ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಣ: ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ

|
Google Oneindia Kannada News

ಮೊದಲಿಗೆ ಈ ಮಿಂಚು ಎನ್ನುವುದರ ಬಗ್ಗೆ ಕೊಂಚ ನೋಡೋಣ. ಮಿಂಚು ಎಂದರೆ ಬೆಳಕು ಎಂದರೆ ಸಾಲದು ಬದಲಿಗೆ ಕಣ್ಣುಕೋರೈಸುವ ಬೆಳಕು ಎನ್ನಬಹುದು. ಅತ್ಯಂತ ಶಕ್ತಿಯುತವಾದ ಈ ಬೆಳಕು, ಬೆಳಕನ್ನು ಚೆಲ್ಲಿ ಸಾಗಬಹುದು ಅಥವಾ ಹಾನಿಕಾರಕವೂ ಆಗಬಹುದು. ಇವು ಸಂದರ್ಭಾನುಸಾರ ಅಷ್ಟೇ. ಆಗಸದಲ್ಲಿ ಮೂಡುವ ಮಿಂಚಿಗೆ ಹಲವು ಸನ್ನಿವೇಶಗಳ ಸೃಷ್ಟಿಯಾಗಲೇಬೇಕು. ಆ ಸನ್ನಿವೇಶ ಉಂಟಾದರೆ ಮಾತ್ರ ಮಿಂಚು ಕಾಣಿಸಿಕೊಳ್ಳಬಹುದು.

ಸುಡು ಬಿಸಿಲುಗಾಲದ ಒಂದು ಮಟಮಟ ಮಧ್ಯಾಹ್ನ, ಸುಮ್ಮನೆ ಮಿಂಚು ಬಂದು ಹೋಗಲಾರದು. ಮಿಂಚು ಎಂದರೆ ಮಹಾವಿಷ್ಣುವಿನ ಅವತಾರದಂತೆ. ಮಿಂಚು ಮೂಡಬೇಕು ಎಂದರೆ ಅಲ್ಲೊಂದು ಸನ್ನಿವೇಶ ಸೃಷ್ಟಿಯಾಗಬೇಕು. ಹಾಗೆ ಸೃಷ್ಟಿಯಾದ ಸನ್ನಿವೇಶದ ಸಮಯದಲ್ಲಿ ಮೂಡಿಬಂದ ಮಿಂಚಿಗೆ ಬೆಲೆಯಿದೆ. ಟೈಮ್ ಇತ್ತು ಬಂದೆ ಎಂದು ಬರುವ ಮಿಂಚು ಮಧ್ಯಾಹ್ನ ಉಂಡ ಮೇಲೆ ನಿದ್ರೆ ಆವರಿಸುವಾಗ ಬಂದು ಕೂರುವ ಅತಿಥಿಯಂತೆ. ಥತ್ ಎಂಬುದು ಬಿಟ್ಟು ಬೇರಾವ ಭಾವನೆಯೂ ಬರಲಾರದು ಮನಸ್ಸಿಗೆ.

ಮಿಂಚು ಎಂದರೆ, ಒಂದು ಸಿನಿಮಾದಲ್ಲಿನ ನಾಯಕನಟನಿದ್ದಂತೆ ಈ ಮಿಂಚು. ನಾಯಕ ಬರಬೇಕು ಎಂದರೆ ಅಲ್ಲೊಂದು ಸನ್ನಿವೇಶ ಸೃಷ್ಟಿಯಾಗಬೇಕು. ಸತ್ಯವನ್ನೇ ಹೇಳಬೇಕು ಎಂದರೆ ನಾನು ಹೇಳಿದ್ದರ ಉಲ್ಟಾ ಸನ್ನಿವೇಶವೇ ನೈಜ. ಸಿನಿಮಾದ ಆರಂಭದ ಸನ್ನಿವೇಶದಲ್ಲಿ ನಾಯಕನಟ ಮಿಂಚಿನಂತೆ. ಮಿಂಚು ಬಂದು ಸಾಗುತ್ತದೆ ಆದರೆ ನಾಯಕನಾದವನು ಬಂದು ಮಿಕ್ಕ ದೃಶ್ಯಗಳಲ್ಲಿ ತಳವೂರುತ್ತಾನೆ.

ನಾಯಕ ಆ ಸಿನಿಮಾದಲ್ಲಿ ತಳವೂರಬಹುದು ಆದರೆ ಅವನು ನಾಯಕನಾಗಿಯೇ ತಳವೂರಬೇಕು ಎಂದರೆ ಸಾಮರ್ಥ್ಯಬೇಕು. ಸಾಮರ್ಥ್ಯವಿದ್ದೂ ಅದೃಷ್ಟವಿಲ್ಲದವರು ಮಿಂಚಿ ಮರೆಯಾಗುತ್ತಾರೆ. ಮಿಂಚಿ ಹೋದ ಎಂಬುದೇ ಈ ಮಿಂಚಿ ಮರೆಯಾದ ಎಂಬುದರ ಅರ್ಥ. ಅಲ್ಲಿಗೆ ಎರಡನೆಯ ಸುತ್ತು ಬೆಳೆಯಿತು.

Dont worry about the time passing

ಪುರಾಣ ಪುಣ್ಯಕಥೆಗಳಲ್ಲಿ ಎಲ್ಲಕ್ಕೂ ಒಂದೊಂದು ಕಥೆಯಿದೆ. ಬಂದವರು ತಳವೂರಿ ಬಂಧುಗಳಿಂದಲೇ ನಿಮ್ಮ ಕೆಲಸವಾಯ್ತು ತೆರಳಿ ಎಂದು ಹೇಳಿಸಿಕೊಂಡ ಭೀಷ್ಮರೂ ಇದ್ದಾರೆ, ಮಿಂಚಲಿದ್ದಾನೆ ಎಂಬ ಆಶಯ ಮೂಡಿಸಿ ಮಿಂಚಿದ್ದೇ ಅಲ್ಲದೆ ಅಷ್ಟೇ ಬೇಗ ಮರೆಯಾದ ಅಭಿಮನ್ಯುರಂಥವರೂ ಇದ್ದಾರೆ. ಮಿಂಚಿಕೊಂಡೇ ಇರಬೇಕೇ, ಮಿಂಚಿ ಮರೆಯಾಗಬೇಕೇ ಎಂಬುದನ್ನು ಹೇಳುವುದು ಕಷ್ಟ.

ನಾವು ಅದಾವ ರೀತಿ ಬದುಕಿ ಬಾಳುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಮಿಂಚಿ ಮರೆಯಾದ ಭಗತ್ ಸಿಂಗ್ ಇಂದಿಗೂ ಮಾನ್ಯ. ಧ್ರುವತಾರೆಯಂತೆ ಮಿಂಚುತ್ತಲೇ ಇದ್ದ ಶತಾಯುಷಿಯಾಗಳಾದ ಸರ್. ಎಂ ವಿ, ಶಿವಕುಮಾರ್ ಸ್ವಾಮೀಜಿಗಳು ಮತ್ತು ಕೆಲವೇ ದಿನಗಳ ಹಿಂದೆ ನಮ್ಮನ್ನಗಲಿದ ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ ನಂಥವರೂ ಸದಾ ಮಾನ್ಯ.

ಒಂದು ಋತುವಿನಲ್ಲಿ ಮಾತ್ರ ಮೂಡಿ ಮರೆಯಾಗುವ ಪುಷ್ಪಗಳು ಹೇಗೆ ಕಣ್ಣಿಗೆ ಹಬ್ಬ ತರುತ್ತದೆಯೋ ಅಥವಾ ಮಾನ್ಯತೆ ಹೊಂದಿರುತ್ತದೆಯೋ ಅದರಂತೆಯೇ ನೂರಾರು ವರ್ಷಗಳು ಬೇರೂರಿ ನಿಂತ ಮರಗಳೂ ಮಾನ್ಯವೇ. ತಾನೀಗ ಬೆಳಗಿ ಮರೆಯಾಗುವ ಪುಷ್ಪ ಎಂದು ತನ್ನ ಕರ್ತವ್ಯದಿಂದ ಹಿಂದೆ ಬಿದ್ದಿಲ್ಲ ಆ ಪುಷ್ಪ. ಹೇಗಿದ್ದರೂ ತಾನು ನೂರಾರು ವರ್ಷ ತಳ ಊರುವವನು, ತಾನು ಕರ್ತವ್ಯ ನೆರವೇರಿಸಿದರೂ ಅಷ್ಟೇ, ಮಾಡದಿದ್ದರೂ ನಡೆಯುತ್ತೆ ಅಂತ ಆ ವೃಕ್ಷದ ಮನದಲ್ಲಿ ಭಾವನೆ ಮೂಡಿ ಕರ್ತವ್ಯಚ್ಯುತಿಯಾಗಿ ನಡೆದುಕೊಂಡಿಲ್ಲ. ಇಲ್ಲಿನ ಸೂಕ್ಷ್ಮ ಏನಪ್ಪಾ ಎಂದರೆ ಪುಷ್ಪಕ್ಕಾಗಲಿ, ವೃಕ್ಷಕ್ಕಾಗಲಿ ತನ್ನ ಆಯುಷ್ಯದ ವೇಳೆ ತಿಳಿದಿಲ್ಲ.

ಈ ಕೆಲಸ ಅಥವಾ ಕರ್ತವ್ಯವೇ ಅಲ್ಲವೇ ಕಾರ್ಯ ಎಂದರೆ? ಅಲ್ಲಿಗೆ ಅದು ಮಿಂಚಿ ಹೋದ ಕಾರ್ಯ ಎನ್ನುವ ತನಕ ಮೂಡಿತು ಅರ್ಥಾತ್ ಮೂರನೆಯ ಸುತ್ತು ಮೂಡಿತು. ಸಾವಿರಾರು ವರುಷಗಳ ಬದುಕಿಗೆ ಹೋಲಿಸಿದರೆ ನೂರು ವರುಷ ಬದುಕಿದವರೂ ಮಿಂಚಿ ಹೋದವರು ಎಂದೇ ತಾನೇ. ಮಿಂಚಿ ಹೋಗುವ ಎಂಬ ಕಾಲಕ್ಕೆ ಇದೇ ಸರಿ ಎಂಬ ಮಾನದಂಡವಿಲ್ಲ.

ಇಪ್ಪತ್ತು ವರ್ಷಕ್ಕೆ ಮಹಾನ್ ಸಾಧನೆ ಮಾಡಿದವರು ಮಿಂಚಿ ಮರೆಯಾದವರು, ನಲವತ್ತು ವರುಷ ಬೆಳಗಿ ಮರೆಯಾದವರು ಬ್ಯಾಟರಿ ಇರುವ ತನಕ ಬೆಳಗುವ ಟಾರ್ಚ್ ಇರುವಂತೆ, ಅರವತ್ತು ವರುಷ ಬದುಕಿ ಸಾಧಿಸಿ ಹೋದವರು ಫಿಲಮೆಂಟ್ ಹಾಳಾಗುವ ತನಕ ಬೆಳಗುವ ಬಲ್ಬ್ ಬೆಳಗುವಂತೆ ಅಂತೇನಾದರೂ ಚಾರ್ಟ್ ಇದೆಯೇ? ಇಲ್ಲಾ ತಾನೇ? ಹಾಗಾಗಿ ಮನುಷ್ಯ ಜೀವಿತ ಕಾಲವೇ ಮಿಂಚಿ ಮರೆಯಾಗುವ ಕಾರ್ಯ ಎಂದುಕೊಳ್ಳಬಹುದು.

ಮುಂದಿನ ಪದರ ಅಥವಾ ಸುತ್ತು ಎಂದರೆ ಚಿಂತಿಸಿ. ಭಗತ್ ಸಿಂಗ್ ಮತ್ತೆ ಹುಟ್ಟಿ ಬಾ, ಅಭಿಮನ್ಯು ಮತ್ತೆ ಹುಟ್ಟಿ ಬಾ ಎಂಬುದೆಲ್ಲಾ ಆ ಹೊತ್ತಿನ ಸಂಕಟದ ಅಳಲು ಅಥವಾ ಆವೇಶ ಎನ್ನಬಹುದು. ಕೆಲವೊಮ್ಮೆ ಮೌಢ್ಯ ಎನ್ನಬಹುದು. ಬಂದವರೆಲ್ಲಾ ಹೋಗಲೇಬೇಕು ಎಂಬುದು ಕಟುಸತ್ಯ ಅಲ್ಲ ಬದಲಿಗೆ ನಗ್ನಸತ್ಯ.

ಕಾರ್ಯವನ್ನು ಕರ್ತವ್ಯ ಎಂಬುದಾಗಿ ಹೊತ್ತು ಧರೆಗೆ ಬಂದ ಶ್ರೀಕೃಷ್ಣ ಪರಮಾತ್ಮನೇ ಹಿಂದಿರುಗಿದ ಎಂದ ಮೇಲೆ ನಾವೇನು ಮಹಾ ಬಿಡಿ. ಅವನೂ ಸ್ವಂತದವರಿಂದಲೇ ನಿಂದಿಸಲ್ಪಟ್ಟವನು. ಇಷ್ಟೆಲ್ಲಾ ಹೇಳುತ್ತಿರೋದು, ಸ್ವಂತದವರಿಂದಲೇ ನಮಗೂ ಹೀಗಾಗುತ್ತದೆ ಅಂತಲ್ಲ. ಅದು ಕರ್ಮಾನುಸಾರ ಅಷ್ಟೇ. ಇಲ್ಲಿ ಉಲ್ಲೇಖಿಸಿರುವ ವಿಷಯ ಏನೆಂದರೆ ಚಿಂತಿಸುವುದರಿಂದ ಫಲವಿಲ್ಲ ಅಂತ. ಇಲ್ಲಿಗೆ ಕೊನೆಯ ಪದರವೂ ಸೇರಿತು.

Dont worry about the time passing

ಅಡುಗೆಮನೆಯಲ್ಲಿ ಒಂದೆಡೆ ಚಪಾತಿ ಮಾಡುತ್ತಿದ್ದೆ ಮತ್ತೊಂದೆಡೆ ಹಾಲನ್ನು ಕಾಯಲಿಕ್ಕೆ ಇಟ್ಟಿದ್ದೆ. ಚಪಾತಿ ಸೀದು ಹೋಗಬಹುದು ಎಂದು ಈ ಕಡೆ ನೋಡುವಷ್ಟರಲ್ಲಿ ಹಾಲು ಉಕ್ಕಿ ಸುರಿದಿತ್ತು. ಅರರೇ ! ಅಂತ ಹಾಲಿನ ಕಡೆ ಗಮನ ಕೊಡುವಾಗ ಚಪಾತಿ ಸುಟ್ಟು ಕರಕಲಾಗಿತ್ತು. ಕೊನೆಗೆ ಆಗಿದ್ದೇನು ಎಂದರೆ ಎರಡೂ ನಷ್ಟವೇ. ಅಯ್ಯೋ ಹೀಗಾಯ್ತಲ್ಲಾ ಅಂತ ಚಿಂತಿಸಿದರೆ ಉಕ್ಕಿ ಚೆಲ್ಲಿದ ಹಾಲು ಪಾತ್ರೆಯೊಳಗೆ ಹೋಗಲಾರದು, ಕರಕಲಾದ ಚಪಾತಿ ಮತ್ತೆ ಗೋಧಿಬಣ್ಣವಾಗಲಾರದು. ಮಿಂಚು ಬಂದಾಗ ಅಯ್ಯೋ ನೋಡಲಿಲ್ಲ ಅಂದಾಗ ಮುಂದಿನ ಮಿಂಚು ಬಹುಶ: ಕಾಣಬಹುದು ಆದರೆ ಮರೆಯಾದ ಮಿಂಚು ಮತ್ತೆ ರಿಪ್ಲೇ ಆಗುವುದಿಲ್ಲ.

ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಸತ್ಯವೇ ಅನ್ನಿ, ಚಿಂತಿಸುವ ಬದಲಿಗೆ ಈ ಮಿಂಚಿ ಹೋದ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿದರೆ ಬಹುಶ: ಅದರಿಂದ ನಮ್ಮ ಅನುಭವ ವೃಕ್ಷವೂ ಸಿಂಗಾರಗೊಂಡೀತು. ಇದು ಇಷ್ಟಕ್ಕೆ ನಿಲ್ಲದೇ, ಈ ವೃಕ್ಷದಲ್ಲಿ ವಾಸಿಸುವವರಿಗೂ, ಅದರ ಅಡಿಯಲ್ಲಿ ಬರುವವರಿಗೂ ಆಶ್ರಯ ದೊರೆಯಬಹುದು. ಹಲವು ರೀತಿಯ ಹಂತಗಳಲ್ಲಿನ ಫಲಗಳನ್ನೂ ಉಂಡವರಿಗೆ ಹಲವು ರೀತಿಯ ಜ್ಞಾನಾರ್ಜನೆಯೂ ಆದೀತು.

ಚಿಂತೆ ಮಾಡದೇ ಚಿಂತನೆ ಮಾಡೋದು ಹೇಗೆ ಈ ಉಕ್ಕಿ ಚೆಲ್ಲಿದ ಹಾಲಿನಿಂದ? ಚಿಂತೆ ಮಾಡದೇ ಚಿಂತನೆ ಮಾಡೋದು ಹೇಗೆ ಈ ಕರಕಲಾದ ಚಪಾತಿಯಿಂದ? ಇವೆರಡೂ ಚಿಂತೆಯ ಮೆಟೀರಿಯಲ್, ಚಿಂತನೆಯ ವಸ್ತುವಲ್ಲ. ಮಾಡುವ ಕೆಲಸವನ್ನೇ ಕೊಂಚ ಹಂಚಿಕೊಂಡು ಮಾಡಿದಾಗ ಅಥವಾ ಕೊಂಚ ಬೇಗನೆ ಆರಂಭ ಮಾಡಿ ಒಂದೊಂದೂ ಮುಗಿಸಿಕೊಂಡು ಬಂದಾಗ ಒಂದೇ ಸಾರಿ ನಾಲ್ಕು ಕೆಲಸ ಮಾಡುವ ಸಂದರ್ಭ ಮೂಡಲಾರದು ಅನ್ನುವುದೇ ಚಿಂತನೆ.

ಮೈನಸ್ ಎಂಬುದನ್ನು ಮೈನಸ್ ನಿಂದ ಗುಣಿಸಿದಾಗ ಪ್ಲಸ್ ಆಗುತ್ತದೆ. ಚಿಂತೆ ಎಂಬುದು ಮೈನಸ್ ಆದರೆ, ಅದನ್ನು ನಕಾರದಿಂದ ಗುಣಿಸಿದಾಗ ಅದು ಚಿಂತನ ಎಂದಾಗಿ ಧನಾತ್ಮಕವಾಗಿ ಪರಿವರ್ತನೆ ಹೊಂದುತ್ತದೆ. ನೀವೇನಂತೀರಾ?

English summary
Don't worry about the time passing, It will always pass. Just worry about how you use the majority of your time writes Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X