ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಬರೀ ಒಂದು ಕರೆಯ ದೂರವಷ್ಟೇ ಅಂದ್ರೆ Just a phone call away

By ಶ್ರೀನಾಥ್ ಭಲ್ಲೆ
|
Google Oneindia Kannada News

'ಒಂದು ಫೋನ್ ಮಾಡು ಸಾಕು, ಬರ್ತೀನಿ' ಅಥವಾ 'Just a phone call away' ಎಂಬ ಮಾತನ್ನು ನಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಕೇಳಿರ್ತೀವಿ. ಈ ಮಾತುಗಳಲ್ಲಿ ಹಲವಾರು ವೈವಿಧ್ಯತೆಯನ್ನೂ ಕಾಣಬಹುದು. ಕೆಲವೊಂದು ದಿನನಿತ್ಯದಲ್ಲಿನ ಹೊಟ್ಟೆಯ ಪಾಡು. ಮತ್ತೆ ಕೆಲವು, ಬೇರೆಯವರ ಹೊಟ್ಟೆ ಹೊಡೆದು ತಮ್ಮ ಹೊಟ್ಟೆ ಹೊರೆದುಕೊಳ್ಳುವ ವಿನೋದದ ಪಾಡು. ಬನ್ನಿ ಒಂದಷ್ಟು ವಿಚಾರಗಳನ್ನು ನೋಡೋಣ.

ಒಂದು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೀರಾ ಅಂದುಕೊಳ್ಳೋಣ. ಅಂದಿನಂತೆ ಇಂದಿನ ದಿನಗಳಲ್ಲೂ ಆ ಒಂದು ಫೋನ್ ಕರೆಗಾಗಿ ಕಾಯುವ ಕಾತುರತೆ ಇದ್ದೇ ಇದೆ. ಜೀವನದ ಮೊದಲ ಕೆಲಸವನ್ನು ದಕ್ಕಿಸಿಕೊಳ್ಳುವ ಆ ಸಂದರ್ಭ ಅಥವಾ ಕೆಲಸವಿಲ್ಲದೇ ಕೂತಿರುವ ಸಂದರ್ಭದಲ್ಲಿ ಆ ಒಂದು ಫೋನ್ ಕರೆಗಾಗಿ ಕಾಯುವ ಒತ್ತಡವನ್ನು ಹೇಳುವುದು ಕಷ್ಟ. ಆ ಫೋನ್ ಕರೆಯೂ ಬಂದಾಗ ಆಶಾಕಿರಣ ಮೂಡುತ್ತದೆ. ಸಂದರ್ಶನವೂ ಚೆನ್ನಾಗಿಯೇ ಆಯಿತು ಎಂದುಕೊಳ್ಳೋಣ. ಆ ನಂತರವೂ ಆ ಒಂದು ಫೋನ್ ಕರೆಗೆ ಕಾಯುವ ಕಾತುರತೆ ಇದ್ದೇ ಇರುತ್ತದೆ. ಇಂದಿನ ದಿನಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ಇ-ಮೇಲ್‌ಗೆ ಕಾಯುವುದು ಇರುತ್ತದೆ ಬಿಡಿ. ನನ್ನ ಮುಂದಿನ ಜೀವನ "ಬರೀ ಒಂದು ಕರೆಯ ದೂರವಷ್ಟೇ' ಎಂಬ ಆ ನಂಬಿಕೆ ನಿಜವಾದಾಗ ಎಂಥಾ ಸಂತಸ ಅಲ್ಲವೇ?

ಪ್ರೇಯಸಿಯೊಂದಿಗೆ ಮಾತನಾಡುವ ಪರಿಪಾಟಲು
ಬನ್ನಿ ಪ್ರೇಮಿಗಳ ಲೋಕಕ್ಕೆ ಹೋಗೋಣ. ಇಂದೇನೋ ಮೆಸೇಜ್ ಯುಗ ಸರಿ ಆದರೆ ಇಂಥಾ ಒಂದು ಫೋನ್ ಕರೆಗೆ ಕಾದಿದ್ದು ಉಂಟಲ್ಲವೇ? ಪ್ರಿಯಕರನು, ಆಕೆಯ ಮನೆಗೆ ಕರೆ ಮಾಡಿದ ಮೇಲೆ, ಆ ಮನೆಯವರ ಕಿವಿ ತಪ್ಪಿಸಿ ಪ್ರೇಯಸಿಯೊಂದಿಗೆ ಮಾತನಾಡುವ ಪರಿಪಾಟಲು ಒಂಥರಾ ಮಜಾ. ಸಾಮಾನ್ಯವಾಗಿ ಆಕೆಯ ತಂದೆಯ ಗಡುಸು ಧ್ವನಿಯೇ ಕೇಳುತ್ತಿದ್ದುದು ಅಂತಾದರೆ ಕಾಲ್ ಕಟ್. ಅಪ್ಪಿತಪ್ಪಿ ಅವರ ಕಿವಿಗೆ ಈ ಪ್ರಿಯಕರನ ದನಿ ಕೇಳಿದರೆ, ಇವನ ಕಾಲೇ ಕಟ್ ಆಗುವ ಸಂಭವ ಇತ್ತಲ್ಲ. ಕೆಲವೊಮ್ಮೆ ಬ್ಯಾಕ್ ಅಪ್ ಪ್ಲಾನ್ ಕೂಡಾ ಇರುತ್ತಿತ್ತು ಅನ್ನಿ. ಪ್ರೇಯಸಿಯ ಅಮ್ಮ ತೆಗೆದುಕೊಂಡರೆ ಈ ಕಡೆಯಿಂದ ಹೆಣ್ಣಿನ ದನಿ ಆಕೆಗೆ ಕೇಳುತ್ತಿತ್ತು. ಈ ಹೆಣ್ಣಿನ ದನಿಯು ಪ್ರಿಯಕರನ ತಂಗಿಯೋ ಅಥವಾ ಸ್ನೇಹಿತೆಯದ್ದೋ ಆಗಿರುತ್ತಿತ್ತು. ಹೆಚ್ಚಿನ ಸಮಯದಲ್ಲಿ ಆ ಹೆಣ್ಣು ಕಾಯುತ್ತಿದ್ದುದು ಆ ಒಂದು ಫೋನ್ ಕರೆಗೆ.

ಸಾಲ ತೊಗೊಳ್ಳಿ, ಕಾರ್ಡ್ ತೊಗೊಳ್ಳಿ ಅಂತ ಪೀಡಿಸುತ್ತಾರೆ
ಇಂದಿನ ದಿನಗಳಲ್ಲಿ ಬ್ಯಾಂಕ್‌ನವರಿಗೆ, ಕ್ರೆಡಿಟ್ ಕಾರ್ಡ್ ಕಂಪೆನಿಯವರುಗಳಿಗೆ ನಾವು ಒಂದು ಕರೆಯ ದೂರ ಅಷ್ಟೇ. ದಿನವೂ ಎಷ್ಟೋ ಮಂದಿ ಕರೆ ಮಾಡಿ, ಸಾಲ ತೊಗೊಳ್ಳಿ, ಕಾರ್ಡ್ ತೊಗೊಳ್ಳಿ ಅಂತ ಪೀಡಿಸುತ್ತಾ ಇರುತ್ತಾರೆ. ನಮಗೂ ಬೇಕಿತ್ತು, ಅವರೂ ಕೊಡಲು ತಯಾರು ಎಂದಾಗ ಮುಂದಿನ ಹಂತ ಆರಂಭ. ಇಂಥಾ ಸಂದರ್ಭದಲ್ಲೇ "ನಿಯಮಗಳು ಮತ್ತು ಷರತ್ತುಗಳು' ಓದಿ ಹೇಳಲೇಬೇಕಿರುವುದು ಅವರ ಕರ್ತವ್ಯ. ಕೆಲವೊಮ್ಮೆ ಇಮೇಲ್‌ನಲ್ಲಿ ಕಳುಹಿಸುತ್ತೇವೆ ಎಂದೂ ಹೇಳಬಹುದು. ಈ ಎರಡೂ ಸಂದರ್ಭದಲ್ಲಿ ಆಲಿಸುವ ಅಥವಾ ಓದುವ ವ್ಯವಧಾನವಿರುವುದಿಲ್ಲ. ಈ ಹಂತದಲ್ಲಿ ಎಚ್ಚರಿಕೆ ವಹಿಸದೇ ಹೋದರೆ, ಬಹುಶಃ ಜಾಲಕ್ಕೆ ಬಿದ್ದು, ಬಕರಾ ಆಗುವುದು, "ಬರೀ ಒಂದು ಕರೆಯ ದೂರವಷ್ಟೇ' ಅಂತಾಯ್ತು.

Srinath Bhalle Column: Just a Phone Call Away

ಇನ್ನು ಕೆಲವು ಸನ್ನಿವೇಶದಲ್ಲಿ, ಇವರು ನಿಮಗೆ ಸಾಲವೂ ಕೊಡುವವರಲ್ಲ ಅಥವಾ ಕಾರ್ಡ್ ಕೂಡಾ ಕೊಡುವವರಲ್ಲ. ಬದಲಿಗೆ ನಾವು ನಿಮ್ಮ ಹಿತೈಷಿಗಳು. ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಏನೋ ತೊಂದರೆಯಾಗಿದೆ ಅಥವಾ ನಿಮಗೆ ಹೊಸ ಡೆಬಿಟ್ ಕಾರ್ಡ್ ಕಳುಹಿಸಬೇಕಾಗಿದೆ ಅಂತೇನೋ ಕರೆ ಮಾಡುವ ಹಿತೈಷಿಗಳು. ಯಾರೋ ಅಮಾಯಕರು ಇವರ ಬಲೆಗೆ ಬಿದ್ದರೆ, ಅವರಿಂದಲೇ ಎಲ್ಲಾ ಮಾಹಿತಿ ಪಡೆದು, ಬ್ಯಾಂಕ್ ಅಕೌಂಟ್ ಅನ್ನು ಖಾಲಿ ಮಾಡಿ ರಂಗೋಲಿ ಇಟ್ಟು ಹೋಗುತ್ತಾರೆ. ಹಳ್ಳಕ್ಕೆ ಬೀಳುವ ಕುರಿಗಳು "ಬರೀ ಒಂದು ಕರೆಯ ದೂರವಷ್ಟೇ'.

ಒಮ್ಮೆ ಬಿದ್ದ ಮಿಕ ಮತ್ತೊಮ್ಮೆ ಬೀಳುವುದಿಲ್ಲ ಅಂತೇನೂ ಇಲ್ಲ
ಅಮೆರಿಕದಲ್ಲಿ ಇಂಥಾ ಜಾಲಗಳು ಸ್ವಲ್ಪ ಭಿನ್ನರೂಪದಲ್ಲಿ ಇತ್ತು. ಮೊದಲಿಗೆ ಒಂದು ಕರೆ ಬರುತ್ತದೆ. ಕರೆ ಸ್ವೀಕರಿಸಿದರೆ ಸಾಕು ಹಳ್ಳಕ್ಕೆ ಬಿದ್ದರು ಅಂತಲೇ ಅರ್ಥ. ಅವರು ಹೇಳೋದು "ನಾವು IRSನಿಂದ ಕರೆ ಮಾಡುತ್ತಿದ್ದೇವೆ. ನೀವು IRSಗೆ ವಂಚನೆ ಮಾಡಿದ್ದೀರಿ. ನಿಮ್ಮ ಬೆನ್ನ ಹಿಂದೆ ಪೊಲೀಸ್ ಬಿದ್ದಿದ್ದಾರೆ. ನಿಮ್ಮನ್ನು ನಾನು ಮಾತ್ರ ಕಾಪಾಡಬಲ್ಲೆ. ನೀವು ಫೋನ್ ಕಾಲ್ ಡಿಸ್‌ಕನೆಕ್ಟ್ ಮಾಡಿದರೆ ಮರುಕ್ಷಣ ನಿಮ್ಮನ್ನು ಹಿಡಿದು ಜೈಲಿಗೆ ಹಾಕುತ್ತಾರೆ" ಎಂದೆಲ್ಲಾ ಭೀತಿ ಹುಟ್ಟಿಸಿ, ಸ್ಥಳೀಯ ಏಟಿಎಂಗೆ ತೆರಳುವಂತೆ ಹೇಳಿ ಅಲ್ಲಿಂದ ದುಡ್ಡು transfer ಮಾಡಿಸಿ, ನಿಮ್ಮೆಲ್ಲಾ ತೊಂದರೆ ಸರಿಪಡಿಸಿದ್ದೇನೆ ಎಂದು ಹೇಳುತ್ತಾರೆ. ಆದರೆ ಒಮ್ಮೆ ಜಾಲಕ್ಕೆ ಬಿದ್ದ ಮೇಲೆ, ಮುಂದಿನ ಎರಡೇ ದಿನದಲ್ಲಿ ಅವರಿಂದ ನಿಮಗೆ ಮತ್ತೆ ಕರೆ ಬಂದರೆ ಅಚ್ಚರಿ ಪಡಬೇಡಿ. ಒಮ್ಮೆ ಬಿದ್ದ ಮಿಕ ಮತ್ತೊಮ್ಮೆ ಬೀಳುವುದಿಲ್ಲ ಅಂತೇನೂ ರೂಲ್ಸ್ ಇಲ್ಲಾ ತಾನೇ?

ಯಾವುದೋ ಒಂದು ವಸ್ತುವನ್ನು ಆನ್‌ಲೈನ್‌ನಲ್ಲಿ order ಮಾಡಿದ ಮೇಲೆ, ಅದು ಮನೆಗೂ ಬಂತು ಅಂದುಕೊಳ್ಳಿ. ಕೆಂಪು dress ಅಂತ ಆರ್ಡರ್ ಮಾಡಿರುತ್ತೀರಿ, ಆದರೆ ಮನೆಗೆ ಬಂದಿರೋದು ನೀಲಿ ಪ್ಯಾಂಟ್. ಎಲ್ಲಿಂದಾ ಎಲ್ಲಿಗೆ? ಆ ನಂತರ ಒಂದು ಫೋನ್ ಕರೆಯೇ ಮುಂದಿನ ವಿಷಯಗಳಿಗೆ ದಾರಿ. ಎಷ್ಟೋ ಸಾರಿ ಒಂದು ಫೋನ್ ಕರೆ ಮಾಡಿದ ಮೇಲೆ, ಅವರು ತಪ್ಪು ಆಗಿದೆ ಅನ್ನೋದು, ಅಥವಾ ವಾಪಸ್ ಕಳುಹಿಸಿ ಅನ್ನೋದು ಇತ್ಯಾದಿಗಳು ಆಗಬಹುದು, ಸಿಂಪಲ್ ಆದ ಸನ್ನಿವೇಶದಲ್ಲಿ ಸಮಸ್ಯೆಗೆ ಪರಿಹಾರ "ಬರೀ ಒಂದು ಕರೆಯ ದೂರವಷ್ಟೇ'.

ಆಸ್ತಿಪಾಸ್ತಿಯ ವಿಚಾರದ ಬಗ್ಗೆ ಗಲಭೆ
ಸಂಬಂಧಗಳಿಂದ ದೂರವಾಗುವ ಸನ್ನಿವೇಶಗಳ ಮೂಲ ಕಾರಣ ಒಂದಲ್ಲಾ ಎರಡಲ್ಲ. ಮದುವೆಯ ಮನೆಯಲ್ಲಿ ನಮ್ಮನ್ನು ಸರಿಯಾಗಿ ಆದರಿಸಲಿಲ್ಲ ಎಂಬ ಕಾರಣವೂ ಆಗಬಹುದು. ಆಸ್ತಿಪಾಸ್ತಿಯ ವಿಚಾರದ ಬಗ್ಗೆ ಗಲಭೆಗಳಂತೂ ಸರ್ವೇಸಾಮಾನ್ಯ. ಚಿಕ್ಕಪುಟ್ಟ ಕ್ಷುಲ್ಲಕ ಕಾರಣಗಳಿಂದ ಹಿಡಿದು ದೊಡ್ಡದೇ ಗಲಾಟೆಯವರೆಗೆ ಯಾವುದೂ ಮನಸ್ತಾಪವು ಯಾವುದೋ ಒಂದು ಕೆಟ್ಟ ಘಳಿಗೆಯಲ್ಲೀ ಆಗಿದೆ ಎಂಬ ಅರಿವು ಮೂಡಿದರೂ, ತಾನೇಕೆ ಮೊದಲು ಅವರಿಗೆ ಕರೆ ಮಾಡಿ ಮಾತನಾಡಿಸಬೇಕು ಎಂಬ ಬಿಗುಮಾನ ತಡೆಯಬಹುದು.

ಅವರಿಂದ ಒಂದು ಕರೆ ಬಂದರೂ ತಾನು ಹಿಂದಿನ ವಿಷಯವನ್ನೆಲ್ಲಾ ಮರೆತು ಬಿಡ್ತೀನಿ ಎಂಬ ಒಂದು ಘಳಿಗೆಗೂ ಕಾದಿರಬಹುದು. ಅವರಿಂದ ಕರೆ ಬರಲಿ ಅಂತ ಇವರು, ಇವರಿಂದ ಕರೆ ಬರಲಿ ಅಂತ ಅವರು ಕಾಯುವುದೇಕೆ? ಬಿಗುಮಾನ, ಸ್ವಾಭಿಮಾನಗಳು ಸಂಬಂಧಗಳಲ್ಲಿ ಕೊಂಚ ತಗ್ಗಿಸಿ ಅಭಿಮಾನ ಮೂಡಿಸಿಕೊಂಡಾಗ ಎಷ್ಟೋ ಸಮಸ್ಯೆಗಳು ಬಗೆ ಹರಿಯುತ್ತದೆ. ಸಂಬಂಧಗಳ ರಿಪೇರಿ ಅಥವಾ ಮರುಜೋಡಣೆಯೂ ಸಹ ಬರೀ ಒಂದು ಕರೆಯ ದೂರವಷ್ಟೇ ಅಲ್ಲವೇ? ಯಾವುದೋ ಒಂದು ಬಟ್ಟೆ ಸರಿಯಾಗಿ ದೊರೆಯಲಿಲ್ಲ ಅಂತ ಕರೆ ಮಾಡಿ ಪರಿಹಾರ ಕಂಡುಕೊಳ್ಳುವ ನಾವು, ಅಂಥದ್ದೇ ಕರೆ ಮಾಡಿ ಸಂಬಂಧಗಳನ್ನೇಕೆ ಕುದುರಿಸುವುದಿಲ್ಲ?

ನಿಮ್ಮ ಒಂದು ಕರೆಗಾಗಿ ಕಾದಿದ್ದರು
ಕೆಲವೊಮ್ಮೆ ಪರಿಸ್ಥಿತಿ ಕೊಂಚ ಹೆಚ್ಚು ಭಿನ್ನವಾಗುತ್ತದೆ. ಒಬ್ಬರು ಮತ್ತೊಬ್ಬರ ಆ ಒಂದು ಕರೆಗಾಗಿ ಕಾದೂ ಕಾದೂ ಅಸುನೀಗಿರುತ್ತಾರೆ ಅಂದುಕೊಳ್ಳಿ. ಆ ಮತ್ತೊಬ್ಬರು ಕೊನೆಯ ಬಾರಿಗೆ ಇವರನ್ನು ನೋಡಿ ಹೋಗುವಾ ಎಂದೂ ಬಂದಿರಬಹುದು. ಆಗ "ನಿಮ್ಮ ಒಂದು ಕರೆಗಾಗಿ ಕಾದಿದ್ದರು' ಎಂಬ ವಿಷಯವು ಯಾವುದೇ ರೀತಿಯೂ ತಿರುಗಬಹುದು. ಅರ್ಥಾತ್, ಮುಂದಿನ ಸಂಬಂಧಗಳು ಸರಿಯಾಗಬಹುದು ಅಥವಾ ದೂಷಣೆಗಳೂ ನಡೆಯಬಹುದು. ಜೀವನ ದೋಸೆಯಂತೆ ಇರಲಿ. ಎಷ್ಟೇ ತೂತುಗಳಿದ್ದರೂ, ಒಂದು ದೋಸೆಯಾಗಿ ಸವಿ ಇರಲಿ. ಸಂಬಂಧಗಳು ಕೆಡುವುದೂ, ಸರಿಪಡಿಸುವುದೂ ಬರೀ ಒಂದು ಕರೆಯ ದೂರವಷ್ಟೇ.

ಜೀವನದಲ್ಲಿ ನಾನಾ ಕಾರಣಗಳಿಗೆ ಬೇಸರವಾಗೋದು ಸಾಮಾನ್ಯ. ಕೆಲವೊಮ್ಮೆ ಈ ಬೇಸರಗಳ ಜೊತೆ ಒತ್ತಡವೂ ಸೇರಿ ಖಿನ್ನತೆಗೆ ಜಾರುತ್ತದೆ. ಇಂಥಾ ಸಮಯದಲ್ಲೇ ದುಡುಕು ನಿರ್ಧಾರಗಳಿಗೆ ಶರಣಾಗುವುದು ಸೋತ ಮನಗಳು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಲೋಚಿಸಬೇಕಾದುದು ಒಂದೇ. Helpline ಅಥವಾ ಮನವನ್ನು ಸಾಂತ್ವನಗೊಳಿಸಬಲ್ಲ ಮಂದಿ Just a phone call away.

ಕರೆ ಮಾಡಿ ಆರೋಗ್ಯ ವಿಚಾರಿಸುವುದೂ ಅಷ್ಟೇ ಮುಖ್ಯ
ಆಸ್ಪತ್ರೆಯ ಜೀವನದಲ್ಲಿ, ಎಲ್ಲವೂ ಜೀವನ್ಮರಣವೇ ಆಗಬೇಕಿಲ್ಲ. ಸ್ನೇಹಿತರು ಅಥವಾ ಬಂಧುವರ್ಗದವರಲ್ಲೇ ಯಾರೇ ಆಸ್ಪತ್ರೆ ವಾಸದಲ್ಲಿ ಇರುವಾಗ, ನಿಮಗೇನೇ ಬೇಕಿದ್ದರೂ ಒಂದು ಕರೆ ಮಾಡಿ ಅಂತ ವಾಗ್ದಾನ ಮಾಡಿದಾಗ, ಆ ಮತ್ತೊಂದು ಜೀವಕ್ಕೆ ಆನೆಬಲ ಬರುತ್ತದೆ. ಆದರೆ ಈ ವಾಗ್ದಾನ ಕೇವಲ ತುಟಿಯ ಮೇಲಿನ ಮಾತಾಗದಿರಲಿ ಅಷ್ಟೇ. ಆ ರೋಗಿಯ ಬೇಕುಬೇಡಗಳನ್ನು ನೋಡಿಕೊಳ್ಳುವ ವಿಷಯದಲ್ಲಿ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದರೂ ಸಾಕು, ಆ ಸಮೀಪದವರಿಗೆ ಒಂದು ಬ್ರೇಕ್ ಸಿಗುತ್ತದೆ. ಆ ಒಂದು ಕರೆ ಅವರುಗಳು ಮಾಡಿದಾಗ ಸ್ವೀಕರಿಸುವುದು ಎಷ್ಟು ಮುಖ್ಯವೋ, ನೀವಾಗಿಯೇ ಕರೆ ಮಾಡಿ ಆರೋಗ್ಯ ವಿಚಾರಿಸುವುದೂ ಅಷ್ಟೇ ಮುಖ್ಯವಾಗುತ್ತದೆ.

ಎಷ್ಟೋ ಸಾರಿ ಜೀವನದಲ್ಲಿನ ವಿಷಯಗಳು ಒಂದು ಕರೆಯ ದೂರ ಅಷ್ಟೇ. ಹಾಗಂತ, ಪ್ರತೀ ದಿನ ಗುಡ್ ಮಾರ್ನಿಂಗ್, ಗುಡ್ ನೈಟ್, ಊಟ ಆಯ್ತಾ, ತಿಂಡಿ ಆಯ್ತಾ ಅಂತ ಕೇಳುತ್ತಾ ಇರುವುದೂ ಅತೀವೃಷ್ಟಿ. ಯಾವಾಗಲಾದರೂ ಒಮ್ಮೆ ಕಾರಣ ಇಲ್ಲದೆಯೂ ಸುಮ್ಮನೆ ಕರೆ ಮಾಡಿ Hello ಹೇಳಿದರೂ ಅಡ್ಡಿಯಿಲ್ಲ. ಆದರೆ ಎರಡು ವಿಷಯಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದುದು ಮುಖ್ಯ. ಒಂದು, ಮತ್ತೊಬ್ಬರೇ ಕರೆ ಮಾಡಲಿ ಅಂತ ಕಾಯದಿರಿ. ಎರಡು, ಒಬ್ಬರು ಕರೆ ಮಾಡಲಿಲ್ಲ ಎಂದರೆ ನಿಮ್ಮ ಬಗ್ಗೆ ಅವರಿಗೆ ಕಾಳಜಿ ಇಲ್ಲಾ ಅಂತೇನಲ್ಲ. ಏನಂತೀರಿ?

English summary
Srinath Bhalle Column; Even today, there is a waiting for that one phone call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X