ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಹೂತಿದ್ ಮೇಲೆ ಬಂದ್ರೆ ಒಳ್ಳೆಯದೇ? ಕೆಡುಕೇ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಆರಂಭದಲ್ಲೇ ಈ ಶಿರೋನಾಮೆಗೆ ಸೂಕ್ತವಾಗಿ ಅಘೋರಿಗಳ ಬಗ್ಗೆಯೇ ಹೇಳಿಬಿಡೋಣ. ಮೊದಲಲ್ಲೇ ಹೇಳಿ ಮುಗಿಸಿಬಿಟ್ಟರೆ ಆಮೇಲೆ ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಘೋರವಲ್ಲದ್ದು ಅಘೋರ ಇಂಥವ ಅಘೋರಿ. ಅವರು ಅಘೋರ ಎಂದ ಮೇಲೆ ಅವರನ್ನು ಕಂಡು ನಾವು ಹೆದರುವುದು ಯಾಕೆ? ನಾವು ಪಾಂಡ್ಸ್ ಪೌಡರ್ ಹಾಕಿಕೊಂಡರೆ ಅವರು ಬೂದಿ ಹಚ್ಚಿಕೊಳ್ಳುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಅಭ್ಯಾಸ. ಬೂದಿ ಬಳಿದುಕೊಂಡವರನ್ನು ಕಂಡು ಹೆದರುವುದಾದರೆ ಪೌಡರ್ ಹಚ್ಚಿಕೊಂಡವರನ್ನು ಕಂಡು ಹೆದರಲೇಬೇಕು. ಆದರೆ ವ್ಯತ್ಯಾಸ ಬರುವುದು ಏನಂದರೆ ಅವರ ಅಭ್ಯಾಸಗಳ ವಿಚಾರದಿಂದ.

ಮೂಳೆಯನ್ನು ಒಳಿತಿಗಾಗಿ ಬಳಸಿಕೊಂಡರೆ ಅದು ಒಳಿತು
ಮೊದಲಿಗೆ ಇವರು ಮಸಣವಾಸಿಗಳು. ತಮ್ಮ ಕಪಾಲಗಳನ್ನು ಚಿತ್ರಿಸಲು ಅದನ್ನು ಕೊರೆಯುವುದಕ್ಕೆ ಹೂತಿಟ್ಟ ಶವದ ಮೂಳೆಗಳನ್ನು ಬಳಸುತ್ತಾರೆ ಎಂಬ ಮಾತಿದೆ. ಈ ಮೂಳೆಗಳು ಅವರಿಗೆ ಸಿಗಬೇಕಾದರೆ ಹೂತಿಟ್ಟಿದ್ದನ್ನು ಹೊರಕ್ಕೆ ತೆಗೆಯಲೇಬೇಕಲ್ಲವೇ? ಇದು ಸರಿಯೇ ತಪ್ಪೇ? ಕೆಲವರ ಪ್ರಕಾರ ಒಳ್ಳೆಯ ಪದ್ಧತಿಯಲ್ಲ. ಆದರೆ ಹಲವರ ಪ್ರಕಾರ ಇವರಿಗೆ ನೋವುಗಳನ್ನು ಉಪಶಮನ ವಿಶಿಷ್ಟ ವಿದ್ಯೆ ಇದೆ. ಹೂತಿಟ್ಟಿದ್ದನ್ನು ಹೊರತೆಗೆದು ಕೇವಲ ಒಂದು ಕೆತ್ತನೆಯ ವಸ್ತುವಾಗಿ ಬಳಸಿದ್ದರೆ ಸರಿಯಲ್ಲ ಎನ್ನಬಹುದು, ಇದೇ ಮೂಳೆಯನ್ನು ಒಳಿತಿಗಾಗಿ ಬಳಸಿಕೊಂಡರೆ ಅದು ಒಳಿತು. ಇವರ ಬದುಕಿನಲ್ಲಿ ಇದು ಹೇಗೆ ಎಂಬುದನ್ನು ಕಣ್ಣಾರೆ ಕಂಡವರಾರು? ಹೂತಿಟ್ಟಿದ್ದರಿಂದ ಒಳಿತು ಹೇಗೆ?

ಅಟ್ಟಹಾಸವೇ ಅಧಿಕಾರವಾಗಿ ಒಳಿತುಗಳು ಮೂಲೆಗೆ ಸೇರುತ್ತದೆ
ವೃತ್ತಾಸುರನನ್ನು ವಧಿಸಲು ಯಾವುದೇ ಸಿದ್ಧಪಡಿಸಿದ ಆಯುಧಗಳ ಬಳಕೆ ಮಾಡುವಂತಿರಲಿಲ್ಲ. ಕಾರಣ, ಅವನಿಗಿದ್ದ ವರದಿಂದಾಗಿ ಈ ಯಾವ ಆಯುಧವೂ ಅವನನ್ನು ವಧಿಸಲು ಶಕ್ಯವಾಗಿರಲಿಲ್ಲ. ಮೂಳೆಗಳಿಂದ ಸಿದ್ಧಗೊಳಿಸಿದ ಆಯುಧ ಬೇಕಾಗಿತ್ತು. ಹೀಗಾಗಿ ಇಂದ್ರಾದಿ ದೇವತೆಗಳು ದಧೀಚಿ ಮಹರ್ಷಿಗಳಲ್ಲಿ ಹೋಗಿ ಬೇಡಿಕೊಂಡು, ಅವರ ಎಲುವುಗಳಿಂದ ಮಾಡಿದ ಆಯುಧದಿಂದಲೇ ರಕ್ಕಸನ ವಧೆ ಮಾಡಬಹುದು ಎಂಬುದಾಗಿ ಹೇಳಿದಾಗ, ಮಹರ್ಷಿಯು ನಿಂತಲ್ಲೇ ಬೂದಿಯಾಗಿ ಮೂಳೆಗಳಿಗೆ ಅನುವು ಮಾಡಿಕೊಡುತ್ತಾರೆ. ದೇಹದೊಳಗೆ ಹೂತಿದ್ದ ಎಲುವುಗಳು ಮಹತ್ಕಾರ್ಯಕ್ಕೆ ಸಿದ್ಧವಾಯಿತು. ಇದಂತೂ ಸರಿಯೇ ಎನಿಸುತ್ತದೆ ಇಲ್ಲವಾದರೆ ಅಟ್ಟಹಾಸವೇ ಅಧಿಕಾರವಾಗಿ ಒಳಿತುಗಳು ಮೂಲೆಗೆ ಸೇರುತ್ತದೆ.

Srinath Bhalle Column: Is it good Or Bad if buried things come up on earth?

ಇರುವ ವಿಷಯಕ್ಕೆ ನೂರಾರು ವಿಷಯ ಸೇರಿ ದೊಡ್ಡ ವಿಷಯವಾಗುವುದು
ಹೂತಿಟ್ಟಿದ್ದು ಹೊರಕ್ಕೆ ತರುವ ಯತ್ನ ನಿತ್ಯನೂತನ. ಒಂದಾನೊಂದು ಕಾಲದಲ್ಲಿ ಅರ್ಥಾತ್ ಇತಿಹಾಸದಲ್ಲಿ ನಡೆದ ವಿಚಾರಗಳಿಗೆ ದಾಖಲೆ ಇಲ್ಲವಾದರೆ ಅದು ಒಬ್ಬರಿಂದ ಒಬ್ಬರಿಗೆ ತಿಳಿಯುತ್ತಾ ಬಂದು, ನಮ್ಮಲ್ಲಿಗೆ ಬಂದು ತಲುಪಿರುವ ಈ ದಿನದಲ್ಲಿ, ಇದು snowball effect ಆಗಿರಬಹುದು ಅಥವಾ icecube effect ಕೂಡಾ ಆಗಿರಬಹುದು. ಹೀಗೆಂದರೆ ಏನು? snowball ಪರಿಣಾಮ ಎಂದರೆ ಇರುವ ವಿಷಯಕ್ಕೆ ನೂರಾರು ವಿಷಯ ಸೇರಿ ದೊಡ್ಡ ವಿಷಯವಾಗುವುದು.

Icecube ಪರಿಣಾಮ ಎಂದರೆ ಇರುವ ವಿಷಯ ಮತ್ತೊಂದೆಡೆ ತಲುಪುವ ಹೊತ್ತಿಗೆ ಮೂಲ ವಿಷಯವೇ ಕರಗಿ ಹೋಗಿರುವುದು. ಈ ದಿನಗಳಲ್ಲಿ ಅಂದರೆ ಈ ಮಾಹಿತಿ ಯುಗದಲ್ಲಿ ಒಂದಾನೊಂದು ಕಾಲದ ವಿಷಯಗಳೆಲ್ಲಾ ಎದ್ದೆದ್ದು ಆಚೆ ಬರುತ್ತಿವೆ. ಇದೇ ನಿಜವಾದ ವಿಷಯ ಅಂತ ಓದಿಕೊಂಡು, ನಾವು ಅಂದುಕೊಂಡು ಬಂದ ನಮಗೆ ಹೂತಿಟ್ಟ ವಿಷಯಗಳು ಹೊರಗೆ ಬರುತ್ತಿರುವಾಗ ಇದು ಸತ್ಯವೋ, ಮಿಥ್ಯವೋ ಅರಿಯದೇ ಮತ್ತೆ ಗೊಂದಲವಾಗುತ್ತಿದೆ.

ಅಧ್ಯಯನದಿಂದ ನೂರಾರು ಕಥೆಗಳೂ ಹೊರಕ್ಕೆ ಬರುತ್ತದೆ
Archaeology ಎಂಬುದು ಪುರಾತನ ಕಾಲದ ವಸ್ತುಗಳ ಅಧ್ಯಯನ. ಇವು ಎಲ್ಲಿರುತ್ತದೆ? ಮರದ ಮೇಲೆ ಹಣ್ಣಿನಂತೆ ನಮ್ಮ ಕೈಗೆ ಸಿಗುವಂತೆ ಇರುವುದಾ? ಅಥವಾ ಗಿಡದಲ್ಲಿಯೋ ಬೆಳೆದ ಹೂವಿನಂತೆ ಇರುವುದಾ? ಎರಡೂ ಅಲ್ಲ. ಅಂದೆಂದೋ ಪ್ರಕೃತಿಯ ವಿನೋದಕ್ಕೆ ಸಿಲುಕಿ ಭೂತಾಯಿ ಗರ್ಭದಲ್ಲಿ ಸುರಕ್ಷಿತವಾಗಿ ಕೂತಿರುವುದನ್ನು ಅರ್ಥಾತ್ ಹೂತು ಹೋಗಿರುವುದನ್ನು ಹೊರಕ್ಕೆ ಎಳೆದು ಅಧ್ಯಯನ ನಡೆಸಿ ಜನತೆಗೆ ತಿಳಿಸಿದಾಗ ಒಂದು ಹೊಸ ಕಲಿಕೆಗೆ ಹಾದಿಯಾಗುತ್ತದೆ. ಇಂಥಾ ಒಂದು ಅಧ್ಯಯನ ಇಲ್ಲದಿದ್ದರೆ ಅಂದೆಂದೋ ನಶಿಸಿ ಹೋದ ಜೀವಗಳ ಬಗ್ಗೆ ಇಂದು ನಮಗೆ ಅರಿವೇ ಇರುತ್ತಿರಲಿಲ್ಲ. ಹೂತಿಟ್ಟಿದ್ದು ಅಥವಾ ಹೂತು ಹೋಗಿದ್ದು ಹೊರಕ್ಕೆ ಬಂದಾಗ ನೂರಾರು ಕಥೆಗಳೂ ಹೊರಕ್ಕೆ ಬರುತ್ತದೆ ಎನ್ನಬಹುದು. ಬರೀ ವಸ್ತುಗಳೇ ಅಲ್ಲದೆ, ಪಳೆಯುಳಿಕೆಯಿಂದಲೂ ಇಂದು ನಮ್ಮ ಅರಿವು ಅಂದಿನ ಜೀವಿಗಳ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸಿದೆ. ಹಾಗಿದ್ದರೆ ಎಲ್ಲವೂ ಒಳಿತೇ? ಮುಂದಿನ ವಿಚಾರದಲ್ಲಿ ಮತ್ತೆ ಗೊಂದಲ ಹುಟ್ಟಿಸೋಣ ಬನ್ನಿ.

ಅರ್ಜುನ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಾನೆ
ಶಸ್ತ್ರ- ಅಸ್ತ್ರಗಳನ್ನು ಚೆಲ್ಲಿದಾಗ, ಅರ್ಜುನ ಬಾಣಗಳ ಸುರಿಮಳೆಯನ್ನೇ ಸುರಿಸಿ ಶರಶಯ್ಯೆಯ ಮೇಲೆ ಮಲಗಿಸುತ್ತಾನೆ ತನ್ನ ತಾತ ಭೀಷ್ಮಾಚಾರ್ಯರನ್ನು. ದಣಿದ ಆಚಾರ್ಯರಿಗೆ ನೀರು ಬೇಕಿತ್ತು. ದುರ್ಯೋಧನ ತಕ್ಷಣವೇ ಅರಮನೆಯಿಂದ ಪಾನೀಯಗಳನ್ನು ತರಿಸಲು ಸಜ್ಜಾಗುತ್ತಾನೆ. ಆದರೆ ಆಚಾರ್ಯರಿಗೆ ಕೇವಲ ನೀರು ಬೇಕಿತ್ತು ಅಷ್ಟೇ. ಅರ್ಜುನನ ಕಡೆಗೆ ನೋಡಲು, ಅವನು ಬಿಲ್ಲಿಗೆ ಹೂಡಿ ಬಿಟ್ಟ ಬಾಣ, ನೆಲಕ್ಕೆ ಬಡಿದು ನೀರುಕ್ಕಿತು. ಹೂತಿದ್ದು ಹೊರಗೆ ಬಂದು ಭೀಷ್ಮರ ದಣಿವಾರಿಸಿತ್ತು. ಇದು ಭೀಷ್ಮ ಕುಂದ್ ಎಂದು ಇಂದಿಗೂ ಪ್ರಸಿದ್ಧ ಯಾತ್ರಾಸ್ಥಳ ಎನ್ನಲಾಗಿದೆ.

ಹೂತ ನೀರಿನ ವಿಷಯ ಬಂದಾಗ, ಈ ವಿಷಯ ಹೇಳದೇ ಹೋದರೆ ಹೇಗೆ? ನಾಯಿಕೊಡೆಗಳಂತೆ ಎಲ್ಲೆಲ್ಲೂ ಮನೆಗಳು, ಅಪಾರ್ಟ್ಮೆಂರ್ಟ್‌ಗಳು ತಲೆ ಎತ್ತಲು, ಭುವಿಗೆ ಬೋರು ಬಡಿಯಲು ನೀರು ಉಕ್ಕುತ್ತಿತ್ತು ನಿಜ. ಇಪ್ಪತ್ತಡಿಗೆ ಸಿಗುವ ನಲವತ್ತಾಯ್ತು, ಅರವತ್ತಾಯ್ತು, ನೂರೂ ಆಯ್ತು. ಕೊನೆಗೊಂದು ದಿನ ಬಡಿದಿದ್ದೇ ಬಂತು, ಗಂಗಾ- ಯಮುನಾ- ಕಾವೇರಿಯರು ಬರಲೇ ಇಲ್ಲ. ಎಲ್ಲಕ್ಕೂ ಮಿತಿಯಿದೆ. ಮೊದಲಲ್ಲಿ ಹೂತಿದ್ದ ನೀರು ಎದ್ದುಬಂತು ಅವಶ್ಯಕತೆಯನ್ನು ಪೂರೈಸಿತ್ತು. ಆದರೆ ಆ ನಂತರ?

ನೀರು ಭೂಗರ್ಭದಲ್ಲಿ ಸುರಕ್ಷಿತವಾಗಿ ಕೂತಿತ್ತು
Ore ಅಥವಾ ಅದಿರು ಎಂಬುದೂ ಈ ನೀರಿನ ವಿಷಯದಂತೆಯೇ. ಭೂಗರ್ಭದಲ್ಲಿ ಸುರಕ್ಷಿತವಾಗಿ ಕೂತಿತ್ತು. ಆವಿಷ್ಕಾರಗಳು ಮೂಡಿದಂತೆ ಭುವಿಯನ್ನು ಬಗೆಯಲಾಯಿತು. ಒಳಿತೇನಾಯ್ತು ಎಂದರೆ ಲಕುಮಿದೇವಿಯ ನಾನಾ ರೂಪಗಳು ನಮಗೆ ದೊರೆಯಿತು ಆದರೆ ಇಲ್ಲೂ ದುರಾಸೆ ಅತಿಯಾಗಿ ಇಂದು ತಾಯಿಗರ್ಭದಲ್ಲಿ ಒಡವೆಗಳೇ ಇಲ್ಲ ಎನ್ನಲಾರೆ, ಆದರೆ ಬಹಳ ಕಡಿಮೆಯಾಗಿದೆ ಎನ್ನುತ್ತೇನೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಸಾಗೋಣ. ಇದೇ ಸಾಗರಗರ್ಭ. ಸಾಗರದಲ್ಲಿನ ಜಲಚರಗಳೊಂದಿಗೆ ಇರುವ ಮತ್ತೊಂದು ಅವಿಭಾಜ್ಯ ಅಂಗವೇ ಮರಳು. ನೀರು, ಅದಿರು, ಮರಳು ಎಲ್ಲವನ್ನೂ ಬಗೆದು Eco ಸಿಸ್ಟಮ್ ಅನ್ನು ಛಿದ್ರಗೊಳಿಸಿದ ಕೀರ್ತಿ ಮಾನವನ ದುರಾಸೆಗೆ ಸಲ್ಲುತ್ತದೆ.

ಶ್ರೀರಾಮಚಂದ್ರನ ಕೈಪಿಡಿದ ತಾಯಿಯ ಕಥೆ
ಜನಕ ಮಹಾರಾಜನು ಭುವಿಯನ್ನು ಉಳುವಾಗ ಭೂದೇವಿ ಗರ್ಭದಲ್ಲಿ ಹೂತಿದ್ದು ಹೊರಗೆ ಬಂದವಳೇ ತಾಯಿ ಸೀತಾದೇವಿ. ಶ್ರೀರಾಮಚಂದ್ರನ ಕೈಪಿಡಿದ ತಾಯಿಯ ಕಥೆಯೇ ರಾಮಾಯಣದ ಮೂಲ. ಭುವಿಯ ಬಗ್ಗೆ ಮಾತನಾಡುವಾಗ ಕಗ್ಗದ ಮಾತು ಹೇಳದೇ ಹೋದರೆ ಹೇಗೆ? ಇಳೆಯಿಂದ ಮೊಳಕೆ ಒಗೆ ಒಂದು ತಮಟೆಗಳಿಲ್ಲ ಎಂಬ ಮಾತಿನ ಮರ್ಮದೊಳಗೆ ಹೂತಿಟ್ಟ ಬೀಜದಲ್ಲಿ ಅದೇನು ಶಕ್ತಿ ಇದೆ ನೋಡಿ. ಮೊಳಕೆ ಒಡೆದು ಸಸಿಯಾಗಿ, ಗಿಡವಾಗಿ ಬೃಹತ್ ಮರವಾಗಿಯೂ ನಿಂತಾಗ ಪ್ರಾಣಿಪಕ್ಷಿ ಸಂಕುಲಕ್ಕೂ ಒಳಿತಾಗಿದೆ ಎಂದು ಹೇಳಿದಾಗ ಹೊತ್ತಿಟ್ಟಿದ್ದು ಹೊರಕ್ಕೆ ಬರುವುದರಿಂದ ಅದೆಷ್ಟು ಒಳಿತು ಎಂಬುದು ಸಾಬೀತಾಗಿದೆ ಅಲ್ಲವೇ?

ಅವ್ಯಕ್ತ ಭಾವನೆಗಳು ಅವು ಸಾಮಾನ್ಯವಾಗಿ ಹೊರಕ್ಕೆ ಬರುವುದಿಲ್ಲ
ಅಂತರಂಗದ ಅಂತಃಪುರದ ಅಂತರಾಳದಲ್ಲಿ ಅವಡುಗಚ್ಚಿ ಅಡಗಿ ಕೂತಿರುವ ಅವ್ಯಕ್ತ ಭಾವನೆಗಳು ಅವು ಸಾಮಾನ್ಯವಾಗಿ ಹೊರಕ್ಕೆ ಬರುವುದಿಲ್ಲ. ಮೊದಲೇ ಹೇಳಿದಂತೆ ಇವು ಅವ್ಯಕ್ತ. ಆದರೆ ಕೆಲವೊಮ್ಮೆ ಹೆಚ್ಚಾಗಿ ಚುಚ್ಚಿದಂತಾದಾಗ ಭಾವನೆಗಳು ಹರಿವ ನದಿಯಾಗಿ ಹೊರಕ್ಕೆ ಬರುತ್ತದೆ. ಇವು ಮನದಾಳದ ಮಾತು. ಮನುಷ್ಯ ಎಷ್ಟೇ ದೈಹಿಕವಾಗಿ ಚಿಕ್ಕದಾಗಿದ್ದರೂ ಅಥವಾ ದೊಡ್ಡದಾಗಿದ್ದರೂ, ಮನಸ್ಸಿಗೂ ಮತ್ತು ಹೃದಯಕ್ಕೂ ನಡುವೆ ಇರುವ ದೂರ ಹಲವಾರು ಅಡಿಗಳಂತೂ ಅಲ್ಲ ಬದಲಿಗೆ ಒಂದಡಿ ಅಷ್ಟೇ! ಹೃದಯದಲ್ಲಿ ಹೂತಿಟ್ಟ ಭಾವನೆಗಳು ಒಂದಡಿ ಮೇಲೇರಿ ದೃಢ ಮನಸ್ಸಿನಿಂದ ನಾಲಿಗೆಯಲ್ಲಿಳಿದು ಸೂಕ್ತವಾಗಿ ನುಡಿದಾಗ ಕದಡಿದ ಸಂಬಂಧಗಳು ಸರಿಯಾಗುತ್ತದೆ ಅಂತ ನನ್ನ ಭಾವನೆ.

ಹರಿವ ನೀರಲ್ಲಿ ಅಲುಗದ ಹಾಗೆ ದೋಣಿಯನ್ನು ಹಿಡಿದಿಡುವ anchor ನಂತೆ, ಮನಸ್ಸೆಂಬ ಅಂಕುಶದಿಂದ ಹೃದಯದ ಭಾವನಗೆಳನ್ನು ಹಿಡಿದಿಡಬೇಕು. ಯಾವ ಭಾವನೆಗಳಿಂದ ಸಂಬಂಧಗಳು ಹಾಳಾಗುವ ಸಂಭವನೀಯತೆ ಇರುವುದೋ ಅದನ್ನು ಅಂಕುಶದಿಂದ ಹಿಡಿದಿಡಲೇಬೇಕು. ಪ್ರೀತಿ, ಪ್ರೇಮ, ಗೌರವಾದಿ ಭಾವನೆಗಳನ್ನು ಹೂತಿಡದೇ ಅಂಕುಶವನ್ನು ಹೊರಗೆಳೆದು ಬಿಡಬೇಕು. ಅಪ್ಪ- ಅಮ್ಮ, ಪತಿ- ಪತ್ನಿ ಹೀಗೆ ಯಾರ ಬಗೆಗೆ ಒಂದು ಉತ್ತಮ ಭಾವನೆ ಇದೆಯೋ ಅದನ್ನು ಆಡದೇ ಉಳಿಸಿಕೊಳ್ಳುವ ಹಿಂದೆ ಯಾವ ಸುಖವಿದೆ? ಏನಂತೀರಾ?

English summary
Srinath Bhalle Column: The fame that shattered the Eco system is credited to human greed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X