• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಒಂದು ಮೊಟ್ಟೆಯ ಕಥೆಯಲ್ಲ, ಹಲವು ಕೂದಲ ಕಥೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇದು ಕೇವಲ ಒಂದು ಕೂದಲ ಕಥೆ ಅಲ್ಲ. ಹತ್ತು ಹಲವು ಕೂದಲ ಕಥೆ. ಅರ್ಥವಾಗಲಿಲ್ಲ ಅಂದ್ರೆ, ಈಗ 'ಒಂದು ಮುತ್ತಿನ ಕಥೆ', 'ಒಂದು ಮೊಟ್ಟೆಯ ಕಥೆ' ಅಂತ ಅನ್ನೋ ರೀತಿ 'ಒಂದು ಕೂದಲ ಕಥೆ' ಅಲ್ಲ, ಈಗ ಹೇಳೋ ಹಲವಾರು ವಿಷಯಗಳು.

ಹಲವಾರು ವರ್ಷಗಳ ಹಿಂದಿನ ಕಥೆ. ಚಿಕ್ಕ ವಯಸ್ಸಿನ ನನ್ನ ಸ್ನೇಹಿತ ತನ್ನ ಮೊಟ್ಟೆ ತಲೆಯನ್ನು ಮುಚ್ಚಿಕೊಳ್ಳುವ ಇರಾದೆಯಿಂದ ವಿಗ್ ಧರಿಸಿದ. ಭಾರತಕ್ಕೆ ವಿಸಿಟ್ ಮಾಡೋ ಮುಂಚೆ ಇದ್ದ ಖಾಲಿ ಸೈಟ್, ಹಿಂದಿರುಗಿ ಬಂದ ಕೂಡಲೇ different ಆಗಿ ಕಾಣತೊಡಗಿದ ಅವನಲ್ಲಿ, ಏನು ಬದಲಾವಣೆ ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ ಬಿಡಿ. ಹೇಗೆ ಕೇಳೋದು ಅಂತ ನಾವು ಸುಮ್ಮನಿದ್ದರೆ, ನನ್ನ ಪಂಜಾಬಿ ಸ್ನೇಹಿತ ಕೇಳಿಯೇಬಿಟ್ಟ "hurricane season ಬರ್ತಿದೆ. ನೀನು ಹೊರಗೆ ಇದ್ದಾಗ ಗಾಳಿ ಬೀಸಿ ವಿಗ್ ಹಾರಿಹೋದ್ರೆ ಏನ್ ಮಾಡ್ತೀಯಾ?" ವಿಗ್'ಧಾರಿಗೆ ಕೋಪ ಬಂದಿದ್ದು ನಿಜ. ಈ extra fitting ಹಿಂಸೆಯಾಯಿತೋ ಏನೋ ಮುಂದಿನ ಎರಡು ವರ್ಷಗಳಲ್ಲಿ ಕಿತ್ತೊಗೆದ.

ನಿಮಗೆ ಸುಳ್ಳು ಹೇಳೋಕ್ಕೆ ಬರುತ್ತಾ? ಸುಳ್ಳು ಹೇಳಬೇಡಿ!

ಈ ವಿಷಯದಲ್ಲಿ ಸಿನಿಮಾ ನಟರನ್ನು ಮೆಚ್ಚದೆ ಇರಲು ಸಾಧ್ಯವಿಲ್ಲ. ಈ ಜಂಜಾಟ ಬೇಡ ಎಂದೇ ಅಮರೀಶ್ ಪುರಿ, ಅನುಪಮ್ ಖೇರ್, ವಿನ್ ಡೀಸಲ್ ಮುಂತಾದವರು ಒಂದು ಹಂತ ದಾಟಿದ ಮೇಲೆ ಸಂಪೂರ್ಣ clean shave ಆಗಿದ್ದು ಅನ್ನಿಸುತ್ತೆ. Less ಕೂದಲು to ಕೂದಲು less.

ಹೆಲ್ಮೆಟ್ ಧರಿಸೋದ್ರಿಂದ ಕೂದಲು ಉದುರುತ್ತೆ ಅಂತಲೇ ತಲೆಗೆ ಹಾಕೋ ಹೆಲ್ಮೆಟ್ ಅನ್ನು ಕೈಗೆ ಹಾಕಿಕೊಳ್ಳೋ ಮಂದಿ ಇದ್ದಾರೆ. ನೀವೂ ನೋಡಿದ್ದೀರಾ. ಆದರೆ ಹೊರಗಿನ ಧೂಳು, ಬಿಸಿಲು, ಗಾಳಿಗೆ ಎಣ್ಣೆಯ ಪೋಷಣೆಯೂ ಇಲ್ಲದೆ ಕೂದಲು ಹಾಗೆ ಬಿಟ್ಟರೆ ಇನ್ನೂ ಬೇಗ ಸಾಯುತ್ತೆ ಅಂತ ಇವರಿಗೆ ಅರ್ಥವಾಗೋಲ್ಲ ಬಿಡಿ.

ಹೆಂಗಳು ಕೂದಲು ಕತ್ತರಿಸುವುದು ಅಪಶುಕನ, ಮಂಗಳವಾರ ಗಂಡಸರು ತಲೆಕೂದಲಿಗೆ ಕತ್ತರಿ ಹಾಕಬಾರದು, ಅಂದಿನ ಕಾಲದಲ್ಲಿ ವಿಧವಾ ಪದ್ಧತಿ ಅನುಸರಿಸುತ್ತಿದ್ದವರ ಒಂದು ಪೈಕಿ ಸೌಂದರ್ಯ ಸಾಧನವಾದ ಕೂದಲನ್ನು ಬೋಳಿಸಿಕೊಳ್ಳುವಂಥದ್ದು, ಇದನ್ನೆಲ್ಲಾ ಕೇಳಿ / ನೋಡಿ ಬೆಳೆದಿದ್ದೇವೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಈ ಕೂದಲು ಎಂಬೋದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. 'ಫಣಿಯಮ್ಮ' ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ?

ನವರಸಾಯನ : ಕಣ್ಣು ಮುಚ್ಚಿ ಕಣ್ಣು ತೆರೆಯೋಷ್ಟರಲ್ಲಿ...

ಕೂದಲು ಸೌಂದರ್ಯ ಸಾಧನ ಎಂದು ಹೇಳಿದೆ. "ಕಪ್ಪುಗುರುಳನು ಬೆನ್ನ ಮೇಲೆಲ್ಲಾ ಹರಡಿದರೆ" ಎಂಬ 'ಕೆ ಎಸ್ ನ' ಕವಿ ವಾಣಿ ಕೇಳಿಯೇ ಇರುತ್ತೀರಾ. ಅದರಂತೆಯೇ "ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ" ಎಂಬಲ್ಲಿ ಕೂದಲಿನ ಪಾತ್ರವಿದೆ.

ನೀಳ ಕೂದಲಿಗೆ ಎಣ್ಣೆ ಹಚ್ಚಿಕೊಂಡು ನೆಂದು, ಸೀಗೆಕಾಯಿಯ ಪುಡಿ ಉಜ್ಜಿ ತಲೆ ಸ್ನಾನ ಮಾಡಿ, ಕೆನ್ನೆಯ ಎರಡು ಬದಿಯಲ್ಲಿ ಅರಿಶಿನವನ್ನು ಲೇಪಿಸಿ, ಹಣೆಗೆ ಕುಂಕುಮ ಇಟ್ಟು, ನೀರಜಡೆ ಹಾಕಿಕೊಂಡು ತುಳಸಿ ಪೂಜೆ ಮಾಡೋ ಹೆಣ್ಣನ್ನು ಕಂಡಾಗ ನಿಂತ ನಿಲುವಲ್ಲೇ ಕವನ ಬರುತ್ತದೆ. ಏನಂತೀರಾ?

ಮಹಾಭಾರತದಲ್ಲಿನ ಕೂದಲಿನ ಪಾತ್ರ ಇದೆ ಅನ್ನೋದಕ್ಕಿಂತಾ ಮಹಾಭಾರತ ನಡೆದದ್ದೇ ಈ ಕೂದಲಿನಿಂದ ಎನ್ನೋದು ಒಳಿತೇನೋ. ಜಡೆಯನ್ನು ಕಟ್ಟದೆ ಇದ್ದ ದ್ರೌಪದಿಯನ್ನು ಮುಡಿ ಹಿಡಿದು ದರದರನೆ ಎಳೆದು ತಂದ ಆ ದುರುಳ ದುಶ್ಶಾಸನ. ನಂತರ ವಸ್ತ್ರಾಪಹರಣ, ಶಪಥಗಳು ಇತ್ಯಾದಿ, ದಾಯಾದಿಗಳ ನಡುವೆ ಯುದ್ಧವನ್ನೇ ನಡೆಸಿತ್ತು. ಬಿಚ್ಚಿದ ಮುಡಿಯಿಂದ ಕಟ್ಟುವ ಮುಡಿಯವರೆಗೂ ನಡೆದ ಘಟನೆಗಳು ಹಲವಾರು. ಉರುಳಿದ ತಲೆಗಳು ಸಾವಿರಾರು. ಬರೀ ತಲೆಗಳೇ ಅಲ್ಲಾ, ತಲೆಮಾರುಗಳೇ ಉರುಳಿದವು. ಹೆಣ್ಣಿನ ಮುಡಿ ಭಾಳಾ ಸ್ಟ್ರಾಂಗು!

ಯಾವುದೋ ತಲೆಗೆ ಹಚ್ಚುವ ಎಣ್ಣೆಯ ಜಾಹೀರಾತಿನಲ್ಲಿ, ಸ್ಟ್ರಾಂಗ್ ಜಡೆ ಮಣ್ಣಲ್ಲಿ ಹೂತ ಜೀಪ್ ಅನ್ನು ಹೊರಗೆ ಎಳೆಯುತ್ತದೆ.

ಮುಡಿಗಿಂತ ಶಕ್ತಿಯುತವಾದದ್ದು ಬಾಚಣಿಗೆ ಇರಬೇಕು ಅನ್ನಿಸುತ್ತೆ. ತಲೆ ಬಾಚಿದರೆ ಕೂದಲು ಉದುರುತ್ತೆ! ನನ್ನ ಸ್ನೇಹಿತನೊಬ್ಬ ಪಕ್ಕಾ ಖಲ್ವಾಟ (ಬಾಲ್ಡಿ). ಒಮ್ಮೆ ಅವನ ಮನೆಗೆ ಹೋಗಿದ್ದಾಗ ಆತನ ಮದುವೆ ಸಮಯದಲ್ಲಿ ತೆಗೆದ ಚಿತ್ರ ನೋಡಿದೆ. ಒಹೋ! ತಲೆತುಂಬ ಗುಂಗುರು ಕೂದಲು. ಬಾಯಿ ತಪ್ಪಿ 'ಇದು ನೀನೇನಾ' ಅಂದುಬಿಟ್ಟೆ. ಅದಕ್ಕವನು 'ಅಮೇರಿಕಾದ್ದು hard water', ಹಾಗಾಗಿ ಕೂದಲು ಉದುರಿದೆ' ಅಂದ. soft water'ಗೆ ಕೂದಲು ಉದುರೋಲ್ಲ ಅಂತ ಅವನರ್ಥವೋ ಏನೋ ನನಗೆ ಅರ್ಥವಾಗಲಿಲ್ಲ.

ಹೆಣ್ಣುಗಳು ಇರೋ ಮನೆಯಲ್ಲಿ ಕಾಲು ಕಾಲಿಗೆ ಕೂದಲು ಸಿಗೋದು ಸಾಮಾನ್ಯ. ನನ್ನ ಪಾದಗಳು ಕೂದಲು sensitive. ನಮ್ಮ ಮನೆಯಲ್ಲಿ ಉದ್ದ ಕೂದಲ ತಲೆ ಒಂದೇ ಇರೋದ್ರಿಂದ ಸ್ವಲ್ಪ ಈ ಗಲಾಟೆ ಕಮ್ಮಿ. ಆದರೂ ಅಲ್ಲಿ ಇಲ್ಲಿ ಕಂಡು ಬರೋ ಕೂದಲು ಬಲೇ ಇರುಸುಮುರುಸು ತರುತ್ತದೆ. ಎಂಥಾ ಹಿಂಸೆ ಎಂದರೆ ಒಮ್ಮೆ ಹೀಗೆ ಆಯ್ತು...

ಸಂಗೀತ ಕ್ಲಾಸ್'ನಲ್ಲಿ ಎದುರಿಗೆ ಗುರುಗಳು ತಾಳದ ಮಹತ್ವದ ಬಗ್ಗೆ ಹೇಳಿಕೊಡುತ್ತಿದ್ದರು. ಆ ಹಿಂದಿನ ಕ್ಲಾಸಿನಲ್ಲಿ ಹೆಣ್ಣೋ / ಹೆಣ್ಣುಮಕ್ಕಳೋ ಬಂದಿದ್ದರು ಎನಿಸುತ್ತದೆ. ಕಾರ್ಪೆಟ್ ಮೇಲೆ ಒಂದೆರಡು ಉದ್ದನೆಯ ಕೂದಲು ಕೂತಿತ್ತು. ನನ್ನ ಗಮನ ಆ ಕೂದಲ ಮೇಲೆ. ಮೊದಲು ಅದನ್ನು ತೆಗೆದುಕೊಂಡು ನನ್ನ ಕಣ್ಣಿಗೆ ಬೀಳದೆಡೆ ಹಾಕಬೇಕು ಅನ್ನೋ ಮನಸ್ಸು ಆದರೆ ಕ್ಲಾಸ್ ನಡೀತಿದೆ. ಎದುರಿಗೆ ನೋಡಲು ಕತ್ತೆತ್ತಿದರೂ ಒಂದೆರಡು ಕ್ಷಣಗಳಲ್ಲಿ ಮತ್ತೆ ಆ ಕೂದಲ ಕಡೆ ಗಮನ. ಹಿಂಸಾತ್ಮಕ ಸನ್ನಿವೇಶ!

ಮಕ್ಕಳಿಗೆ ಮುಂಡನ / ಜಾವಳ ಮಾಡಿಸುವ ಪದ್ಧತಿ ಬಹಳಷ್ಟು ಸಂಪ್ರದಾಯಗಳಲ್ಲಿ ಇದೆ. ಅರ್ಥಾತ್ ಮೊದಲ ಮುಡಿಯನ್ನು ಸಂಪೂರ್ಣ ತೆಗೆದುಬಿಡುವ ಪದ್ಧತಿ. ಕೆಲವರು ಗಂಡು ಮಕ್ಕಳಿಗೆ ಮಾತ್ರ ಕೂದಲು ತೆಗೆಯುತ್ತಾರೆ. ಹಲವರು ಹೆಣ್ಣು ಮಕ್ಕಳಿಗೂ ಮುಂಡನ ಮಾಡಿಸುತ್ತಾರೆ. ಮೊದಲೇ ಚಿಕ್ಕ ಮಕ್ಕಳು, ಕೂದಲನ್ನು ಕೆರೆದು ತೆಗೆಯುವಾಗ ಆ ಕತ್ತಿಯಿಂದ ಅಲ್ಲಲ್ಲೇ ಪೆಟ್ಟಾದಾಗ ರಕ್ತ ಬರೋದು, ಅವರು ಅಳೋದು ಇತ್ಯಾದಿ ನೋಡುವಾಗ ಮಕ್ಕಳಿಗೆ ಇಷ್ಟೆಲ್ಲಾ ಯಾಕೆ ಹಿಂಸೆ ಮಾಡ್ತೀವಿ ಅನ್ನಿಸುತ್ತೆ. First Haircut ಅನ್ನು ಅಮೆರಿಕದಲ್ಲೂ ನೋಡಿದ್ದೇನೆ. ಕೆಲವು ಬಾರಿ ಮಕ್ಕಳು ಎಂಜಾಯ್ ಮಾಡುತ್ತಾರೆ ಹಲವು ಬಾರಿ ಭಯಂಕರ ಅಳು. saloon'ನಲ್ಲೇ ಇಟ್ಟಿರುವ ಲಾಲಿಪಾಪ್'ಗಳು ಆ ಸಮಯದಲ್ಲಿ ಸಹಾಯಕ್ಕೆ ಬರುತ್ತೆ.

ಬಿಳಿಗೂದಲನ್ನು ಕಪ್ಪಗೆ ಮಾಡಿಕೊಳ್ಳೋದು ಬಹಳಾ ಹಿಂದಿನಿಂದ ನಡೆದುಬಂದಿದೆ. ಆದರೆ ಅದರಲ್ಲೂ ಹತ್ತು ಹಲವು ಶೇಡ್'ಗಳಿವೆ ಅಂತ ಅರಿವಾಗಿದ್ದೇ ಇಲ್ಲಿನ ಅಂಗಡಿಗಳಲ್ಲಿನ ಸಾಲುಸಾಲಾಗಿ ಜೋಡಿಸಿಟ್ಟಿರುವ ಹಲವಾರು ಕಂಪನಿಗಳ color ಡಬ್ಬಗಳನ್ನು ಕಂಡಾಗ. ಹೋಳಿ ಹಬ್ಬದ ಸಂದರ್ಭದಲ್ಲಿ ಏನೆಲ್ಲಾ ಬಣ್ಣಗಳಾಗೋ ತಲೆಗೂದಲನ್ನು ಕಂಡಿದ್ದೆ ಆದರೆ ಅವೂ ಫ್ಯಾಷನ್ ಅಂತ ಈಗ ಹಲವು ವರ್ಷಗಳಿಂದ ಅರಿವಾಗಿದೆ.

ಸಿಖ್ ಪಂಥದಲ್ಲಿ ಗಂಡು - ಹೆಣ್ಣು ಮೊದಲುಗೊಂಡು ಯಾರೂ ಕೂದಲಿಗೆ ಕತ್ತರಿ ಹಾಕೋಲ್ಲ. ನನ್ನ ಟೀಮಿನಲ್ಲಿ ಒಬ್ಬ ಸಿಖ್ ಇದ್ದ. ಆದರೆ ಆತ clean shaven. ಇವನಂತೆ ಹಲವಾರು ಸಿಖ್ ಮಂದಿ ಪ್ರಾಣರಕ್ಷಣೆಗೆ ಎಂದೇ 9/11 ನಂತರ ಈ ರೀತಿ ಮಾಡಿಕೊಂಡಿದ್ದರು. ಸಿಖ್'ರನ್ನು ಲಾಡೆನ್ ನೆಲದವರು ಅಂತ ಅಂದುಕೊಂಡು ಎಷ್ಟೋ ಜನರ ಜೀವ ತೆಗೆದಿದ್ದರು ಆಕ್ರೋಶಗೊಂಡ ಜನ. ಪ್ರಾಣ ರಕ್ಷಣೆ ಮಾಡಿಕೊಳ್ಳಲು ಆತ ಟರ್ಬನ್ ತೆಗೆದಿದ್ದರೂ ಭಾರತದಲ್ಲಿ ಅವನ ಪಂಥೀಯರು ಈತನನ್ನು ಕುಟುಂಬದಿಂದ ಹೊರಹಾಕಿದ್ದರು.

ಒಂದನ್ನು ಪಡೆದುಕೊಂಡಾಗ ಮತ್ತೊಂದು ಕಳೆದುಕೊಳ್ಳಬೇಕಾಗುತ್ತದೆ ಅಂತ ಹಿರಿಯರು ಹೇಳುತ್ತಾರೆ. ನಿಜವೇ, Cancer ಎಂಬ ಪೆಡಂಭೂತವನ್ನು ಹತ್ತಿಕ್ಕಲು chemotherapy treatment ನೀಡಲಾಗುತ್ತದೆ. ಪ್ರಾಣಹಾನಿ Cancer ಕೋಶಗಳನ್ನು ಕೊಲ್ಲುವ ಸಂದರ್ಭದಲ್ಲಿ ಕೂದಲ ಬೆಳವಣಿಗೆಗೆ ಸಹಾಯಕವಾದ ಕೋಶಗಳು ಸಾಯುತ್ತವೆ. ಏನನ್ಯಾಯ! ಯುದ್ಧ ಅಂದ್ರೆ ಇದು!

ಕೂದಲು ಕಳೆದುಕೊಳ್ಳುವ ತನಕ ಕೂದಲ ಬೆಲೆ ತಿಳಿಯೋದಿಲ್ಲ ಅಂತ ಹೇಳುವಾಗ, ಈ ಮಾತು ಬರೀ ಕೂದಲಿಗೇ ಅಲ್ಲದೆ ಕೂದಲ ಹೊತ್ತ ದೇಹಗಳಿಗೂ ಅನ್ವಯ ಎಂದಾಗ, ಹೃದಯದ ಮೂಲೆಯಲ್ಲೆಲ್ಲೂ ವೇದನೆಯ ಸ್ವರ ಮೂಡಿದ ಹಾಗೆ ಆಗುತ್ತದೆ.

ಫೆಬ್ರವರಿ ನಾಲ್ಕನೆಯ ತಾರೀಖು World Cancer Day. ವಿಶ್ವದ ಸಮಸ್ಯೆಗಳು ರಾತ್ರಿ ಕಳೆದು ಹಗಲು ಮೂಡಿದಾಗ ಬಗೆಹರಿಯುವುದಿಲ್ಲ. ಜಾತಿ ಮತಗಳ ಸಮಸ್ಯೆಗಳು ಇಂದು ನಿನ್ನೆಯದಲ್ಲ. ದಿನ ಬೆಳಗಾದರೆ ಇಂಥಾ ವಿಷಯಗಳಿಗೆ ತಲೆಕೊಟ್ಟು ಹೃದಯ ಹಾಳುಮಾಡಿಕೊಳ್ಳುವ ಬದಲು ಅದನ್ನೆಲ್ಲಾ ಬದಿಗಿರಿಸಿ ಆರೋಗ್ಯದ ಕಡೆ ಗಮನ ಕೊಡೋಣ. ಚಿಂತೆ ದೂರಾದರೆ ಅದೇ ಆರೋಗ್ಯ ಅನಾರೋಗ್ಯದಲ್ಲಿರುವ ಮಂದಿಗೆ ಸಾಧ್ಯವಾದರೆ ಸಹಾಯ ಮಾಡೋಣ. ಏನಂತೀರಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Though bald is fashion now, who is not bothered about losing hair? For some it's status symbol, for some nothing but style. But, this tale is about losing hair, be it man or woman, but of course with humorous touch by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more