ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಒಣ ಎಂದರೆ ಬರೀ ಒಣ ಅಲ್ಲ ಚಿಗುರಿಸಲೂಬಹುದು

By ಶ್ರೀನಾಥ್ ಭಲ್ಲೆ
|
Google Oneindia Kannada News

ಇಂದಿನ ಮಾತೆಲ್ಲಾ ಬರೀ ಒಣ ಆಯ್ತಾ? ಒಣ ಎಂದರೆ ಡ್ರೈ ಅಂತ. ಅಲ್ಲೇನೂ ಹುಟ್ಟದೇ, ಅದರಿಂದ ಅದಾವ ಪ್ರಯೋಜನವೂ ಆಗದೆ ಇರುವುದು ಎಂದರೆ ಒಣ ಅಂತ ಇರಬಹುದು, ಆದರೆ ಈ ಒಣ ಎಂಬುದೆಲ್ಲಾ ದಂಡ ಅಂತೇನಲ್ಲ. ಚಿಗುರದೇ ಇರುವುದಕ್ಕೂ ಮಾನ್ಯತೆ ಇದೆ. ಮಾತಿನಲ್ಲೂ, ಬರಹದಲ್ಲೂ ಒಣಗಿದ್ದನ್ನೂ ಚಿಗುರಿಸಬಹುದು, ಚಿಗುರಿ ಬೆಳೆಯುವುದನ್ನೂ ಮೊಟಕುಗೊಳಿಸಬಹುದು. ಈಗ ಧನಾತ್ಮಕವಾಗಿ ಮಾಡಿ ಆಲೋಚಿಸುವ, ಋಣಾತ್ಮಕ ಬೇಕೇ ಬೇಕು ಎಂದರೆ ದಿನಪತ್ರಿಕೆ ಓದಿ, ಟಿವಿ ನೋಡಿ ಆಯ್ತಾ?

ರಸಹೀನ ಎಂಬುದು ಒಣಮಾತಲ್ಲ

ಮಾತನ್ನು ಒಣಮಾತಿನಿಂದಲೇ ಆರಂಭಿಸುವಾ. ವಾಗ್ಮಿಗಳು ರಸಭರಿತವಾಗಿ ಮಾತನಾಡುತ್ತಾರೆ ಎಂದರೆ ಅಲ್ಲೊಂದು ಹಾಸ್ಯ ಇರಬಹುದು, ಅಲ್ಲೊಂದು ಜೀವನಮಾರ್ಗ ತೋರುತ್ತಿರಬಹುದು, ಅಥವಾ ಒಬ್ಬ ಸೆಲೆಬ್ರಿಟಿಯು ತಮ್ಮ ಜೀವನ ಹೇಗಿತ್ತು, ಈಗ ಹೇಗಾಗಿದ್ದೇನೆ ಎಂಬ ಸಾಧನೆಯ ಹಾದಿಯ ಬಗ್ಗೆ ಮಾತನಾಡುತ್ತಿರಬಹುದು. ಒಟ್ಟಾರೆ ಏನೋ ಒಂದು ಆಸಕ್ತಿಯುತವಾದ ಮಾತು ಎಂದರೆ ರಸಭರಿತ ಎನ್ನಬಹುದು. ರಸಹೀನ ಎಂಬುದು ಒಣಮಾತಲ್ಲ. ಹಾಗಿದ್ದರೆ ರಸಹೀನ ಎಂದರೇನು, ಏನೇನೂ ಏರಿಳಿತವಿಲ್ಲದೆ, ಮುಖದಲ್ಲೂ ಅದಾವ ಭಾವನೆಯೂ ಇಲ್ಲದೆ ಆಸಕ್ತಿದಾಯಕವಾದ ವಿಷಯವೇ ಆದರೂ ನಿರಾಸಕ್ತಿ ಮೂಡಿಸುವಂತೆ ಹೇಳಿದರೆ ಅಥವಾ ನನಗೆ ಅಲ್ಲಿ ನೋವು, ಇಲ್ಲಿ ವ್ರಣ, ಎದ್ರೆ ಹಿಂಗಾಗುತ್ತೆ ಕೂತ್ರೆ ಹಾಗಾಗುತ್ತೆ ಎನ್ನುವುದೆಲ್ಲಾ ರಸಹೀನ. ಅರ್ಥಾತ್ ನಮ್ಮ ಜೀವನ ಉತ್ಸಾಹವನ್ನೆಲ್ಲಾ ಹೀರಿ ಹಾಕುವ ಮಾತುಗಳು. ಹಾಗಿದ್ದರೆ ಒಣಮಾತು ಎಂದರೇನು?

ಅಂಗೈಯಲ್ಲಿ ಅರಮನೆ ತೋರುವುದು

ಒಣಮಾತು ಎಂದರೆ ಬರೀ ವಟವಟ. ಕೆಲವರ ಪ್ರಕಾರ ಇದು ಅಂಗೈಯಲ್ಲಿ ಅರಮನೆ ತೋರುವುದು ಎಂದೂ ಅರ್ಥವಿದೆ. ಮಾತಿನಲ್ಲೇ ಮನೆ ಕಟ್ಟಿಕೊಡುವುದೇ ವಿನಃ ಒಂದು ಕಡ್ಡಿಯನ್ನು ಈ ಕಡೆಯಿಂದ ಆ ಕಡೆ ಇಡದ ಅಥವಾ ಯಾವುದೇ action ತೆಗೆದುಕೊಳ್ಳದೆ ಬರೀ ಮಾತನ್ನೇ ಆಡುವ ಪರಿಯೇ ಒಣಮಾತು. "ಸುಮ್ನೆ ಮಾತು ಅಷ್ಟೇ ಅವರದ್ದು, ಅವರನ್ನು ನಂಬಿದರೆ ಯಾವ ಕೆಲಸವೂ ಆಗೋಲ್ಲ' ಎಂಬ ಮಾತು ಇವರ ಸುತ್ತಲೂ ಕಾಣುವ ಹಾಗಿದ್ರೆ ಕಾಣಿಸುತ್ತದೆ.

Srinath Bhale Column: Dry Means Not Only Dry

ಒಣದ್ರಾಕ್ಷಿಯಲ್ಲೂ ರುಚಿ

ನನಗೆ ಪ್ರಿಯವಾದುದು ಹಲವಾರು ಇದೆ ಬಿಡಿ. ಆದರೆ ಅತೀ ಪ್ರಿಯವಾದುದು ಎಂದರೆ Dry Fruits. ನಿಮಗೂ ಇಷ್ಟವಾದರೆ ಕೈ ಎತ್ತಿ ಬೇಡಾ ಬಿಡಿ ಹೌದು ಅನ್ನಿ. ಒಂದು ಹಣ್ಣು ಒಣ ಅಂತಾಗುವ ಮುನ್ನ ರಸಭರಿತವಾಗಿರುತ್ತದೆ ಎಂಬುದು ನಿಮಗೂ ಗೊತ್ತು. ಉದಾಹರಣೆಗೆ ದ್ರಾಕ್ಷಿ. ಹಣ್ಣಿನಲ್ಲಿರುವ ರಸದಲ್ಲಿ ಸಿಹಿ ಇರುತ್ತದೆ ನಿಜ. ಆದರೆ ಅದನ್ನೇ ಒಣದ್ರಾಕ್ಷಿಯನ್ನಾಗಿ ಮಾಡಿದಾಗಲೂ ಆ ಸವಿ ಹಾಗೆಯೇ ಇರುತ್ತದೆ. ದ್ರಾಕ್ಷಿಯಂತೆ ಗುಂಡುಗುಂಡಾಗಿ ಇರದಿದ್ದರೂ ಪೀಚಾಗಿದ್ದರೂ ರುಚಿಭರಿತವಾಗಿರುತ್ತದೆ.

ರಸಭರಿತ ಹಣ್ಣಿಗಿಂತಾ ಒಣಹಣ್ಣುಗಳಿಗೆ ಬೆಲೆ ಹೆಚ್ಚು

ಇಂಥಾ ಹಲವಾರು ಹಣ್ಣುಗಳನ್ನು ಇಂದಿನ ದಿನಗಳಲ್ಲಿ ಕಾಣಬಹುದು. ರಸಭರಿತ ಹಣ್ಣಿಗಿಂತಾ ಒಣಹಣ್ಣುಗಳಿಗೆ ಬೆಲೆ ಹೆಚ್ಚು ಎಂಬುದೂ ನೆನಪಿರಲಿ. ರಸಹೀನವಾದಾಗ ಬೆಲೆ ಇಲ್ಲದಂತೆ ಆಗುವುದು ಬಹುಶಃ ಮಾನವ ಮಾತ್ರ ಇರಬೇಕು. ಇರಲಿ, ಒಣ ಹಣ್ಣುಗಳಲ್ಲಿ ಒಂದು ವಿಶೇಷ ಗುಣವಿದೆ ಎನ್ನುತ್ತದೆ ವೈದ್ಯಲೋಕ. ಒಣಹಣ್ಣು ಸೇವನೆಯಿಂದ ದೇಹದ ತೂಕ ಇಳಿಸಿಕೊಳ್ಳಬಹುದಂತೆ. ನಾನು ವೈದ್ಯನಲ್ಲ ಹಾಗಾಗಿ ಈ ವಿಷಯದ ಆಳಕ್ಕೆ ಇಳಿಯಲಾರೆ. ನಿಮ್ಮ ಸ್ವಂತ ಅನುಭವ ಹೇಳಿ ಆದರೆ ಪ್ರತಿಯೊಬ್ಬರ ದೇಹದ conditions ವಿಭಿನ್ನ ಎನ್ನುವುದನ್ನು ಮರೆಯದಿರಿ.

ಚಿಗುರು ಕಾಣಿಸಿಕೊಳ್ಳುವುದು ಹೇಗೆ

ಒಂದು ಹಸಿರು ಹುಲ್ಲಿನ lawn ಅತೀ ಬಿಸಿಲಿನ ಸಮಯದಲ್ಲಿ ನೀರಿನ ಅಂಶದಿಂದ ವಂಚಿತವಾಗಿ ಒಣಹುಲ್ಲಾದಾಗ, ಆ lawn ಹಸಿರು ಮತ್ತು ಕಂದು ಮಿಶ್ರಿತವಾಗಿ ಕೆಟ್ಟದಾಗಿ ಕಾಣುತ್ತದೆ. ಒಂದು ಮರ ಅಥವಾ ಗಿಡವೇ ಆಗಲಿ ಹಸಿರಿನಿಂದ ಕೂಡಿದ್ದಾದರೆ ಅಲ್ಲೊಂದು ಉಲ್ಲಾಸ ಕಾಣುತ್ತದೆ. ಅದರ ಬದಲಿಗೆ ಒಣಗಿದ ಕಡ್ಡಿ ಅಥವಾ ರೆಂಬೆಕೊಂಬೆಗಳಿಂದ ಕೂಡಿದ್ದಾದರೆ ಬೇಸರ ಮೂಡಿಸುತ್ತದೆ. ಒಂದರ್ಥದಲ್ಲಿ ಇದು ಜೀವನ. ಸದಾ ಹಸಿರಿನಿಂದ ಕೂಡಿಯೇ ಇರುತ್ತದೆ ಬಾಳು ಎಂದು ಅಂದುಕೊಳ್ಳದೇ, ಕಂದು ಎಂಬುದೂ ನಮ್ಮ ಅವಿಭಾಜ ಅಂಗ ಎಂದು ಅರ್ಥೈಸಿಕೊಳ್ಳಬೇಕು. ಒಣಗಿದ ಕಡ್ಡಿ, ಪುರಳೆ, ಕಾಂಡ, ರೆಂಬೆಕೊಂಬೆ ಎಂದರೆ ಮಾತ್ರಕ್ಕೆ ಜೀವನ ಮುಗೀತು ಎಂದು ಅಂದುಕೊಳ್ಳದೆ ಒಣ ಎಂಬುದರಲ್ಲೂ ಚಿಗುರು ಕಾಣಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡಬೇಕು.

ಹೋಮಗಳಿಗೆ ಒಣಗಿರುವ ಸಾಮಾಗ್ರಿಯೇ ಆಗಬೇಕು

ಒಲೆಯ ಮೇಲೆ ಅಡುಗೆ ಮಾಡಬೇಕು ಎಂದರೆ ಒಣಗಿದ ಸೌದೆಯೇ ಆಗಬೇಕು. ಯಜ್ಞ-ಯಾಗ, ಹೋಮಗಳಿಗೆ ಒಣಗಿರುವ ಸಾಮಾಗ್ರಿಯೇ ಆಗಬೇಕು. ಪೂರ್ಣಾಹುತಿಯ ಸಮಯದಲ್ಲಿ ಬಳಸುವುದೇ dry fruits ಮತ್ತು ಒಣಕೊಬ್ಬರಿ. ದರ್ಬೆ ಎಂಬ ಶ್ರೇಷ್ಠ ಹುಲ್ಲು ಒಣ ಎಂಬುದು ಗಮನಿಸಬೇಕು. ಕಾಡಿಗೆ ಹೋಗಿ ಸೌದೆಗಳನ್ನು ತರುತ್ತಿದ್ದ ಮಂದಿಯು ಒಣಗಿದ ಕಡ್ಡಿ, ಪುರುಳೆ, ಒಣಗಿದ ಮರಗಳಿಂದ ಸೌದೆಗಳನ್ನು ಮಾಡಿ ಬಳಸುತ್ತಿದ್ದರೇ ವಿನಃ ಹಸಿ ಮರಗಳನ್ನು ಕಡಿದು ತರುತ್ತಿರಲಿಲ್ಲ. ಒಣ ಎಂಬುದೂ ಜೀವನ. ಇಂಥಾ ಒಣ ಪುರುಳೆಗಳನ್ನೇ ತರಲು ಹೋದವ ಲೋಹಿತಾಶ್ವ. ಮರದ ಮೇಲೆ ಒಣಗಿದ ಕಡ್ಡಿಗಳು ಇದ್ದವು ಎಂದು ಹುತ್ತದ ಮೇಲೆ ಕಾಲಿಟ್ಟು ಏರಿದವನನ್ನು ಹಾವು ಕಚ್ಚಿತ್ತಂತೆ. ಮುಂದಿನ ಕಥೆ ನಿಮಗೂ ಗೊತ್ತು. ಏಕೆ ಉಲ್ಲೇಖಿಸಿದೆ ಎಂದರೆ ಒಣ ಎಂಬ ನಿರ್ಜೀವದ ಬಗ್ಗೆ ಎಚ್ಚರಿಕೆ ಇರಲಿ, ಇಲ್ಲದಿದ್ದರೆ ಹಸಿರೂ ಒಣವಾಗಬಹುದು.

ಸಿಗರೇಟ್ ಸೇದುವಾಗಲೋ ಬೆಂಕಿ ಹುಟ್ಟುಹಾಕಬಹುದು

ಮೇಲೆ ಹೇಳಿದ ಮಾತಿನ ಅರ್ಥವೇನು? ಕಾಡಿನ ಬೆಂಕಿ. ಬಿಸಿಲಿನ ಬೇಗೆಯಿಂದ ಒಣಗಿ ನಿಂತ ಮರಗಳಿಗೆ ಒಂದು ಕಿಡಿ ಬೆಂಕಿ ಸೋಕಿದರೂ ಸಾಕು ಮಿಕ್ಕಿದ್ದೆಲ್ಲಾ ವಿನಾಶವೇ. ಈ ಬೆಂಕಿ ಹೇಗೆ ಉಂಟಾಗಬಹುದು? ವಾರಾಂತ್ಯದಲ್ಲಿ ವನವಾಸಕ್ಕೆ ಅಂತ ಹೋದವರು ಅಡುಗೆ ಬೇಯಿಸುವಾಗಲೋ ಅಥವಾ ಸಿಗರೇಟ್ ಸೇದುವಾಗಲೋ ಬೆಂಕಿ ಹುಟ್ಟುಹಾಕಬಹುದು. ಬಿಸಿಲಿನ ಬೇಗೆಯಿಂದ ಸುತ್ತಲಿನ ಗಾಳಿಯೂ ಹಬೆಯಿಂದಲೇ ಕೂಡಿರುತ್ತದೆ. ಇಂಥಾ ಸಮಯದಲ್ಲಿ ಗಾಳಿಗೆ ಎರಡು ಮರಗಳು ಉಜ್ಜಿಕೊಂಡಾಗ ಒಂದು ಕಿಡಿ ಮೂಡಿದರೂ ಸಾಕು. ಕಾರಣಗಳು ಹಲವಾರು ಆದರೆ ಎಚ್ಚರಿಕೆಯಿಂದ ಇರಬೇಕಾದುದು ಮುಖ್ಯ. ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ wild fire ಪಿಡುಗು ಇಂದು ನೆನ್ನೆಯದಲ್ಲ.

ಪೂರ್ಣಾಹುತಿಯ ಸಮಯದಲ್ಲೂ ಒಣಕೊಬ್ಬರಿ ಬೇಕು

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನಕಾಯಿಯು ಒಣಗಿದರೆ ಅಲ್ಲಿ ಹುಟ್ಟುವುದೇ ಒಣಕೊಬ್ಬರಿ. ಆಗಲೇ ಹೇಳಿದಂತೆ ಹೋಮಗಳಲ್ಲಿ ಈ ಒಣಕೊಬ್ಬರಿಯನ್ನು ಮುರಿದು ಬಳಸಲಾಗುತ್ತದೆ. ಪೂರ್ಣಾಹುತಿಯ ಸಮಯದಲ್ಲೂ ಒಣಕೊಬ್ಬರಿ ಬೇಕೇಬೇಕು. ಇನ್ನು ಮದುವೆ ಎಂಬ ಶುಭಕಾರ್ಯದಲ್ಲಿ ಕೊಬ್ಬರಿಯ ಗಿಟುಕಿನ ಮೇಲೆ ಅಂದವಾದ ಚಿತ್ರಗಳನ್ನು ಕೊರೆದು ಅಲಂಕೃತವಾಗಿ ಬಳಸಿಕೊಳ್ಳುವುದು ಅನಾದಿಕಾಲದಿಂದಲೂ ಬಂದಿದೆ. ಶ್ರೀನಿವಾಸ- ಪದ್ಮಾವತಿ ಚಿತ್ರ ಮತ್ತು ಇಂಥವರು ಇಂಥವರನ್ನು ಮದುವೆಯಾಗುತ್ತಿದ್ದಾರೆ ಎಂಬ ಅಕ್ಷರಗಳನನ್ನು ಕೊರೆಯುವುದು ಸರ್ವೇಸಾಮಾನ್ಯ.

ರಸಭರಿತ ಜಲ್ಲೆಯನ್ನು ತಿನ್ನುವ ಮಜಾವೇ ಬೇರೆ

ಇನ್ನು ಸಂಕ್ರಾಂತಿ ಸಮಯದಲ್ಲಿ ಒಣಕೊಬ್ಬರಿಯ ಬಳಕೆ ಹೇರಳ. ಸಂಕ್ರಾಂತಿಯ ಮಾತು ಬಂದಾಗ ಕಬ್ಬಿನಜಲ್ಲೆಯ ಬಗ್ಗೆ ಮಾತನಾಡದಿದ್ದರೆ ಹೇಗೆ? ಹೊರಮೈ ಒಣಗಿದಂತೆ ಕಂಡರೂ ರಸಭರಿತ ಜಲ್ಲೆಯನ್ನು ತಿನ್ನುವ ಮಜಾವೇ ಬೇರೆ. ಆದರೆ ಹಾಗೆ ಇರಿಸಿದ ಜಲ್ಲೆಯನ್ನು ವಾರದ ನಂತರ ಕೈಗೆತ್ತಿಕೊಂಡು ಒಣಜಲ್ಲೆಗೆ ಹಲ್ಲು ಹಾಕಿದರೆ ದಂತವೈದ್ಯರನ್ನು ನೋಡುವುದು ಕ್ಷೇಮ. ಕಬ್ಬಿನಜಲ್ಲೆಯಂತೆ ಒಂದು ಲೇಖನಿಯೂ ಸಹ. ballpenನ ಇಂಕ್ ಒಣಗಿದಾಗ ಅದರಿಂದೇನೂ ಉಪಯೋಗವಿಲ್ಲ. ಇದರ ಹಾಗೆಯೇ ಒಂದು sketch pen ಕೂಡಾ.

ಅಲ್ಲೊಂದು ಆತಂಕಕಾರಿ ಸಂಗೀತ

ಅತೀ ಬಿಸಿ ನೀರಿನ ಸ್ನಾನ ಒಳಿತಲ್ಲಾ ಎನ್ನುತ್ತಾರೆ ಕಾರಣ ಚರ್ಮ ಒಣಗುತ್ತದೆ. ಜಾಹೀರಾತಿನಲ್ಲಿ ಕಂಡಿರಬಹುದು ಕೈ ಚರ್ಮವನ್ನು ಉಗುರಿನಿಂದ ಗೀರಿದಾಗ ಅಲ್ಲೊಂದು ಬಿಳಿ ಗೆರೆ ಮೂಡುತ್ತದೆ. ಅಲ್ಲೊಂದು ಆತಂಕಕಾರಿ ಸಂಗೀತ ಮೂಡಿಬರುತ್ತದೆ. ಆಗ ಟಣ್ ಅಂತ ದೈವಾಂಶ ಸಂಬೂತವಾಗಿ moisturizer ಕಾಣಿಸಿಕೊಳ್ಳುತ್ತದೆ. ಒಣಚರ್ಮ ಕೆಟ್ಟದ್ದೇನಲ್ಲ ಆದರೆ ಪಾದದಲ್ಲಿ ಮೂಡಿಬರುವ ಒಣಚರ್ಮ ಸೀಳುಗಳಾಗಿ ಆಗಬಹುದು. ತುಟಿಯ ಮೇಲಿನ ಒಣಚರ್ಮ ಹಿಂಸಾತ್ಮಕ. ಇಂಥಾ ಒಣ ಚರ್ಮವನ್ನು ಕಿತ್ತಾಗ ರಕ್ತ ಬರಬಹುದು.

ದೈವಕ್ಕೆ ಅರ್ಪಿಸಿದ ಹೂವುಗಳು ಸಂಜೆಗೆ ಒಣಗುತ್ತವೆ

ಹೊರಡುವ ಮುನ್ನ ಒಂದಷ್ಟು ಪ್ರಶ್ನೆಗಳನ್ನು ಹಾಕಿ ಲೇಖನ ಮುಗಿಸುತ್ತೇನೆ ಆಯ್ತಾ? ವರ್ಷ ಋತು ಸಮಯದಲ್ಲಿ ಬಟ್ಟೆಗಳನ್ನು ಒಣಗಿಸುವುದೇ ದೊಡ್ಡ ಕೆಲಸ. ಒಂದು ಬಟ್ಟೆಯನ್ನು ಒಣಗಿಸಲು ಐದು ನಿಮಿಷ ಬೇಕಾದರೆ ಹತ್ತು ಬಟ್ಟೆಗಳನ್ನು ಒಣಗಿಸಲು ಎಷ್ಟು ನಿಮಿಷ ಬೇಕಾಗಬಹುದು ಎಂಬುದು ಕಷ್ಟದ ಲೆಕ್ಕ. ನಿಮಗೆ ಉತ್ತರ ಗೊತ್ತೇ? ದೈವಕ್ಕೆ ಅರ್ಪಿಸಿದ ಹೂವುಗಳು ಸಂಜೆಗೆ ಅಥವಾ ಮರುದಿನಕ್ಕೆ ಒಣಹೂವುಗಳೇ ಅಲ್ಲವೇ? ಈ ಒಣಹೂವಿಗೆ ಏನಂತಾರೆ? ಬಿಸಿಲಲ್ಲಿ ತಿರುಗಿ ಬಂದಾಗ ಮುಖ ಸುಟ್ಟ ಬದನೆಕಾಯಿಯಂತೆ ಆಗಿರುತ್ತದೆ ಅಲ್ಲವೇ? ಹಲವಾರು ಬದನೆಕಾಯಿಗಳಲ್ಲಿ ಯಾವ ಬದನೆಕಾಯಿಯ ಬಗ್ಗೆ ಈ ಮಾತು? ಒಂದು ಬಗೆಯ ಒಣಹಣ್ಣು ಒಣಹವೆಯಲ್ಲಿ ಬೆಳೆವ ನಾಡಿನಿಂದ ಎಲ್ಲೆಡೆ ಪೂರೈಕೆಯಾಗುತ್ತದೆ. ಇಂದು ಇದು ಅತ್ಯಂತ ಶ್ರೀಮಂತ ರಾಷ್ಟ್ರ. ಕೇಳಿದ್ದೀರಾ ಅಂತ ಗೊತ್ತು. ಇದಾವ ಹಣ್ಣು ಮತ್ತು ರಾಷ್ಟ್ರ? ಹೋಗಿದ್ದೀರಾ? ನಮ್ಮ ದೇಶದಲ್ಲೂ ಇಂಥಾ ಪ್ರದೇಶ ಇದೆ ಅಂದ್ರಾ? ಅದಾವುದು ಹೇಳ್ರಲ್ಲಾ ಮತ್ತೆ.

English summary
Srinath Bhale Column: Dry Fruits also is a favorite to everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X