ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಸ್ವಲ್ಪ ಕ್ರೇಜಿಯಾಗಿದ್ರೆ ನಿಮಗೇನೂ ಅಡ್ಡಿಯಿಲ್ಲಾ ತಾನೇ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಇಂದಿನ ಬರಹ ಸ್ವಲ್ಪ ಕ್ರೇಜಿಯಾಗಿದ್ರೆ ನಿಮಗೇನೂ ಅಡ್ಡಿಯಿಲ್ಲಾ ತಾನೇ? ಅಂದ ಹಾಗೆ ಕ್ರೇಜಿ ಅಂತ ಯಾವ ಅರ್ಥದಲ್ಲಿ ಹೇಳಿದ್ದು? ಹೌದಲ್ಲವೇ? ಇದೊಂದು ಆಲೋಚಿಸಬೇಕಾದ ವಿಷಯವೇ ಸರಿ ಯಾಕೆಂದರೆ ಕ್ರೇಜಿ ಎಂಬುದಕ್ಕೆ ಹಲವಾರು ಅರ್ಥಗಳಿವೆ. ಬನ್ನಿ ಒಂದೆರಡು ಬಗೆ ಕ್ರೇಜಿಗಳ ಬಗ್ಗೆ ಮಾತನಾಡೋಣ. ಎಲ್ಲಿಂದ ಶುರು ಮಾಡೋಣ? ಇನ್ನಾರಿಂದ? ನಮ್ಮ ಕ್ರೇಜಿ ಕರ್ನಲ್‌ರಿಂದಲೇ ಆರಂಭಿಸುವಾ.

ಆರ್ಮಿಯಲ್ಲಿ ಕರ್ನಲ್ ಆಗಿದ್ದು, ನಿವೃತ್ತಿಯನ್ನು ಹೊಂದಿದ್ದ ಆಫೀಸರ್ ಪಾತ್ರದ ಮೇಲೆ ಹೆಣೆದ ಹಾಸ್ಯದ ಸನ್ನಿವೇಶಗಳೇ ಈ 1980ರಲ್ಲಿ ನಮ್ಮೆಲ್ಲರನ್ನೂ ರಂಜಿಸಿದ್ದ ಕನ್ನಡ ಧಾರಾವಾಹಿ "ಕ್ರೇಜಿ ಕರ್ನಲ್‌'ನ ಸೊಬಗು. ಅಂದಿನ ದಿನಗಳಲ್ಲಿ ತಾನು ಕಟ್ಟುನಿಟ್ಟಾಗಿ ಇದ್ದೆ ಎಂಬುದನ್ನೇ ಮನೆಯಲ್ಲೂ ಹೇರುವ ಹಲವು ಸನ್ನಿವೇಶಗಳು, ಯುವತಿಯರ ಹಿಂದೆ ಬೀಳುತ್ತಾ ತಮ್ಮ ಹೆಂಡತಿಯ ಕೈಲಿ ಸಿಕ್ಕಿಬಿದ್ದು ಪಡುವ ಫಜೀತಿ, ವಿಭಿನ್ನವಾದ ಆಲೋಚನೆಗಳಿಂದ ಎಲ್ಲರಲ್ಲೂ ತಿಕ್ಕಲು ಎನಿಸಿಕೊಳ್ಳುವ ವಿಲಕ್ಷಣ ಸ್ವಭಾವದವರ ಪಾತ್ರದಲ್ಲಿ ರಮೇಶ್ ಭಟ್ ಮಿಂಚಿದ್ದರೆ, ಪತ್ನಿಯ ಪಾತ್ರದಲ್ಲಿ ಗಿರಿಜಾ ಲೋಕೇಶ್ ಅವರದ್ದು ಅದ್ಭುತ ಅಭಿನಯವಾಗಿತ್ತು.

ಶ್ರೀನಾಥ್ ಭಲ್ಲೆ ಅಂಕಣ: ಇವನು ಮಾಮನೇ? ಚಂದಮಾಮನೇ?ಶ್ರೀನಾಥ್ ಭಲ್ಲೆ ಅಂಕಣ: ಇವನು ಮಾಮನೇ? ಚಂದಮಾಮನೇ?

ಕೆಲವರಿಗೆ ಕಾರುಗಳು ಎಂದರೆ ಕ್ರೇಜ್
ಮೂಲತಃ ಕ್ರೇಜಿ ಎಂದರೆ ಅತ್ಯುತ್ಸಾಹ. ಕೆಲವರಿಗೆ ಕಾರುಗಳು ಎಂದರೆ ಕ್ರೇಜ್ ಎಂಬುದನ್ನು ಕೇಳಿದ್ದೇವೆ. ಈ ಕಾರು ಕ್ರೇಜ್ ಎಂಬುದೂ ನಾನಾ ರೀತಿ. ಕೆಲವರು ಒಂದು ಕಾರನ್ನು ದೂರದಿಂದಲೇ ನೋಡಿ ಅದಾವ ಬ್ರಾಂಡ್, ಮಾಡೆಲ್ ಎಂಬುದನ್ನು ಹೇಳಬಲ್ಲರು. ಕೆಲವರು ಅದಕ್ಕೆಷ್ಟು ಸಿಲಿಂಡರ್‌ಗಳು ಇದೆ, ಅದರ ಹೊಟ್ಟೆಯ ಕೆಪ್ಯಾಸಿಟಿ ಎಷ್ಟು, ಮೈಲೇಜ್ ಎಷ್ಟು ಕೊಡುತ್ತದೆ ಇತ್ಯಾದಿಗಳ ಅರಿವಿರುತ್ತದೆ. ಕೆಲವರಿಗೆ ಲಕ್ಸುರಿ ಕಾರುಗಳ ಬಗ್ಗೆ ಮಾತ್ರ ಆಸಕ್ತಿ. ಕೆಲವರಿಗೆ ರೇಸ್ ಕಾರುಗಳ ಮಾತ್ರ ಆಸಕ್ತಿ. ಯಾವ ವರ್ಷದಲ್ಲಿ ಯಾವ ಕಾರು ಗೆದ್ದಿತು ಅದರ ಚಾಲಕ ಯಾರು ಎಂಬುದೆಲ್ಲ ಕಂಠಪಾಠ. ಇಂಥಾ ಕ್ರೇಜ್ ಇರುವವರು ಬಹುಶಃ ತಮ್ಮ ರೂಮಿನ ಗೋಡೆಯನ್ನು ಕಾರುಗಳ ಪೋಸ್ಟರ್‌ಗಳಿಂದ ಮುಚ್ಚಿರುತ್ತಾರೆ. ಇಂಥಾ ಅತ್ಯುತ್ಸಾಹವು ಹಲವರ ಬಾಯಲ್ಲಿ ಹುಚ್ಚು ಎನಿಸಿಕೊಂಡರೂ ಅಚ್ಚರಿಯಿಲ್ಲ. ಕ್ರೇಜಿ ಎಂದರೆ ತಿಕ್ಕಲು, ವಿಲಕ್ಷಣ, ಅತ್ಯುತ್ಸಾಹಿ ಎಂಬಂತೆ ಹುಚ್ಚ ಎಂದೂ ಹೇಳುತ್ತಾರೆ.

Recommended Video

Ravindra Jadeja ಇನ್ಮುಂದೆ CSKಗೆ ನಾಯಕ | Oneindia Kannada
Srinath Bhalle Column: If a Little Crazy You Will Have No Problems?


ಹೀರೋಗಳು ಮತ್ತು ಹೀರೋಯಿನ್‌ಗಳ ಬಗ್ಗೆ ಆಸಕ್ತಿ
ಈ ಕ್ರೇಜ್ ಎಂಬುದು ಕೇವಲ ಗಂಡಿನ ಆಸ್ತಿ ಎಂದುಕೊಳ್ಳದಿರಿ. ಅಂದು ದೇವಾನಂದ್, ರಾಜೇಶ್ ಖನ್ನಾ, ಅಮಿತಾಬ್ ಎಂದರೆ ಹೆಂಗಳಿಗೆ ಕ್ರೇಜ್ ಇತ್ತು. ಆ ನಂತರ ಖಾನ್‌ಗಳು, ರವಿಚಂದ್ರನ್ ಎಂದರೆ ಮುಗಿಬೀಳುತ್ತಿದ್ದರು. ಹೀಗೆ ಕಾಲಕಾಲಕ್ಕೆ ಆಯಾ ಹೀರೋಗಳು ಮತ್ತು ಹೀರೋಯಿನ್‌ಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಗೋಡೆಯನ್ನು ಅವರ ಚಿತ್ರಗಳಿಂದ ಅಲಂಕರಿಸುವುದು, ಪೇಪರ್ ಕಟಿಂಗ್ ಇಟ್ಟುಕೊಳ್ಳುವುದು, ಮೊಬೈಲ್‌ನಲ್ಲಿ ಅವರ ಚಿತ್ರಗಳನ್ನು ಇರಿಸಿಕೊಂಡು ಆರಾಧಿಸುವುದು ಹೀಗೆ ಅನೇಕ ರೀತಿ ಹುಚ್ಚುತನದ ಸರದಾರಿಣಿಯರೇ ಆಗಿರುತ್ತಾರೆ. ಆ ಹೀರೋ ಅಂದರೆ ಕ್ರೇಜಿ ಥರ ಆಡ್ತಾನೆ. ಮೊದಲ ದಿನ, ಮೊದಲ ಷೋಗೆ ಹೋಗದಿದ್ದರೆ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಅನ್ನುವ ಮಟ್ಟಕ್ಕೆ ಆಡ್ತಾನೆ ಎಂಬೆಲ್ಲಾ ಮಾತುಗಳನ್ನು ಆಡಿರುತ್ತೀರಿ ಅಥವಾ ಆಡಿಸಿಕೊಂಡಿರಲೂಬಹುದು.

ಹೆಮ್ಮೆಯಿಂದ ಬೀಗುವ ಕ್ರೇಜಿ ಮಂದಿಗೆ ಏನೂ ಕಡಿಮೆಯಿಲ್ಲ
ಇಂದಿನ ಯುವ ಜನಾಂಗದ ಕ್ರೇಜ್‌ಗಳು ಹಲವಾರು. ಮೊದಲಿಗೆ ಗೇಮ್‌ಗಳು. ಒಂದು ಕಾಲಕ್ಕೆ ಇಂಥಾ ಆಟಗಳ ಡಿವಿಡಿ ರಿಲೀಸ್ ಆಗುತ್ತಿದ್ದುದೇ ಒಂದು ಸಂಭ್ರಮ. ಮಧ್ಯರಾತ್ರಿ ಡಿವಿಡಿ ರಿಲೀಸ್ ಆಗಲಿದೆ ಎಂಬುದು ಹಲವಾರು ದಿನಗಳ ಹಿಂದಿನಿಂದಲೇ ಜಾಹೀರಾತುಗಳು ಮೂಡುವುದೇನು? ಅಂಗಡಿಗಳಲ್ಲಿ ಕಟ್ ಔಟ್ ನಿಲ್ಲಿಸುವುದೇನು? ಬಹುಶಃ ಹನ್ನೆರಡರ ನಂತರ ಕಾಲುಘಂಟೆಯೊಳಗೆ ಎಲ್ಲವೂ ಬಿಕರಿಯೂ ಆಗಿರುತ್ತಿತ್ತು. ಅಂಥಾ ಡಿವಿಡಿ ತೆಗೆದುಕೊಂಡು, ಮನೆಗೆ ಹೋಗಿ ರಾತ್ರೋ ರಾತ್ರಿ ಆಡುತ್ತಾ ಕೂರುವುದು, ಸ್ನೇಹಿತರೊಂದಿಗೂ ಆಡುತ್ತಾ ಕೂರುವುದೂ ಉಂಟು. ಮರುದಿನದ ವೇಳೆಗೆ ಎಲ್ಲಾ ಲೆವೆಲ್‌ಗಳನ್ನೂ ಆಡಿ ಮುಗಿಸಿ, ಹೆಮ್ಮೆಯಿಂದ ಬೀಗುವ ಕ್ರೇಜಿ ಮಂದಿಗೆ ಏನೂ ಕಡಿಮೆಯಿಲ್ಲ. ಹಲವು ಕ್ರೇಜಿ ಟೆಕ್ಕಿಗಳು ಒಂದೊಂದೂ ಲೆವೆಲ್ ಅನ್ನು ದಾಟುವ ಬಗೆಯ ರಹಸ್ಯಗಳನ್ನು ಯೂಟ್ಯೂಬ್ ವಿಡಿಯೋ ಮಾಡಿ ಬಿಡುವಷ್ಟು ಕ್ರೇಜಿಗಳು.

ಶ್ರೀನಾಥ್ ಭಲ್ಲೆ ಅಂಕಣ: ನಿಮಗೆ ಮತ್ತೆ ಸುಸ್ತಾಗಿದೆಯೇ? ಅಥವಾ ಮರುಸುಸ್ತಾದವರ ಬಗ್ಗೆ ಗೊತ್ತಿದೆಯೇ?ಶ್ರೀನಾಥ್ ಭಲ್ಲೆ ಅಂಕಣ: ನಿಮಗೆ ಮತ್ತೆ ಸುಸ್ತಾಗಿದೆಯೇ? ಅಥವಾ ಮರುಸುಸ್ತಾದವರ ಬಗ್ಗೆ ಗೊತ್ತಿದೆಯೇ?

ಜನ ಮರಳೋ, ಜಾತ್ರೆ ಮರಳೋ ಎಂದು ಕೇಳಿದ್ದೀರಿ ಅಲ್ಲವೇ? ಇದೂ ಒಂದು ಕ್ರೇಜಿ ನಡತೆಯೇ ಸರಿ. ಉದಾಹರಣೆಗೆ ಕಳೆದ ನವೆಂಬರ್ ತಿಂಗಳ ಆರಂಭದಲ್ಲಿ ಅಮೆರಿಕಾದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಗರದಲ್ಲಿ ಟ್ರಾವಿಸ್ ಎಂಬ ರ್‍ಯಾಪರ್‌ನ ಸಂಗೀತ ಸಂಜೆಯಿತ್ತು. ಆತನನ್ನು ಹತ್ತಿರದಿಂದ ನೋಡುವ ಆತುರದಲ್ಲಿ ಸ್ಟೇಜಿನ ಬಳಿ ಧಾವಿಸಿದ ಕ್ರೇಜಿ ಮಂದಿಯಿಂದಾಗಿ ನೂಕುನುಗ್ಗಲು ಉಂಟಾಗಿ, ಹಲವಾರು ಜನ ಸತ್ತರು, ತುಂಬಾ ಜನಕ್ಕೆ ಗಾಯಗಳೂ ಆಯ್ತು. ಸತ್ತವರಲ್ಲಿ ಹೆಚ್ಚಿನ ಮಂದಿಯ ವಯಸ್ಸು ಕೇವಲ ಒಂಬತ್ತು ವರ್ಷದಿಂದ ಇಪ್ಪತ್ತೇಳು ವರ್ಷಗಳು ಅಷ್ಟೇ. ಏನ ಹೇಳಹೊರಟೆ ಎಂದರೆ ಕ್ರೇಜಿ ನಡತೆಯಿಂದ ಜೀವಹಾನಿಯೂ ಆಗಬಹುದು ಅಂತ.

ಜನರನ್ನು ಕೊಂದು ಕೊನೆಯಲ್ಲಿ ತಾವೂ ಆತ್ಮಹತ್ಯೆ
ಜೀವ ಹಾನಿಯ ಬಗ್ಗೆಯೇ ಮತ್ತೊಂದು ಮಾತು ಹೇಳಬೇಕು ಎಂದರೆ ಈ ಸರಣಿ ಹಂತಕರದ್ದೂ ಒಂದು ರೀತಿಯ ಕ್ರೇಜಿ ನಡತೆಯೇ ಸರಿ. ಎಷ್ಟೋ ಸನ್ನಿವೇಶಗಳಲ್ಲಿ, ಹತ್ತಾರು ಜನರನ್ನು ಕೊಂದು ಕೊನೆಯಲ್ಲಿ ತಾವೂ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾರೆ. ಏನೆಲ್ಲಾ ತನಿಖೆ ಮಾಡಿದರೂ ಅವರೇಕೆ ಅಮಾಯಕ ಜನರನ್ನು ಕೊಂಡರು ಎಂಬುದರ ಹಿಂದಿನ ಉದ್ದೇಶವೇ ಅರ್ಥವಾಗುವುದಿಲ್ಲ. ಮತ್ತೊಂದು ಕ್ರೇಜ್ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಡಿಸೆಂಬರ್ 31ರ ರಾತ್ರಿ ಹನ್ನೆರಡಕ್ಕೆ ಬಾಲ್ ಡ್ರಾಪ್ ವೀಕ್ಷಿಸಿದ ಮರುಘಳಿಗೆ ಹೊರಬಂದು ಯಾರನ್ನೋ ಗುಂಡಿಕ್ಕಿ ಕೊಂದು ವರ್ಷದ ಮೊದಲ ಹತ್ಯೆ ತನ್ನಿಂದಲೇ ಆಗಿದ್ದು ಎಂದು ಬೀಗುವವರೂ ಕ್ರೇಜಿ ಮಂದಿಯೂ ಇದ್ದಾರೆ. ಕ್ರೇಜಿ ಎಂದರೆ ತಲೆತಿರುಕ ಅಥವಾ ಮಾನಸಿಕ ಅಸ್ವಸ್ಥ ಎಂದೂ ಅರ್ಥವಿದೆ.

ಹೈಟೆಕ್ ಎಂದರೆ ತಿಕ್ಕಲುತನ
ತುಂಬಾ ಸಿಂಪಲ್ ಆಗಿ ಹೇಳೋದಾದರೆ ಕೆಲವರ ಭಾಷೆಯಲ್ಲಿ ಕ್ರೇಜಿ ಅಂದ್ರೆ ಒಂಥರಾ ಕೇಸು, ಲೂಸು, ಸ್ಕ್ರೂ ಲೂಸು, ಸ್ಕ್ರೂ ತುಂಬಾ ಟೈಟು ಹೀಗೆಲ್ಲಾ ಉಂಟು. ಶಾಲಾ- ಕಾಲೇಜು ದಿನಗಳಲ್ಲಿ ಅರ್ಥಾತ್ ಕೊಂಚ ಅರೆಬೆಂದ ಮಡಿಕೆಯ ವಯಸ್ಸಿನಲ್ಲಿ ನಮಗಿಂತಾ ಬುದ್ದಿವಂತರಿಲ್ಲ ಅಂತ ಕಂಡಕಂಡವರನ್ನೆಲ್ಲಾ ತಿಕ್ಕಲು ಎಂದೇ ಆಡಿಕೊಳ್ಳುವ ದುರಭ್ಯಾಸ ಇರುತ್ತದೆ. ಉದಾಹರಣೆಗೆ ಕೆಲವರಿಗೆ ಒಬ್ಬರೇ ಮಾತನಾಡಿಕೊಳ್ಳುವ ಅಭ್ಯಾಸ ಇರುತ್ತದೆ ಎಂದುಕೊಳ್ಳಿ. ಅಂಥವರು ಬೀದಿಯಲ್ಲಿ ಒಬ್ಬರೇ ಮಾತನಾಡಿಕೊಂಡು ಹೋಗುವಾಗ ಮೇಲೆ ಹೇಳಿದ ಯಾವುದೋ ಒಂದು ಅಡ್ಡಹೆಸರಿಟ್ಟು ಕೂಗುವುದೂ ಒಂದು ಕ್ರೇಜಿ ಬುದ್ದಿಯೇ ಸರಿ. ಅಂದ ಹಾಗೆ, ಅಂದು ಒಬ್ಬೊಬ್ಬರೇ ಮಾತನಾಡಿಕೊಂಡು ಸಾಗಿದರೆ ಅದು ತಿಕ್ಕಲುತನ ಆಗಿತ್ತು ಆದರೆ ಇಂದು ಅದು ಹೈ-ಟೆಕ್. ಈಗ ತರ್ಕ ಬುದ್ದಿಯಿಂದ ನೋಡಿದರೆ, ಹೈಟೆಕ್ ಎಂದರೆ ತಿಕ್ಕಲುತನ ಅಂತಾಯ್ತು.

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
ಯುವ ಜನಾಂಗದ ಕ್ರೇಜಿತನದ ಬಗ್ಗೆ ಹೇಳುವುದಾದರೆ ಬಿಟಿಎಸ್ ಬಸ್ಸಿನಂತೆ ಕೊನೆಯ ಮೆಟ್ಟಿಲ ಮೇಲೆ ಒಂದು ಪಾದ ಇರಿಸಿ ಮತ್ತೊಂದು ಪಾದವನ್ನು ಹೊರಗೆ ಗಾಳಿಯಲ್ಲಿ ಬಿಟ್ಟುಕೊಳ್ಳುವುದು. ಇದು ಅಂದಿನ ವಿಷಯ. ಇಂದು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ಕ್ರೇಜಿ ಮಂದಿಯ ಬಳಿ ಬೈಕ್ ಇರುತ್ತದೆ. ಎರಡೂ ಕೈಗಳನ್ನು ಹ್ಯಾಂಡಲ್ ಮೇಲೆ ಇರಿಸದೇ ಗಾಡಿ ಓಡಿಸುವುದು, ಬೀದಿಗಳಲ್ಲಿ ಅತೀ ವೇಗದಿಂದ ಸಾಗುವುದು, ವೇಗವಾಗಿ ಓಡಿಸುವುದೇ ಅಲ್ಲದೆ ಅದೇನೋ ವಯ್ಯಾರ ಮಾಡುವುದು, ಹೆಲ್ಮೆಟ್ ಅನ್ನು ಕೈಗೆ ತೂರಿಸಿಕೊಂಡು ಗಾಡಿ ಓಡಿಸುವುದು ಎಂಬುದೆಲ್ಲ ಒಂದೆರಡು ಉದಾಹರಣೆಗಳು. ಇನ್ನು ಹೆಲ್ಮೆಟ್ ಒಳಗೆ ಮೊಬೈಲ್ ಸಿಕ್ಕಿಸಿಕೊಂಡು ಮಾತಾನಾಡುತ್ತಾ ಬೈಕ್ ಓಡಿಸುವುದು ಕೊಂಚ ಕಡಿಮೆ ತೊಂದರೆಯ ಕ್ರೇಜಿತನ.

ಆಬ್ಸೆಂಟ್ ಮೈಂಡೆಡ್ ಪ್ರೊಫೆಸರ್ ಎಂಬ ಕೀರ್ತಿ
ವಿಪರೀತ ಅರಿತವರೂ eccentric ನಡತೆಯನ್ನು ತೋರುತ್ತಾರೆ ಎಂದೇ ಅವರನ್ನು ಕ್ರೇಜಿ ಎಂದು ಕರೆಯಲಾಗುತ್ತದೆ. ಸಾಮಾನ್ಯ ಸನ್ನಿವೇಶದಲ್ಲಿ ಇಂಥವರು ಆಬ್ಸೆಂಟ್ ಮೈಂಡೆಡ್ ಪ್ರೊಫೆಸರ್ ಎಂಬ ಕೀರ್ತಿ ಪಡೆದಿರಬಹುದು. ಕೆಲವೊಮ್ಮೆ ಏನೇನೋ ಮಾತನಾಡುತ್ತಾರೆ. ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ ಎಂಬ ಮೂದಲಿಕೆಗೂ ಗುರಿಯಾಗಬಹುದು. ಹಲವೊಮ್ಮೆ ಇಂಥಾ ಕ್ರೇಜಿ ಮಂದಿಯ ತಿಳುವಳಿಕೆ ಎಷ್ಟು ಎಂದರೆ ನನ್ನ ಮಾತು ಯಾರಿಗೂ ಅರ್ಥವೇ ಆಗುವುದಿಲ್ಲ ಎಂದು ಅರಿತು ಮಾತನ್ನೇ ಆಡದೇ ತಮ್ಮಷ್ಟಕ್ಕೆ ತಾವು ಇರುತ್ತಾರೆ. ಸಾಮಾನ್ಯ ಜನತೆಗೆ ಇವರ ನಡತೆಯು ಕ್ರೇಜಿ ಆದರೆ ಇವರಿಗೆ ಬೇರೆಯವರ ನಡತೆ ಕ್ರೇಜಿ. ಇದು ಹೇಗೆ ಎಂದರೆ, ಒಂದು ಟೆನಿಸ್ ನೆಟ್ ಅಥವಾ ಬಲೆಯ ಆಚೆ-ಈಚೆ ಇರುವ ಮಂದಿಯಂತೆ. ಇವರ ಕಣ್ಣಲ್ಲಿ ಅವರು ಬಲೆಯ ಹಿಂದೆ, ಅವರ ಕಣ್ಣಿಗೆ ಇವರು ಬಲೆಯ ಹಿಂದೆ.

ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಕ್ರೇಜಿಗಳು
ನನಗನ್ನಿಸುವಂತೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಕ್ರೇಜಿಗಳು. ತಾನಾರು ಎಂದೇ ಅರಿವು ಮೂಡಿಸಿಕೊಳ್ಳದೇ, ಜೀವನದ ರಹಸ್ಯವನ್ನು ಮತ್ತೊಬ್ಬರಿಗೆ ಹೇಳುವ ಕ್ರೇಜಿಗಳು. ಹಿಂದೆ ರಭಸದಿಂದ ಓಡಿ ಬರುವ ಗೂಳಿಗಳಿಗಿಂತಾ ಹೆಚ್ಚು ವೇಗದಿಂದ ಓಡಲು ಯತ್ನಿಸುವ ಕ್ರೇಜಿಗಳು. ನನಗನ್ನಿಸುವಂತೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಬಲೆಯ ಹಿಂದೆ ಅಥವಾ ಬಲೆಯ ಒಳಗೇ ಇರುವವರು. ಆದರೆ ನಾವೇ ಮುಕ್ತರು ಎಂದುಕೊಂಡು ಮತ್ತೊಬ್ಬರನ್ನು ಹೊರಗೆಳೆಯಲು ಹೋಗುವ ಯತ್ನದಲ್ಲಿ ಒಂದೋ ನಾವೇ ಇನ್ನೂ ಕೂಪದಲ್ಲಿ ಇಳಿಯುತ್ತೇವೆ ಅಥವಾ ರಕ್ಷಿಸುವ ಭರದಲ್ಲಿ ಮತ್ತೊಬ್ಬರನ್ನೂ ಹುದುಗಿಸುತ್ತೇವೆ. ಉತ್ತರಗಳನ್ನು ಹುಡುಕುವ ಯತ್ನದಲ್ಲಿ ಬೇರೊಬ್ಬರ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ನೆಮ್ಮದಿಯಾಗಿ... ಅರರೇ, ಬರೆಯುತ್ತಾ ಬರೆಯುತ್ತಾ ನಾನೂ ಕ್ರೇಜಿ ಆಗಿಬಿಟ್ಟೆನಾ? ಈವರೆಗೂ ಓದಿದ ನೀವೆಲ್ಲರೂ ಕ್ಷೇಮ ತಾನೇ?

English summary
Srinath Bhalle Column: Crazy has many meanings. Let's talk about a couple of crazy things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X