• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮೆಲ್ಲರ ಜೀವನದ ಕಥಾಸರಮಾಲೆ 'ಸತ್ಯಮೇವ ಜಯತೆ'

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಸತ್ಯಮೇವ ಜಯತೆ ಎಂಬ ಪದಪುಂಜ ಅರಿಯದ ಭಾರತೀಯನಿಲ್ಲ. ಇಂದು ನಿನ್ನೆಯದಲ್ಲದ ಈ ಮಂತ್ರದ ಮೂಲ 'ಮುಂಡಕ ಉಪನಿಷದ್'. "ಸತ್ಯಮೇವ ಜಯತೆ ನಾನೃತಂ, ಸತ್ಯೇನ ಪಂಥಾ ವಿವತೋ ದೇವಾಯನಹ" ಎಂದು ಹೇಳಲಾಗಿದೆ ಅಲ್ಲಿ. ಸತ್ಯವೊಂದಕ್ಕೇ ಜಯ, ಮಿಕ್ಕೆಲ್ಲವೂ ಮಿಥ್ಯ ಅಥವಾ ಕ್ಷಣಿಕ.

1950ರಿಂದ ನಮ್ಮ ರಾಷ್ಟ್ರೀಯ ಗುರಿಯೂ 'ಸತ್ಯಮೇವ ಜಯತೇ' ಎಂಬುದೇ ಆಗಿದೆ. ಈ ದಿಶೆಯಲ್ಲಿ ಅಂದಿನಿಂದ ಇಂದಿನವರೆಗೆ ಎಷ್ಟು ಸಾಧಿಸಿದ್ದೇವೆ, ಆ ದಿಶೆಯಿಂದ ಎಷ್ಟು ದೂರ ಸಾಗಿದ್ದೇವೆ, ಆ ದಿಶೆಯನ್ನು ಮುಟ್ಟಲು ಎಷ್ಟು ಸಾಗಿ ಬಂದಿದ್ದೇವೆ ಎಂಬುದೆಲ್ಲಾ ಈ ಬರಹದ ಉದ್ದೇಶವಲ್ಲ. ಮತ್ತೆ?

ಅಂಕಣ: ನೀವು ಯಾವತ್ತಾದರೂ ಎಲ್ಲಿಯಾದರೂ ಕಳೆದುಹೋಗಿದ್ರಾ?

"ಸಾಧಿಸು ಫ್ಲಿಕ್ಸ್" ಅವರ ಸಾಧನೆಯ ಮತ್ತೊಂದು ಮಜಲು ಎನ್ನಬಹುದಾದ "ಸತ್ಯಮೇವ ಜಯತೆ" ಕಿರುಚಿತ್ರದ ಬಗ್ಗೆ ಸ್ಥೂಲಮಾತು. ಈ ಕಿರುಚಿತ್ರ ಕೇವಲ ಕಿರುಚಿತ್ರವಲ್ಲ ಬದಲಿಗೆ ನಮ್ಮ ನಿಮ್ಮೆಲ್ಲರ ಜೀವನದ ಕಥೆ ಎನ್ನುತ್ತಾರೆ ಈ ಕಥಾಸರಮಾಲೆಯ ರೂವಾರಿಗಳು. ಈ ನನ್ನ ಮಾತುಗಳ ಅರ್ಥವಾದರೂ ಏನು ಎಂದು ಸ್ವಲ್ಪ ನೋಡೋಣ.

ಮೊದಲಿಗೆ, ಸಾಮಾನ್ಯವಾಗಿ ಎಲ್ಲ ಕಿರುಚಿತ್ರಗಳಂತೆ ಒಂದೇ ಕಥೆಯನ್ನು ಹೊಂದಿಲ್ಲ 'ಸತ್ಯಮೇವ ಜಯತೆ'! ಇನ್ನೊಂದರ್ಥದಲ್ಲಿ ಹೇಳಬಹುದು ಎಂದರೆ, ಇದು ಕೇವಲ ಒಬ್ಬರ ಅಥವಾ ಒಬ್ಬರಿಗೆ ಸಂಬಂಧಪಟ್ಟ ಜೀವನದ ಕಥೆಯಲ್ಲಾ. ಇದು ನಾವೋ, ನೀವೋ ಅನುಭವಿಸಿರುವ ಅಥವಾ ಕಂಡಿರುವ, ಕೇಳಿರುವ, ಓದಿರುವ ಕಥೆಗಳ ಸರಣಿ. ಹಾಗಾಗಿ ಇದನ್ನು ಕಥಾಸರಮಾಲೆ ಎಂದೆ. ಈ ಎಲ್ಲ ಬವಣೆಗಳೂ ಒಬ್ಬರಿಗೇ ಬಾರದಿರಲಿ ಎಂದು ಯಾವುದೇ ಸಹೃದಯವು ಬೇಡಿಕೊಳ್ಳುವುದು ಸಹಜ.

ನವರಸಾಯನ: ಇಂಗ್ಲಿಷ್ ಅಂದಾಕ್ಷಣ ಶಾಪಗ್ರಸ್ತ ಕರ್ಣನ ನೆನಪು!

ಈ ಕಿರುಚಿತ್ರದ ಕೆಲವು ಕಥೆಗಳ ಚಿತ್ರೀಕರಣ ಅಮೆರಿಕಾದಲ್ಲಿ ನಡೆದಿದ್ದರೆ ಮತ್ತು ಕೆಲವು ಕರ್ನಾಟಕ ರಾಜ್ಯದಲ್ಲಿ ನಡೆದಿದೆ. ಸುದೀಪ್ ಮೋಗಣ್ಣಗೌಡರ ಕಥೆ, ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ದಿನನಿತ್ಯದ ಸಮಸ್ಯೆಗಳತ್ತ ಬೆಳಕು ಚೆಲ್ಲುವತ್ತ ಒಂದು ಯತ್ನ. ಅಂದ ಹಾಗೆ, 'ಸತ್ಯಮೇವ ಜಯತೆ'ಯಲ್ಲಿ ವ್ಯತ್ಯಾಸವಿರುವುದೇ ಇಲ್ಲಿ. ಇಲ್ಲಿ ಬರೀ ಸಮಸ್ಯೆಗಳನ್ನೇ ಎತ್ತಿ ಹಿಡಿದು ಎಲ್ಲರ ಕಣ್ಣಲ್ಲಿ ನೀರು ತರಿಸುವ ಉದ್ದೇಶವಿರದೇ, ಇಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣವೇನು ಎಂಬುದರ ಮೇಲೆ ಬೆಳಕೂ ಚೆಲ್ಲಿದೆ. ಬನ್ನಿ ಅಲ್ಲಿ ಏನಿದೆ ನೋಡಿ ಬರೋಣ.

ನಮ್ಮ ದೇಶದ ಬೆನ್ನೆಲುಬು ಎಂದರೆ ರೈತ. ಮಾತಾಪಿತೃಗಳು ಹೇಗೆ ಒಂದು ಕೂಸಿಗೆ ಜನ್ಮ ನೀಡಿ, ಬೆಳೆದು ನಿಂತು ಫಲ ನೀಡುವುದ ನೋಡಿ ಸಂತೋಷಿಸುತ್ತಾರೋ ಅದೇ ಪರಿಯೇ ಪ್ರತಿಯೊಬ್ಬ ರೈತನೂ ಅನುಭವಿಸೋ ಸುಖ. ಎಷ್ಟೋ ಬಾರಿ ಮಳೆಯನ್ನೇ ನಂಬಿರುವ ರೈತ, ಏನೆಲ್ಲಾ ಕಷ್ಟಪಟ್ಟು, ಸಾಲಸೋಲ ಮಾಡಿ ಹಣ ಹೊಂದಿಸಿ ಲೋಕಕ್ಕೆ ಅನ್ನ ನೀಡೋ ಬೆಳೆಯನ್ನು ಬೆಳದು ಅದು ಫಲನೀಡುವ ಕಾಲ ಬಂದಾಗ, ಮಗಳಿಗೆ ಸೂಕ್ತ ವರ ಸಿಗದೇ ಹೋಗುವ ಹೆಣ್ಣುಮಗಳ ಮಾತಾಪಿತೃಗಳು ಅನುಭವಿಸುವ ಬವಣೆಯನ್ನೇ ಈತನೂ ಅನುಭವಿಸುತ್ತಾನೆ. ನಿದ್ದೆಬಾರದ ರಾತ್ರಿಗಳು, ಫಲವನ್ನು ಒಬ್ಬರು ಕದ್ದೊಯ್ದು ಓಡದಂತೆ ಕಾವಲು ಕಾಯುವುದು... ಎಲ್ಲವೂ ಪ್ರತಿಕ್ಷಣದ ಸವಾಲು. ಹಾಗೆ ಬೆಳೆಸಿದ ಬೆಳೆಗೆ ಸೂಕ್ತ ಬೆಲೆ ಸಿಗದೇ ಹೋದಾಗ ಅವನು ಅನುಭವಿಸುವ ನೋವು ಎಣೆಯಿಲ್ಲದ್ದು. ವಿಧಿಯಿಲ್ಲದೇ ಆ ರೈತ ತೆಗೆದುಕೊಳ್ಳುವ ನಿರ್ಧಾರವನ್ನು ಕಿರುಚಿತ್ರವು ಎತ್ತಿಹಿಡಿದಿದೆ.

ಸವಿಯುವ ಗುರಿಯೊಂದಿಗೆ ಸಾಗಲಿ ಬದುಕಿನ ಓಟ!

ನಿರುದ್ಯೋಗ ಎಂಬ ಸಮಸ್ಯೆ ಎಲ್ಲ ದೇಶಗಳಲ್ಲಿದ್ದಂತೆ ನಮ್ಮ ದೇಶದಲ್ಲೂ ಇದೆ. ಉದ್ಯೋಗ ಖಾಲಿ ಇಲ್ಲದೇ ಹೋಗುವುದು ನಿಜವಾದ ಸಮಸ್ಯೆಯಾದರೂ, ಕೆಲಸವು ಖಾಲಿ ಇದ್ದು ಆ ಸ್ಥಾನಕ್ಕೆ ಯೋಗ್ಯರಾದ ಅಭ್ಯರ್ಥಿ ಇದ್ದೂ ಅವರನ್ನು ಆ ಜಾಗಕ್ಕೆ ಅರ್ಹತೆ ಆಧಾರದ ಮೇಲೆ ತೆಗೆದುಕೊಳ್ಳದೇ, ಅತಿರೇಕವಾದ ಹಣದ ಲಂಚ ಕೇಳುವುದು ಭ್ರಷ್ಟಾಚಾರದ ಒಂದು ಮುಖ. ಲಂಚ ಕೊಡುವವರು ಇರುವ ತನಕ ಲಂಚ ಕೇಳುವವರು ಇದ್ದೇ ಇರುತ್ತಾರೆ ಎಂದರೆ ಅದು ತಪ್ಪಲ್ಲ. ವಿದ್ಯಾರ್ಹತೆ ಇರುವ ಕೆಲವು ಅಭ್ಯರ್ಥಿಗಳು ಈ ಲಂಚಾವತಾರದ ಪೀಡೆಯಿಂದ ದೂರಾಗಲು ಹುಡುಕಿಕೊಂಡಿರುವ ದಾರಿಯಾದರೂ ಯಾವುದು? ಪ್ರತಿಭಾ ಪಲಾಯನ! ಆದರೆ ಎಲ್ಲರಿಗೂ ಪಲಾಯನ ಮಾಡಲಿಕ್ಕೆ ಹಣವಿದೆಯೇ? ಇಲ್ಲಾ ಎಂದ ಮೇಲೆ ದಿನನಿತ್ಯದಲ್ಲಿ ಕಣ್ಣೀರು ಹಾಕೋದಷ್ಟೇ ಅವರ ಪಾಡೇ?

ಸಾವಿಲ್ಲದ ಮನೆ ಹೇಗೆ ಇಲ್ಲವೋ ಅದೇ ರೀತಿ ಕಾಯಿಲೆಯಿಲ್ಲದ ಮನೆಯೂ ಇಲ್ಲ. ಕಾಯಿಲೆಯನ್ನು ವಾಸಿಮಾಡಲೋಗ್ಯರಿರುವುದು ಒಂದು ಆಸ್ಪತ್ರೆಯಲ್ಲಿರುವ ವೈದ್ಯರು. ಇಂಥಾ ಆಸ್ಪತ್ರೆಯು ರೋಗಿಗೆ ಸಕಾಲದಲ್ಲಿ ಸವಲತ್ತು ಒದಗಿಸಲು ಶಕ್ಯವಾಗಿರಬೇಕು. ಹೆಸರಿಗೆ ಆಸ್ಪತ್ರೆ ಅಂತ ಇದ್ದು, ಅದನ್ನು ಹೋಗಿ ಸೇರಿ ವೈದ್ಯರ ಸೇವೆ ತೆಗೆದುಕೊಳ್ಳುವುದೇ ದುಸ್ತರವಾದರೆ ಇನ್ನು ಒಬ್ಬ ರೋಗಿ ಬದುಕುವುದಾದರೂ ಹೇಗೆ? ಒಂದೆಡೆಯಿಂದ ಮತ್ತೊಂದು ಜಾಗ ಸೇರುವುದೇ ಈ ದಿನಗಳಲ್ಲಿ ಒಂದು ದೊಡ್ಡ ಸವಾಲಾಗಿದೆ. ಅಷ್ಟರಮಟ್ಟಿಗೆ ರಸ್ತೆಗಳು ಹಾಳಾಗಿವೆ. ಹಾಗೊಂದು ವೇಳೆ ಆಸ್ಪತ್ರೆಗೆ ಸೇರಿದ್ದೇ ಆದರೂ ಅಲ್ಲಿನ ಸವಲತ್ತು ಇರಬೇಕಲ್ಲಾ? ಆಸ್ಪತ್ರೆಗಳು ಮತ್ತು ಅದರ ಸೌಲಭ್ಯ ಪಡೆಯಲು ಸೇರಲು ಬಳಸುವ ರಸ್ತೆಗಳು ನಿಜಕ್ಕೂ ಒಂದು ರೋಗಿಯನ್ನು ಉಳಿಸಲು ಇದೆಯೇ? ಅಥವಾ...?

ಕುಡಿತದ ಕೆಡಕುಗಳು ಎನ್ನುವುದು ಇಂದು ಎಲ್ಲೆಡೆ ತಾಂಡವವಾಡುತ್ತಿದೆ. ಒಂದು ಕಾಲಕ್ಕೆ ಊರಾಚೆ ಇರುತ್ತಿದ್ದುದು ನಂತರ ಊರೊಳಗೆ ಬಂತು. ಇಂದು ಮನೆಯೊಳಗೇ ಬಂದಿವೆ. ದಿನವೆಲ್ಲಾ ಹೊರಗೆ ದುಡಿದು ತರೋ ನಾಲ್ಕುಕಾಸೂ ಹೆಂಡದಂಗಡಿಗೇ ಹೋಗಿ ಸೇರಿದರೆ ಆ ಹಣವನ್ನೇ ನಂಬಿರುವ ಸಂಸಾರದ ಗತಿಯೇನು? ಜೀವ ಉಳಿಸೋ ಸೌಲಭ್ಯಗಳು ದೊರೆಯುವಲ್ಲಿ ಕಷ್ಟಕರವಾಗಿರೋ ದಿನಗಳಲ್ಲಿ ಜೀವ ತೆಗೆಯೋ ಸಾಧನಗಳು ಬೀದಿ ಬೀದಿಯಲ್ಲಿ ಲಭ್ಯ ಎನ್ನುವುದು ನಗ್ನಸತ್ಯ.

ವಿದ್ಯೆ ಎಂಬುದು ಒಬ್ಬರ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ಅರಿವಿರುವಂತೆ ಅದನ್ನೇ ವ್ಯಾಪಾರವನ್ನಾಗಿಸುವವರಿಗೆ ಅರಿಯದೇ ಇದ್ದೀತೆ? ನಮ್ಮ ಶಾಲೆ ಜಗತ್ತಿನಲ್ಲೇ ಉತ್ತಮ, ಅಂಥಾ ಸೌಲಭ್ಯವಿದೆ ಇದೆ ಅಂತೆಲ್ಲಾ ದುಡ್ಡು ಕಸಿಯೋ ಶಾಲೆಗಳು ಬರೀ ಶೋಕಿಗಾಗಿ ನಿಂತಿವೆಯೇ ಹೊರತು, ಮತ್ತಿನ್ಯಾವ ಉತ್ಕೃಷ್ಟತೆಯನ್ನೂ ನೀಡುವಲ್ಲಿ ಸೋತಿವೆ. ಶಾಲೆಯ ಪ್ರತಿ ಹೆಜ್ಜೆಗೂ ಪೋಷಕರಿಂದ ಹೆಚ್ಚು ದುಡ್ಡು ಕಸಿಯೋ ಈ ವಿದ್ಯಾಸಂಸ್ಥೆಗಳು ದಿನನಿತ್ಯ ನಾಯಿಕೊಡೆಗಳಂತೆ ತಲೆ ಎತ್ತುತ್ತಲೇ ಇವೆ. ವಿದ್ಯಾವಂತರು ಎನಿಸಿಕೊಂಡಿರುವ ಮಾತಾಪಿತೃಗಳು ಹೆಚ್ಚು ದುಡ್ಡು ಕೊಟ್ಟಷ್ಟೂ ತಮ್ಮ ಮಕ್ಕಳು ಅತ್ಯುನ್ನತ ವಿದ್ಯಾವಂತರಾಗುತ್ತಾರೆ ಎಂಬ ಮೌಢ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಹಳ್ಳದ ಕಡೆಗೆ ನೀರು ಹರಿಯೋದು ಎಂಬುದು ಎಲ್ಲರಿಗೂ ಗೊತ್ತಿದೆ. ಸಿರಿವಂತರ ಸಿರಿ ಹೆಚ್ಚುತ್ತಲೇ ಇದೆ, ಬಡವರ ಬಡತನವೂ ಅದೇ ರೀತಿ ಅಧೋಗತಿಗೆ ಇಳಿಯುತ್ತಿದೆ. ಐಷಾರಾಮ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ. ನೂರುಕೋಟಿ ಖರ್ಚು ಮಾಡಲೂ ಹಿಂದುಮುಂದು ನೋಡದ ಜನ ಬಡವರಿಗೆ ಒಂದು ರೂಪಾಯಿ ನೀಡಲಾರದವರಾಗಿದ್ದಾರೆ. ಹಣ ಹೂಡಿಕೆಯ ಪ್ರಭುಗಳಾದ ಇವರಿಂದಲೇ ಯಾವುದೇ ಸರ್ಕಾರ ನಡೆಯುವುದು ಎಂಬುದು ಸರ್ವವೇದ್ಯ. ಇಂಥವರ ಮೋಜಿಗೆ ಹಣ ಎಲ್ಲಿಂದ ಬರುತ್ತದೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದೇ ಶ್ರೀಸಾಮಾನ್ಯನ ಕರ್ಮ. ಇವೆಲ್ಲಾ ಕೆಲವು ಸಮಸ್ಯೆಗಳಷ್ಟೇ!

ಆದರೆ ಸಮಸ್ಯೆಗಳಿಗೆ ಇವರಲ್ಲಿ ಕಾರಣರಾರು? ಯಾವ ಜವಾಬ್ದಾರಿ ಸೋಲುತ್ತಿದೆ? ಇದಕ್ಕೆಲ್ಲಾ ಉತ್ತರ ಈ ಕಿರುಚಿತ್ರದಲ್ಲಿದೆ. ಅದು ಏನು ಅಂತ ನಾನೇ ಹೇಳಿಬಿಟ್ಟರೆ ಹೇಗೆ? ನೀವೂ ಈ ಚಿತ್ರ ನೋಡಿ ಪ್ರತಿಕ್ರಿಯೆ ವ್ಯಕ್ತಪಡಿಸಿ. ಬಂಧುಮಿತ್ರರೊಡನೆ ಹಂಚಿಕೊಳ್ಳಿ. ಈ ಯಾನದಲ್ಲಿ ನನ್ನದೂ ಒಂದು ಅಳಿಲು ಸೇವೆ ಇದೆ ಎಂದು ಹೇಳಿಕೊಳ್ಳಲು ಸಂತಸವಾಗಿದೆ. ಚಿತ್ರ ನೋಡಿದಾಗ ನಿಮಗೂ ಅದು ಅರಿವಿಗೆ ಬರುತ್ತದೆ.

ಚಿತ್ರಕ್ಕಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'SATHYA MEVA JAYATHE' is a Kannada short film based on true incidences occurring (Socio economic issues) in common man's life. This is not just a short movie; but it is a very unique of its own kind as the film includes many talents from across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more