ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಇವನು ಮಾಮನೇ? ಚಂದಮಾಮನೇ?

|
Google Oneindia Kannada News

ಮೊನ್ನೆ ಒಂದು ಪೂಜೆಗೆ ಹೋಗಿದ್ದಾಗ ಈ ವಾರದ ವಿಷಯ ತಲೆಗೆ ಬಂತು. ದೇವರ ಪೂಜೆಯ ಸಮಯದಲ್ಲಿ, ದೈವಕ್ಕೆ ಹೂವುಗಳನ್ನು ಅರ್ಪಿಸುವಾಗ ಮಂತ್ರಗಳ ಸ್ವರೂಪದಲ್ಲಿ, ಹೆಸರಲ್ಲಿ ಇರುವಂತೆ, ಹೇಳುವುದೇ 'ಮಂತ್ರ ಪುಷ್ಪ'. ಅದರಲ್ಲೊಂದು ಭಾಗ ಹೀಗಿದೆ "ಚಂದ್ರಮಾವಾ ಅಪಾಮ್ ಪುಷ್ಪಮ್, ಪುಷ್ಪವಾನ್ ಪ್ರಜಾವನ್ ಪಶುಮಾನ್ ಭವತಿ'.

ಇಂದಿನ ಬರಹವು ಮಂತ್ರ ಪುಷ್ಪದ ಬಗ್ಗೆ ಅಲ್ಲ. ಆದರೆ ಮೇಲೆ ಹೇಳಿರುವ ಸಾಲಿನ ಮೊದಲ ಪದವಾದ 'ಚಂದ್ರಮಾವಾ" ಅರ್ಥಾತ್ 'ಚಂದಮಾಮ'. ಮೊದಲಿಗೆ ನನ್ನ ಪ್ರಶ್ನೆಯಿಂದಲೇ ಆರಂಭಿಸುತ್ತೇನೆ. ಚಂದಮಾಮ ಎಂದರೆ ತಲೆಗೆ ಬರುವ ಮೊದಲ ವಿಚಾರ ಯಾವುದು?

ಈ ಹೆಣ್ಣಿಗೂ ತವರಿಗೂ ಏನು ಬಂಧವೋ! 'ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮ' ಟಿವಿ ಷೋ ಬಹುಶಃ ನೀವು ನೋಡಿರಬಹುದು. ಜೇಠಾಲಾಲ್ ಪತ್ನಿ ದಯಾ ಬೆನ್ ತನ್ನ ಹುಟ್ಟೂರು, ಹೆತ್ತ ತಾಯಿ ಮತ್ತು ತನ್ನ ತಮ್ಮನ ಬಗ್ಗೆ ಮಾತನಾಡುವಾಗ ತೋರುವ ಭಾವ ವರ್ಣಿಸಲಾಗದ್ದು. ಈ ಹೋಲಿಕೆಯು ಯಾವುದೇ ಒಬ್ಬ ಮಗಳಿಗೂ ಹೊಂದುತ್ತದೆ. ಒಂದು ಸಾಮಾನ್ಯ ನೋಟ ಎಂದರೆ, ಒಬ್ಬ ತಾಯಿ ರಾತ್ರಿಯಲ್ಲಿ ತನ್ನ ಕೂಸಿಗೆ ಊಟ ಮಾಡಿಸುವಾಗ ಆಕಾಶದಲ್ಲಿ ಚಂದ್ರನನ್ನು ತೋರಿಸುತ್ತಾ ಊಟ ಮಾಡಿಸುತ್ತಾಳೆ. ಮೇಲಿರುವವನನ್ನು ಚಂದ್ರ ಅಂತ ಆಕೆ ಕರೆಯೋದಿಲ್ಲ ಬದಲಿಗೆ ತನ್ನ ತವರೂರಿನ ಅಣ್ಣನೋ ತಮ್ಮನೋ ಎಂಬಂತೆ ಅವನನ್ನು 'ಮಾಮ' ಅಂತ ಪರಿಚಯಿಸುತ್ತಾಳೆ. 'ಚಂದ ಮಾಮ ನೋಡು ಚಂದ ಮಾಮ' ಎಂದು ಹೇಳುತ್ತಾ ಕೂಸಿಗೆ ಉಣಿಸುತ್ತಾಳೆ.

Srinath Bhalle Column: He Is Childhood Days Chandamama

ಮುಖಪುಟದ ಚಿತ್ರವೇ ಮನಸೂರೆಗೊಳ್ಳುವ ಮೊದಲ ಅಂಶ
ಚಂದಮಾಮ ಎಂದರೆ ನನ್ನ ಮನಸ್ಸಿಗೆ ಬರುವ ವಿಚಾರಗಳಲ್ಲಿ ಪ್ರಮುಖವಾದುದು ಎಂದರೆ ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ. ಬಾಲ್ಯದಲ್ಲಿ ನನಗೆ ಕನ್ನಡ ಭಾಷೆಯನ್ನು ಪರಿಚಯಿಸಿದ, ಅಭಿಮಾನ ಮೂಡಿಸಿದ, ಅಂದೆಂದೋ ಓದಿದರೂ ಇಂದಿಗೂ ಎಷ್ಟೋ ಕಥೆಗಳು ಹಚ್ಚಹಸಿರಾಗಿಯೇ ಇರುವ ಚಂದಮಾಮ ಮಾಸಪತ್ರಿಕೆ.

ಆ ಪತ್ರಿಕೆಯನ್ನು ಕೈಲಿ ಹಿಡಿದಾಗ ಆ ಮುಖಪುಟದ ಚಿತ್ರವೇ ಮನಸೂರೆಗೊಳ್ಳುವ ಮೊದಲ ಅಂಶ. ಒಂದೆರಡು ಹಾಳೆ ತೆಗೆದಾಗ ಅಲ್ಲಿ ಕಾಣುವ 'ಬಿನಾಕಾ' ಟೂತ್‌ಪೇಸ್ಟ್'ನ ಜಾಹೀರಾತು ಅದೇನು ಪ್ರಭಾವ ಬೀರಿತ್ತು ಅಂದರೆ, ಬಿನಾಕಾ ಎಂಬುದು ಸಿಬಾಕ ಅಂತ ಬದಲಾಗುವಾ ತನಕ ನಮ್ಮ ಸಂಸಾರದ ಖಾಯಂ ಸದಸ್ಯ. ಆ ನಂತರ 'ಚಕ್ರಪಾಣಿ' ಮತ್ತು 'ನಾಗಿರೆಡ್ಡಿ' ಅವರ ಹೆಸರುಗಳು ಅಚ್ಚು ಒತ್ತಿದ್ದವು. 'ಅಮರವಾಣಿ' ಓದುತ್ತಿದ್ದೆ. ಆದರೆ ಏನೂ ಅರ್ಥವಾಗುತ್ತಿರಲಿಲ್ಲ. ಆಗಲೇ ಅರ್ಥವಾಗಿಬಿಟ್ಟಿದ್ರೆ, ಬಹುಶಃ ಭಯಂಕರ ಜ್ಞಾನಿಯಾಗಿಬಿಡುತ್ತಿದ್ದೆನೋ ಏನೋ?

ಅಮರಚಿತ್ರಕಥೆ ಇತ್ಯಾದಿಗಳು ನನ್ನ ಮೇಲೆ ಪ್ರಭಾವ ಬೀರಲಿಲ್ಲ
ಪಂಚತಂತ್ರದ ಕಥೆಗಳು ಇಷ್ಟವಾಗುತ್ತಿತ್ತು. ಬೇತಾಳನ ಕಥೆಗಳು ಓದಿದ ಪ್ರಭಾವವೇ ಬಹುಶಃ ಇಂದು ಜಾಸ್ತಿ ಪ್ರಶ್ನೆಗಳನ್ನು ಕೇಳುವುದಕ್ಕೆ ನಾಂದಿಯಾಗಿರಬಹುದೇ? ಇನ್ನು 'ವೀರ ಹನುಮಾನ್' ಬಗ್ಗೆ ಹೇಳುವುದಾದರೂ ಏನು! ಮಹರ್ಷಿಗಳ ಶಿಷ್ಯನಾದ ಉಪಮನ್ಯುವಿನ ಕಥೆ ಇನ್ನೂ ಚೆನ್ನಾಗಿ ನೆನಪಿದೆ. ದೇವಿ ಭಾಗವತದ ಹಲವು ಕಥೆಗಳು ನೆನಪಿದೆ. ತಾಂತ್ರಿಕ ಜಗತ್ತಿನ ಕಥೆಗಳು ರೋಚಕವಾಗಿರುತ್ತಿತ್ತು. ಕೊನೆಯ ವಿಷಯ ಆದರೆ ನನಗಾವ ಪ್ರಭಾವವೂ ಬೀರದ ಆ ಹಾಳೆ ಎಂದರೆ ಯಾವುದೋ ಕಂಪನಿಯ ಗೋಲ್ಡ್ ಕವರಿಂಗ್ ಜಾಹೀರಾತು. ಚಂದಮಾಮ ಪ್ರಭಾವ ಬೀರಿದಷ್ಟು ಬಾಲಮಿತ್ರ, ಅಮರಚಿತ್ರಕಥೆ ಇತ್ಯಾದಿಗಳು ನನ್ನ ಮೇಲೆ ಪ್ರಭಾವ ಬೀರಲಿಲ್ಲ.

ಅಂದಿನ ದಿನಗಳಲ್ಲಿ, ಯಾವಾಗಲಾದರೂ ಒಮ್ಮೆ ಭಾನುವಾರದಂದು ಬೆಂಗಳೂರಿನ ಅವೆನ್ಯೂ ರಸ್ತೆಗೆ ಹೋಗಿ, ರಸ್ತೆಯ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪುಸ್ತಕಗಳಲ್ಲಿ ಹಳೆಯ ಚಂದಮಾಮ ಪುಸ್ತಕಗಳನ್ನು ತರುತ್ತಿದ್ದುದು ಉಂಟು. ಹಾಗೆ ಹುಡುಕುವಾಗ ಬಹುಶಃ ಫಿಸಿಕ್ಸ್, ಕೆಮಿಸ್ಟ್ರಿ ಪುಸ್ತಕಗಳು ಇರುತ್ತಿತ್ತು. ಆದರೆ ಯಾವತ್ತೂ ತೆಗೆದುಕೊಳ್ಳಲಿಲ್ಲಪ್ಪಾ! ಸುಮ್ನೆ ಯಾಕೆ ರಿಸ್ಕ್ ಅಂತ.

ಹತ್ತಾರು ದಪ್ಪ ಪುಸ್ತಕಗಳನ್ನು ಕೊಂಡುಕೊಂಡ
ನಮ್ಮ ಮನೆಯ ಬಳಿಯೇ ಸ್ನೇಹಿತನೊಬ್ಬನಿದ್ದ ಸುಬ್ರಮಣಿ ಅಂತ. ತಕ್ಕಮಟ್ಟಿಗೆ ಸಿರಿವಂತ ಫ್ಯಾಮಿಲಿ. ಅವನ ತಾಯಿ ಆ ದಿನಗಳಲ್ಲೇ ಕೆಲಸಕ್ಕೆ ಹೋಗುತ್ತಿದ್ದರು. ನಮ್ಮೊಂದಿಗೆ ಅವೆನ್ಯೂ ರಸ್ತೆಗೆ ಬಂದು ಬ್ಯಾಗ್ ತುಂಬಾ ಪುಸ್ತಕಗಳನ್ನು ತರುತ್ತಿದ್ದ. ಒಮ್ಮೆಯಂತೂ ಐದೋ ಆರೋ ಚಂದಮಾಮಗಳನ್ನು ಹೊಲೆದ ಹತ್ತಾರು ದಪ್ಪ ಪುಸ್ತಕಗಳನ್ನು ಕೊಂಡುಕೊಂಡ, ಅಂದರೆ ಕನಿಷ್ಠ ಐವತ್ತು ಚಂದಮಾಮಗಳು. ಮನೆಗೆ ವಾಪಸ್ ಬಂದಾಗ ಅವೆಲ್ಲಾ ಪುಸ್ತಕಗಳನ್ನು ನಮ್ಮ ಮನೆಯಲ್ಲಿ ಇಟ್ಟು ಮರುದಿನ ತೆಗೆದುಕೊಂಡು ಹೋಗ್ತೀನಿ ಅಂತ ಇನ್ನೆಲ್ಲಿಗೋ ಹೋಗಬೇಕು ಅಂತ ಹೊರಟ. ಆ ಹೊತ್ತಿನಿಂದ ಮರುದಿನ ಅವನು ವಾಪಸ್ ಬರುವತನಕ ನಮ್ಮ ಕೈಯಲ್ಲಿ ಒಂದಲ್ಲಾ ಒಂದು ದಪ್ಪ ಪುಸ್ತಕ ಇತ್ತು. ಬನ್ನಿ ಒಂದೆರಡು ಕಥೆಗಳನ್ನು ಓದೋಣ.

Srinath Bhalle Column: He Is Childhood Days Chandamama

ಭಿಕ್ಷುಕರನ್ನು ಅವರಂತೆಯೇ ಬೇಡಿ ಆಡಿಕೊಳ್ಳುತ್ತಿದ್ದ
ಒಂದೂರಿನಲ್ಲಿ ಬಹಳ ಸುಂದರನಾದ ಯುವಕನೊಬ್ಬನಿದ್ದ, ಅವನು ತುಂಬಾ ತರಲೆ ಮಾಡುತ್ತಿದ್ದ. ದೊಡ್ಡವರನ್ನು ಆಡಿಕೊಳ್ಳುತ್ತಿದ್ದ. ಚಿಕ್ಕವರನ್ನು ಪೀಡಿಸುತ್ತಿದ್ದ. ಕುಂಟು ಕಾಲಿನವರನ್ನು ಅವರಂತೆಯೇ ನಡೆದು ಆಡಿಕೊಳ್ಳುತ್ತಿದ್ದ. ಭಿಕ್ಷುಕರನ್ನು ಅವರಂತೆಯೇ ಬೇಡಿ ಆಡಿಕೊಳ್ಳುತ್ತಿದ್ದ. ಒಟ್ಟಾರೆ ಅವನೆಂದರೆ ಕೆಲವರಿಗೆ ಭಯ, ಹಲವರಿಗೆ ಹೇಸಿಗೆ.

ಮುಂದಿನ ದಿನಗಳಲ್ಲಿ ಇವನಿಗೂ ಮದುವೆಯಾಯಿತು. ಸುಂದರಳಾದ ಹೆಂಡತಿಯೊಡನೆ ಅವನ ಸಂಸಾರ ಚೆನ್ನಾಗಿ ನಡೆದಿತ್ತು. ಇಷ್ಟೆಲ್ಲಾ ಆದರೂ, ಅವನ ಕೀಟಲೆಯ ಗುಣವು ತಗ್ಗದೇ, ಹೆಚ್ಚುತ್ತಲೇ ಸಾಗಿತ್ತು. ಅವನ ಹೆಂಡತಿ ಗರ್ಭಿಣಿಯಾದಳು. ಕೂಸು ಹುಟ್ಟಲು ಇನ್ನು ಕೆಲವೇ ದಿನಗಳು ಇರುವಾಗ ಇವನಿಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಈ ಹಿಂದೆ ಅವನು ಯಾವ ಹೆಳವರನ್ನು, ಭಿಕ್ಷುಕರನ್ನು, ಮೂಕರನ್ನು ಆಡಿಕೊಂಡು ಗೋಳಾಡಿಸಿದ್ದನೋ ಅವರೆಲ್ಲರೂ ನೊಂದು ಅಳುತ್ತಾ ನಿಂತಿರುವುದು ಕಂಡಿತು.

ಆಡಿಕೊಂಡು ನಕ್ಕಿದ್ದ ಎಲ್ಲರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ
ಅದೇ ಸಮಯದಲ್ಲಿ ಹುಟ್ಟಿದ ಕೂಸಿಗೆ ಕಾಲು ಊನವಾಗಿತ್ತು, ಕಣ್ಣು ಕುರುಡಾಗಿತ್ತು. ಅತ್ಯಂತ ಕುರೂಪವಾದ ಕೂಸನು ಕಂಡು ಈ ಸುಂದರನ ಎದೆ ಧಸಕ್ಕೆಂದು ಹೃದಯವೇ ಒಡೆದು ಹೋಗುವಂತೆ ಅಳುತ್ತಾ ತಾನು ಆಡಿಕೊಂಡು ನಕ್ಕಿದ್ದ ಎಲ್ಲರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ. ಅದೇ ಕ್ಷಣದಲ್ಲಿ ಥಟ್ಟನೆ ಎಚ್ಚರಿಕೆಯಾದವನಿಗೆ ಕೂಸು ಹುಟ್ಟಿದೆ ಎಂಬ ಸುದ್ದಿ ಬಂತು. ಓಡಿಹೋಗಿ ಕೂಸನ್ನು ನೋಡಿದಾಗ, ಅಲ್ಲೊಂದು ಸುಂದರವಾಗಿ ನಸುನಗುತ್ತಾ ಮಲಗಿದ್ದ ಕೂಸು ಕಂಡಿತು. ಯಾವ ಅಂಗವೂ ಊನ ಇರದ ಕೂಸನ್ನು ಕಂಡಾಗ, ತಾನು ಗೋಳಾಡಿಸಿದವರೆಲ್ಲ ಕ್ಷಮಿಸಿದ್ದಾರೆ ಎಂಬ ಸಮಾಧಾನ ಹೊಂದಿದ. ಅಂದಿನಿಂದ ಯಾರನ್ನೂ ಹೀಯಾಳಿಸದೇ ಎಲ್ಲರನ್ನೂ ಗೌರವದಿಂದ ನೋಡುತ್ತಿದ್ದ.

ಗುರಿ ಚೆನ್ನಾಗಿದೆ ಅಂತ ಹೊಗಳಿ ಒಂದಾಣೆ ಕೊಟ್ಟರು
ಒಂದೂರಿನಲ್ಲಿ ಒಬ್ಬ ಹುಡುಗನಿದ್ದ. ಓದು ಬರಹದಲ್ಲಿ ಆಸಕ್ತಿ ಇಲ್ಲದೆ ಸುಮ್ಮನೆ ದಿನವಿಡೀ ಬೀದಿ ಅಲೆಯುತ್ತಿದ್ದ. ಒಮ್ಮೆ ಬೇರೇನೂ ಕೆಲಸವಿಲ್ಲದೇ ಹಾದಿಯಲ್ಲಿ ಹೋಗುತ್ತಿರಲು ಒಂದು ಮಾವಿನ ತೋಪು ಕಾಣಿಸಿತು. ಅವನು, ಕೈಗೊಂದು ಕಲ್ಲನ್ನು ತೆಗೆದುಕೊಂಡು ಹಣ್ಣಿಗೆ ಗುರಿಯಿಟ್ಟು ಬೀಸಿ ಹೊಡೆದ. ಅದು ಗುರಿ ತಪ್ಪಿ ಹಾದಿಯಲ್ಲಿ ಬರುತ್ತಿದ್ದ ಒಬ್ಬ ಹಿರಿಯರಿಗೆ ತಾಕಿತು. ಅವರೊಮ್ಮೆ ನೋವಿನಿಂದ ಕೂಗಿದರೂ, ಆ ನಂತರ ಆ ಹುಡುಗನಿಗೆ ನಿನ್ನ ಗುರಿ ಚೆನ್ನಾಗಿದೆ ಅಂತ ಹೊಗಳಿ ಒಂದಾಣೆ ಕೊಟ್ಟು ನಡೆದರು.

ಧನಿಕರಿಂದ ಪೆಟ್ಟು ಬಿತ್ತು, ಪೆಟ್ಟು ತಿಂದ ಹುಡುಗನಿಗೆ ಬುದ್ದಿ ಬಂತು
ಇದರಿಂದ ಬಹಳ ಉತ್ತೇಜನಗೊಂಡ ಅವನು ನಂತರ ಯಾರು ಬರುತ್ತಾರೆ ಅಂತ ಕಾದು ನಿಂತ. ಅದೇ ವೇಳೆಗೆ, ಧನಿಕರೊಬ್ಬರು ತಮ್ಮ ಸಾರೋಟಿನಲ್ಲಿ ಬರುತ್ತಿದ್ದರು. ಹುಡುಗನು ಮತ್ತೊಂದು ಕಲ್ಲನ್ನು ತೆಗೆದುಕೊಂಡು ಧನಿಕರಿಗೆ ಗುರಿಯಿಟ್ಟು ಹೊಡೆದ. ನೋವನ್ನುಂಡು, ಕೆಳಗಿಳಿದು ಬಂದ ಅವರು, ಸುತ್ತಲೂ ನೋಡಿದಾಗ ಈ ಹುಡುಗ ಕಣ್ಣಿಗೆ ಬಿದ್ದ. ಇದು ಇವನದ್ದೇ ಕೆಲಸ ಎಂದು ಅರಿತು, ತಮ್ಮ ಬಳಿಗೆ ಬಾ ಎಂದು ಕರೆದರು. ಬಡ ಮುದುಕರೇ ಒಂದಾಣೆ ನೀಡಿರುವಾಗ, ಧನಿಕರು ಇನ್ನೂ ಹೆಚ್ಚು ಹಣ ನೀಡುತ್ತಾರೆ ಎಂಬಾಸೆಯಿಂದ ಓಡಿ ಬಂದ ಹುಡುಗನಿಗೆ, ಧನಿಕರಿಂದ ಪೆಟ್ಟು ಬಿತ್ತು. ಪೆಟ್ಟು ತಿಂದ ಹುಡುಗನಿಗೆ ಬುದ್ದಿ ಬಂತು. ಇನ್ನೆಂದೂ ತಪ್ಪು ಮಾಡದೇ ಒಳ್ಳೆಯ ಹುಡುಗನಾದ.

ಇಂಥಾ ಹಲವಾರು ಉತ್ತಮ ನೀತಿಯ ಕಥೆಗಳು ನನ್ನಲ್ಲಿ ಅಚ್ಚು ಒತ್ತಿ ಕೂತಿದೆ. ಇಂಥಾ ಉತ್ತಮವಾದ ಚಂದಮಾಮ ಕಥೆಗಳನ್ನು ನೀವೂ ಓದಿರುತ್ತೀರಿ ಅಂತಾದರೆ ಹಂಚಿಕೊಳ್ಳಿ ಆಯ್ತಾ? 1947ರಲ್ಲಿ ಆರಂಭವಾದ ಈ ಪತ್ರಿಕೆಯು 2013ರಲ್ಲಿ ತನ್ನ ಕೊನೆಯ ಪತ್ರಿಕೆಯನ್ನು ಹೊರತಂದು ಪ್ರಸಾರ ನಿಲ್ಲಿಸಿತಂತೆ. ಈ ವಿಷಯ ಖೇದನೀಯವೇ ಆದರೂ, ಇಂದಿಗೂ ನಮ್ಮೆಲ್ಲರಲ್ಲೂ ಈ ಚಂದಮಾಮ ಜೀವಂತ. ಏನಂತೀರಾ?

English summary
Srinath Bhalle Column: Remembering Childhood Day's Chandamama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X