ಟೆ ಸರಿ, ಆದರೆ ಶುರು ಎಲ್ಲಿಂದ? ಬೆಳ್ಳಂದೂರು ಕೆರೆ ಎಂದರೆ ಅದು ಭಗೀರಥನ ಯತ್ನ ಎನ್ನಬಹುದು. ಬೇಡ ಬಿಡಿ.

ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟಾಗ, camping ಅಥವಾ ಟ್ರೆಕ್ಕಿಂಗ್ ಮಾಡುವಾಗ, ಬೀದಿಬದಿಯಲ್ಲಿ ತಿನ್ನುವಾಗ ಇತ್ಯಾದಿ ಸನ್ನಿವೇಶಗಳಲ್ಲಿ ಕಸ ಹಾಕೋದೇ ನಮ್ಮ ಹಕ್ಕು ಎಂಬುದನ್ನು ಮೊದಲು ಅಳಿಸಿಹಾಕಬೇಕು. ಬೀದಿಬದಿಯ ಕಸ ಬಳಿಯೋದಕ್ಕೆ ಕಾರ್ಪೋರೇಷನ್ ಕೆಲಸಗಾರರು ಇಲ್ವಾ? ಪ್ರೇಕ್ಷಣೀಯ ಸ್ಥಳ maintain ಮಾಡೋಕ್ಕೆ ಆ ಟ್ರಸ್ಟ್'ನವರು ಇಲ್ವಾ? ಎಂಬೆಲ್ಲಾ ಧೋರಣೆಯನ್ನು ಪಕ್ಕಕ್ಕೆ ಹಾಕಬೇಕು. 'ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ' ಅಂತ ಹಿರಿಯರು ಹೇಳಿರುವಂತೆ, ನಿಮ್ಮ ನಿಮ್ಮ ಕಸ ಕ್ಲೀನ್ ಮಾಡಿಕೊಳ್ಳಿ ಸಾಕು.

ದೇಶ ಆಮೇಲೆ ಕ್ಲೀನ್ ಮಾಡೋಣ, ಆದರೆ ಮೊದಲು ನಮ್ಮ ಮನೆ ಕ್ಲೀನ್ ಮಾಡೋಣ. ಮನೆಯ ಸುತ್ತಮುತ್ತ ಕ್ಲೀನ್ ಆಗಿ ಇಟ್ಟುಕೊಳ್ಳೋಣ. ಒಬ್ಬೊಬ್ಬರ ಮನೆಯೂ ಕ್ಲೀನ್ ಆಗಿದ್ದರೆ ದೇಶ ಕ್ಲೀನ್ ಆಗೋದು ಎಷ್ಟರಲ್ಲಿದೆ? ಹೇಳೋದು ಸುಲಭ ಅಲ್ಲವೇ?

ನಂತರ ಇಲೆಕ್ಟ್ರಾನಿಕ್ ಕಸ ಕ್ಲೀನ್ ಅಪ್ ವಿಷಯಕ್ಕೆ ಬರೋಣ. ಮೊದಲು ಮೊಬೈಲಿನಿಂದಲೇ ಶುರುಮಾಡೋಣ. ಮಕ್ಕಳು ನಿಮ್ಮ ಮೊಬೈಲನ್ನು ನೋಡಿದಾಗ ಅವರ ಕಣ್ಣಲ್ಲಿ ಕೀಳಾಗಬಹುದು ಅನ್ನಿಸಿದ್ದನ್ನು ಕ್ಲೀನ್ ಅಪ್ ಮಾಡೋಣ ಅರ್ಥಾತ್ ರಾಜಕೀಯ, ಸಿನಿಮಾರಂಗದ ಬೆಡಗಿಯರ ಚಿತ್ರ ಇತ್ಯಾದಿ ಇತ್ಯಾದಿ. ಅರ್ಥವಿಲ್ಲದ ಮೆಸೇಜ್'ಗಳು, ಭೀಕರ ಚಿತ್ರಗಳು, spam'ಗಳು, ಯಾರೋ ಕಳಿಸಿದ ಮತ್ತು ನಮಗೆ ಅರಿವಿಲ್ಲದ ವಿಷಯಗಳ ಮೆಸೇಜ್ ಅನ್ನು ಮತ್ತೊಬ್ಬರಿಗೆ ರವಾನಿಸುವುದನ್ನು ಕಡಿಮೆ ಮಾಡೋಣ ಅಥವಾ ನಿಲ್ಲಿಸೋಣ. ನಾನು ಮೊದಲು ಫಾರ್ವರ್ಡ್ ಮಾಡಬೇಕು ಎಂಬ ಧಾವಂತ ಅಥವಾ ಹುಂಬತನ ಬೇಡ.

ಏನೋ ಕಾರಣಕ್ಕೆ ಒಬ್ಬರ ಮೇಲೆ ಮುನಿಸು ಬರುವುದು ಮನುಷ್ಯ ಎಂದ ಮೇಲೆ ಸಹಜ. ನಮ್ಮ ಐದು ಬೆರಳುಗಳೇ ಸಮ ಇಲ್ಲ ಎಂದ ಮೇಲೆ ಇಬ್ಬರು ಸಮಾನ ಮನಸ್ಕರು ಇರಬೇಕು ಅಥವಾ ಭಿನ್ನಮತ ಇರದೇ ಒಮ್ಮತ ಇರಬೇಕು ಅನ್ನುವುದೆಲ್ಲಾ ಬಹುಶ: ಸ್ವರ್ಗಕ್ಕೆ ಹೋದ ಮೇಲೆ ಕಾಣಬಹುದೇನೋ. ಆದರೆ, ಭಿನ್ನಮತ ಮೂಡಿದೆ ಅಂದ ಕೂಡಲೇ ದ್ವೇಷ ಮಾಡಬೇಕು ಅಂತೇನಿಲ್ಲ. ಮನಸ್ಸಿನಿಂದ ಇಂಥಾ ವಿಚಾರ ಕ್ಲೀನಪ್ ಮಾಡಿಕೊಂಡು ಅವರೊಡನೆ ಸಹವಾಸ ಬೇಡ ಎಂದರೆ ದೂರ ಇದ್ದರೆ ಸಾಕು. ಸೇಡು, ದ್ವೇಷ ಇತ್ಯಾದಿ ಕಸಗಳನ್ನು ಹೀಗೂ ಕಡಿಮೆ ಮಾಡಬಹುದು.

ಮೊನ್ನೆ zee ಕನ್ನಡ ವಾಹಿನಿಯ ಒಂದು ಕಾರ್ಯಕ್ರಮದ ತುಣುಕು ಎಷ್ಟು ಮಜವಾಗಿದೆ ನೋಡಿ ಅಂತ ಯಾರೋ ವಿಡಿಯೋ ಕಳಿಸಿದರು. ಹಾಸ್ಯ ಅಂತ ಹೇಳಿದ್ರಲ್ಲಾ ಅಂತ ನೋಡಿದೆ. ಒಂದಷ್ಟು ಜನರನ್ನು 'ಬಿಟ್ಟ ಸ್ಥಳ ತುಂಬಿ' ಅನ್ನೋ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹಾಗೆ ಕೇಳುವಾಗ ಅವರು ಬಳಸುತ್ತಿದ್ದ 'Dash' ಪದ ಮಾತ್ರ ದ್ವಂದ್ವಾರ್ಥ ಬರೋ ಹಾಗಿತ್ತು. ಅದರಲ್ಲಿ ಒಂದು ಪ್ರಶ್ನೆ ಹೀಗಿತ್ತು "ನಿರೂಪಕಿ ಅನುಶ್ರೀ ಸ್ಟೇಜಿನ ಮೇಲೆ ಇದ್ದಾಗ ಅವರ 'Dash' ಕಾಣಿಸುತ್ತಿತ್ತು". . . ಕೂತಲ್ಲೇ ಬೀಳೋ ಹಾಗಾಯ್ತು. ಟಿವಿಯಲ್ಲಿ ಬರೋ ಕಾರ್ಯಕ್ರಮವೇ ಇದು? ಪ್ರಶ್ನೆ ಕೇಳಿದಾಕೆ ಆ ನಂತರ ಹೇಳಿದ್ದು "ಯಾಕ್ರೋ ನಗ್ತಾ ಇದ್ದೀರಾ? ಉತ್ತರ ಹೇಳಿ" ಅಂತ. ಉತ್ತರ "ಉತ್ಸಾಹ" ಅಂತೆ. ಒಟ್ಟಾರೆ "ನಿರೂಪಕಿ ಅನುಶ್ರೀ ಸ್ಟೇಜಿನ ಮೇಲೆ ಇದ್ದಾಗ ಅವರ 'ಉತ್ಸಾಹ' ಕಾಣಿಸುತ್ತಿತ್ತು". ಇಂಥಾ ಅನೇಕಾನೇಕ ಕಾರ್ಯಕ್ರಮಗಳು ಮೊದಲು ಕ್ಲೀನಪ್ ಆಗಬೇಕು.

ಊರು ಎಂದರೆ ಕೊಳೆಗೇರಿ ಇದ್ದೇ ಇರುತ್ತೆ ನಿಜ ಆದರೆ ಊರೇ ಕೊಳೆಗೇರಿಯಾದರೆ ಕಷ್ಟ. ಇದು ನಮ್ಮ ಕಸ ಅನ್ನೋ ಸ್ವಾರ್ಥ ಇರಲಿ, ಕ್ಲೀನಪ್ ಮಾಡಿ ಆ ನಂತರ ನಮ್ಮ ದೇಶ ಅನ್ನೋ ಹೆಮ್ಮೆಯ ಕೋಡು ತಾನೇ ಮೂಡುತ್ತೆ. ಅಭಿಪ್ರಾಯ ಪ್ಲೀಸ್!

English summary
How much dirt or garbage is there in your yard, at your home, in you mobile, in your mind etc? Have you ever thought of cleaning up all of them? If not, clean them up now, says Srinath Bhalle, who also believes in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X