ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?

By ಶ್ರೀನಾಥ್ ಭಲ್ಲೆ
|
Google Oneindia Kannada News

ಕಳೆದ ಶುಕ್ರವಾರ ಇಲ್ಲಿನ ಶಾಲೆಗಳಿಗೆ ಅರ್ಧ ದಿನದ ರಜಾ. ಒಂದು ಪುಟ್ಟ ವಿಷಯ ಯೋಚಿಸಿ ಹೇಳಿ. ಇದನ್ನು ಅರ್ಧ ದಿನ ರಜಾ ಅಂತಾರಾ? ಅಥವಾ ಅರ್ಧ ದಿನ ಮಾತ್ರ ಪಾಠಗಳಿದ್ದವೋ? ಮುಂದೆ ಹೋಗೋಣ...

ಹಳದಿ ಬಣ್ಣದ ಶಾಲಾ ಬಸ್'ಗಳು ಅರ್ಧ ದಿನದ ಶಾಲೆ ಮುಗಿಸಿ ಶಾಲೆಯಿಂದ ಹೊರಬಿದ್ದ ನಲಿಯುವ ಮಕ್ಕಳನ್ನು ತನ್ನ ಗರ್ಭದಲ್ಲಿ ಹೊತ್ತು ಅವರವರುಗಳು ಇಳಿಯುವ ಸ್ಟಾಪ್'ನಲ್ಲಿ ಇಳಿಸಿ ಮುಂದೆ ಸಾಗುತ್ತಿತ್ತು. ಮಕ್ಕಳನ್ನು ಮನೆಗೆ ಕರೆದೊಯ್ಯಲು ಬಂದಿದ್ದ ಮಾತಾಪಿತೃಗಳು ಮಕ್ಕಳ ಚಿತ್ರ ತೆಗೆಯೋದೇನು, ಅಪ್ಪಿಕೊಳ್ಳೋದೇನು. ನೋಡೋಕ್ಕೆ ಮಜವಾಗಿತ್ತು. ದಿನವೂ ಫೋಟೋ ತೆಗೀತಾರಾ? ದಿನವೂ ಸೆಲ್ಫಿ ತೊಗೊಳ್ತಾರಾ? ಅಂತ ಅನ್ನಿಸಿದ್ದರೆ ಅದು ಹಾಗಲ್ಲಾ... ಇಲ್ಲಿನ ಶಾಲೆಗಳ ಶೈಕ್ಷಣಿಕ ವರ್ಷದ ಕೊನೆಯ ದಿನ ಅದು!

ಜೀವನದ ಮತ್ತೊಂದು ಮಜಲನ್ನು ಯಶಸ್ವಿಯಾಗಿ ಮುಗಿಸಿದ ಮಕ್ಕಳಿಗೆ ವೀರ ಸ್ವಾಗತ. ಖುಷಿಯಿಂದ ಬರಮಾಡಿಕೊಳ್ಳಲೇಬೇಕು. ಖಂಡಿತಾ ಅಡ್ಡಿಯಿಲ್ಲ. ಅರ್ಥಾತ್ ಬೇಸಿಗೆ ರಜಾ ಆರಂಭವಾಯ್ತು ಅಂತ... ಸೆಪ್ಟೆಂಬರ ತಿಂಗಳ ಮೊದಲವಾರದಲ್ಲಿ ಮತ್ತೆ ಹೊಸ ಶೈಕ್ಷಣಿಕ ವರ್ಷ ಆರಂಭ. ಅಲ್ಲಿಯವರೆಗೆ ರಜಾ ಮಜಾ ಅಷ್ಟೇ!

ಅಂದಿನ ಕಾಲದಲ್ಲಿ ಸಿನೆಮಾ ನೋಡುವ ಮಜವೇ ಮಸ್ತಾಗಿತ್ತು! ಅಂದಿನ ಕಾಲದಲ್ಲಿ ಸಿನೆಮಾ ನೋಡುವ ಮಜವೇ ಮಸ್ತಾಗಿತ್ತು!

ನಮ್ಮ ಮನೆಯ ಎದುರಿಗೇ ಶಾಲಾ ಬಸ್ ಸ್ಟಾಪ್ ಇರೋದು. ಹಾಗಾಗಿ ದಿನನಿತ್ಯದಲ್ಲಿ ಮಕ್ಕಳು ಸ್ಟಾಪಿಗೆ ಬರುವುದನ್ನು ನೋಡುವ ಒಂದು ಅವಕಾಶ ಸಿಗುತ್ತೆ. ಮಳೆಗಾಲ, ಚಳಿಗಾಲ ಅಂತ ಕಾಲಕಾಲಕ್ಕೆ ಅವರ ದಿರುಸುಗಳು, ದಿನನಿತ್ಯದಲ್ಲಿ ಅವರುಗಳು ಶಾಲೆಗೇ ಹೋಗುವಾಗಿನ ಚೈತನ್ಯ, ಸೋಮವಾರ ಬೆಳಗಿನ ನಿದ್ದೆ ಮೊಗ, ಶುಕ್ರವಾರದ ಸಂಜೆಗೆ ನಲಿದಾಡೋ ಮುಖ, ಮಕ್ಕಳ ಮೊದಲ ದಿನದ ಖುಷಿ, ಅವರ ಕಡೆಯ ದಿನದ ಸಂತಸ ಹೀಗೆ ಹತ್ತುಹಲವು ವಿಷಯಗಳೆಲ್ಲವೂ ಅವರುಗಳು ಬಾಯಿಬಿಟ್ಟು ಹೇಳದೆ ನನಗೆ ಮಾಹಿತಿ ಕೊಡ್ತಾ ಹೋಗಿದ್ದಾರೆ. ಒಂದು ಖಂಡುಗ ಇರೋ ವಿಷಯ ಬರೆಯುತ್ತಾ ಸಾಗಿದರೆ ಒಂದು ಕಾದಂಬರಿಯೇ ಆಗುತ್ತೆ ಬಿಡಿ.

ಬೇಸಿಗೆ ರಜಾ ಆರಂಭಿಸಿದ ಮಕ್ಕಳನ್ನು ಕಂಡ ಮೇಲೆ ಮನಸ್ಸು ಹಿಂದಿನ ದಿನಗಳಿಗೆ ಹೋಗೋದಕ್ಕೆ ಎಷ್ಟು ಹೊತ್ತು ಬೇಕಾಗುತ್ತೆ?

I had wonderful summer holidays! how was yours?

ನಮ್ಮಲ್ಲಿ ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳು ಮುಗಿದ ಮೇಲೆ ಆಯಾ ತರಗತಿಯ ಟೀಚರುಗಳು ತಮ್ಮ ತಮ್ಮ ಕೈಲಾದಷ್ಟು assignments ಕೊಡುತ್ತಿದ್ದರು. ಎಲ್ಲರಿಂದಲೂ ಸಾಮಾನ್ಯವಾದ assignment ಎಂದರೆ ಫೈನಲ್ exams ಪತ್ರಿಕೆಯ ಪ್ರಶೆಗಳನ್ನು ಉತ್ತರಿಸಿ ಬರೆಯಬೇಕು ಅಂಬೋದು. ಆಂಗ್ಲ ಮತ್ತು ಕನ್ನಡ ಟೀಚರುಗಳು 'ಬೇಸಿಗೆ ರಜೆಯಲ್ಲಿ ನೀವೇನು ಮಾಡಿದಿರಿ' (ಅರ್ಥಾತ್ ಕಡೆದು ಕಟ್ಟೆ ಹಾಕಿದಿರಿ) ಎಂಬುದರ ಬಗ್ಗೆ ಬರೆದುಕೊಂಡು ಬನ್ನಿ ಅನ್ನೋದು ಸಾಮಾನ್ಯ ಶಿಕ್ಷೆ, ಅಲ್ಲಾ ಹೋಮ್ ವರ್ಕ್.

ಹಾಗಂತ ರಜೆಗೆ ಹೋಗಿ ಮತ್ತೆ ಶಾಲೆ ಆರಂಭವಾಗೋವರೆಗೂ ನೀವು ಇತ್ತ ಬಾರದಿರಿ ಅಂತ ಅಲ್ಲ. ಏಪ್ರಿಲ್ ಹತ್ತಕ್ಕೆ ರಿಸಲ್ಟ್ ಬೇರೆ ಇರುತ್ತಲ್ಲಾ! ಪರೀಕ್ಷೆ ಮುಗಿದಾ ನಂತರ ಅತೀವ ಶ್ರದ್ದೆಯಿಂದ homework ಮಾಡಿ ಮುಗಿಸಿದರೆ, ರಿಸಲ್ಟ್ ದಿನ ಚೆನ್ನಾಗಿ ಮಾರ್ಕ್ಸ್ ಬರುತ್ತೆ ಅನ್ನೋ ನಂಬಿಕೆಯೂ ಕೆಲವು ವರ್ಷ ಇತ್ತು. ಏನು ಲಾಜಿಕ್ ಅಂತ ತಲೆ ಕೆಡಿಸಿಕೊಳ್ಳಬೇಡಿ. ಈ ಶ್ರದ್ಧೆ ಪರೀಕ್ಷೆ ಮುಂಚೆ ಇದ್ದಿದ್ರೆ ಈಗ ನೆಮ್ಮದಿಯಾಗಿ ಇರಬಹುದಿತ್ತು ಅಂತ ಪ್ರತಿ ವರ್ಷ ಅನ್ನಿಸುತ್ತೆ!

ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ

ಈ ಶ್ರದ್ಧೆ ಬಗ್ಗೆ ಮತ್ತೊಂದು ಮಾತು. ರಜಾ ಆರಂಭವಾದ ಮೊದಲ ದಿನವೇ ಒಂದು ನೋಟ್ ಪುಸ್ತಕದಲ್ಲಿ ಪ್ರತಿದಿನ ಏನು ಮಾಡುತ್ತೇವೆ ಅಂತ ಬರೆದಿಡೋದು, ಆಗ ರಜಾ ಮುಗಿಯೋ ಹೊತ್ತಿಗೆ ಪ್ರಬಂಧ ಬರೆಯಲು ಸಹಾಯಕವಾಗುತ್ತದೆ ಎಂಬ ಅತಿಶಯವಾದ ಆಲೋಚನೆ ಮೂಡಿ, ಮೂರು ನಾಲ್ಕು ದಿನ ಕಟ್ಟುನಿಟ್ಟಾಗಿ ಬರೆದಿಡುತ್ತಿದ್ದೆ. ಐದನೇ ದಿನ ಪುಟ ತಿರುವಿ ನೋಡಿದರೆ ಬೆಳಿಗ್ಗೆ ಎದ್ದೆ, ಕಾಫಿ ಕುಡಿದೆ, ತಿಂಡಿ ತಿಂದೆ, ಊಟ ಮಾಡಿದೆ... ಅದು ಬಿಟ್ರೆ homework ಮಾಡಿದೆ... ಯಪ್ಪಾ ತಂದೆ! ಇವೆಲ್ಲಾ ಬಿಟ್ಟು ಮುಂದೆ ಹೋಗ್ತಾನೇ ಇರಲಿಲ್ಲ ಮಾತು. ಇದನ್ನೇನು ಬರೆಯೋದು ಅಂತ ಅಲ್ಲಿಗೆ ಅದು stop! ಆದರೆ ಪ್ರಬಂಧ ಬರೆಯಲು ಕೂತಾಗ ಮಾತ್ರ ಏನು ಮಾಡಿದೆ ಅಂತ ತಲೆ ಕೆರೆದುಕೊಂಡಿದ್ದಕ್ಕೆ ಇಂದು ತಲೆಗೂದಲು ಕಡಿಮೆಯಾಗಿರೋದು!

I had wonderful summer holidays! how was yours?

ರಜೆಯ ಮೊದಲ ದಿನದಿಂದ ಎದ್ದುಬಿದ್ದು ಆರು ದಿನಗಳಲ್ಲಿ ಆರು ಸಬ್ಜೆಕ್ಟ್'ಗಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಲಕ್ಷಣವಾಗಿ ಒಂದೆಡೆ ಇಟ್ಟುಬಿಡೋದು ಅಭ್ಯಾಸ. ಆದರೆ ಸಮಸ್ಯೆ ಇರೋದೇ ಇಲ್ಲಿ! ಏಳನೇ ದಿನದಿಂದ ಮಾಡೋಕ್ಕೆ ಬೇರೆ ಕೆಲಸ ಇರುತ್ತಿರಲಿಲ್ಲ. "ಒಂದೊಂದು paper ಅನ್ನು ಉಸಿರು ಕಟ್ಟಿಕೊಂಡು ಒಂದೇ ದಿನ ಮುಗಿಸಿದ್ದಾದರೂ ಯಾಕೆ? ನಿಧಾನಕ್ಕೆ ಮಾಡಬಹುದಿತ್ತು ತಾನೇ?" ಅಂತ ಅಮ್ಮನಿಂದ ಬೈಗುಳ.

ಫಾಕ್ಟರಿಯಿಂದ ಅಪ್ಪ ಮನೆಗೆ ಬರೋದನ್ನೇ ಕಾದಿದ್ದು, ಸೈಕಲ್ ತೊಗೊಂಡ್ ಬೀದಿ ಬೀದಿ ರೌಂಡ್ ಹೊಡೀತಿದ್ದೆ. ಭೂಮಿಯ ಇನ್ನೊಂದು ಭಾಗಕ್ಕೆ ಬೆಳಕು ತೋರಲು ಹೋಗೋ ಮುನ್ನ ಆ ದಿನಕರ ನನ್ನ ಮುಖ ಕಪ್ಪಾಗಿಸಿ ಹೋಗುತ್ತಿದ್ದ. ಅಂದು ಕಪ್ಪಾದ ಮುಖಕ್ಕೆ ಬೆಂಗಳೂರಿನ ಟ್ರಾಫಿಕ್'ನ ಹೊಗೆಯ ಲೇಪನ ಹತ್ತಿದ್ದು ಇಂದಿಗೂ ಕರಗಿಲ್ಲ!

ಕತ್ತಲಾದ ಮೇಲೆ ಮನೆಗೆ ಬಂದ ಮೇಲೆ ಏನು? ಫ್ಯಾಕ್ಟರಿ bookclub'ನಿಂದ ಅಪ್ಪ ಪ್ರತಿ ಸಂಜೆ ವಾರ ಪತ್ರಿಕೆಗಳನ್ನು ತರುತ್ತಿದ್ದರು. ಕೆಲವೊಮ್ಮೆ ಹೊಸತು ಬಹಳಷ್ಟು ಸಾರಿ ಹಳೆಯದು. ಹೊಸ ಪತ್ರಿಕೆ ಬಂದರೆ ಟೆನ್ಷನ್ ಜಾಸ್ತಿ, ಅವು ಒಂದೇ ದಿನಕ್ಕೆ ವಾಪಸಾಗಬೇಕಿತ್ತು. ಹೆಚ್ಚು ತಡವಾಗಿ ಅವು ಮನೆಗೆ ಬಂದರೆ ಎರಡು ಮೂರು ದಿನ ಇಟ್ಟುಕೊಂಡು ವಾಪಸ್ ಕೊಡುವಷ್ಟು ಅನುಕೂಲ ಇತ್ತು. ಚಂದಮಾಮ, ಸುಧಾ, ಕಸ್ತೂರಿ, ಪ್ರಜಾಮತ ಇತ್ಯಾದಿ ಪತ್ರಿಕೆಗಳ ಒಡನಾಟ ಶುರುವಾಗಿದ್ದೇ ಅಂದು.

ಶಾಲೆಯ ದಿನಗಳಲ್ಲಿ ನನಗೆ ಬೇಕಾದ್ದು ಮಾತ್ರ ಓದಲು ಸಮಯ ಇರುತ್ತಿತ್ತು. ಸಮಯಕ್ಕಿಂತಾ, ಓದಿನ ವೇಳೆಯಲ್ಲಿ ಮ್ಯಾಗಜಿನ್ ಹಿಡುದುಕೊಂಡರೆ ಬೈಸಿಕೊಳ್ಳಬೇಕಿತ್ತು. ಬೇಸಿಗೆ ಅಂದರೆ ಆ magazines'ಗಳ ಪುಟಗಳ ಒಂದಕ್ಷರ ಬಿಡದೆ ಓದುತ್ತಿದ್ದೆ. ಇದೇ ರೀತಿ ಪ್ರಜಾವಾಣಿ ದಿನಪತ್ರಿಕೆ ಕೂಡ. ಮೊದಲು ಓದೋದೇ ಕೊನೆಯ ಪುಟ. ಮೊದಲ ಪುಟ ಯಾವುದಾದರೂ ಹಿರಿಯರು ಢಮ್ ಅಂದಿದ್ರೆ ಮಾತ್ರ. ಬೇರೆ ರಾಜಕೀಯದ ವಿಷಯ ತಲೆ ಹೋಗ್ತಿರ್ಲಿಲ್ಲ.

ಚಾಮರಾಜಪೇಟೆಯ ನಮ್ಮತ್ತೆಯ ಮನೆಗೆ ಹೋಗಬೇಕು ಎಂದರೆ ಎದ್ವಾತದ್ವಾ ಖುಷಿ. ಅವರ ಮನೆಯಲ್ಲಿ ಕನ್ನಡಪ್ರಭ ತರಿಸುತ್ತಿದ್ದರು. ಅವರ ಮನೆಯ ಒಳಗೆ ಹೋಗುತ್ತಿದ್ದಂತೆಯೇ, ಅತ್ತೆಯ ಕೈ ಕಾಫಿಯಾದ ಕೂಡಲೇ, ಶುಕ್ರವಾರದ ಎಡಿಷನ್ ಕನ್ನಡಪ್ರಭಕ್ಕಾಗಿ ಹುಡುಕಾಟ. ಚಲನಚಿತ್ರಗಳ ವಿಷಯದ ಸಂತೆಯಾದ ಶುಕ್ರವಾರದ ಸಂಚಿಕೆ ಬಲೇ ಮಜಾ. ಆ ನಂತರ ಸುಧಾ, ಪ್ರಜಾಮತ, ರೂಪತಾರಾ, ಮಯೂರ... ಒಂದೇ ಎರಡೇ... ಓದಿನ ಮಧ್ಯೆಯೇ ಕೊಟ್ಟ ತಿಂಡಿ ತಿನ್ನಾಟ, ಹಿರಿಯರು ಮಾತನಾಡಿಸಿದಾಗ ಅನ್ಯಮನಸ್ಕನಾಗಿ ಉತ್ತರ. ಅಂದರೆ, ಒಬ್ಬರ ಜೊತೆ ಮಾತನಾಡಬಾರದು ಅಂತಲ್ಲ, ಆದರೆ ಮನೆಗೆ ಹೋಗೋ ಸಮಯ ಬಂದು ಇನ್ನೂ ಪುಸ್ತಕದ ಮುಗಿಯದೆ ಹೋದರೇ ಎಂಬ ಆತಂಕ.

ಹೀಗೇ ಅಲ್ಲಿ ಇಲ್ಲಿ ಅಂತ ಅಮ್ಮನೊಡನೆ ಹೋದಾಗಲೆಲ್ಲಾ ಅವರ ಮನೆಯಲ್ಲಿ ಓದೋಕ್ಕೆ ಏನಿದೆ ಅಂತಲೇ ನೋಡೋದು. ಅವೆಲ್ಲಾ ಏನೂ ಇಲ್ಲ ಎಂದರೆ ಮುಂದಿನ ಬಾರಿಯಿಂದ ಅವರ ಮನೆಗೆ ಹೋಗಲೇ ಹಿಂದೇಟು. ಒಬ್ಬರು ಬಂಧುಗಳಿದ್ದರು. ಅವರ ಮನೆಗೆ ಹೋಗಲೇ ಹಿಂಸೆಯಾಗುತ್ತಿತ್ತು. ಅವರು ಒಮ್ಮೆ ಓದಿ ಮುಗಿಸಿ ಅಟ್ಟದ ಮೇಲೆ ಇಟ್ಟರು ಎಂದರೆ ಮುಗೀತು. ಅವನ್ನು ಕೇಳಿ ಕೆಳಗಿಳಿಸೋದಕ್ಕೆ ಭಗೀರಥನಿಗೂ ಸಾಧ್ಯವಿಲ್ಲ. ಮನೆ ಧೂಳಾಗುತ್ತೆ ಅಂತ ಅವರುಗಳ ಅಭಿಪ್ರಾಯ.

ಒಮ್ಮೆ ಮಾತ್ರ ವಿಶೇಷವಾಗಿ ಮಾಸ್ತಿಕಟ್ಟೆ'ಯಲ್ಲಿದ್ದ ಚಿಕ್ಕಪ್ಪನ ಮನೆಗೆ ಬೇಸಿಗೆ ರಜಾಕ್ಕೆ ಹೋಗಿದ್ದೆ. ಬೆಂಗಳೂರಿನ ಒಂದಷ್ಟು ಜಾಗ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನಗೆ ಈ ಹೊರಗಿನ ಒಂದು ಪ್ರಪಂಚ ವಿಶೇಷವಾಗೇ ಕಂಡಿತ್ತು. ಉಡುಪಿ, ಶೃಂಗೇರಿ ಇತ್ಯಾದಿ ಕ್ಷೇತ್ರಗಳ ದರ್ಶನವಾಗಿತ್ತು. ಒಮ್ಮೆ ಅಲ್ಲಿ ಯಾರದ್ದೋ ಮನೆಗೆ ಹೋಗಿದ್ದೆವು. ತೋಟ ಎಂದರೆ ಏನು ಅಂತ ಅಲ್ಲೇ ನೋಡಿದ್ದು. ಅದ್ಯಾವ ಪರಿ ಹಣ್ಣು, ಕಾಯಿ, ಹೂವಿನ ಮರಗಿಡಗಳು! ಅಬ್ಬಬ್ಬಾ! ಮಲೆನಾಡಿನಲ್ಲಿ ತಂಗಬೇಕು ಎಂಬ ಅದಮ್ಯ ಆಸೆ ಇನ್ನೂ ಜೀವಂತವಾಗಿದೆ. ಒಟ್ಟಾರೆ ಇದ್ದ ಒಂದು ತಿಂಗಳಲ್ಲಿ ವಿಶಿಷ್ಟ ಅನುಭವಗಳು ಬೇಕಾದಷ್ಟಿತ್ತು. 'ಬೇಸಿಗೆಯಲ್ಲಿ ಏನು ಮಾಡಿದಿರಿ' ಪ್ರಬಂಧ ಸಕತ್ತಾಗಿ ಬರೆಯಬೇಕು ಅಂತಿದ್ದೆ, ಆದರೆ ಆ ವರ್ಷ ಪ್ರಬಂಧ ಬರೆಯೋ homework ಕೊಡಲೇ ಇಲ್ಲ!

ಇಂದಿಗೂ ಅಲ್ಲೆಲ್ಲೋ ಮಲ್ಲಿಗೆ ಹೂವಿನ ಅಥವಾ ಮಾವಿನ ಹಣ್ಣಿನ ಸುವಾಸನೆ ಬಡಿದರೆ, ಅಲ್ಲೆಲ್ಲೋ ಮಕ್ಕಳು ಹಗಲಿನ ಬಿಸಿಲಲ್ಲೇ ಆಟವಾಡುತ್ತಿದ್ದರೆ ಬೇಸಿಗೆ ರಜೆಯ ದಿನಗಳು ನೆನಪಾಗುತ್ತವೆ. ರಜೆಯನ್ನು vacation ಅಂತಲೂ ಕರೆಯುತ್ತಾರೆ ಅಂತ ಗೊತ್ತಿರಲಿಲ್ಲ. ಬೇಸಿಗೆ ಶಿಬಿರಗಳು ಇವೆ ಅಂತ ಅರಿವಿರಲಿಲ್ಲ. ರಜೆಯಲ್ಲಿ ಮುಂದಿನ ಜೀವನಕ್ಕೆ ಸಿದ್ಧವಾಗಬೇಕು ಅಂತ ಗೊತ್ತಿರಲಿಲ್ಲ. ಕಾಲ ಕಳೆಯುತ್ತಿದ್ದೇನೆ (waste) ಎಂದೇ ಗೊತ್ತಿರಲಿಲ್ಲ.

ನನ್ನ ಬೇಸಿಗೆ ರಜಾ ಬಹುಶ: ಅಷ್ಟೆಲ್ಲಾ ರೋಚಕ ಅನ್ನಿಸದೆ ಇರಬಹುದು. ಒಬ್ಬೊಬ್ಬರದ್ದೂ ಒಂದೊಂದು ಅನುಭವ ನೋಡಿ. ನಿಮ್ಮದು ಹೇಳಿ.

English summary
The good old childhood days are gone. The present generation children never experience the summer holidays of golden olden days. Srinath Bhalle from Richmond narrates how he would spend the summer holidays when he was in school. Share your experiences too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X