• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವನವೇ ಒಂದು ಬೀಳುಏಳಿನ ಸಂತೆ, ನಿಮಗಿದೆಯೇ ಅದರ ಚಿಂತೆ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಏಳುಬೀಳು ಅನ್ನುವುದನ್ನು ಕೇಳಿಯೇ ಇದ್ದೀರಾ. ಆದರೆ ಬೀಳುಏಳು ಅಂದರೇನು ಅಂತ ಯೋಚಿಸುತ್ತಿದ್ದರೆ ತುಂಬಾ ಸಿಂಪಲ್ಲು. ಏಳೋದ್ಯಾವಾಗ? ಬಿದ್ದಾಗ ತಾನೇ? ಸರಿ, ಬೀಳೋದು ಎನ್ನೋದು ಹೇಗೆ? ನಡೆಯೋ ಕಾಲು ಎಡವದೇ ಇರುತ್ಯೇ? ಎಡವಿದ ಮೇಲೆ ಬೀಳಲೂಬಹುದು ಅಲ್ಲವೇ? ಸರಿ, ಮುಂದೆ ಸಾಗೋಣ ಬನ್ನಿ.

ಈ ಬೀಳುಗಳು ಯಾವ ಯಾವ ರೀತಿ ಆಗಬಹುದು? ನಡೆಯುವಾಗ ಬೀಳಬಹುದು, ಓಡುವಾಗ, ಎಡವಿದಾಗ, ಗಾಡಿಯಲ್ಲಿ ಸಾಗುವಾಗ ಅಂತೆಲ್ಲಾ ಒಂದೊಂದು ಕಾರಣಗಳು ಬೀಳೋದಕ್ಕೆ.

ಒಮ್ಮೆ ನಮ್ಮ ಮನೆಯಲ್ಲಿ ಹೀಗಾಯಿತಂತೆ. ಅಜ್ಜಿ ನೆಲದ ಮೇಲೆ ರಾಗಿಯನ್ನು ಹರಡಿದ್ದಾರೆ. ಯಾಕೆ ಏನು ಅಂತ ಗೊತ್ತಿಲ್ಲ. ಹೊರಗಿನ ಬಿಸಿಲಿನಿಂದ ಬಂದವರಾರೋ ಅದರ ಮೇಲೆ ಕಾಲಿಟ್ಟು ಜಾರಿಬಿದ್ದು ಪೆಟ್ಟು ಮಾಡಿಕೊಂಡರಂತೆ. ಬಾಗಿಲ ಬಳಿಯೇ ಹಾಕಬೇಕಿತ್ತೇ ಬೇರೆಲ್ಲೂ ಜಾಗವಿಲ್ಲವೇ ಅನ್ನೋದಾದರೆ, ಇದು ಅಂದಿನ ಕಾಲ. ಪುಟ್ಟ ಮನೆಯಲ್ಲಿ ಹತ್ತಾರು ಜನ ವಾಸಿಸುತ್ತಿದ್ದ ಕಾಲ. ಜಾಗ ಎಲ್ಲಿಂದ ಬರುತ್ತೆ? ಇರಲಿ, ಬಿದ್ದವರು ಎದ್ದು ಸಿಟ್ಟುಮಾಡಿಕೊಂಡು ಊಟ ಬಿಟ್ಟರು ಅನ್ನೋದು ಬೇರೆ ವಿಷಯ. ಬಿದ್ದವರು ಹೇಗೆ ಎದ್ದರು ಅನ್ನೋದಕ್ಕೆ ಒಂದು ಉದಾಹರಣೆ.

ಮಾತನಾಡೋದು ಒಂದು ಕಲೆ, ಆದರೆ ಕೆಲವರಿಗೆ ಅದೇ ಕಪ್ಪುಕಲೆ!

ಆಗ ನಾನಿನ್ನೂ ಪ್ರೈಮರಿ ಓದುತ್ತಿದ್ದ ಕಾಲ. ಬಿಇಎಲ್ ಕಾಲೋನಿ'ಯಲ್ಲಿದ್ದ ದೊಡ್ಡಪ್ಪನ ಮನೆಗೆ ಹೋಗಿದ್ದೆವು. ಅಣ್ಣಂದಿರು, ದೊಡ್ಡಪ್ಪನ ಮಗ ಎಲ್ಲ ಸೈಕಲ್ ಏರಿಕೊಂಡು ಹೊರಟರು. ನಾನು ಹೇಗೆ ಕೂತಿರಲಿ? ದೊಡ್ಡಪ್ಪನ ಮಗನ ಸೈಕಲ್'ನ carrier ಮೇಲೆ ನಾನು ಸೀಟಿನ ಹಿಂಬದಿಯಲ್ಲಿ ಇರುವ ರಿಂಗ್ ಹಿಡಿದು ಕೂತೆ. ಹತ್ತು ನಿಮಿಷಕ್ಕೆ ಒಂದು ಗಾಡಿ ಬೀದಿಯಲ್ಲಿ ಬರೋ ದಿನಗಳು ಅವು. ಡೌನ್'ನಲ್ಲಿ ಸೈಕಲ್ ಜೋರಾಗಿ ಓಡುತ್ತಿದೆ, ನಾನು ಕೈಗಳೆರಡನ್ನೂ ಗಾಳಿಯಲ್ಲಿ ತೇಲಿಬಿಟ್ಟಿದ್ದೆ. ಆಮೇಲೆ ಕೇಳಿದ ಸಡ್ಡು "ಧಡ್" ಅಂತ. ಅಷ್ಟೇ ನನಗೆ ಗೊತ್ತು. ಮುಂದಿನ ಒಂದು ಘಂಟೆ ಮಿಕ್ಕೆಲ್ಲರಿಗೂ ಒಂದೇ ಟೆನ್ಷನ್. ತಲೆ ವಿಪರೀತ ನೋವು. ಇಡೀ ರಾತ್ರಿ ವಾಂತಿ. ಡಾಕ್ಟರ್ ವಿಸೀಟ್'ಗಳು ಎಲ್ಲ ಆಗಿ ಕೊನೆಗೆ ಏನೂ ತೊಂದರೆ ಇಲ್ಲ ಅಂದ ಮೇಲೆ ನಿರಾಳ. ಅವತ್ತಿಂದ ಇವತ್ತಿನವರೆಗೂ ಒಂದು ಪೆದ್ದುತನ ಆವರಿಸಿದೆ ಬಿಡಿ!

ಅಮ್ಮನನ್ನು ಕರೆದುಕೊಂಡು ಯಾವುದೋ ಮದುವೆ ಮನೆಗೆ ಹೋಗಿದ್ದೆ. ಊಟೋಪಚಾರ ಮಾತುಕತೆ ಅಂತೆಲ್ಲಾ ಆಗಿ ಹೊರಟೆವು. ಹೀರೋ ಹೋಂಡಾ ಹತ್ತಿ ಬರುವಾಗ ಹಂಪ್ ಕಾಣದೆ ಗಾಡಿ ಜಂಪ್ ಹೊಡೆದು ಮುಂದೆ ಹೋಯಿತು. ಅಮ್ಮ ಎಲ್ಲೂ ಹಿಡಿದುಕೊಳ್ಳದೇ ಕೂತಿದ್ದರೋ ಅಥವಾ ಏನೋ ಗೊತ್ತಿಲ್ಲ. ರೋಡಿನ ಮೇಲೆ ಬಿದ್ದೇ ಬಿಟ್ಟರು. ಅದೊಂದು ಬಸ್ ಸ್ಟಾಪ್ ಸಮೀಪ ಆದ್ದರಿಂದ ಎಲ್ಲ ಜನ ಸೇರಿ ಅವರನ್ನು ಪಕ್ಕಕ್ಕೆ ಕೂಡಿಸಿದರು. ಆಮೇಲೆ ಆಸ್ಪತ್ರೆ ಇತ್ಯಾದಿ ಅಂತೆಲ್ಲಾ ಆಗಿ ಹುಷಾರಾಗಿ ಬಂದರು. ಆ ಒಂದು ವಾರ ನನ್ನ ನೆಮ್ಮದಿಯೇ ಹಾಳಾಗಿತ್ತು. ಅಂದು ಅಮ್ಮ ಬಿದ್ದು ಎದ್ದಿದ್ದರೂ ಇಂದಿಗೂ ನೆನಪಿಸಿಕೊಂಡರೆ ಎದೆ ಝಲ್ ಎನ್ನುತ್ತದೆ. ಬಿದ್ದವರು ಏಳದೆ ಇದ್ದಿದ್ದರೆ?

ಭಾರತದಿಂದ ಅಮೆರಿಕಕ್ಕೆ ಬಂದ ನಮಗೆ ಸ್ನೋ ಅಂದರೇನು ಅಂತಲೇ ಗೊತ್ತಿರಲಿಲ್ಲ. ಸ್ನೋ ಬೀಳುವಾಗ ಇರುವ ಮಜಾ ಅದು ನಿಂತು ಎಲ್ಲೆಡೆ ಗಡ್ಡೆಕಟ್ಟಿ ನಿಂತಾಗ ಮಾತ್ರ ಮಹಾ ಜೀವಭಯ. ಎಲ್ಲಿ ಕಾಲಿಡಬೇಕು ಎಲ್ಲಿಡಬಾರದು ಎಂದು ಅರಿವೇ ಬರುವುದು ಕಷ್ಟಕರ. ಹಗಲಿನ ವೇಳೆ ಬೆಳಕಿರುವಾಗ ಆಫೀಸಿಗೆ ಹೋಗುವಾಗ ತೊಂದರೆ ಆಗದೆ ಇದ್ದರೂ ವಾಪಸ್ ಬರುವಷ್ಟರಲ್ಲಿ ಹೊರಗೆ ಕತ್ತಲೆ ಇರುತ್ತಿತ್ತು. ಎಷ್ಟೋ ಸಾರಿ ಕಾಲು ಜಾರಿದ್ದಿದೆ, ಬಿದ್ದಿರುವುದೂ ಇದೆ. ಬರೀ ನೆಲ ತಾನೇ ಅಂತ ಕಾಲಿಟ್ಟು ಜಾರಿದಾಗಲೆಲ್ಲಾ ಮಹಾಭಾರತವೇ ನೆನಪಾಗುತ್ತದೆ.

ದುರ್ಯೋಧನನ ಹೆಸರು ಕೇಳುತ್ತಿದ್ದಂತೆ ಆತನ ಕಣ್ಣಲ್ಲಿ ನೀರು ಬಂದಿದ್ದೇಕೆ?

ದುರ್ಯೋಧನ ಜಾರಿ ಬಿದ್ದಿದ್ದಾದರೂ ಸಾಮಾನ್ಯ ಬೀಳೇ? ಮೊದಲಿಗೆ ಪಾಂಡವರು ಅರಮನೆ ಕಟ್ಟಿರುವುದು ಮತ್ತು ನಮ್ಮರಮನೆ ಬಂದು ನೋಡಿ ಅಂತ ಕೌರವರಿಗೆ ಆಹ್ವಾನ ನೀಡಿರೋದು ತಡೆಯಲಾರದ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ಅದರ ಮೇಲೆ ನೀರು ಎಂದುಕೊಂಡು ಹುಷಾರಾಗಿ ನಡೆದಾಗ ಅಲ್ಲೇನೂ ಇರದೇ ಮುಠ್ಠಾಳನಾಗಿದ್ದು. ಕೊನೆಗೆ ನೀರಲ್ಲ ಎಂದು ತಿಳಿದುಕೊಂಡು ಮುಂದೆ ಸಾಗಿ ಜಾರಿಬಿದ್ದಿದ್ದು. ಅದನ್ನು ನೋಡಿ ದ್ರೌಪದಿ ಮತ್ತಿತರೂ ನಕ್ಕಿದ್ದು, ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ದ್ರೌಪದಿಯ ಸಖಿ 'ಕುರುಡನ ಮಗ' ಎಂದು ಹೀಯಾಳಿಸಿದ್ದು, ಸ್ವತಃ ದ್ರೌಪದಿಯೇ ಹೇಳಿದಳು ಎಂದುಕೊಂಡು ಅವಳ ಮೇಲೆ ದ್ವೇಷ ಕಾರಿ ಸಭೆಯಲ್ಲಿ ಅವಮಾನ ಮಾಡಿ, ಕೊನೆಗೆ ಕುರುಕ್ಷೇತ್ರ ಯುದ್ಧಕ್ಕೆ ನಾಂದಿಯಾಗಿದ್ದು ಖಂಡಿತ ಚಿಕ್ಕಪುಟ್ಟ ಏಳುಬೀಳಲ್ಲ. ಇದು ಹೆಚ್ಚುಕಮ್ಮಿ ಎರಡೂ ಕಡೆಯೂ ಬೀಳೇ ಎನ್ನಬಹುದು.

ಇಂಟರ್ವ್ಯೂ ಎಂಬ ಯುದ್ಧದಲ್ಲಿ ಗೆಲುವು ಸಾಧಿಸುವುದು ಹೇಗೆ?

ಸ್ವಲ್ಪ ವಾತಾವರಣ ತಿಳಿಯಾಗಿಸೋಣ. ಹಾಗಂತ ಈ ಬೀಳು ಎಂಬುದೆಲ್ಲಾ ಕೆಟ್ಟದ್ದೇ ಅಂತಾನಾ? ಪ್ರೇಮದ ಕಾಣಿಕೆ ಚಿತ್ರದಲ್ಲಿ ಸ್ಕೇಟ್ ಮಾಡುವ ದೃಶ್ಯದಲ್ಲಿ ಡಾ।ರಾಜ್ ಬೀಳುತ್ತಾರೆ. ಅದನ್ನು ಕಂಡು ಪತ್ನಿ ಜಯಮಾಲಾ ನಗುತ್ತಾರೆ. "ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ" ಎಂಬ ಹಾಡು ಏಳುತ್ತದೆ. ಎಲ್ಲಾ ಬೀಳುಗಳೂ ಹೀಗೆ ಸರಸಮಯವಾದರೆ ಎಷ್ಟು ಚೆನ್ನ.

ವಯಸ್ಸಾದಂತೆ ಕೈಕಾಲಲ್ಲಿ ಶಕ್ತಿ ಕಡಿಮೆಯಾಗುವುದು ಸರ್ವೇ ಸಾಮಾನ್ಯ. ಈ ಹಿರಿಯರು ನಡೆಯುವಾಗ ಗೋಡೆ ಹಿಡಿದುಕೊಂಡು ನಡೆಯುವುದು ಅಥವಾ ಒಬ್ಬರ ಸಹಾಯದಿಂದ ನಡೆಯುವುದು ಎಲ್ಲವೂ ಬೀಳದೇ ಇರಲಿ ಎಂದೇ. ಅಲ್ಲವೇ? ಆದರೇನು ಮಾಡುವುದು, ಬಚ್ಚಲಲ್ಲಿ ಕಾಲುಜಾರಿ ಬಿದ್ದು ಸೊಂಟ ಮುರಿದುಕೊಂಡೋ, ಅಥವಾ ತಲೆಗೆ ಪೆಟ್ಟು ತಿಂದೋ ಆಸ್ಪತ್ರೆ ಸೇರುತ್ತಾರೆ. ಅರ್ಥಾತ್ ಈ ಜಾರಿಬೀಳುವಿಕೆ ಅಸುನೀಗುವಿಕೆಗೆ ಹಾದಿ ಮಾಡಿಕೊಡುತ್ತದೆ. ಹೀಗೆ ಬಿದ್ದವರು ಕೆಲವರು ಎದ್ದರೆ ಹಲವಾರು ಏಳುವುದೇ ಇಲ್ಲ.

ಸಿನಿಮಾ ರಂಗದಲ್ಲಿ ಈ ರೀತಿ ಬೀಳುವುದು ಬಹಳಷ್ಟು ಸಾರಿ ನೋಡಿದ್ದೇವೆ. ಖ್ಯಾತ ತಾರೆ ತಮ್ಮ ಮನೆಯ ಟೆರೇಸ್ ಮೇಲೆ ನಡೆಯುತ್ತಿದ್ದಾಗ ಅಕಸ್ಮಾತ್ ಜಾರಿಬಿದ್ದು ತೀರಿಕೊಂಡರು. ಖ್ಯಾತನಟಿಯೊಬ್ಬರು ಐಷಾರಾಮಿ ಹೋಟೆಲ್ ಒಂದರ ಬಾತ್ ಟಬ್' ನಲ್ಲಿ ಜಾರಿಬಿದ್ದು ಅಸುನೀಗಿದರು. ಬಹಳ ಹಿಂದಿನಿಂದಲೂ ಈ ರೀತಿ ಸುದ್ದಿಗಳನ್ನು ಕೇಳುತ್ತಲೇ ಬಂದಿದ್ದೇವೆ. ತಮ್ಮ ತಾರಾ ಜೀವನದಲ್ಲಿ ತುಂಬಾ ಮೇಲೆ ಏರಿದ್ದವರು ಹೀಗೆ ಜಾರಿ ಬಿದ್ದು ಪ್ರಾಣ ಹೋದಾಗ ಏನೆಲ್ಲಾ ಅನುಮಾನಗಳಿಗೆ ಆಸ್ಪದ ಕೊಡುತ್ತದೆ ಎಂದರೆ ಹೇಳತೀರದು.

ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?

ಸಿನಿಮಾ ರಂಗದಲ್ಲಿ ಕಾಣುವಷ್ಟು ಬೀಳು ಬೇರೆಲ್ಲೂ ಕಾಣೋದಿಲ್ಲ. ಒಂದೋ ಎರಡೂ ಸಿನಿಮಾ ಮಾಡಿ ತಕ್ಕ ಮಟ್ಟಿಗೆ ಕಾಸು ಮಾಡಿಕೊಂಡವರಿಗೆ ಮುಂದೆ ಅವಕಾಶ ಸಿಗದೇ ಹೋಗಬಹುದು. ಅಥವಾ ಸಾಲಾಗಿ ತೋಪು ಚಿತ್ರಗಳೇ ಬರಬಹುದು. ಆದರೆ ಅಷ್ಟು ಹೊತ್ತಿಗೆ ಅವರುಗಳು ಥಳುಕುಬಳುಕಿನ ಉಸುಕು ಮರಳಿನಲ್ಲಿ ಸಿಕ್ಕಿಕೊಂಡು ಬಿಟ್ಟಿರುತ್ತಾರೆ. ಕೈಲಿ ಕೆಲಸವಿಲ್ಲದೇ ಹೋದಾಗ ಚಿಕ್ಕ ಜೀವನಕ್ಕೆ ಹೋಗಲಾಗದೆ, ದೊಡ್ಡ ಜೀವನಕ್ಕೆ ಕೈಲಿ ಕಾಸಿಲ್ಲದೆ ಏನೇನೋ ಆಗಿರುವ ಉದಾಹರಣೆಗಳು ಅನೇಕಾನೇಕ. ಒಮ್ಮೆ ಬಿದ್ದವರು ಮೇಲೇಳೋದು ಬಹಳಾ ಕಷ್ಟ. ಅಮಿತಾಭ್'ರಂಥವರು ಬಿದ್ದೂ ಮೇಲೆದ್ದು ವಿಕ್ರಮನಾಗಿ ನಿಂತರು. ಇಂಥವರು ವಿರಳ, ಬಿದ್ದು ಹೇಳಹೆಸರಿಲ್ಲದೆ ಹೋದವರೇ ಅನೇಕ.

ನಾನೊಂದು ಕಚೇರಿಯಲ್ಲಿದ್ದಾಗ ನಮ್ಮ ಟೀಮಿನಲ್ಲಿ ಒಂದು ಏಳುಬೀಳಿನ exercise ಮಾಡಿಸಿದರು. ಅದೇನಪ್ಪಾ ಅಂದರೆ, ದೊಡ್ಡ ಬಿಳಿಯ ಹಾಳೆಯ ಮೇಲೆ 'ಬಾಲ್ಯದಿಂದ ಇಲ್ಲಿಯವರೆಗೂ' ನಮ್ಮ ಜೀವನದಲ್ಲಾದ ಏಳುಬೀಳನ್ನು ಗುರುತಿಸಿಕೊಂಡು graph ಹಾಕಬೇಕು. ಏಳು ಎಂದಾಗ ಗೆರೆ ಮೇಲೆ ಹೋದರೆ, ಬೀಳು ಎಂದಾಗ ಗೆರೆ ಕೆಳಗೆ ಇಳಿಯಬೇಕು. ಈ ಏಳು ಅಥವಾ ಬೀಳಿನ ತೀವ್ರತೆಯ ಮೇಲೆ ಎಷ್ಟರ ಮಟ್ಟಿಗೆ ಗೆರೆ ಮೇಲಕ್ಕೆ ಎಳೆಯಬೇಕು ಅಥವಾ ಇಳಿಸಬೇಕು ಎಂಬುದು ನಮಗೆ ಬಿಟ್ಟಿದ್ದು. ಮೊದಲಿಗೆ ಮೋಜು ಎನಿಸಿದರೂ, ಒಬ್ಬೊಬ್ಬರ ಹಾಳೆಯ ಮೇಲೂ ಗೆರೆಗಳು ಮೂಡಿತ್ತಿದ್ದಂತೆ ಒಂದು ರೀತಿ ಮೌನ ಆವರಿಸಿತ್ತು. ಇಪ್ಪತ್ತು ನಿಮಿಷಗಳ ನಂತರ ಎಲ್ಲರ ಗ್ರಾಫ್'ಗಳನ್ನೂ ಅಕ್ಕಪಕ್ಕ ಇರಿಸಿ ನೋಡಿದಾಗ 'ಯಾರ ಜೀವನದಲ್ಲೂ ಬರೀ ಏಳು ಅಥವಾ ಬೀಳು ಇರಲಿಲ್ಲ. ಹಲವು ವರ್ಷ ಏಳು ಕಂಡವರು ಪ್ರಪಾತಕ್ಕೆ ಬಿದ್ದಿರಬಹುದು ಅಥವಾ ಬರೀ ಬೀಳನ್ನೇ ಕಂಡಿದ್ದವರು ಕ್ರಮೇಣ ಏಳನ್ನೂ ಕಂಡಿದ್ದರೂ. ಇಪ್ಪತ್ತು ನಿಮಿಷದಲ್ಲಿ ಅಗಾಧ ವಿಷಯ ಅರಿವಾಗಿತ್ತು. ಮತ್ತೊಬ್ಬರು ಸದಾ ಖುಷಿಯಾಗಿರುತ್ತಾರೆ, ಅದೇಕೋ ಕಷ್ಟವೆಲ್ಲಾ ನಮಗೇ ದಕ್ಕಿದೆ ಎಂದುಕೊಂಡರೆ ಅದು ಮಹಾಸುಳ್ಳು.

ಪ್ರತಿಷ್ಠಿತ ಕಾಲೇಜು ಒಂದರ ಒಬ್ಬ ವಿದ್ಯಾರ್ಥಿ ಓದು ಮುಗಿಸಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಓದಿನ ಜೀವನದ ಎಲ್ಲ ಪರೀಕ್ಷೆಗಳಲ್ಲೂ ಮೊದಲಿಗನಾಗಿದ್ದ ಅವನಿಗೆ ದೊಡ್ಡ ಕೆಲಸ ಕಟ್ಟಿಟ್ಟಬುತ್ತಿ ಎಂದೇ ಎಲ್ಲರ ಅನಿಸಿಕೆ. ತಾನು ಅರ್ಜಿ ಸಲ್ಲಿಸಿದ್ದ ದೊಡ್ಡ ಕಂಪನಿಯಿಂದ ಅವನಿಗೆ ಸಂದರ್ಶನಕ್ಕೂ ಆಹ್ವಾನ ಬಂತು. ಅವನಿಗೇನೂ ಅಚ್ಚರಿಯಾಗಲಿಲ್ಲ. ಆದರೆ ನಿನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದಾಗ ಮಾತ್ರ ಬಿಟ್ಟ ಬಾಯಿ ಮುಚ್ಚಿರಲಿಲ್ಲ. ಕಾರಣ ತುಂಬಾ ಸಿಂಪಲ್. ಸಂದರ್ಶನ ಮಾಡಿದವರು ಹೇಳಿದ್ದಿಷ್ಟೇ "ಒಂದು ಕಂಪನಿಯ ಕೆಲಸದಲ್ಲಿ ಎಲ್ಲವೂ ಗೆಲುವೇ ಇರೋದಿಲ್ಲ. ಒಂದು ಪ್ರಾಜೆಕ್ಟ್ ಗೆಲ್ಲಬಹುದು ಮತ್ತೊಂದು ಸೋಲಬಹುದು. ಎರಡನ್ನೂ ಸಮನಾಗಿ ಸ್ವೀಕರಿಸಿ ಮುಂದೆ ಹೋಗುವ ಮಂದಿ ನಮಗೆ ಬೇಕು. ನಿನಗೆ ಬೀಳು ಎಂದರೆ ಏನು ಅಂತಲೇ ಗೊತ್ತಿಲ್ಲ. ನಿನ್ನ ಪ್ರಾಜೆಕ್ಟ್ ಸೋತರೆ ನೀನು ಅದನ್ನು ಸ್ವೀಕರಿಸುತ್ತೀಯೋ ಇಲ್ಲವೋ ಎಂಬುದೇ ನಮಗೆ ಅನುಮಾನ. thanks for coming" ಅಂತಂದು ವಾಪಸ್ ಕಳಿಸಿದರು.

ಏಳುವುದು ಬೀಳುವುದು ಎಲ್ಲರ ಜೀವನದ ಅನಿವಾರ್ಯ ಅಂಗ. ಏಳುವುದು ಎಂದಾಗ ಆ ಸ್ಥಾನ ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದು ಪ್ರಶ್ನೆ. ಅಲ್ಪನಿಗೆ ಐಶ್ವರ್ಯ ಬಂದರೆ ಅಂತಾರಲ್ಲ ಹಾಗೆ. ಅದರಂತೆಯೇ, ಬಿದ್ದಾಗ ಹಾಗೆ ಮಖಾಡೆ ಮಲಗುತ್ತಾರೋ ಅಥವಾ ಫೀನಿಕ್ಸ್ ಪಕ್ಷಿಯಂತೆ ಎದ್ದುಬರುತ್ತಾರೋ ಎಂಬುದು ಅವರವರ ತಾಕತ್ತಿನ ಮೇಲೆ ಅವಲಂಬಿತ. ಬೀಳೋದು ದೊಡ್ಡದಲ್ಲ. ಬಿದ್ದ ಮೇಲೆ ಏಳೋದು ಮುಖ್ಯ. ಎದ್ದ ಮೇಲೆ ಮತ್ತೆ ಬೀಳದಂತೆ ನೋಡಿಕೊಳ್ಳೋದು ಇನ್ನೂ ಮುಖ್ಯ.

English summary
Our greatest glory is not in never falling, but in rising every time we fall. Have you ever fallen in your life? Srinath Bhalle has shared his experience of falling and rising. you too do.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more