ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ, ಇಷ್ಟಕ್ಕೂ ಅದಾವ ರಾಗ ಕಿವಿ ತುಂಬಿದ್ದು?

|
Google Oneindia Kannada News

ಇತ್ತೀಚೆಗೆ ಹಲವಾರು ವಿಷಯಗಳು ನನ್ನ ಸುತ್ತಲೂ ನಡೆಯುತ್ತಿತ್ತು. ಈವರೆಗೂ ನಡೆಯದೇ ನಿಂತಿತ್ತೇ? ಎಂಬುದು ಪ್ರಶ್ನೆ ನಿಜ. ದಿನನಿತ್ಯದಲ್ಲಿ ಎನ್ನುವುದಕ್ಕಿಂತಾ ಪ್ರತೀ ಕ್ಷಣವೂ ನಮ್ಮ ಸುತ್ತ ಏನೇನೋ ನಡೆಯುತ್ತಲೇ ಇರುತ್ತದೆ ಆದರೆ ಅದು ನಮ್ಮ ಗಮನಕ್ಕೆ ಬರುತ್ತದೆಯೇ? ಅಥವಾ ನಾವು ಅದನ್ನು ಗಮನಿಸುತ್ತೇವೆಯೇ ಎಂಬುದು ಯೋಚಿಸುವ ಮಾತು. ಒಂದು ವೇಳೆ ಗಮನಿಸಿದರೂ ಅದರ ಬಗ್ಗೆ ಚಿಂತೆ ಮಾಡುತ್ತೇವೆಯೇ ಎಂಬುದು ಬೇರೆ ಮಾತು. ಒಂದು ಚಿಕ್ಕ ಉದಾಹರಣೆ ಎಂದರೆ ಉಸಿರಾಟ. ಎಲ್ಲವೂ ನಾರ್ಮಲ್ ಆಗಿದ್ದಾಗ ನಮ್ಮ ಗಮನ ಆ ಕಡೆ ಇರುವುದೇ ಇಲ್ಲ. ಏದುಸಿರು ಬಂದಾಗ ಗಮನ ಬರಬಹುದು, ಯಾಕೋ ಉಸಿರೇ ಆಡುತ್ತಿಲ್ಲವಲ್ಲಾ ಅಂತ ಗಮನಿಸುವುದು ಬೇರೆಯವರು.

ಇಷ್ಟಕ್ಕೂ ಅದಾವ ರಾಗ ಕಿವಿ ತುಂಬಿದ್ದು? ಇದಕ್ಕೆ ಉತ್ತರ ಬಹಳಷ್ಟು. ಮೊದಲಿಗೆ ಪರಾಗ. ಈ ಪರಾಗ ಎಂಬುದು ಹಲವು ಬಣ್ಣಗಳಲ್ಲಿ ಇರಬಹುದಾದರೂ ಸರ್ವೇಸಾಮಾನ್ಯವಾಗಿ ಅದನ್ನು Yellow ಅಥವಾ ಹಳದಿಬಣ್ಣ ಎಂದೇ ಹೇಳಲಾಗುತ್ತದೆ ಅಥವಾ ನಮ್ಮ ಮನಸ್ಸು ಹಳದಿಬಣ್ಣವನ್ನು ಮನಸ್ಸಿಗೆ ತಂದುಕೊಳ್ಳುತ್ತದೆ. ರಕ್ತ ಎಂದರೆ ಕೆಂಪು ಎಂಬಂತೆ. ಈ ಪರಾಗ ಎಂಬುದು ಕಿವಿಗೆ ತುಂಬುತ್ತದೋ ಇಲ್ಲವೋ ಆದರೆ ನಮ್ಮ ಕಣ್ಣು, ಮೂಗಿನಲ್ಲಿ ತುಂಬೋದು ಖಚಿತ. ಈ ಪರಾಗ ಎಂದರೆ ಪುಷ್ಪಧೂಳಿ. ಎಷ್ಟು ಚೆನ್ನಾಗಿದೆ ಕೇಳೋದಕ್ಕೆ ಅಲ್ಲವೇ? ಒಂದರ್ಥದಲ್ಲಿ ಕರ್ಣಾನಂದ. ಹೇಗೆ ಈ ಕರ್ಣಾನಂದ ಕಣ್ಣಿಗೆ ಕಾಣುವುದಿಲ್ಲವೋ ಹಾಗೆಯೇ ಈ ಪರಾಗವು ಕಣ್ಣು ಮೂಗಿಗೆ ತುಂಬಿದಾಗ ಕರ್ಣಾನಂದದ ಹಾಗೆ ಅನುಭವಕ್ಕೆ ಮಾತ್ರ ಬರುತ್ತದೆ.

ಋತುಗಳ ರಾಜ ವಸಂತ ಋತು. ವಸಂತನ ಆಗಮನ ಎಂದರೆ ಪುಷ್ಪಧೂಳಿಯ ಸಮಯ. ಪುಷ್ಪರಾಜ್ ಗಡ್ಡ ಉಜ್ಜಿಕೊಳ್ಳುವಂತೆ, ಪುಷ್ಪಧೂಳಿ ಕಣ್ಣು ಮೂಗಿನಲ್ಲಿ ಸೇರಿಕೊಳ್ಳುತ್ತಿದ್ದಂತೆ ಕಣ್ಣು ಮೂಗು ಉಜ್ಜಿಕೊಳ್ಳುವುದು ಸರ್ವೇಸಾಮಾನ್ಯ ನೋಟ. ಅಮೇರಿಕಾದ ಹಲವರು allergy ಗಳಲ್ಲಿ pollen allergy ಪ್ರಮುಖವಾದುದು. ಕೆಂಪಾದ ಕಣ್ಣು, ನೀರಿಳಿವ ಕಣ್ಣು-ಮೂಗು, ಕಟ್ಟಿದ ಗಂಟಲು, Congestion ನಿಂದಾಗಿ ಉಸಿರಾಡಲು ತೊಂದರೆ, ಜ್ವರ ಇತ್ಯಾದಿಗಳೆಲ್ಲಾ ಹಳದಿ pollen ನೀಡುವ ಖುಷಿ. ಒಂದೆಡೆ ಗಿಡಮರಗಳು ಚಿಗುರಿ ಖುಷಿ ಕೊಟ್ಟು ಮಂದಿ ಮತ್ತೊಮ್ಮೆ ವಾಕಿಂಗ್ ಶುರುಮಾಡಿಕೊಂಡರೆ, ಹಲವರು pollen ದಾಳಿಯಿಂದಾಗಿ ಮನೆ ಬಿಟ್ಟು ಹೊರಗೆ ಬರಲೇ ಹಿಂಜರಿಯುತ್ತಾರೆ.

Interesting Things Sequencing Pollination, Traffic Signal, Springs

ಈ ಬರಹ ಬರೆದಿದ್ದು ಭಾನುವಾರ. ಐಪಿಎಲ್ ಆಟ ನಡೆಯುತ್ತಿತ್ತು. ಧೋನಿ ಪಡೆ ಆಡುತ್ತಿತ್ತು. ನಾನು ಏನ ಹೇಳ ಹೊರಟಿದ್ದು ಅಂತ ಬಹುಶ: ಅರ್ಥವಾಗಿರಬಹುದು. ಐಪಿಎಲ್ ತಂಡಗಳದ್ದು ಒಂದೊಂದೂ ತಂದದ್ದೂ ವಿಭಿನ್ನ ಬಣ್ಣ ಮತ್ತು ವಿನ್ಯಾಸ. ಧೋನಿ ಪಡೆಯಾದ CSK ಸಮವಸ್ತ್ರದ ಬಣ್ಣ ಹಳದಿ. ಫಳಫಳ ಹಳದಿ ಎಲ್ಲೇ ಇದ್ದರೂ ಕಣ್ಣಿಗೆ ಬೀಳುವ ಬಣ್ಣ. ಹಾಗಾಗಿ traffic ಸಿಗ್ನಲ್'ನ ಮಧ್ಯದ ಬಣ್ಣ ಹಳದಿ.

ಸಿಗ್ನಲ್'ನಲ್ಲಿರುವ ಮೂರು ಬಣ್ಣಗಳು ಎಂದರೆ ಕೆಂಪು ಅರ್ಥಾತ್ ನಿಲ್ಲು, ಹಸಿರು ಅರ್ಥಾತ್ ಸಾಗು. ಹಳದಿ ಎಂದರೆ ನಿಲ್ಲಲು ಸಿದ್ಧವಾಗು ಅಂತ ಅರ್ಥ ಆದರೆ ಜನ ಅಂದುಕೊಂಡಿರುವುದು ಏನಾಗಲೀ ಮುಂದೆ ಸಾಗು ನೀ ಅಂತ. ಸಿಗ್ನಲ್ ದೀಪದ ಬಳಿಗೆ ಬರುವಾಗ ಹಳದಿ ಕಂಡರೆ ಸಾಗಿಬಿಡಬೇಕು ನಿಲ್ಲಬಾರದು, ಅಕಸ್ಮಾತ್ ದೂರದಲ್ಲಿ ಹಳದಿ ಕಂಡರೆ ವಾಹನವನ್ನು ನಿಧಾನಗತಿಗೆ ತಂದು ನಿಲ್ಲಿಸಬೇಕು. ಕೆಂಪು ಬಂದರೂ ಸಾಗಿದಾಗ, ಹಳದಿ ಕಂಡಿತು ಅಂತ ಥಟ್ಟನೆ ನಿಂತರೆ ನಿಧಾನಗತಿ ಸಂಕೇತವಾದ ಹಳದಿಯು ನಿಧನ ಗತಿ ಒಡ್ಡಬಹುದು.

ಬರಹದ ಮೊದಲಲ್ಲಿ, ಗಮನದ ವಿಷಯದ ಬಗ್ಗೆ ಮಾತನಾಡುವಾಗ 'ಒಂದು ವೇಳೆ ಗಮನಿಸಿದರೂ ಅದರ ಬಗ್ಗೆ ಚಿಂತೆ ಮಾಡುತ್ತೇವೆಯೇ?' ಎಂದಿದ್ದೆ. ಆ ವಿಷಯಕ್ಕೆ ಹಾರಿದರೆ, ದಿನನಿತ್ಯದಲ್ಲಿ ಹಳದಿಯನ್ನು ಮೊಬೈಲಿನಲ್ಲಿ ಕಾಣುತ್ತೇವೆ ಎಂದು ನೀವು ಕಂಡಿದ್ದರೂ ಗಮನಿಸಿರಲೇಬೇಕು ಎಂದೇನಿಲ್ಲ. ಹೌದು, ಹಲ್ಲಿಲ್ಲದ, ಎಮೋಜಿ ಮುಖಗಳು ಹೆಚ್ಚಿನ ಸಮಯದಲ್ಲಿ ಹಳದಿಯೇ ಅಲ್ಲವೇ? ಹಸನ್ಮುಖವೇ ಆಗಲಿ, ಬಿಟ್ಟಬಾಯಿ ಆಗಲಿ, ಕಣ್ಣಲ್ಲಿ ನೀರು ತುಂಬಿಕೊಳ್ಳುವಂಥ ನಗೆಯೇ ಆಗಲಿ ಎಲ್ಲವೂ ಹಳದೀ ವದನ. ಹಳದೀ ಎಂಬುದು ಎಲ್ಲಿದ್ದರೂ ಎದ್ದುಕಾಣುವ ಬಣ್ಣ ಎಂದೇ ಈ ಬಣ್ಣದ ಬಳಕೆ. ನಾಲ್ಕು ಜನರ ಮಧ್ಯೆ ಎದ್ದು ಕಾಣಬೇಕು ಅಂತ ನೀವು ಹಳದಿ ಬಣ್ಣದಲ್ಲಿ ಕಾಣಬಯಸುವೆ ಎಂದುಕೊಳ್ಳುವುದು ತಪ್ಪು. ಅಕಸ್ಮಾತ್ ಈ ಬಣ್ಣದಲ್ಲಿ ಎದ್ದುಕಂಡರೆ ವೈದ್ಯರನ್ನು ಕಾಣುವುದು ಒಳ್ಳೆಯದು ಏಕೆಂದರೆ ಜಾಂಡೀಸ್\'ಗೆ ತುತ್ತಾದವರು ಹಳದೀಬಣ್ಣದಲ್ಲಿ ಶೋಭಿಸುತ್ತಾರೆ.

ಹುಟ್ಟಿದ ಮಕ್ಕಳಿಗೆ ಜಾಂಡೀಸ್ ತಗಲುವ ಸಾಧ್ಯತೆ ಇದೆ ಎಂಬುದು ವೈದ್ಯಕೀಯ ಲೋಕದ ಮಾತು. ಜಾಂಡೀಸ್ ಎಂಬುದು ಹಲವು ಹಂತಗಳದ್ದೇ ಆದರೂ, mild jaundice ಆಗಿದ್ದಾಗ ಮಗುವನ್ನು ಹತ್ತು ನಿಮಿಷಗಳ ಕಾಲ ಬಿಸಿಲಿಗೆ ಒಡ್ಡಬೇಕು ಎನ್ನುತ್ತಾರೆ. ಎಂಥಾ ಸೋಜಿಗ ಅಲ್ಲವೇ? ಹಳದಿ ಬಣ್ಣದ ಜಾಂಡೀಸ್ ಅನ್ನು ಹೊಡೆದೋಡಿಸಲು ಹಳದೀ ಸೂರ್ಯನ ಕಿರಣಗಳೇ ಬೇಕು. ಸೂರ್ಯನ ಕಿರಣಗಳು ಹಳದಿ. ಸೂರ್ಯಕಾಂತಿ ಹೂವು ಸುಂದರವಾದ ಹಳದೀ ಬಣ್ಣದಹೂವು. ಹಳದೀಬಣ್ಣದ ಸೇವಂತಿಗೆ ಹೂವನ್ನು ಹೆಂಗಳು ಸಾಮಾನ್ಯವಾಗಿ ಮುಡಿಯುವುದಿಲ್ಲ ಆದರೆ ಪೂಜೆಗೆ ಬಳಸುವುದು ಸಾಮಾನ್ಯ ಮತ್ತು ಶೋಭಾಯಮಾನ.

ಕೆಂಪು ರೋಜಾ ಹೂವು ಪ್ರೇಮದ ಸಂಕೇತ ಎಂಬಂತೆ, ಹಳದೀ ರೋಜಾ ಹೂವು ಸ್ನೇಹದ ಸಂಕೇತ. ಕೆಲವು ಸಿನಿಮಾಗಳಲ್ಲಿ ನೋಡಿರುವಂತೆ 'ನನ್ನೊಂದಿಗೆ ಸ್ನೇಹ ಮಾಡಿಕೊಳ್ಳುವೆಯಾ' ಎಂದು ಕೇಳುತ್ತಾರೆ, ಆ ನಂತರ ಸ್ನೇಹ ಬಹುಶ: ಆ ನಂತರ ಅದು ಪ್ರೇಮಕ್ಕೂ ತಿರುಗುತ್ತದೆ. ಇದನ್ನೇ ಟ್ರಾಫಿಕ್ ದೀಪಗಳಿಗೆ ಹೋಲಿಸಿದರೆ ಸ್ನೇಹದ ಹಸ್ತ ಚಾಚುವಾಗ ಹಸಿರು ರೋಜಾ ಹೂವು ನೀಡಬಹುದೇ? ಆಮೇಲೆ ಅದು ಹಳದಿ ಮತ್ತು ಕೆಂಪು ಆಗಬಹುದು.

ಅರಿಶಿನ-ಕುಂಕುಮ ಹಿಂದೂ ಸಂಪ್ರದಾಯದ ಪ್ರತೀಕ. ಅರಿಶಿನ ಎಂದರೆ ಹಳದಿ, ಕುಂಕುಮ ಎಂಬುದು ಕೆಂಪು. ಅರಿಶಿಣವೇ ಕುಂಕುಮದ ಮೂಲವೂ ಹೌದು. ಈ ಅರಿಶಿನ ಮತ್ತು ಕುಂಕುಮಗಳು ಪೂಜೆಯ ಅವಿಭಾಜ್ಯ ಅಂಗ. ಇದರಂತೆಯೇ ಹತ್ತಿಯಿಂದ ಮಾಡುವ ಗೆಜ್ಜೆವಸ್ತ್ರ ಕೂಡ ಪೂಜೆಯ ಅವಿಭಾಜ್ಯ ಅಂಗವೇ ಸರಿ. ಎರಡು ಗೆಜ್ಜೆಗಳ ನಡುವಿನ ಕೊಂಡಿಯನ್ನು ಕೆಲವರು ಅರಿಶಿನದಿಂದ ಲೇಪಿಸಿದರೆ, ಹಲವರು ಕುಂಕುಮದಿಂದ ಲೇಪಿಸುತ್ತಾರೆ. ನಮ್ಮ ಮನೆಯ ಸಂಪ್ರದಾಯದ ಪ್ರಕಾರ ಕುಂಕುಮದ ಗೆಜ್ಜೆವಸ್ತ್ರವನ್ನು ಬಳಸುತ್ತೇವೆ. ಬಳಕೆಯಲ್ಲಿ ಶ್ರೇಷ್ಠವಾದುದು ಅರಿಶಿಣವೋ, ಕುಂಕುಮವೋ ಎಂಬುದು ಮುಖ್ಯವಲ್ಲ. ಎಡಗಣ್ಣು ಶ್ರೇಷ್ಠವೋ, ಬಲಗಣ್ಣು ಶ್ರೇಷ್ಠವೋ ಎಂದರೆ ಉತ್ತರವಿದೆಯೇ? ಹಾಗೆಯೇ ಇದು ಕೂಡ. ಕುಂಕುಮ ಚಂದನ ಶೋಭಿತ ದೈವವಿಗ್ರಹ ನೋಡಲೇ ಅಂದ. ದೈವೀಕವಾದ ಈ ಅರಿಶಿನ-ಕುಂಕುಮವೇ ಕನ್ನಡ ಧ್ವಜದ ಬಣ್ಣಗಳೂ ಸಹ. ಮೊದಲು ಅರಿಶಿನ ನಂತರ ಕುಂಕುಮ.

ಒಂದರ್ಥದಲ್ಲಿ ನೋಡುವಾಗ ಮಂಗಳ ಕಾರ್ಯದ ಪ್ರತೀಕ ಈ ಹಳದಿ ಎನ್ನಬಹುದೇ? ನೈವೇದ್ಯಕ್ಕೆ ಬಳಸುವ ಯಾವುದೇ ಹಣ್ಣು ಕಾಲಕ್ಕೆ ತಕ್ಕಂತೆ ದೊರೆಯುವುದಾದರೂ ಹಳದಿ ಬಾಳೆಯಹಣ್ಣು ಮಾತ್ರ ವರ್ಷ ದುದ್ದಕ್ಕೂ ಸಿಗುವ ಫಲ. ಹೂವುಗಳೆಲ್ಲಾ ಸುಂದರವೇ ಸರಿ. ಆದರೆ ಹಸಿರು ತೊಟ್ಟಿನ ಹಳದಿಬಣ್ಣದ ಸಂಪಿಗೆ ಅಂದಕ್ಕೆ ಸಾಟಿ ಇಲ್ಲ. ಬೇಡಾ ಬಿಡಿ, ಮನುಜರ ನಡುವೆ ಭಿನ್ನಮತ ಹೇರಿದಂತೆ ಹೂವುಗಳ ನಡುವೆ ಏಕೆ. \'ಮಲ್ಲಿಗೆ ಮತ್ತು ಸಂಪಿಗೆ\' ನಡುವೆ ಪೈಪೋಟಿ ಇನ್ನೂ ಮುಗಿದಿಲ್ಲ ಎನ್ನಬಹುದೇ? ಮಲ್ಲಿಗೆಯಾ ಮೊದಲು ಸಂಪಿಗೆಯಾ ಎಂದೇ ರವಿಮಾಮ ಕೂಡಾ ಗಡಿಬಿಡಿ ಗಂಡ ಚಿತ್ರದಲ್ಲಿ ಕೇಳಿರುವುದು. ಹಣ್ಣುಗಳ ರಾಜ ಮಾವು ಹಳದಿ. ಹಲಸಿನ ಹಣ್ಣಿನ ತೊಳೆಗಳು ಹಳದಿ. ಉಪನಯನದ ವಟು ಉಡುವ ಬಟ್ಟೆಯ ಬಣ್ಣ ಹಳದಿ.

ಸೌಂದರ್ಯವರ್ಧಕ ಚಂದನ ಹಳದಿ. ಸುಂದರವದನ ಹೊತ್ತು ಹೂನಗೆಯ ಚೆಲ್ಲುವಾಗ ತೋರುವ ಹಲ್ಲುಗಳು ತೋರುವ ಬಣ್ಣ ಮಲ್ಲಿಗೆಯಾ? ಸಂಪಿಗೆಯಾ? ಹೀಗೇಕೆ ಹೇಳಿದೆ ಎಂದರೆ ಪ್ರಕೃತಿದತ್ತವಾದ ಎಲ್ಲಕ್ಕೂ ಒಂದೊಂದು ಸ್ಥಾನವಿದೆ. ಆಯಾ ಸ್ಥಾನಗಳಲ್ಲಿ ಅವಕ್ಕೆ ಬೆಲೆಯಿದೆ, ಶ್ರೇಷ್ಟತೆಯಿದೆ. ತಮ್ಮ ತಮ್ಮ ಬಣ್ಣಗಳಿಂದ ಶ್ರೇಷ್ಠತೆ ಮೆರೆವ ಹೂವು, ಹಣ್ಣುಗಳು, ಕಾಯಿ, ಬೇರುಗಳಿಂದ ನಾವು ಕಲಿಯಬೇಕಿದೆ. ಜಗವ ಮೆಚ್ಚಿಸಲು ಬಣ್ಣ ಬದಲಿಸುವುದೇಕೆ? ಅಂತ ಎಲ್ಲೋ ಒಂದು ಕಡೆ ಅನ್ನಿಸುತ್ತಿದೆಯೇ? ಎಲ್ಲೆಲ್ಲೂ ಯಾಕೆ ಅನ್ನಿಸೋದು ಅಂತೀನಿ !

English summary
Kannada news column; Srinath Bhalle column on somewhere it is an ear tune somewhere, ello adu ello kivi tumbo ragaa, Spring is the king of the seasons
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X