ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಎಲ್ಲ ಸರಿಹೋಗತ್ತೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

"ಏನೂ ಚಿಂತೆ ಮಾಡಬೇಡಿ ಏನೂ ಆಗೋಲ್ಲ". ಈ ಮಾತು ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಸಾರಿ ಯಾವುದೋ ಒಂದು ಕೈಮೀರಿದ ಸಂದರ್ಭದಲ್ಲಿ ನಾವೆಲ್ಲಾ ಕೇಳಿಯೇ ಇರ್ತೀವಿ, ಬಹುಶ: ಮುಂದೆಯೂ ಕೇಳ್ತೀವಿ. ಇಷ್ಟಕ್ಕೂ ಈ 'ಏನೂ ಚಿಂತೆ ಮಾಡಬೇಡಿ ಏನೂ ಆಗೋಲ್ಲ' ಅಂದ್ರೇನು?

ಆಂಗ್ಲದಲ್ಲಿ pacify ಅಂತಾರೆ. ಉದ್ವಿಗ್ನಗೊಂಡ ಮನಸ್ಸನ್ನು ತಹಬದಿಗೆ ತರಿಸಲು ಮಾಡುವ ಒಂದು ಯತ್ನ. ಮನಸ್ಸು ಯಾವಾಗ ಉದ್ವಿಗ್ನಗೊಳ್ಳುತ್ತೆ ಅಂದ್ರೆ ಬೇಕಿರೋದಕ್ಕೆ, ಬೇಡದೇ ಇರೋದಕ್ಕೆ ಹೀಗೆ ಯಾವುದಕ್ಕೆ ಬೇಕಾದರೂ ಆಗಬಹುದು. ಉದಾಹರಣೆಗೆ ತೀರಾ ಸಮೀಪದವರು ದಿಢೀರನೆ ಅಸ್ವಸ್ಥಗೊಂಡು icu ಸೇರಿದರು ಅಂದುಕೊಳ್ಳಿ, ಆಗ ಮನಸ್ಸು ಉದ್ವಿಗ್ನಗೊಳ್ಳುತ್ತೆ. ಟಿವಿಯಲ್ಲೋ, ಸುದ್ದಿಪತ್ರಿಕೆಯಲ್ಲೋ ಯಾವುದೋ ಒಂದು ಸುದ್ದಿ ನೋಡಿದಾಗ / ಓದಿದಾಗ ಮನಸ್ಸು ಉದ್ವಿಗ್ನಗೊಳ್ಳುತ್ತೆ. ಹೀಗೆ ಯಾವುದೇ ವಿಷಯ ನಮಗೆ ನೇರವಾಗಿ ಸಂಬಂಧಪಟ್ಟಿರಲಿ ಅಥವಾ ಇಲ್ಲದಿರಲಿ ಮನಸ್ಸಿಗೆ ಹಿಂಸೆ ತರುವಂಥದ್ದಾದರೆ ಮನಸ್ಸು ತಂತಾನೇ ಉದ್ವೇಗಗೊಳ್ಳುತ್ತೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಒಂದು ಆಸ್ಪತ್ರೆಯ ಸನ್ನಿವೇಶ ತೆಗೆದುಕೊಳ್ಳಿ. ಅಪ್ಪನೋ, ಅಮ್ಮನೋ ಅಡ್ಮಿಟ್ ಆಗಿದ್ದಾರೆ. ಒಳಗೆ ಏನು ನಡೀತಿದೆ ಅಂತ ಗೊತ್ತಿಲ್ಲದೇ ಇರಬಹುದು ಅಥವಾ ಇನ್ನೂ ಅವರನ್ನು ನೋಡಲು ವೈದ್ಯರು ಬಂದಿಲ್ಲದೇ ಇರಬಹುದು. ಆಗ ವಿಷಯ ತಿಳಿದು ನೋಡಲು ಬಂದವರು ಸರ್ವೇಸಾಮಾನ್ಯವಾಗಿ ಆಡುವ ಸಾಂತ್ವನದ ಮಾತೇ "ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ". ಆ ಸಂದರ್ಭದಲ್ಲಿ ಆ ಮಾತನ್ನು ಕೇಳಿದ ಮನಸ್ಸಿಗೆ ಕೊಂಚ ಹಿತ ಅನ್ನಿಸೋದು ನಿಜ. ನಿಜವಾದ ಸ್ಥಿತಿಯಲ್ಲಿ ಪರಿಸ್ಥಿತಿ ಕೈಬಿಟ್ಟೇ ಹೋಗುತ್ತಿದ್ದರೂ ನಾವು ಈ ಮಾತನ್ನೇ ಆಡೋ ಉದ್ದೇಶ ಇಷ್ಟೇ, ಎಲ್ಲೋ ಒಂದು ಕಡೆ, ಏನೋ miracle ನಡೆದು ಎಲ್ಲವೂ ಯಥಾಸ್ಥಿತಿಗೆ ಬರಬಹುದೇನೋ ಎಂಬ ಆಶಾವಾದ.

Dont worry, nothing will happen, everything will be alright

ಇಂಜಿನಿಯರಿಂಗ್ ಓದಬೇಕು ಎಂಬ ಆಶಯ ಹೊತ್ತು, ಎರಡನೆಯ pucಯಲ್ಲಿ ಒಂದು 60 ಪರ್ಸೆಂಟ್ ಅಂಕ ತೆಗೆದುಕೊಂಡಿದ್ದ general merit ವಿದ್ಯಾರ್ಥಿಯನ್ನು ಕುರಿತೂ ಈ ಮಾತು ಹೇಳುವ ಸಂದರ್ಭ ಉಂಟು 'ಏನೂ ಚಿಂತೆ ಮಾಡಬೇಡ, ಏನೂ ಆಗೋಲ್ಲ... entrance ಬರಿ'. ವಿದ್ಯಾರ್ಥಿಗೆ ಗೊತ್ತು ಇದು ಬಹುಶ: ನನಗೆ ಸಮಾಧಾನ ಹೇಳೋಕ್ಕೆ ಆಡ್ತಿರೋ ಮಾತು ಅಂತ. ಹಾಗಾಗಿ ಆ ಬುದ್ದಿವಂತ ವಿದ್ಯಾರ್ಥಿಯು ಅದನ್ನು 'ನಿಜ, ಇನ್ನೇನು ಓದಿದರೂ ಏನೂ ಆಗೋಲ್ಲ, ಅಪ್ಪನ ಸೇವಿಂಗ್ಸ್ ಹಣ ಮಾತ್ರ ಕಾಪಾಡಬಹುದು' ಅಂತ.

ಒಂದು ಕೋರ್ಟ್ ಕೇಸ್ ಇರುತ್ತೆ ಅಂದುಕೊಳ್ಳಿ. ಸಿನಿಮಾಗಳಲ್ಲಿ ನೋಡಿರುತ್ತೇವೆ, ನಾಯಕ ತಪ್ಪೇ ಮಾಡಿರದಿದ್ದರೂ ಅಲ್ಲಿನ ಪ್ರತಿಯೊಂದು ಸಾಕ್ಷಿಯೂ ಅವನ ವಿರುದ್ಧವೇ ಇರುತ್ತದೆ. ಆದರೂ ಅವನ ಕಡೆಯ ಮಂದಿ "ಏನೂ ಚಿಂತೆ ಮಾಡಬೇಡ, ಏನೂ ಆಗೋಲ್ಲ" ಅಂತಾರೆ. ಅದು ಹೀರೋ ಕುರಿತೇ ಆಡಿರೋದ್ರಿಂದ, ಬಹುಶ: ನಮಗೂ ಮನಸ್ಸಿನ ಒಂದು ಮೂಲೆಯಲ್ಲಿ "ಹೌದು, ಏನೂ ಆಗೋಲ್ಲ, ಎಲ್ಲ ಸರಿ ಹೋಗುತ್ತೆ" ಅನ್ನೋ ಆಶಾಭಾವನೆಯೇ ಇರುತ್ತೆ.

ಭಲ್ಲೆ ಭಲ್ಲೆ! ಶ್ರೀನಾಥ್ ಭಲ್ಲೆಯವರ 'ನವರಸಾಯನ' ಅಂಕಣದ ನೂರನೆಯ ಬರಹ! ಭಲ್ಲೆ ಭಲ್ಲೆ! ಶ್ರೀನಾಥ್ ಭಲ್ಲೆಯವರ 'ನವರಸಾಯನ' ಅಂಕಣದ ನೂರನೆಯ ಬರಹ!

ಕೆಲವು ವರ್ಷಗಳ ಹಿಂದೆ ನಡೆದ ಗಂಗಾ ಪ್ರವಾಹದ ದುರಂತದ ಸಮಯದಲ್ಲೂ ಹೀಗೆಯೇ ಆಗಿತ್ತು. ಪ್ರವಾಹ ಬಂದು ಇದ್ದುಬದ್ದುದೆಲ್ಲಾ ಕೊಚ್ಚಿಕೊಂಡು ಹೋಗಿತ್ತು. ನಮ್ಮಲ್ಲೇ ಒಬ್ಬರ ಮನೆ ಜನರ ಸ್ಥಿತಿ ಹೀಗಿತ್ತು. ಮಂದಿಯ ಕಳೇಬರವೂ ಸಿಗದಂತೆ ಅವರು ಕಣ್ಮರೆಯಾದಾಗಲೂ ಇದೇ ಸಾಂತ್ವನ ಕೇಳಿಬಂದಿತ್ತು "ಧೈರ್ಯವಾಗಿರಿ, ಎಲ್ಲ ಸರಿ ಹೋಗುತ್ತೆ, ಬರ್ತಾರೆ, ಏನೂ ಆಗೋಲ್ಲ". ಇದು ಶುದ್ಧ ಸಾಂತ್ವನ ಅಷ್ಟೇ.

ಇದೇ ಕಥೆಯನ್ನು ಹೊತ್ತ ಸಿನಿಮಾ ನೋಡುವಾಗಲೂ ಈ ವಿಷಯ ಒಮ್ಮೆ ಮನಸ್ಸನ್ನು ಹಾದುಹೋಯ್ತು. ನಾಯಕ ಬದುಕುವ ಅವಕಾಶವೇ ಇರದಂಥಾ ಪರಿಸ್ಥಿಯಲ್ಲಿರುತ್ತಾನೆ. ಅವನು ನಿಂತಿದ್ದ ಭೂಮಿಯೇ ಬಿರುಕುಬಿಡಲಿದೆ. ಆದರೂ, ನಾಯಕನಲ್ಲವೇ? "ಏನೂ ಆಗೋಲ್ಲ, ಏನೋ ಪವಾಡ ನಡೆಯುತ್ತೆ" ಅಂತಲೇ ನೋಡುತ್ತಿರುವಾಗ ಸಿನಿಮಾ ಕೂಡ almost ಮುಗಿಯುತ್ತಾ ಬಂದಿದೆ. ಅಲ್ಲಿನ ಪರಿಸ್ಥಿತಿ normal ಆದ ಮೇಲೆ (ಕೆಲವು ವರ್ಷಗಳ ನಂತರ) ನಾಯಕಿ ದೇವಸ್ಥಾನಕ್ಕೆ ಬಂದಾಗಲೂ 'ಅಲ್ಲೆಲ್ಲೂ ಗಡ್ಡಮೀಸೆ ಹೊತ್ತ ನಾಯಕ ಕೂತಿರಬಹುದು' ಎಂದೇ ಅನ್ನಿಸಿದರೂ ಹಾಗೆ ಆಗಲಿಲ್ಲ. ಸಿನಿಮಾ ಮುಗಿದಿತ್ತು. ಇಲ್ಲಿ ಹೇಳ್ತಿರೋ ವಿಷಯ ಇಷ್ಟೇ, ಅದೇನೋ ಆಗುತ್ತೆ, ಹಾಗಾಗಿ ಏನೂ ತೊಂದರೆ ಆಗೋಲ್ಲ ಎಂಬ ನಂಬಿಕೆ ನಮ್ಮೊಳಗೇ ಆಳವಾಗಿ ಕೂತಿರುತ್ತದೆ.

ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ

"ಏನೂ ಆಗೋಲ್ಲ' ಅನ್ನೋ ಮಾತು ಬಹಳ ಜಾಣ್ಮೆಯಿಂದ ಕೂಡಿರುತ್ತದೆ ಎಂಬುದು ಇಲ್ಲಿ ಅರ್ಥೈಸಿಕೊಳ್ಳಬೇಕು. 'ಏನೂ ಆಗೋಲ್ಲ' ಎಂದಾಗ ಏನೂ ತೊಂದರೆ ಆಗೋಲ್ಲ, everything will be alright ಅಂತಂದುಕೊಂಡರೆ ಸಾಂತ್ವನ. "ಏನೂ ಆಗೋಲ್ಲ" ಅನ್ನೋದನ್ನ 'ನೀನು ತಲೆಕೆಳಗೆ ಮಾಡಿ ನಿಂತರೂ ಏನೂ ಉಪಯೋಗ ಇಲ್ಲ' ಅಂತಲೂ ಆಗುತ್ತೆ. ಸಮಯ ಸಂದರ್ಭ ನೋಡಿ ಅದನ್ನು ಅರ್ಥೈಸಿಕೊಳ್ಳೋದು ನಮ್ಮ ಕೈಲಿರುತ್ತೆ.

"ಏನೂ ಆಗೋಲ್ಲ" ಎಂದು ಸಾಂತ್ವನಗೊಳಿಸಲು ಹೇಳುವುದು ಹಲವೊಮ್ಮೆ ನಾಲಿಗೆಯ ತುದಿಯ ಮಾತು ಎನಿಸಿದರೂ, ಒಂದು ಉದ್ವಿಗ್ನಗೊಂಡ ಮನಸ್ಸನ್ನು ತಹಬದಿಗೆ ತರುವ ಕಲೆಯಲ್ಲಿನ ಒಂದು ಅಂಗ ಎಂದು ಅರ್ಥೈಸಿಕೊಳ್ಳಬೇಕು. ಇದೊಂದು ವೈದ್ಯಕೀಯ ಅಂಗ ಅನ್ನೋದು ಬೇರೆ ವಿಷಯ ಆದರೆ ಎಲ್ಲರೂ ವೈದ್ಯರಲ್ಲವಲ್ಲ. counselling ಅನ್ನೋದು ಬೇರೆಯೇ ವಿಚಾರ.

Dont worry, nothing will happen, everything will be alright

ಈಗ ಸ್ನೇಹಿತರ ನಡುವೆಯೇ ಒಂದು ಜಗಳ ಎಂದುಕೊಳ್ಳಿ. ಸ್ನೇಹದವಲಯದಲ್ಲಿ ಏನೋ ಗಲಾಟೆ ಎಂದಾಗ ಇಬ್ಬರೂ ಸ್ನೇಹಿತರೇ ಆದಾಗ ಯಾರ ಪರವಹಿಸುವುದೂ ಕಷ್ಟ, ಹಾಗಾಗಿ ಸ್ವಲ್ಪ ಹುಷಾರಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಗುತ್ತದೆ. ಈ ಸಂದರ್ಭದಲ್ಲಿ "ಏನೂ ಚಿಂತೆ ಮಾಡಬೇಡಿ, ಎಲ್ಲ ಸರಿ ಹೋಗುತ್ತೆ" ಎಂಬ ಮಾತುಗಳನ್ನು ಆಡಿದರೆ ನಿಮಗೆ ಏಟು ಬೀಳಬಹುದು. "ಏ! ಸುಮ್ನಿರೋ, ಬಾರೋ ಈ ಕಡೆ, ಸುಮ್ನೆ ಗಲಾಟೆ ಮಾಡ್ಬೇಡ, ಲೇ! ನೀನು ಈ ಕಡೆ ಬಾರೋ, ನೀ ಬಾರೋ ಈ ಕಡೆ, ನಾನಿದ್ದೀನಿ ಬಾರೋ ಲೇ! ಸ್ವಲ್ಪ ನೀರು ತೊಗೊಂಡ್ ಬಾರೋ... ವಿಚಾರಿಸೋಣ ಸುಮ್ಕಿರೋ.. ಏನೂ ಆಗಿಲ್ಲ ಇಲ್ಲಿ, ಸುಮ್ನಿರು" ಅಂತೆಲ್ಲಾ ಹೊಡೀಲೇಬೇಕು... ಇದು ಸ್ನೇಹದಲ್ಲಿ ವರ್ಕ್ ಆಗುತ್ತೆ. ಆದರೆ white collar ಗಲಭೆಯೇ ಬೇರೆ ಲೆವೆಲ್.

ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು! ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!

ಇಲ್ಲಿ ಎರಡು ಪಾರ್ಟಿಗಳ ಮಧ್ಯೆ ನೀವಿದ್ದೀರಿ. ಇದೊಂದು ಮುಸುಕು ಗುದ್ದಾಟವಾಗಿದ್ದು ಈಗ ಪರಿಸ್ಥಿತಿ ಕೈಮೀರಿ ನಿಮ್ಮಲ್ಲಿಗೆ ಬಂದಿದೆ. ಅರ್ಥಾತ್ ಒಂದು ಕಿಡಿ ಸಾಕು ಸಾಕು ಭುಗಿಲೆದ್ದು ಉರಿಯಲು. ಇಬ್ಬರನ್ನೂ ಕರೆದುಕೊಡಿಸಿ ಮಾತನಾಡಲಾಗದ ಸಂದರ್ಭ ಎಂದುಕೊಳ್ಳಿ. ಹಾಗಾದಾಗ, ಮೊದಲು ಆ ಮನಸ್ಸನ್ನು "calm down" ಎಂಬ ರೀತಿ ಶಾಂತಗೊಳಿಸಬೇಕು. ನಿಮ್ಮಿಂದ ಯಾವುದೇ ನಿರ್ಧಾರವೂ ಹೊರಬರಕೂಡದು, ಏಕೆಂದರೆ ನಿಮಗೆ ಸಂಪೂರ್ಣ ಮಾಹಿತಿ ಇನ್ನೂ ಗೊತ್ತಿಲ್ಲ. you must be neutral. ಹಾಗಾಗಿ "ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಮೊದಲು ವಿಷಯ ಹೇಳಿ" ಎಂದೇ ಶುರುವಾಗಬೇಕು. ಅರ್ಥಾತ್ ಆಲಿಸಿ.

ಉದ್ವಿಗ್ನಗೊಂಡ ಮನಸ್ಸನ್ನು ಮೊದಲು ಮಾತನಾಡಲು ಬಿಟ್ಟು ಅದೇನು ವಿಷಯ ಕಕ್ಕುತ್ತಾರೋ ಎಲ್ಲವೂ ಆಗಲಿ. ನಿಮ್ಮ ಕಣ್ಣುಗಳು ಸಂಧಿಸಲಿ, ಕಿವಿಗಳು ಆಲಿಸಲಿ. ನೀವು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಆಲಿಸಿದಾಗ ಆ ವ್ಯಕ್ತಿ ಸುಳ್ಳುಹೇಳುವ ಸಂಭವ ಕಡಿಮೆ ಇರುತ್ತೆ. ಆಲಿಸುವಾಗ ನಿಮ್ಮ ಮನಸ್ಸು process ಮಾಡಬಾರದು, ಸುಮ್ಮನೆ ಮನದಲ್ಲೇ ನೋಟ್ ಮಾಡಿಕೊಳ್ಳಿ, ಆಮೇಲೆ ಬೇಕಾದೀತು. Sympathy ತೋರಿಸಬಹುದು ಆದರೆ ಇವರನ್ನು ಮೇಲೆ ಕೂಡಿಸಿ ಮತ್ತೊಬ್ಬರನ್ನು ಎತ್ತಾಡಬೇಡಿ. ವಿಪರೀತ ಗಾಂಭೀರ್ಯತೆ ಇದ್ದರೂ ಸ್ವಲ್ಪ jolly moodಗೆ ತರಿಸುವ ಯತ್ನ ಮಾಡಿ. ಒಮ್ಮೆ ಸಂಪೂರ್ಣ ಆಲಿಸಿ ಅರ್ಥೈಸಿಕೊಂಡ ಮೇಲೆ "ಏನೂ ಚಿಂತೆ ಮಾಡಬೇಡಿ, ಎಲ್ಲ ಸರಿ ಹೋಗುತ್ತೆ." ಎಂದಾಗ 'ನಾನಿದ್ದೀನಿ" ಅಂತ ಅವರಲ್ಲಿ ಭರವಸೆ ನೀಡಿದ ಹಾಗಾಗುತ್ತದೆ.

ಸಾಂತ್ವನಗೊಳಿಸುವ ಮಂದಿ 'ಏನೂ ಆಗೋಲ್ಲ...' ಎಂದು ನುಡಿದರು ಅನ್ನೋದನ್ನೇ ನಂಬಿಕೊಂಡು ನಮ್ಮ ಯತ್ನ ನಿಲ್ಲಿಸಬಾರದು. ಒಮ್ಮೆ ಕೂತು ಮುಂದೆ ಹೋಗಿ ಎನ್ನುವ ಹಾಗೆ ಅದನ್ನು ಅರ್ಥೈಸಿಕೊಂಡರೆ ಸಾಕು. ಅಶಾಂತವಾದ ಮನಸ್ಸಿನಿಂದ ಯಾವುದೇ ಉತ್ತಮ ನಿರ್ಧಾರಗಳು ಹೊರಹೊಮ್ಮುವುದಿಲ್ಲ ಎಂದೇ ಈ ಸಾಂತ್ವನ. ಉದ್ವಿಗ್ನಗೊಂಡ ಮನಸ್ಸಿಗೆ ಎದುರಿಗೆ ಇದ್ದದ್ದೇ ಸರಿಯಾಗಿ ಕಾಣದೇ ಹೋಗುತ್ತದೆ. ಶಾಂತವಾದ ಮನಸ್ಸಿಗೆ ಕಾಣದೇ ಹೋಗುವ ನೂರು ಪರಿಹಾರಗಳೂ ಕಾಣಬಹುದು.

English summary
Don't worry, nothing will happen, everything will be alright. These are the normal statements of a person who tries to pacify another one in distress. We can list out several such occasions. Writes Srinath Bhalle from Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X