ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂದಿ ನಗಣ್ಯವಲ್ಲ, ಬದುಕಿನಲ್ಲಿ ಬೂದಿಗೂ ವಿಶೇಷ ಸ್ಥಾನವಿದೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಸ್ನಾನಾದಿ ನಿತ್ಯಕರ್ಮಗಳ ನಂತರ ದೇವರ ಮನೆಯಲ್ಲಿ ದೀಪವನ್ನೋ, ಅಗರಬತ್ತಿಯನ್ನೋ ಹತ್ತಿಸಿಡುವುದೂ ನಮ್ಮಲ್ಲಿನ ನಿತ್ಯಕರ್ಮಗಳಲ್ಲಿ ಒಂದು. ಮೊದಲಿಗೆ ಹಿಂದಿನ ದಿನ ಹಚ್ಚಿಟ್ಟ ಅಗರಬತ್ತಿಯ ಭಸ್ಮ/ಬೂದಿಯನ್ನು ಮೊದಲು ಶುಚಿ ಮಾಡಿ ನಂತರ ಹೊಸತಾಗಿ ಹಚ್ಚುವ ಕ್ರಿಯೆಯಲ್ಲಿ ತೊಡಗಿರುವಾಗಲೇ ಈ ವಾರದ ಬರಹವನ್ನೇಕೆ ಬೂದಿಯ ಬಗ್ಗೆ ಬರೆಯಬಾರದು ಅನ್ನಿಸಿತು. ಇಂದಿನ ಬರಹ ಬೂದಿಮಯ.

ಬಹುಶ: ನಾವುಗಳು ಬಾಲ್ಯದಿಂದಲೂ ಒಂದಲ್ಲಾ ಒಂದು ರೀತಿ ಬೂದಿಯನ್ನು ನೋಡಿಕೊಂಡೇ ಬೆಳೆದಿದ್ದೇವೆ. ಸೌದೆ ಉರಿದು ಕೆಂಡವಾಗಿ, ಆ ಕೆಂಡದ ಜೊತೆಗೇ ಬೂದಿಯೂ ಇರುವ ಸನ್ನಿವೇಶ ನೆನಪಿಸಿಕೊಳ್ಳಿ. ನಿಗಿನಿಗಿ ಕೆಂಡವನ್ನು ಸುತ್ತುವರೆವ ಈ ಬೂದಿಗೆ ಬಿಸಿ ತಾಗುವುದಿಲ್ಲವೇ ಎನಿಸಬಹುದು, ಆದರೆ ವಿಷಯ ಅದಲ್ಲ. ಕೆಂಡವನ್ನು ಮುಚ್ಚಿದ ಬೂದಿಯೂ ಬಿಸಿಯಿರುತ್ತದೆ. ತಮಗಿರುವ ಪ್ರತಿಭೆಯನ್ನು ಹೊರಗೆ ತೋರಿಸಿಕೊಳ್ಳದ, ತಮ್ಮ ಇರುವನ್ನು ಹೆಚ್ಚು ತೋರಿಸಿಕೊಳ್ಳಲು ಬಯಸದ ಮಂದಿಯನ್ನು ಬೂದಿ ಮುಚ್ಚಿದ ಕೆಂಡಕ್ಕೆ ಹೋಲಿಸುತ್ತಾರೆ. ಆ ಮಂದಿಯು ಕೆಂಡವೇ ಆದರೂ ಮುಚ್ಚಿದ ಬೂದಿಯ ಪಾತ್ರವೂ ಅಷ್ಟೇ ಹೆಚ್ಚು.

ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು! ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!

ನಿಂತ ನಿಲುವಿನಲ್ಲೇ ನಮಗೆ ಯಾರಾದಾರೂ ಯಾಮಾರಿಸಿದರೆ ಮತ್ತೊಬ್ಬರು ಹೇಳೋ ಮಾತು 'ಮಂಕುಬೂದಿ ಎರಚಿ ಯಾಮಾರಿಸಿದರು' ಅಂತ. ಅರ್ಥಾತ್ ಕಾಣದ ಬೂದಿಯನ್ನು ನಮ್ಮತ್ತ ತೂರಿ ಸಂಮೋಹಕ್ಕೆ ಒಳಪಡಿಸಿ ಮೋಸಮಾಡಿದರು ಅಂತ. ಎಷ್ಟೋ ಬಾರಿ ನಿಜವಾಗಿಯೂ ಯಾವುದೋ ಬೂದಿಯನ್ನು ಮುಖಕ್ಕೆ ಊದಿ ಸಂಮೋಹಕ್ಕೆ ಒಳಪಡಿಸುವುದೂ ಉಂಟು.

Even Ash has important role in our life

ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ವ್ಯವಹಾರ ಮುಗಿದು ಶಿವನಪಾದ ಸೇರಿದಾಗ, ದೇಹವನ್ನು ಸುಡುವ ಪದ್ಧತಿ ಇರುವವರು ಅಸ್ತಿಯನ್ನು ನದಿಯಲ್ಲಿ ವಿಸರ್ಜಿಸುವ ಪದ್ಧತಿಯನ್ನೂ ಅನುಸರಿಸುವ ವಿಷಯ ಎಲ್ಲರಿಗೂ ಗೊತ್ತಿರುವುದೇ. ಸುಟ್ಟದೇಹದ ಬೂದಿಯನ್ನು ಗೌರವದಿಂದ ಅಸ್ತಿ ಎಂದು ಕರೆಯುತ್ತೇವೆ. ಜೀವಿತಕಾಲದಲ್ಲಿ ಆಸ್ತಿ ಮಾಡಿದ್ದರೂ / ಮಾಡದಿದ್ದರೂ ಅಸ್ತಿಯಾಗುವುದನ್ನು ತಪ್ಪಿಸಿಕೊಳ್ಳಲು ಅಸಾಧ್ಯ. ವ್ಯಕ್ತಿ ಇನ್ನೆಷ್ಟೇ ಎತ್ತರ ಗಾತ್ರ ಇರಲಿ ಅಥವಾ ಇಲ್ಲದಿರಲಿ, ಎಂಥದ್ದೇ ಆಟಾಟೋಪವಿರಲಿ ಅಥವಾ ಇಲ್ಲದಿರಲಿ, ಬಂಗಲೆಯಲ್ಲೇ ಇರಲಿ ಅಥವಾ ಗುಡಿಸಿಲಿನಲ್ಲೇ ಇರಲಿ ಕೊನೆಗೆ ಅವರು ತುಂಬೋದು ಒಂದು ಕರಂಡಕದಲ್ಲೇ! ಅದೂ ಬೂದಿಯ ಸ್ವರೂಪದಲ್ಲೇ ಅಂಬೋದು ನೆನಪಿಟ್ಟುಕೊಳ್ಳಬೇಕು.

ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ

ಈ ಬೂದಿ ನಗಣ್ಯವಲ್ಲ! ಇದ್ದಾಗ ವ್ಯಕ್ತಿಗೆ ಗೌರವ ಇಲ್ಲದೇ ಹೋದರೂ ಬೂದಿಗೆ ವಿಶೇಷ ಸ್ಥಾನವಿದೆ. ಯಾವುದೇ ಕಾರಣಕ್ಕೂ ಈ ಕಾರ್ಯ ಕೈ ತಪ್ಪದೇ ಇರಲಿ ಎಂದೇ, ಇಂದಿನ ತಂತ್ರಜ್ಞಾನ ಯುಗದಲ್ಲಿ 'ಅಸ್ತಿವಿಸರ್ಜನ ಡಾಟ್ ಕಾಮ್' ಎಂಬ ವೆಬ್ ತಾಣವಿದೆ, ಮೊಬೈಲ್ ಆಪ್ ಇದೆ. NRIಗಳಿಗೆಂದೇ ವಿಶೇಷವಾಗಿ ಅಸ್ತಿಯನ್ನು ವಾರಣಾಸಿಗೆ ತಲುಪಿಸಿ ವಿಸರ್ಜಿಸುವ ಜವಾಬ್ದಾರಿಯನ್ನೂ ಹೊರುವ ವ್ಯವಸ್ಥೆ ಇದೆ ಎಂಬಲ್ಲಿಗೆ ಈ ವಿಷಯ ಮುಗಿಸೋಣ.

'ಗಂಗಾವತರಣ'ದ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಈ ಪೌರಾಣಿಕ ಕಥೆಯ ವಿಶೇಷತೆ ಏನಪ್ಪಾ ಅಂದ್ರೆ, ಭಗೀರಥನು ಗಂಗೆಯನ್ನು ಭೂಮಿಗೆ ತಂದ ಅನ್ನೋದು. ವಿಷಯ ಅಷ್ಟು ಸಿಂಪಲ್ ಅಲ್ಲ. ಹೋಗಲಿ ತಂದಿದ್ದಾರೂ ಯಾಕೆ? ಸಗರ ಮಹಾರಾಜ ಯಜ್ಞ ಮುಗಿಸಿ ಇಂದ್ರ ಪದವಿಗೆ ಏರಿಬಿಡಬಹುದು ಎಂಬ ಭೀತಿಯಿಂದ ಇಂದ್ರ ಯಜ್ಞಾಶ್ವವನ್ನು ಕದ್ದೊಯ್ದು ಒಂದು ಗುಹೆಯಲ್ಲಿ ಬಚ್ಚಿಡುತ್ತಾನೆ. ಭೂಮಿಯನ್ನೆಲ್ಲ ಬಗೆದ ಸಗರನ ಮಕ್ಕಳು ಕೊನೆಗೆ ಅಶ್ವವನ್ನು ಗುಹೆಯಲ್ಲಿ ಕಾಣುತ್ತಾರೆ. ಆ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮಹರ್ಷಿಯೇ ಈ ಅಶ್ವವನ್ನು ಕದ್ದೊಯ್ದು ತಂದಿರುವುದು ಎಂದುಕೊಂಡು ಅವನ ತಪಸ್ಸನ್ನು ಭಂಗ ಮಾಡಲು, ಅವನು ಕಣ್ತೆರೆದು ಇವರನ್ನೆಲ್ಲಾ ಸುಟ್ಟು ಭಸ್ಮ ಮಾಡುತ್ತಾನೆ. ಅರವತ್ತು ಸಾವಿರ ಮಂದಿ ಭಸ್ಮವಾದಾಗ ಅದೊಂದು ಬೂದಿಯ ಗುಡ್ಡವೇ ಆಯ್ತು. ಆ ಬೂದಿಯ ಮೇಲೆ ಗಂಗೆ ಹರಿದರೆ, ಸತ್ತವರಿಗೆ ಮುಕ್ತಿ ಅಂತಲೇ ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದಿದ್ದು. ಗಂಗೆ ಹರಿದಾಗ ಮುಕ್ತಿ ಸಿಕ್ಕಿತು ಎಂದಷ್ಟೇ ಅರ್ಥೈಸಿಕೊಂಡ ಜನ ಅಂದಿನಿಂದ ಗಂಗೆಯನ್ನು ಕಲುಷಿತ ಮಾಡುತ್ತಲೇ ಇದ್ದಾರೆ. ಬೂದಿಗೆ ಮುಕ್ತಿ ನೀಡಲು ಗಂಗೆ ಧರೆಗಿಳಿದು ಬಂದಳು ಎಂದಾಗ ಅರಿವಾಗುತ್ತೆ, ಬೂದಿಯೂ ಪರಮ ಗಣ್ಯ ಅಂತ.

Even Ash has important role in our life

ಗ್ರೀಕ್'ನ ಪೌರಾಣಿಕ ಕಥೆಗಳಲ್ಲಿ ಫೀನಿಕ್ಸ್ ಎಂಬ ಪಕ್ಷಿಯ ವಿಚಾರವಿದೆ. ಫೀನಿಕ್ಸ್ ಪಕ್ಷಿಯು ತಾ ಸುಟ್ಟುಸತ್ತ ಬೂದಿಯಿಂದಲೇ ಮರುಹುಟ್ಟು ಪಡೆಯುತ್ತದೆ ಎಂಬುದು ಕಥೆ. ಫೀನಿಕ್ಸ್ ಪಕ್ಷಿಯ ಆಯುಷ್ಯ ಐನೂರು ವರುಷಗಳು ಎಂದೂ ಹೇಳಲಾಗಿದೆ. ಇದು ಸತ್ಯವೋ ಮಿಥ್ಯವೋ ಮುಖ್ಯವಲ್ಲ. ತಮಗೆ ಒದಗಿದ ಕಷ್ಟಕಾರ್ಪಣ್ಯಗಳಿಂದ ಸುಟ್ಟೇ ಹೋದರೂ ಅದನ್ನು ಮೆಟ್ಟಿ ನಿಂತು ಮರುಹುಟ್ಟು ಪಡೆದು ಜಯಿಸುವ ತಾಕತ್ತನ್ನು ಪಡೆಯಬೇಕು ಎಂಬುದು ಕಲಿಕೆ.

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ಈಗ ನಾವು ಕಂಡ ಲೋಕಕ್ಕೆ ಮತ್ತೆ ಬರೋಣ. ಬಹುಶ: ಕ್ಯಾಂಪಿಂಗ್ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಗುಡ್ಡಗಾಡಿನಲ್ಲಿ ಕ್ಯಾಂಪಿಂಗ್ ಎಂದು ಹೋಗಿ, ರಾತ್ರಿಯ ವೇಳೆ ಒಂದು ನಿರ್ದಿಷ್ಟ ಜಾಗದಲ್ಲಿ ಬೆಂಕಿ ಹಾಕಿಕೊಂಡು ಮೈಕಾಯಿಸಿಕೊಳ್ಳೋದು, marshmellows ಅಥವಾ ಜೋಳ ಸುಟ್ಟುಕೊಂಡು ತಿನ್ನೋದು, ಹಾಡು ಕುಣಿತ ಎಂಬೆಲ್ಲಾ ಮೋಜನ್ನು ಬಲ್ಲವರೇ ಆಗಿರುತ್ತೀರಿ. ಮೋಜು ಮುಗಿದ ಮೇಲೆ ಆ ಬೂದಿ ಮುಚ್ಚಿದ ಕೆಂಡವನ್ನು ಆರಿಸುವುದು ಅತ್ಯಗತ್ಯ. ಇಲ್ಲವಾದ್ರೆ ಕಾಡಿನ ಬೆಂಕಿಗೆ ಜವಾಬ್ದಾರರಾಗಬೇಕಾಗುತ್ತದೆ. ಬಿಸಿ ಬೂದಿಯು ಕ್ರಿಮಿಕೀಟಗಳಿಗೇ ಅಲ್ಲದೆ, ಬರಿಗಾಲಿನಲ್ಲಿ ನಾವೇ ಪಾದ ಊರಿದರೂ, ಮತ್ತು ಪ್ರಾಣಿಪಕ್ಷಿಗಳಿಗೂ ಮಾರಕವಾಗಬಲ್ಲದು.

Ashtray ಬಗ್ಗೆ ತಿಳಿದುಕೊಳ್ಳಲು ಸಿಗರೇಟ್ ಸೇದಿ ಅಭ್ಯಾಸ ಇರಲೇಬೇಕು ಅಂತಿಲ್ಲ. ಸೇದುವ ಸಿಗರೇಟಿನ ಬೂದಿಯನ್ನು ಉದುರಿಸಲೇ ಒಂದು ಟ್ರೇ ಇದ್ದು ಅದನ್ನು ashtray ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ಸಿಗರೇಟ್ ಅನ್ನು ಮುಗಿಸಲು ನಲವತ್ತು ನಿಮಿಷಗಳ ಕಾಲ ಬೇಕು, ಅಷ್ಟೂ ಹೊತ್ತು ಕೈಲಿ ಇಟ್ಟುಕೊಳ್ಳೋದಕ್ಕೆ ತ್ರಾಸ ಅಂತಲೇ ashtray ಬಳಕೆ ಬಂತು. ಸಿಗರೇಟ್ ಸೇದುವುದೂ ಅಷ್ಟು ಸಲೀಸಲ್ಲ, ಸೇದದಿರಿ.

ನಮ್ಮ ನಿಮ್ಮೊಳಗೊಬ್ಬ ಇದ್ದೇ ಇದ್ದಾನೆ 'ಲೇಟ್ ಲತೀಫ್'! ನಮ್ಮ ನಿಮ್ಮೊಳಗೊಬ್ಬ ಇದ್ದೇ ಇದ್ದಾನೆ 'ಲೇಟ್ ಲತೀಫ್'!

ಬೂದಿಗೂ ಕ್ರಿಕೆಟ್'ಗೂ ಸಂಬಂಧ ಇದೆ. ನಾನು ಬುಧಿಸಾಗರ ಕೃಷ್ಣಪ್ಪ ಕುಂದೇರನ್ ಎಂಬ ವಿಕೆಟ್ ಕೀಪರ್ ಬಗ್ಗೆ ಹೇಳುತ್ತಿಲ್ಲ. ಬೂದಿ ಬೇರೆ ಬುಧಿ ಬೇರೆ. ಕ್ರಿಕೆಟ್ ಬಾಲ್ ಒಂದನ್ನು ಸುಟ್ಟು ಅದರ ಬೂದಿಯನ್ನು ಒಂದು ಕರಂಡದಲ್ಲಿ ಹಾಕಿ ಅದನ್ನು ಇಂಗ್ಲೆಂಡ್ ಕ್ರಿಕೆಟ್ ಕ್ಯಾಪ್ಟನ್ ಆದ Ivo Bligh'ಗೆ ಆಸ್ಟ್ರೇಲಿಯಾ ಟೀಮ್'ನವರಿಂದ 1882-83ರಲ್ಲಿ ಉಡುಗೊರೆಯಾಗಿ ನೀಡಲಾಯಿತು. ಅಂದಿನಿಂದಲೂ ಇಂಗ್ಲೆಂಡ್ - ಆಸ್ಟ್ರೇಲಿಯಾ ನಡುವಿನ ಜಟಾಪಟಿಗೆ 'The Ashes' ಎಂದೇ ಕರೆಯಲಾಗುತ್ತಿದೆ. ಬೂದಿಗಾಗಿ ಹಣಾಹಣಿ ಎನ್ನಬಹುದೇ?

Ash ಎಂಬ ಹೆಸರಿನ ಮರಕ್ಕೆ ಬ್ರಿಟನ್'ನ ಜಾನಪದ ಅಧ್ಯಯನದಲ್ಲಿ ವಿಶೇಷ ಸ್ಥಾನವಿದೆ. ಈ ಮರದ ಒಡಲು ಬೂದಿ ಬಣ್ಣ ಹೊಂದಿರುತ್ತದೆ. ಅಂದಿನ ದಿನಗಳಲ್ಲಿ, ಕಾಲು ಊನವಿದ್ದ ಚಿಕ್ಕಮಕ್ಕಳಿಗೆ ಚಿಕಿತ್ಸೆ ನೀಡಲು ಈ ಮರದ ಎಲೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಿಚಾರ ಇದೆ.

ಮರಗಳ ವಿಷಯ ಬಂದಾಗ palm tree ಬಗ್ಗೆ ಹೇಳಲೇಬೇಕು. ಕ್ರಿಶ್ಚಿಯನ್ ಧರ್ಮದ ಕೆಲವು ಪಂಗಡಗಳು Ash Wednesday ಆಚರಿಸುತ್ತಾರೆ. ಪಾಮ್ ಮರದೆಲೆಗಳನ್ನು ಸುಟ್ಟ ಬೂದಿಯನ್ನು ಆ ದಿನ ಹಣೆಗೆ ಹಚ್ಚಿಕೊಳ್ಳುತ್ತಾರೆ. ಪ್ರಾರ್ಥನೆ ಮತ್ತು ಉಪವಾಸ ಆಚರಿಸುತ್ತಾರೆ. ಹಣೆಗೆ ಹಚ್ಚಿಕೊಳ್ಳುವ ಬೂದಿ ಏನನ್ನು ಸೂಚಿಸುತ್ತದೆ ಎಂದರೆ "ನೀನೊಂದು ಧೂಳು, ಧೂಳಿಗೇ ಹಿಂದಿರುಗುವವನು" ಅಂತ. "ಮಣ್ಣಿಂದ ಕಾಯ ಮಣ್ಣಿಂದ" ನೆನಪಾಗುತ್ತಿದೆ.

ಮಾಡೋ ಕೆಲಸವೆಲ್ಲಾ ಮಾಡಿ ಕೊನೆಗೆ ಏನೋ ಎಡವಟ್ಟಾಗಿ ಕೆಲಸ ವ್ಯರ್ಥವಾದರೆ "ಎರ್ಕೊಂಡ್ ತಲೆಗೆ ಬೂದಿ ಸುರ್ಕೊಂಡ ಹಾಗಾಯ್ತು" ಅನ್ನೋವ್ರು ಹಿಂದಿನವರು.

ಅಂಗಡಿಗಳಲ್ಲಿ URN ನೆಕ್ಲೆಸ್ ಎಂಬ ವಿಶೇಷವಾದ ನೆಕ್ಲೆಸ್ ದೊರೆಯುತ್ತದೆ. ಏನಪ್ಪಾ ವಿಶೇಷ ಎಂದರೆ ಆ ನೆಕ್ಲೆಸ್'ನಲ್ಲಿ ಚಿಕ್ಕ ಕರಂಡಿಕೆ ಇದ್ದು ಅಸ್ತಂಗತರಾದ ನಿಮ್ಮ ಪ್ರೀತಿಪಾತ್ರರಾದವರ ತಲೆಗೂದಲು, ಬೂದಿ ಹೀಗೆ ಏನಾದರೂ ಸರಿ ಅದರಲ್ಲಿ ತುಂಬಿಸಿಟ್ಟುಕೊಳ್ಳೋದು. ನಮ್ಮನ್ನಗಲಿದವರು ಸದಾ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ.

ಭೂಮಿಯ ಮೇಲೆ ಇರುವಾಗ 'ನಾನು, ನಾನೇ, ನನ್ನಿಂದಲೇ' ಎಂಬೆಲ್ಲಾ ಅಹಂಭಾವಗಳಲ್ಲೇ ಇರುವ ಮಾನವ ಒಂದು ದಿನ ಬೂದಿಯಾಗಿ ಕರಂಡಿಕೆಯಲ್ಲಿ ತುಂಬಿಕೊಂಡು ಕೊನೆಗೆ ಯಾವುದೋ ನದಿಯ ನೀರಲ್ಲಿ ವಿಲೀನವಾದ ಮೇಲೆ ಬೂದಿಯೂ ಇಲ್ಲ ಎಂದ ಮೇಲೆ ಇನ್ನು 'ನಾನು' ಎಂಬುದೆಲ್ಲಿ? ಬೂದಿಯೊಂದಿಗೆ ಆರಂಭಿಸಿ ಬೂದಿಯೂ ಇಲ್ಲವೆಂದ ಮೇಲೆ ಮುಂದೆ ಇನ್ನು ಹೇಳೋದೇನಿದೆ?

ಕೊನೆ ಹನಿ : ಈ ಚುನಾವಣೆಯ ಶುಭದಿನ ನಿಮ್ಮೆಲ್ಲರ ಬೆರಳು ಮಸಿಯಾಗಲಿ... ನಮ್ಮೆಲ್ಲರ ನಂಬಿಕೆಗಳು ಹುಸಿಯಾಗದಿರಲಿ... ಮಹಾದೇವನ ಕಂಗಳ ಬೆಂಕಿಗೆ ಸಿಲುಕಿ ಬೂದಿಯಾದ ಮನ್ಮಥನ ಹಾಗೆ, ಕೊಬ್ಬಿರುವವರ ಅಹಂಕಾರಗಳು ಸುಟ್ಟು ಬೂದಿಯಾಗಲಿ. ಎಲ್ಲರಿಗೂ ಶುಭವಾಗಲಿ.

English summary
Ash or what we call boodi in Kannada has an important role in our life. Be in temple, at home or in burial ground, ash is used for several purposes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X