• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ದ್ವಾರಕೀಶ್ ನಿರ್ಮಾಣದ, ಭಾರ್ಗವ ಅವರ ನಿರ್ದೇಶನದ ಚಲನಚಿತ್ರವಾದ 'ಗುರು-ಶಿಷ್ಯರು' ಮನರಂಜನೆಗೆ ಹೇಳಿ ಮಾಡಿಸಿದ ಚಿತ್ರ. ನಾಯಕ, ನಾಯಕಿ, ಖಳನಾಯಕರು, ಮತ್ತು ಹಲವಾರು ಉನ್ನತಮಟ್ಟದ ಹಾಸ್ಯ ಕಲಾವಿದರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ಅವರ ನೆನಪುಗಳನ್ನು ಮತ್ತೆ ಮತ್ತೆ ಮಾಡಿಕೊಡುತ್ತಾ ಇಂದಿಗೂ ಆ ಅಮೋಘ ಚಿತ್ರ ಮನರಂಜಿಸುತ್ತಾ ಇದೆ.

ಅದೆಲ್ಲಾ ಸರಿ, 1981ರಲ್ಲಿ ರಿಲೀಸ್ ಆಗಿ ಇನ್ನೇನು ಮೂವತ್ತಾರು ವರುಷಗಳು ತುಂಬಲಿರುವ ಸಿನಿಮಾಕ್ಕೆ ಇಷ್ಟು ತಡವಾಗಿಯೇ ರಿವ್ಯೂ ಬರೆಯೋದು ಅನ್ನಬೇಡಿ. ಎಂತೆಂಥಾ ಮಹನೀಯರು ರಚಿಸಿರುವ ಕಾದಂಬರಿ, ಕಥೆ, ಕವನಗಳು, ಕಾವ್ಯಗಳನ್ನು ಇಂದಿಗೂ ಏನೆಲ್ಲಾ ರೀತಿಯಲ್ಲೇ ರಿವ್ಯೂ ಮಾಡುತ್ತಲೇ ಖ್ಯಾತ/ಕುಖ್ಯಾತರಾಗಿರುವ ಈ ಕಾಲದಲ್ಲಿ ಒಂದು ಹಳೆಯ ಸಿನಿಮಾ ಸನ್ನಿವೇಶಗಳನ್ನು ಮತ್ತೊಮ್ಮೆ ರಿವ್ಯೂ ಮಾಡೋದ್ರಲ್ಲಿ ತಪ್ಪೇನಿದೆ?

Guru-Shishyaru movie, a tool to teach Information Technology

ಅಂದಿನಿಂದ ಇಂದಿನವರೆಗೆ ಹಲವಾರು ಬಾರಿ ಇಡೀ ಸಿನಿಮಾ ಅಥಾವ ಸನ್ನಿವೇಶಗಳನ್ನು ನೋಡಿದ್ದೇನೆ. ಆ ತುಣುಕುಗಳನ್ನು ನಿಮ್ಮ ಮುಂದೆ ನನ್ನದೇ ಶೈಲಿಯಲ್ಲಿ ಹೇಳಲಿದ್ದೇನೆ. ಯಾವ ರೀತಿ ಅಂದರೆ, ನನ್ನಲ್ಲಿ ಯಾರಾದರೂ ಬಂದು ಐ.ಟಿ. (information technology) ಎಂದರೇನು ಹೇಳಿಕೊಡಿ ಎಂದರೆ, ಗುರು-ಶಿಷ್ಯರನ್ನು ತೋರಿಸಿ ಐ.ಟಿ. ವಿವರಿಸಬೇಕು ಅಂತಲೇ ಅನ್ನಿಸುತ್ತೆ. ಎತ್ತಣದ ಮಾಮರ ಎತ್ತಣದ ಕೋಗಿಲೆ ಎಂದಿರಾ? ಇರಲಿ ನೋಡೋಣ...

ಸುಂದರ ಸ್ವಪ್ನದಲ್ಲಿ ಮುಳುಗಿದ್ದ ಸುಬ್ಬನ ದಂತ ಭಗ್ನ!

1. ಮೊದಲಿಗೆ ಚಿತ್ರದ ಒಂದು ಮುಜುಗರದ ಸನ್ನಿವೇಶದಿಂದಲೇ ಆರಂಭಿಸೋಣ. ನರ್ತಕಿಯೊಂದಿಗೆ ಮಲಗಿದ್ದ ಮಹಾರಾಜ ತಡವಾಗಿ ಏಳುತ್ತಾನೆ. ಶಿವಪೂಜೆಯ ವೇಳೆ ಮೀರಿದ್ದರಿಂದ ಶುಚಿಯಾಗಲೂ ಸಮಯವಿಲ್ಲದಂತಾಗಿ ನರ್ತಕಿಯ ಅಂಗದಲ್ಲೇ ಶಿವಲಿಂಗ ಕಂಡುಕೊಂಡು, ಪೂಜಿಸಿ, ಪಾರ್ವತಿಯ ಕೋಪಕ್ಕೆ ಕಾರಣನಾಗುತ್ತಾನೆ. ಮಹಾದೇವ ದೇವಿಯನ್ನು ಸಮಾಧಾನಪಡಿಸುತ್ತ 'ರಾಜನಲ್ಲಿ ಭಕ್ತಿ ಇದೆ ಆದರೆ ಪೂಜಿಸಿದ ರೀತಿ ಸರಿಯಿಲ್ಲ. ಅವನನ್ನು ಸರಿಯಾದ ದಾರಿಗೆ ತರಲು ಒಬ್ಬ ಸೂಕ್ತ ವ್ಯಕ್ತಿಯನ್ನು ಕಳಿಸುತ್ತೇನೆ' ಎನ್ನುತ್ತಾನೆ.

ಆ ಲೆಡ್ಜರ್, ಈ ಹಾಳೆ, ಆ ಪುಸ್ತಕ, ಈ ಫೈಲು ಅಂತ ತುಂಬಿಕೊಂಡ ಕಂಪನಿಗಳನ್ನು ಮಹಾರಾಜ ಎಂದೆಣಿಸಿ. ಐಟಿ ಕಾಲಿಡುವ ಮುನ್ನ ಪ್ರತಿ ಕಂಪನಿಯಲ್ಲೂ ಕೆಲಸಗಳು ನಡೆಯುತ್ತಿದ್ದರೂ 'ಪ್ರಾಸೆಸ್ (process)' ಇರಲಿಲ್ಲ. ಪುನರುಕ್ತಿಯೇ (redundancy) ಮೇಳೈಸಿದ್ದ ನಿತ್ಯ ಕೆಲಸಗಳ ಮೇಲೆ ಇದನ್ನು ಹೀಗೆಯೇ ಮಾಡಬೇಕು, ಇದು ಹೀಗೆಯೇ ಇರಬೇಕು ಎಂದೆಲ್ಲಾ ತಿಳಿಸಿಕೊಡುವ ಕನ್ಸಲ್ಟಿಂಗ್ ಕಂಪನಿಯೇ ದೇವಲೋಕದ ನರ್ತಕಿ. ನೀವು ಮಾಡ್ತಾ ಇರೋದು ಸರಿ ಇಲ್ಲ, ಅದು ಹೀಗಿರಬೇಕು ಅದು ಹಾಗಿರಬೇಕು ಎಂದು ದಿನವೆಲ್ಲ ಗೊಣಗೊಣ ಅನ್ನೋದನ್ನ ಎಲ್ಲ ಐಟಿ ಜನ ಅನುಭವಿಸಿಯೇ ಇರುತ್ತೀರಾ. ಮೊದಲಿಗೆ ತಾ ಕುಣಿದು ನಂತರ ಕಂಪನಿಯ ಜನರನ್ನು ತನ್ನ ತಾಳಕ್ಕೆ ಕುಣಿಸುವುದು ಸಾಮಾನ್ಯ ದೃಶ್ಯ.

2. ಹಿರಿಯ ಗುರುಗಳು ತಮ್ಮ ಶಿಷ್ಯರ ಜೊತೆ ಸರೋವರದ ಬದಿಯಲ್ಲಿ ಹಾದು ಹೋಗುವಾಗ ದೇವಲೋಕದ ಕನ್ಯೆಯರು ಸ್ನಾನ ಮಾಡುತ್ತಿರುತ್ತಾರೆ. ಅವರ ಅಂದಚೆಂದ ಕಂಡು ಆಕರ್ಷಿತರಾಗಿ ಕರ್ತವ್ಯ ಮರೆತು ಅಲ್ಲೇ ನಿಂತು ಅವರನ್ನೇ ನೋಡುತ್ತಾ ಇರುತ್ತಾರೆ. ಕೊನೆಗೆ ದೇವಲೋಕದ ನರ್ತಕಿಯಿಂದಲೇ ಶಾಪಗ್ರಸ್ತರಾಗಿ ಮೂಢರಾಗುತ್ತಾರೆ.

ಇವರು ಆಡುವ ಕ್ರಿಕೆಟ್ಟಿಗೆ ನಾವೇಕೆ ಟೆನ್ಷನ್ ಮಾಡ್ಕೊಬೇಕು?

ಇದರ ಬಗ್ಗೆ ನಾನೇನು ಹೇಳಲಿ? ಡೆಸ್ಕ್'ನಲ್ಲಿ ಕೂತು ನಿಮ್ಮ ಕೆಲಸ ಮಾಡುತ್ತಾ ಇರುತ್ತೀರ. ಅಂದರೆ ನೀವೇ ಆ ಶಿಷ್ಯರಲ್ಲಿ ಒಬ್ಬ ಅಂದುಕೊಳ್ಳಿ. ಕೆಲಸ ಮಾಡುವಾಗ ಏನೋ ಮಾಹಿತಿ ಬೇಕಿದ್ದು, ಅದಕ್ಕಾಗಿ ಇಂಟರ್ನೆಟ್'ಗೆ ಹೋಗುತ್ತೀರಾ. ಆಗ ಏನೋ ಪಾಪ್-ಅಪ್ (pop-up) ಬರುತ್ತೆ. ಅವೇ ದೇವಲೋಕದ ಕನ್ನಿಕೆಯರು. ಸುಮ್ಮನೆ ಅದನ್ನು ಕಂಡೂ ಕಾಣದಂತೆ ಮುಂದೆ ಹೋಗದೆ, ಕೆಟ್ಟ ಕುತೂಹಲದಿಂದ ಕ್ಲಿಕ್ ಮಾಡುತ್ತೀರಾ. ಬಂತು ನೋಡಿ ಶಾಪ ಅನ್ನೋ ವೈರಸ್! ಬುದ್ಧಿವಂತರಾದ ನೀವು ಏಕ್ದಂ ಮುಠಾಳರಾದ್ರಿ! ಶಾಪವಿಮೋಚನೆ ಹೇಗೆ ಅನ್ನೋ ಕಳವಳ. ತಮ್ಮ ಶಿಷ್ಯರ ಪರವಾಗಿ ಆ ಗುರುಗಳು ನಿಂತರು, ನಿಮ್ಮ ಪರವಾಗಿ ನಿಮ್ಮ ಮ್ಯಾನೇಜರ್ ನಿಲ್ಲುತ್ತಾರೆ ಎಂದುಕೊಳ್ಳದಿರಿ.

Guru-Shishyaru movie, a tool to teach Information Technology

3. ಮಹಾಪ್ರಭುಗಳ ಆಸ್ಥಾನದ ಗುರುಗಳ ಮನೆಯಲ್ಲಿ ಮದುವೆಯ ಸಂಭ್ರಮ. ಅತಿಥಿಗಳ ಮನೆಯಲ್ಲಿ ಇರುವಾಗ ಒಂದು ಹಸು ಇದ್ದರೆ ಚೆನ್ನ ಎನಿಸಿ, ಶಿಷ್ಯರ ಜೊತೆ ಮಾತನಾಡಿ ಆ ಕೆಲಸ ಒಪ್ಪಿಸುತ್ತಾರೆ. ಮನೆಗೊಂದು ಹಸು ಬೇಕು, ಅದು ಹೇಗಿರಬೇಕು ಎಂದರೆ ಒಂದು ಕೊಡ ಹಾಲು ಕೊಡುವಂತಿರಬೇಕು, ಎರಡು ಕೊಂಬಿರಬೇಕು, ಎಂದೆಲ್ಲಾ ವಿಚಾರಗಳು ಹರಿದಾಡಿ ಕೊನೆಗೆ ನೋಡಿದರೆ ಒಳ್ಳೆಯದೋ ಇಲ್ಲವೋ ಗೊತ್ತಾಗೋದಿಲ್ಲ. ಹಾಗಾಗಿ ನಾಲ್ಕು ಜನ ಹಸುವನ್ನು ಚೆನ್ನಾಗಿದೆ ಎಂದರೆ ಕೊಂಡು ತನ್ನಿ ಅಂತ ಗುರುಗಳು ಹತ್ತು ವರಹ ಕೊಡುತ್ತಾರೆ.

ಎಲ್ಲರೂ ಕೂತು ಮಾತನಾಡಿ ಹಾಗಿರಬೇಕು ಹೀಗಿರಬೇಕು ಅನ್ನೋದು brain storming session. ಒಂದು ಕೆಲಸಕ್ಕೆ ಅಂತ ಇಂತಿಷ್ಟು ಬಜೆಟ್ ಎಂಬುದನ್ನ ಹತ್ತು ವರಹ ತೋರಿಸುತ್ತದೆ. Problem statement ಏನು ಎಂದರೆ ಮನೆಗೊಂದು ಹಸು ಬೇಕು. ತಮಗೆ ಬೇಕಿರುವುದು (requirements) ಏನು ಎಂದರೆ ಒಳ್ಳೆಯ ಹಸು ಅದರಲ್ಲೂ ನಾಲ್ಕು ಜನ ಅದನ್ನು ಒಳ್ಳೆಯದು ಅಂತ ಹೊಗಳಬೇಕು ಅನ್ನೋದು. ಆ ಹೊಗಳಿಕೆ ಎಂಬುದು ಟೆಸ್ಟಿಂಗ್ (testing). ಆದರೆ ಶಿಷ್ಯರು ಕಾರ್ಯಗತ ಗೊಳಿಸಿದ್ದು (development) ಸೋತಿದ್ದು User Acceptance Testingನಲ್ಲಿ. ಗುರುಗಳು, ತಮಗೆ ಬೇಕಿದ್ದು ಬದುಕಿರುವ ಹಸು ಸತ್ತಿರುವುದಲ್ಲ ಅಂತ ಕೊನೆಯಲ್ಲಿ ಹೇಳಿದಾಗ. ಇದೇ requirement gap. ಒಬ್ಬರು ಒಂದು ಹೇಳಿದಾಗ ಅದನ್ನು ಮತ್ತೊಂದು ರೀತಿ ಅರ್ಥೈಸಿಕೊಳ್ಳೋದು ದಿನನಿತ್ಯದ ಗೋಳು. ಶಿಷ್ಯರು ಬೇಸರಗೊಂಡರು. ಗುರುಗಳು ಬೇಸರಗೊಂಡರು. Requirements ಸರಿ ಇಲ್ಲ ಎಂದರೆ ತಪ್ಪು ಯಾರದ್ದು? ಕೊನೆಗೆ ಆಗಿದ್ದೇನು ? ಕೊಂಡು ತಂದದ್ದು ತಿಪ್ಪೆಗೆ ಸೇರಿತು ಮತ್ತು ಹಣ ಹೋಯ್ತು! ಪ್ರತಿ ಕಂಪನಿಯಲ್ಲೂ ಇದು ಸರ್ವೇ ಸಾಮಾನ್ಯ ಅಲ್ವೇ?

4. ಮನೆಯ ಮುಂದೆ ಸುಣ್ಣ ಹೊಡೀಬೇಕು ಎಂಬ requirements ತಪ್ಪಾಗಿದ್ದು, ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ requirements ತಪ್ಪಾಗಿದ್ದು ಎಲ್ಲವೂ ಒಂದು ಪ್ರಾಜಕ್ಟ್ ಹೇಗೆ ಹಳ್ಳ ಹಿಡಿಯುತ್ತೆ ಎಂಬುದನ್ನು ಎತ್ತಿ ತೋರಿಸುತ್ತದೆ.

5. ಚಿತ್ರದುದ್ದಕ್ಕೂ ಶಿಷ್ಯರು ತಪ್ಪೆಸೆಗಿ ಗುರುಪತ್ನಿಯ ಕೋಪಕ್ಕೆ ಗುರಿಯಾಗುತ್ತಾರೆ. ಮನೆಯಿಂದ ಆಚೆಗೆ ಓಡಿಸುವಂತೆ ಆಗ್ರಹ ಬಂದರೂ ಗುರುಗಳ ಕೃಪಾಕಟಾಕ್ಷದಿಂದ ಬಚಾವಾಗ್ತಾರೆ. ಕೊನೆಗೆ ಮತ್ತೊಂದು ದೊಡ್ಡ ತಪ್ಪು ಮಾಡಿ ಗುರುಗಳಿಂದಲೂ ಛೀಮಾರಿ ಹಾಕಿಸಿಕೊಂಡು ಮನೆಯಿಂದ ಹೊರಗೆ ಬರಲೇಬೇಕಾಗುತ್ತದೆ.

ಶಿಶ್ತಿನ ಸಿಪಾಯಿ ನನ್ನಪ್ಪನ ಸೆನ್ಸ್ ಆಫ್ ಹ್ಯೂಮರ್ರು

ಐಟಿ ಜಗತ್ತಿನಲ್ಲಿ ಬೆಂಕಿಗೆ ಬಲಿಯಾಗೋದು (Fire) ಸರ್ವೇ ಸಾಮಾನ್ಯ. ಮೂಲದಲ್ಲಿ ಕಿಚ್ಚು ಹತ್ತಿದರೆ ಬಾಲದ ಕೊನೆಯಲ್ಲಿರೋ ಕೂದಲು ಮೊದಲು ಬೀಳುತ್ತೆ! ಅದೃಷ್ಟ ಇದ್ದರೆ ಗುರುಗಳಂಥಾ ಮ್ಯಾನೇಜರ್ ಸಿಗಬಹುದು, ಆದರೆ ಎಲ್ಲಿಯವರೆಗೆ ರಕ್ಷಿಸುತ್ತಾರೆ? ಅವರ ಬುಡಕ್ಕೆ ಬೆಂಕಿ ಬಿದ್ದಾಗ ನಿಮಗೂ ಟಿಕೆಟ್ ಗ್ಯಾರಂಟಿ. ಎಂದೋ ಒಂದು ದಿನ ಮನೆ ಬಿಟ್ಟು ಹೋಗಲೇಬೇಕು, ಮತ್ತೊಂದು ನೆಲೆ ಸಿಗುವವರೆಗೂ ಕಷ್ಟ ಬೀಳಲೇಬೇಕು. ಆಗ ಬಂದ ಬುದ್ದಿಯಿಂದ ಶಾಪ ವಿಮೋಚನೆಯೂ ಆಗಬಹುದು.

Guru-Shishyaru movie, a tool to teach Information Technology

6. ಮಹಾರಾಜನನ್ನು ಕೊಂದು ಸಿಂಹಾಸನವನ್ನು ಏರಿ ಕುಳಿತು ಸಾಮ್ರಾಜ್ಯ ಆಳುವ ಕನಸು ಕಾಣುವ ಕುತಂತ್ರಿ ಮಂತ್ರಿ.

Performance Evaluation ಎಂಬ ಮಹಾವ್ಯೂಹದಲ್ಲಿ ಒಬ್ಬನನ್ನು ತುಳಿದು ಮತ್ತೊಬ್ಬ ಮೇಲೇರಲೇ ಸದಾ ಹವಣಿಸುತ್ತಾ ಇರುತ್ತಾನೆ. ನಿಷ್ಠೆಯಿಂದ ದುಡಿಯುವವನಿಗೆ ಕೆಲಸ ಹೆಚ್ಚು ಗೌರವ ಕಡಿಮೆ. ಒಂದು ಕಾಲದಲ್ಲಿ experience ಆದಂತೆ promotion ಅನ್ನೋದಿತ್ತು. ಐಟಿ ಅದನ್ನು ಬದಲಿಸಿದೆ. ಏನಾದರೂ ಮಾಡಿ ಮುಂದೆ ಹೋಗಬೇಕು ಎಂಬ ಕುತಂತ್ರಿ ಮಂತ್ರಿಗಳಿಂದ ಎಚ್ಚೆತ್ತುಕೊಂಡು ಮುನ್ನಡೆಯುವುದು ಸ್ವಲ್ಪ ದುಸ್ತರವೇ.

7. ಯಾರ್ಯಾರನ್ನೋ ನಂಬಿ ಗುರುಗಳು ಮೋಸ ಹೋಗುವುದನ್ನು ತಮ್ಮ ಅರ್ಧಂಬರ್ಧ ಬುದ್ದಿಯಲ್ಲಿ ತಡೆಗಟ್ಟಿ ಹೇಗೋ ಜಯಿಸುವ ದಡ್ಡ ಶಿಷ್ಯರು ತಾವೇ ಬುದ್ದಿವಂತರು ಎಂದು ಬೀಗುತ್ತ "ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ" ಎಂದು ಬೀಗುತ್ತಾರೆ. ತಮಗೆ ತಿಳಿದಿದ್ದಷ್ಟೇ ಜಗತ್ತು ಎಂದು ನಂಬಿರುವ ಶಿಷ್ಯರು ಅದರಾಚೆ ಯೋಚಿಸುವಷ್ಟೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಹಲವಾರು ಬಾರಿ ನಿಮ್ಮದೇ ಟೀಮಿನಲ್ಲಿ ಕೆಲವು (ದಡ್ಡ) ಶಿಖಾಮಣಿಗಳನ್ನು ನೋಡಿದಾಗ, ಇವರನ್ನು ಕೆಲಸಕ್ಕೆ ತೆಗೆದುಕೊಂಡವರಾರು ಎನ್ನುವ ಯೋಚನೆ ಬರುತ್ತೆ. ಅವೆಲ್ಲಾ strategy. ಎಷ್ಟೋ ಸಾರಿ ಅತಿ ದೊಡ್ಡವರು ಕೆಲವೊಂದು ನಿರ್ಧಾರ ತೆಗೆದುಕೊಂಡಾಗ ಆ Vision ಅರ್ಥ ಮಾಡಿಕೊಳ್ಳದೆ, ತಮಗೆ ಅರ್ಥ ಆಗಿದ್ದು ಈ ದೊಡ್ಡವರಿಗೆ ಯಾಕೆ ಅರ್ಥವಾಗೋಲ್ಲ ಅಂತ ಅವರನ್ನು ಬೈದುಕೊಳ್ಳುವುದು ಐಟಿ ಜಗತ್ತಿಗೆ ಸೀಮಿತವಾಗಿರದೆ, universal ಗುಂಪಿಗೆ ಸೇರಿಸಿದರೆ ಅಡ್ಡಿಯಿಲ್ಲ. ಇವರು ಅವರನ್ನು ನೋಡಿ ನಗುತ್ತಾರೆ, ಅವರು ಇವರನ್ನು ನೋಡಿ ನಗುತ್ತಾರೆ. ಎಲ್ಲರನ್ನೂ ಮೇಲಿನವ ನೋಡಿ ನಗುತ್ತಾನೆ.

8. ಒಂದು ಸಂದರ್ಭದಲ್ಲಿ ಮಂತ್ರಿಯ ಕುತಂತ್ರ ರಾಜನಿಗೆ ಅರಿವಾಗುತ್ತದೆ. ರಾಜನಿಂದ ತಪ್ಪಿಸಿಕೊಂಡು ಹೋದ ಮಂತ್ರಿ ಹೊರಗಿನಿಂದ ದಾಳಿಯಿಡುತ್ತಾನೆ. ಮೊದಲು ಒಳಗಿದ್ದುದರಿಂದ ಅರಮನೆಯ ಒಳವಿಚಾರಗಳನ್ನು ಅರಿತಿರುವುದರಿಂದ ನುಗ್ಗಿ ಒಳಗೆ ಬರುವುದಕ್ಕೆ ತೊಂದರೆ ಆಗುವುದಿಲ್ಲ. ರಾಜನನ್ನು ಕೊಲ್ಲುವುದಕ್ಕೆ ಬಂದು ತಾನೇ ಹತನಾಗುತ್ತಾನೆ.

ಒಂದು ದೊಡ್ಡ ವ್ಯವಹಾರದ ಕಂಪನಿಯನ್ನು ಭೇದಿಸುವುದಕ್ಕಾಗಿ ಹೊರಗಿನ ಶಕ್ತಿಗಳು ಹಾತೊರೆಯುತ್ತಾ ಇರುತ್ತದೆ. ಕಂಪನಿಗಳು ಇಂಥಾ ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಅದರ ಸುತ್ತಲೂ ಒಂದು ಕೋಟೆ (Firewall) ಕಟ್ಟಲೇಬೇಕು. ಹೇಗೋ ಮಾಡಿ ಒಳ ನುಗ್ಗೋ ಶಕ್ತಿಗಳನ್ನು ಬಗ್ಗುಬಡಿದು ಗಟ್ಟಿಯಾಗಿ ನಿಲ್ಲೋ Security and Safety measures ಇದ್ದರೆ ರಾಜನೂ ಕ್ಷೇಮ, ರಾಜ್ಯವೂ ಕ್ಷೇಮ.

9. ರೀತಿರಂಗಿಲ್ಲದ ಪೂಜೆಯ ಸನ್ನಿವೇಶದಲ್ಲಿ ಈಶ ಬಂದು ಪರಿಸ್ಥಿತಿಯನ್ನು ಹತೋಟಿಗೆ ತರಲು ಬುದ್ದಿವಂತರನ್ನು ದಡ್ಡರನ್ನಾಗಿಸಿ ಕೆಲಸವಾದ ಮೇಲೆ ಮತ್ತೆ ಬುದ್ದಿ ತುಂಬಿ ಕಳಿಸಿಕೊಡುತ್ತಾನೆ.

Process ತರಲು ನಿಮ್ಮ ಕಂಪನಿಯ ಈಶ ನಿಮ್ಮನ್ನು ದಡ್ಡನನ್ನಾಗಿಸಿದರೆ ಸ್ವಲ್ಪ ದಿನ ಕಾದಿರಿ. ಎಂದೋ ಒಂದು ದಿನ ನಿಮಗೂ ಬುದ್ದಿ ತುಂಬಿ ಕಳಿಸಿಕೊಡುತ್ತಾನೆ. ಅಯ್ಯೋ! ತಪ್ಪು ತಿಳೀಬೇಡಿ, ನಿಮಗೆ ಬುದ್ದಿ ತುಂಬಿ ಪ್ರಮೋಷನ್ ಕೊಟ್ಟು ಮುಂದೆ ಕಳಿಸುತ್ತಾನೆ ಎಂದೇ!

10. ಕಥೆ ಸುಖಾಂತವಾಗಿ ಈಶನಿಗೆ ನಮಿಸುತ್ತಾರೆ.

ಜಗದ್ರಕ್ಷಕ ಈಶನೇ ಸರಿ! ಆದರೆ ಅವನೋ ಸಹನಾಮಯಿ. Process ಸರಿ ಇಲ್ಲದಿದ್ದರೂ ಸುಮ್ಮನಿದ್ದ. ಇಡೀ ಕಥೆ ಸುಖಾಂತವಾಗಿ ಮುಗಿದಿದ್ದಕ್ಕೆ ಮೂಲ ಕಾರಣ ಪಾರ್ವತಿ ಅಲ್ಲವೇ? ಶಿವನ ಮೂರನೇ ಕಣ್ಣು ಪಾರ್ವತಿ. ಅದೇ Vision. ಸಾಮಾನ್ಯರಿಗೆ ಅರ್ಥವಾಗದ್ದು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada comedy film Guru Shishyaru, produced by actor Dwarakish, directed by Bhargava, with Vishnuvardhan and Manjula in the leading role, is one of the finest comedy movie in Kannada. Srinath Bhalle finds out how this movie can be used as a tool to teach Information Technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more