• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಕಾಲಂ: ನೆಲ ನುಣುಪಾಗುತ್ತಿದೆ, ಮನಸ್ಸು ಒರಟಾಗುತ್ತಿದೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಇದೊಂದು ನುಣ್ಣನೆಯ ಅಥವಾ ನುಣುಪಾದ ಜಗತ್ತು ಅನ್ನೋದ್ರಲ್ಲಿ ನಿಮಗೇನಾದ್ರೂ ಅನುಮಾನ ಇದೆಯಾ?

"ಯಾಮಾರಿದರೆ ಸಾಕು ನುಣ್ಣಗೆ ತಲೆ ಬೋಳಿಸ್ತಾರೆ" ಅಂತ ಹೇಳೋದ್ರಲ್ಲೂ ನುಣ್ಣಗೆ ಅಂತ ಉಲ್ಲೇಖ ಇದೆ. ಆದರೆ ಅರ್ಥ ಬೇರೆ ಅಷ್ಟೇ! ಈಗ ನಾ ಹೇಳ್ತಿರೋದು ಆ ನುಣ್ಣಗೆ ಅಲ್ಲ !

ಅಕ್ಕಿರೊಟ್ಟಿ ಮಾಡಬೇಕು ಎಂದಾಗ ಅಮ್ಮ ಅಕ್ಕಿಯನ್ನು ಮಿಲ್ ನಲ್ಲಿ ಹಿಟ್ಟು ಮಾಡಿಸಿಕೊಂಡು ಬಾ ಎನ್ನುವಾಗ 'ಮೊದಲು ಆ ಬಟ್ಟೆಯನ್ನು ಚೆನ್ನಾಗಿ ಕೊಡವು. ರಾಗಿ ಏನಾದ್ರೂ ಹಾಕಿದ್ರೆ ಅಕ್ಕಿ ಹಿಟ್ಟು ಕಪ್ಪಾಗುತ್ತೆ. ನುಣ್ಣಗೆ ಹಿಟ್ಟು ಮಾಡಿಸಿಕೊಂಡು ಬಾ' ಅಂತ ಹೇಳ್ತಿದ್ರು.

ಈ ಸುಂದರ ವದನ 'ನವರಸ'ಗಳ ಆಗರ, ಸ್ಮೈಲ್ ಪ್ಲೀಸ್!

ನನಗೋ ಆ ಬಟ್ಟೆಯನ್ನು ಕೊಡವೋದಕ್ಕೆ ಹಿಂಸೆ. ಮುಖ- ಮೂತಿಯೆಲ್ಲಾ ಹಿಟ್ಟಾಗುತ್ತೆ ಅನ್ನೋ ಇಸಂ. ಬೆಳ್ಳಗೇನೋ ಕಾಣುತ್ತಿದ್ದೆ. ಆದರೆ ಆ ಬಿಳುಪು ಬೇಕಿರಲಿಲ್ಲ. ಇನ್ನು ಮಿಲ್ ನವನಿಗೆ ಅಮ್ಮ ಹೇಳಿದ ಹಾಗೆಯೇ ಹೇಳಿದರೆ ಅವನು ಗೊಣಗಿಕೊಂಡೇ ಒಮ್ಮೆ ಹಿಟ್ಟು ಮಾಡಿದ್ದನ್ನು ಮತ್ತೊಮ್ಮೆ ಮೆಷೀನಿಗೆ ಹಾಕಿ, ಓಡಿಸಿ ಕೊಟ್ಟು, ನುಣ್ಣಗೆ ಆಗಿದೆ ಹೋಗು ಅಂತಿದ್ದ.

ಒಮ್ಮೊಮ್ಮೆ ಅವನು ಹೇಳಿದ ಮಾತು ನಿಜ ಇರ್ತಿತ್ತು. ಆದರೆ ಹಲವಾರು ಬಾರಿ 'ಅಕ್ಕಿ ಹಿಟ್ಟಿನಲ್ಲಿ ತೆಳುವಾಗಿ ರಾಗಿ ಹಿಟ್ಟೂ ಸೇರಿ ತಿಳಿ ಕಪ್ಪು ಬಣ್ಣ ಇರ್ತಿತ್ತು' ಅಥವಾ 'ಜೋಳದ ಹಿಟ್ಟು ಸೇರಿ ತರಿ ತರಿಯಾಗಿರ್ತಿತ್ತು. "ಇದೇನೋ ತರಿ ತರಿ ಇದೆ ? ಅವನ ಕೈಲಿ ಅಕ್ಕಿ ಕೊಟ್ಟು ಬೆಂಚಿನ ಮೇಲೆ ಮಲಗಿಬಿಟ್ಟಿದ್ಯಾ ?" ಅಂತ ಬೈಸಿಕೊಳ್ತಿದ್ದೆ.

ದಸರಾ ಹಬ್ಬದ ಸಾಲಿನಲ್ಲೋ ಕೆಲವರ ಮನೆಯಲ್ಲಿ ಚರ್ಪು ಅಂತ ಗನ್ ಪೌಡರ್ ಆಲಿಯಾಸ್ (ಸಿಹಿ) ಕಳ್ಳೇಹಿಟ್ಟು ಕೊಡ್ತಿದ್ರು. ಎಂಥಾ ನುಣುಪು ಅಂದ್ರೆ ಬಾಯಲ್ಲಿ ಹಾಕಿಕೊಂಡ ತಕ್ಷಣ ಅಲ್ಲಲ್ಲೇ ಅಂಟಿಕೊಂಡು ಬಿಡುತ್ತಿತ್ತು ಅಥವಾ ಗಂಟಲಿಗೆ ಸಿಕ್ಕಿ ಒದ್ದಾಡುವ ಹಾಗೆ ಆಗ್ತಿತ್ತು. ಹಾಗೆ ಬಾಯಲ್ಲಿ ಹಾಕಿಕೊಂಡು ನೆತ್ತಿ ಹತ್ತಿಸಿಕೊಂಡರೆ "ಅದೇನು ಅಂಥಾ ಅವಸರ? ನಿಧಾನಕ್ಕೆ ತಿನ್ನಬಾರದಾ?" ಅಂತ ಬೈಗುಳ guarantee.

ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!

ನಾನೇನು ಮಾಡ್ಲಿ? ನನ್ನ ಗಂಟಲಿನ ಕೊಳವೆ ಸಣ್ಣ. ಗಟ್ಟಿ ಅವಲಕ್ಕಿ ಒಗ್ಗರಣೆ ಹಾಕಿ ತಿಂದಾಗಲೂ ಗಂಟಲಿಗೆ ಸಿಕ್ಕಿಕೊಂಡು, ಕೆಮ್ಮು ಹತ್ತಿ, ಅದು ಬಿಕ್ಕುವಂತೆ ಆಗಿ, ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತೆ.

ಇನ್ನು ಈ ನುಣುಪಾದ ಅರಿಶಿನದ ಕಥೆ. ಸ್ನಾನದ ನಂತರ ಹೆಣ್ಣುಗಳು ಕೆನ್ನೆಯ ಬದಿಗೆ ಹಚ್ಚಿಕೊಳ್ಳುವ ಅರಿಶಿನ ನುಣ್ಣಗೆ ಇರದಿದ್ದರೆ ಖಂಡಿತ ಯಾರೂ ಹಚ್ಚೋಲ್ಲ . ಈಗ್ಯಾರೂ ಯಾಕೆ ಹಚ್ಚುವುದಿಲ್ಲ ಅಂತ ಅರ್ಥವಾಯ್ತು ಅನ್ನಬೇಡಿ. ಮಾಡರ್ನ್ ಯುಗದಲ್ಲೂ ಈ ಪದ್ಧತಿ ಇನ್ನೂ ಸತ್ತಿಲ್ಲ. ಮದುವೆಯ ಸಮಯದಲ್ಲಿ ಹೆಣ್ಣು / ಗಂಡಿನ ಕೈಕಾಲಿಗೆ ಅರಿಶಿನ ಹಚ್ಚೋ ಶಾಸ್ತ್ರ ಇದೆ. ನುಣ್ಣನೆಯ ಅರಿಶಿನ ಜಾಗದಲ್ಲಿ ತರಿತರಿ ಅರಿಶಿನ ಇತ್ತು ಅಂದುಕೊಳ್ಳಿ, ಹೆಣ್ಣು- ಗಂಡಿನ ಮೈಕೈಯೆಲ್ಲಾ ಲೈಟಾಗಿ ಗೀರಿದಂತೆ ಇರುತ್ತೆ.

ಒರಟಾದ ಕೆನ್ನೆಯನ್ನು ಜಿಲೆಟ್ ಬ್ಲೇಡಿನಿಂದ ಶೇವ್ ಮಾಡಿಕೊಂಡ ನಂತರ ಲೋಷನ್ ಹಚ್ಚಿಕೊಂಡು ನಿಂತ ಗಂಡಿಗೆ ನುಣುಪಾದ ಕೆನ್ನೆಯಿರುತ್ತದೆ. ಅದರಲ್ಲೂ ಎಂಥಾ ನುಣುಪಾದ ಕೆನ್ನೆ ಎಂದರೆ ಮೋಟುದ್ದ ವಸ್ತ್ರ ಧರಿಸಿದ್ದ ಪೆಣ್ ಹಾಗೆ ಬಂದು ಅವನಿಗೆ ಒರಗಿ ನಿಲ್ಲುವಷ್ಟು. ಆಯಸ್'ಕಾಂತ' ಪರಿಣಾಮ ಅಂತಾರಂತೆ ಇದಕ್ಕೆ !

ಇದು ಒಂದು ಮೊಟ್ಟೆಯ ಕಥೆಯಲ್ಲ, ಹಲವು ಕೂದಲ ಕಥೆ!

ನಾನೂ ಕಾಲೇಜು ದಿನಗಳಲ್ಲಿ ಇದನ್ನು ನಂಬಿ ನುಣುಪಾಗಿ ಶೇವ್ ಮಾಡಿಕೊಳ್ಳುತ್ತಿದೆ. ಕೆನ್ನೆ ಮೇಲೆ ಕೂಡುತ್ತಿದ್ದ ಲೇಡಿ ಸೊಳ್ಳೆ ಹಾಗೇ ಜಾರಿ ಬಿದ್ದದ್ದನ್ನು ನಾನೇ ಕಣ್ಣಾರೆ ನೋಡಿದ್ದೀನಿ ! ಅದೂ ನಿಜಾ ಅನ್ನಿ . ನಮ್ಮದು, ಓಂಪುರಿ ಕೆನ್ನೆಯಲ್ಲದಿದ್ದರೂ ಹೇಮಾಮಾಲಿನಿ ಕೆನ್ನೆಯಂತೂ ಅಲ್ಲ.

ಕೈ-ಕಾಲುಗಳ ಮೇಲೆ ಬೆಳೆದ ಕೂದಲನ್ನು ಬೋಳಿಸಿ ನುಣುಪಾಗಿಸಿ ಅಂದ ಹೆಚ್ಚಿಸಿಕೊಳ್ಳುವ ಪರಿ ಹೆಂಗಸರಲ್ಲಿ ಬಹಳ ಹಿಂದಿನಿಂದಲೂ ಬಂದಿದೆ. ಎಂಥಾ ನುಣುಪು ಎಂದರೆ ರೇಷ್ಮೆ ಅಥವಾ satin ವಸ್ತ್ರ ಕೈ ಮೇಲೆ ಹಾಕಿದರೆ ಹಾಗೇ ಜಾರುತ್ತೆ. ಆ ಹೆಣ್ಣಿನ ಗಂಡು ಅವಳ ಕೈ ಹಿಡಿಯಲು ಹೋದಾಗ ಅವನ ಕೈ ಜಾರಿಹೋಗುತ್ತೆ.

ಇನ್ನು ಈ ನುಣುಪಿನ ಕಥಾನಕದ ಮುಂದಿನ ಹೀರೋ shampoo. ತಲೆಗೂದಲಿಗೆ ಎಣ್ಣೆ ಹಚ್ಚಿಕೊಂಡು ನೆಂದು, ಒರಟಾದ ಸೀಗೇಪುಡಿಯಲ್ಲಿ ಚೆನ್ನಾಗಿ ತಿಕ್ಕಿ ತೊಳೆದ ನಂತರ ಖಂಡಿತ ತಲೆಗೂದಲು ಒರಟಾಗೇ ಇರುತ್ತಿತ್ತು. ಆಗ ಬಂದ ಆವಿಷ್ಕಾರ ಎಂದರೆ ನುಣುಪಾದ shampoo. ಎಣ್ಣೆಯೂ ಹಚ್ಚದೆ ನೆಂದ ತಲೆಗೂದಲಿಗೆ shampoo ತಿಕ್ಕಬಹುದು. ಎಂಥಾ ನುಣುಪು ತಲೆಗೂದಲು ಎಂದರೆ ತಂಗಾಳಿ ಬೀಸಿದರೆ ಕೂದಲು ಹಕ್ಕಿಯಂತೆ ಹಾರುತ್ತೆ !

ಬಿಳಿಯಾದ ಪುಡಿ / ಕಲ್ಲು ಉಪ್ಪು ಪ್ಯಾಕೆಟ್ ನಲ್ಲಿ ಅಂಟಂಟಾಗಿ ಇದ್ದು, ಅವನ್ನು ಡಬ್ಬಕ್ಕೋ ಬಾಟ್ಲಿಗೋ ಹಾಕೋಷ್ಟರಲ್ಲಿ ಹಸ್ತವೆಲ್ಲಾ ಉಪ್ಪೋ ಉಪ್ಪು. ಆಗ ಬಂತು ನೋಡಿ ಕ್ಯಾಪ್ಟನ್ ಕುಕ್ ಉಪ್ಪು. ಅತ್ಯಂತ ನುಣುಪಾದ ಉಪ್ಪು. ಪ್ಯಾಕೆಟ್ ತುದಿಯಲ್ಲಿ ಕೊಂಚ ಕಟ್ ಮಾಡಿ ಪ್ಯಾಕೆಟ್ ಬಗ್ಗಿಸಿದರೆ ಸಾಕು, ಸರಾಗವಾಗಿ ಹರಿಯುತ್ತದೆ. ಅದಾದ ಮೇಲೆ ಕೈಗೆ ಅಂಟಾಗುವ ಉಪ್ಪನ್ನು ನಾನು ನೋಡೇ ಇಲ್ಲ.

ಕಾದಿರೋ ನೀರಿಗೆ ತುಪ್ಪ ಹಾಕಿ, ಜೊತೆಗೆ ರಾಗಿ ಹಿಟ್ಟು ಹಾಕಿ, ಚೆನ್ನಾಗಿ ಕುದಿಸಿ ನಂತರ ಗಂಟಾಗದಂತೆ ಚೆನ್ನಾಗಿ ನಾದಿ, ಗುಂಡು ಗುಂಡಾಗಿ ಸುತ್ತಿ ತಟ್ಟೆಯಲ್ಲಿಟ್ಟು ತುಪ್ಪ ಸವರಿದರೆ ಆ ನುಣುಪಾದ ಮಿರಿಮಿರಿ ಮಿಂಚೋ ರಾಗಿ ಮುದ್ದೆಯ ಅಂದ ಯಾರು ಯಾರನ್ನೋ ನೆನಪಿಗೆ ತರುತ್ತೆ, ಅಲ್ವಾ?

ಪ್ರತಿ ಅಂಗಡಿಯಲ್ಲೂ ನುಣುಪಾದ ಬೊಂಬೆಗಳು (mannequin) ಇದ್ದು ಅವಕ್ಕೆ ಬಟ್ಟೆ ತೊಡಿಸಿರುತ್ತಾರೆ. ಎಷ್ಟೋ ಸಾರಿ ಅದರ ಮೇಲಿರೋ ಬಟ್ಟೆ ನಮಗೂ ಚೆನ್ನಾಗಿ ಕಾಣುತ್ತೆ ಅಂತ ತೊಗೋತೀವಿ. ಕೊಂಡ ಬಟ್ಟೆ ಹಾಕ್ಕೊಂಡ್ ತಿರುಗಿದರೆ ನಮ್ಮ ಕಡೆ ಯಾರೂ ತಿರುಗಿ ನೋಡೋದಿಲ್ಲ. ಏಕೆ? ಮೊದಲಿಗೆ, ಆ ಬೊಂಬೆಗಳು ಸುತ್ತಮುತ್ತ ಸೊಗಸಾದ lighting ಇರುತ್ತೆ. ಮತ್ತೆ, ಹೆಚ್ಚುವರಿ mannequinಗಳು ಸಪೂರ. ನಾವೋ ಸಿಕ್ಕಾಪಟ್ಟೆ ಪೂರಾ, ಅದೇ ನಮ್ ವರಿ! ಆ ನುಣುಪು ಬೊಂಬೆಗಳನ್ನು ತೋರಿ ನಮಗೆ ನುಣ್ಣಗೆ ಬೋಳಿಸೋದಕ್ಕೆ ವ್ಯಾಪಾರ ಅನ್ನುತ್ತಾರೆ.

ನಿಜ ಜೀವನದಲ್ಲಿ ಬೋಳಾಗಿರೋದ್ರಲ್ಲಿ ಸಿಕ್ಕಾಪಟ್ಟೆ ಅನುಕೂಲ ಇದೆ ಅನ್ನಿಸುತ್ತೆ. ತಲೆ ನುಣ್ಣಗೆ ಇದ್ದರೇ ಯಾವುದೇ ರೀತಿಯ ವಿಗ್ ಗೆ ತಲೆ ಸಿದ್ಧ. ನಾಲ್ಕಾರು ರೀತಿ ವಿಗ್ ಇಟ್ಟಿದ್ದರೆ ಕೆಲಸಕ್ಕೊಂದು, ಪಾರ್ಟಿಗೊಂದು, ತರಕಾರಿ ಮಾರ್ಕೆಟ್ ಗೊಂದು ಹೀಗೇ ನಾನಾ ರೀತಿ ಗೆಟ್-ಅಪ್ ಇಟ್ಕೋಬಹುದು. ಜೊತೆಗೆ ನನ್ ಜುಟ್ಟು ನನ್ ಹೆಂಡ್ತಿ ಕೈಲಿ ಕೊಟ್ಟಿಲ್ಲ ಅಂತ ಹೆಮ್ಮೆಯಿಂದ ಹೇಳ್ಕೋಬಹುದು! ಎಲ್ಲಿಗಾದರೂ ತಕ್ಷಣ ಹೊರಡಬೇಕು ಎಂದಾಗ ತಲೆ ಬಾಚಿಕೊಳ್ಳೋ ಅವಶ್ಯಕತೆ ಇರೋಲ್ಲ.

ಪೂರಾ ಬೋಳಾಗದೆ ಅರ್ಧಂಬರ್ಧವಾದರೆ, 'ಒಂದು ಮೊಟ್ಟೆಯ ಕಥೆ' ಆಗುತ್ತೆ. ಈಗಾಗಲೇ ಅದರ ಬಗ್ಗೆ ಈ ಹಿಂದೆ ಮಾತನಾಡಿದ್ದೇವೆ.

ಅಂದಿನ ದಿನಗಳಲ್ಲಿ ಮಧ್ಯಮವರ್ಗದವರ ಮನೆಗಳಲ್ಲಿ ಸಾಮಾನ್ಯವಾಗಿ red-oxide ನೆಲಗಳು ಸರ್ವೇಸಾಮಾನ್ಯ. ಕೊಂಚ ದೊಡ್ಡ ಮನುಷ್ಯರಾದರೆ ಟೈಲ್ಸ್. ಈ ಟೈಲ್ಸ್ ನ ಮಹತ್ವ ಅನ್ನೋದು ಏನಪ್ಪಾ ಅಂದ್ರೆ ಅದರ ಮೇಲೆ ಕೊಳೆ ಕೂತರೆ ಬೇಗ ಅರಿವಾಗೋದಿಲ್ಲ. ಜೊತೆಗೆ ನೆಲ ಒರೆಸಿದ ಮೇಲೆ ನೆಲ ಥಳಗುಟ್ಟುತ್ತೆ. ಮಸ್ತೋಮಸ್ತು . ಬರೀ ಕೊಳೆ ಇದ್ರೆ ಗೊತ್ತಾಗೋದಿಲ್ಲ ಅಂತಿದ್ರೆ ಬೇರೆ ವಿಷಯ. ಆದರೆ ನೀರು ಬಿದ್ರೂ ಗೊತ್ತಾಗೋಲ್ಲ ! ಕಾಲು ಜಾರಿ ಬೀಳೋ ಸಂಭವ ಅತೀ ಹೆಚ್ಚು. ಬಿಡಿ, ಮನೆಯೊಳಗೇ ಚಪ್ಪಲಿ ಹಾಕೊಂಡು ತಿರುಗೋ ಈ ಕಾಲದಲ್ಲಿ ಯಾರೂ ಹಾಗೆಲ್ಲಾ ಬೀಳೊಲ್ಲ!

ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಅಂದರೆ ಮುಖ್ಯವಾಗಿ ಜನ ಸಿಕ್ಕಾಪಟ್ಟೆ ನಡೆದಾಡೋ ಮಾಲ್ ಗಳಲ್ಲೂ ಅತೀ ನುಣುಪಾದ ಮಿರುಗುಟ್ಟೋ ಟೈಲ್ಸ್ ಇರುತ್ತೆ. ನೂರಾರು ಜನ ಓಡಾಡೋ ನೆಲಗಳು ಎಂದ ಮೇಲೆ ಯಾರಾದರೂ ಏನಾದರೂ ಚೆಲ್ಲಿದ್ದರೂ ಗೊತ್ತಾಗೊಲ್ಲ. ಅರಿಯದೆ ಕಾಲಿಟ್ಟು, ಕಾಲು ಜಾರಿ ಬಿದ್ದರೆ ಹೊಣೆ ಯಾರು? ಹೊಣೆ ಬಿಟ್ಟುಹಾಕಿ ಇತ್ತೀಚೆಗೆ ನಮ್ಮ ಸ್ನೇಹಿತರಿಗೆ ಹೀಗಾದಾಗ ಬಿದ್ದವರನ್ನು ಎಬ್ಬಿಸಿ ಕೂಡಿಸುವ ವ್ಯವಧಾನವಿರದೇ ಮುಂದೆ ಸಾಗಿದರು ಅಥವಾ ಓಡಾಡುತ್ತಿದ್ದರು ಎಂದರೆ ಮನುಷ್ಯತ್ವ ಏನಾಗ್ತಿದೆ ಎನಿಸುತ್ತದೆ.

ಲೋಷನ್ ಹಚ್ಚದ ಮೈಕೈ, ನುಣುಪಲ್ಲದ ಮುಖ, ಒರಟಾದ ತಲೆಗೂದಲು, ಒರಟು ಮಾತು, ಸಮತಟ್ಟಾಗಿರದ ನೆಲ ಎಂದೆಲ್ಲಾ ಇದ್ದ ಕಾಲದಲ್ಲಿ ಮನಸುಗಳು ಮೃದುವಾಗಿತ್ತು. ಇಂದು ಎಲ್ಲವೂ ನುಣುಪು. ನೆಲಗಳೂ ನುಣುಪಾಗಿವೆ . ಮನಸ್ಸುಗಳು ಒರಟಾಗಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Floor become soft, mind become harsh- An interesting observation by Oneindia Kannada columnist Srinath Bhalle. How the days and humanity are changed, here is the wonderful article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more