• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದಿನ ಕಾಲದಲ್ಲಿ ಸಿನೆಮಾ ನೋಡುವ ಮಜವೇ ಮಸ್ತಾಗಿತ್ತು!

By ಶ್ರೀನಾಥ್ ಭಲ್ಲೆ
|

ಇಂದಿನ ಮಾತುಕತೆಗಳು ಮುಖ್ಯವಾಗಿ ಸಿನಿಮಾ ಮಂದಿರ ಮತ್ತು ಸಿನಿಮಾ ಟಿಕೆಟ್'ನ ಸುತ್ತಮುತ್ತ. ತಾರೆಗಳು ಎಂಬ ದೇವರುಗಳು ಅಥವಾ ಅಭಿಮಾನಿ ದೇವತೆಗಳು ಒಂದು ಸೂರಿನ ಕೆಳಗೆ ಇರೋದ್ರಿಂದ ಅದನ್ನು 'ಮಂದಿರ' ಅಂತ ಕರೀತಾರೆ ಅಂತ ನಾನೇ ಅಂಬೋಣ!

ಸಿನಿಮಾ ಟಿಕೆಟ್ ಅಂದರೆ ಮೊದಲು ಮನಸ್ಸಿಗೆ ಬರೋದೇ ಕಾಲೇಜು ದಿನಗಳ ಲೀಲೆಗಳು. ಏನಂತೀರಾ?

"ಅಮ್ಮಾ, combined study'ಗೆ ಹೋಗ್ತಿದ್ದೀನಿ ಬರೋದು ಲೇಟಾಗುತ್ತೆ", "ಅಮ್ಮಾ, ಲೈಬ್ರರಿಗೆ ಹೋಗ್ತಿದ್ದೀನಿ ಊಟಕ್ಕೆ ಕಾಯಬೇಡ" ಇತ್ಯಾದಿ ಸಬೂಬು ಹೇಳಿ ಸಿನಿಮಾಕ್ಕೆ ಹೋಗೋದು ಮಾಮೂಲಿ. ಮರುದಿನ ಒಗೆಯಲು ಹಾಕಿದ ಶರ್ಟ್ ಅಥವಾ ಪ್ಯಾಂಟ್ ಜೇಬಿನಲ್ಲಿ ಟಿಕೆಟ್ ಸಿಕ್ಕಾಗ ಅಮ್ಮನಿಂದ ಬೈಸಿಕೊಳ್ಳೋದು ಸಿಕ್ಕಾಪಟ್ಟೆ ಕಾಮನ್. ಸುಳ್ಳು ಹೇಳಿ ಸಿನಿಮಾಕ್ಕೆ ಹೋಗುವಾಗ ಇದ್ದ ಬುದ್ದಿ, ಸಿನಿಮಾ ಮುಗಿಸಿಕೊಂಡು ಹೊರಗೆ ಬಂದ ಮೇಲೆ ಟಿಕೆಟ್ ಎಸೆಯಬೇಕು ಅಂತ ಇರೋಲ್ಲ?

ಮಾತು ಆಡಿ ಆದರೆ ಆಡುವ ಮುನ್ನ ಒಮ್ಮೆ ಯೋಚಿಸಿ

ಓದಿನ ದಿನಗಳಲ್ಲಿ ಹೆಚ್ಚು ಸಿನಿಮಾ ನೋಡ್ತಿರಲಿಲ್ಲ. ಒಮ್ಮೆಯಂತೂ ಬರೋಬ್ಬರಿ ನಾಲ್ಕು ವರ್ಷ ಸಿನಿಮಾ ನೋಡಿರಲಿಲ್ಲ! ಕಳೆದ ವರ್ಷ ನಾಲ್ಕು ಸಿನಿಮಾ ನೋಡಿದೆ ಅಂತ ನನಗೆ ಬಹಳಾ ಇರುಸುಮುರುಸಾಗಿತ್ತು. ಯಾಕೆ ಅಂತ ಕೇಳಬೇಡಿ. ನನಗೂ ಗೊತ್ತಿಲ್ಲ.

ಒಮ್ಮೆ ಹೀಗಾಯ್ತು. ಯಾವುದೋ ಸಿನಿಮಾಕ್ಕೆ ಅಂತ ಹೋದೆವು. ಇನ್ನೂ ಟಿಕೆಟ್ ಕೊಡಲು ಶುರು ಮಾಡಿರಲಿಲ್ಲ. ಮಾರುದ್ದ ಲೈನ್ ಇದ್ದ ಹಾಗೆ ಇತ್ತು. ನಿಂತುಕೊಂಡರೇ ಮನದ ಮೂಲೆಯಲ್ಲಿ ಆತಂಕ. ಆಗ ಅಲ್ಲಿ ಬಂದ ಕಾವಲುಗಾರನನ್ನು ಕೇಳಿಯೇಬಿಟ್ಟೆವು "ಏನಪ್ಪಾ? ಇಲ್ಲಿ ನಿಂತಿದ್ದೀವಿ ಟಿಕೆಟ್ ಸಿಗುತ್ತಾ?" ಅವನು ನಕ್ಕು "ಆರಾಮವಾಗಿ ಸಿಗುತ್ತೆ ನಿಲ್ಲಿ. ಸಿನಿಮಾ ಚೆನ್ನಾಗಿಲ್ಲ" ಅನ್ನೋದೇ?

ಮತ್ತೊಮ್ಮೆ ಏನಾಯ್ತಪ್ಪಾ ಅಂದರೆ, ಬಸ್ ಹಿಡಿದು ಹೋಗೋದು ತಡವಾಯ್ತು. ಟಿಕೆಟ್ ಕೊಳ್ಳೋವಾಗ ಸಿನಿಮಾ ಶುರುವಾಯ್ತಾ ಅಂತ ಕೇಳಿದ್ದಕ್ಕೆ 'ಈಗ ಶುರುವಾಯ್ತು, ಓಡಿ' ಅಂದ. ಸರಿ ಟಿಕೆಟ್ ತೊಗೊಂಡ್ ಒಳಗೆ ಹೋದ ಮೇಲೆ ತಿಳೀತು, ಸಿನಿಮಾ ಶುರುವಾಗಿ ಅರ್ಧ ಘಂಟೆಯಾಯ್ತು ಅಂತ!

ಮತ್ತೊಮ್ಮೆ ಏನಾಯ್ತು ಎಂದರೆ, ಒಂದು ತೆಲುಗು ಸಿನಿಮಾ ಪೋಸ್ಟರ್ ನೋಡಿ, ಫುಲ್ ಆಕ್ಷನ್ ಸಿನಿಮಾ ಅಂತ ಅನ್ನಿಸಿ, ಅಪ್ಪ ಅಮ್ಮನ ಜೊತೆಗೆ ಗಲಾಟೆ ಮಾಡ್ಕೊಂಡ್ ಹೋಗಿದ್ದೆ. ಅದೋ 'ಶೋಲೆ' ಸಿನಿಮಾದ ರೀಮೇಕ್! ಇಂದಿಗೂ ದುಡ್ಡು ದಂಡ ಮಾಡಿದ ದುಃಖ ಕಡಿಮೆಯಾಗಿಲ್ಲ! 'ಗಂಢಬೇರುಂಡ' ಸಿನಿಮಾಕ್ಕೆ ಮನೆಯಲ್ಲಿ ಬೇಡಾ ಅಂದರು ಅಂತ ಎರಡು ಮೂರು ದಿನ ದುಃಖ ಉಳ್ಕೊಂಡಿತ್ತು. ಮಾಧ್ಯಮ ವರ್ಗದ ಮನೆಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ದಿ ಬೆಳೆದೇ ಇರಲಿಲ್ಲ.

ತಮ್ಮ ನೆಚ್ಚಿನ ನಟನ ಹೊಸ ಸಿನಿಮಾ ಶುಕ್ರವಾರ ರಿಲೀಸ್ ಆಗಲಿದೆ ಅಂತಾದಾಗ, ರಾತ್ರೋರಾತ್ರಿಯಿಂದಲೇ ಸಿನಿಮಾ ಮಂದಿರದ ಬಳಿ ಜನ ಜಮಾಯಿಸಿರುತ್ತಾರೆ. ಟಿಕೆಟ್ ಪಡೆಯಲು ನೂಕುನುಗ್ಗಲೇ ಇರುತ್ತದೆ. ಕ್ಯೂ ನಿಂತಿರುವಾಗ ಮಧ್ಯದಲ್ಲಿ ನುಸುಳಿದರು ಅಂತೇನಾದರೂ ಆದರೆ ಆತನಿಗೋ ಆಕೆಗೋ ಧರ್ಮದೇಟು ಖಂಡಿತ.

ನೀವು ಸಾಲಲ್ಲಿ ನಿಂತಿದ್ದೀರಾ ಅಂದ ಮೇಲೆ ಕ್ಯೂ'ನಲ್ಲಿ ಇಲ್ಲದ ಪರಿಚಯದವರಾರೋ ನಿಮ್ಮತ್ತ ನೋಡಿ ಕಣ್ಸನ್ನೆ ಮಾಡಬಹುದು. ಅರ್ಥಾತ್ ಅವರಿಗೂ ಒಂದು ಟಿಕೆಟ್ ತೆಗೆದುಕೊಡಬೇಕು ಅಂತ. ಇದೂ ಒಂದಷ್ಟು ಗಲಾಟೆಗೆ ನಾಂದಿಯಾಯ್ತು ಅಂದ ಮೇಲೆ ತಲೆಗೊಂದೇ ಟಿಕೆಟ್ ಅಂತಾಯ್ತು.

ಟಿಕೆಟ್ ಕೊಡುವ ಸಮಯದಲ್ಲಿ ಕೌಂಟರ್ ತೆರೆದ ಕೂಡಲೇ ಅಲ್ಲಿಯವರೆಗೆ ಸುಮ್ಮನೆ ನಿಂತಿರೋ ಜನಕ್ಕೆ ಏನಾಗುತ್ತೋ, ಅದೇನು ಮೈಮೇಲೆ ಬರುತ್ತೋ ಗೊತ್ತಿಲ್ಲ, ಮುಗಿಬೀಳಲು ಶುರುಮಾಡ್ತಾರೆ. ಸಾಲಿನಲ್ಲಿ ನಿಂತ ಒಂದಿಪ್ಪತ್ತು ಜನಕ್ಕೆ ಟಿಕೆಟ್ ಹಂಚಿ housefull ಎಂದು ಬೋರ್ಡ್ ಇಟ್ಟು ಕೌಂಟರ್ ಮುಚ್ಚಿದರೂ ಅನ್ನಿ, ಎಲ್ಲ ರೀತಿಯ ಅವಾಚ್ಯ ಪದಗಳನ್ನೂ ಕೇಳಿಸಿಕೊಂಡೂ ಸುಮ್ಮನಿರಬೇಕು.

Housefull ಬೋರ್ಡ್ ಬಡಿದ ಮೇಲೆ ಜನ ನಿಧಾನವಾಗಿ ಕರಗಲು ಆರಂಭಿಸಿದಾಗಲೂ ಯಾರೋ ಒಬ್ಬರಿಗೆ ಇನ್ನೂ ಆಸೆ ತೀರಿರೋದಿಲ್ಲ. ಅವರು ಕೌಂಟರ್ ಬಳಿ ಹೋಗಿ 'ಅಣ್ಣಾ ಒಂದೇ ಒಂದು ತಿಕೀಟು ಐತಾ' ಅಂತಾರೆ. ಕೌಂಟರ್'ನಲ್ಲಿರೋ ಮಾನವನಿಗೆ ಮೊದಲೇ ರೇಗಿರುತ್ತೆ "ನಿನಗೋಸ್ಕರ ಒಂದು ಸ್ಪೆಷಲ್ ಸೀಟ್ ಮಾಡಿಸಿ ಆಮೇಲೆ ಕರೀತೀನಿ ಬಾ, ತಿಕೀಟ್ ತೊಗೊಂಡ್ ಓಗು" ಅಂತ ಬೈದು ಕಳಿಸ್ತಾರೆ.

ಇದಿಷ್ಟು ಆಯ್ತು ಅಂದ ಮೇಲೆ ಮುಂದೆ ನಡೆಯೋದೇ ಬೇರೆ. Housefull ಆಯ್ತು ಅಂತ ಈ ಕಡೆ ಬಂದ ಮೇಲೆ, ಅಲ್ಲಲ್ಲೇ ಮರಿ ಕೌಂಟರ್'ಗಳು ಗುಟ್ಟಾಗಿ ಓಪನ್ ಆಗುತ್ತೆ. ಅಲ್ಲಿ ಕೊಂಡಿದ್ದು ಈಗ ಇಲ್ಲಿ ಮರುಮಾರಾಟಕ್ಕೆ ಸಿಗುತ್ತದೆ. ಬ್ಲಾಕ್ ಮಾರ್ಕೆಟ್ ದಂಧೆ! ಒಂದು ಟಿಕೆಟ್'ಗೆ ಎರಡು ಮೂರು ನಾಲ್ಕರಷ್ಟು ಬೆಲೆಗೆ ಮಾರಿದರೂ ಟಿಕೆಟ್ ಕೊಳ್ಳುವವರು ಇದ್ದಾರೆ. ಪ್ರೇಮಿಗಳು ಸಿನಿಮಾ ನೋಡಲೆಂದು ಬಂದಿರ್ತಾರೆ. ಬ್ಲಾಕ್'ನಲ್ಲಿ ಟಿಕೆಟ್ ತೊಗೊಂಡ ಮೇಲೆ ಜ್ಞಾನೋದಯವಾಗುತ್ತೆ. ಒಬ್ಬೊಬ್ಬರಿಗೆ ಒಂದೊಂದು ಕಡೆ ಸಿಕ್ಕಿದೆ ಅಂತ. ಆಗಲೇ ಪೀಕಲಾಟ ಶುರು.

ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತೂ, ಕೊನೆಗೆ ಟಿಕೆಟ್ ಸಿಗದೇ ನಿರಾಸೆಯಿಂದ ದುಃಖ ಮಡುಗಟ್ಟಿ ಬರೋದು, ಹಾಗೇ ಮನೆಗೆ ವಾಪಸ್ ಬಂದಿರೋದು ಬಹಳಷ್ಟು ಸಾರಿ ಆಗಿದೆ. ಕೆಲವೊಮ್ಮೆ ಹೇಗಿದ್ರೂ ಬಂದಿದ್ದೀವಲ್ಲಾ ಅಂತ theatre hopping ಮಾಡಿದ್ದೂ ಇದೆ. ಬೆಂಗಳೂರಿನ ಮಜೆಸ್ಟಿಕ್ ಪ್ರದೇಶದಲ್ಲಿ ಮಾತ್ರ ಹೀಗೆ ಸಾಧ್ಯ ಬಿಡಿ.

ಇನ್ನು ಮಧ್ಯಂತರದ ಬಗ್ಗೆ ಒಂದೆರಡು ಮಾತು. ನಮ್ಮೂರಿನ ಸಿನಿಮಾ ಹಾಲ್'ನಲ್ಲಿ ಹತ್ತು ನಿಮಿಷ ಮಧ್ಯಂತರ ಕೊಡ್ತಿದ್ದ. ಮೊದಲಿಗೆ ಟಾಯ್ಲೆಟ್ ಆನಂತರ ಕಾಫಿ. ಅಷ್ಟೇ ಸಮಯದಲ್ಲೂ ಕಾಫಿಯನ್ನೂ ಯಾಕೆ ಕುಡಿಯುತ್ತಿದ್ವಿ ಅಂತ ಗೊತ್ತಿಲ್ಲ. ಅಲ್ಲಿ ಕಾಫಿ ತೊಗೊಂಡಾಗ, ಅವನು ಕೊಡುತ್ತಿದ್ದ ಸ್ಟೀಲು ಲೋಟದಲ್ಲಿ ಭರ್ತಿ ಸುಡುವ ಕಾಫಿ. ಬೆರಳು ಸುಡುತ್ತೆ ಅನ್ನೋ ಸರ್ಕಸ್'ನಲ್ಲಿ ಬಟ್ಟೆ ಮೇಲೆ ಬೀಳ್ತಿತ್ತು. ಹಾಗೂ ಹೀಗೋ ಬಾಯಿಗೆ ತೆಗೆದುಕೊಂಡು ಹೋಗೋಷ್ಟರಲ್ಲಿ ಒಳಗೆ ಸ್ಕ್ರೀನ್ ಮೇಲೆ ಜಾಹೀರಾತು. ಲೇಟ್ ಆಯ್ತು ಅನ್ನೋ ತವಕದಲ್ಲಿ ಲೋಟದ ಬಿಸಿ ತಾಗಿ ತುಟಿ / ನಾಲಿಗೆ ಸುಡುತ್ತಿತ್ತು. ಬೇಗ ಬೇಗ ಹೇಗೋ ಕುಡಿದು ಒಳಗೆ ಅಡಿಯಿಡೋಷ್ಟರಲ್ಲಿ, ಒಳಗೆಲ್ಲಾ ಕತ್ತಲು. ಎಲ್ಲಿ ಕೂತಿದ್ವಿ ಅನ್ನೋ ಚಾಲೆಂಜ್. ಯಾರದೋ ಕಾಲನ್ನು ತುಳಿಯೋದು, ಬೈಸಿಕೊಳ್ಳೋದು. ಕೊನೆಗೆ ನಮ್ಮ ಸೀಟಿನಲ್ಲಿ ಕೂಡೋಷ್ಟರಲ್ಲಿ ಒಂದೈದು ನಿಮಿಷ ಸಿನಿಮಾ ಮುಗಿದಿರುತ್ತೆ. ಆಗ, ಪ್ರತಿಬಾರಿ ಅಂದುಕೊಳ್ಳೋದು 'ಮುಂದಿನ ಸಾರಿಯಿಂದ ಫ್ಲಾಸ್ಕ್'ನಲ್ಲಿ ಕಾಫಿ ತಂದುಬಿಡಬೇಕು' ಅಂತ.

ಈಚೆಗೆ ಹಲವು ವರ್ಷಗಳಿಂದ, ಹೊಸ ಸಿನಿಮಾ ಎಂದ ಮೇಲೆ, ಸಿನಿಮಾ ಮುಗಿದು ಹೊರಗೆ ಬರುತ್ತಿದ್ದಂತೆಯೇ ನಿಮ್ಮ ಬಾಯಿಗೆ ಮೈಕ್ ತುರುಕಿ ನಿಮ್ಮ ಅಭಿಪ್ರಾಯ ಕೇಳೋ ಮಂದಿ ಸಿದ್ಧವಿರುತ್ತಾರೆ. "ಸಕತ್ತಾಗಿದೆ, ಸೂಪರ್, ಹಂಡ್ರೆಡ್ ಡೇಸ್ ಗ್ಯಾರಂಟೀ" ಇತ್ಯಾದಿ ಮಾತುಗಳಿಗೇ ಮಹತ್ವ. ನೀವು ಬೇರೆ ರೀತಿ ಕಾಮೆಂಟ್ ಮಾಡಲು ಶುರು ಹಚ್ಚಿಕೊಂಡರೆ ಮೈಕ್ ನಿಮ್ಮನ್ನು ದಾಟಿ ಮುಂದೆ ಹೋಗಿರುತ್ತೆ.

ಪಟ್ಟಣದ ಹೊರಗೆ ಎಷ್ಟೋ ಕಡೆ ಸಿನಿಮಾ ಮಂದಿರಗಳು ಇರುತ್ತಿರಲಿಲ್ಲ. ಅದರ ಬದಲಿಗೆ ಟೆಂಟ್'ಗಳು ಇರುತ್ತಿದ್ದವು. ಇಲ್ಲಿರೋದೇ ಎರಡೇ ಕ್ಲಾಸ್. ಒಂದು ಚೇರು ಮತ್ತೊಂದು ನೆಲ. ಒಂದು ದೊಡ್ಡ ಗೂಡಿನ ಒಳಗೆ ಸಿಕ್ಕ ಸಿಕ್ಕಲ್ಲಿ ಚೇರುಗಳು, Housefull ಎಂಬ ಮಾತು ಅಲ್ಲಿ ಇಲ್ಲವೇ ಇಲ್ಲ. ನಿಂತೂ ನೋಡಬಹುದು. ಅಪ್ಪಿತಪ್ಪಿ ನೆಲದ ಮೇಲೆ ಕೂತು ಸಿನಿಮಾ ನೋಡುತ್ತೀರಿ ಎಂದರೆ, ಬೀಡಿ ವಾಸನೆ ಆಸ್ವಾದಿಸಲು ಸಿದ್ಧವಿರಿ. ಹೆಚ್ಚು ಪುಣ್ಯ ಮಾಡಿದ್ದರೆ ನಿಮ್ಮ ಪಕ್ಕದಲ್ಲೇ ಕುಳಿತವನಿಂದ ಹುಳಿಹೆಂಡದ ಘಮಲು ನಿಮ್ಮ ಮೂಗೇನು ಇಡೀ ದೇಹಕ್ಕೆ ಬಡಿದರೂ ಅಚ್ಚರಿ ಇಲ್ಲ. ಅದು ಬಿಟ್ರೆ ನಿಮ್ಮೆದುರಿಗೇ ದೊಡ್ಡ ದೇಹಗಳು ಕೂತು ಸ್ಕ್ರೀನ್'ಗೆ ಅಡ್ಡ ಬರೋದು, ಕಡಲೇಕಾಯಿ ಮಾರುವವರು, ಇತ್ಯಾದಿ ಹಿಂಸೆಗಳು.

ಇಂದಿನ ಮಲ್ಟಿ ಪ್ಲೆಕ್ಸ್ ಚಿತ್ರಮಂದಿರದಲ್ಲಿ ಒಂದು ಸಿನಿಮಾ ಟಿಕೆಟ್, ಜೊತೆಗೆ popcorn, ಸೋಡಾ ಇತ್ಯಾದಿಯಲ್ಲಿ ಒಂದು ಸಂಸಾರ ಮಾಡಬಹುದು ಅಂತಾರೆ ಮಂದಿ. ಜೊತೆಗೆ ಕನ್ನಡ ಸಿನಿಮಾ ಅಂದರೆ ಏಸಿ ಹಾಕೋದಿಲ್ಲವಂತೆ.

ಡ್ರೈವ್-ಇನ್ ಸಿನಿಮಾಮಂದಿರ ಅಂತ ಒಂದಿತ್ತು. ನಮ್ಮನ್ನು ಹೊತ್ತುಕೊಂಡು ಹೋದ ಗಾಡಿಯೇ ಕುಳಿತುಕೊಳ್ಳೋ ಸೀಟು. ಬಯಲಲ್ಲಿ ಕೂತು ಸಿನಿಮಾ ನೋಡುವ ಮಜವೇ ಬೇರೆ ಬಿಡಿ ಅಂತ ನೋಡಿದವರು ಹೇಳಿದ್ದಾರೆ.

ಇಷ್ಟೆಲ್ಲಾ ಮಾತು ಯಾಕೆ ಬಂತು ಅಂತ ಕೇಳಿ ಹೇಳ್ತೀನಿ. ಅಪ್ಪನ ದಿನ (Father's Day) ಮುಂದಿನ ಭಾನುವಾರ. ಅಪ್ಪನ ಜೋಡಿ ಎಷ್ಟು ಸಿನಿಮಾ ನೋಡಿದ್ದೇ ಎಂದು ನೆನಪಿಸಿಕೊಂಡು ತುಂಬಾ ಖುಷಿಯಾಯ್ತು! ಹಾಗಾಗಿ ಟಿಕೀಟು, ಸಿನಿಮಾ ಇತ್ಯಾದಿಗಳೆಲ್ಲಾ ತಲೆಗೆ ಬಂದು ನಿಮ್ಮ ಮುಂದೆ ಹಂಚಿಕೊಂಡೆ. ನಿಮ್ಮ ಕಥೆ ಏನು ಹೇಳಿ ಮತ್ತೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Have you ever lied to your father to watch a movie? If you have, please share your memories or experience. Srinath Bhalle from Richmond, USA touches the subject which everyone has gone through.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more