• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಹಲವಾರು ಸ್ನೇಹಿತರು ಮತ್ತು ಕೆಲವು ಬಂಧುವರ್ಗ ಕೇಳಿದ ಪ್ರಶ್ನೆ "ಹೇಗಿದೆ ಅಲ್ಲಿ?" ಅಂತ... ಇಂದಿನ ಬರಹದ ಮೂಲವೇ ಈ ಪ್ರಶ್ನೆ...

ಇಲ್ಲಿನ ಕಾಳಜಿಯ 'ಅಲ್ಲಿ' ಅನ್ನೋದು ನೀವಿರುವ ಪ್ರದೇಶದ ವ್ಯಾಪ್ತಿಯಿಂದ ಆಚೆಗೆ ಇರುವ ಯಾವುದೇ ಪ್ರದೇಶ/ದೇಶಕ್ಕೂ ಅನ್ವಯ ಎನ್ನಬಹುದು. ಆದರೆ ಅದರ intensity/ತೀವ್ರತೆ ಮಾತ್ರ ಭಿನ್ನ ಅಷ್ಟೇ. ಚೈನಾದ 'wuhan' ಪ್ರದೇಶದಲ್ಲೇ ಇರುವ ಒಬ್ಬ ವ್ಯಕ್ತಿಯನ್ನು 'ಹೇಗಿದೆ ಅಲ್ಲಿ' ಎಂದು ಕೇಳುವುದಕ್ಕೂ, ಮತ್ತ್ಯಾವುದೋ ಪ್ರದೇಶದಲ್ಲಿ ಇರುವ ವ್ಯಕ್ತಿಯನ್ನು ಕೇಳುವಾಗ ಬರುವಾಗಿನ ಒಂದು ಉತ್ತರಕ್ಕೂ ಇರುವಂಥ ಸಾಗರದಷ್ಟು ವ್ಯತ್ಯಾಸ.

ಯಾವುದನ್ನೂ ನಿರ್ಲಕ್ಷಿಸದಿರಿ, ಹಾಗಂತ ತಲೆಯ ಮೇಲೂ ಕೂರಿಸಿಕೊಳ್ಳದಿರಿ

ಈಗ, ಇಲ್ಲಿ ಹೇಗಿದೆ ಅಂದ್ರೆ... ಶಾಲೆಗಳು ಈ ಬಾರಿಯ ಶೈಕ್ಷಣಿಕ ವರ್ಷದ ತನಕ ಮುಚ್ಚಲಾಗಿದೆ. ಅರ್ಥಾತ್ ಈಗಿನಿಂದ ಜೂನ್ ತಿಂಗಳ ಮಧ್ಯದವರೆಗೆ ಅಂದುಕೊಂಡರೂ ಆ ನಂತರ ಬೇಸಿಗೆ ರಜೆ ಅಂತಾಗಿ ಶಾಲೆಯ ಬಾಗಿಲು ತೆರೆಯುವ ತನಕ, ಸೆಪ್ಟೆಂಬರ್ ತಿಂಗಳ ತನಕ, ಶಾಲೆಗೆ ಹೋಗುವುದಿಲ್ಲ. ಆದರೆ ಆಯಾ ವಿಷಯದ ಟೀಚರ್ ಗಳು ಕೈತುಂಬಾ ಕೆಲಸ ಕೊಟ್ಟಿರುತ್ತಾರೆ ಬಿಡಿ.

ಕಾಲೇಜು ವಿದ್ಯಾರ್ಥಿಗಳಿಗೆ ಎರಡು ವಾರ ರಜೆ ಘೋಷಿಸಿದೆ. ಕಾಲೇಜಿನ ಕ್ಯಾಂಪಸ್ ಬಂದ್, ಅಲ್ಲಿನ ಊಟವಸತಿ ಬಂದ್... ಕ್ಯಾಂಪಸ್ ನಲ್ಲೇ ನೆಲೆಸಿರುವ ವಿದೇಶೀ ವಿದ್ಯಾರ್ಥಿಗಳ ಸ್ಥಿತಿ ಇದ್ದಕ್ಕಿದ್ದಂತೆ ಬದಲಾಗಿದೆ. ಸ್ಥಳೀಯ ಸಂಘಸಂಸ್ಥೆಗಳು ಮತ್ತು ಎಂಬೆಸಿ ಸಹಾಯ ಮಾಡಿವೆ ಅನ್ನೋದು ಗಮನಿಸಬೇಕಾದ ವಿಚಾರ. ಈಗ ಕಳೆದ ಸೋಮವಾರದಿಂದ ಆನ್ ಲೈನ್ ತರಗತಿಗಳು ಆರಂಭವಾಗಿವೆ. ಆದರೆ ಈ ವಾರದ ಪರೀಕ್ಷೆಗಳ೦ತೂ ಮುಂದೆ ಹೋಗಿವೆ. ಮುಂದಿನ ವಾರ ಹೇಗೆ ಅನ್ನೋದು ಗೊತ್ತಿಲ್ಲ ಬಿಡಿ.

ಇಂಥ ದಿನಗಳು ಬರಬಹುದು ಎಂಬ ಭೀತಿ ಹುಟ್ಟಿದ ಆರಂಭದಲ್ಲಿ ಹಲವಾರು ಮಂದಿ ವರ್ಷಕ್ಕಾಗುವಷ್ಟು ದಾಸ್ತಾನುಗಳನ್ನು ಮನೆಯಲ್ಲಿ ಶೇಖರಿಸಿದ್ದು ಅದರ ಅವಶ್ಯಕತೆ ಇರುವವರಿಗೆ ಸಿಗದಂತಾಗಿದೆ. ಅವಶ್ಯಕತೆ ಇಲ್ಲದಿದ್ದರೂ ಹೊರಗೆ ಹೋಗುವುದರ ಮೂಲಕ ವೈರಸ್ ಹರಡುತ್ತಿದ್ದಾರೆ. park, gym, party ಇತ್ಯಾದಿಗಳಿಗೆಲ್ಲಾ ನಿಷೇಧ ಹೇರಲಾಗಿದೆ.

ತಲೆಯಲ್ಲಿ ಹುಳ ಬಿಡುವುದು ಎಂದರೇನು ಗೊತ್ತಾ?

ಕೆಲವು ಅಂಗಡಿ ಮುಂಗಟ್ಟುಗಳನ್ನು ಇನ್ನೆರಡು ಮೂರು ವಾರ ಮುಚ್ಚಲಾಗಿದೆ. ಹೀಗಾಗುತ್ತೆ ಅಂತ ಗೊತ್ತಿದ್ರೆ ಎರಡು ವಾರಕ್ಕೆ ಮುಂಚೆ ಕ್ಷೌರ ಮಾಡಿಸಬಹುದಿತ್ತು. ದಿನಸಿ ಅಂಗಡಿಗಳೇ ಮೊದಲಾಗಿ ಎಲ್ಲದರ ಅಂಗಡಿ ತೆರೆದಿರುವ ವೇಳೆಯಲ್ಲಿ ಕಡಿತ. ಹಲವೆಡೆ ಟ್ರಕ್ ಗಳಲ್ಲಿ ಬಂದಿರುವ ಸಾಮಾನುಗಳನ್ನು ಇಳಿಸಿಕೊಳ್ಳಲೂ ಕೆಲಸಗಾರರಿಲ್ಲ. ಅದನ್ನು ಇಳಿಸುವ ತನಕ ಆ ಟ್ರಕ್ ಡ್ರೈವರ್ ಗಳು ಮನೆಗೆ ಹೋಗುವಂತಿಲ್ಲ. ಆ ಡ್ರೈವರ್ ಗಳು ಮನುಷ್ಯರೇ robot ಗಳಲ್ಲಾ. ಇವರ ಊಟ ವಸತಿ?

ಭಾರತದಲ್ಲಿ ಕ್ವಾರಂಟೈನ್ ಆದ ಮಂದಿಗೆ ಕೈಮೇಲೆ ಸೀಲ್ ಹಾಕುತ್ತಾರೆ. ಅದರಿಂದ ಇತರರಿಗೆ ಗೊತ್ತಾಗುತ್ತೆ ಅವರು ಹೊರಗಡೆ ಇರಬಾರದು ಅಂತ. ಇತ್ತೀಚೆಗೆ ಒಬ್ಬ ಮಹನೀಯ ಒಂದು ಹೋಟೆಲ್ ನಲ್ಲಿ ಕೈಯನ್ನು ಮರೆಮಾಚಿಕೊಂಡು ಕೂತಿದ್ದನಂತೆ. ಅನುಮಾನಗೊಂಡವರು ಪೊಲೀಸರನ್ನು ಕರೆದು ಅವನನ್ನು ಒಪ್ಪಿಸಿದಾಗ ಆತ ಹೇಳಿದ್ದು "ನನಗೆ ವೈರಸ್ ಆಗಿದ್ದರೆ ನನ್ನಿಂದ ಇನ್ನೂ ನಾಲ್ಕು ಜನಕ್ಕೆ ಆಗಲಿ"! ಇದೇನ್ ನಡೀತಿದೆ? ಇಂಥವರಿಂದ ನಾವು ಇನ್ನೆಷ್ಟೇ ಎಚ್ಚರಿಕೆ ವಹಿಸಿದರೂ ಪ್ರಯೋಜನವಿಲ್ಲ ಎಂಬ ಅನುಮಾನ ಮೂಡುತ್ತಿದೆ.

ವೈರಸ್ ಹರಡದಿರಲು ಕನಿಷ್ಠ ಎಂದರೂ social distancing ಪಾಲಿಸಬೇಕು. ಸಮಾಜದಲ್ಲಿ ಇಬ್ಬರ ನಡುವೆ ಕೊಂಚ ಅಂತರ ಇರಲಿ ಎನ್ನುವುದರ ಹಿಂದೆ ವಿಜ್ಞಾನ ಅಡಗಿದೆ, ಗಣಿತ ಲೆಕ್ಕದ ಪ್ರಕಾರ ಅದು ಆರಡಿ ಅಂತರ. ಕನ್ನಡ, ಸಂಸ್ಕೃತ, ಹಿಂದಿ, ಆಂಗ್ಲ ಅಂತ ಯಾವುದೇ ಭಾಷೆಯಲ್ಲಿ ಅರ್ಥೈಸಿಕೊಂಡರೂ subject ಒಂದೇ... social distancing ಅಂದ್ರೆ ಅಂತರ ಕಾಪಾಡಿ ಅಂತ.

social distancing ಎಂದಾಗ ವೈರಸ್ ಗೆ ಆರಡಿಗಿಂತ ಕಡಿಮೆ ಮಾತ್ರ ಹಾರಲು ಸಾಧ್ಯ ಅಂತ ಲೇವಡಿ ಮಾಡಿರುವುದನ್ನೂ ಕೇಳಿದ್ದೇನೆ. ಮೌಢ್ಯಕ್ಕೆ ಖೇದವೂ ಆಯ್ತು. ಅಕ್ಷರಸ್ಥರಿಗೂ ವಿದ್ಯಾವಂತರಿಗೂ ಅಂತರವಿದೆ ಬಿಡಿ. ಮೊದಲಲ್ಲಿ ನೂರು ಜನ ಸೇರುವ ಕಾರ್ಯಕ್ರಮಗಳಿಂದ ದೂರವಿರಿ ಎನ್ನಲಾಗಿತ್ತು. ಆ ನಂತರ ವೈರಸ್ ನ ತೀವ್ರತೆಯನ್ನು ಗುರುತಿಸಿ ಐವತ್ತು ಎಂದು ಬದಲಾಯ್ತು. ಇಂದು ಹತ್ತು ಜನಕ್ಕೂ ಹೆಚ್ಚು ಜನರು ಒಂದೆಡೆ ಸೇರದಿರಿ ಎನ್ನಲಾಗಿದೆ. ಸಂದರ್ಭದ ತೀವ್ರತೆಯನ್ನು ಇಷ್ಟರಲ್ಲೇ ಅರ್ಥೈಸಿಕೊಳ್ಳಬಹುದು.

ನಮಗೇನೂ ಆಗಿಲ್ಲ/ಆಗೋದಿಲ್ಲ ಅನ್ನೋ ಭಾವನೆ ಅಥವಾ ಉಡಾಫೆ ಹಲವರಲ್ಲಿ ಮನೆ ಮಾಡಿರುತ್ತದೆ. ನಾವು ಭಾರತೀಯರು ನಮಗೇನೂ ಆಗೋದಿಲ್ಲ ಎಂಬ ಭಾವನೆ ಬಿತ್ತುವ ಹಲವಾರು ವಾಟ್ಸಾಪ್ ಮೆಸೇಜ್ ಗಳು ಎಲ್ಲರಲ್ಲೂ ಆ ವಿಷಯವನ್ನೇ ಮನೆ ಮಾಡಿತು. ಆದರೆ ವಿದೇಶ ಯಾನ ಮುಗಿಸಿಬಂದ ಸೆಲೆಬ್ರಿಟಿ ಗಾಯಕಿಯಂತಹ ಹಲವು 'ಖ್ಯಾತರು' ಮತ್ತು ದೊಡ್ಡಮನುಷ್ಯರು, ಅಲ್ಲಿಂದ ಹೊತ್ತು ತಂದಿದ್ದನ್ನು ಇಲ್ಲಿ ಹಂಚಿ ಕೂತಿದ್ದಾರೆ.

ನಾವು ಬಿಸಿರಕ್ತದವರು, ನಮಗೇನೂ ಆಗೋಲ್ಲ ಎಂಬ ಮನೋಭಾವ ಬಹಳ ಸಾಮಾನ್ಯ. ನಮ್ಮ ದೇಶದ ಜನರೇ ಹೀಗೆ ಅನ್ನೋ ತೆಗಳೋ ಮಾತು ಇಲ್ಲಿ ಬೇಡ. ಅಮೆರಿಕದಲ್ಲೂ social distancing ಅಂತೆಲ್ಲಾ ಹೇಳಿಕೊಂಡಿದ್ರೂ ಬೀಚ್ ಗಳಲ್ಲಿ ಪಡ್ಡೆಹುಡುಗರ ಗುಂಪೇ ನೆರೆದಿತ್ತು. ಅದರಂತೆಯೇ ಹಲವು ಹಿರಿಯರಲ್ಲೂ ಇದೇ ರೀತಿಯ ಉಡಾಫೆ ಕಂಡುಬಂದಿದೆ. ಒಂದು ಸಮೀಕ್ಷೆಯ ಪ್ರಕಾರ, ಇಲ್ಲಿ ವಯಸ್ಸು ಅನ್ನೋದಕ್ಕಿಂತ ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಬಿತ ಅನ್ನೋದು ಗಮನಿಸಬೇಕಾದ ಅಂಶ. ಡಯಾಬಿಟಿಸ್, ಹೃದಯ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಉಳ್ಳವರು 'high risk' ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಹಾಗಾಗಿ 'ನಮಗೇನೂ ಆಗಿಲ್ಲ' ಎಂಬ ಉಡಾಫೆ ಬಿಟ್ಟು ನಾಗರೀಕ ಜವಾಬ್ದಾರಿಯನ್ನು ಪಾಲಿಸೋಣ.

Social Distancing ಜಾರಿಗೆ ಬಂದ ಮೇಲೆ ಹಲವಾರು ಕಾರ್ಯಕ್ರಮಗಳು ರದ್ದಾಗಿವೆ. ಮೊದಲಿಗೆ ಜನಜೀವನ ರಕ್ಷಣೆ ಅನ್ನೋದು ಮುಖ್ಯ. ಇದರ ಬಗೆ ಅನುಮಾನವೇ ಇಲ್ಲ. ಈ ರದ್ದಾಗಿದ್ದು ಏಕೆ ಅಂತಲೂ ಮತ್ತು ಇದಕ್ಕೆ ಸಂಬಂಧಿಸಿದಂತೆ ಇರುವ ಬೇರೆಲ್ಲಾ ನಷ್ಟಗಳು ಏನೆಂದು ನೋಡೋಣ.

ಒಬ್ಬ Celebrity ಸ್ಟೇಜ್ ಅಥವಾ ಫೀಲ್ಡ್ ನಲ್ಲಿ ಇದ್ದಾರೆ ಅಂದ್ರೆ ಅವರನ್ನು ನೋಡಲು ಜನ ಸೇರುತ್ತಾರೆ. ಜನ ಸೇರುತ್ತಾರೆ ಎಂದರೆ ಅವರ ಸೌಲಭ್ಯಕ್ಕಾಗಿ ಸಂಬಂಧಿತ ಉದ್ದಿಮೆಗಳೂ ಇರುತ್ತದೆ. ರೆಸ್ಟೋರೆಂಟ್ ಗಳು, ಲಾಡ್ಜ್ ಗಳು, ವಿಮಾನ ಯಾನ, ಸುತ್ತಲ ಪ್ರೇಕ್ಷಣೀಯ ಸ್ಥಳಗಳು ಒಂದೆಡೆಯಾದರೆ, ಎಲ್ಲಿ ಇಂಥವರ ಕಾರ್ಯಕ್ರಮ ನಡೆಯುತ್ತದೋ ಅಲ್ಲಿನ ಸೆಕ್ಯೂರಿಟಿ, ಕ್ಲೀನಿಂಗ್, ಪಾರ್ಕಿಂಗ್ ಎಂಬೆಲ್ಲಾ services ಉದ್ದಿಮೆಗಳದ್ದು ಮತ್ತೊಂದು ಕಡೆ. ಇಂಥ events ರದ್ದಾದಾಗ ಅಷ್ಟು ಜನರಿಗೆ ಸೋಂಕು ಹರಡುವುದನ್ನು ತಡೆದಂತಾಯ್ತು. ಆದರೆ ಇದನ್ನೇ ಅವಲಂಬಿಸಿರುವ ವ್ಯಾಪಾರಿಗಳಿಗೆ ಇವೆಲ್ಲಕ್ಕೂ ಪೆಟ್ಟು. Economy ಗೆ ಹೊಡೆತ ಬಿದ್ದರೆ ಅದು ತಿರುಗಿ ಹೊಡೆಯೋದು ಮತ್ತೆ ನಮ್ಮಂಥ ಮಧ್ಯಮ ವರ್ಗದವರಿಗೇ.

ಕ್ರೀಡೆಗಳು, ಚಿತ್ರೀಕರಣ, ಜಿಮ್, ಸಿನಿಮಾ ಮಂದಿರಗಳು ಎಲ್ಲಾ ಬಂದ್. ಮದುವೆ ಮುಂಜಿ ಕಲಾಪಗಳ ಮುಂದೂಡಿಕೆ ಇದೆಲ್ಲಾ ಸರಿ, ಆದರೆ ದಿನನಿತ್ಯದಲ್ಲಿ ಹರಿದೂ ಹರಿದೂ ಬರುವ ಧಾರಾವಾಹಿಗಳ ಹಿಂದೆ ಹಲವಾರು ಜನರ ಶ್ರಮ ಇರುತ್ತದೆ ಅಲ್ಲವೇ? ಅವರೆಲ್ಲರೂ ಒಂದೆಡೆ ಇರುತ್ತಾರೆ ಎಂದರೆ ಅದು ಜನಸಂದಣಿ ಅಲ್ಲವೇ? ಇದು ಅಪಾಯಕಾರಿ ತಾನೇ? ವಾರಾಂತ್ಯದಲ್ಲಿ ಲಗ್ಗೆ ಇಡುವ ರಿಯಾಲಿಟಿ ಶೋಗಳಲ್ಲಿ audience ಆಗಿ ಭಾಗವಹಿಸುವವರ ಸಂಖ್ಯೆ ಕನಿಷ್ಠ ಎಂದರೂ ಐವತ್ತು ಇರಬಹುದು. social distancing ಅನ್ನೋದು ಇಲ್ಲೇಕೆ ಸಲ್ಲುತ್ತಿಲ್ಲ?

ಹರಡುತ್ತಿರುವ ಈ ಸೋಂಕಿನ ವಿರುದ್ಧ ಹೋರಾಡುತ್ತಿರುವ ಧನ್ವಂತರಿ ಮತ್ತು ಸಂಬಂಧಿತ ಸಮೂಹ, ಆರಕ್ಷಕರು ಮತ್ತು ಅವರ ಸಂಬಂಧಿತ ತಂಡಗಳೇ ಮೊದಲಾದ ಎಲ್ಲರೊಂದಿಗೆ ನಾವು ಯಾವ ರೀತಿ ಕೈಜೋಡಿಸಬಹುದು.

ಮೊದಲಿಗೆ ಸರಕಾರದ ಬಿನ್ನಹವನ್ನು ಗೌರವಿಸಿ. ಸುಖದುಃಖ ಹಂಚಿಕೊಳ್ಳಿ ಎಂಬ ಮಾತಿದೆ ನಿಜ. ಆದರೆ ವೈರಸ್ ಹಂಚಿಕೊಳ್ಳಬೇಡಿ. ಅಂಥವರು ಅನಿವಾರ್ಯದಿಂದಾಗಿ ಕೆಲಸಕ್ಕೆ ಹೋಗಲೇಬೇಕಾದ ಸಂದರ್ಭದಲ್ಲಿ ಅವರ ಮನೆಯ ಜನರಿಗೆ ನಿಮ್ಮಿಂದಾದ ಸಹಾಯ ಮಾಡಿ. ಕೊಳ್ಳುಬಾಕತನ ಬದಿಗಿರಿಸಿ. ಅವಶ್ಯಕತೆ ಇದ್ದಾಗ ಮಾತ್ರ ಹೊರಗೆ ಅಡಿಯಿರಿಸಿ.

"ಸರ್ವೇ ಭವಂತು ಸುಖಿನ:, ಸರ್ವೇ ಸಂತು ನಿರಾಮಯ"

ಯುಗಾದಿಯ ಈ ಶುಭ ಸಂದರ್ಭದಲ್ಲಿ ಜಗತ್ತಿನಾದ್ಯಂತ ಎದ್ದಿರುವ ಈ ಸಂಕಟ ಬಗೆಹರಿದು ಎಲ್ಲರ ಮನೆಮನಗಳಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುವ.

English summary
Corona virus is spreading all over the world. Daily life has changed drastically by this spreading virus. What we have to do in this situation is very important,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more