ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸತು ಅಂದ ಮಾತ್ರಕ್ಕೆ ಎಲ್ಲವೂ ಒಳಿತಲ್ಲ, ಹಾಗೆಯೇ ಕೆಟ್ಟದ್ದಲ್ಲ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು...
ಒತ್ತಿಲ್ಲ ದೀರ್ಘವಿಲ್ಲದ 'ನವ' ಎಂದರೆ ಹೊಸತು, ತಾಜಾ, ಹೊಸಬ ಇತ್ಯಾದಿ... ಒಟ್ಟಾರೆ 'ಹೊಸ' ಎಂಬರ್ಥ... 'ನವ' ಅನ್ನೋದು ಆರಂಭದಲ್ಲಿ ಯಾವ complication ಇಲ್ಲದೆಯೇ ಶುರುವಾದರೂ ಆ ಹೊಸತು ಅನ್ನೋದು ಮೊನಚು ಕಳೆದುಕೊಳ್ಳತೊಡಗಿದಂತೆ 'ನವ' ಹೋಗಿ ಗೊಂದಲ, ಹಳತು, ತೊಡಕು, ಪ್ರಶ್ನಾತೀತ ಎಂದೆಲ್ಲಾ ಕೊಂಬು, ಒತ್ತುಗಳನ್ನು ಮೂಡಿಸಿಕೊಂಡು ಕೊನೆಗೆ ಅದರಲ್ಲೇ ಸಿಲುಕಿ ಒದ್ದಾಡಿ ಮತ್ತೊಂದು ಹೊಸತಿಗೆ ಎದುರು ನೋಡೋ ಪರಿ ಇಂದು ನೆನ್ನೆಯದಲ್ಲ.

'ಹೊಸತರ ಮೊನಚು' ಎಂದಾಗ ಮೊದಲ ನೆನಪಾಗೋದೇ 'ನವ ವಧುವರರು'... ಕಾಲ ಒಂದಿತ್ತು... ಮದುವೆಯ ಹಸೆಮಣೆಯ ಅಂತಃಪಟದ ಆಚೆ ಈಚೆ ಇರುವ ನವ ವಧುವರರು ಒಬ್ಬರನ್ನೊಬ್ಬರು ನೋಡಿಯೇ ಇಲ್ಲದೇ, ಪಟ ಸರಿದು ಅಕ್ಷತೆ ಕಾಳುಗಳು ಬಿದ್ದಾಗಲೇ ಒಬ್ಬರನ್ನೊಬ್ಬರು ನೋಡುತ್ತಿದ್ದುದು. ಆ ಮೊದಲ ನೋಟಕ್ಕೆ ಆವರೆಗೂ ಇದ್ದ ಆತಂಕ, ಭಯ ಇತ್ಯಾದಿಗಳು ಕೊಂಚ ತಗ್ಗಿದರೂ ಒಬ್ಬರಿಗೊಬ್ಬರ ನಡುವೆ ಯಾವುದೇ ಮಾತುಕತೆಗಳಿಗೂ ಆಸ್ಪದವೇ ಇಲ್ಲದೆ ಒಬ್ಬರನ್ನೊಬ್ಬರು ಅರಿಯುವ ಹಂತದ "ನವ" ನವೀನ ಅನುಭವಗಳು ಅವರವರ ಸ್ವಂತ.

"ಹೊಸ ಬಾಳಿಗೆ ನೀ ಜೊತೆಯಾದೆ" ಎಂದು ಹಾಡುತ್ತಾನೆ ಗಂಡು ಎಂದುಕೊಂಡವಳಿಗೆ ಸಂಪೂರ್ಣ ನಿರಾಶೆಯೇ ಆಗಬಹುದು. ಆಗ ಆಕೆ "ಹೊಸ ಬಾಳು ಸೊಗಸೆಂದುಕೊಂಡೆ" ಎನ್ನಬಹುದು... ಸ್ನೇಹಮಯಿ ಗಂಡು ಎಂದುಕೊಂಡವಳಿಗೆ ಆ ಗಂಡು ಸಿಡುಕು ಸುಬ್ಬರಾಯ ಎಂದರಿತಾಗ ಅಥವಾ ಚೆಲುವಿನ ಖನಿಯಂತೆಯೇ ಅವಳ ಗುಣ ಎಂದುಕೊಂಡವನಿಗೆ ಆ ಹೆಣ್ಣಿನ ಮಹಾಕಾಳಿಯ ರೂಪ ಅರಿತಾಗ ಆಗುವ ನಿರಾಶೆಗಳು ಆ 'ಹೊಸ'ತನವನ್ನು ಬಲು ಬೇಗ ಕಮರುವಂತೆ ಮಾಡುತ್ತದೆ. ಒಬ್ಬರನ್ನೊಬ್ಬರು ದಿನನಿತ್ಯದಲ್ಲಿ ಅರಿಯುತ್ತಾ ಸಾಗಿ ಒಬ್ಬರು ಇನ್ನೊಬ್ಬರಿಗೆ ಹೇಳಿ ಮಾಡಿಸಿದ ಜೋಡಿ ಅಂತಾದಾಗ ಆ ದಾಂಪತ್ಯದ ನವನವೀನತೆ ಎಂದಿಗೂ ಅಳಿಯಲಾರದು, ಅಳಿಸಲಾರದು.

Everything Which Is New Is Not All Good And Also Not Bad

ಒಬ್ಬ ಮನುಷ್ಯ ತನ್ನನ್ನೇ ತಾ ಅರಿಯಲು ಅಶಕ್ತನಾಗಿರುವಾಗ ಮತ್ತೊಬ್ಬರು ಸುಲಭವಾಗಿ ಅರಿಯುವುದು ಹೇಗೆ? ಹಾಗಾಗಿ ಈ ಅರಿಯುವಿಕೆಯ ಹಂತದಲ್ಲಿ ತಾಳಿದವನು ಬಾಳಿಯಾನು, ತಾಳಿ ಕಟ್ಟಿದವನು ಬಾಳಿಯಾನು.

ಈಗ ಮದುವೆ ಆಯ್ತು, ಮನೆಯ ಬಗ್ಗೆ ನೋಡೋಣ... ಭೂಮಿಯನ್ನು ಸಮತಟ್ಟು ಮಾಡೋದ್ರಿಂದ ಹಿಡಿದು ಗೃಹಪ್ರವೇಶ ಆಗುವವರೆಗೂ ಒಂದಲ್ಲಾ ಒಂದು ಸವಾಲುಗಳನ್ನು ಎದುರಿಸಿ ಕೊನೆಗೂ ಎಲ್ಲವೂ ಆಯ್ತು ಎಂದರಿತು ಉಸ್ಸಪ್ಪಾ ಎಂದು ಕೂತ ಮರುದಿನದಿಂದ ಆ 'ನವ' ಗೃಹವನ್ನು ಅನುಭವಿಸುವ ಸುಖ ಬಲು ಚೆಂದ. ಒಂದು ಮನೆ, ಆ ಮನೆಯ ಸುತ್ತ ಕಾಂಪೌಂಡ್, ಹೊಸ ಪೈಂಟ್ ಸುವಾಸನೆ, ಆ ಮನೆಯ ಬಳಿ ಯಾವ ಯಾವ ಅಂಗಡಿಗಳಿವೆ, ಬಸ್ ಸ್ಟಾಪ್ ಎಲ್ಲಿದೆ, ಸುತ್ತಮುತ್ತಲಿನ ಮನೆಯವರು ಯಾರು ಇತ್ಯಾದಿಗಳ ಬಗೆಗಿನ ಕುತೂಹಲ ಬಲು ಸೊಗಸು. ಆ ಮನೆಯ ಸುತ್ತಲೂ ಅರ್ಥಾತ್ ನಮ್ಮದೇ ಕಾಂಪೌಂಡ್ ಒಳಗೆ ಬೆಳೆಸಬಹುದಾದ ಹೂ ಗಿಡಗಳು, ತೆಂಗಿನ ಮರ, ಸ್ಥಾಪಿಸಲ್ಪಡಬಹುದಾದ ಒಂದು ತುಳಸೀಕಟ್ಟೆ ಇತ್ಯಾದಿಗಳು ಅಂದು ಅಪ್ಪ ಕಟ್ಟಿದ ಮನೆಯ ಬಗ್ಗೆ ಇದ್ದ ನೆನಪುಗಳನ್ನು ಹೊರಗೆಳೆದು ತರುತ್ತಿದೆ. ಮನೆಗೂ ಕಾಂಪೌಂಡ್ ಗೂ ಕೇವಲ ಐದೇ ಅಡಿ ಜಾಗ ಇದ್ದುದರಿಂದ ತೆಂಗಿನಮರ ಕ್ಯಾನ್ಸಲ್ ಆಯ್ತು. ಒಟ್ಟಾರೆ ಹೊಸ ಮನೆ, ಹೊಸ ವಾತಾವರಣ, ಹೊಸ ಜಾಗ, ಹೊಸ ಜನ ಎಂಬುದೆಲ್ಲಾ ಚೈತನ್ಯ ಮೂಡಿಸುವ ಅಂಶಗಳೇ.

ನಮ್ಮ ಜಿಎಸ್ಎಸ್ ಅವರು ತಮ್ಮ ಕವನದಲ್ಲಿ "ಹಾಡು ಹಳೆಯದಾದರೇನು ಭಾವ ನವನವೀನ" ಎಂದು ಹೇಳಿದ್ದಾರೆ. ಜೀವನವು 'ಅದೇ ರಾಗ ಅದೇ ಹಾಡು' ಎಂದಿದ್ದರೂ ಹಾಗೆಂದು ಉದಾಸೀನರಾಗಿ ಕೈ ಚೆಲ್ಲಿ ಕೂರದೆ, ದಿನನಿತ್ಯದ ಜಂಜಾಟವನ್ನೇ ಸವಾಲಾಗಿ ಸ್ವೀಕರಿಸಿ "ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ" ಎಂಬ ಮನೋಭಾವ ಇದ್ದಲ್ಲಿ ಆ ಹಾಡು ಹಳೆಯದಾದರೂ ಭಾವ ಹೊಸತು ಎಂಬುದಕ್ಕೆ ಅರ್ಥ ಬರುತ್ತದೆ.

ಹೊಸತು ಎಂಬ ವಿಷಯ ಬಂದಾಗ ಒಂದೆಡೆ ಪುಳಕವೂ ಇರುತ್ತದೆ. ಅದರಂತೆಯೇ ಪುಕಪುಕವೂ ಇರುತ್ತದೆ. ಹೊಸತೊಂದು ಊರಿಗೆ ಅಪ್ಪನಿಗೆ transfer ಆಗಿ ಹೊಸ ಶಾಲೆಗೆ ಕಾಲಿಟ್ಟಾಗ ಇರುವಂಥ ಪುಕಪುಕ... ಹೈಸ್ಕೂಲಿಗೆ ಕಾಲಿಟ್ಟ ಮೊದಲ ದಿನದ ಪುಕಪುಕ... ಸಮವಸ್ತ್ರದ ಜಂಜಟ್ಟು ಬದಿಗಿಟ್ಟು ಬಣ್ಣಬಣ್ಣದ ದಿರಿಸು ಧರಿಸಿ ಕಾಲೇಜಿಗೆ ಹೊರಟ ಮೊದಲ ದಿನ ಪುಳಕವೂ ಹೌದು, ಪುಕಪುಕವೂ ಹೌದು...

Everything Which Is New Is Not All Good And Also Not Bad

ಇನ್ನು ಮೊದಲ ದಿನ ಹೊಸ ಕೆಲಸಕ್ಕೆ ಕಾಲಿಟ್ಟ ದಿನವಂತೂ ಏನೋ ರೋಮಾ೦ಚನ... ಅದರಲ್ಲೂ ದುಡಿತದ ಜೀವನದ ಮೊದಲ ದಿನವಾದರಂತೂ ಅನಿರ್ವಚನೀಯ ಆರಂಭ... ದೈವಕ್ಕೆ ಮತ್ತು ಅಪ್ಪ-ಅಮ್ಮರಿಗೆ ನಮಸ್ಕರಿಸಿ ಕೆಲಸಕ್ಕೆ ಹೊರಟ ನೆನಪು ಇಂದಿಗೂ ಜೀವಂತ. ಎಲ್ಲವೂ ಹೊಸತು ಮತ್ತು ಎಷ್ಟೋ ಸಾರಿ ಸತ್ಯಾಸತ್ಯತೆಯ ಅರಿವು. ಕೆಲಸ ಬದಲಿಸಿ ಮತ್ತೊಂದೆಡೆಗೆ ಅಥವಾ ಮತ್ತೊಂದು ಇಲಾಖೆಗೆ ಹೋದಾಗಲೂ ಇಂಥದ್ದೇ ಅನುಭವ, ಆದರೆ ಕೊಂಚ ಭಿನ್ನ.

ಈ ಹೊಸತು ಎಂದ ತಕ್ಷಣ ಕೆಲವರಿಗೆ ಒಂದು ಕಾಯಿಲೆ ಇರುತ್ತದೆ. ಹೊಸತನ್ನು ಹೊಸತಾಗಿ ಸ್ವೀಕರಿಸಿ ಅನುಭವಿಸುವ ಬದಲು ಹಳೆಯದಕ್ಕೆ ಹೋಲಿಸಿ ನೋಡೋದು. ಆ ಹಳತೇ ಚೆನ್ನಾಗಿತ್ತು ಎಂಬಂತೆ ಹೀಯಾಳಿಸೋದು ಒಂದಾದರೆ, ಹಳೆಯದ್ದು ಮಹಾ ಕೆಟ್ಟದ್ದು, ಈ ಹೊಸತೇ ಅದ್ಭುತ ಎಂಬಂತೆ ಮಾತನಾಡೋದು. ಒಂದರ್ಥದಲ್ಲಿ ಎರಡೂ ಅಪಾಯಕಾರಿ.

ಮರುವಿವಾಹ ಅಂತ ಒಂದು ಉದಾಹರಣೆ ತೆಗೆದುಕೊಂಡರೆ ತಮ್ಮ ಹಿಂದಿನ ಗಂಡ/ಹೆಂಡತಿ ಬಗ್ಗೆ ಮಾತನಾಡಿದಾಗ ಈ ಸಂಬಂಧವೂ ಹಾಳಾಗುತ್ತದೆ ಎಂಬುದು ಸರ್ವವೇದ್ಯ. ನಮ್ಮ ಸಂಸ್ಕೃತಿಗೆ ಇದು ಉತ್ತಮ ಉದಾಹರಣೆ ಅಲ್ಲ ಬಿಡಿ. ಗಂಡನ ಮನೆಗೆ ಹೊಸತಾಗಿ ಅಡಿಯಿಟ್ಟ ಹೆಣ್ಣು ತನ್ನ ಅಮ್ಮನ ಮನೆಯೇ ಅದ್ಭುತ, ಗಂಡನ ಮನೆಯಲ್ಲಿನ ರೀತಿರಿವಾಜು ಎಲ್ಲವೂ ಅರ್ಥವಿಲ್ಲದ್ದು, ಸರಿಯಿಲ್ಲ ಎಂಬಂತೆ ಎತ್ತಾಡಿದರೆ ಹೊಸ ಸಂಬಂಧವೂ ಆರಂಭದಲ್ಲೇ ಹಳತಾಗುವುದಕ್ಕೆ ಹೆಚ್ಚು ಕಾಲ ಬೇಕಿಲ್ಲ.

ಇನ್ನು ಕೆಲಸದ ವಿಷಯದಲ್ಲಿ ತೆಗೆದುಕೊಂಡರೆ, ಹೊಸ ಕಂಪನಿಗೆ ಸೇರಿದ ಕೆಲವರಿಗೆ ತಮ್ಮ ಹಿಂದಿನ ಕಂಪನಿಯನ್ನು ಹೀಯಾಳಿಸುವ ಒಂದು ಅಭ್ಯಾಸವಿರುತ್ತದೆ. ಹೊಸ ಕಂಪನಿಯನ್ನು ಹೊಗಳುವುದು ಒಂದು ಅಂತಾದರೆ, ಈತ ಇಲ್ಲಿ ಕೆಲಸ ಬಿಟ್ಟು ಬೇರೆ ಕಂಪನಿಗೆ ಹೋದಾಗ ಈ ನಮ್ಮ ಕಂಪನಿಯ ಬಗ್ಗೆ ಎತ್ತಾಡದೆ ಇರುತ್ತಾನೆಯೇ ಎಂಬ ವಿಷಯ ಹಿರಿಯರ ಮನಸ್ಸಿಗೆ ಬಂದರೆ ಇವರ ಇಲ್ಲಿಯ ಭವಿಷ್ಯ ಕುಂಠಿತವಾಗಬಹುದು.

Everything Which Is New Is Not All Good And Also Not Bad

ಸಿನಿಮಾ ಜಗತ್ತಿಗೂ ಹೊಸತು ಎಂಬುದಕ್ಕೂ ಬಿಡದ ನಂಟು... ಬರೀ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡೋದು ಅಷ್ಟು ಒಳ್ಳೆಯ ಆಲೋಚನೆ ಅಲ್ಲ ಎನ್ನುವುದು ಒಂದು ಮಾತಾದರೆ, ಹೊಸಬರಿಗೆ ಅವಕಾಶ ನೀಡುವ ಕೆಚ್ಚೆದೆಯವರೂ ಇಲ್ಲದೇನಿಲ್ಲ. ಹಳಬರ ಸಾಮ್ರಾಜ್ಯವೇ ತಾಂಡವವಾಡುವಾಗ ಹೊಸಬರಿಗೆ ಅವಕಾಶಗಳೇ ಇಲ್ಲದಂತಾಗಿ ಅವರ ಭವಿಷ್ಯವೇ ರಂಗದಲ್ಲಿ ಇಲ್ಲದಂತಾಗಬಹುದು. ಈ ಮಾತು ಹೊಸತಾಗಿ ಅವಕಾಶ ಹುಡುಕುತ್ತಿರುವ ನಟ, ನಟಿ, ಗಾಯಕ, ಗಾಯಕಿ ಇತ್ಯಾದಿ ಯಾವುದೇ ಪರಿಣತಿಗೂ ಆಗಬಹುದು.

ಹಳೆಯದೆಲ್ಲವೂ ಅದ್ಬುತ, ಹೊಸತೆಲ್ಲವೂ ಹೀನಾಯ ಎಂಬ ಅನಿಸಿಕೆ ಕೆಲವರಲ್ಲಿ ಬೀರೂರಿರುತ್ತದೆ. ಇಂಥವರ ಮಾತಲ್ಲಿ "ನಮ್ ಕಾಲದಲ್ಲಿ ಹೆಂಗಿತ್ತೂ ಅಂದ್ರೆ..." ಅಂತ ಶುರು ಮಾಡಿದ್ರೆ ಅವರದ್ದು golden era ಅಂದುಕೊಳ್ಳಬೇಕು! ನನ್ನ ಅನಿಸಿಕೆ ಪ್ರಕಾರ ಯಾವ ಕಾಲವೂ ಅತ್ಯದ್ಭುತವಲ್ಲ ಅಥವಾ ತೀರಾ ಕೆಟ್ಟದ್ದಲ್ಲ. ಆಯಾ ಕಾಲದ ರೀತಿ ನೀತಿಗಳು ಆಯಾ ಸಮಯಕ್ಕೆ ಅದ್ಭುತ ಅಥವಾ ಕೀಳುಮಟ್ಟದ ಪ್ರತೀಕ ಎನಿಸಿಕೊಳ್ಳಬಹುದು. ಕೃತಯುಗದಲ್ಲೇ ಇಂದ್ರನಂಥವರು ಅಹಲ್ಯೆಯನ್ನು ಕಲ್ಲಾಗಿಸಿದ್ದರು. ತ್ರೇತಾಯುಗದಲ್ಲಿ ಹೆಣ್ಣಿನ ಅಪಹರಣವಾಗಿತ್ತು. ದ್ವಾಪರದಲ್ಲಿ ಅನ್ಯಾಯ, ಅಕ್ರಮಗಳು, ಮಾನಾಪಹರಣ ಸಂದರ್ಭಗಳು ಇದ್ದವು. ಇನ್ನು ಕಲಿಯುಗ ಈ ಹಿರಿಯಣ್ಣಂದಿರಿಂದ ಕಲಿಯದೇ ಬಿಟ್ಟೀತೇ? ಹಳತುಗಳಿಂದ ಒಳಿತು ಕಲಿಯೋದು ಕಷ್ಟ. ಹೊಸತು ಅಂದ ಮಾತ್ರಕ್ಕೆ ಎಲ್ಲವೂ ಒಳಿತಲ್ಲ, ಹಾಗೆಯೇ ಕೆಟ್ಟದ್ದಲ್ಲ.

ಕಾಳಿದಾಸ ತನ್ನ 'ಅಭಿಜ್ಞಾನ ಶಾಕುಂತಲಾ' ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದನಂತೆ. ತನ್ನ ಹೊಸ ಪ್ರಯೋಗವನ್ನು ಜನ ಹೇಗೆ ಸ್ವೀಕರಿಸಬಹುದು ಅಂತ. ಕಾರಣವಿಷ್ಟೇ, ಅಂದಿಗೂ, ಆ ದಿನಗಳಲ್ಲಿ ಆಗಲೇ ಹೆಸರುವಾಸಿಗಳ ನಾಟಕಗಳೇ ಶ್ರೇಷ್ಠ, ಹೊಸತೆಲ್ಲವೂ ಕನಿಷ್ಠ ಎಂಬ ಮಾತಿತ್ತು ಅಂತ.

ಇರಲಿ ಬಿಡಿ, ಈವರೆಗಿನ, ಅಂದರೆ 2019ರವರೆಗಿನ ನಮ್ಮದೂ ಹಳೆಯ ಹಾಡೇ... 2020 ನೂತನ ವರ್ಷ. ಹೊಸತು ಎಂದರೆ ಕ್ಯಾಲೆಂಡರ್ ಮಾತ್ರ ನೆನಪಿರಲಿ. ಮಿಕ್ಕೆಲ್ಲವೂ ಬ್ಯಾಂಕಿಂಗ್ ಭಾಷೆಯಲ್ಲಿ ಹೇಳುವಂತೆ brought forward. ಹೊಸ ವರ್ಷ ಅಂತಂದು 'ಅಯ್ಯೋ ಬಿಡಿ, ಇದು ಜೀವನದ ಮತ್ತೊಂದು ದಿನ' ಎಂಬ ಭಾವ ಬೇಡ. ಹಾಡು ಹಳೆಯದಾರೂ ಭಾವ ನವನವೀನವಾಗಿರಲಿ. ಅಂತೆಯೇ, ಹೊಸ ವರ್ಷ ಎಂದ ಮಾತ್ರಕ್ಕೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕೇಬಿಡುತ್ತದೆ ಮತ್ತು ಹೊಸ ವರ್ಷದಲ್ಲಿ ಎಲ್ಲವೂ ಹೂವಿನ ಹಾಸಿಗೆ ಎಂಬ ಮೌಢ್ಯವೂ ಬೇಡ.

ಹೊಸವರ್ಷವು ನನಗೆಲ್ಲವನ್ನೂ ಒಳಿತೇ ಮಾಡುತ್ತದೆ ಎಂಬ ಭಾವ ಬದಿಗಿರಿಸಿ, ಈ ಹೊಸ ವರ್ಷದಲ್ಲಿ ನನ್ನಿಂದ ಯಾವ ಒಳಿತಾಗಬಹುದು ಎಂಬುದಾಗಿ ಚಿಂತನೆ ಮಾಡೋಣ. ಏನಂತೀರಿ?

English summary
Everything which is new is not all good and also not bad. We have to see new year in broad aspect,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X