• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಳೋದ್ರಲ್ಲೂ ನಲಿವು ಕಾಣೋದು ಒಂದು ರೋಗವೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಒಂದೇ ಮಾತಿನಲ್ಲಿ ಹೇಳೋದಾದರೆ ಇಂದು, ಮಾತ್ರೆ ತೆಗೆದುಕೊಳ್ಳದ, ರೋಗವೆಂಬುದೇ ಇಲ್ಲದ ಮನುಷ್ಯರೇ ಇಲ್ಲ. ಒಬ್ಬೊಬ್ಬರದ್ದೂ ಒಂದೊಂದು ಬವಣೆ ಇದ್ದೇ ಇದೆ. ಇಂಥಾ ಬವಣೆಯ ಸುತ್ತ ಇರುವ ಹಾಸ್ಯದ ಸನ್ನಿವೇಶಗಳೇ ಇಂದಿನ ಕಥಾ ವಸ್ತು. ನರಳೋದ್ರಲ್ಲೂ ನಲಿವೇ? ಇದೂ ಒಂಥರಾ ರೋಗ ಅಲ್ಲವೇ?

ಒಮ್ಮೆ ಸ್ವಿಮ್ಮಿಂಗ್ ಪೂಲ್'ಗೆ ಮಗನ ಜೋಡಿ ಹೋಗಿದ್ದೆ. ಆಗ ಅವನು ಬಹಳ ಚಿಕ್ಕವನಿದ್ದ. ಹಾಗಾಗಿ ನಾನೂ ನೀರಿಗಿಳಿದೆ. ಅವನೊಡನೆ ಒಂದಷ್ಟು ಈಜಾಡಿದ ಮೇಲೆ ಹೊರಗೆ ಬಂದೆ. ಎಂಥಾ ನಿರ್ಮಲ ವಾತಾವರಣ. ಎಷ್ಟೋ ಜನರಿದ್ದರೂ ಏನೋ ನೀರವತೆ. ಎಲ್ಲೂ ಸದ್ದೇ ಇಲ್ಲ. ಮನೆಯೊಳಗೆ ಕಾಲಿರಿಸಿದಾಗ ಹೆಂಡತಿ ಮಾತನಾಡಿದಾಗಲೇ ಅರಿವಿಗೆ ಬಂದಿದ್ದು ನನಗೆ ಕೇಳಿಸುತ್ತಿಲ್ಲ ಅಂತ. ಕಿವಿಯೊಳಗೆ ನೀರು ಸೇರಿ ಕಿವಿ ಕುರುಡಾಗಿತ್ತು. ಅಂದರೆ ನನ್ನ ಕಿವಿಗಳ ತಮಟೆಗೆ ಅಲ್ಲೇ ಸಾಗುತ್ತಿದ್ದ ಸದ್ದಿನ ಅಲೆಗಳು ಕಾಣಿಸದೆ ಹೋಗಿತ್ತು.

ನಂಬಿಕೆಗಳ ಸುತ್ತ ಶಾಲಾ ದಿನಗಳ ಮಧುರ ನೆನಪುಗಳು

ENT Specialist ಬಳಿ ಹೋದೆ. ಸ್ವಾಗತಕಾರಿಣಿ ನುಲಿಯುತ್ತಾ ಏನೋ ಹೇಳಿದಳು. ನಾನು "pardon" ಅಂದೆ. ಮತ್ತೊಮ್ಮೆ ಏನೋ ಹೇಳಿದಳು, ನಾನೂ ಅದೇ ರೀತಿ ಕೇಳಿದೆ. ಮೂರು-ನಾಲ್ಕು ಬಾರಿ ಇದೇ ಪುನರಾವರ್ತನೆಯಾದ ಮೇಲೆ ಆಕೆ ಜೋರಾಗಿ "ಐ ಸೆಡ್ ಗುಡ್ ಮಾರ್ನಿಂಗ್". ನಾನು "ಓ! ಗುಡ್ ಮಾರ್ನಿಂಗ್. I am here because I cannot hear" ಅಂದೆ. ಆಕೆಯ ಬಿಳಿಮೋರೆ ಕೆಂಪಾಯಿತು. ನಾಚಿಕೆಯೋ ಸಿಟ್ಟೋ ಗೊತ್ತಾಗಲಿಲ್ಲ. 'ಸರಿ' ಅಂದಲೋ 'ಸಾರಿ' ಅಂದಲೋ ಕೇಳಿಸಲಿಲ್ಲ.

ಇತ್ತೀಚೆಗೆ ಜನರಲ್ ಚೆಕ್-ಅಪ್ ಅಂತ ವೈದ್ಯರ ಬಳಿ ಹೋಗಿದ್ದೆ. ಕೆಲವೊಮ್ಮೆ ಅವರ ಪ್ರಶ್ನೆಗಳು ನಿಜಕ್ಕೂ ಭಯ ತರಿಸುತ್ತೆ. ಅದೂ ಇದೂ ಪ್ರಶ್ನೆ ಕೇಳುತ್ತ "ನಿಮಗೆ balance ವಿಷಯದಲ್ಲಿ ಏನಾದ್ರೂ ತೊಂದರೆ ಇದೆಯಾ" ಅಂದರು. ಅರ್ಥಾತ್ ಓಡಾಡುವಾಗ ದೇಹದ ಬ್ಯಾಲೆನ್ಸ್ ತಪ್ಪಿದ ಹಾಗೇನಾದ್ರೂ ಆಗುತ್ತಾ ಅಂತ. ಅಂದರೇ 'ಓಡಾಡೋವಾಗ ತಪಕ್ ಅಂತ ಬಿದ್ದೋಗಂಗ್ ಆಯ್ತದಾ' ಅಂತ. ನಾನೆಂದೆ "ದೇಹದ ಬ್ಯಾಲೆನ್ಸ್ ತೊಂದರೆ ಇಲ್ಲ. ಬ್ಯಾಂಕ್ ಬ್ಯಾಲೆನ್ಸ್ ಒಮ್ಮೊಮ್ಮೆ ತೊಂದರೆ" ಅಂತ. "ಐ cannot ಹೆಲ್ಪ್" ಅನ್ನೋದೇ!

"ಕಿವಿ ಕೇಳೋದ್ರಲ್ಲಿ ತೊಂದರೆ ಇದೆಯಾ?" ಅಂದ್ರು. ನಾನೆಂದೆ "ನನಗೇನೋ ಕೇಳುತ್ತೆ ಅನ್ನಿಸುತ್ತೆ, ಆದರೆ ನನ್ ಹೆಂಡ್ತಿ ನಿಮಗೆ ಕೇಳಿಸೋಲ್ಲ ಅಂತಾಳೆ" ಅಂದೆ! ಮುಂದೆ "ಬಾಯಲ್ಲಿ ಏನಾದ್ರೂ removables (ಕಟ್ಟಿಸಿರೋ ಹಲ್ಲುಗಳು ಅನ್ನಿ) ಇದೆಯಾ?" ಅಂತ ಕೇಳಿದ್ರು. ನಾನು "ಇನ್ನೂ ಅಲ್ಲೀ ತನಕ ಬಂದಿಲ್ಲಾ" ಅಂದೇ. "you are so funny" ಅಂದ್ರು. ಸದ್ಯ, 'ನಿನಗೆ ತಲೆ ಕೆಟ್ಟಿದೆ' ಅನ್ನಲಿಲ್ಲ!

ಬೆಂಗಳೂರಿನ ನಮ್ಮ ಏರಿಯಾದಲ್ಲಿನ ಮಕ್ಕಳ ತಜ್ಞರ ಬಳಿ ಮಕ್ಕಳೇ ಅಂತಲ್ಲದೇ ನಮ್ಮಂಥವರೂ ಹೋಗುತ್ತಿದ್ದೆವು. ಮಗುವಿನ ತಾಯಿ ಒಬ್ಬರು "ಡಾಕ್ಟ್ರೇ ನಮ್ ಮಗೂಗೆ ನಿನ್ನೆಯಿಂದ ಲೂಸ್ ಮೋಷನ್ನು" ಅಂತ ಹೇಳ್ಕೋತಿದ್ರು. ಸಮಸ್ಯೆಯ ಮೂಲ ತಿಳಿಯುವ ಉದ್ದೇಶದಿಂದ ಅವರು ಕೇಳೋ ಪ್ರಶ್ನೆಗಳು ಹೀಗಿರುತ್ತಿತ್ತು "ಯಾವಾಗಿಂದ ಹೀಗೆ ಆಗ್ತಿದೆ? ತಿಳಿಯಾಗಿದೆಯಾ? ನೀ..... ರಾಗಿರುತ್ತಾ? ಸ್ವಲ್ಪ ಗಟ್ಟಿ ಇರುತ್ತಾ? ಯಾವ ಬಣ್ಣಾ . . . . "! ಪುಟ್ಟ ಕ್ಲಿನಿಕ್ ಬೇರೆ. ಒಳಗೆ ಮಾತನಾಡುತ್ತಿದ್ದರೆ ಹೊರಗೆ ಕೂತವರಿಗೂ ಕೇಳಿಸುತ್ತಿತ್ತು. "ನಮಗೆ ಲೂಸ್ ಮೋಷನ್ ಪ್ರಾಬ್ಲಮ್ ಬಂದರೆ ಇವರ ಮುಂದೆ ಮಾತ್ರ ಹೇಳಬಾರದು" ಎನ್ನಿಸುತ್ತಿತ್ತು.

ನಿಮಗೆ ಗೊತ್ತಾ? ಕಚ್ಚುವುದರಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ!

ಅಮೇರಿಕಾದ ಮತ್ತೊಂದು ಅನುಭವ. ಇಲ್ಲಿಗೆ ಬಂದ ಹೊಸತರಲ್ಲಿ ಕಾರು ಇರಲಿಲ್ಲ. ಸ್ನೇಹಿತರ ಜೊತೆ ಓಡಾಟ. ಒಮ್ಮೆ ಹೀಗೆ ಕಣ್ಣಿನ ಡಾಕ್ಟರ್ ಬಳಿ ಹೋಗುವುದಿತ್ತು. ತಪಾಸಣೆ ಆದ ಮೇಲೆ ಕನ್ನಡಕ ಕೊಡ್ತೀನಿ ಅಂದ್ರು. ಎಲ್ಲಾ ಸರಿ, ಅದನ್ನು ಪಿಕಪ್ ಮಾಡೋ ದಿನ ಸ್ನೇಹಿತರು ಊರಿನಲ್ಲಿ ಇರಲಿಲ್ಲ. ಹೇಗಿದ್ರೂ ಪಕ್ಕದಲ್ಲೇ ಇದೆಯಲ್ಲ ಅಂತ ನಡೆದೇ ಹೋಗೋಣ ಅಂದುಕೊಂಡು ಹೊರಟೆವು. ಕಾರಿನಲ್ಲಿ ಸಾಗುವಾಗ ಎಲ್ಲವೂ ಪಕ್ಕದಲ್ಲೇ ಇದೆ ಅಂತ ಆಗಲೇ ಅನ್ನಿಸಿದ್ದು. ಕೇವಲ ನಾಲ್ಕು ಮೈಲಿ ಹೋಗುವಾಗ, ನಾಲ್ಕು ಮೈಲಿ ಬರುವಾಗ ಅಂತಾಗಿ ಬುದ್ದಿ ಕಲಿತೆವು.

ಇಲ್ಲಿನ ER (ಎಮರ್ಜೆನ್ಸಿ ರೂಮ್)'ನ ಕಥೆ ಕೊಂಚ ಭಿನ್ನ. ದಿನದ ಅಂತ್ಯ / ವಾರಾಂತ್ಯಗಳಲ್ಲಿ ನಮ್ಮ ಫ್ಯಾಮಿಲಿ ವೈದ್ಯರು ಸಿಗದೇ ಇರುವ ಸಮಯದಲ್ಲಿ, ಆರೋಗ್ಯ ಕೆಟ್ಟಾಗ ER'ಗೆ ಹೋಗುವುದು ಸಾಮಾನ್ಯ. ಒಮ್ಮೆ ಹೀಗೆ ಹೋದಾಗ, ಕೌಂಟರ್ ಬಳಿ ವಿಷಯವನ್ನೆಲ್ಲಾ ಅರುಹಿದಾಗ ಆಕೆ ಕೇಳಿದ ಪ್ರಶ್ನೆ "ಒಂದರಿಂದ ಹತ್ತರಲ್ಲಿ ಜ್ವರದ ಲೆವೆಲ್ ಏನು? ಒಂದು ಅಂದರೆ ಅತೀ ಕಡಿಮೆ, ಹತ್ತು ಎಂದರೆ ಅತೀ ಹೆಚ್ಚು". ನಮಗೆ ಈ ಪದ್ಧತಿ ಗೊತ್ತಿರಲಿಲ್ಲ. ಅದರೊಟ್ಟಿಗೆ ಕೊಂಚ ಬಿಗುಮಾನ ಬೇರೆ. 'ಮೂರು' ಅಂದ್ವಿ. ಬಹುಶ 6 - 7 ಇತ್ತೇನೋ.

ಸರಿ, ಅಲ್ಲೇ ಕುರ್ಚಿಯಲ್ಲಿ ಕೂತೆವು. ನಮ್ಮೊಂದಿಗೆ ಬಂದವರು, ಆ ನಂತರ ಬಂದವರು ಅಂತೆಲ್ಲ ಸಮಾರಾಧನೆ ನಡೆಯುತ್ತಲೇ ಇದೆ. ಆದರೆ ನಮ್ಮನ್ನು ಕರೆಯಲೇ ಇಲ್ಲ. ಅವರ ಕಣ್ಣಲ್ಲಿ 'ನಮಗೆ ಅಂಥಾ urgency ಇಲ್ಲ' ಅಂತ. ಎಂಟರ ರಾತ್ರಿಗೆ ಅಲ್ಲಿಗೆ ಹೋಗಿ ಹನ್ನೊಂದೂವರೆಯಾದರೂ ನಮ್ಮ ಸರದಿ ಬಾರದೆ ಹೋದಾಗ ಸೀದಾ ವಾಪಸ್ ಮನೆಗೆ ಬಂದ್ವಿ. ಜ್ವರ ಕಡಿಮೆಯಾಗಿತ್ತು ಬಿಡಿ. ಈಗ ಕಲಿತಿದ್ದೇವೆ!

ಸಾಮಾನ್ಯವಾಗಿ ಎಲ್ಲರೂ ದಂತ ವೈದ್ಯರನ್ನು ಕಂಡರೆ ಹೆದರುತ್ತಾರೆ. ಕಾರಣ ಇಷ್ಟೇ, ಅವರ ನಮ್ಮ ಬಾಯನ್ನು ಅಗಲಿಸಿ, ಆಯುಧಗಳಿಂದ ಕ್ಲೀನಿಂಗ್ ಮಾಡುವಾಗ anesthesia ನೀಡದೆ ಅವರ ಕೆಲಸ ಮಾಡುತ್ತಾರೆ. ಹಾಗೆ ಮಾಡುವಾಗ ಅಲ್ಲಲ್ಲೇ ಚುಚ್ಚಿದ ಅನುಭವ ಬೇರೆ. ಅರ್ಥಾತ್ ಎಲ್ಲವೂ ನಮಗೆ ಅರಿವು ಇರುವಾಗಲೇ ಈ ಕೊಳೆ ನಿರ್ಮೂಲನಾ ಕ್ರಿಯೆ ನಡೆಯೋದು. ಆ ಆಯುಧಗಳನ್ನು ಕಂಡಾಗಲೇ ನಮಗೇನೋ ಆಗುತ್ತೆ ಅನ್ನೋ ಭಯ ಮೂಡಿಬಿಡುತ್ತದೆ.

wisdom ಹಲ್ಲು(ಗಳನ್ನು) ಕಿತ್ತೆಸೆಯುವ ಮುನ್ನ, ವಸಡಿಗೆ ಇಂಜೆಕ್ಷನ್ ಚುಚ್ಚಿದಾಗ (anesthesia) ಕಣ್ಣಲ್ಲಿ ನೀರು ಬಂದಿದ್ದು ಸುಳ್ಳಲ್ಲ! ಅದನ್ನು ಕಿತ್ತು ಹಾಕಿದ ಮೇಲೆ ಅದೇನೋ ಒಂದು ಥರ ಪೆದ್ದುತನ ಆವರಿಸಿದೆ ಅಂತ ಈಗಲೂ ಅನ್ನಿಸುತ್ತೆ.

ಮೊನ್ನೆ ಒಂದು ವಿಷಯ ವಾಟ್ಸಾಪ್'ನಲ್ಲಿ ಓದಿದೆ. ಈ ನಡುವೆ (ಅಂದರೆ ಮುಂದಿನ ಪೀಳಿಗೆಗೆ) ಮನುಷ್ಯನಿಗೆ ಇಪ್ಪತೆಂಟು ಹಲ್ಲುಗಳು ಮಾತ್ರವಂತೆ! ಅಂದರೆ, ದವಡೆ ಹಲ್ಲುಗಳೇ ಇರೋದಿಲ್ಲ. ಎಲ್ಲವೂ ಸ್ಮಾರ್ಟ್ ಫೋನಿನಲ್ಲೇ ಇರೋದ್ರಿಂದ wisdom ಹೇಗೆ ಮೂಡುತ್ತೆ ಹೇಳಿ? ಭಗವಂತ ಮಾನವ ಅನ್ನೋ model'ನಲ್ಲಿ upgrade ಮಾಡ್ತಿದ್ದಾನೆ ಅಂತಾಯ್ತು. ಹಣೆಯ ಎಡ ಮತ್ತು ಬಲಕ್ಕೆ usb 3.0 ಅಳವಡಿಕೆಯಾಗುತ್ತೋ? ಎರಡೂ ಕಿವಿಯಗಳಿಗೆ ಫೋನಿಂದ ಹಾಡು ಕೇಳಲು ಅನುವು ಮಾಡಿಕೊಡ್ತಾನೆಯೇ ದೇವಾ? ನೋಡೋಣಾ!

ಕೆಲವೊಮ್ಮೆ ಎಲ್ಲೋ ಒಂದು ಕಡೆ ನಾಲ್ಕು ಜನ ಸೇರುತ್ತೇವೆ ಎಂದುಕೊಳ್ಳಿ. ವೈದ್ಯ ಸ್ನೇಹಿತರೂ ನಮ್ಮೊಂದಿಗೆ ಅಲ್ಲಿರುತ್ತಾರೆ ಅಂದುಕೊಳ್ಳಿ. ಕೆಲವರಿಗೆ ಹೇಗೆ ಎಂದರೆ, ಆ ವೈದ್ಯರನ್ನು ನೋಡಿದ ಕೂಡಲೇ ಏನಾದರೂ ತೊಂದರೆ ಹೇಳಿಕೊಳ್ಳಬೇಕು ಎನಿಸುತ್ತೆ. ಏನೋ ಒಂದು ಹೇಳಿಕೊಂಡು ಅವರಿಂದ ಪರಿಹಾರ ಕೇಳಿದ ಕೂಡಲೇ ಅದೇನೋ ಸಮಾಧಾನ.

ಅದರಂತೆಯೇ ಮತ್ತೊಂದು ಎಂದರೆ, ಪಾಪ ಯಾರೋ ತಮಗೆ ಕಾಲು ನೋವಿದೆ, ಬೆನ್ನಲ್ಲಿ ಛಳುಕು ಅಂತೇನೋ ಹೇಳಿಕೊಳ್ಳುತ್ತಿರುತ್ತಾರೆ. ಅದನ್ನು ಕೇಳಿದ ಕೂಡಲೇ ತಮಗೂ ಹಾಗೆಯೇ ಆಗುತ್ತಿದೆ ಅನ್ನೋ ಭ್ರಮೆಯಲ್ಲಿ 'ನನಗೂ ಹೀಗೆ ಆಗುತ್ತೆ' ಅಂತಾರೆ. ಅಲ್ಲೊಂದು ಮ್ಲಾನ ವಾತಾವರಣ ಕ್ರಿಯೇಟ್ ಮಾಡಿಬಿಡುತ್ತಾರೆ. ಆಸ್ಪತ್ರೆಗಳಲ್ಲಿ / ಕ್ಲಿನಿಕ್'ಗಳಲ್ಲಿ ಇಂತೆಲ್ಲಾ 'ಅಯ್ಯೋ' ವಾತಾವರಣದಲ್ಲೂ ಮಾಸದ ನಗೆ ಮೊಗದಲ್ಲೇ ಎಲ್ಲರನ್ನೂ ಮಾತನಾಡಿಸುವ ಧನ್ವಂತರಿಗಳಿಗೆ ನನ್ನ ಅಕ್ಷರ ನಮನ.

ಅಂದ ಹಾಗೆ, ಪ್ರಾಣಿ ವೈದ್ಯರ ಬಗ್ಗೆ ನನಗೆ ಅನುಭವವಿಲ್ಲ. ಎಂದೂ ಪ್ರಾಣಿಯನ್ನು ಸಾಕಿಲ್ಲ, ಹಾಗಾಗಿ veterinary ಆಸತ್ರೆಯ ವೈದ್ಯರ ಬಳಿ ಹೋಗಿಲ್ಲ. ಹಾಗಾಗಿ ಅದರ ಬಗ್ಗೆ ಏನೂ ಹೇಳಲಾರೆ.

ಆದರೆ ಈ ಮನುಜ ಮತ್ತು ಪ್ರಾಣಿಗಳ ಸಂಬಂಧದ ಬಗ್ಗೆ ಒಂದು ಪುಟ್ಟ ಮಾತು ಹೇಳುತ್ತೇನೆ.

ಮಾನವ ಸಮಾಜಜೀವಿ. ಸಮಾಜದಲ್ಲಿ ಬದುಕೋ ಜೀವಿ. ಸಮಾಜಕ್ಕೆ ಹೆದರಿ ಬದುಕೋ ಜೀವಿ. ಎಷ್ಟೋ ಸಾರಿ ಅದೇ ಸಮಾಜ ಅವರನ್ನು ಹೊರಗಿಟ್ಟಾಗ ಮಾತಿಲ್ಲ ಕಥೆಯಿಲ್ಲದ ಜೀವನ ನಡೆಸುತ್ತ ಪ್ರಾಣಿಗಳಂತೆ ಬದುಕೋ ಸ್ಥಿತಿಗೆ ಬಂದರೂ ಬರಬಹುದು. ಮನುಷ್ಯನೂ ಒಂದು ಪ್ರಾಣಿಯೇ ಆದರೂ, ಮಾತನಾಡುವ ಈ ಪ್ರಾಣಿಯನ್ನು, ಮಾತುಬಾರದ ಒಂದು ಪ್ರಾಣಿ ವೈದ್ಯರ ಬಳಿ ಕರೆದುಕೊಂಡು ಹೋಗುವ ದಿನಗಳು ಬಾರದಿರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The only pain in pleasure is the pleasure of the pain - Annie Rice. Interesting anecdotes by Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more