ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಪೂರ್ಣಗಳೆಲ್ಲಾ ಕಿರಿದಾದ ಬಿಡಿಭಾಗಗಳೇ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಈ ವಿಷಯದ ವ್ಯಾಪ್ತಿ ಕೊಂಚ ಹಿರಿದಾದದ್ದು. ಹಾಗಾಗಿ ಕಿರಿದಾಗಿಸಿ ಬಿಡಿಬಿಡಿಯಾಗಿಯೇ ಅರ್ಥೈಸಿಕೊಳ್ಳೋಣ.

Recommended Video

TikTok ban,China lost 6B$?ಟಿಕ್‌ ಟಾಕ್ ಬ್ಯಾನ್‌ನಿಂದಾಗಿ ಕಂಪನಿಗೆ 45000 ಕೋಟಿ ನಷ್ಟ ಸಾಧ್ಯತೆ|Oneindia Kannada

ಅಂಗಡಿಯಲ್ಲಿ ಒಂದು ಟಿ.ವಿ ಕೊಂಡುಕೊಳ್ಳುತ್ತೀರ ಎಂದುಕೊಳ್ಳೋಣ. ಸದ್ಯಕ್ಕೆ ಟಿ.ವಿಯನ್ನು ಒಂದು ಪೂರ್ಣಭಾಗ ಎಂದೇ ಅಂದುಕೊಳ್ಳೋಣ. ಅಂಗಡಿಯಿಂದ ತಂದು ಕೂರಿಸಿ, ಆನ್ ಮಾಡಿದ ಕೂಡಲೇ 'ಪುಟ್ಟಗೌರಿ' ಮೂಡುವುದಿಲ್ಲ. ಆ ಪೂರ್ಣಭಾಗಕ್ಕೆ ಅನೇಕ ಬಿಡಿಭಾಗಗಳು ಸೇರಬೇಕು. ಒಂದು powercord, ಒಂದು ಕೇಬಲ್ ಕನೆಕ್ಷನ್, wall mount ಅಂತಾದರೆ ಅದಕ್ಕೊಂದಿಷ್ಟು ಪರಿಕರಗಳು. ಹೀಗೆ ಸಾಕಷ್ಟು ಬಿಡಿಭಾಗಗಳು ಸೇರಿಯೇ ಒಂದು ಪೂರ್ಣ ಭಾಗವಾಗೋದು. ಬಿಡಿಭಾಗಗಳು ಕೂಡಿಕೊಂಡಾಗಲೇ ಅದೊಂದು ಬಳಸಬಹುದಾದ ಸಾಧನವಾಗಬಹುದು.

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲಾ ವಿಷಯಕ್ಕೂ ಅದರದ್ದೇ ಆಳ, ಅಳತೆ ಇದೆಶ್ರೀನಾಥ್ ಭಲ್ಲೆ ಅಂಕಣ; ಎಲ್ಲಾ ವಿಷಯಕ್ಕೂ ಅದರದ್ದೇ ಆಳ, ಅಳತೆ ಇದೆ

ಈಗ ಒಂದು ಬೃಹತ್ ವಿಷಯ ತೆಗೆದುಕೊಳ್ಳೋಣ. ಕಳೆದ ವರ್ಷಗಳಲ್ಲಿ ಮೆಟ್ರೋ ರೈಲುಬಂಡಿ ಸಾಗಲು ರಾಜಪಥ ಮಾಡುವಾಗ, ಒಂದೇ ಬಾರಿಗೆ ಅಲ್ಲೊಂದು ಸೇತುವೆ ಉದ್ಭವವಾಗಿ 'ನಮ್ಮ ಮೆಟ್ರೋ' ಓಡಲಿಲ್ಲ. ಮೊದಲಿಗೆ ಸಿಮೆಂಟ್ pillarಗಳನ್ನು ಕೂರಿಸುತ್ತಾ, ಸಿಮೆಂಟ್ ಬ್ಲಾಕ್ ಗಳನ್ನ ಜೋಡಿಸುತ್ತಾ ಪಥವನ್ನು ಮಾಡಲಾಗಿತ್ತು. ಅಂಥ ಸೇತುವೆಯ ಮೇಲೆ ಸಾಗುವ ಮೆಟ್ರೋ ಟ್ರೈನ್ ಕೂಡ ಒಂದು ಪೂರ್ಣ ಭಾಗವಾಗದೇ, ಹಲವಾರು ಕಾರುಗಳಿಂದ ಕೂಡಿದ್ದೇ ಆಗಿತ್ತು. ಅಂಥ ಒಂದು carನಲ್ಲಿ ಅದೆಷ್ಟು ಬಿಡಿಭಾಗಗಳು ಇರುತ್ತವೆ ಎಂಬ ಲೆಕ್ಕ ನನಗಂತೂ ಗೊತ್ತಿಲ್ಲ. ಒಂದಂತೂ ನಿಜ, ನೋಡುವ ಕಣ್ಣುಗಳಿಗೆ ಕಾಣುವುದಕ್ಕಿಂತ ಹತ್ತರಷ್ಟು, ಕಾಣದಷ್ಟು ಬಿಡಿಭಾಗಗಳು ಇರುತ್ತವೆ. ಸಾಮಾನ್ಯವಾಗಿ, ಒಂದು ಪೂರ್ಣಭಾಗ ಬಿಡಿಭಾಗಗಳ ಸಂತೆ ಎನ್ನಬಹುದು, ನಮ್ಮ ದೇಹದಂತೆ.

Every Stage Of Life Is A Pack Of Small Small Things

ಈ ಬೃಹತ್ ಎಂದು ವಿಷಯ ತೆಗೆದುಕೊಂಡಾಗ ಈಚೆಗಿನ ಸರ್ದಾರ ಪಟೇಲರ ಪ್ರತಿಮೆಯನ್ನೇ ಉದಾಹರಣೆ ತೆಗೆದುಕೊಳ್ಳೋಣ. ಆ ಎತ್ತರದ ಪ್ರತಿಮೆಯು ಸಂಪೂರ್ಣ ಒಂದು ಭಾಗವಲ್ಲ, ಬದಲಿಗೆ ಹಲವಾರು ಬಿಡಿಭಾಗಗಳಿಂದ ಕೂಡಿದ್ದೇ ಆಗಿದೆ. ಬಿಡಿಯಾಗಲ್ಲದೇ 57 ಅಡಿಗಳಷ್ಟು ಎತ್ತರದ ಜಗತ್ತಿನ ಅತ್ಯಂತ ಎತ್ತರದ ಏಕಶಿಲೆ ಪ್ರತಿಮೆ ಎಂದರೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆಯೊಂದೇ.

ಗೊಮ್ಮಟ ಶಿಲೆಯನ್ನು ಹೊರತುಪಡಿಸಿ, ಇತರ ಉದಾಹರಣೆಗಳನ್ನು ನೋಡೋಣ... ಈಗ ನಾವು ಕಾಣುವ ದೈನಂದಿನ ಜೀವನದಲ್ಲಿನ ಯಾವುದೇ ವಿಷಯಕ್ಕೂ ಹೋಲಿಸಿ ನೋಡಬಹುದು. ಒಂದು ರಂಗೋಲಿ ಬಿಡಿಸುವ ಕೆಲಸವನ್ನೇ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ಏನೇನಿದೆ? ಮೊದಲಿಗೆ ಚುಕ್ಕಿಗಳನ್ನು, ಮೇಲಿಂದ ಕೆಳಕ್ಕೆ ಮತ್ತು ಎಡದಿಂದ ಬಲಕ್ಕೆ, ಒಂದೇ ಅಂತರದಲ್ಲಿ ಇರುವಂತೆ ಇಡಲಾಗುತ್ತದೆ. ಆನಂತರ ಅದಕ್ಕೊಂದು ಆಕಾರ ಬರುವಂತೆ, ಚುಕ್ಕಿಗಳನ್ನು ಜೋಡಿಸುವ, ಗೆರೆಗಳನ್ನು ಎಳೆಯಲಾಗುತ್ತದೆ. ಆ ನಂತರ ಬಣ್ಣವನ್ನು ತುಂಬಬಹುದು ಅಥವಾ ಹೂವಿನ ಎಸಳುಗಳನ್ನೂ ಹಾಕಬಹುದು. ಹೀಗೆ ಒಂದು ರಂಗೋಲಿಯ ಕೆಲಸವನ್ನು ಚಿಕ್ಕದಾಗಿ ಆರಂಭಿಸಿ, ಹಂತ ಹಂತವಾಗಿ ಒಂದರ ಮೇಲೊಂದು ಎಂಬಂತೆ ಕಟ್ಟಲಾಗುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; Laptop ಎಂದರೆ ತೊಡೆಯೇರಿ ಕೂರೋದು ಅಂತಶ್ರೀನಾಥ್ ಭಲ್ಲೆ ಅಂಕಣ; Laptop ಎಂದರೆ ತೊಡೆಯೇರಿ ಕೂರೋದು ಅಂತ

ಒಂದು ದಿನ ಎಂದು ತೆಗೆದುಕೊಂಡರೆ ಅಲ್ಲೊಂದು ಹಗಲು, ಅಲ್ಲೊಂದು ಮಧ್ಯಾಹ್ನವೂ, ಅಲ್ಲೊಂದು ಸಂಜೆ, ಅಲ್ಲೊಂದು ರಾತ್ರಿ ಅಂತ ಇರುತ್ತದೆ. 24 ಗಂಟೆಗಳು ಎಂದು ತೆಗೆದುಕೊಂಡರೆ ಹಗಲಿನಿಂದ ಏಕ್ದಂ ರಾತ್ರಿಯಾಗುವುದಿಲ್ಲ. ಸೂರ್ಯನ ವಿವಿಧ ಹಂತಗಳ ಚಲನೆಯನ್ನು ಅನುಸರಿಸಿ, ಮೊದಲಿಗೆ ಹಗಲು, ನಂತರ ಮಧ್ಯಾಹ್ನ, ಆ ನಂತರ ಸಂಜೆಯಾಗುವಂತೆ ಹಂತ ಹಂತವಾದ ಬೆಳವಣಿಗೆ. 24 ಗಂಟೆಗಳೂ ಒಂದು ಪೂರ್ಣಭಾಗವಲ್ಲ, ನಾಲ್ಕಾರು ಬಿಡಿಭಾಗಗಳೇ!!!

Every Stage Of Life Is A Pack Of Small Small Things

ಒಂದು ಅಡುಗೆ ಅಂತ ತೆಗೆದುಕೊಂಡರೆ, ಮಾಡುವ ವಿಧಾನವನ್ನೇ ಅನುಸರಿಸಿ ಹಲವು ಹಂತವಾಗಿ ವಿಂಗಡಿಸಬಹುದು. ಸ್ಟೌ ಹಚ್ಚಿ, ಪಾತ್ರೆಯಿಟ್ಟು ಇಳಿಸಿದ ಕೂಡಲೇ ಅಲ್ಲೊಂದು ಬಿಸಿಬೇಳೆಬಾತ್ ತಯಾರಾಗಿರೋದಿಲ್ಲ. ಬಹಳಷ್ಟು ಹಂತಗಳು ಒಂದರ ಮೇಲೊಂದು ಬೆಳೆಸುತ್ತಾ ಸಾಗಬೇಕು.

'ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಮಾತನ್ನು ಕೇಳಿಯೇ ಇರುತ್ತೇವೆ. ಮೇಲಿನ ವಿಚಾರವನ್ನು ಈ ಎರಡು ಬೃಹತ್ ಕೆಲಸಗಳಿಗೆ ಹೊಂದಿಸಿ ನೋಡಿದಾಗ ಅದರ ಆಳ ಅರ್ಥವಾಗುತ್ತದೆ. ಒಂದು ಮನೆಯನ್ನು ಕಟ್ಟುವಾಗ ಆಗಬೇಕಾದ ಮೊದಲ ಕೆಲಸವೇ ಆ ಸೈಟ್ ನ ನೆಲವನ್ನು ಸಮತಟ್ಟಾಗಿಸುವುದು. ಸೈಟ್ ಖರೀದಿ ಮಾಡಬೇಕು ಇತ್ಯಾದಿಗಳೆಲ್ಲಾ ಸ್ವಲ್ಪ ಬದಿಗೆ ಇಡೋಣ. ನೆಲವು ಸಮತಟ್ಟಾದ ಮೇಲೆ ನೀಲಿನಕ್ಷೆಯ ಪ್ರಕಾರ ನೆಲ ಅಗೆಯೋದು, ಪಾಯ ಹಾಕೋದು ಇತ್ಯಾದಿ ಕೆಲಸ ಶುರುವಾದರೆ ಅದೊಂದು ಮನೆ/ದೊಡ್ಡ ಕಟ್ಟಡ ಅಂತಾಗುವ ಹೊತ್ತಿಗೆ ಅದೆಷ್ಟು ಹಂತಗಳು ದಾಟಿರುತ್ತದೆಯೋ ಗೊತ್ತಿಲ್ಲ. ಮನೆ ಕಟ್ಟುವ ಕೆಲಸದಲ್ಲಿ, ಹಲವಾರು ಕೆಲಸಗಳು ಸಮಾನಾಂತರವಾಗಿಯೇ ಅರ್ಥಾತ್ ಒಂದು ಕೆಲಸ ನಡೆಯುವಾಗಲೇ ಮತ್ತೊಂದು ಕೆಲಸವೂ ನಡೆಯಬಹುದು. ಆದರೆ, ಹಲವು ಕೆಲಸಗಳು ಒಂದಾದ ನಂತರವೇ ನಡೆಯಬೇಕು. ಸಣ್ಣ ಉದಾಹರಣೆ ಎಂದರೆ, ಅಡಿಪಾಯ ಮತ್ತು ತಾರಸಿಯ ಕೆಲಸ ಒಟ್ಟಾಗಿ ನಡೆಯೋದಿಲ್ಲ, ಅಲ್ಲವೇ?

ಶ್ರೀನಾಥ್ ಭಲ್ಲೆ ಅಂಕಣ; ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ...ಶ್ರೀನಾಥ್ ಭಲ್ಲೆ ಅಂಕಣ; ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ...

ಇನ್ನು ಮದುವೆ... ಒಂದು ಮದುವೆ ಅಂತಾಗಬೇಕಾದರೆ ಮೊದಲ ಕೆಲಸ ಏನು ಅಂತ ಇಲ್ಲಿ ಕೇಳಿದಾಗ ಉತ್ತರ ಹೇಳೋದು ಸ್ವಲ್ಪ ಕಷ್ಟವೇ ಅನ್ನಿ. Where to begin ಅನ್ನೋ ಪ್ರಶ್ನೆ ಉದ್ಭವವಾಗುತ್ತದೆ. ಮದುವೆಗಿರುವ ಮಕ್ಕಳು ನಮಗೆ ಇರಬೇಕು ಅನ್ನೋದು ಅತೀ ಮುಖ್ಯ. ಆ ವ್ಯಕ್ತಿಗೆ (ಮಗ/ಮಗಳು/ತಮ್ಮ/ತಂಗಿಗೆ) ಮದುವೆಯಾಗುವ ಆಶಯ ಇರಬೇಕು ಅನ್ನೋದು ಕುಚೋದ್ಯ. Seriously, ಒಂದು ಮದುವೆಯಲ್ಲಿನ ಕಾರ್ಯಕಲಾಪಗಳನ್ನು ಗಮನಿಸುತ್ತಾ ಹೋದರೆ, ಅದೊಂದು ಅತೀ ದೊಡ್ಡ ಪ್ರಾಜೆಕ್ಟ್ ಎಂದರೆ ತಪ್ಪೇನಿಲ್ಲ. ಮದುವೆಯ ಕಾರ್ಯಕಲಾಪಗಳೆಲ್ಲವೂ ಬಿಡಿಭಾಗಗಳ ಮೇಳವೇ ಸರಿ. ಈ ಪ್ರಾಜೆಕ್ಟ್ ಒಂದು ಪೂರ್ಣಭಾಗವಲ್ಲ, ಬದಲಿಗೆ ಹಲವಾರು ಕಾರ್ಯಕಲಾಪಗಳೆಂಬ ಬಿಡಿಭಾಗಗಳು.

ಈ ಪೂರ್ಣ/ಬಿಡಿಭಾಗಗಳಂತೆಯೇ ಮನುಷ್ಯ ಜೀವನದ ಬೆಳವಣಿಗೆಗಳು ಸಹ. ಪೂರ್ಣನಾಗುವ ಆಶಯದ ಬಗ್ಗೆ ಈಗ ಮಾತು ಬೇಡ. ಏಕೆಂದರೆ ಅದು ದುಸ್ತರ. ಸದ್ಯಕ್ಕೆ ಒಬ್ಬ ಮನುಷ್ಯ ಹಿರಿಯನಾಗುವ ವಿಷಯ ಮಾತ್ರ ತೆಗೆದುಕೊಳ್ಳೋಣ. ಗರ್ಭದಲ್ಲಿ ಒಂದು ಅಣುರೂಪವು ಕೂಸಿನ ರೂಪ ತಾಳುವುದೇ ಒಂದು ದೊಡ್ಡ ವಿಸ್ಮಯ. ನವಮಾಸಗಳ ಪ್ರತೀ ದಿನದ ಬೆಳವಣಿಗೆಯು ಬಿಡಿಬಿಡಿ ಸಂತೆ.

Every Stage Of Life Is A Pack Of Small Small Things

ಆದರೆ ಆ ಬೆಳವಣಿಗೆಯು ಎಲ್ಲರಿಗೂ ಗೋಚರವಾಗುವ ಬೆಳವಣಿಗೆ ಅಲ್ಲ. ಧರೆಗಿಳಿದ ಕೂಸಿನ ಮೊದಲ ದಿನವೇ ಆ ಮುಂದಿನ ಆರಂಭದ ಮೊದಲ ದಿನ. ಅಲ್ಲಿಂದಾಚೆ ಪ್ರತೀ ದಿನವೂ ಬೆಳೆಯುತ್ತದೆ ಆ ಕೂಸು. ಬೆಳವಣಿಗೆ ಅನ್ನೋದು ಕೇವಲ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ದಿನನಿತ್ಯದಲ್ಲಿ ಕೂಸಿನ ಮಾನಸಿಕ ಬೆಳವಣಿಗೆ ಆಗುತ್ತಲೇ ಇರುತ್ತದೆ. ದಿನೇ ದಿನೇ ಕಲಿಯುತ್ತಾ ಸಾಗುತ್ತದೆ. ಮಾತನಾಡಲು, ತೆವಳಲು, ನಡೆದಾಡಲು, ಓಡಾಡಲು ಕಲಿಯುತ್ತದೆ ಕೂಸು. ಬೆಳೆಯುತ್ತಾ ಸಾಗಿದಂತೆ ಒಳಿತು ಕೆಡುಕಗಳ ವ್ಯತ್ಯಾಸ ಅರಿತು ಬೆಳೆಯುತ್ತದೆ. ಕೆಲವೊಮ್ಮೆ ಹೆಚ್ಚು ಒಳಿತುಗಳನ್ನು ಕ್ರೋಢೀಕರಿಸಿಕೊಂಡು ಬೆಳೆಯಬಹುದು. ಹಲವೊಮ್ಮೆ ಪರಿಸರದ ಕೆಡುಕಗಳನ್ನೇ ಸ್ವೀಕರಿಸಿ ಬೆಳೆಯಬಹುದು. ಒಟ್ಟಾರೆ ಹೇಳೋದಾದ್ರೆ, ಮನುಷ್ಯನ ಬೆಳವಣಿಗೆಯು ಒಂದು ಪೂರ್ಣರೂಪ ತಳೆಯಬೇಕು ಎಂದರೆ ಎಲ್ಲಾ ಬಿಡಿಭಾಗಗಳು ಸರಿಯಾಗಿ ಕೂಡಿಕೊಂಡು ಪೂರ್ಣವಾಗಬೇಕು. ಸ್ವಲ್ಪ ನಟ್ಟುಬೋಲ್ಟು ಆ ಕಡೆ ಈ ಕಡೆಯಾದರೂ ಪೂರ್ಣರೂಪ ಕೊಂಚ ವಿರೂಪವಾಗಬಹುದು.

ಇಲ್ಲಿ ಪೂರ್ಣ ಎಂಬುದಿಲ್ಲ. ಬದಲಿಗೆ ಯಾವಾಗ ಮಾನಸಿಕ ಬೆಳವಣಿಗೆ ನಿಲ್ಲುತ್ತದೋ ಅದು ಒಂದು ಹಂತ ಅಂತಷ್ಟೇ. ಮಾನಸಿಕ ಬೆಳವಣಿಗೆ ನಿಂತ ದಿನ, ಆ ಜೀವನ ನಿಂತ ನೀರು.

ಜೀವನದ ಪ್ರತೀ ಹಂತವೂ ಬಿಡಿಭಾಗಗಳೇ ಅಂತ ಅರಿವಾಗಿಯೂ ಒಂದು ಬಿಡಿಭಾಗ ಹಾಳಾಯ್ತು ಅಂತ ಆದಾಗ ಪೂರ್ಣರೂಪವೇ ಹಾಳಾಯ್ತು ಅಂತ ಅಂದುಕೊಳ್ಳೋದು ತಪ್ಪಲ್ಲವೇ? ಜೊತೆಗೆ ಒಂದು ಪೂರ್ಣ ರೂಪವಾಗಲು ಬಿಡಿಭಾಗಗಳನ್ನು ಸೇರಿಸಬೇಕು ಅಂತ ಅರ್ಥವಾಗಿಯೂ ಹುಟ್ಟಿದ ಕೂಡಲೇ ಅರವತ್ತನಾಲ್ಕು ವಿದ್ಯೆಗಳಲ್ಲೂ ಪರಿಪೂರ್ಣವಾಗಬೇಕು ಅಂತ ಬಯಸೋದು ತಪ್ಪಲ್ಲವೇ? ಮಕ್ಕಳನ್ನು ಗಿಡ ನೆಟ್ಟಂತೆ ನೆಟ್ಟು ಬೆಳೆಸೋಣ... ಒಂದೇ ಸಾರಿ ಮರವನ್ನೇ ನೆಡುವುದು ಬೇಡ.

ನನ್ನ ಮಾತಲ್ಲಿ ಅರ್ಥವಿದೆಯೇ? ಏನಂತೀರಾ?

English summary
Every stage of life is a pack of different things. This things must be added to become a full form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X