ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದನ್ನೂ ನಿರ್ಲಕ್ಷಿಸದಿರಿ, ಹಾಗಂತ ತಲೆಯ ಮೇಲೂ ಕೂರಿಸಿಕೊಳ್ಳದಿರಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಶಿರೋನಾಮೆ ಓದಿದ ಕೂಡಲೇ ಮನಸ್ಸಿಗೆ ಬರುವ ಮೊದಲ ಆಲೋಚನೆ "ಇನ್ನೇನಪ್ಪಾ ಮಾಡು ಅಂತೀಯಾ?" ಹೋಗ್ಲಿ ಬಿಡಿ, ಒಂದಷ್ಟು ಉದಾಹರಣೆಗಳನ್ನು ನೋಡೋಣ... ಆಗ ಬಹುಶಃ ನೀವೇ ಏನು ಮಾಡಬೇಕು ಅಂತೀರಾ ಎಂದುಕೊಳ್ಳುತ್ತೇನೆ.

ಸಿನಿಮಾ ಜಗತ್ತಿಗೆ ಮೊದಲ ಅಡಿಯಿಡೋಣ... ಹೀರೋ ಮತ್ತು ವಿಲನ್ ಸನ್ನಿವೇಶ ತೊಗೊಂಡಾಗ, ವಿಲನ್ ಸಾಮಾನ್ಯವಾಗಿ ಇವನೇನು ಮಾಡ್ತಾನೇ, ನನ್ನ ಮುಂದೆ ಇವನು ಬಚ್ಚಾ ಅಂತಾನೋ ಇನ್ನೂ ಈಗ ರಂಗಕ್ಕೆ ಬಂದಿದ್ದಾನೆ ಸ್ವಲ್ಪ ಆಡ್ಲಿಬಿಡೋ, ಕುರಿ ಸ್ವಲ್ಪ ಕೊಬ್ಬಲಿ... ಆಟಕ್ಕೆ ಮಜಾ ಬರುತ್ತೆ... ಸಿನಿಮಾ ನೋಡುವಾಗ, ಈ ಡೈಲಾಗ್ಸ್ ಕೇಳುವಾಗ, ಹೀರೋನೇ ಗೆಲ್ಲೋದು ಅಂತ ನಮಗೆ ಖಚಿತ ಆಗಿರುವಾಗ ವಿಲನ್ ಅತೀ ವಿಶ್ವಾಸಿ overconfident ಅನ್ನಿಸೋದು ಸಹಜ. ಈ ಲೇಖನ ಮೂಲವನ್ನು ಮನದಲ್ಲಿಟ್ಟುಕೊಂಡು ಆಲೋಚಿಸಿದಾಗ ಅನ್ನಿಸೋದು "fieldಗೆ ಚಿಕ್ಕವನು ಅಂತ ನಿರ್ಲಕ್ಷ್ಯೆ ಮಾಡಬಾರದು" ಅಂತ.

ತಲೆಯಲ್ಲಿ ಹುಳ ಬಿಡುವುದು ಎಂದರೇನು ಗೊತ್ತಾ?ತಲೆಯಲ್ಲಿ ಹುಳ ಬಿಡುವುದು ಎಂದರೇನು ಗೊತ್ತಾ?

ಹೊಸ ಊರಿಗೆ ಟ್ರಾನ್ಸ್ಫರ್ ಆಗಿ ಹೋಗಿರುವುದೋ ಅಥವಾ ಮದುವೆಯಾಗಿ ಹೊಸ ಸಂಸಾರ ಆರಂಭಿಸಲಾಗಿದೆ ಎಂಬ ಸನ್ನಿವೇಶ ತೆಗೆದುಕೊಂಡು ಮನೆಗೆ ಬೇಕಿರುವ ಸಾಮಾನು ಸರಂಜಾಮು, ಬಟ್ಟೆಬರೆ, ಆಟಿಕೆಗಳನ್ನೂ ಶೇಖರಣೆ ಮಾಡುತ್ತಾ ಸಾಗಿದಾಗ 'ಬೇಕಾಗುತ್ತೆ ಇರಲಿ', 'ಹೇಗಿದ್ರೂ ಜಾಗ ಇದೆ ಮನೆಯಲ್ಲಿ', ಅಂತ ನಿರ್ಲಕ್ಷ್ಯದಿಂದ ಉಡಾಫೆಯಿಂದ ತುಂಬುತ್ತಾ ಹೋದರೆ ಓಡಾಡಲಿಕ್ಕೇ ಜಾಗವಿಲ್ಲದಂತಾಗಿ ಬಲುಬೇಗ ಮೊದಲು ಮಾಡಿದ 'ನಿರ್ಲಕ್ಷ್ಯದ' ಅರಿವಾಗುತ್ತೆ.

Dont Neglect Anything Same Time Dont Over Think Anything

ಅದರಂತೆಯೇ ಮನೆಯ ಕೆಲಸದ ಸನ್ನಿವೇಶ ತೆಗೆದುಕೊಂಡರೆ, 'ಇಷ್ಟೇ ತಾನೇ?' ಆಮೇಲೆ ಕ್ಲೀನ್ ಮಾಡಿದರಾಯ್ತು, ನಾಲ್ಕೇ ಬಟ್ಟೆ ಇರೋದು ನಾಳೆ ಒಗೆದರಾಯ್ತು, ನಾಲ್ಕೇ ಪಾತ್ರೆ ತಾನೇ ಆಮೇಲೆ ತೊಳೆದರಾಯ್ತು, ಹೀಗೆಲ್ಲಾ 'ಇಷ್ಟೇ ತಾನೇ - ಚಿಕ್ಕ ಕೆಲಸ' ಅಂತ ಬಿಟ್ಟರೆ ಅದು ಬಲು ಬೇಗ ಬೆಳೆದು ಹೆಮ್ಮರವಾಗುವುದರಲ್ಲಿ ಹೆಚ್ಚು ಹೊತ್ತು ಬೇಕಾಗೋದಿಲ್ಲ. ಕೆಲವೊಮ್ಮೆ ಅದು ಬೆಟ್ಟದಷ್ಟು ಬೆಳೆಯದೇ ಇರಬಹುದು", ಆದರೆ ಕೆಲಸವನ್ನು ತಳ್ಳೀ ತಳ್ಳಿ ಆಮೇಲೆ ಸೋಂಬೇರಿತನದಿಂದಲೋ ಅಥವಾ ಆಯಾಸದಿಂದಲೋ ದಿನದ ಕೊನೆಗೆ ಆ ಪುಟ್ಟ ಕೆಲಸವೂ ಬೆಟ್ಟದಂತೆ ಕಾಣಬಹುದು.

ಕೊನೆ ಮೊದಲಿಲ್ಲದ ಮೊದಲುಗಳು ಕೊನೆಗಳು...ಕೊನೆ ಮೊದಲಿಲ್ಲದ ಮೊದಲುಗಳು ಕೊನೆಗಳು...

ಇಂದು ಬೀದಿ ಬೀದಿಯಲ್ಲಿ ಎಲ್ಲೆಲ್ಲೂ ಕಸವೇ ಆಗಿರೋದು ಯಾಕೆ? ನಾನೊಬ್ಬ ಕಸವನ್ನು ಬೀದಿಗೆ ಒಗೆದರೆ ಏನೀಗ ಅಂತ ಒಬ್ಬರು ಹಾಕಿದಾಗ, ಅದರಂತೆಯೇ ಮಿಕ್ಕವರೂ ಅಂದುಕೊಳ್ಳುತ್ತಾ ಕಸವನ್ನು ಹಾಕುತ್ತಾ ಸಾಗಿದರೆ ಚಿಕ್ಕ ಕಸಗಳು ಕಸದ ಗುಡ್ಡವೇ ಆಗೋದಕ್ಕೆ ಎಷ್ಟು ಸಮಯ ಬೇಕು?

Dont Neglect Anything Same Time Dont Over Think Anything

ಇಂಥ ಸನ್ನಿವೇಶಗಳ ಪಟ್ಟಿಗೆ ಕೊನೆಯೇ ಇಲ್ಲ. ನಾನೊಬ್ಬ ಕೆಂಪು ಸಿಗ್ನಲ್ ದಾಟಿದರೇನು? ನಾನೊಬ್ಬ ಲಂಚ ಕೊಟ್ಟರೇನು? ನಾನೊಬ್ಬ ಲಂಚ ತೆಗೆದುಕೊಂಡರೇನು? ಇತ್ಯಾದಿ ನಿರ್ಲಕ್ಷ್ಯಗಳೆಲ್ಲಾ ನೋಡಲು ಚಿಕ್ಕದೇ. ಆದರೆ ಒಬ್ಬೊಬ್ಬರೂ ಹೀಗೆಯೇ ಆಲೋಚಿಸಿದಾಗ ಕೊನೆಗೆ ಇಡೀ ಸಮುದಾಯವೇ ಅಲ್ಲಿದ್ದು ವ್ಯವಸ್ಥೆಯನ್ನೇ ಅವಸ್ಥೆ ಮಾಡಿರುತ್ತದೆ. ಇದನ್ನೇ ಅಲ್ಲವೇ "ಹನಿ ಹನಿಗೂಡಿದರೆ ಹಳ್ಳ" ಅಂತನ್ನೋದು?

ಪಾಪದ ಕೊಡ ತುಂಬಿದಾಗ ಆ ರಕ್ಕಸನ ಅವನತಿಯೂ ಹತ್ತಿರವಾಯ್ತು ಎಂಬ ಭಾವದ ಕಥೆಗಳನ್ನೇ ಓದಿರುತ್ತೇವೆ. ಇಲ್ಲೂ ಈ ಚಿಕ್ಕಚಿಕ್ಕಗಳೇ ಬೆಟ್ಟವಾಗೋದು ಎಂಬ ಭಾವ ಅಡಕವಾಗಿದೆ. ಹಿರಣ್ಯಕಶಿಪು, ರಾವಣ, ಕಂಸ, ಇತ್ಯಾದಿ ರಕ್ಕಸರು ಎಲ್ಲಾ ತಪ್ಪುಗಳನ್ನು ಒಂದೇ ದಿನ ಮಾಡಿ ಕ್ರೂರಿಗಳು ಅಂತ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲು ಮಾಡಲಿಲ್ಲ. ಒಂದೊಂದೇ ತಪ್ಪುಗಳನ್ನು ಮಾಡಿಕೊಂಡೇ ಬಂದು ಆಮೇಲೆ ಒಂದು ದಿನ ತಲೆ ಕೊಡಬೇಕಾಯ್ತು.

ನಾವು ಹಿಂದಿರುಗಿ ನೋಡಬೇಕೆ, ಬೇಡವೇ?ನಾವು ಹಿಂದಿರುಗಿ ನೋಡಬೇಕೆ, ಬೇಡವೇ?

ಇವೆಲ್ಲಾ ಅಂಥ ದೊಡ್ಡ ವಿಷಯವಲ್ಲ ಅಂತೀನಿ ಅನ್ನೋದು ನಿಮ್ಮ ಮನದಲ್ಲಿ ಮೂಡಿದ್ದರೆ ಸೀದಾ ಕೃತಯುಗಕ್ಕೆ ಹೋಗೋಣ ಬನ್ನಿ. ಇಷ್ಟುದ್ದ ಇರುವ ವಾಮನ, ಬಲಿಚಕ್ರವರ್ತಿಯ ಬಳಿ ಬಂದು ಮೂರು ಪಾದಗಳಷ್ಟು ಜಾಗ ಕೇಳ್ತಾನೆ. ಗುರು ಶುಕ್ರರು ಎಚ್ಚರಿಕೆ ನೀಡಿದರೂ ಬಲಿಚಕ್ರವರ್ತಿ ಕಿವಿಗೆ ಹಾಕಿಕೊಳ್ಳೋದಿಲ್ಲ. ವಾಗ್ದಾನ ಮಾಡಿಬಿಡುತ್ತಾನೆ. ಯಜ್ಞ ಮಾಡುವ ಸಮಯದಲ್ಲಿ ಕೇಳಿದ್ದನ್ನು ಕೊಡುತೇನೆ ಎಂದು ವಾಗ್ದಾನ ಮಾಡಿ ಮತ್ತು ಅದರಂತೆ ನಡೆಯುತ್ತಾನೆ ಅನ್ನೋ ವಿಷಯ ಪಕ್ಕಕ್ಕೆ ಇಟ್ಟರೆ, 'ಮೊದಲೇ ಪುಟ್ಟ ಮಾನವ, ಪುಟ್ಟ ಹೆಜ್ಜೆ, ಅದರಲ್ಲೂ ಕೇಳುತ್ತಿರೋದು after all ಮೂರು ಹೆಜ್ಜೆ. ಏನೀಗ?' ಅನ್ನೋದೂ ಅವನ ಮನಸ್ಸಿನಲ್ಲಿ ಇದ್ದಿರಬಹುದು. ವಾಗ್ದಾನ ಪಡೆಯುತ್ತಿರುವಂತೆಯೇ ಪಡೆದುಕೊಂಡಿದ್ದ ಮೂರು ಹೆಜ್ಜೆಯಲ್ಲಿ ಮೊದಲನೆಯದ್ದನ್ನು ಅಳೆಯಲು ವಾಮನ ತ್ರಿವಿಕ್ರಮನಾದಾಗಲೇ ಅರಿವಿಗೆ ಬರೋದು "ಚಿಕ್ಕದು ಅಂತ ಅಂದುಕೊಂಡಿದ್ದು ನಿಜಕ್ಕೂ ಚಿಕ್ಕದಲ್ಲ ಆದರೆ ಬೃಹದಾಕಾರ' ಅಂತ.

ಚಿಕ್ಕದು ಅಂತ ಉಡಾಫೆ ಮಾಡಬಾರದು ಅಂತಾಯ್ತು. ಆದರೆ ಇದೇನು ತಲೆಯ ಮೇಲೆ ಕೂರಿಸಿಕೊಳ್ಳಬಾರದು ಅನ್ನೋ ವಿಷಯ.

ಅನಾರೋಗ್ಯ ಅನ್ನೋದು ಯಾರಲ್ಲಿಲ್ಲ? ಎಲ್ಲೆಡೆಯೂ ಇರುವಂಥದ್ದೇ ಅಲ್ಲವೇ? ಚಿಕ್ಕಪುಟ್ಟ ನೋವುಗಳು ಇರುತ್ತದೆ ಅನ್ನೋದು ಸತ್ಯ. ಆದರೆ ಆ ನೋವು ಒಮ್ಮೆ ಬಂದು ಆಮೇಲೆ ಅತ್ಲಾಗೆ ಹೋಗುವುದೂ ಆಗಬಹುದು ಅಥವಾ ನಮ್ಮಲ್ಲೇ ಒಂದಾಗಿ ದಿನನಿತ್ಯದ ಸಂಗಾತಿಯೂ ಆಗಬಹುದು. ಒಮ್ಮೆ ಬಂದು ಹೋಗೋದನ್ನು ಉಡಾಫೆ ಮಾಡಬಾರದು. ಹಾಗಂತ ಕಾಲಲ್ಲಿ ನೋವು ಕಾಣಿಸಿತು ಅಂತ ECG ಮಾಡಿಸಬಾರದು ಅಂದುಕೊಳ್ಳುತ್ತೇನೆ. ಜೊತೆಗೆ ದೇಹದಲ್ಲಿ ಏನೋ ಒಂದು ತೊಂದರೆ ಇದೆ ಅಂತ ದಿನನಿತ್ಯದಲ್ಲಿ ಮಾಡುವ ಕೆಲಸಗಳನ್ನೆಲ್ಲಾ ಬದಿಗೊತ್ತಿ 'ಇನ್ನು ನನ್ನ ಕೈಲಾಗೋಲ್ಲ' ಎಂಬಂತೆ ಆಡುತ್ತಾ ತಮ್ಮ ಸುತ್ತಲೇ ಬೇಲಿಹಾಕಿಕೊಂಡು, ತಮ್ಮ ಸುತ್ತಲೂ ಇರುವವರಿಗೂ ಇರುಸುಮುರುಸು ಮಾಡುವುದು ತಪ್ಪು.

ಕೆಲವೊಮ್ಮೆ ಯಾರೋ ಒಬ್ಬರು ಒಂದು ಚಿಕ್ಕ ಸಹಾಯ ಮಾಡಿರುತ್ತಾರೆ ಎಂದುಕೊಳ್ಳಿ. ಆ ಸಹಾಯವನ್ನು ಗುರುತಿಸಿ, ಕೃತಜ್ಞತೆಯಿಂದ ಇರಬೇಕಾದುದು ಧರ್ಮ. ಅವರಿಗೆ ಮತ್ತೊಮ್ಮೆ ಸಹಾಯ ಮಾಡದೇ ಇದ್ದರೂ ಮತ್ತಿನ್ಯಾರಿಗಾದರೂ ಸಹಾಯ ಮಾಡಿ ಆ ಋಣ ತೀರಿಸಬಹುದು. ಆದರೆ ಒಬ್ಬರು ಸಹಾಯ ಮಾಡಿದರು ಎಂದ ಕೂಡಲೇ ಅವರನ್ನೇ ಇಂದ್ರ ಚಂದ್ರ ಎಂದು ಹೊಗಳಿ, ಅವರನ್ನೇ ತಲೆ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿಸಿ, ಅವರ ಕಾಲಡಿಯ ದಾಸರಾಗೋದು ಮಹಾತಪ್ಪು. ಇಂಥ ಒಳ್ಳೆಯತನವನ್ನು/ಬೋಳೇ ಸ್ವಭಾವವನ್ನು ತಮ್ಮ ಒಳಿತಿಗೆ ಬಳಸಿಕೊಳ್ಳುವವರು ಬೀದಿಗೆ ಮುನ್ನೂರು.

ಕೊರೊನ ವೈರಸ್ ಎಷ್ಟು ಜನ ನೋಡಿದ್ದೀರಿ? ಇದೆಂಥಾ ಪ್ರಶ್ನೆ? ಕಣ್ಣಿಗೆ ಕಾಣದ್ದನ್ನು ಕಾಣೋದಾದ್ರೂ ಹೇಗೆ? ಇದರಂತೆಯೇ ಕಿವಿಗೆ ಕೇಳಿಸುವಂಥದ್ದು ಕಣ್ಣಿಗೆ ಕಾಣೋಲ್ಲ. ನಾಲಿಗೆ ಗುರುತಿಸುವ ರುಚಿಯೂ ಕಣ್ಣಿಗೆ ಕಾಣೋದಿಲ್ಲ. ಚರ್ಮಕ್ಕೆ ತಾಗುವ ಬಿಸಿ/ ಥಂಡಿಯೂ ಕಣ್ಣಿಗೆ ಕಾಣದ್ದೇ. ಏನ ಹೇಳ ಹೊರಟೆ ಎಂದರೆ, ಕಣ್ಣಿಗೆ ಕಂಡಿದ್ದು ಮಾತ್ರ ಚಿಕ್ಕದು ಅಥವಾ ದೊಡ್ಡದಲ್ಲ. ಅದರಿಂದ ಉಂಟಾಗುವ ಪರಿಣಾಮದಿಂದಾಗಿ ಅದು ಚಿಕ್ಕದೋ ಅಥವಾ ದೊಡ್ಡದೋ ಅಂತ ನಿರ್ಧರಿತವಾಗೋದು. ಯಾವುದೂ ಚಿಕ್ಕದಲ್ಲ. ಯಾವುದೂ ದೊಡ್ಡದಲ್ಲ. ಚಿಕ್ಕದು ಎಂಬ ಉಡಾಫೆ/ ನಿರ್ಲಕ್ಷ್ಯ / ಉಲ್ಲಂಘನೆ ಮಾಡೋದು ಬೇಡ. ಇದರಂತೆಯೇ ದೊಡ್ಡದು ಅಂದ ಮಾತ್ರಕ್ಕೆ ಅದು ಗುಣದಲ್ಲೂ ಹಿರಿದು ಎಂಬ ಭ್ರಮೆ ಬೇಡ. ಚಿಕ್ಕವರು ಎಂದ ಮಾತ್ರಕ್ಕೆ ತಳ್ಳಿ ಹಾಕುವ ಮನೋಭಾವ ಬೇಡ. ಒಮ್ಮೆ ಒಳಹೊಕ್ಕು ಅರಿಯುವ ಯತ್ನ ಮಾಡಬೇಕು.

ಚಿಕ್ಕಪುಟ್ಟ ತಪ್ಪುಗಳು ತಾನೇ? ಎಲ್ರೂ ತಪ್ಪು ಮಾಡ್ತಾರೆ, ಆಮೇಲೆ ಸರಿಯಾಗುತ್ತೆ ಎಂಬ ಉಡಾಫೆಯಿಂದ ಪಾಪಗಳನ್ನು ಮಾಡಿ ಆಮೇಲೆ ತೀರ್ಥಯಾತ್ರೆ ಮಾಡಿದರೆ ಎಲ್ಲವೂ ಸರಿಯಾಗುತ್ತೆ ಅನ್ನೋದು ಭ್ರಮೆ. ತಪ್ಪುಗಳನ್ನು ಮಾಡಲೇಬೇಡಿ ಅಂತ ಹೇಳ್ತಿಲ್ಲ ಹಾಗಂತ ತಪ್ಪು ಮಾಡಿ ಅಂತಾನೂ ಹೇಳ್ತಿಲ್ಲ. ನಮಗೆ ತಪ್ಪು ಎನಿಸಿದ್ದನ್ನು ಮಾಡಬಾರದು ಮತ್ತು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳೋದು/ತಿದ್ದಿಕೊಳ್ಳೋದು ಮಾಡಬೇಕು.

ಹಿರಿಯರಾದವರು ತಪ್ಪನ್ನು ಒಪ್ಪು ಮಾಡಿಕೊಳ್ಳತಕ್ಕದ್ದು ಅನ್ನೋದು ಒಂದಾದರೆ, ಅದಕ್ಕಿಂತಲೂ ಮುಖ್ಯವಾದದ್ದು ಎಂದರೆ ತಮ್ಮ ಮುಂದಿನ ಜನಾಂಗವನ್ನು ಕಾಯ್ದುಕೊಳ್ಳೋದು. ಏನಿದರ ಅರ್ಥ? ದೊಡ್ಡವರು ಮಕ್ಕಳು ಮಾಡಿದ ತಪ್ಪನ್ನು 'ಏನೀಗ' ಅಂತ ನಿರ್ಲಕ್ಷ್ಯ ಮಾಡದೆ ಆಗಿಂದ ಆಗಲೇ ತಿದ್ದಬೇಕು. ತಪ್ಪುಗಳನ್ನು ಮುಚ್ಚಿಹಾಕುವ ಕ್ರಿಯೆ ಮಾಡಬಾರದು. ಮಕ್ಕಳು ಮಾಡುವ ತಪ್ಪನ್ನು ತಿದ್ದಿ ಬೆಳಸಬೇಕು. ತಪ್ಪನ್ನು ಬೆಂಬಲಿಸಿದರೆ ಅದರಿಂದ ಒಂದು ಮನೆಗೆ ಮಾತ್ರವಲ್ಲದೇ ಸಮಾಜಕ್ಕೂ ಹಾನಿಕರ.

ಏನಂತೀರಾ?

English summary
We should not neglect anything in life and at the same time, we should not overthink anything. These both become problematic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X