• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಅಬ್ಬಬ್ಬಾ! ಎಂಥಾ ಕಠೋರ ನುಡಿಗಳು! ಒಬ್ಬ ಮನುಷ್ಯನನ್ನು ಕೆಣಕಬೇಕು ಅಂದ್ರೆ ಇಷ್ಟು ಮಾತು ಸಾಕು ಬಿಡಿ. 'ರಾಯರು ಬಂದರು ಮಾವನ ಮನೆಗೆ' ಚಿತ್ರದಲ್ಲಿ ನಾಯಕ-ನಾಯಕಿಯರ ಮಧ್ಯೆ ಒಂದಷ್ಟು ಹಾಸ್ಯ ಸನ್ನಿವೇಶಗಳಿವೆ. ಒಬ್ಬರು ಮತ್ತೊಬ್ಬರನ್ನು ಅರ್ಥವಾಗದ ಭಾಷೆಯಲ್ಲಿ ಬೈದಾಗ, ಆ ಮತ್ತೊಬ್ಬರು ಕೇಳೋದು "ಆ? ಇಷ್ಟೊಂದು ಬೈಗುಳಾನಾ" ಅಂತ. ಹಾಗಾಯ್ತು ಈ ಮಾತು "ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡ್ಕೊಂಡಿದ್ದೀರಾ?"

ಮೊದಲಿಗೆ ಒಂದು ಅರ್ಥ ಮಾಡಿಕೊಳ್ಳೋಣ. ಯಾವುದೇ ಮಾತಾಗಲಿ, ಅದನ್ನು ಆಡುವ ರೀತಿ ಅರ್ಥಾತ್ tone ಮೇಲೆ ಅವಲಂಬಿತ. "ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡಿದ್ದೀರಾ?" ಅನ್ನೋದನ್ನ "ನಿಮ್ಮ ಮುಖವೇ ಕನ್ನಡಿಯ ಹಾಗಿರುವಾಗ" ಅಂತ ಹೇಳದೇ ಹೋದರೂ ಅರ್ಥೈಸಿಕೊಳ್ಳುವ ಹಾಗೆ ಆಡಿದರೆ ಕೇಳಿಸಿಕೊಂಡವರ ಕೆನ್ನೆ ಕೆಂಪಾಗುತ್ತೆ, ನಾಚಿಕೆಯಿಂದ ಅಥವಾ ಹೆಮ್ಮೆಯಿಂದ. ಆದರೆ ಅದೇ ಮಾತು "ನೀವು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡಿದ್ದೀರಾ?" ಅಂತ ವ್ಯಂಗ್ಯವಾಗಿ ಆಡಿದರೂ ಕೇಳಿಸಿಕೊಂಡವರ ಕೆನ್ನೆ ಕೆಂಪಾಗುತ್ತದೆ. ಆದರೆ ಸಿಟ್ಟಿನಿಂದ. ಈ ಕೆನ್ನೆ ಯಾವಾಗ್ಯಾವಾಗ ಕೆಂಪಾಗುತ್ತೋ ಆ ಕೆಂಪಣ್ಣನಿಗೇ ಗೊತ್ತು!

'ಅಂತ'ಕನ ದೂತರಿಗೆ ಕಿಂಚಿತ್ತೂ ದಯವಿಲ್ಲ, ನಮ್ಮದೂ ಅಂತ ಸ್ಟೇಷನ್ ಬಂದಾಗ ಇಳಿಯಲೇಬೇಕು

ಒಬ್ಬರ ಸೌಂದರ್ಯವನ್ನು (ಉದಾಹರಣೆಗೆ) ಹೊಗಳುವ ಅಥವಾ ತೆಗಳುವ ಉದ್ದೇಶದಿಂದ ಟೋನ್ ಬದಲಿಸಿ ಆಡುವ ಈ ಒಂದು ವಾಕ್ಯ ವ್ಯತ್ಯಾಸ ಹೇಗಪ್ಪಾ ಎಂದರೆ "ಕೈ ತೊಳೆದು ಮುಟ್ಟಬೇಕು" ಅಥವಾ "ಮುಟ್ಟಿ ಕೈತೊಳೆದುಕೊಳ್ಳಬೇಕು" ಎಂಬಷ್ಟು ಅಷ್ಟೇ! ಯಾರನ್ನಾದರೂ ಕೈ ತೊಳೆದು ಮುಟ್ಟುವ ಮುನ್ನ ಅಥವಾ ಮುಟ್ಟಿ ಕೈ ತೊಳೆಯುವ ಮುನ್ನ ಒಂದು ವಿಷಯ ಆಲೋಚಿಸಿ 'ಅವರನ್ನು ಮುಟ್ಟೋದ್ಯಾಕೆ' ಅಂತ! ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ. ಸುಮ್ ಸುಮ್ನೆ ಯಾರು ಯಾರನ್ನೆಲ್ಲಾ ಮುಟ್ಟಿ ತಟ್ಟಿಸಿಕೊಳ್ಳದಿರಿ.

ಈ ಜಗತ್ತಿನಲ್ಲಿ ಯಾರು ಅತೀ ಸುಂದರಿ?

ಈ ಜಗತ್ತಿನಲ್ಲಿ ಯಾರು ಅತೀ ಸುಂದರಿ?

ಓರ್ವ ಮಲತಾಯಿ ಮಹಾರಾಣಿಯು ದಿನವೂ ಕನ್ನಡಿಯ ಮುಂದೆ ಕೂತು "ಈ ಜಗತ್ತಿನಲ್ಲಿ ಯಾರು ಅತೀ ಸುಂದರಿ?" ಎಂದು ಕೇಳುವಾಗ ಆ ಕನ್ನಡಿ "ನೀನೇ" ಎನ್ನುವಷ್ಟೂ ದಿನ ಆ ಕನ್ನಡಿ ಅವಳಿಗೆ ಅಪ್ಯಾಯಮಾನವಾಗಿತ್ತು. ಆದರೆ ಆ ಒಂದು ದಿನ ಅವಳ ದಿನವಾಗಿರಲಿಲ್ಲ. ಒನಪು ವಯ್ಯಾರದಿಂದ "ಈ ಜಗತ್ತಿನಲ್ಲಿ ಯಾರು ಅತೀ ಸುಂದರಿ?" ಎಂದು ಕೇಳುವಾಗ "ನಾನೇ ತಾನೇ?" ಎಂಬುವುದೇ ಮುಂದಿನ ಆಡದ ಮಾತುಗಳಾಗಿತ್ತು. ಇನ್ಯಾರು ಇರಲು ಸಾಧ್ಯ ಎಂಬ ಅಹಂಭಾವ. ಆದರೇನು ಮಾಡೋದು? ಕನ್ನಡಿ ಹೇಳಿಯೇಬಿಟ್ಟಿತು "snow white ಈ ಜಗತ್ತಿನ ಅತೀ ಸುಂದರಿ" ಅಂತ. ಈಗ ಹೀಗೆ ಯೋಚಿಸಿ... ರಾಣಿಗೆ ಆ ಕನ್ನಡಿ, ಕನ್ನಡದಲ್ಲೇ ಉತ್ತರಿಸಿದ್ರೆ ಹೇಗಿರುತ್ತಿತ್ತು? "ನಿನ್ನ ಮುಖ ಕನ್ನಡಿಯಲ್ಲಿ ನೋಡ್ಕೊಂಡಿದ್ದೀಯಾ? ನೀನ್ಯಾವ ಮಹಾ ಸುಂದ್ರಿ? ಹೋಗ್ ಅತ್ಲಾಗೆ! Snow White ಈ ಜಗತ್ತಿನ ಅತೀ ಸುಂದರಿ!"

 ಉತ್ತರ ಕುಮಾರನ ಪೌರುಷಕ್ಕೆ ಏನೆನ್ನೋದು?

ಉತ್ತರ ಕುಮಾರನ ಪೌರುಷಕ್ಕೆ ಏನೆನ್ನೋದು?

ಹೀಗೊಂದು ಮಹಾಭಾರತದ ಪ್ರಸಂಗ. ತಾನೀಗ ರಣರಂಗಕ್ಕೆ ಹೋಗಿ ಬರುತ್ತೇನೆ, ನಿಮಗೇನೇನು ತರಲಿ ಎಂದು ಪಟ್ಟಿ ಮಾಡಿಕೊಡಿ ಎಂದು ಲಲನಾಮಣಿಯರ ಮಧ್ಯೆ ಕೂತು ಕೊಚ್ಚಿಕೊಳ್ಳುತ್ತಾ ಇದ್ದ ಉತ್ತರಕುಮಾರ. ರಣರಂಗದಲ್ಲಿ ಯಾರೆಲ್ಲಾ ಇದ್ದಾರೆ ಎಂದು ಅವನು ಕೇಳಿದಾಗ "ಭೀಷ್ಮ, ದ್ರೋಣ, ಕರ್ಣ... " ಎಂಬ ಉತ್ತರ ಬರುತ್ತದೆ. "ಭೀಷ್ಮರು ವೃದ್ದರು, ನನ್ನ ಸಾಮರ್ಥ್ಯ ಏನು? ಅವರ ಸಾಮರ್ಥ್ಯ ಏನು? ಇನ್ನು ದ್ರೋಣಾಚಾರ್ಯರು. ಪಾಠ ಹೇಳಿಕೊಡುವವರಿಗೆ ಯುದ್ದ ಮಾಡಿ ಗೊತ್ತೇ? ಇನ್ನು ಕರ್ಣನೋ ಸೂತಪುತ್ರ... ನನ್ನ ಸರಿಸಮಕ್ಕೆ ನಿಂತು ಹೋರಾಡುವವರು ಯಾರೂ ಬಂದ ಹಾಗಿಲ್ಲ" ಎಂದು ಹಳಿಯಿಲ್ಲದೆ ರೈಲು ಬಿಡುತ್ತಿದ್ದವನಿಗೆ ಬೃಹನ್ನಳೆ "ನಿನ್ನ ಮುಖ ಕನ್ನಡಿಯಲ್ಲಿ ನೋಡಿಕೊಂಡಿದ್ದೀಯಾ?" ಎಂದಿದ್ದರೆ ಅದು ವ್ಯಂಗ್ಯವಲ್ಲದೆ ಬೇರೇನೂ ಆಗಲು ಸಾಧ್ಯ?

ತಲೆಯ ಮೇಲೂ ಹೊರಲು ಯೋಗ್ಯತೆ ಪಡೆಯುವ 'ಪಾದರಕ್ಷೆ'!

ದಪ್ಪಗಿದ್ದರೆ ದಪ್ಪ, ಸಣ್ಣಗಿದ್ದರೆ ಸಣ್ಣ

ದಪ್ಪಗಿದ್ದರೆ ದಪ್ಪ, ಸಣ್ಣಗಿದ್ದರೆ ಸಣ್ಣ

ಈ ಜಗತ್ತಿನಲ್ಲಿ ಸದಾ ಕಾಲ ಇದ್ದಿದ್ದನ್ನು ಇದ್ದ ಹಾಗೇ ಹೇಳೋ ಅಂಥದ್ದು ಏನಾದರೂ ಇದ್ದಲ್ಲಿ ಅದು ಕನ್ನಡಿ. ದಪ್ಪಗಿದ್ದರೆ ಕನ್ನಡಿಯೊಳಗಿನವರೂ ದಪ್ಪವೇ... ಸಣ್ಣಗಿದ್ದರೆ ಕನ್ನಡಿಯೊಳಗಿನವರೂ ಸಣ್ಣ... ರೂಪ, ಕುರೂಪ, ವಕ್ರ, ವಿಕಾರ ಇತ್ಯಾದಿ ಎಲ್ಲವೂ ಯಥಾವತ್ತು. ನಾವು ಹೇಗಿದ್ದರೆ ಹಾಗೇ ಕಾಣುತ್ತೇವೆ ಎನ್ನುವುದರಿಂದಲೇ ರಂಗದ ಮೇಲೆ ಹೋಗೋ ಮುನ್ನ ಅದರ ತಾಲೀಮು ನಡೆಸೋವಾಗ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿಕೊಳ್ಳಿ ಅಂಬೋದು. ಅಲ್ಲವೇ?

ತನ್ನಂಥಾ ಚೆಲುವೆ / ಚೆಲುವ ಯಾರೂ ಇಲ್ಲ

ತನ್ನಂಥಾ ಚೆಲುವೆ / ಚೆಲುವ ಯಾರೂ ಇಲ್ಲ

ಆದರೆ ಕನ್ನಡಿಯ ಮುಂದೆ ನಿಂತು ತನ್ನಂಥಾ ಚೆಲುವೆ / ಚೆಲುವ ಯಾರೂ ಇಲ್ಲ ಎಂದುಕೊಳ್ಳುವವರೂ, ಚಿತ್ರ ತೆಗೆಸಿಕೊಂಡು ತಮ್ಮ ಭಾವಚಿತ್ರ ನೋಡಿದಾಗ 'ನಾನು ಚೆನ್ನಾಗಿದ್ದೀನಿ ಆದರೆ ಫೋಟೋಜೆನಿಕ್ ಮುಖ ಅಲ್ಲ' ಎಂದುಕೊಳ್ಳೋದು ಸತ್ಯ. ಇದು ಯಾರ ತಪ್ಪೂ ಅಲ್ಲ ಬಿಡಿ. ನೀವು ಇದ್ದಂತೆಯೇ ಇರುತ್ತೀರಾ, ಕಾಣುತ್ತೀರಾ, ಬೀಳುತ್ತೀರಾ. ಆದರೆ ಎಡವಟ್ಟಾಗೋದು ಎಲ್ಲಿ ಎಂದರೆ ನಮ್ಮನ್ನೇ ನಾವು ನೋಡಿಕೊಂಡಾಗ ಹೇಗೆ ವಿವಿಧ ರೀತ್ಯಾ styleನಲ್ಲಿ ನಿಲ್ಲುತ್ತೇವೆಯೋ ಹಾಗೆಯೇ ಚಿತ್ರ ತೆಗೆಸಿಕೊಳ್ಳದೆ conscious ಆಗಿ ಗಂಭೀರವಾಗಿ ಅಥವಾ ಅತೀ ಗಂಭೀರವಾಗಿ ಧ್ವಜಾರೋಹಣಕ್ಕೆ ಸಿದ್ಧವಾಗಿರುವಂತೆ ನಿಂತಾಗ ಬರೀ ಮುಖ ಫೋಟೋಜೆನಿಕ್ ಅಲ್ಲ ಇಡೀ ದೇಹ ಫೋಟೋಜೆನಿಕ್ ಆಗಿ ಇರೋದಿಲ್ಲ.

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ

ಕನ್ನಡಿಯ ಮುಂದೆ ಹೇಗ್ಹೇಗೋ ಮುಖ!

ಕನ್ನಡಿಯ ಮುಂದೆ ಹೇಗ್ಹೇಗೋ ಮುಖ!

ಒಂದು ವಿಷಯ ಕೇಳ್ತೀನಿ ಗೊತ್ತಿದ್ದರೆ ಹೇಳಿ. ಯಾರೂ ನೋಡದೇ ಇದ್ದಾಗ, ಕನ್ನಡಿಯ ಮುಂದೆ ನಿಂತ ಕೂಡಲೇ ಮುಖ ಹೇಗೆ ಹೇಗೋ ಮುಖ ಮಾಡುವುದು ಯಾಕೆ? ವಿಧವಿಧವಾದ ದೇಹದ ಭಂಗಿ ಮಾಡಿಕೊಂಡು ನೋಡೋದು ಯಾಕೆ?

ಇದ್ದಿದ್ದನ್ನು ಇದ್ದ ಹಾಗೇ ತೋರಿಸುವ ಕನ್ನಡಿ ಎಂದೆವೇನೋ ನಿಜ. ಆದರೆ ಆ ಕನ್ನಡಿಯೇ ಪೊಳ್ಳಾದರೆ? ನೀವು ಒಳ್ಳೆಯವರು ಅಂದುಕೊಂಡವರು ನಿಜಕ್ಕೂ ಗೋಮುಖವ್ಯಾಘ್ರ ಎಂದು ಅರಿತಾಗ ಹೇಗಾಗುತ್ತದೋ ಅದೇ ಭಾವನೆ ಮೂಡುತ್ತೆ ಕನ್ನಡಿಯೇ ಪೊಳ್ಳಾದರೆ ಅನ್ನೋ ಮಾತು ಕೇಳುವಾಗ. "ಅಂಗಡಿಯಲ್ಲಿನ ಟ್ರಯಲ್ ರೂಮಿನಲ್ಲಿ ಬಟ್ಟೆ ಬದಲಿಸುವಾಗ ಎಚ್ಚರವಿರಲಿ!", "ಹೋಟೆಲ್ ರೂಮಿನ ಕನ್ನಡಿಯ ಬಗ್ಗೆ ಎಚ್ಚರವಿರಲಿ!", "ಆ ಬೆಡ್ ರೂಮಿನಲ್ಲಿ ಇದ್ದದ್ದು ಕನ್ನಡಿ ಆದರೆ ಬರೀ ಕನ್ನಡಿ ಅಲ್ಲ" ಎಂಬೆಲ್ಲಾ ಜ್ಞಾನ ಹಂಚುವ, ಬೆಚ್ಚಿ ಬೀಳಿಸುವ ಅಸಂಖ್ಯಾತ ವಿಡಿಯೋಗಳನ್ನೂ ನೀವೂ ನೋಡಿರ್ತೀರಾ. ಇವೆಲ್ಲಾ ನೋಡಿದರೆ ತಲೆ ಕೆಟ್ಟೇ ಹೋಗುತ್ತದೆ ಎನಿಸಿದರೂ ಇವೆಲ್ಲಾ ನಡೆಯುತ್ತದೆ ಎಂಬುದೇ ಖೇದಕರ ಸಂಗತಿ. ಕನ್ನಡಿಯನ್ನು ನಂಬೋದು ಕಷ್ಟ ಎಂದಾಗ ನಮ್ಮ ನೆರಳನ್ನು ನಂಬಬಹುದಾ ಬೇಡವಾ ಎಂಬ ಪ್ರಶ್ನೆ ಎದುರಾಗುತ್ತೆ.

ಶುಕ್ರವಾರ ಕನ್ನಡಿ ಒಡೆದರೆ ಅಪಶಕುನವೆ?

ಶುಕ್ರವಾರ ಕನ್ನಡಿ ಒಡೆದರೆ ಅಪಶಕುನವೆ?

ಜೀವನದಲ್ಲಿ ನಾವು ಕಾಣೋ ವಿಷಯದೆಲ್ಲದರ ಜೊತೆಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಭೀತಿ ಅಂಟಿಕೊಂಡಿರುವಂತೆ ಕನ್ನಡಿಯ ವಿಷಯದಲ್ಲೂ ಇದೆ. ಶುಕ್ರವಾರ ಕನ್ನಡಿ ಒಡೆದರೆ ಅಪಶಕುನ ಎಂದು ಹೇಗೆ ನಮ್ಮಲ್ಲಿ ಒಂದು ನಂಬುಗೆ ಇದೆಯೋ, ಹಾಗೆ ಕೆಲವರಲ್ಲಿ ತನ್ನಿಂದ ಕನ್ನಡಿ ಒಡೆಯುತ್ತದೆ, ಅದರಿಂದ ತನಗೆ ಶಕುನ ಕೆಟ್ಟದಾಗಲಿದೆ ಎಂಬ ಭೀತಿ ಕೆಲವರಲ್ಲಿ ಸದಾ ಕಾಲ ಕಾಡುತ್ತಿರುತ್ತದೆ. ತಾನು ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಅತೀಂದ್ರಿಯ ಶಕ್ತಿಯ ಸಂಮೋಹಕ್ಕೆ ಒಳಗಾಗುತ್ತೇನೆ ಎಂಬ ಭೀತಿ ಕೆಲವರಲ್ಲಿರುತ್ತದೆ. ಕನ್ನಡಿಯ ವಿಷಯ ಏನೇನೋ ನಂಬಿಕೆಗಳು ಮತ್ತು ಅದರ ಸುತ್ತಲಿನ ಭೀತಿಗೆ catoptrophobia ಎನ್ನುತ್ತಾರೆ. ಅದರಲ್ಲಿನ ಒಂದು ಪ್ರಭೇದವೇ Eisoptrophobia. ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳಲು ಭೀತಿ ಇರುವಿಕೆಗೆ Eisoptrophobia ಎನ್ನುತ್ತಾರೆ.

ಸ್ಪಾಟ್ ಲೈಟ್ ಅಥವಾ ಲೈಮ್ ಲೈಟ್ ಸಿಂಡ್ರೋಮ್

ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ

ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ

ನಾ ಕಂಡಂತೆ ಕೆಲವು ಸಿನಿಮಾಗಳಲ್ಲಿ ಕನ್ನಡಿಯ ಬಳಕೆ ಅದ್ಭುತವಾಗಿ ಮಾಡಿರುತ್ತಾರೆ. ಬೆಲ್ಜಿಯನ್ ಗಾಜಿನಿಂದ ಮಾಡಿದ್ದ ಅಸಂಖ್ಯಾತ ಕನ್ನಡಿಯ ಚೂರುಗಳು "ಮುಘಲ್ - ಎ - ಅಜಮ್"ನ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ಹಾಡಿನ ವಿಶೇಷತೆ. ಆ ಹಾಡಿನ ಚಿತ್ರೀಕರಣಕ್ಕೆ ಆದ ವೆಚ್ಚ ಮಿಕ್ಕ ಸಿನಿಮಾದ ವೆಚ್ಚಕ್ಕಿಂತ ಹೆಚ್ಚು ಎನ್ನುತ್ತಾರೆ ಬಲ್ಲವರು. ಮತ್ತೊಂದು ಸಿನಿಮಾದಲ್ಲಿ ನಾಯಕ ಖಳನಾಯಕನನ್ನು ಅಟ್ಟಿಸಿಕೊಂಡು ಹೋಗುತ್ತಾನೆ. ಖಳನಾಯಕ ಒಂದು ಕೋಣೆಯೊಳಗೆ ಹೋಗುತ್ತಾನೆ. ಆ ಕೋಣೆಯಲ್ಲಿ ಎಲ್ಲೆಲ್ಲೂ ಕನ್ನಡಿಗಳನ್ನು ಜೋಡಿಸಿರಲಾಗುತ್ತದೆ. ಯಾರು ಎಲ್ಲಿದ್ದಾರೆ ಎಂಬ ಗೊಂದಲ ಸೊಗಸಾಗಿ ಚಿತ್ರೀಕರಿಸಲಾಗಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಕಾಳಿದಾಸನನ್ನು ಮರೆಯೋದುಂಟೆ? ಜೀವನದಲ್ಲಿ ಮೊದಲ ಬಾರಿಗೆ ಕನ್ನಡಿಯ ಮುಂದೆ ನಿಂತ ಕುರುಬ, ಕನ್ನಡಿಯಲ್ಲಿ ಕಂಡ ರಾಜ ಪೋಷಾಕಿನ ವ್ಯಕ್ತಿ ತಾನೇ ಎಂದು ಅರಿವಾಗದೇ 'ಮಾರಾಜರು ಬಂದವ್ರೆ' ಎನ್ನುವ ಮುಗ್ದತೆ, ನಂತರ 'ಈ ಕಂಡೀಲೂ, ಈ ಕಂಡೀಲೂ ನಾನೇ.. ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ' ಎಂದು ಕುಣಿದಾಡುವ ಸನ್ನಿವೇಶ ನಿಜಕ್ಕೂ ಸೊಗಸಾಗಿದೆ.

ಎಲ್ಲೆಲ್ಲೂ ಕನ್ನಡಿ ಇರಬೇಕು ಅಂತಲೇ?

ಎಲ್ಲೆಲ್ಲೂ ಕನ್ನಡಿ ಇರಬೇಕು ಅಂತಲೇ?

ಒಂದು ವಿಡಿಯೋ ನೋಡ್ತಿದ್ದೆ. ಮೊದಲೇ ನವೆಂಬರ್ ತಿಂಗಳು ನಡೀತಿದೆ. 'ಎಲ್ಲೆಲ್ಲೂ ಕನ್ನಡೀಕರಣವಾಗಬೇಕು' ಅಂತ ಯಾರೋ ಕಂಠಪಾಠ ಮಾಡಿದಂತೆ ಕಂಠಬಿರಿದು ಹೇಳ್ತಿದ್ರು. ಆಗ ನನ್ನಲ್ಲಿ ಈ ಕನ್ನಡೀಕರಣ ಎಂದರೇನು? ಎಲ್ಲೆಲ್ಲೂ ಕನ್ನಡಿ ಇರಬೇಕು ಅಂತಲೇ? ಕನ್ನಡಿಯ ಒರೆಸೀಕರಣ ಮಾಡಬೇಕು ಅಂತಲೇ? ಎಂಬೆಲ್ಲಾ ಆಲೋಚನೆಗಳು ಹೆಬ್ಬಾವಿನಂತೆ ಸುತ್ತಿಕೊಂಡಿತು.

ಇಷ್ಟೆಲ್ಲಾ ವಿಷಯ ಹೇಗೆ ಹುಟ್ಟಿಕೊಂಡಿತು? ಆಗಾಗ (ವಾರಕ್ಕೆರಡು ಬಾರಿ) ಕನ್ನಡಿ ಒರೆಸುವ ಹವ್ಯಾಸ ಇಟ್ಟುಕೊಂಡಿದ್ದೀನಿ. ಕನ್ನಡಿ ಫಳಫಳ ಎನ್ನುತ್ತಿದ್ದರೆ ಮನಸ್ಸಿನ ಆಲೋಚನೆಗಳೂ ಥಳಥಳ ಹೊಳೆಯುತ್ತಂತೆ. ಕನ್ನಡಿ ಶುಭ್ರವಾಗಿದ್ದರೆ ಮನಸ್ಸೂ ಕನ್ನಡಿಯಂತೆ ಇರುತ್ತಂತೆ. ಹೀಗಾದ ಚಿಂತನೆಗಳನ್ನು ಹಂಚುತ್ತೇನೆ. ಹಾಗಿಲ್ಲದೆ ಇದ್ದಾಗ ತಲೆತಿನ್ನುವ ಅಥವಾ ತಲೆಗೆ ಹುಳು ಬಿಡುವ ಪ್ರಶ್ನೆ ಹಾಕಬೇಕು ಎನಿಸುತ್ತದೆ. ಏನು ಮಾಡ್ಲಿ ನೀವೇ ಹೇಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Have you ever seen your face in the mirror? This statement can be interpreted in a positive and negative way. Mirror always tells the truth and brings positiveness too. Kannada columnist Srinath Bhalle writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more