• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಬ್ಬುಗಳ ಬಗ್ಗೆ ತಿಳಿಯುತ್ತ ಹುಬ್ಬುಗಳಿಂದಲೇ ಕಲಿಯೋಣ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕಳೆದ ವಾರಾಂತ್ಯ ನಮ್ಮಲ್ಲಿ ಒಂದು ಕಾರ್ಯಕ್ರಮ ಇತ್ತು ... ಅಲ್ಲಿ ಕಾಲಿಡುತ್ತಿದ್ದಂತೆಯೇ ಒಂದು ಐಡಿಯಾ ಬಂತು... ನೂರಾರು ಜನರ ಸೇರಿರೋ ಕಡೆ ನಾ ಮಾಡಿದ ಪುಣ್ಯದ ಕೆಲಸ ಏನಪ್ಪಾ ಅಂದ್ರೆ, ಅವರ ಹುಬ್ಬುಗಳು ಹೇಗಿವೆ ಅಂತ ನೋಡೋದು !!!

ವರ್ಷಕ್ಕೊಮ್ಮೆ ಆಗುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಹಲವಾರು ವಿಚಾರಗಳನ್ನು ನೋಡಿದರೂ, ನೋಡಿದ ರೀತಿಯಲ್ಲಿ ಕೊಂಚ ಭಿನ್ನತೆ ಇತ್ತು. ಪರಿಚಯದ ಮೊಗಗಳು ಭೇಟಿಯಾದಾಗ ಅರಳುವ ಹುಬ್ಬುಗಳು, ಎಂದೋ ನೋಡಿದ ಮೊಗಗಳನ್ನು ಕಂಡಾಗ ಏರಿದ ಹುಬ್ಬುಗಳು, ಬೇಡದ ಮುಖಗಳನ್ನು ಕಂಡಾಗ ಸಿಡಿಗುಟ್ಟುವ ಹುಬ್ಬುಗಳು, ಪರಿಚಿತರೇ ಆದರೂ ಗಮನಿಸದೆ ಆ ಕಡೆ ಹೋದಾಗ ಹುಸಿನಗೆಯಿಂದ ಗಂಟಾಗುವ ಹುಬ್ಬು, ಕಳೆದ ವರ್ಷ 150 ಕಿಲೋ ತೂಕದ ದೇಹವಿದ್ದು ಈಗ 100 ಕಿಲೋ ಆಗಿ ಎದುರಿಗೆ ನಿಂತವರ ಕಂಡಾಗ ನಂಬಲಾಗದಂತೆ ತೋರುವ ಹುಬ್ಬುಗಳು, ಹೆಚ್ಚು ವಯಸ್ಸಾದವರ ಜೋತುಬಿದ್ದ ಹುಬ್ಬುಗಳು ಎಲ್ಲವೂ ಬಹಳ ವಿಶಿಷ್ಟವಾಗಿ ಕಂಡವು.

ಸಖ್ಯವಿದ್ದರೆ ನಿರ್ಜೀವ ವಸ್ತುಗಳಲ್ಲೂ ಕಾಣುವುದು ಜೀವಂತಿಕೆ

ಇವೆಲ್ಲಾ ಒಂದು ರೀತಿಯದ್ದಾದರೆ, ತಿದ್ದಿ ತೀಡಿದ ಹುಬ್ಬು, ಬಿಲ್ಲಿನಾಕಾರದ ಹುಬ್ಬು, ದಟ್ಟವಾದ ಹುಬ್ಬು, ಎರಡೂ ಕಡೆಯಿಂದ ಬಂದು ಭ್ರೂ ಮಧ್ಯೆ ಸೇರಿದ ಹುಬ್ಬು, ಹಣಿಗೆಯಿಂದ ಬಾಚಿದ ಹುಬ್ಬು, ಇರುವ ಜಾಗದಲ್ಲೇ ಎಲ್ಲೆಲ್ಲೋ ಹರಡಿರುವ ಹುಬ್ಬು, ಥ್ರೆಡ್ಡಿಂಗ್ ಮಾಡಿರುವ ಹುಬ್ಬು, ಪೆನ್ಸಿಲ್ ಲೈನ್ ನಂತೆ ತೆಳ್ಳಗಿನ ಹುಬ್ಬು, ಸ್ಟೇಜಿನ ಮೇಲೆ ಎದ್ದು ಕಾಣಬೇಕು ಎಂದು ಕಪ್ಪು ಬಳಿದ ಹುಬ್ಬು, ನೃತ್ಯದಲ್ಲಿ ಎದ್ದು ಕಾಣಲೆಂದು sparkle ಉದುರಿಸಿಕೊಂಡ ಹುಬ್ಬು, ಕಂಡೂ ಕಾಣದಂತೆ ಇರುವ ಹುಬ್ಬು, ಕಂಗಳ ಮೇಲೆ ನೇರವಾಗಿರುವ ಹುಬ್ಬು, ವಯಸ್ಸಿಗೆ ಅನುಗುಣವಾಗಿ ಬಿಳಿ ಅಥವಾ ಬಿಳಿ ಮತ್ತು ಕಪ್ಪು ಕೂದಲುಳ್ಳ ಹುಬ್ಬು... ಉಫ್ ಎಷ್ಟೆಲ್ಲಾ ಹುಬ್ಬುಗಳನ್ನು ನೋಡಿದೆ ಅಂತ ಗೊತ್ತಾಯ್ತಾ?

ಕಂಗಳ ಮೇಲೆ ಅರ್ಥಾತ್ ಕಂಗಳ ರೆಪ್ಪೆಗಳ ಮೇಲೆ ಛತ್ರಿಯಂತೆ ಇರುವ ಈ ಕೂದಲ ಪ್ರದೇಶವು, ಹಣೆಯಿಂದ ಇಳಿದ ಬೆವರ ಹನಿಯು ನೇರವಾಗಿ ಕಣ್ಣಿಗೆ ತಲುಪದಂತೆ ಕಾಪಾಡುವುದೇ ಹುಬ್ಬು. ಇವುಗಳಲ್ಲಿ ಇಷ್ಟೆಲ್ಲಾ ವಿಧಗಳಿವೆ ಅಂತ ಆಗಲೇ ಗಮನಿಸಿದ್ದು.

ದೈವ ಕೊಟ್ಟ ಹುಬ್ಬನ್ನು ಕತ್ತರಿಯಾಡಿಸದೇ ಹಾಗೆ ಬಿಟ್ಟಿದ್ದ ಪಕ್ಷದಲ್ಲಿ ಅವೂ ಬೆರಳಚ್ಚಿನಂತೆ ಅನನ್ಯ. ಹುಬ್ಬುಗಳಲ್ಲೇ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಗುರುತಿಸಬಹುದಾದಷ್ಟು ನಿಖರ. ಮತ್ತೂ ಒಂದು ಹೆಜ್ಜೆ ಮುಂದೆ ಹೋದರೆ ಈಗಿನ ಮೊಬೈಲ್ ಫೋನುಗಳು face recognition feature ಹೊಂದಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದರಂತೆ eyebrow recognition ಕೂಡ ಮಾಡಬಹುದಂತೆ. ಆದರೆ ಹುಷಾರು ಅಷ್ಟೇ. eyebrow recognition ಅಂತ ಮಾಡಿ ಆ ನಂತರ threading ಮಾಡಿಸಿಕೊಂಡು ಹುಬ್ಬು ಭಿನ್ನವಾದರೆ ನಿಮ್ಮ ಮೊಬೈಲ್ ಹರತಾಳ ಹೂಡಬಹುದು. ಹಾಗಾದಾಗ ಪಾಸ್ವರ್ಡ್ ಉಪಯೋಗಿಸಿ ಅನ್ಲಾಕ್ ಮಾಡಿ ಅಷ್ಟೇ !!

ಜಾಮೆಟ್ರಿ ಬಾಕ್ಸ್ ನಲ್ಲಿರುವ ಯಾವ ಸಲಕರಣೆ ನೀವಾಗ ಬಯಸುವಿರಿ?

ಒಂದಾನೊಂದು ಕಾಲದಲ್ಲಿ unibrow ಅನ್ನೋದು ಬಹಳ ಸಾಮಾನ್ಯವಾಗಿತ್ತಂತೆ. Unibrow ಎಂದರೆ ಒಂದು ಕಣ್ಣಿನ ಮೇಲೆ ಹುಬ್ಬು ಮತ್ತೊಂದು ಖಾಲಿ ಅಂತಲ್ಲಾ... ಒಂದು ಬದಿಯಿಂದ ಸಾಗಿ ಭ್ರೂ ಮಧ್ಯೆಯೂ ಸಾಗಿ ಮತ್ತೊಂದು ತುದಿಗೆ ಹರಿಯುವ ಕೂದಲ ನದಿ. ಕುನ್ನಕ್ಕುಡಿ ವೈದ್ಯನಾಥನ್ ಅವರ ಹುಬ್ಬುಗಳನ್ನು ನೆನಪಿಸಿಕೊಳ್ಳಿ.

ಮುಖದಲ್ಲೇ ಕಪಿಚೇಷ್ಟೆ ತೋರಿಸುವ ಹಾಸ್ಯ ನಟರು ಹುಬ್ಬುಗಳ ಬಳಕೆಯನ್ನು ಬಹಳವಾಗಿ ಮಾಡುತ್ತಾರೆ. ಮುಂದಿನ ಸಾರಿ ಮಿಸ್ಟರ್ ಬೀನ್ ನನ್ನ ಕಂಡರೆ ಗಮನಿಸಿ ನೋಡಿ.

ಸಾಮಾನ್ಯವಾಗಿ ಎಲ್ಲಿಗಾದರೂ ಹೋಗುವ ಮುನ್ನ ತಲೆಬಾಚಿಕೊಳ್ಳೋದು, ಕ್ರೀಮ್ ಹಚ್ಚಿಕೊಳ್ಳೋದು, ಪೌಡರ್ ಹೊಡೆದುಕೊಳ್ಳೋದು ಇತ್ಯಾದಿ ಮಾಡಿಕೊಂಡರೂ ಹುಬ್ಬಿನ ಕಡೆ ಗಮನ ಕೊಡದೆ ಹೋಗೋದು ಸಹಜ. ಅಡ್ಡಾದಿಡ್ಡಿ ಇದೆ ಎನ್ನಿಸಿದರೆ ಬಾಚಣಿಗೆಯಿಂದ ಹುಬ್ಬನ್ನು ಬಾಚಿಕೊಳ್ಳಿ... ನಿಮ್ಮ ಸ್ನೇಹಿತರ ವಲಯದಲ್ಲಿ ನಿಮ್ಮ ಹುಬ್ಬು sensational ಹುಬ್ಬು ಆದರೂ ಆಗಬಹುದು.

ಶ್! ಇದು ಕಿವಿ ವಿಷಯ; ಕಿವಿ ತೆರೆದಿರಲಿ, ಆದರೆ ಕೇಳಿಸಿಕೊಳ್ಳಬೇಡಿ

ಇತ್ತೀಚಿನ ದಿನಗಳಲ್ಲಿ sensational ಅಥವಾ ಅತೀ ಹೆಚ್ಚು troll ಆದ ಹುಬ್ಬುಧಾರಿಣಿ ಎಂದರೆ ಪ್ರಿಯಾ ಪ್ರಕಾಶ್ ವಾರಿಯರ್ ... ಸಾಮಾನ್ಯವಾಗಿ ಆಕೆಯದ್ದು ನೇರವಾದ ಹುಬ್ಬು, ಅಂದರೆ ಮುಖದಲ್ಲಿ ಏನೂ ಭಾವನೆ ತೋರಿಸದಿದ್ರೆ ನೇರವಾದ ಹುಬ್ಬು. ತನ್ನ ಸಹಪಾಠಿಯ ಕಡೆ ನೋಡಿ, ಕೈಬೆರಳುಗಳಲ್ಲೇ ಪಿಸ್ತೂಲ್ ತೋರಿಸಿ ತನ್ನ ಬಲಗಣ್ಣಿನ ಮೇಲಿನ ಹುಬ್ಬನ್ನು ಮೇಲಕ್ಕೆ ಎತ್ತುತ್ತಾಳೆ. ಅದು ಪುಟ್ಟ ಗುಡ್ಡದ ಆಕಾರದಂತೆ ಕಾಣುತ್ತದೆ. ಆದರೆ ಎಡಗಣ್ಣಿನ ಹುಬ್ಬು ನೇರವಾಗಿ ಇರುತ್ತದೆ. ಆಕೆಯ ಆಕ್ಷನ್ ಜೊತೆಗೆ ಹುಬ್ಬುಗಳ ಆಟದ ವಿಡಿಯೋ ಲೋಕಾದ್ಯಂತ ಓಡಾಡಿತ್ತು ... ಇದಿಷ್ಟು ಪ್ರಿಯಾಳ ಕಥೆ...

ಈಗ ಇಷ್ಟೆಲ್ಲಾ ಹುಬ್ಬುಗಳ ಬಗ್ಗೆ ಓದಿದಿರಿ. ನಿಮ್ಮ ಹುಬ್ಬು ಹೇಗಿದೆ ಅಂತ ಗೊತ್ತಾ? ಹೋಗ್ಲಿ ಬಿಡಿ, ಈಗ ಒಮ್ಮೆ ಕಣ್ಣು ಮುಚ್ಚಿ ಹುಬ್ಬುಗಳಿಲ್ಲದ ಮುಖವನ್ನು ಊಹಿಸಿ ನೋಡಿ... ಏನೋ ವಿಕಾರ ಅನ್ನಿಸಿದೆ ಅಲ್ಲವೇ? ಹುಬ್ಬುಗಳ ಪ್ರದೇಶ ಖಾಲಿ ಇದ್ರೆ ಹೆಂಗೆಂಗೋ ಕಾಣುತ್ತದೆ ಅಲ್ಲವೇ? ಒಂದು ಸುಂದರ ವದನ ಎಂದರೆ ಮೀನಿನಾಕಾರದ ಕಂಗಳು, ಸಂಪಿಗೆ ಎಸಳಿನಂಥ ಮೂಗು, ತೊಂಡೆ ತುಟಿಗಳು, ಹಾಲ್ಗೆನ್ನೆ ಹಂಗೇ ಹಿಂಗೇ ಅಂತೆಲ್ಲಾ ಹೇಳುವಾಗ ತಿದ್ದಿ ತೀಡಿದ ಹುಬ್ಬು, ಬಿಲ್ಲಿನಾಕಾರದ ಹುಬ್ಬು ಅಂತೆಲ್ಲಾ ಹೇಳಿ ಮುಂದೆ ಸಾಗುತ್ತೇವೆ. ಮುಖದಾಗಿನ ಇತರ ಅಂಗಗಳ ಮಧ್ಯೆ ಹುಬ್ಬು ಒಂಥರಾ ನೇಪಥ್ಯಕ್ಕೆ ಸರಿದ ಪುರಾಣಕಥೆಯ ಸ್ತ್ರೀಯಂತೆ.

ಹುಬ್ಬಿಲ್ಲದ ಮುಖ ವಿಕಾರ ಅನ್ನಿಸಿದರೂ ಲಿಯೋನಾರ್ಡೊ ಡೇ ವಿನ್ಸಿ ಕೃತ ಜಗತ್ತಿನ ಸುಪ್ರಸಿದ್ಧ ಪೇಂಟಿಂಗ್ ಆದ ಮೊನಾಲಿಸಾಗೆ ಹುಬ್ಬುಗಳೇ ಇಲ್ಲ ಎನ್ನಲಾಗುತ್ತಿದೆ. ಈವರೆಗೆ ಬರೀಗಣ್ಣಿನಿಂದ ನೋಡಿರುವವರೆಲ್ಲಾ ಆಕೆಗೆ ಹುಬ್ಬುಗಳಿಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಪರ್ಷಿಯನ್ ಇಂಜಿನಿಯರ್ ಒಬ್ಬನ ವಿಚಾರಧಾರೆಯೇ ಬೇರೆ. ಒಂದು ಕಾಲದಲ್ಲಿ ಮೊನಾಲಿಸಾಗೆ ಕಣ್ರೆಪ್ಪೆಗಳೂ ಇದ್ದವು, ಹುಬ್ಬುಗಳೂ ಇದ್ದವು. ಬಹುಶಃ ತೆಳ್ಳಗೆ ಇತ್ತೇನೋ, ಆದರೆ ಕಾಲಾನಂತರ ಅವು ಕಾಣದಂತಾಗಿದೆ ಎಂದು ಹೇಳಿದ್ದಾನೆ. ಇದಕ್ಕಾಗಿ ಆತ ಬಳಸಿದ್ದು ಒಂದು ವಸ್ತುವನ್ನು, ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ನೋಡಬಹುದಾದ ಸಾಧನಗಳನ್ನು. ಇಂಥ ಸಾಧನಗಳನ್ನು ಬಳಸಿ ಬೆಳಿಗ್ಗೆಯಿಂದ ಸಂಜೆಯವರೆಗೂ ನೋಡಿ ತನ್ನ ಅಭಿಪ್ರಾಯ ಹೇಳಿದ ಎಂದುಕೊಳ್ಳಬೇಡಿ. ಈ ಅಭಿಪ್ರಾಯಕ್ಕೆ ಆತ ಬರಲು ತೆಗೆದುಕೊಂಡ ಅವಧಿ ಕೇವಲ 3000 ಗಂಟೆಗಳು !!!

ನವರಸಗಳಲ್ಲಿ, ಅದರಲ್ಲೂ ನೃತ್ಯಕಲೆಯಲ್ಲಿ ನವರಸ ಭಾವಗಳನ್ನು ತೋರುವಾಗ ಹುಬ್ಬುಗಳದ್ದು ದೊಡ್ಡ ಪಾತ್ರವಿದೆ. ಭೀಭತ್ಸ ಎಂದಾಗ ಹುಬ್ಬು ಮೇಲಕ್ಕೆ ಹೋದಂತೆ, ಶಾಂತ ಎಂದಾಗ ಹುಬ್ಬೂ ಶಾಂತವಾಗುತ್ತೆ. ದುಃಖ ಎಂದಾಗ ಹುಬ್ಬು ಕೆಳಕ್ಕೆ ಇಳಿಯುತ್ತೆ. ಸಪ್ತಸ್ವರಗಳನ್ನು ಹುಬ್ಬುಗಳನ್ನು ಆಡಿಸುತ್ತಾ ತೋರಿಸಬಹುದೇ ಎಂಬ ಪ್ರಶ್ನೆ ಮೂಡುತ್ತಿದೆ. ಎಲ್ಲಾ ರಾಗಕ್ಕೂ ತೋರಿಸುತ್ತ ಹುಬ್ಬುಗಳನ್ನು ನೋಯಿಸಿಕೊಳ್ಳದಿದ್ದರೂ ಮಾಯಾಮಾಳವಗೌಳಕ್ಕೆ ಪ್ರಯತ್ನಪಟ್ಟು ನೋಡುವಿರಾ?

ವಿಟಮಿನ್ deficiency, ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಶಾಖದಿಂದ, ಮಗುವಿನ ಜನನ ಸಮಯ, ಮನಸ್ಸಿನ ಮೇಲಾಗುವ ಒತ್ತಡ ಇವುಗಳಿಂದ ಹುಬ್ಬಿನ ಕೂದಲು ಉದುರುವುದನ್ನು ಸ್ವಲ್ಪವಾದರೂ ತಡೆದುಕೊಳ್ಳಬಹುದು. ಆದರೆ chemotherapy ಇಂದ ಉಂಟಾದ ಹುಬ್ಬುಗಳ ಕೂದಲ ಉದುರುವಿಕೆ ಸಹಿಸಿಕೊಳ್ಳಲು ಕಷ್ಟವಾಗುತ್ತದೆ.

ಹುಬ್ಬುಗಳ ಕೂದಲುಗಳು ಜೀವನ ಸಾರ ತಿಳಿ ಹೇಳುತ್ತದೆ. ದಟ್ಟವಿದ್ದಾಗ ಉಬ್ಬದಿರು, ತೆಳುವಾದಾಗ ಕುಗ್ಗದಿರು ಎಂದು. ಹುಬ್ಬು ಪ್ರತಿಯೊಬ್ಬರಲ್ಲೂ ಅನನ್ಯ. ಅಂತೆಯೇ ಪ್ರತೀ ಒಬ್ಬನೂ ಅನನ್ಯ. ಹುಬ್ಬುಗಳ ಕೂದಲುಗಳ ಅಡ್ಡಾದಿಡ್ಡಿ ಇರದಂತೆ ಚೆನ್ನಾಗಿ ಕಾಪಾಡಿಕೊಂಡಾಗ ಶಿಸ್ತು ಎದ್ದುಕಾಣುವಂತೆ ಜೀವನದಲ್ಲೂ ಶಿಸ್ತು ಮೂಡಿಸಿಕೊಂಡು ಮಾನ್ಯತೆ ಪಡೆಯಿರಿ. ಹುಬ್ಬಿನ ಕೂದಲುಗಳು ಕಣ್ಣಿಗೆ ಕಲ್ಮಶ ಸೇರದಂತೆ ತಡೆಯುತ್ತದೆ. ಯಕಶ್ಚಿತ್ ಎನಿಸಿಕೊಳ್ಳುವ ಕೂಡಲೇ ಈ ಕಾರ್ಯ ಮಾಡುವಾಗ ನಮ್ಮನ್ನು ಕಲ್ಮಶ ತಟ್ಟದಂತೆ ತಡೆಯಲು ನಾವು ಅಸಮರ್ಥರೇಕೆ?

English summary
Eyebrows are most effective media to express our emotions. Here is a article which speakes about different types of eyebrows and expressions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X