ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಪಾಂಡವರ ಪತ್ನಿ ದ್ರೌಪದಿಯದು ಎಂಥಾ ದುರ್ವಿಧಿ ನೋಡಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಕಳೆದ ವಾರದಿಂದ 'ಪಂಚಕನ್ಯಾ ಸ್ಮರೇತ್ ನಿತ್ಯಂ' ದಲ್ಲಿನ ಒಬ್ಬಾಕೆಯಾದ ದ್ರೌಪದಿಯ ಸ್ಮರಣೆಯೇ ಆಗಿದೆ. ಮಕ್ಕಳಲ್ಲಿ ಹಂಚಿಕೊಂಡು ತಿನ್ನುವ ವಿಷಯ ಕಲಿಸಬೇಕು ಎನ್ನುವ ಒಂದು ವಿಚಾರಧಾರೆಯಲ್ಲಿ ದ್ರೌಪದಿಯ ಬಗ್ಗೆ ಎರಡು ಸಾಲು ಬರೆದದ್ದೇ ತಡ, ಈಕೆ ಮನ ಆವರಿಸಿದ್ದಾಳೆ.

ಆಕೆಯ ಹುಟ್ಟು, ಜೀವನ, ಸಾವು ಎಂಬುದೆಲ್ಲಾ ಮತ್ತೊಮ್ಮೆ ಮನನ ಮಾಡಿಕೊಂಡಾಗ, ಎಷ್ಟೋ ವಿಚಾರಗಳು ಕೊಂಚೆ ಹೆಚ್ಚೇ ತಿಳಿಯಾಯ್ತು ಅನ್ನಿಸಿದರೂ, ಮನ ರಾಡಿಯಾಯ್ತು ಅನ್ನೋದು ಸತ್ಯ. ಆಕೆಯ ಬಗ್ಗೆ ಓದುವಾಗ ಒಂದಷ್ಟು ನನ್ನದೇ ಆಲೋಚನೆಗಳೂ ಮೂಡಿದ್ದರಿಂದ ಅವಳ ಬಗ್ಗೆ ಒಂದಷ್ಟು ಬರೆಯುವಾಸೆಯಾಯ್ತು.

ನಮ್ಮ ಆತ್ಮವೇ ರಾಮ, ನಮ್ಮ ಮನಸ್ಸೇ ಸೀತೆ, ಉಸಿರೇ ಹನುಮಂತ! ನಮ್ಮ ಆತ್ಮವೇ ರಾಮ, ನಮ್ಮ ಮನಸ್ಸೇ ಸೀತೆ, ಉಸಿರೇ ಹನುಮಂತ!

ಪಾಂಚಾಲ ದೇಶದ ರಾಜ ದೃಪದ. ಅವನು ದ್ರೋಣರಿಗೆ ಅಪಮಾನ ಮಾಡಿದ ಅಂತಾಗಿ, ದ್ರೋಣರು ತಮ್ಮ ಶಿಷ್ಯ ಅರ್ಜುನನ ಸಹಾಯದಿಂದ ದೃಪದನನ್ನು ಸೋಲಿಸಿ ಅರ್ಧ ರಾಜ್ಯ ಕಿತ್ತುಕೊಂಡು ಹೋದ ಮೇಲೆ, ಅವಮಾನದಿಂದ ಕುದಿಯುತ್ತಾ ದ್ರೋಣರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ 'ಪುತ್ರಕಾಮೇಷ್ಟಿ' ಯಾಗ ಮಾಡಿದನು. ಹೆಸರಿಗೆ 'ಪುತ್ರ' ಕಾಮೇಷ್ಠಿಯಾದರೂ ದೃಷ್ಟದ್ಯುಮ್ನನ ಹಿಂದೆಯೇ ಅಗ್ನಿಕನ್ಯೆಯೂ ಬಂದಳು. ಅದರ ಜೊತೆ ಅಶರೀರವಾಣಿ ಬೇರೆ "ಈಕೆ ಕುರುಕುಲವನ್ನು ನಾಶ ಮಾಡುತ್ತಾಳೆ" ಅಂತ. ಈಗಿನವರು, ಮಗು ಹುಟ್ಟಿದಾಗಲೇ ಇವನು/ಇವಳು ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಅಂತ ಹಣೆಪಟ್ಟಿ ಕಟ್ಟಿದ ಹಾಗೆ ದ್ರೌಪದಿಗೆ ಕುರುಕುಲನಾಶಕಿ ಅಂತ ಹಣೆಪಟ್ಟಿ ಕಟ್ಟಿದ್ದು ಅನ್ಯಾಯ ಅಲ್ಲವೇ? ದ್ರೋಣರನ್ನು ಕೊಲ್ಲಲು ಹುಟ್ಟಿದ್ದು ದೃಷ್ಟದ್ಯುಮ್ನ. ಆದರೆ ಆತ ಮಾಡಿದ್ದೇನು? ಅಸ್ತ್ರ ಚೆಲ್ಲಿ ಕೂತವನ ಶಿರ ತೆಗೆದದ್ದು. ಅದರಲ್ಲೇನು ದೂಡ್ಡ ಸಾಧನೆ ಇತ್ತು?

Draupadi, a Complicated character in Mahabharata

ಪಾಂಚಾಲ ನರೇಶನ ಪುತ್ರಿ ಹಾಗಾಗಿ ಈಕೆ ಪಾಂಚಾಲಿ. ದೃಪದನ ಕುವರಿ ಹಾಗಾಗಿ ದ್ರೌಪದಿ. ಈ ದೃಪದ ಮಹಾರಾಜನಿಗೆ ಯಜ್ಞಸೇನ ಅಂತಲೂ ಹೆಸರು ಇದ್ದುದರಿಂದ ಈಕೆ ಯಜ್ಞಸೇನಾ. ಕಪ್ಪುಸುಂದರಿ ಅಂತ ಈಕೆ ಕೃಷ್ಣಾ. ವಿರಾಟನ ಆಸ್ಥಾನದಲ್ಲಿ ಆಕೆ ಅತ್ಯುತ್ತಮ ಪರಿಚಾರಿಕೆ ಅಂತಾಗಿ ಇವಳ ಹೆಸರು ಸೈರಂದ್ರಿ. ಇವೆಲ್ಲಾ ನೋಡಿದರೆ ಪಾಪ ಅವಳಿಗೆ ಅವಳದೆಂದೇ ಒಂದು ಹೆಸರು ಇರಲಿಲ್ಲವೇ ಎನಿಸುವುದಿಲ್ಲವೇ?

ಅಹಂಕಾರದಿಂದ ಅವನತಿ ಹೊಂದಿದ ನಹುಷನ ಕಥೆ ಅಹಂಕಾರದಿಂದ ಅವನತಿ ಹೊಂದಿದ ನಹುಷನ ಕಥೆ

ತನ್ನನ್ನು ಯುದ್ಧದಲ್ಲಿ ಸೋಲಿಸಿದ ಅರ್ಜುನನನ್ನೇ ಅಳಿಯನನ್ನಾಗಿ ಮಾಡಿಕೊಳ್ಳಬೇಕು ಎಂದುಕೊಂಡಾಗಲೇ ಪಾಂಡವರು ಅರಗಿನ ಮನೆಯಲ್ಲಿ ಭಸ್ಮವಾದರು ಎಂಬ ಸುದ್ದಿ ಬಂದಿತ್ತು. ಹಾಗಾಗಿ ವಿಧಿಯಿಲ್ಲದೇ ಸ್ವಯಂವರ ಏರ್ಪಡಿಸಿದ. ಅರ್ಜುನ ಪಂದ್ಯ ಗೆದ್ದ ಮೇಲೆ ಐವರು ಪಾಂಡವರು ದ್ರೌಪದಿಯನ್ನು ಕರೆದುಕೊಂಡು ಮನೆಗೆ ಹೋದರು. ದ್ರೌಪದಿಯನ್ನು ಗೆದ್ದು ತಂದಿದ್ದೇ ವಿನಃ ಬೇಡಿ ತಂದಿದ್ದಲ್ಲಾ. ಹಾಗಾಗಿ ದ್ರೌಪದಿಯನ್ನು 'ಭಿಕ್ಷೆಗೆ' ಹೋಲಿಸಿ ಹೇಳಿದ್ದು ಸರಿಯಲ್ಲ. ಹಾಗೆ ಹೇಳಿದ್ದನ್ನು ಕೇಳಿಸಿಕೊಂಡು ಥಟ್ಟನೆ ಉತ್ತರ ಹೇಳುವ ಬದಲು ಕುಂತಿ ಯೋಚಿಸಿ ಮಾತನಾಡಿದ್ದಾರೆ ಚೆನ್ನಿತ್ತು ಅನ್ನಿಸಬಹುದು. ಆದರೆ ಕುಂತಿಯು ಐವರೂ ಹಂಚಿಕೊಳ್ಳಿ ಅಂದಿದ್ದು ಭಿಕ್ಷೆಗೇ ವಿನಃ ಹೆಣ್ಣನ್ನು ಗೆದ್ದಿದ್ದಕ್ಕಲ್ಲಾ ಎಂದು ವಾದಿಸಿದ್ದರೆ ದ್ರೌಪದಿ ಐವರ ಹೆಂಡತಿ ಆಗಬೇಕಿರಲಿಲ್ಲ. ಆಕೆ ಹೇಳಿದ್ದೇ ಕಡೇ ಮಾತು ಅಂತ ತೆಗೆದುಕೊಂಡು ಐವರೂ ಆಕೆಯ ಗಂಡ ಅಂತಾಗಿದ್ದನ್ನು ನೋಡಿದರೆ ಕುಂತಿ ಏನೇ ಮಾತನಾಡಿದರೂ ಅದೇ ಕಡೆ ಮಾತು ಅಂತಾಯ್ತಲ್ಲವೇ? ಹೀಗಾದರೆ ವಿಚಾರ ವಿನಿಮಯ ಅನ್ನೋದೇ ಇರುವುದಿಲ್ಲ ಅಲ್ಲವೇ?

ಮೃಗಜಲದ ಬೆನ್ನು ಹತ್ತಿ ಸುಖಿಸುವ ಯಯಾತಿ ಇಂದಿಗೂ ಪ್ರಸ್ತುತ ಮೃಗಜಲದ ಬೆನ್ನು ಹತ್ತಿ ಸುಖಿಸುವ ಯಯಾತಿ ಇಂದಿಗೂ ಪ್ರಸ್ತುತ

ಬಿಲ್ಲಿನ ಹೆದೆಯೇರಿಸಲೂ ಆಗದ ದುರ್ಯೋಧನನ ಕೈತಪ್ಪಿದ ದ್ರೌಪದಿ, ತನ್ನ ಆಜನ್ಮ ವೈರಿಗಳಾದ ಪಾಂಡವರ ಪತ್ನಿಯಾಗಿದ್ದು ಅವನಲ್ಲಿ ರೋಷ ಹುಟ್ಟಿಸಿದ್ದು ಸಹಜ. ಇದರಲ್ಲಿ ದ್ರೌಪದಿಯ ತಪ್ಪಾದರೂ ಏನು? ಪಾಂಡವರೂ ಕೌರವರೂ ಈ ಮುಂಚಿನಿಂದಲೇ ಕಿತ್ತಾಡಿಕೊಂಡು ಬಂದವರು. ದ್ರೌಪದಿ ಆಮೇಲೆ ಸೇರಿದ್ದು ಪಂಗಡಕ್ಕೆ. ಆದರೂ ಆಕೆಯೂ ಕೌರವರ ದ್ವೇಷಿಯಾಗಿಯೇ ಆ ರಾಜಮನೆತನದ ಸೊಸೆಯಾಗಿದ್ದು ದುರದೃಷ್ಟಕರ.

Draupadi, a Complicated character in Mahabharata

ಆ ನಂತರ ಇಂದ್ರಪ್ರಸ್ಥದ ಪ್ರಸಂಗ. ದುರ್ಯೋಧನನಿಗೆ ಅವಮಾನವಾಯ್ತು ನಿಜ. ನಾವೇ ಯಾರದಾದ್ರೂ ಮನೆಗೆ ಹೋದಾಗ, ಮನೆಗೆ ಕರೆದವರೇ ನಮ್ಮನ್ನು ನೋಡಿ ನಕ್ಕರೇ ಹೇಗಾಗುತ್ತದೆ? ಇಲ್ಲೂ ಆಗಿದ್ದು ಅದೇ ತಾನೇ? ವೈರಿಗೆ ಅವಮಾನವಾಯ್ತು ಅಂತ ಕೇಕೆ ಹಾಕಿ ನಕ್ಕರೆ ಅದು ನಮಗೆ ಬಂದು ಮತ್ತೆ ಹೊಡೆಯಬಹುದು ಎಂಬುದು ನೆನಪಿನಲ್ಲಿ ಇಟ್ಟುಕೊಂಡಿರುವುದು ಕ್ಷೇಮ. ಸಂತಸ ಬೇಕಿದ್ರೆ ಇರಲಿ, ಸಂಭ್ರಮ ಬೇಡ. ವ್ಯಾಸಭಾರತದ ಪ್ರಕಾರ ಈ ಸನ್ನಿವೇಶದಲ್ಲಿ ದ್ರೌಪದಿಯ ಪಾಲು ಇರಲಿಲ್ಲ. ನಕ್ಕವರು ನಾಲ್ವರು ಪಾಂಡವರು ಎಂದಿದೆ. ಹಲವು ಕಡೆ ದ್ರೌಪದಿಯು ನಕ್ಕಳು ಅಂತಿದೆ. ದೂರದರ್ಶನದ ಮಹಾಭಾರತದಲ್ಲಿ "ಅಂಧನ ಮಗ ಅಂಧ" ಅಂತ ದ್ರೌಪದಿಯ ಸಖಿ ಅಂದಿದ್ದನ್ನ ದುರ್ಯೋಧನನು ದ್ರೌಪದಿಯೇ ಅಂದಳು ಅಂತ ಅಂದುಕೊಂಡ ಎಂದು ತೋರಿಸಿದೆ. ಮೂಲ ಏನೇ ಇದ್ದರೂ ಅನುಭವಿಸಿದ್ದು ಮಾತ್ರ ದ್ರೌಪದಿ.

ನತದೃಷ್ಟ ನಾಯಕನ ಉಭಯ ಕುಶಲೋಪರಿನತದೃಷ್ಟ ನಾಯಕನ ಉಭಯ ಕುಶಲೋಪರಿ

ಒಂದು ವೇಳೆ ದ್ರೌಪದಿಯೇ ಈ ಮಾತು ಆಡಿದ್ದಳು ಅಥವಾ ನಕ್ಕಿದ್ದಳು ಎಂದುಕೊಳ್ಳಿ, ಹುಟ್ಟಿನಿಂದ ಮನೆಮಂದಿಯೊಡನೆ ಇದ್ದು ಸಂಸ್ಕಾರ ಕಲಿತು ಇಂಥದ್ದು ನಡೆದಿದ್ದರೆ ಯಾರೂ ಹೇಳಿಕೊಟ್ಟಿಲ್ಲ ಅಂತ ಮೂದಲಿಸಿಬಹುದಿತ್ತು. ಆದರೆ ದ್ರೌಪದಿ ವಿಷಯವೇ ಬೇರೆ. ಆಕೆ ಹುಟ್ಟುವಾಗಲೇ ವಿವಾಹಯೋಗ್ಯಳಾಗಿ ಹುಟ್ಟಿದ್ದಳು. ಅಲ್ಲಿ ಯಾರು ಏನು ಕಲಿಸಿದ್ದರೋ ಗೊತ್ತಿಲ್ಲ. ಇನ್ನು ಅತ್ತೆಯ ಮನೆಗೆ ಬಂದರೆ ಮೊದಲ ದಿನವೇ ಐವರ ಹೆಂಡತಿಯಾದಳು. ತನ್ನಿಂದ ಇಂಥಾ ಕೆಲಸವಾಯ್ತು ಅಂತ ಅತ್ತೆಯಾದವಳು ಸೊಸೆಯನ್ನು ತಲೆ ಎತ್ತಿ ಮಾತನಾಡಿಸಿದ್ದಳೋ ಇಲ್ಲವೋ ಗೊತ್ತಿಲ್ಲ, ಇನ್ನು ಕಲಿಸೋದೇನು?

ಹಾಗೆಯೇ ವನವಾಸದಲ್ಲೂ ಆಯ್ತು ನೋಡಿ. ಏನಾಯ್ತು ಅಂದ್ರಾ? ಮೊದಲಿಗೆ ಈಕೆ ಹುಟ್ಟಿದ್ದು ರಾಜಕುಮಾರಿಯಾಗಿ. ಎಂದಿಗಾದರೂ ಅಡುಗೆಮನೆಗೆ ಕಾಲಿಟ್ಟಿದ್ದಾಳಾ? ಇಲ್ಲಾ ತಾನೇ? ಇಷ್ಟೇ ತಾನೇ ದ್ರೌಪದಿಗೂ ಆಗಿದ್ದು. ಕೈಯಲ್ಲಿ ಅಕ್ಷಯಪಾತ್ರೆ ಇತ್ತು, ಹಾಗಾಗಿ ಅಡುಗೆ ಸಮಸ್ಯೆ ಇರಲಿಲ್ಲ. ಆದರೆ ಪಾತ್ರೆ ತೊಳೆಯೋದಾದ್ರೂ ಗೊತ್ತಿರಬೇಕಲ್ಲಾ? ಹಾಗಾಗಿಯೇ ಪಾತ್ರೆಯಲ್ಲಿ ಅಗಳು ಇನ್ನೂ ಮೆತ್ತಿಕೊಂಡಿತ್ತು. ಅದನ್ನು ಕೃಷ್ಣ ತಿಂದು, ಅದರಿಂದ ದೂರ್ವಾಸಾದಿ ಮುನಿಗಳ ಹೊಟ್ಟೆ ತುಂಬಿ ಪಾಂಡವರು ಬಚಾವ್.

ಸಭೆಯಲ್ಲಿ ದ್ರೌಪದಿಗೆ ಅವಮಾನವಾಯ್ತು. ಪಾಂಡವರ ಕೈಕಟ್ಟಿ ಹಾಕಿದಂತೆ ಇತ್ತು ಹಾಗಾಗಿ ಆ ಸನ್ನಿವೇಶದಲ್ಲಿ ಶಪಥ ಮಾಡೋದ್ರಲ್ಲಿ ಬ್ಯುಸಿ ಇದ್ದರು. ಮಗಳಿಗೆ ಕಷ್ಟಕೊಟ್ಟರು ಅಂತ ದೃಪದ ಮಹಾರಾಜ ರೊಚ್ಚಿಗೆ ಎದ್ದು ಕೌರವರ ಮೇಲೆ ಯುದ್ಧ ಸಾರುವದೋ ಅಥವಾ ಜಗಳ ಆಡೋದೋ ಎಲ್ಲೂ ಓದಿಲ್ಲ. ಒಮ್ಮೆ ಮದುವೆ ಮಾಡಿಕೊಟ್ಟ ಮೇಲೆ ಮಗಳು ಗಂಡನ ಜವಾಬ್ದಾರಿ ಅಂತ ಸುಮ್ಮನೆ ಕೂತನೆ? ಲಾಲಿಸಿ ಪಾಲಿಸಿ ಬೆಳೆಸಿಲ್ಲದೇ ಇದ್ದುದರಿಂದ ಮಗಳ ಮೇಲೆ ಅವನಿಗೆ ವಾತ್ಸಲ್ಯವೇ ಇಲ್ಲವೇ? ದ್ರೌಪದಿಗೆ ತವರಿನ ಬೆಂಬಲ ಶೂನ್ಯವೇ? ಏನಂತೀರಿ?

ವೈರಿಗೆ ತೊಂದರೆ ನೀಡಬೇಕಾದರೆ ಅಥವಾ ರೊಚ್ಚಿಗೇಳಿಸಬೇಕು ಅಂತಾದರೆ ಆತನ ಹೆಂಡತಿಯನ್ನು ಪೀಡಿಸಬೇಕು ಅನ್ನೋದು ಯುಗಯುಗಗಳಿಂದ ಬಂದಿರೋ ಪದ್ಧತಿ ಎನ್ನಬಹುದು. ಪಾಂಡವರನ್ನು ರೊಚ್ಚಿಗೇಳಿಸಬೇಕು ಅಂತ ದ್ರೌಪದಿಯನ್ನು ಕಾಯಿಯಾಗಿ ಬಳಸಿಕೊಳ್ಳಬೇಕು ಎಂದೇ ಪಗಡೆ ಆಟಕ್ಕೆ ಕರೆತರಲಾಯಿತು. ಅತಿರಥ, ಮಹಾರಥರೇ ಇದ್ದ ಸಭೆಯಲ್ಲಿ ಮಾನಾಪಹರಣವಾಯ್ತು. ಇದೊಂದು ಅತ್ಯಂತ ಹೀನಾಯ ಪ್ರಸಂಗ. ಅದು ದ್ವಾಪರಯುಗ, ಇಂದು ಕಲಿಯುಗ. ಮಾನವ ರಕ್ಷಣಾ ವಿಚಾರದಲ್ಲಿ ಏನೆಲ್ಲಾ ಕಾನೂನು ಕಾಯಿದೆಗಳಿದ್ದರೂ ಈ ಮಾನಾಪಹರಣ ವಿಷಯದಲ್ಲಿ ಅಂದಿಗೂ ಇಂದಿಗೂ ಪರಿಸ್ಥಿತಿಯಲ್ಲಿ ಏನೇನೂ ಬದಲಾವಣೆ ಇಲ್ಲ ಎನಿಸುತ್ತದೆ.

ಇದೇ ದಿಶೆಯಲ್ಲಿ work place harassment ಅನ್ನುವ ವಿಚಾರವೂ ಅಷ್ಟೇ. ಅಂದು ವಿರಾಟನ ಅರಮನೆಯಲ್ಲಿ ಕೆಲಸ ಮಾಡುವಾಗ ದ್ರೌಪದಿ ಏನೆಲ್ಲಾ ಸಂಕಷ್ಟ ಅನುಭವಿಸಿದ್ದಳು. ಇಂದಿಗೂ ಕೆಲಸ ಮಾಡುವಾಗ ಸ್ಥಳಗಳಲ್ಲಿ ವಿರಾಟರು, ಸುದೇಷ್ಣೆಯರು, ಕೀಚಕರು ಹೇರಳವಾಗಿ ಇದ್ದಾರೆ. ಕಾಲ ಬದಲಾಗಿಲ್ಲ. ದ್ರೌಪದಿಗೆ ಅಂದು ಅರ್ಜುನ ಮತ್ತು ಭೀಮ ಸಹಾಯಕ್ಕೆ ನಿಂತರು. ಆದರೆ ಇಂದಿನ ಸಮಾಜದಲ್ಲಿ ಹೆಚ್ಚಿನ ವೇಳೆ ಗಂಡನ ಬಳಿ ಹೇಳಿಕೊಳ್ಳಲೂ ಆಗದ ವೇದನೆ ಅನುಭವಿಸುವ ಮಂದಿ ಇದ್ದಾರೆ. ಕೀಚಕನನ್ನು ಕೊಲ್ಲುವುದೂ ಸೀದಾಸಾದಾ ಆಗಲಿಲ್ಲ. ದ್ರೌಪದಿಯು ಮತ್ತೊಮ್ಮೆ ಆಟದ ಕಾಯಿಯಾದಳು. ಕೀಚಕನನ್ನು ಪ್ರೇಮಿಸುವಂತೆ ನಟಿಸಲೇಬೇಕಾಯ್ತು. ಎಂಥಾ ದುರ್ವಿಧಿ ನೋಡಿ.

ಯುದ್ಧವೂ ಆಯ್ತು, ವೈರಿಗಳೂ ಸತ್ತರು ಅಂತಾಯ್ತು. ಹಿರಿಯರೆಲ್ಲಾ ವಾನಪ್ರಸ್ತ ಆಶ್ರಮದ ಹಾದಿ ಹಿಡಿದರು. ಯುದ್ಧದಲ್ಲಿ ಮಕ್ಕಳೂ ಸತ್ತ ಮೇಲೆ ಸಿಕ್ಕಿದ್ದು ಮಹಾರಾಣಿ ಪಟ್ಟ. ಯಾವ ಸುಖಕ್ಕೋ ಪಾಪ! ಅದೂ ಒಂದಷ್ಟು ಅನುಭವಿಸಿದ ಮೇಲೆ ಸಾವು ಅನ್ನೋದು ಬಿಟ್ಟೀತೇ? ಮೊದಲಿಗೆ ಸತ್ತಿದ್ದೇ ದ್ರೌಪದಿ. "ಆಕೆ ಐವರಿಗೂ ಪತ್ನಿಯಾಗಿದ್ದರೂ ಅರ್ಜುನನತ್ತ ಒಲವು ಹೆಚ್ಚಿತ್ತು" ಎಂಬ ಪಟ್ಟ. ಸಾವಿನಲ್ಲೂ ನಿಂದನೆ. ತನ್ನನ್ನು ಪಂದ್ಯದಲ್ಲಿ ಗೆದ್ದವನ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಇರುವುದು ತಪ್ಪೇ?

ಇಷ್ಟೆಲ್ಲಾ ಆದ ಮೇಲೆ ಮರಣೋತ್ತರ ಪ್ರಶಸ್ತಿ ಸಿಕ್ಕ ಹಾಗೆ 'ಮಹಾಪತಿವ್ರತೆ' ಎಂಬ ಪಟ್ಟ. ಇವಳನ್ನು ಸ್ಮರಿಸಿದರೆ ಪುಣ್ಯ ಬರುತ್ತದೆ ಎಂದು. ಯಾವ ಜನ್ಮದಲ್ಲಿ ಅವಳೇನು ತಪ್ಪು ಮಾಡಿದ್ದಳೋ ಗೊತ್ತಿಲ್ಲ, ಆದರೆ ಸ್ಮರಿಸಿದರೆ ಪುಣ್ಯ ಹಂಚುವ ಐವರಲ್ಲಿ ಒಬ್ಬಳಾದಳು ದ್ರೌಪದಿ.

ನನ್ನ ಅನಿಸಿಕೆಗಳು ನಿಮ್ಮ ಒಪ್ಪವಾಗಬಹುದು, ಇಷ್ಟವಾಗದೇ ಇರಬಹುದು. ಏನಾದರಿರಲಿ ಅಭಿಪ್ರಾಯ ಹೇಳಿ ಮತ್ತೆ, ಆಯ್ತಾ?

English summary
Draupadi, the beloved wife of pancha pandavas and a Complicated character in Mahabharata. She was destined to destroy Kauravas after her birth, had to face lot of hardships till her death. Srinath Bhalle analyses the character played by Draupadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X