ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಎಡಬಲದ ವಿಷಯದಲ್ಲಿ ಎಲ್ಲವೂ ರೈಟ್ Nothing Left Behind

|
Google Oneindia Kannada News

ಇಂದಿನ ಬರಹವನ್ನು ಸಿನಿಮಾದಲ್ಲಿನ ಒಂದೆರಡು ಶುದ್ಧ ಹಾಸ್ಯದಿಂದಲೇ ಆರಂಭಿಸುವಾ. ಬಹಳ ಹಳೆಯ ಸಿನಿಮಾ ಒಂದರಲ್ಲಿ ಹಾಸ್ಯನಟ ನರಸಿಂಹರಾಜು ಅವರು ಬಲಗೈಯ್ಯನ್ನು ತೋರಿಸುತ್ತಾ ಹೇಳ್ತಾರೆ, ಬಲಗೈಯನ್ನು ನಾನು ಎಡಗೈ ಅಂತೀನಿ, ಎಡಗೈಯನ್ನೇ ಬಲಗೈ ಅಂದ್ರೆ ತಪ್ಪೇನು? ಅಂತ. ಸನ್ನಿವೇಶ ಮಜವಾಗಿದೆ ಜೊತೆಗೆ ಚಿಂತನೀಯವಾಗಿಯೂ ಇದೆ ಅಲ್ಲವೇ? ಎಡವನ್ನು ಎಡ ಅಂದವರಾರು? ಬಲವನ್ನು ಬಲ ಎಂದವರಾರು? ಅರ್ಥಾತ್ ಹೀಗೆ ನಾಮಕರಣವನ್ನು ಮಾಡಿದವಾರಾರು? ಗೊತ್ತಿದ್ದರೆ ಹೇಳಿ ಆಯ್ತಾ?
ಮತ್ತೊಂದು ಸಿನಿಮಾದಲ್ಲಿ ನಮ್ಮ ನಾಯಕ ನಟ ಪ್ಲಸ್ ಹಾಸ್ಯನಟ ಅನಂತನಾಗ್ ಕೇಳ್ತಾರೆ, ಮರದ ಕೆಳಗೆ ನಿಂತಾಗ, ಮರದ ಕೊಂಬೆಯ ಮೇಲೆ ಇರುವ ಕಾಗೆ ಹಿಕ್ಕೆ ಹಾಕಿದರೆ ಅದು ಎಡ ಹೆಗಲ ಮೇಲೆ ಬಿದ್ದರೇನು? ಬಲ ಹೆಗಲ ಮೇಲೆ ಬಿದ್ದರೇನು? ಆಹಾ! ಇಲ್ಲಿ ಸಿಕ್ಕಿಬಿಡ್ತು ಉತ್ತರ. ಎಡಕ್ಕೂ ಬಲಕ್ಕೂ ಏನೂ ವ್ಯತ್ಯಾಸವಿಲ್ಲ ಅಂತಾಯ್ತು. ನರಸಿಂಹರಾಜು ಅವರು ಎಡವನ್ನು ಬಲ ಅಂತ ಕಕ್ಕಿದರೂ, ಬಲವನ್ನು ಎಡ ಅಂತ ಕರೆದರೂ ಹಿಕ್ಕೆ ಹಾಕುವ ಕಾಗೆಗೆ ಏನೂ ವ್ಯತ್ಯಾಸ ಕಾಣೋದಿಲ್ಲ.

ಬಲಗೈ ಬಂಟರೇ ಆಗಿರುವಾಗ ಇವನೊಬ್ಬ ಕೊಂಚ ಭಿನ್ನ
ಎಡವನ್ನು ಎಡ ಅಂತಾರೆ, ಎಡವನ್ನು ಆಂಗ್ಲದಲ್ಲಿ left ಅಂತಾನೂ ಅನ್ನುತ್ತಾರೆ. left ಎಂದಾಗ ಹಲವಾರು ವಿಚಾರಗಳು ನೆನಪಾಗುತ್ತದೆ. ನಮ್ಮ ವಿಷ್ಣು, ಅಮಿತಾಭ್ ಹೀಗೆ ಹಲವಾರು leftyಗಳು ಅರ್ಥಾತ್ ಎಡಚರು. ನಮ್ಮ ಶಾಲೆಯಲ್ಲಿ ಒಬ್ಬ ಎಡಚ ಇದ್ದ. ಶೇ.೯೯.೯೯ ಎಲ್ಲರೂ ಬಲಗೈ ಬಂಟರೇ ಆಗಿರುವಾಗ ಇವನೊಬ್ಬ ಕೊಂಚ ಭಿನ್ನ. ಯಾವಾಗ ಯಾರು ಭಿನ್ನ ಇರುತ್ತಾರೋ ಅವರಿಗೆ ಕೀಳರಿಮೆ ಇರುತ್ತದೆ. ಯಾಕೆ ಅಂತ ಕೇಳಿ. ಇವನ ಎಡಗಡೆ ಇರುವವನು ಬಲಗೈಲಿ ಬರೆಯುವ ಹುಡುಗ. ಇವನು ಎಡಚ. ಈ ಬಲ- ಎಡ ಕಾಂಬಿನೇಷನ್ ಈ ವಿಚಾರದಲ್ಲಿ ಹಿಂಸೆ. ಬಲಗೈ ಹುಡುಗ ಈ ಎಡಚನಿಗೆ ತಾಕಿಸಿದರೆ ಅದು ನಾರ್ಮಲ್. ಅದೇ ಎಡಚ ಆ ಬಲಗೈನವನಿಗೆ ತಾಕಿಸಿದರೆ, ಲೇಯ್ ಲೊಡ್ಡೆ ದೂರ ಕೂತ್ಕೋ ಎಂದಾಗ ಎಲ್ಲರೂ ನಗುವುದು ಸಾಮಾನ್ಯ. ಅಲ್ಲೇ ಕೀಳರಿಮೆ ಬರೋದು.

ಬೌಲರ್ ಮತ್ತು ಕ್ಷೇತ್ರ ರಕ್ಷಣೆ ಮಾಡುವವರಿಗೆ ಬಹಳ ಹಿಂಸೆ
ಈ ಎಡಗೈ- ಬಲಗೈ ಕಾಂಬಿನೇಶನ್ ಕೆಲಸಕ್ಕೆ ಬರುವುದು ಕ್ರಿಕೆಟ್‌ನಲ್ಲಿ ಎಂದು ನೋಡಿ ಬಲ್ಲೆ. ಒಂದು ಕಡೆ ಬಲಗೈ ಆಟಗಾರನಿದ್ದರೆ ಮತ್ತೊಂದೆಡೆ ಎಡಗೈ ದಾಂಡಿಗ ಇರುತ್ತಾನೆ. ಇದರಿಂದಾಗಿ ಬೌಲರ್ ಮತ್ತು ಕ್ಷೇತ್ರ ರಕ್ಷಣೆ ಮಾಡುವವರಿಗೆ ಬಹಳ ಹಿಂಸೆ. ಇದು ಬ್ಯಾಟಿಂಗ್ ತಂಡಕ್ಕೆ ಒಳಿತು ಎಂದು ಈ ಟ್ರಿಕ್ ಬಳಸುತ್ತಾರೆ. ಇನ್ನು ಬಂಟರ ಬಗ್ಗೆ ಮಾತನಾಡಿದರೆ, ಯಾರಿಗಾದರೂ ಒಬ್ಬ ವ್ಯಕ್ತಿ ಹೇಳಿದ ಕೆಲಸಗಳನ್ನೆಲ್ಲಾ ಮಾಡುವವನಾಗಿದ್ದರೆ ಅವನನ್ನು ಬಲಗೈಬಂಟ ಎಂದು ಕರೆಯುತ್ತಾರೆ. ಆದರೆ ಅದೇ ಯಜಮಾನ ಎಡಚನಾಗಿದ್ದರೆ ಆ ಬಂಟನನ್ನು ಆತ ತನ್ನ ನೆಚ್ಚಿನ ಎಡಗೈ ಬಂಟ ಎಂದು ಹೇಳುವುದಿಲ್ಲ. ಆಗಲೂ ಆ ಬಂಟ ಬಲಗೈ ಬಂಟನೇ ಸರಿ.

Srinath Bhalle Column: Everything In Right Nothing Left Behind

ಬಳಸದೇ ಬಿಟ್ಟಿದ್ದು ಮಾತ್ರ ಫ್ರಿಡ್ಜ್ ಸೇರುತ್ತದೆ
Left ಎಂದರೆ ಮಿಕ್ಕಿದ್ದು ಅಂತಾನೂ ಅರ್ಥವಿದೆ. ರೆಫ್ರಿಜಿರೇಟರ್ ಇರುವವರಿಗೆ ಈ ವಿಷಯ ಗೊತ್ತಿರುತ್ತದೆ ಅಂತೇನಿಲ್ಲ. ಹಲವು ಮನೆಗಳಲ್ಲಿ ಅನ್ನ- ಸಾರು- ಪಲ್ಯ ಎಂಬುದಕ್ಕೆಲ್ಲ ಫ್ರಿಡ್ಜ್‌ನಲ್ಲಿ ಪ್ರವೇಶವಿಲ್ಲ. ಅದೇನಿದ್ದರೂ ಹಾಲು- ಮೊಸರು- ಹೂವು- ತರಕಾರಿ- ಹಣ್ಣುಗಳಿಗೆ ಮೀಸಲು. ಕೆಲವೆಡೆ Left-Overs ಎಂಬುದು ಸರ್ವೇಸಾಮಾನ್ಯ. Left-Over ಎಂದರೆ ಬಳಸದೇ ಬಿಟ್ಟಿದ್ದು ಅಂತರ್ಥ, ತಿಂದು ಮಿಕ್ಕಿದ್ದು ಅಂತಲ್ಲ. ಹಾಗಾಗಿ ತಿಂದು ಮಿಕ್ಕಿದ್ದು ಫ್ರಿಡ್ಜ್ ಸೇರೋದಿಲ್ಲ ಬದಲಿಗೆ ಇನ್ನೂ ಬಳಸದೇ ಬಿಟ್ಟಿದ್ದು ಮಾತ್ರ ಫ್ರಿಡ್ಜ್ ಸೇರುತ್ತದೆ. ಇದು ಸರಿಯೇ ಎಂಬುದು ಹಲವರ ಪ್ರಶ್ನೆ. ಇದನ್ನು ನಿಮ್ಮ ಅನಿಸಿಕೆಯಲ್ಲಿ ತಿಳಿಸಿ.
ಆದರೆ, ನಾನು ಈ ಸರಿ ಎಂಬ ಪದವನ್ನು ತೆಗೆದುಕೊಂಡು ಮುಂದಿನಾ ಮಾತಿಗೆ ಹಾರುತ್ತೇನೆ. ಅದೇ ಬಲ. ಈ ಬಲ ಎಂಬ ಪದಕ್ಕೆ ಆಂಗ್ಲದಲ್ಲಿ Right ಎನ್ನುತ್ತಾರೆ. Right ಎಂದರೆ ಸರಿ ಎಂದೂ ಅರ್ಥವಿದೆ. ಒಬ್ಬ ಬಸ್ ಕಂಡಕ್ಟರ್ ಚಾಲಕನಿಗೆ ಹೇಳುವ ಮಾತೇ Right Right ಅಂತ. ಅಂದರೇನು? ಸರಿ ಸರಿ ಅಂತ. ಒಂದರ್ಥದಲ್ಲಿ ಎಲ್ಲವೂ ಸರಿ ಇದೆ ಮುಂದೆ ಹೋಗೋಣಾ ಅಂತ ಅಥವಾ ಸರಿ ಎಂದರೆ ಸರಿದು ಮುಂದೆ ಸಾಗು ಎಂದೂ ಆಗಬಹುದು. ಈಗ ನನ್ನ ಮುಂದಿನ ಮಾತಿಗೆ ಸಾಗಲು ಓದುಗರು ರೈಟ್ ರೈಟ್ ಅನ್ನಿ.

ಬಲವನ್ನು Power ಅಂತಾನೂ ಅಂತಾರೆ
ಬಲವನ್ನು ಬಲ ಅಂತಾರೆ ಅನ್ನೋದು ಒಂದೆಡೆ ಇರಲಿ. ಬಲವನ್ನು Power ಅಂತಾನೂ ಅಂತಾರೆ. ಪಾಂಡವರನ್ನೇ ಸಾಲಾಗಿ ನಿಲ್ಲಿಸಿದರೆ ಮಧ್ಯಮ ಪಾಂಡವನಾದ ಅರ್ಜುನನ ಬಲಕ್ಕೆ ಭೀಮ ಮತ್ತು ಧರ್ಮರಾಯ. ಎಡಕ್ಕೆ ನಕುಲ ಮತ್ತು ಸಹದೇವ. ಮಧ್ಯಮ ಪಾಂಡವನ ದಿಶೆಯಿಂದ ನೋಡಿದಾಗ ಭೀಮನಿಗೆ ಬಲಭೀಮ ಎಂದೇಕೆ ಕರೆಯುತ್ತಾರೆ ಎಂಬುದಕ್ಕೆ ಎರಡೂ ಅರ್ಥ ಬರುತ್ತದೆ. ಆದರೆ ಮಹಾಬಲಶಾಲಿ ಎಂಬರ್ಥದಲ್ಲೇ ಅವನನ್ನು ಬಲಭೀಮ ಎನ್ನುವುದು ಸತ್ಯವಾದ ಮಾತು.
ಈಗ ಬಲ ಎಂದರೆ ರೈಟ್. ಹಾಗೆಯೇ ರೈಟ್ ಎಂದರೆ ಸರಿ. ಹೀಗೆಂದರೆ ಮಾತ್ರಕ್ಕೆ ಲೆಫ್ಟ್ ಎಂದರೆ ತಪ್ಪು ಅಂತೇನಲ್ಲ. ಈ ಲೆಫ್ಟ್ ಎಂದರೆ ಸರಿ ಎಂದು ಯಾವಾಗ ಹೇಳುತ್ತೇವೆ. ಜನಿವಾರವನ್ನು ಹಾಕಿಕೊಳ್ಳುವ ರೀತಿಯಲ್ಲಿ ಈ ಎಡ ಅನ್ನೋದು ಸರಿ. ಸವ್ಯ ಎಂದರೆ ಎಡ, ಅಪಸವ್ಯ ಎಂದರೆ ಬಲ. ಜನಿವಾರವನ್ನು ಎಡದಿಂದ ಬಲಕ್ಕೆ ಹಾಕಿಕೊಂಡಾಗ ಅದು ಸರಿ. ಹಾಗೆಂದ ಮಾತ್ರಕ್ಕೆ ಅಪಸವ್ಯವಾಗಿ ಧರಿಸಿದಾಗ ಅರ್ಥಾತ್ ಬಲದಿಂದ ಎಡಕ್ಕೆ ಧರಿಸಿದಾಗ ತಪ್ಪು ಅಂತಲ್ಲ ಬದಲಿಗೆ ತರ್ಪಣಾದಿ ಕಾರ್ಯ ಮಾಡುವಾಗ ಮಾತ್ರ ಅಪಸವ್ಯದ ಬಳಕೆ. ಸಾಮಾನ್ಯ ದಿನಗಳಲ್ಲಿ ಹಾಗೆ ಹಾಕಿಕೊಳ್ಳುವುದು ತಪ್ಪು. ರೈಟ್ ಎಂದರೆ ಸರಿಯೇ ಆಗಿರಬೇಕಿಲ್ಲ, ತಪ್ಪು ಕೂಡಾ ಆಗಬಹುದು.

ನಾವು ಸವ್ಯ ಆದರೆ ಭೂಮಿ ಅಪಸವ್ಯ
ದಿನನಿತ್ಯದಲ್ಲಿ ಈ ಸವ್ಯ- ಅಪಸವ್ಯ ಎಲ್ಲಿ ಕಾಣುತ್ತೇವೆ. ಗಡಿಯಾರವನ್ನು ಗಮನಿಸಿ ಸಾಕು. ಎಡದಿಂದ ಬಲಕ್ಕೇ ಸದಾ ಅದರ ಪಯಣ. ಒಂದು ವಾಷಿಂಗ್ ಮಷೀನ್ ಓಡುವ ಬಗೆಯನ್ನು ಗಮನಿಸಿ ಇದೂ ಸವ್ಯವೇ. ಎಡದಿಂದ ಆರಂಭಿಸಿ ಬಲಕ್ಕೆ ಸಾಗಿ ಮೂರು ಬಾರಿ ಪ್ರಾಕಾರವನ್ನು ಸುತ್ತುವುದೇ ಪ್ರದಕ್ಷಿಣೆ. ದೇವಸ್ಥಾನದಲ್ಲಿ ನಾವು ಪ್ರದಕ್ಷಿಣೆ ಸುತ್ತಿದರೂ ಭೂಮಿ ಸೂರ್ಯನ ಸುತ್ತ ಅಪ್ರದಕ್ಷಿಣೆ ಸುತ್ತುವುದಲ್ಲಾ? ನಾವು ಸವ್ಯ ಆದರೆ ಭೂಮಿ ಅಪಸವ್ಯ. ನಾವು ಸೂರ್ಯನ ಸುತ್ತ ಸವ್ಯವೋ? ಅಪಸವ್ಯವೋ?
ನಮ್ಮಲ್ಲಿ ಹಲವರು ಎಡಕ್ಕೆ ಬಲಕ್ಕೆ ಭೇದಭಾವ ತೋರುವುದೇ ಇಲ್ಲ. ಅಂಥವರನ್ನು ನಿಲ್ಲಿಸಿ ಇಂಥಾ ವಿಳಾಸ ಎಲ್ಲಿ ಬರುತ್ತೆ ಅಂತ ಕೇಳಿ. ""ಇಲ್ಲಿಂದ straight ಹೋಗಿ, ಆ ಸರ್ಕಲ್ ಹತ್ತಿರ ರೈಟ್ ಮಾಡಿ ಅಂತ ತಮ್ಮ ಎಡಗೈಯನ್ನು ಎಡಕ್ಕೆ ತಿರುಗಿಸಿರುತ್ತಾರೆ. ನೀವು ಎಡಕ್ಕೆ ಹೋಗ್ತೀರೋ, ಬಲಕ್ಕೆ ಹೋಗ್ತೀರೋ ನಿಮಗೆ ಬಿಟ್ಟಿದ್ದು. ಹಲವರದ್ದು ಇನ್ನೂ ಮಜಾ. ಇಂಥವರ ಮೊಬೈಲಿಗೆ ಕರೆ ಮಾಡಿ, "ನಿಮ್ಮ ಮನೆ ಕಡೆ ಬರ್ತಿದ್ದೀವಿ, ಇಂಥಾ ಕಡೆ ಇದ್ದೀವಿ ಮುಂದೆ ಹೇಗೆ'' ಅಂತ ಕೇಳಿ. ಅವರು ನಿಂತ ಕಡೆಯೇ ಕೈ ತಿರುಗಿಸುತ್ತಾ ಈ ಕಡೆ ಬನ್ನಿ ಆ ಕಡೆ ಬನ್ನಿ ಅಂತ ಹೇಳಿಬಿಡ್ತಾರೆ. ಇವರಿಗೆ ನೀವು ವಿಡಿಯೋ ಕಾಲ್ ಮಾಡಿ ವಿಳಾಸ ಕೇಳುವ ತಪ್ಪು ಮಾಡಲೇಬೇಡಿ.

ವಿಧಿಯಿಲ್ಲದೇ ಬಲಕ್ಕೆ ನೋಡೋದು
ಶಾಲಾ ದಿನಗಳಲ್ಲಿ PT ಪಿರಿಯಡ್ ಇರುತ್ತಿತ್ತು. Physical Training ನ ಪ್ರಾಮುಖ್ಯತೆ ಕೊಂಚ ವಯಸ್ಸಾದ ಮೇಲೆ ತಿಳಿಯುತ್ತದೆ ಆದರೆ ತಡ ಆಗಿರುತ್ತೆ. ಆ ವಿಷಯ ಬಿಡಿ. ಈ PT ಮೇಷ್ಟ್ರುಗಳ ಪ್ರಾಬ್ಲಮ್ ಏನಪ್ಪಾ ಅಂದ್ರೆ ಲೆಫ್ಟ್- ರೈಟ್ ಅಂದ್ರೆ ತೊಂದರೆಯೇ ಇಲ್ಲ ಆದರೆ ಹಿಂದಿಯಲ್ಲಿ ದಾಯೇ, ಬಾಯೇ ಅಂದಾಗಲೆಲ್ಲಾ ಬಾಯಿಬಿಡುವ ಹಾಗಾಗುತ್ತಿತ್ತು. ಅದು ಎಡವೋ ಬಲವೋ ಅರಿಯದೇ ಎಡಕ್ಕೆ ಇರುವವನ ಕಡೆ ನೋಡಿದಾಗ ಅವನೋ ನನ್ನ೦ತೆಯೇ ಭೂಪ. ಅವನು ನನ್ನ ಕಡೆ ನೋಡಿದಾಗ ವಿಧಿಯಿಲ್ಲದೇ ಬಲಕ್ಕೆ ನೋಡೋದು. ಅವನೂ ನನ್ನ ಕಡೆ ನೋಡಿದರೆ ಅಲ್ಲಿಗೆ ಮುಗೀತು. ಸ್ವಂತ decision ತೊಗೊಂಡು ಬಾಯೇ ಅಂದಾಗ ರೈಟ್ ಮಾಡೋದು, ದಾಯೇ ಎಂದಾಗ ಲೆಫ್ಟ್ ಮಾಡಿ ಬೈಸಿಕೊಳ್ಳೋದೋ, ಹೊಡೆಸಿಕೊಳ್ಳೋದೋ ಆಗುತ್ತಿತ್ತು. ಎಡ ಅಂದ್ರೇನು ಬಲ ಅಂದ್ರೇನು ಗೊತ್ತಿಲ್ಲದೇ ಇರೋದ್ರಿಂದಲೇ ನನ್ನನ್ನು NCCಗೆ ಸೇರಿಸಿಕೊಳ್ಳಲಿಲ್ಲ ಎಂದುಕೊಳ್ಳಬಹುದೇ?

ಎಡಭಾಗದ ಮೆದುಳು ಬಳಕೆಯಾಗುವಂತೆ
ದಾನ ಕೊಡುವಾಗ ಎಡಗೈಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು ಎನ್ನುತ್ತಾರೆ. ಅಂದ್ರೆ, ಮನುಷ್ಯನ ಮನಸ್ಸು ಅಷ್ಟು ಚಂಚಲ ಅಂತ. ಎಡಗೈನಿಂದ ಬಲಗೈಗೆ ಹಸ್ತಾಂತರ ಆಗುವ ಹೊತ್ತಿಗೆ ಮನಸ್ಸು ಬದಲಿಸಿ ಬಿಡಬಹುದು ಅಂತ. ಕರ್ಣನ ಬಳಿ ದಾನ ಕೇಳಿಕೊಂಡು ಬಂದವರಿಗೆ ಅವನು ದಾನ ಕೊಡುವಾಗ ಯಾವ ಕೈ ಬಳಿ ಏನು ವಸ್ತು ಇದೆಯೋ ಸುಮ್ಮನೆ ತೆಗೆದುಕೊಂಡು ಕೊಟ್ಟುಬಿಡುತ್ತಿದ್ದ ಎಂದು ಕಥೆಯಿದೆ.

ಮೆದುಳು ಒಂದೇ ಆದರೂ ಇದರಲ್ಲೂ ಎಡ- ಬಲ ಅಂತಿದೆ. ಒಂದು ಬರಹವನ್ನು ಬರೆಯುವಾಗ ಅಂಕಿ- ಅಂಶಗಳನ್ನು, ಪದಬಳಕೆಗಳನ್ನು ಮಾಡುವಾಗ ಮತ್ತು ಅದನ್ನು ತಕ್ಕಂತೆ ಜೋಡಿಸಿ ಕ್ರಮಾನುಕ್ರಮಗಳನ್ನು ಪಾಲಿಸುವಾಗ ಎಡಭಾಗದ ಮೆದುಳು ಬಳಕೆಯಾಗುವಂತೆ, ಅದೇ ಬರಹದಲ್ಲಿ ಒಂದಷ್ಟು ಕಲ್ಪನೆಗಳನ್ನು, ಊಹಾಪೋಹಗಳನ್ನು ಅಳವಡಿಸಿ ಓದುಗರನ್ನು ತೊಡಗಿಸಿದಾಗ ಬಲಭಾಗದ ಮೆದುಳು ಬಳಕೆಯಾಗುತ್ತದೆ. ಈ ಬರಹ right ಇರಬಹುದು, ತಪ್ಪುಗಳೂ ಇರಬಹುದು. ಆಡದೇ ಉಳಿದ ಬಹಳಷ್ಟು ವಿಚಾರಗಳು Left Behind. ಅದನ್ನು ನೀವು ಬರೆಯಿರಿ ಆಯ್ತಾ?

ಟೈಮ್ right ಇರಬೇಕು ಜೀವನದಲ್ಲಿ ಅಷ್ಟೇ
ಹೊರಡುವ ಮುನ್ನ ಒಂದು ಮಾತು. ನೀವು ಎಡಗೈಗೆ wrist ವಾಚ್ ಕಟ್ಟುವವರೋ? ಬಲಗೈಗೆ wrist ವಾಚ್ ಕಟ್ಟುವವರೋ? ಯಾವುದಕ್ಕೆ ಕಟ್ಟಿದರೇನು ಟೈಮ್ right ಇರಬೇಕು ಜೀವನದಲ್ಲಿ ಅಷ್ಟೇ. ಕಟ್ಟುವ ವಾಚ್ ಮಾತ್ರ ಈಗಿನ ಸಮಯ ಹೇಳುತ್ತದೆಯೇ ಹೊರತು ನಮ್ಮ ಜೀವನದ left over ಹೇಳುವುದಿಲ್ಲ ಅಲ್ಲವೇ? ಎಡಬಲ ಕಾಣದ ಕುದುರೆಯಂತೆ ಪಟ್ಟಿಕಟ್ಟಿಕೊಂಡು ಸಾಗದೆ ವಿಶಾಲ ಪರಪಂಚ ನೋಡ್ಕೊಂಡ್ ಸಾಗೋಣ ಬನ್ನಿ.

English summary
Srinath Bhalle Column In Kannada: Everything in right nothing left behind in Right and left Topic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X