ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಬಂಗಾರದ ಹೂವು ಚಿತ್ರದ ಒಂದು ಹಾಡು "ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ" ಅಂತ ಆರಂಭವಾಗಿ ನಂತರ ಮೊದಲ ಚರಣದಲ್ಲಿ "ಜೀವನ ಜಾಮೆಟ್ರಿ ಅಲ್ಲ, ಬಾಳೆಲ್ಲ ಬಾಟ್ನಿ'ಯಲ್ಲ, ಲೈಫಲ್ಲಿ ಓದಿಗೆಲ್ಲ ಬೆಲೆಯೇ ಇಲ್ಲಾ..." ಎಂದೆಲ್ಲಾ ಇದೆ... ಸದ್ಯಕ್ಕೆ ಲೈಫು, ಓದು ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಜ್ಯಾಮಿತಿಯ ಬಗ್ಗೆ ಮಾತ್ರ ಆಲೋಚಿಸೋಣ...

ಮಿಡ್ಲ್ ಸ್ಕೂಲಿನಲ್ಲೇ ಜಾಮೆಟ್ರಿ ರುಚಿ ಹತ್ತಿದ್ದರೂ, ಹೈಸ್ಕೂಲ್ ಗೆ ಬಂದ ಮೇಲೆ Geometry ಗಾಂಭೀರ್ಯ ಹೆಚ್ಚುತ್ತೆ. ಒಟ್ಟಾರೆ ನೂರು ಅಂಕಗಳ mathematicsನಲ್ಲಿ ಜಾಮೆಟ್ರಿಗೆ ಮೂವತ್ತೈದು ಅಂಕಗಳು. Arithmetic ಮತ್ತು Algebra ಸೇರಿ ಅರವತ್ತೈದು ಅಂಕಗಳು. ಪರೀಕ್ಷೆ ಸಮಯದಲ್ಲೂ ಅಷ್ಟೇ. ಬೆಳಿಗ್ಗೆ 65 ಅಂಕಕ್ಕೆ ಬರೆದರೆ, ಮಧ್ಯಾಹ್ನಕ್ಕೆ 35 ಅಂಕಗಳು. ಲೆಕ್ಕ ಅಂದರೆ ಕೆಲವರಿಗೆ ಜ್ವರ ಬಂದಂತೆ ಮೈಯೆಲ್ಲಾ ಬೆಂಕಿಯಂತೆ ಬಿಸಿಯಾಗೋದು ಯಾಕೆ ಗೊತ್ತಾ? Arithmetic (A), Algebra (A), Geometry (G) ಅಂದ್ರೆ AAG (ಬೆಂಕಿ) ಅಂತ ನನ್ನ ಉವಾಚ. ಈಗ ವಿಷಯಕ್ಕೆ ಬರೋಣ...

ಶ್! ಇದು ಕಿವಿ ವಿಷಯ; ಕಿವಿ ತೆರೆದಿರಲಿ, ಆದರೆ ಕೇಳಿಸಿಕೊಳ್ಳಬೇಡಿಶ್! ಇದು ಕಿವಿ ವಿಷಯ; ಕಿವಿ ತೆರೆದಿರಲಿ, ಆದರೆ ಕೇಳಿಸಿಕೊಳ್ಳಬೇಡಿ

ಜ್ಯಾಮಿತಿ ಅಲಿಯಾಸ್ geometry ಅಂದ್ರೆ ಮೊದಲು ತಲೆಗೆ ಬರೋದೇ Camlin Geometry Box. ಮಧ್ಯಮ ವರ್ಗದ ಮನೆಗಳಲ್ಲಿ ಸಾಮಾನ್ಯವಾಗಿ ಹಿರಿಯರು ಅಂದ್ರೆ ಅಕ್ಕ/ಅಣ್ಣ ಬಳಸಿದ ಜಾಮಿಟ್ರಿ ಡಬ್ಬ ಚಿಕ್ಕವರ ಕೈಗೆ ಬರುತ್ತೆ. ಇದು ಭಾಳಾ ದುಃಖದ ವಿಷಯ. ತರಗತಿಯಲ್ಲಿನ ಹಲವಾರು ಸಹಪಾಠಿಗಳು ಝಗಝಗ ಹೊಳೆಯುವ ಡಬ್ಬ ಇಟ್ಟುಕೊಂಡಿದ್ದು, ನಮ್ಮಲ್ಲಿ ತಡಕಲಾಂಡಿ ಡಬ್ಬ ಇದ್ದರೆ ಎಂಗೆಂಗೋ ಆಗುತ್ತೆ.

ಒಂದು Geometry ಡಬ್ಬದಲ್ಲಿ ಏನೇನು ಸಲಕರಣೆಗಳು ಇರುತ್ತವೆ? ನಾನು ಓದಿರೋದು ಆಂಗ್ಲ ಮಾಧ್ಯಮ, ಹಾಗಾಗಿ ಆಂಗ್ಲದಲ್ಲೇ ಹೇಳಿಬಿಡುತ್ತೇನೆ. ಎರಡು Squares, ಒಂದು Protractor, ಒಂದು Compass, ಒಂದು Scale, ಒಂದು Eraser, ಒಂದು ಮೋಟು ಪೆನ್ಸಿಲ್. ಲೆಡ್ ಮುರಿದರೆ ಹೊರ ಮೈಯನ್ನು ಜೀವಿಕೊಳ್ಳಲು ಕೆಲವೊಮ್ಮೆ sharpener ಇರುತ್ತಿತ್ತು. ನಾವೇ ಇಟ್ಟುಕೊಂಡರೆ ಪನಾಮ ಬ್ಲೇಡ್ ಅಷ್ಟೇ... ಹೊಸ ಬ್ಲೇಡ್ ಇಟ್ಟುಕೊಳ್ಳುವ ಹಾಗಿಲ್ಲ. ಯಾಕಂದ್ರೆ ಸಕತ್ ಶಾರ್ಪ್ ಇರುತ್ತೆ ಅಂತ. ಅಪ್ಪ shave ಮಾಡಿಕೊಂಡು ಮೊಂಡಾದ ಬ್ಲೇಡ್ ನಮ್ಮ ಪಾಲಿಗೆ. ಒಮ್ಮೆ ಪೆನ್ಸಿಲ್ ಜೀವಿದ ಮೇಲೆ ಆ ಲೆಡ್ ಅನ್ನು ಶಾರ್ಪ್ ಬೇರೆ ಮಾಡೋದಿತ್ತು. ಹಾಗೆ ಮಾಡಬೇಕಾದರೆ ಬೆರಳುಗಳು ಕಪ್ಪಾಗುತ್ತಿತ್ತು. ಬೆರಳು ಕ್ಲೀನ್ ಆಗಿ ಇರಬೇಕು ಅಂತ shirtಗೆ ಒರೆಸಿಕೊಳ್ಳೋದು ಮಾಮೂಲಿ. ಸಂಜೆ ವೇಳೆಗೆ ಬಿಳಿ ಶರ್ಟು ಸ್ಲೇಟು ಬಣ್ಣ ಆಗಿರ್ತಿತ್ತು. ಅಮ್ಮ ಬೈತಿದ್ರು ಅಥವಾ ಎತ್ತಿದ ಕೈ.

Geometry Box And Life Calculation

ಎಷ್ಟೋ ಸಾರಿ, ಜಾಮೆಟ್ರಿ ಕ್ಲಾಸ್ ಆರಂಭವಾಗಬೇಕು ಎಂದಾಗ ಡಬ್ಬ ತೆರೆದು ನೋಡಿದಾಗ ಪೆನ್ಸಿಲ್ ಇರೋದಿಲ್ಲ! ಕೆಲವೊಮ್ಮೆ ಹೊಸತಾದ ಇನ್ನೂ ಜೀವಿರದ ಹೊಸ ಉದ್ದನೆಯ ಪೆನ್ಸಿಲ್ ಇರುತ್ತೆ !! ಪ್ರಾಣ ಸಂಕಟ. Compassಗೆ ಹೊಂದಿಸಬೇಕು ಎಂದರೆ ಆ ಪೆನ್ಸಿಲ್ ಅನ್ನು ಅರ್ಧ ಮಾಡಲೇಬೇಕು. ಇದ್ದಬದ್ದ ಬಲವೆಲ್ಲಾ ಬಿಟ್ಟ ಮೇಲೆ ವಕ್ರವಕ್ರವಾಗಿ ಆ ಪೆನ್ಸಿಲ್ ಮುರಿಯುತ್ತೆ. ಹಲವೊಮ್ಮೆ ತುಂಡು ಪೆನ್ಸಿಲ್ ಇರುತ್ತೆ. ಆದರೆ ಲೆಡ್ ಇರೋದಿಲ್ಲ. ಮೇಷ್ಟ್ರಿಂದ 'ಮನೇಲಿ ಕತ್ತೆ ಕಾಯ್ತಾ ಇದ್ಯಾ?' ಅನ್ನೋ ಬೈಗುಳ. ಸರಿಯಪ್ಪಾ ಅಂತ ಚಕ ಚಕ ಅದನ್ನು ಜೀವಿ ಇನ್ನೇನು ಶಾರ್ಪ್ ಮಾಡಬೇಕು ಅಂದುಕೊಂಡಾಗ ಲೊಟ್ ಅಂತ ಲೆಡ್ ಮುರಿಯುತ್ತೆ. ಮೆಲ್ಲಗೆ ಆ ಲೆಡ್ ಅನ್ನು ಬೆರಳಲ್ಲಿ ಹಿಡ್ಕೊಂಡು ಮತ್ತೆ ಪೆನ್ಸಿಲ್ ಗೆ ಚುಚ್ಚಿ ಇಟ್ಟುಕೊಂಡು ಕೊನೆಗೂ ಸಿದ್ಧವಾದಾಗ ಆ ದಿನ compass ಬಳಕೆಯೇ ಆಗಿರೋದಿಲ್ಲ!

ಈ compass ಕಥೆಯೇ ಸಕತ್ ಮಜಾ. ಹಾರ್ಲಿಕ್ಸ್ ಕುಡಿದು ಶಕ್ತಿಯುತರಾದ ನಾವು compass ಮುಳ್ಳನ್ನು ಭದ್ರವಾಗಿ ಹಿಡಿದು ಒಮ್ಮೆ ಸುತ್ತಿದಾಗ ಅದೇನೋ ಗೊತ್ತಿಲ್ಲ ಇಡೀ ಪುಸ್ತಕಾನೇ ತಿರುಗುತ್ತಿತ್ತು. ಏನಾಯ್ತು ಅಂತ ನೋಡಿದರೆ compass ಚುಚ್ಚಿರುವ ರಭಸಕ್ಕೆ ಆ ಮುಳ್ಳು ಪುಸ್ತಕದ ಕೊನೆಯ ಪುಟ ದಾಟಿ ಹೊರಗಿನ ರಟ್ಟಿಗೂ ಚುಚ್ಚಿರುತ್ತಿತ್ತು. ಕೆಲವೊಮ್ಮೆ ಮೂಡಿಸಿದ ವೃತ್ತ ದೊಡ್ಡದಾಯ್ತು ಅಂದಾಗ ಅದನ್ನು ಅಳಿಸಲು ಹೋದಾಗ ಆ ರಬ್ಬರ್ ಕೆಟ್ಟದಾಗಿದ್ದು ಇಡೀ ಪೇಪರ್ ರದ್ದಿ ಕಾಗದವಾಗುತ್ತಿತ್ತು.

ಹಲವೊಮ್ಮೆ ಒಂದು ಹಾಳೆಯಲ್ಲಿ perfect ವೃತ್ತಗಳನ್ನು ಮೂಡಿಸಿರುತ್ತಿದ್ದೆವು ನಿಜ. ಆದರೆ ಆ ಎರಡೂ ವೃತ್ತಗಳು ಒಂದೆಡೆ ಸೇರಿರಬೇಕಿತ್ತು ಎಂದಾಗ ಅವರೆಡರ ಮಧ್ಯೆ ಸಣ್ಣ ಗ್ಯಾಪ್ ಬಂದಿರುತ್ತಿತ್ತು. ಆಗೆಲ್ಲ ಅನ್ನಿಸುತ್ತಿದ್ದುದು ಆ ವೃತ್ತವನ್ನು ಕೊಂಚ ನೂಕುವ ಹಾಗಿದ್ದಿದ್ದರೆ ಹೇಗಿರೋದು ಅಂತ ! ಮತ್ತೆ ಅಳಿಸೋದು ಮತ್ತೆ ವೃತ್ತ ಬರೆಯೋದು ಒಂದು ಹರಸಾಹಸ. ಯಾಕೆ ಹರಸಾಹಸ ಅಂದ್ರಾ? ಬಹುಶಃ ಆ ಹೊತ್ತಿಗೆ ಲೆಡ್ ಚಿಕ್ಕದಾಗಿರುತ್ತಿತ್ತೋ ಏನೋ, compass ಪಕ್ಕದಲ್ಲಿರುವ screw ಅನ್ನು ಸಡಿಲಗೊಳಿಸಿ ಪೆನ್ಸಿಲ್ ನೂಕಿ ಮತ್ತೆ ಬಿಗಿಯಬೇಕಿತ್ತು. ಆ screw ಸ್ವಲ್ಪ ಹೆಚ್ಚೇ ನಮ್ಮ ಹಾಗೆ ಲೂಸ್ ಇದ್ರೆ ಅದೆಲ್ಲೂ ಬೀಳುತ್ತಿತ್ತು. ಲೂಸ್ ಆಗಿರೋ screw ಬಿದ್ದ ಮೇಲೆ ಪೆನ್ಸಿಲ್ ಲೂಸ್ ಆಗಿ ಆಡುತ್ತೆ. ನಮಗೆ ಆಗ ತಲೆ ಕೆಟ್ಟು ನಾವು ಲೂಸ್ ಲೂಸ್ ಆಗಿ ಆಡ್ತೀವಿ. ಬೆಂಚಿನ ಕೆಳಕ್ಕೆ ಹೋಗಿ ಹುಡುಕುವ ಫಜೀತಿ ಅನುಭವಿಸಿದವರಿಗೆ ಗೊತ್ತು.

Reactive ಆಗಿರುವುದಕ್ಕಿಂತ Proactive ಆಗಿರಿ, ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿReactive ಆಗಿರುವುದಕ್ಕಿಂತ Proactive ಆಗಿರಿ, ಬಾಯಾರಿಕೆ ಆದಾಗ ಬಾವಿ ತೋಡೋ ಕೆಲಸ ಮಾಡದಿರಿ

ಒಂದಾನೊಂದು ಕಾಲದಲ್ಲಿ ಅಂದ್ರೆ, 1970ರ ಆಸುಪಾಸಿನಲ್ಲಿ ಜಾಮಿಟ್ರಿ ಡಬ್ಬದಲ್ಲಿ ಸ್ಟೆನ್ಸಿಲ್ ಪೇಪರ್ ಕೂಡಾ ಇತ್ತಂತೆ. ನನಗೆ ಗೊತ್ತಿಲ್ಲ. ನಾನು ಬಳಸಲು ಆರಂಭಿಸಿದಾಗ ಅದು ಇರಲಿಲ್ಲ. ಆದರೆ ಎರಡೂ ಕಾಲುಗಳಲ್ಲಿ needle ಇರುವ divider ಇತ್ತು. ಒಂದು ರಚಿತ ನಕ್ಷೆ ಅಥವಾ ಇಂಜಿನಿಯರಿಂಗ್ ಡಿಸೈನ್ ಇದೆ ಅಂದುಕೊಳ್ಳಿ. ಅದರಲ್ಲಿ ಎಳೆದಿರುವ ಒಂದು ಗೆರೆಯ ಅಳತೆ ಎಷ್ಟು ಎಂದು ನೋಡಬೇಕು ಎಂದಾಗ ಈ divider ಅನ್ನು ಬಳಸಲಾಗುತ್ತದೆ. ಗೆರೆಯ ಎರಡೂ ತುದಿಗಳಿಗೆ dividerನ ಚೂಪಾದ ಕಾಲುಗಳನ್ನು ಮೆಲುವಾಗಿ ಚುಚ್ಚಿ ನಂತರ ಒಂದು ಸ್ಕೇಲ್ ಬಳಸಿ ಅಳತೆ ಕಂಡುಹಿಡಿಯಬಹುದು. ನೇರವಾಗಿ Scale ಅನ್ನೇ ಬಳಸಿ ಅಳೆಯಬಹುದಿತ್ತಲ್ಲ? Divider ಅನ್ನೋ ಮಧ್ಯವರ್ತಿ ಯಾಕೆ ಅಂದ್ರೆ ಸ್ಕೇಲ್ ಅನ್ನು drawing ಮೇಲೆ ಇರಿಸಿ ಓಡಾಡಿಸಿದಾಗ ಪೆನ್ಸಿಲ್ ಇಂದ ಮೂಡಿಸಿರುವ ಗೆರೆಗಳು ಮಸಿಯಾಗುವ ಸಂಭವ ಇದೆ. ಹಾಗಾಗಿ divider ಬೇಕು.

Geometry Box And Life Calculation

ಆ ಎರಡು squareಗಳನ್ನು ಎಂದಿಗೂ ಬಳಸಲಿಲ್ಲ. ಆ ಎರಡೂ squareಗಳು right angled triangles ಆಗಿರುತ್ತದೆ. ಒಂದು 30-60-90 ಮತ್ತೊಂದು 90-45-45. ಈ 30-60-90 ಅನ್ನೋದನ್ನು ಜ್ಯಾಮಿತಿ ವಿಚಾರದಲ್ಲಿ ಮಾತ್ರ ಆಲೋಚಿಸಿ ಇಲ್ಲದಿದ್ರೆ ಸುಮ್ ಸುಮ್ಕೆ ನಶೆ ಎದ್ದೀತು.

ಇಷ್ಟೆಲ್ಲಾ ಮೊದಲೇ ಗೊತ್ತಿದ್ದ ವಿಷಯಗಳು, ಮತ್ತೊಮ್ಮೆ ಮನನ ಆಯ್ತು ಅಂದುಕೊಳ್ಳುತ್ತೇನೆ. ಈಗ ಪೀಠಿಕೆ ಮುಗೀತು. ವಿಷಯಕ್ಕೆ ಬರೋಣ. ಈ ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ ?

Compass -Pencil ಒಂದು ರೀತಿ ಧೃತರಾಷ್ಟ್ರ - ಸಂಜಯ ಇದ್ದ ಹಾಗೆ. ಚುಚ್ಚಿರುವ ಪಾದ ಧೃತರಾಷ್ಟ್ರನಂತೆ. ಇದ್ದಲ್ಲೇ ಇರುತ್ತೆ. ಆದರೆ ಅದರ ಸಹಚರ Pencil ಅಂದ್ರೆ ಸಂಜಯ 360 ಡಿಗ್ರಿ ಸುತ್ತಿ ವಿಷಯ ಅರ್ಥೈಸಿಕೊಳ್ಳಬಲ್ಲ. ಧೃತರಾಷ್ಟ್ರ ತಾ ನಿಂತೆಡೆಯೇ ನಿಂತ ನೆಲ ಚುಚ್ಚುತ್ತಾನೆ. ಈ Divider, ತನ್ನ ಕೆಲಸ ಆಗಬೇಕು ಅಂತ ಎರಡೂ ಕಾಲುಗಳಿಂದ ಚುಚ್ಚುತ್ತಾನೆ. Scale ಅನ್ನು ಅಳೆಯಲು ಬಳಸುತ್ತೇವೆ ನಿಜ. ಆದರೆ ಮತ್ತೊಬ್ಬರನ್ನು ಅಳೆಯುವ ಮುನ್ನ ತನ್ನ ಕೆಳಗಿರುವ ರೇಖೆಗಳನ್ನು ಅಳಿಸುವ ಅನಾಯಾಸ ಬುದ್ಧಿ ಹೊಂದಿರುತ್ತದೆ. ಇನ್ನು Eraser/Rubber ತಪ್ಪನ್ನು ಅಳಿಸಲು ಬಳಸಬಹುದು. ಆದರೆ ತನ್ನಲ್ಲೇ ಮಸಿಯಿದ್ದಾಗ ಆ Eraser ಮಿಕ್ಕೆಲ್ಲವನ್ನೂ ಮಸಿಯಾಗಿಸುತ್ತದೆ. Sharpener ಕೆಲಸ ಎಂದರೆ ಪೆನ್ಸಿಲ್ ಅನ್ನು ಸಿದ್ಧಗೊಳಿಸೋದು. ಇದೊಂಥರಾ ಮಾತಾಪಿತೃಗಳಂತೆ. ಮೊನಚು ಮಾಡಿ ಸಿದ್ಧಪಡಿಸುವ ಭರದಲ್ಲಿ ಕೆಲವೊಮ್ಮೆ ಆ ಲೆಡ್ ಅನ್ನೇ ಮುರಿಯಬಹುದು. Pencil ತಾನು ಸರಿ ಇದ್ದರೆ ಗೆರೆ ಮೂಡಿಸಬಲ್ಲದು ಆದರೆ ಅದನ್ನು ಅಳಿಸುವುದೂ ಸುಲಭ, ಜೊತೆಗೆ ಕಾಲ ಸಾಗಿದಂತೆ ತಾನೇ ಅಳಿದು ಹೋಗಬಹುದು. ಶಾಶ್ವತವಾಗಿ ಗುರುತು ಮೂಡಿಸಲು ಸೋಲಬಹುದು.

ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

ಎರಡು Squares ಗಳೂ ಲಂಬ ತ್ರಿಭುಜಿಗಳು (right angled triangles) ಅಂತ ಗೊತ್ತು. ಒಂದು ಕೋನ 90 ಅನ್ನೋದು ಶತಸಿದ್ಧ. ಮತ್ತೆರಡು ಕೋನಗಳು ಅಂದ್ರೆ ಒಂದು Squareನಲ್ಲಿ 45-45 ಮತ್ತೊಂದರಲ್ಲಿ 30-60. ನೀವು square ಆಗ ಬಯಸುವಿರಿ ಎಂದರೆ ನಿಮ್ಮ ಬೆಳವಣಿಗೆಗೆ ಹೆಚ್ಚು ಆಸ್ಪದವಿಲ್ಲ ಅಂತಾಯ್ತು. ನಿಮ್ಮ ಮುಂದಿರುವ options ಎರಡೇ ಎರಡು. ಎಷ್ಟು ಬೇಕಾದರೂ ಬೆಳೆಯಬಹುದು ಅಂದ್ರೆ ಅರ್ಥವಾದರೂ ಏನು?

Protractor ಜೀವನ ಎಂದರೆ ಒಂದರಿಂದ ಹಿಡಿದು 179 ಡಿಗ್ರಿವರೆಗೂ ಬೆಳವಣಿಗೆ ಸಾಧ್ಯ. ಆರಾಮಾಗಿ ಮಲ್ಕೋತೀನಿ ಅಂದ್ರೆ ಸೊನ್ನೆ ಆಗಬಹುದು ಅಥವಾ ಅರ್ಧ 'ಪೂರ್ಣ'ನೂ ಆಗಬಹುದು. ಬರೀ ಒಳಿತುಗಳನ್ನೇ ಬಲ್ಲವ ಅರ್ಧ ಪೂರ್ಣ ಎನ್ನುತ್ತೇನೆ. ತನ್ನ ಪಾದದಡಿ ಏನಿದೆ ಅಂತಲೇ ಗೊತ್ತಿರದೆ ಹೋಗಬಹುದು. ಜೀವನದ ಎರಡೂ ಮಗ್ಗುಲನ್ನು ಬಲ್ಲವ ಪೂರ್ಣ ಅರ್ಥಾತ್ ವೃತ್ತ Circle. ವೃತ್ತದ 'ಒಳಗೆ' ಎಲ್ಲಿಟ್ಟರೂ ಬದುಕಬಲ್ಲ. ಆದರೆ ಕೂಪ ಮಂಡೂಕ ಆಗುವ ಸಾಧ್ಯತೆಯೂ ಇದೆ.

ಹಾಗಿದ್ರೆ ಏನಾಗಬೇಕು ಅಂತೀರಾ? ನಾನಾಗ ಬಯಸುವೆ ಒಂದು Pencil ನಿಂದ ಮೂಡುವ 'ಬಿಂದು' !!! ಇದ್ದೂ ಇಲ್ಲದಂತೆ! ಕಾಣದೆಯೂ ಎಲ್ಲೆಡೆ ಇರುವಂತೆ! ನೀವು?

English summary
There is a similarities between geometry box and life. What instrument in the geometry box do you want to become?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X