ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಡಕ್ಟರ್ ನನ್ನು ಸರಿಯಾಗಿ ಚುನಾಯಿಸಿ, ಪಯಣ ಸುಖವಾಗಿರುತ್ತೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

'ಕಂಡಕ್ಟರ್' ಅನ್ನುವ ಪದ ಹಲವಾರು ಸನ್ನಿವೇಶದಲ್ಲಿ ಬಳಸಲಾಗುತ್ತದೆ. ಚಿಕ್ಕದಾಗಿ ಚೊಕ್ಕವಾಗಿ ಹೇಳೋದಾದ್ರೆ "ಯಾರು ನಿರ್ವಹಣೆ ಮಾಡುತ್ತಾರೋ ಅವರು ನಿರ್ವಾಹಕರು (ಕಂಡಕ್ಟರ್)". ಇಲ್ಲಿ ಗಂಡು-ಹೆಣ್ಣು ಅನ್ನೋ ಭೇದವಿಲ್ಲ.

ಒಂದು ಹಾಡಿನ ರೆಕಾರ್ಡಿಂಗ್ ಅಥವಾ ಕೋರಸ್ ಸಂಗೀತ ನಡೆಯುತ್ತಿರುತ್ತದೆ ಎಂದುಕೊಳ್ಳಿ. ಅಲ್ಲಿ ಒಬ್ಬಾತ ಕೈಯಲ್ಲೊಂದು ಕಡ್ಡಿ ಅಥವಾ ಬರಿ ಹಸ್ತದಲ್ಲಿ ವಾದ್ಯ ಸಂಗೀತದವರಿಗೆ ನಿರ್ದೇಶಿಸುತ್ತಿರುತ್ತಾರೆ. ಒಂದು ಹಾಡಿನ ಬಗೆಗಿನ ಸಾಹಿತ್ಯ, ಭಾವ, ಏರಿಳಿತದ ನೋಟ್ಸ್ ಇತ್ಯಾದಿ ಎಲ್ಲವೂ ಅವರ ಬಳಿ ಇರುತ್ತದೆ. ಯಾರಾದ ಮೇಲೆ ಯಾರು ನುಡಿಸುತ್ತಾರೆ, ಯಾವಾಗ ಎರಡು ವಾದ್ಯಗಳು overlap ಆಗುತ್ತದೆ, ಏರಿಳಿತ ಇತ್ಯಾದಿ ಇತ್ಯಾದಿಗಳನ್ನು ನಿರ್ವಹಿಸುವ ಈತ ನಿರ್ವಾಹಕ ಅಥವಾ ಕಂಡಕ್ಟರ್.

ಕ್ಷೌರಿಕರ ಕೈಯಲ್ಲಿ ನನ್ನ ತಲೆಯೆಂಬ ರುಬ್ಬುಗುಂಡು!ಕ್ಷೌರಿಕರ ಕೈಯಲ್ಲಿ ನನ್ನ ತಲೆಯೆಂಬ ರುಬ್ಬುಗುಂಡು!

ವಿದ್ಯುತ್ ಶಕ್ತಿಯನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ಕೊಂಡೊಯ್ಯುವ ವಸ್ತುವನ್ನೂ ಕಂಡಕ್ಟರ್ ಎನ್ನುತ್ತಾರೆ. ಆಂಗ್ಲ ಸಿನಿಮಾ "polar express" ನೋಡಿರುವವರಿಗೆ ಒಂದು ಟ್ರೈನ್'ನ ಕಂಡಕ್ಟರ್ ಕೆಲಸದ ಬಗ್ಗೆ ಅರಿವು ಬಂದಿರುತ್ತದೆ. ಈ ಟ್ರೈನ್ ಕಂಡಕ್ಟರ್ ಕೆಲಸ ಒಂದೊಂದು ದೇಶಕ್ಕೂ ಒಂದೊಂದು ರೀತಿ ಇರುತ್ತದೆ.

Elect your conductor properly, your journey will be nice

ಸದ್ಯಕ್ಕೆ, ಬಸ್ಸಿನಲ್ಲಿ ಪ್ರಯಾಣ ಮಾಡಿರೋ / ಮಾಡುತ್ತಿರೋ ಮಂದಿಯ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಬಸ್ ಕಂಡಕ್ಟರ್ ಬಗ್ಗೆ ಮಾತನಾಡೋಣ.

ಕಂಡಕ್ಟರ್ ಎಂದರೆ ತಕ್ಷಣ ತಲೆಗೆ ಬರೋದೇ ಖಾಕಿ ವಸ್ತ್ರಧಾರಿ ಗಂಡು, ಬಗಲಲ್ಲಿ ಒಂದು ಚರ್ಮದ ಚೀಲ, ಹಸ್ತದಲ್ಲಿ ವಿವಿಧ ಮೌಲ್ಯದ ಟಿಕೆಟ್ bundle ಮತ್ತು ಕೈಯಲ್ಲೊಂದು ಪ್ಯಾಡ್. ಓಡುವ ಬಸ್ಸಿನಲ್ಲೂ ಟಿಕೆಟ್ ಸಂಖ್ಯೆಯನ್ನು ಆಗಾಗ ತನ್ನ ಬೋರ್ಡ್'ನಲ್ಲಿರೋ ಒಂದು ಶೀಟ್ ಮೇಲೆ ನಮೂದಿಸುವ ಕಂಡಕ್ಟರ್ ನನ್ನ ಪಾಲಿಗೆ ಅಂದು ಒಂದು ಅದ್ಭುತವೇ ಆಗಿದ್ದರು. ಯಾಕೆ ಅಂದ್ರಾ? ನಾನು ಪುಸ್ತಕ ಇಟ್ಕೊಂಡಿರೋ ಬೆಂಚ್ ಅನ್ನು ಅಲ್ಲಾಡಿಸಿದರೇ ನನಗೆ ಬರೆಯೋಕ್ಕೆ ಆಗೋಲ್ಲ, ಅಂಥಾದ್ರಲ್ಲಿ ಇಡೀ ಪಯಣ ಅಲ್ಲಾಡಿಕೊಂಡೇ ಹೋಗೋ ಬಸ್ಸಲ್ಲಿ ಈ ಕಂಡಕ್ಟರ್ ಹೇಗಪ್ಪಾ ಬರೀತಾರೆ ಅಂತ!

ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!

ಒಂದು ಕಡೆಯಿಂದ ಬಸ್ ಹೊರಟು, ನಂತರ ಎರಡು ಮೂರು ಸ್ಟಾಪುಗಳಲ್ಲಿ ನಿಲ್ಲಿಸಿ ಜನರನ್ನು ತನ್ನೊಡಲಲ್ಲಿ ತುಂಬಿಸಿಕೊಂಡ ಬಸ್ ಮಧ್ಯದಲ್ಲೆಲ್ಲೋ ಒಂದೆಡೆ ನಿಲ್ಲುತ್ತದೆ. ಆಗ ಕಂಡಕ್ಟರ್ ಒಂದು ಕಡೆಯಿಂದ ಟಿಕೆಟ್ ಕೊಡುತ್ತಾ, ಕೆಲವೊಮ್ಮೆ ಬಸ್ ಪಾಸ್ ಚೆಕ್ ಮಾಡುತ್ತಾ ಬಂದು ಹಿಂದಿನ ಬಾಗಿಲಲ್ಲಿ ಹೊರಗಿಳಿದು ಮುಂಬಾಗಿಲಿನಿಂದ ಹತ್ತಿ "ರೈಟ್" ಅಂದಾಗ ಏನೋ ಆನಂದ.

Elect your conductor properly, your journey will be nice

ನಾ ಕಂಡ ಕೆಲವು ಕಂಡಕ್ಟರ್'ಗಳು ಹೇಗಪ್ಪಾ ಅಂದ್ರೆ, 'ಪಾಸ್' ಅಂತ ವಿದ್ಯಾರ್ಥಿಗಳಾದ ನಾವು ಹೇಳಿದರೆ ಅವರಿಗೇನೋ ಸಿಟ್ಟು. ಯಾಕೆ ಅಂತ ಗೊತ್ತಿಲ್ಲ. ಕೆಲವರು 'ಪಾಸ್' ಎಂದರೆ "ಫೇಲ್" ಅಲ್ವಾ? ಅಂತ ಕೆಟ್ಟ ಜೋಕ್ ಮಾಡ್ತಿದ್ರು.

ಬೆಕ್ಕಿನ ಕಣ್ಣಿನ ಒಬ್ಬರು ಕಂಡಕ್ಟರ್ ಈಗಲೂ ನೆನಪಿಗೆ ಬರುತ್ತಾರೆ. ಎಂಥಾ ಅದ್ಭುತ ಕನ್ನಡ ಮಾತನಾಡುತ್ತಿದ್ದರು ಎಂದರೆ ಅಷ್ಟು ಸೊಗಸು. ಮತ್ತೊಬ್ಬ ಕಂಡಕ್ಟರ್ ಪೊಗದಸ್ತಾದ ಗಡ್ಡ ಮೀಸೆ ಹೊತ್ತು ನೋಡಲು ಶಂಕರನಾಗ್'ರಂತೆ ಕಾಣುತ್ತಿದ್ದರು. ಆದರೆ ಆತ ಒಮ್ಮೆ ಪರದೇಶಿ ಪಯಣಿಗನಲ್ಲಿ ಒಂದಕ್ಕೆ ನಾಲ್ಕರಷ್ಟು ದುಡ್ಡು ಕಿತ್ತುಕೊಂಡು ಜೇಬಿಗೆ ಬಿಟ್ಟಿದ್ದು ನೋಡಿದೆ. ಅಂದಿನಿಂದ ಆತನನ್ನು ಕಂಡರೆ ನನಗೆ ಆಗುತ್ತಿರಲಿಲ್ಲ.

ಇರಲಿ, ಕಂಡಕ್ಟರ್ ಎಂದರೆ ಬರೀ ಗಂಡೇ ಎನ್ನದಿರಿ. ಹೌದು, ಅಂದು ಡಬಲ್ ಡೆಕ್ಕರ್ ಬಸ್ಸುಗಳಲ್ಲಿ ಮಹಡಿ ಬಸ್ಸಿಗೆ ಲೇಡಿ ಕಂಡಕ್ಟರ್ ಇರುತ್ತಿದ್ದರು. ಮಹಡಿ ಬಸ್ಸಿನಲ್ಲಿ ಪಯಣಿಗರು ನಿಲ್ಲೋ ಹಾಗಿಲ್ಲ. ಹಾಗಾಗಿ ಅಲ್ಲಿ ಲೇಡಿ ಕಂಡಕ್ಟರ್ ಇರುತ್ತಿದ್ದರು. ಅಂದ್ರೆ? ನಿಂತ ಗಂಡುಗಳು ನಂಬಿಕೆಗೆ ಯೋಗ್ಯ ಅಲ್ಲಾ ಅಂದ್ರಾ? ಅದನ್ನು ನಾನು ಹೇಳಲಿಲ್ಲ ಸ್ನೇಹಿತರೇ!

Elect your conductor properly, your journey will be nice

ಸೀರಿಯಸ್ ಟೋನ್ ಬೇಡ ಬಿಡಿ...

ಸಿನಿಮಾ ರಂಗದಲ್ಲಿ ಕಂಡಕ್ಟರ್ ಎಂದ ಕೂಡಲೇ ಧುತ್ತನೆ ಎದುರಿಗೆ ನಿಲ್ಲುವವರೇ ತಲೈವಾ! ಯಾರೋ ಏನೋ ಕೆಲಸ ಮಾಡುತ್ತಾ ಮತ್ಯಾವುದೋ ರಂಗಕ್ಕೆ ಹೋಗುವುದು ಮತ್ತು ಅಲ್ಲಿ ಅವರ ಅದೃಷ್ಟ ಕುದುರುವ ಪರಿ ಎಂದೆಲ್ಲಾ ಮಾತನಾಡುವಾಗ ರಜನೀಕಾಂತ್ ಖಂಡಿತ ತಲೆಗೆ ಬರುತ್ತಾರೆ. ಇದು ರಿಯಲ್ ಸ್ಟೋರಿ ಆದರೆ ರಿಯಲ್ ಸ್ಟೋರಿ ಎಂದಾಗ ಕಮಲ್ ಎದುರಿಗೆ ಬರುತ್ತಾರೆ! "ಮುಂದೇ ಬನ್ನೀ . . . ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ . . . " ಅಂತ ಲವಲವಿಕೆಯಿಂದ ಹಾಡಿ ಕುಣಿಯೋ ಕಮಲಹಾಸನ್, ಪಯಣಿಗರಾದ 'ಸುಹಾಸಿನಿ'ಯನ್ನು ಕಂಡ ಕೂಡಲೇ ಗಮನಕ್ಕೆ ಬರುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಇರಲಿ, ಮತ್ತೊಂದು ಪಾತ್ರ ಏಕದಂತ ಚಿತ್ರದ ನಮ್ಮ ವಿಷ್ಣು.

ಏನಪ್ಪಾ ಮಜಾ ಅಂದ್ರೆ, ಈ ಚಾಲಕ ಮತ್ತು ನಿರ್ವಾಹಕರನ್ನು ಖಾಕಿ ಬಟ್ಟೆಯಲ್ಲಿ ದಿನವೂ ಕಂಡು ಅಭ್ಯಾಸವಾಗಿರುವ ಕಂಗಳಿಗೆ, ಅವರುಗಳನ್ನು ಖಾಕಿ ಅಲ್ಲದ ದಿರಿಸಿನಲ್ಲಿ ನೋಡಿದಾಗ 'ಎಲ್ಲೋ ನೋಡಿದ್ದೀನಲ್ಲಾ?' ಅನ್ನಿಸೋದು ಸಹಜ.

ಕಂಡಕ್ಟರ್ ಕೆಲಸದಲ್ಲಿ ಎಷ್ಟೋ ರೀತಿ ಸವಾಲುಗಳು ಇವೆ. ಅಲ್ಲೂ ಭಾವನೆಗಳಿವೆ ಅಲ್ಲದೇ ಎಲ್ಲೆಡೆ ಇರುವಂತೆ ವಂಚನೆಯೂ ಅಡಗಿದೆ. ಇದನ್ನೆಲ್ಲಾ ತಿಳಿಯೋ ಮುಂಚೆ ಸಣ್ಣ ಬ್ರೇಕ್ ಅಂತ ಹೇಳೋಲ್ಲ!

ಹಿರಿಯರೋ ಅಥವಾ ಚಿಕ್ಕವರೋ ಬಸ್ ಇಳಿದು ಹೋಗುವ ಮುನ್ನ ಅವರಿಗೆ ನೀಡಿದ್ದ ಟಿಕೆಟ್ ವಾಪಸ್ ತೆಗೆದುಕೊಂಡು ಅದನ್ನು ಬೇರೆಯವರಿಗೆ ಕೊಟ್ಟು ಆ ಹಣವನ್ನು ತಮ್ಮ ಜೇಬಿಗೆ ಸೇರಿಸಿರುವ ಎಷ್ಟೋ ಕಂಡಕ್ಟರ್'ಗಳನ್ನೂ ನಾನೇ ನೋಡಿದ್ದೇನೆ.

ದೊಡ್ಡ ಮೌಲ್ಯದ ಹಣ (ಆಗ ನೂರು ರೂಪಾಯಿ) ಕೊಟ್ಟು ಟಿಕೆಟ್ ಪಡೆದ ಪಯಣಿಗನಿಗೆ ಸಾಮಾನ್ಯವಾಗಿ ತಕ್ಷಣ ಚಿಲ್ಲರೆ ಸಿಗುತ್ತಿರಲಿಲ್ಲ. ಅವರಿಗೆ ಕೊಟ್ಟ ಟಿಕೆಟ್ ಹಿಂದೆ ಏನೋ ಗೀಚಿ ಕೊಡುತ್ತಿದ್ದ ಕಂಡಕ್ಟರ್ ಹೋದ ಕಡೆಯೆಲ್ಲಾ ಪಯಣಿಗನ ಕಣ್ಣು ಆತನ ಬೆನ್ನನ್ನೇ ಇರಿಯುತ್ತಿರುತ್ತದೆ. ಕೆಲವೊಮ್ಮೆ ಚಿಲ್ಲರೆ ಹಣ ಪಡೆಯದೇ ಮನೆಗೆ ಹೋದ ಮೇಲೆ ನೆನಪು ಬಂದು, ಮನೆಯ ಜನರನ್ನು ಬೈಕಿನಲ್ಲಿ ಕಳಿಸಿ ದುಡ್ಡು ವಾಪಸ್ ತೆಗೆದುಕೊಂಡು ಬಂದಿರುವುದೂ ಸಾಮಾನ್ಯವೇ ಆಗಿರುತ್ತಿತ್ತು. ಇದಾವುದೂ ನಡೆಯದೆ ದುಡ್ಡು ಕಳ್ಕೊಂಡವರೇ ಹೆಚ್ಚು.

ಕಂಡಕ್ಟರ್'ಗಳಲ್ಲಿ ಮಡಿ ಮೈಲಿಗೆ ಮಾಡೋಲ್ಲ ನೋಡಿ! ಆದರೆ, ತಾವು ಕೊಡೋ ಪ್ರತಿ ಟಿಕೇಟನ್ನೂ ಅವರು ಎಂಜಲು ಹಚ್ಚಿ ಕೊಡ್ತಾರಲ್ಲಾ ಪಾಪ ಅವರಿಗೆ ಬೇಕೆಂದಾಗ ಎಂಜಲು ಎಲ್ಲಿ ಹುಟ್ಟುತ್ತೋ? 'ಟಿಕೆಟ್ ಟಿಕೆಟ್' ಎಂದು ಕೇಳುತ್ತಾ ಸಾಗುತ್ತಲೇ ಇರುವ ಇವರಿಗೆ ದಿನದ ಕೊನೆಯಲ್ಲಿ ಎಷ್ಟು ಕಾಲುನೋವು ಬಂದಿರುತ್ತೋ? ಕೆಲವೊಮ್ಮೆ ಇವರಿಂದ ತಪ್ಪಿಸಿಕೊಂಡು ಟಿಕೆಟ್ ಕೊಳ್ಳದೆ ಹೋದವರೂ ಇದ್ದಾರೆ. ಆದರೆ, ಟಿಕೆಟ್ ಚೆಕ್ ಮಾಡುವವರ ಇವರನ್ನು ಹಿಡಿದಾಗ ಜುಲ್ಮಾನೆ ಬರೀ ಪಯಣಿಗರಿಗೇ ಅಲ್ಲದೆ ಟಿಕೆಟ್ ನೀಡದ ಕಂಡಕ್ಟರ್'ಗೆ ಕೂಡ ಜುಲ್ಮಾನೆ ವಿಧಿಸಲಾಗುತ್ತದೆ.

ಊರಿಂದ ಊರಿಗೆ ಹೋಗುವ ಬಸ್'ಗಳಲ್ಲಿನ ಕಂಡಕ್ಟರ್ ಸ್ವಲ್ಪ ಭಿನ್ನ. ನನಗೆ ಅವರ ಪರಿ ಕೊಂಚ ವಿಸ್ಮಯಕಾರಿ ಕೂಡ. ಅವರುಗಳು ಕೈಯಲ್ಲಿ ಟಿಕೆಟ್ ಬಂಡಲ್ ಹಿಡಿಯುತ್ತಿರಲಿಲ್ಲ. ಅಲ್ಯೂಮಿನಿಯಂ ಡಬ್ಬದಲ್ಲಿ ಅವರ ಟಿಕೆಟ್'ಗಳು ಇರುತ್ತಿದ್ದವು. ಕೊಟ್ಟ ಕಾಸಿಗೆ ಡಬ್ಬ ತೆರೆದು ಟಿಕೆಟ್ ಕಿತ್ತು ಪಚಪಚ ಅಂತ ತಮ್ಮ ಕೈಯಲ್ಲಿರೋ ಒಂದು punching ಮಷೀನ್ ಬಳಸಿ ಪಂಚ್ ಮಾಡ್ತಾರೆ. ಇದೇನು ಸುಮ್ಮನೆ ಮಾಡ್ತಾರೋ ಅಥವಾ ಅದಕ್ಕೊಂದು ರೀತಿ ಇದೆಯೋ ನನಗಂತೂ ಗೊತ್ತಿಲ್ಲ.

ರಾತ್ರೋರಾತ್ರಿ ಕೊನೆ ಸ್ಟಾಪಿನ ಯಾವುದೋ ಊರಿನಲ್ಲಿ ಬಸ್ ನಿಲ್ಲಿಸಿ ಬೆಳಿಗ್ಗೆ ಮೊದಲ ಟ್ರಿಪ್ ಅಲ್ಲಿಂದ ಹೊರಡುವ ಬಸ್ಸುಗಳಲ್ಲಿನ ಚಾಲಕ ಮತ್ತು ನಿರ್ವಾಹಕ ಬಸ್ಸಿನಲ್ಲೇ ಮಲಗುತ್ತಿದ್ದರು. ದುಡ್ಡು ತುಂಬಿರೋ ಚೀಲ ಅಲ್ಲೇ ಊರಿನ ಹಿರಿಯರ ಮನೆಯಲ್ಲಿ ಇಡುತ್ತಿದ್ದರು ಅಂತ ಯಾರೋ ಹೇಳಿದ್ದ ನೆನಪು. ಕೆಲವು ಇವರ ದುಡ್ಡಿನ ಚೀಲ ಕಳುವಾಗಿರುವ ಸಂದರ್ಭಗಳೂ ಇವೆ.

ಚಾಲಕನದು ಹೊತ್ತೊಯ್ಯುವ ಕೆಲಸ. ಆದರೆ ಯಾರು ಬಂದರು ಯಾರು ಇಳಿದರು ಎಂಬುದು ಆತನ ಕೆಲಸವಲ್ಲ. ಆತನದೇನಿದ್ದರೂ ಸುರಕ್ಷಿತವಾಗಿ ತಲುಪಿಸೋದು. ನಿರ್ವಾಹಕನದು ಹೆಚ್ಚಾಗಿ ಜನಗಳೊಡನೆ ಬೆರೆವ ಕೆಲಸ. ವೇದಾಂತದ ರೂಪದಲ್ಲಿ ಹೇಳೋದಾದ್ರೆ ಒಬ್ಬರ ಒಂದು ಪಯಣದಲ್ಲಿ ಚಾಲಕನೂ ಬೇಕು, ನಿರ್ವಾಹಕನೂ ಬೇಕು.

ಅರ್ಜುನನ ರಥಕ್ಕೆ ಪಾರ್ಥಸಾರಥಿ ಚಾಲಕನೂ ಹೌದು ನಿರ್ವಾಹಕನೂ ಹೌದು. ನಮ್ಮ ಬಾಳಿನ ಪಯಣಕ್ಕೆ ದಾರಿ ತೋರಿಸೋ ಶ್ರೀಧರ ನಿರ್ವಾಹಕನಾಗಲಿ. ನಡುರಸ್ತೆಯಲ್ಲಿ ಕೈಬಿಡುವ ಶಲ್ಯನಂಥವರು ಬೇಡ.

ದೇಶದ ಪ್ರಧಾನಿ ಒಬ್ಬ ಚಾಲಕ ಅನ್ನೋದಾದ್ರೆ ಅವರಿಗೆ ಕೈಜೋಡಿಸುವವರು ನಿರ್ವಾಹಕರೇ ಅಲ್ಲವೇ? ಇಲ್ಲಿ ಸ್ವಲ್ಪವೇ ವ್ಯತ್ಯಾಸ ಅಷ್ಟೇ. ಬಸ್ಸಿನಲ್ಲಿ ಟಿಕೆಟ್ ಕೊಡುವವರು ಕಂಡಕ್ಟರ್. ಆದರೆ ಇಲ್ಲಿ ಟಿಕೆಟ್ ಕೊಂಡವರು ಕಂಡಕ್ಟರ್. ಸರಿಯಾದ ನಿರ್ವಾಹಕನಿದ್ದರೆ ಚಾಲಕನ ಕೆಲಸ ಸುಗಮ, ಪಯಣಿಗರೂ ಸುರಕ್ಷಿತರು. ಮತ ಹಾಕುತ್ತೀರಾ ತಾನೇ?

English summary
We come across many types of conductors. Orchestra conductor is one of them. This story is about bus conductors and how they conduct through out their journey. Karnataka people are also set for 5 years journey. Now, they have the chance to elect the best conductor, so that their journey will be nice. Article by Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X