• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಮಂಡಿಯೂರುವಿಕೆ ನಗಣ್ಯ ಅಲ್ಲ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇಂದಿನ ಬರಹ ಮಂಡಿಯ ಬಗ್ಗೆ. ಹಾಗಂತ ಮಂಡಿ ನೋವು, ಮಂಡಿ ಬ್ರೇಸ್, ಮಂಡಿ replacement ಗಳ ಬಗೆಗಿನ ಮಾತುಗಳ ಬಗ್ಗೆ ಹೇಳಲು ಬಂದಿಲ್ಲ. ಆದರೆ ಮಂಡಿ ಊರುವಿಕೆಯ ಬಗ್ಗೆ. ಬಹಳ ಹಿಂದೆ ಒಂದು ಕವನ ಬರೆದಿದ್ದೆ... ಅದನ್ನು ಬದಲಿಸಿದ ರೂಪ ಹೀಗಿದೆ:

ಹೆಣ್ಣ ಮುಂದೆ ಮಂಡಿಯೂರಿ ಕುಳಿತವರೆಲ್ಲಾ

- ಕಾಲ್ಬೆರಳಿಗೆ ಉಂಗುರು ತೊಡಿಸುವವರಲ್ಲಾ

- ನೋಯುವ ಪಾದವ ಒತ್ತುವವರಲ್ಲಾ

- ಪಾದಕೆ ಕಾಲುಚೀಲ ತೊಡಿಸುವವರಲ್ಲಾ

- ಬೆಳ್ಳಿಯ ಕಾಲ್ಗೆಜ್ಜೆ ತೊಡಿಸುವವರಲ್ಲಾ

- ಬೆರಳ ಉಗುರ ಕತ್ತರಿಸುವವರಲ್ಲಾ

- ಮದುವೆಯಾಗುವೆಯಾ ಎಂದು ಕೇಳುವವರಲ್ಲಾ

ಶ್ರೀನಾಥ್ ಭಲ್ಲೆ ಅಂಕಣ; ಮನಸ್ಸು, ಹೃದಯಕ್ಕೂ ಶೋಧಕ ಬೇಕು

ಥತ್ ಇನ್ನೇನ್ಲಾ???

"ತಲೆಯಾಗೆ ಹೇನೈತಾ ನೋಡಮ್ಮೀ" ಅಂತ ಕೇಳುವವರೂ ಆಗಿರಬಹುದು

ಮೇಲಿನ ನಾಲ್ಕು ಸಾಲುಗಳಲ್ಲಿ ಮಂಡಿಯೂರಿ ಮಾಡಬಹುದಾದ ಹಲವಾರು ಸನ್ನಿವೇಶಗಳನ್ನು ಚಿತ್ರಿಸಿದ್ದೇನೆ.

ಮದುವೆಯ ವಿಷಯದಲ್ಲಿ ನಮ್ಮಲ್ಲಿ ಮಂಡಿಯೂರುವ ಪದ್ಧತಿ ಇಲ್ಲ ಎಂದರೆ ಅದು ತಪ್ಪು. "will you marry me" ಎಂದು ಕೇಳುವ ಸಂಪ್ರದಾಯದಲ್ಲಿ ಗಂಡು ಹೆಣ್ಣಿನ ಮುಂದೆ 'ಬಲ/ಎಡ' ಮಂಡಿಯೂರಿ, ಕೈಯಲ್ಲಿ ಉಂಗುರ ಹೊತ್ತ ವೆಲ್ವೆಟ್ ಡಬ್ಬಿಯನ್ನು ಹಿಡಿದು/ ಉಂಗುರವನ್ನೇ ಹಿಡಿದು 'ನನ್ನನ್ನು ಮದುವೆಯಾಗುವೆಯ?' ಎಂದು ಕೇಳಬಹುದು. ನಮ್ಮಲ್ಲಿ, ಮದುವೆ ಆದ ನಂತರ ಕಾಲುಂಗುರು ತೊಡಿಸುವಾಗ ಮಂಡಿಯೂರಿ ಕೂರುತ್ತಾನೆ.

"ನಾವು" ಹೆಣ್ಣ ಮುಂದೆ ಮಂಡಿಯೂರುವುದೇ ಎಂಬ ಅಹಂ'ನ ಮಾತು ಹೊರಬರುವ ಮುಂಚೆ ಈ ಮಂಡಿಯೂರುವಿಕೆಯ ಬಗ್ಗೆ ಮತ್ತು ಯಾವ ಯಾವ ಸಂದರ್ಭದಲ್ಲಿ ಮಂಡಿ ಊರಬಹುದು ಅಂತ ನೋಡೋಣ.

ಶ್ರೀನಾಥ್ ಭಲ್ಲೆ ಅಂಕಣ; ಪರದೆ ಇಳಿದ ಮೇಲೂ ನೆನಪುಳಿಯುವ ಬದುಕು ನಮ್ಮದಾಗಲಿ

- ಶ್ರೀರಾಮನ ಪರಿವಾರದ ಚಿತ್ರಪಟ ಕಾಣುವಾಗ ರಾಮಬಂಟ ಹನುಮ 'ಮಂಡಿಯೂರಿ' ಕುಳಿರುತ್ತಾನೆ. ನಾನು ನಿನ್ನ ಅಡಿಯಾಳು/ ನಿನ್ನ ಬಂಟ ಎಂದು ಭಕ್ತಿಪೂರ್ವಕವಾಗಿ ಮಂಡಿಯೂರಿ ಕುಳಿತುಕೊಳ್ಳುವ ಭಂಗಿ.

- ಹಲವಾರು ಧರ್ಮಗಳಲ್ಲಿ ಮಂಡಿಯೂರಿ ದೈವಕ್ಕೆ ನಮಿಸುವುದು ಸರ್ವೇಸಾಮಾನ್ಯವಾದ ಅಂಶ. ನಿಂತವರು, ಸಾಷ್ಟಾಂಗ ನಮಿಸುವ ಮುನ್ನ ಮಂಡಿಯ ಬಳಕೆಯಂತೂ ಆಗಲೇಬೇಕು.

- ಮಹಾರಾಜ ಅಥವಾ ಮಹಾರಾಣಿಯ ಕೈಯಿಂದ ಬಹುಮಾನ ಪಡೆಯುವ ವ್ಯಕ್ತಿ ಮಂಡಿಯೂರಿ ಪಡೆಯುತ್ತಿದ್ದರು. ಇದೊಂದು ಗೌರವ ಸಂಕೇತ. ಉದ್ದೇಶ ಇಷ್ಟೇ, ಒಬ್ಬ ವ್ಯಕ್ತಿಯ ಮುಂದೆ ಆ ಮತ್ತೊಬ್ಬ ವ್ಯಕ್ತಿ ಮಂಡಿಯೂರಿ ಕುಳಿತಾಗ ಆತನ / ಆಕೆಯ ಎತ್ತರ ಕಡಿಮೆಯಾಗುತ್ತದೆ. ಆಗ, ಆ ಮೇಲು - ಕೀಳು ಎಂಬ ಸನ್ನಿವೇಶ ತಂತಾನೇ ಉಂಟಾಗುತ್ತದೆ.

ಹೀಗೆ ಹತ್ತು ಹಲವಾರು ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿ ಮಂಡಿಯೂರಬಹುದು.

ಮೇಲಿನ ಈ ಎಲ್ಲಾ ಸನ್ನಿವೇಶಗಳಲ್ಲಿ ಹೆಣ್ಣ ಮುಂದೆ ಮಂಡಿಯೂರುವ ವಿಷಯ ಬರಲೇ ಇಲ್ಲ. ಹಾಗಿದ್ದರೆ, ಮದುವೆಯಾಗುವೆಯಾ ಎಂದು ಕೇಳಲು ಮಂಡಿಯೂರಬೇಕಾದ ಮರ್ಮವೇನು? ಅದುವೇ "ನಿಷ್ಠೆ". ನಾನು ನಿನ್ನನ್ನು ಮದುವೆ ಮಾಡಿಕೊಂಡು 'ನಿಷ್ಠ'ನಾಗಿರುವೆ ಎಂಬುದರ ಆರಂಭದ ಸಂಕೇತ ಎನ್ನಬಹುದು. ಹೃದಯಪೂರ್ವಕವಾಗಿ, ಮನಃಪೂರ್ವಕವಾಗಿ ನನ್ನನ್ನು ನಿನಗೆ ಅರ್ಪಿಸಿಕೊಳ್ಳುತ್ತಿದ್ದೇನೆ ಎಂದೂ ಹೇಳಲಾಗುತ್ತದೆ. ಹೀಗೆ ಮಂಡಿಯೂರುವಾಗ ಅವನ ದೃಷ್ಟಿಯಲ್ಲಿ ಆಕೆ ಉಚ್ಚ ಸ್ಥಾನದಲ್ಲಿ ಇರುವಳೆಂದೂ ಸೂಚ್ಯಾರ್ಥವಿದೆ.

ಈ ಮಂಡಿಯೂರುವಿಕೆ ಎಂದರೆ ಆಂಗ್ಲದಲ್ಲಿ kneels down ಎನ್ನುತ್ತಾರೆ. ಈ ಜೋಡಿ ಪದ ಕೇಳಿದೊಡನೆ ಮನಸ್ಸು ಶಾಲಾದಿನಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ತಪ್ಪು ಮಾಡಿದಾಗ ಮಂಡಿಯೂರಿ ಕೂತು ಬಲಹಸ್ತದಿಂದ ಎಡಕಿವಿಯನ್ನು, ಎಡಹಸ್ತದಿಂದ ಬಲಗಿವಿಯನ್ನು ಪಿಡಿದುಕೊಂಡು ಶಿಕ್ಷೆ ಅನುಭವಿಸಿದ ನೆನಪು ಉಕ್ಕುಕ್ಕಿ ಬರುತ್ತದೆ. ಬರೀ ನೆನಪು ಬಂದ್ರೆ ಅಡ್ಡಿಯಿಲ್ಲ, ಈಗಲೂ ದುಃಖ ಉಕ್ಕಿ ಬರುತ್ತೆ. ತಪ್ಪು ಮಾಡಿದ್ದೆ ಅಂತಲ್ಲಾ, ನಮ್ಮ ಶಾಲೆಯ ಬ್ಯೂಟೀಕ್ವೀನ್ ಕಣ್ಣಲ್ಲಿ ನಮ್ಮ ವ್ಯಾಲ್ಯೂ ಇಳಿಯಿತಲ್ಲಾ ಅಂತ...

ಸೋತುಸುಣ್ಣವಾಗಿ ಹತಾಶ ಮನೋಭಾವದಿಂದ ಧೊಪ್ಪೆಂದು ಕುಸಿಯುವಾಗ ಮಂಡಿಗಳ ಮೇಲೆಯೇ ಕುಸಿಯೋದು. ಪುಟ್ಟ ಮಕ್ಕಳೊಡನೆ ಮಾತನಾಡುವಾಗ ಹಲವಾರು ಬಾರಿ ಮಂಡಿಯೂರುವಿಕೆಯೂ ಒಂದು ಸಾಮಾನ್ಯ ಭಂಗಿ. ತಿಲತರ್ಪಣ ನೀಡುವ ಕ್ರಿಯೆಯಲ್ಲೂ ಮಂಡಿಯೂರುವ ಭಂಗಿ ಇದೆ.

ಎಷ್ಟೋ ಸಾರಿ, ಬಹಳ ಹೊತ್ತು ಒಂದೆಡೆ ಕೂತವರು ಆ ನಂತರ ಎದ್ದು ನಡೆಯುವಾಗ ಚಿಪ್ಪಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಚಿಕ್ಕ ನೋವು ಇರಬಹುದು, ಕೆಲವು ಕುಸಿಯುವಂತೆ ಆಗಬಹುದು. ಕೆಲವೊಮ್ಮೆ ಮಂಡಿಗೆ ಕಲ್ಲುಬಂಡೆ ಕಟ್ಟಿಕೊಂಡಿದ್ದೇವೆಯೇ ಎಂಬ ಅನುಮಾನ ಬರುವಷ್ಟು ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ joints ಸೆಟೆದುಕೊಳ್ಳುವ ತೊಂದರೆಯಿಂದ ನೋವು ಕಾಣಿಸಿಕೊಳ್ಳಬಹುದು ಅಥವಾ ಧಡೂತಿ ದೇಹವೂ ಇದಕ್ಕೆ ಕಾರಣವಾಗಬಹುದು.

ಮಂಡಿಯೂರುವಿಕೆಯ ಹಿಂದೆ ಇಷ್ಟೆಲ್ಲಾ ಸೂಕ್ಷ್ಮ ನಗಣ್ಯ. ಏಕೆ ಗೊತ್ತೇ? ಜಾತಿ, ಮತ, ಧರ್ಮ, ದೇಶ, ಭಾಷೆಯ ಹೊರತಾಗಿ ಇಡೀ ಜಗದ ಜನ ಇಂದು ಕೊರೊನಾ ಎಂಬ ಕಣ್ಣಿಗೇ ಕಾಣದ ವೈರಾಣುವಿನ ಮುಂದೆ ಮಂಡಿಯೂರಿ ಕುಳಿತಿಲ್ಲವೇ?

ಅಮೇರಿಕಾದಲ್ಲಿ, ಕಳೆದ ಒಂದು ವಾರದಲ್ಲಿ ಕೊರೊನಾ ಸಮಸ್ಯೆಯನ್ನು ಹಿಂದಕ್ಕೆ ಹಾಕಿ ಮುಂಚೂಣಿಯಲ್ಲಿರುವ ಸುದ್ದಿ ಎಂದರೆ ಈ ಮಂಡಿಯೂರುವಿಕೆ. ಮಿನ್ನಿಸೋಟ ರಾಜ್ಯದ, ಮಿನ್ನಿಯಾಪೊಲಿಸ್ ನಗರದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ ಅಮೆರಿಕನ್ ಎಂಬಾತನ ಕುತ್ತಿಗೆ ಮೇಲೆ ತನ್ನ ಮಂಡಿಯನೂರಿ ಕುಳಿತಿದ್ದು ಒಬ್ಬ ಪೊಲೀಸ್ ಆಫೀಸರ್. ಎಂಟರಿಂದ ಒಂಬತ್ತು ನಿಮಿಷಗಳ ಕಾಲ ಈ ಭಂಗಿಯಲ್ಲಿರುವಾಗ, ಜಾರ್ಜ್ ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ಕೇಳಿಕೊಂಡರೂ, ಆಫೀಸರ್ ತನ್ನ ಭಂಗಿಯನ್ನು ಬದಲಿಸದೇ ಇದ್ದ ಕಾರಣ, ಜಾರ್ಜ್ ಉಸಿರುಗಟ್ಟಿ ಸ್ಥಳದಲ್ಲೇ ಮೃತನಾದ. ಇದಿಷ್ಟೂ ಸುದ್ದಿ ಮತ್ತು ಆರಂಭ ಮಾತ್ರ.

ಕಪ್ಪುವರ್ಣೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಕೂಗು ಅಲ್ಲಿ ಶುರುವಾಗಿದ್ದು, ಇಡೀ ದೇಶವನ್ನೇ ಹರಡಲು ಹೆಚ್ಚು ದಿನಗಳು ಬೇಕಿರಲಿಲ್ಲ. ದೌರ್ಜನ್ಯದ ವಿರುದ್ಧ ಕೂಗಾಡುವುದು, ನ್ಯಾಯ ಬೇಕೆಂದು ಧರಣಿ ಕೂರೋದು ಎಂದೆಲ್ಲಾ ಆಗಿದ್ದಲ್ಲಿ ಅದು ಬೇರೆ ವಿಷಯವೇ ಆಗುತ್ತಿತ್ತು. ತಮಗೆ ನ್ಯಾಯ ಬೇಕು ಎಂಬ ಕೂಗಿನ ಪ್ರತಿಭಟನೆ ಕೂಗುವವರ ನಡುವೆ, ಈ ಸಂದರ್ಭವನ್ನು ಬಳಸಿಕೊಳ್ಳುವ ಇರಾದೆಯಿಂದ ಕಿಡಿಗೇಡಿಗಳು, ಸನ್ನಿವೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡರು.

ಬೀದಿಬೀದಿಯಲ್ಲಿ ಘೋಷಣೆ ಕೂಗುವ ಹಾದಿಬದಿಯಲ್ಲಿನ ಅಂಗಡಿಗಳ ಮೇಲೆ ಕಲ್ಲುಬೀರೋದು, ಲೂಟಿ ಮಾಡುವುದೂ ಅವ್ಯಾಹತವಾಗಿ ನಡೆದಿದೆ. ಖೇದನೀಯ ವಿಷಯ ಎಂದರೆ, ಜಾರ್ಜ್ ಸತ್ತ ವಿಷಯವನ್ನು ಮತ್ತು ವಿಚಾರಣೆಯನ್ನು ಎತ್ತಿಹಿಡಿಯುವುದಕ್ಕಿಂತ ಗಲಭೆಗಳ ವಿಷಯವೇ ಹಿರಿದಾಗಿ ತೋರಿಸಿ ಎತ್ತಿಹಿಡಿಯಲಾಗಿದೆ.

ಹತ್ತು ಹಲವಾರು ರೀತಿಯ ಸಾಂಕೇತಿಕ ಸೂಚಕವಾದ ಈ ಮಂಡಿಯೂರುವಿಕೆ, ಶಾಂತಿಯುಕ್ತವಾದ ಪ್ರತಿಭಟನೆಗೂ ಸೂಚಕವಾದ ಈ ಮಂಡಿಯೂರುವಿಕೆ, ಎಂಟು - ಒಂಬತ್ತು ನಿಮಿಷಗಳ ಕಾಲದ ಒಂದು ಮಂಡಿಯೂರುವಿಕೆ ಇಡೀ ದೇಶವನ್ನೇ ದಳ್ಳುರಿಗೆ ತಳ್ಳಿದೆ ಎಂದರೆ ಈ ಮಂಡಿಯೂರುವಿಕೆ ನಗಣ್ಯ ಅಲ್ಲ ಎಂಬುದು ಸಾಬೀತಾಗುತ್ತದೆ.

English summary
We dont need to think kneel down infront of someone is bad or negative. Sometimes we use to kneel down for good purpose also
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X