ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಶಂಖದ ಬಗ್ಗೆ ನಿಮಗೊಂದಿಷ್ಟು ವಿಷಯ ಗೊತ್ತೇ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಗಜಪತಿ ಗರ್ವಭಂಗ ಸಿನಿಮಾದ ಈ ಹಾಡು ಗೊತ್ತೇ? ಜಂತರ ಮಂತರ ಕುಂತರ ನಿಂತರ, ಶಂಖಾ! ತರಕಾರಿ ತಾಯಮ್ಮಾ ಎಂಬ ಹಾಡು ಹಾಸ್ಯಮಯವಾಗಿದೆ. ಇಲ್ಲಿ ಉಲ್ಲೇಖಿಸಿರುವ ಶಂಖದ ಬಗ್ಗೆಯೇ ಇಂದಿನ ಮಾತು.

ಡಾಕ್ಟ್ರೇ, ಕೆಟ್ಟಿರೋ ಹೊಟ್ಟೆಗೆ ಏನು ಪಥ್ಯ ಮಾಡಬೇಕು ಹೇಳಿ. ನೋಡಿ ಸ್ವಾಮಿ, ಸದ್ಯಕ್ಕೆ ಇರೋ ಪರಿಸ್ಥಿತಿಯಲ್ಲಿ ನೀವು ಜೋರಾಗಿ ಸೀನಿದರೂ ಪಂಚೆ ಬದಲಿಸಬೇಕು ಎಂಬ ಹಾಗಿದೆ. ಹಾಗಾಗಿ ಸದ್ಯಕ್ಕೆ ಸ್ವಲ್ಪ ದಿನ ಶಂಖ ಊದುವುದನ್ನ ನಿಲ್ಲಿಸಬೇಕು. ಅಂತಂದ ವೈದ್ಯರು ನುಡಿದಾ ಶಂಖದ ವಿಷಯ ಅರಿಯೋಣ.

ಅಷ್ಟು ದುಡ್ಡು ಕೊಟ್ಟು ಸಿನಿಮಾ ಟಿಕೇಟು ತೊಗೊಂಡ್ ಹೋಗಿದ್ದಷ್ಟೇ ಬಂತು. ಅದ್ಯಾವುದೋ ಮಗು ಇಡೀ ಸಿನಿಮಾ, ಶಂಖ ಹೊಡೀತಿತ್ತು. ಒಂದು ಡೈಲಾಗ್ ಕೇಳಿಸಲಿಲ್ಲ ಎಂಬ ಶಂಖದ ಬಗೆಗಿನ ಮಾತು.

ಯಾರೇನೇ ಹೇಳಿದರೂ ಅಥವಾ ಉಪದೇಶ ಮಾಡಿದರೂ ಅರ್ಥ ಮಾಡಿಕೊಳ್ಳದೆ, ತಾವು ನಂಬಿಕೆ ಇರಿಸಿರುವ ವ್ಯಕ್ತಿಯ ಬಾಯಿಂದ ಅದೇ ಮಾತುಗಳು ಬಂದಾಗ, ಕುರಿಯಂತೆ ತಲೆಬಾಗಿಸಿ, ಕಣ್ಮುಚ್ಚಿ ಪಾಲಿಸುವ ಸಂದರ್ಭದಲ್ಲಿ ಬಳಸುವ ಪದಪುಂಜವೇ - ಶಂಖದಿಂದ ಬಂದದ್ದೇ ತೀರ್ಥ. ನೀರು ನೀರೇ ಆದರೂ ಶಂಖದಿಂದ ಹೊರಬಂದಾಗ ಅದು ತೀರ್ಥ ಎಂದಾಗುತ್ತದೆ. ಅರ್ಥಾತ್ ಶಂಖದಿಂದ ಹೊರಬಿದ್ದ ನೀರು ಗಂಗಾಜಲಕ್ಕಿಂತಾ ಪವಿತ್ರ ಎಂಬ ಮಾತಿದೆ. ಇಂಥಾ ಪವಿತ್ರವಾದ ಶಂಖದ ಬಗ್ಗೆ ಒಂದೆರಡು ಮಾತುಗಳನ್ನು ಆಡೋಣ ಅಂತ ಅಂದುಕೊಂಡಿದ್ದೀನಿ.

Srinath Bhalle Column: Do You Know Anything About The Conch

ಹಿಂಗೇ ಒಂದು house warmingಗೆ ಹೋಗಿದ್ವಿ. ಮನೆಯನ್ನು ಬಿಸಿ ಮಾಡಿಸಲು ಬಂದವರು ಉತ್ತರಭಾರತೀಯ ಅರ್ಚಕರು. ಅವರ ಸಂಪ್ರದಾಯದ ಪ್ರಕಾರ ಶಂಖ ಊದುವುದೂ ಒಂದು ಸಂಪ್ರದಾಯ. ಕುಂಬಳಕಾಯಿಯನ್ನು ಕೈಲಿ ಹಿಡಿದು, ದೀಪ ಬೆಳಗಿಸಿ, ದೃಷ್ಟಿ ನೀವಾಳಿಸುವ ಕೆಲಸ ಮಾಡಬೇಕಾದುದರಿಂದ, ತಮ್ಮ ಕೈಲಿದ್ದ ಶಂಖವನ್ನು ನಮ್ಮ ಕೈಲಿ ನೀಡಿ "ಶಂಖ' ಊದಲು ಹೇಳಿದರು. ಬಂದರಲ್ಲವೇ ಊದಲು? ನನಗೆ ಶಂಖ ಹೊಡೆಯೋಕ್ ಬರುತ್ತೆ ಆದರೆ ಊದಲು ಗೊತ್ತಿಲ್ಲ. ಈಗ ಇಂಥದ್ದೇ ಶಂಖದ ಬಗ್ಗೆ ಹೇಳಲು ಹೊರಟಿದ್ದೀನಿ.

ಶಂಖವು ಮೇಲ್ಭಾಗದಲ್ಲಿ ಸುರುಳಿಯಂತೆ ಅಥವಾ ಗೋಪುರದಂತೆ ಇದ್ದು ಮಧ್ಯಭಾಗದಲ್ಲಿ ಹೊಟ್ಟೆ ಉಬ್ಬಿರುತ್ತದೆ ಮತ್ತು ಕೊನೆಯಲ್ಲಿ ಚೂಪಾಗಿರುತ್ತದೆ. ದೀರ್ಘವಾಗಿ ಶ್ವಾಸ ತೆಗೆದುಕೊಂಡು, ಉಸಿರನ್ನು ಶಂಖದ ಒಳಗೆ ಊದಿದಾಗ ಆ ಗಾಳಿ ಸುರುಳಿಯಾಕಾರದ ಒಳಭಾಗವನ್ನು ಹೊಕ್ಕು ಹೊರಗೆ ಬರುವಾಗ 'ಓಂ'ಕಾರ ನಾದವನ್ನು ಮೂಡಿಸುತ್ತದೆ. ಇಂಥಾ "ಓಂ'ಕಾರವೇ ಆರಂಭದ ಸಂಕೇತ. ಈ ಆರಂಭದ ಸಂಕೇತವನ್ನೇ ಯುದ್ಧದ ಆರಂಭದ ಸಂಕೇತವಾಗಿಯೂ ಬಳಕೆ ಮಾಡಿಕೊಂಡು, ಯುದ್ಧದ ಮೊದಲಲ್ಲಿ ಶಂಖನಾದವನ್ನು ಮಾಡಲಾಗುತ್ತದೆ. ಇಂಥದ್ದೇ ಶಂಖದ ಬಗ್ಗೆ ಇಂದಿನ ಮಾತು.

ಸಾಮಾನ್ಯವಾಗಿ ಶಂಖ ಎಂದ ಕೂಡಲೇ ನೆನಪಾಗುವ ಹಲವಾರು ವಿಷಯಗಳಲ್ಲಿ ಮೊದಲಿಗೆ ನಿಲ್ಲುವುದೇ ಶಂಖ-ಚಕ್ರ-ಗದಾ-ಪದ್ಮಧಾರಿ. ಅವನೇ ಶ್ರೀಮನ್ನಾರಾಯಣ. ಚತುರ್ಭುಜನಾದ ನಾರಾಯಣ ಒಂದು ಬಲಹಸ್ತದಲ್ಲಿ ಚಕ್ರವನ್ನು, ಒಂದು ಎಡಹಸ್ತದಲ್ಲಿ ಶಂಖವನ್ನು ಧರಿಸಿರುತ್ತಾನೆ. ಮತ್ತೊಂದು ಎಡ-ಬಲ ಹಸ್ತಗಳನ್ನು ನೋಡೋಣ. ಆ ಒಂದು ಬಲಹಸ್ತದಲ್ಲಿ ಪದ್ಮವನ್ನು ಮತ್ತೊಂದು ಎಡಹಸ್ತದಲ್ಲಿ ಕೌಮೋದಕಿ ಗದೆಯನ್ನು ಹೊಂದಿರುವವನಾಗಿದ್ದಾನೆ. ಶಂಖ ಓಂಕಾರ ಸಂಕೇತ. ಶಂಖ ಮಹಾವಿಷ್ಣುವಿನ ಸಂಕೇತ. ಪೂಜನೀಯವಾದ ಇಂಥಾ ಶಂಖದ ಬಗ್ಗೆ ಒಂದೆರಡು ವಿಷಯವಾದರೂ ಅರಿವ ಯತ್ನ ಮಾಡೋಣ.

ಮಹಾವಿಷ್ಣು ಶಂಖಪಾಣಿಯಾಗಿದ್ದು, ವರಾಹ ಮತ್ತು ನರಸಿಂಹಾವತಾರಗಳನ್ನು ಚಿತ್ರಿಸುವಾಗಲೂ ಚತುರ್ಭುಜರಾಗಿ ಚಿತ್ರಿಸಿ ಎಡಹಸ್ತದಲ್ಲಿ ಶಂಖವನ್ನು ತೋರಿಸಲಾಗುತ್ತದೆ. ಆದರೆ ನಾರಾಯಣನು ಈ ಎರಡು ಅವತಾರಗಳಲ್ಲಿ ಶಂಖ ಬಳಸಿದ ಸನ್ನಿವೇಶದ ಬಗ್ಗೆ ಎಲ್ಲೂ ಉಲ್ಲೇಖವಾಗಲಿಲ್ಲ. ದಶಾವತಾರಗಳನ್ನು ಗಮನಿಸಿದಾಗ ಶಂಖವನ್ನು ಬಳಸಿರುವ ಅವತಾರಿ ಶ್ರೀಕೃಷ್ಣ. ಈ ನಮ್ಮ ಶ್ರೀಕೃಷ್ಣನ ಶಂಖಾಸುರ ಎಂಬ ಶಂಖದ ಬಗ್ಗೆ ಅರಿಯೋಣ.

ಶ್ರೀಕೃಷ್ಣ, ಬಲರಾಮ ಮತ್ತು ಸುಧಾಮರು ಸಾಂದೀಪನಿ ಮಹರ್ಷಿಯವರಲ್ಲಿ ವಿದ್ಯೆ ಕಲಿಯುತ್ತಾರೆ. ಇದೇ ಸಾಂದೀಪನಿಯವರ ಪುತ್ರನನ್ನು ಶಂಖಾಸುರ ಎಂಬ ಸಮುದ್ರ ರಕ್ಕಸನು ಅಪಹರಿಸಿ ಶಂಖದಲ್ಲಿ ಬಚ್ಚಿಟ್ಟಿರುತ್ತಾನೆ. ತಮಗೆ ನೀಡಿರುವ ಶಿಕ್ಷಣಕ್ಕೆ ಗುರುದಕ್ಷಿಣೆಯ ರೂಪದಲ್ಲಿ ಏನು ಕೊಡಬೇಕು ಎಂದು ಕೇಳಿದಾಗ ಗುರುಗಳು, ತಮ್ಮ ಮಗನನ್ನು ರಕ್ಕಸನಿಂದ ರಕ್ಷಿಸು ಎಂದು ಕೇಳುತ್ತಾರೆ. ವಿಷಯವನ್ನು ಅರಿತ, ಕುಪಿತನಾದ ಶ್ರೀಕೃಷ್ಣ ಸಮುದ್ರವನ್ನು ಹೊಕ್ಕು, ಶಂಖಾಸುರನನ್ನು ಕೊಂದು, ಶಂಖದಲ್ಲಿ ಅಡಗಿಸಿ ಕೂರಿಸಿದ್ದ ಗುರುಪುತ್ರನನ್ನು ರಕ್ಷಿಸಿ ಆ ಶಂಖವನ್ನು ತನ್ನದಾಗಿಸಿಕೊಳ್ಳುತ್ತಾನೆ. ಆ ಶಂಖಕ್ಕೆ ದಾನವನ ಹೆಸರನ್ನೇ ಇಟ್ಟ, ಎಂಬ ಕಥೆಯನ್ನೂ ಇಂದು ಅರಿಯುವಾ ಯತ್ನ.

ಈಗ ವಿಷಯ ಏನಪ್ಪಾ ಅಂದ್ರೆ ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ ಅಂತ ನಮಗೆ ಅರಿವಿದೆ. ಈ ಪಾಂಚಜನ್ಯವೇ ಶಂಖಾಸುರ ಶಂಖ ಎಂಬ ಉಲ್ಲೇಖ ಕೆಲವೆಡೆ ಇದೆ. ಎರಡೂ ಒಂದೇ ಆದರೆ ಕೃಷ್ಣಾವತಾರದವರೆಗೂ ಪಾಂಚಜನ್ಯ ವಿಷ್ಣುವಿನ ಹಸ್ತದಲ್ಲಿ ಇರಲಿಲ್ಲ ಅಂತಾಯ್ತು ಅಲ್ಲವೇ? ಕೆಲವೆಡೆ ಪಾಂಚಜನ್ಯ ಎಂಬ ರಕ್ಕಸನನ್ನು ಮಹಾವಿಷ್ಣು ಸಂಹರಿಸಿದ ಎಂಬ ಕಥೆಯೂ ಇದೆ. ಹಾಗಿದ್ದರೆ ಸಾಂದೀಪನಿ ಮಹರ್ಷಿಗಳ ಪುತ್ರನನ್ನು ರಕ್ಷಿಸಿದಾಗ ಕೊಂದಿದ್ದು ಯಾರನ್ನು?

ಈ ಶಂಖವು ವಿಶ್ವಕರ್ಮನ ರಚನೆ ಎಂಬುದರ ಬಗ್ಗೆ ಮಾತನಾಡುವ ಎಂದಲ್ಲ ಈ ಬರಹ, ಬದಲಿಗೆ ಪಾಂಚಜನ್ಯವೇ ಶಂಖಾಸುರವೇ? ಅಥವಾ ಎರಡೂ ಬೇರೆ ಬೇರೆಯೇ? ಎರಡೂ ಶಂಖಗಳು ಬೇರೆ ಬೇರೆಯಾದರೆ ಶಂಖಾಸುರ ಶಂಖ ಬೇರೆಲ್ಲಿ ಬಳಕೆಯಾಗಿದೆ? ಎಂಬೆಲ್ಲಾ ಪ್ರಶ್ನೆಗೆ ಉತ್ತರ ಹೇಳಿ ಎಂದು ಕೇಳುವ ಉದ್ದೇಶವೇ ಈ ಬರಹ.

ಶ್ರೀಕೃಷ್ಟಾಷ್ಟಮಿಯ ರಾತ್ರಿ ಕೃಷ್ಣನ ಪೂಜೆಯ ಭಾಗವಾದ ಅರ್ಘ್ಯದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನನ್ನ ನೆನಪು ಏನಪ್ಪಾ ಅಂದ್ರೆ, ನಮ್ಮ ಮನೆಯಲ್ಲಿದ್ದ ಬಿಳಿಯ ಶಂಖದಲ್ಲಿ ಮೊದಲಿಗೆ ನೀರು ತುಂಬಿಸಿ, ಅದರಲ್ಲೊಂದು ನಾಣ್ಯ ಇಟ್ಟು ಮೇಲೊಂದು ನಿಂಬೆಹಣ್ಣು ಇರಿಸಿಕೊಂಡು ಮೂರು ಬಾರಿ ಅರ್ಘ್ಯ ಕೊಡೋದು. ಮತ್ತೊಮ್ಮೆ ಹಾಲಿಂದ ಮೂರು ಬಾರಿ ಆ ನಂತರ ನೀರಿನಿಂದ ಮತ್ತೆ ಮೂರು ಬಾರಿ ಅರ್ಘ್ಯ ಕೊಡುತ್ತಿದ್ದೆವು. ನಿಮ್ಮ ಮನೆಗಳಲ್ಲಿ ಶಂಖ ಬಳಸುತ್ತಿದ್ದೀರಾ ಎಂದು ಅರಿಯುವ ಯತ್ನವನ್ನೂ ಇಂದಿನ ಬರಹದಲ್ಲಿ ಮಾಡೋಣ.

ಶಂಖವನ್ನು ಊದುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ಶ್ವಾಸಕೋಶಕ್ಕೆ ಒಳಿತು ಎಂದು ಆರೋಗ್ಯತಜ್ಞರು ಹೇಳುತ್ತಾರೆ. ನಿಮಗೂ ಗೊತ್ತೇ ಎಂದು ಕೇಳುವುದೇ ಈ ಬರಹದ ಉದ್ದೇಶ. ಮನಸ್ಸಿನಲ್ಲಿ ಉಂಟಾಗಿರುವ ಒತ್ತಡ ಕಡಿಮೆ ಮಾಡಲು ಶಂಖವನ್ನು ಊದಿ ಎನ್ನುತ್ತದೆ ಆರೋಗ್ಯ ಶಾಸ್ತ್ರ, ಆದರೆ ಒತ್ತಡ ತುಂಬಿದ ಕಚೇರಿಯ ಸಮಯದಲ್ಲಿ ಬಳಸದಿರಿ ಎಂದು ಹೇಳುವುದೇ ಈ ಬರಹದ ಉದ್ದೇಶ. ಯಾವುದೇ ಅಸ್ತ್ರದ ಬಳಕೆಯನ್ನು ವಿವೇಚನೆ ಬಳಸಿ ಮಾಡಬೇಕಾದುದು ಬುದ್ದಿವಂತಿಕೆ ಅಂತ ಹೇಳುವುದೂ ಈ ಬರಹದ ಉದ್ದೇಶ.

ಶಂಖನಾದದಿಂದ ಪರಿಸರದಲ್ಲಿ ಧನಾತ್ಮಕ ತರಂಗಗಳು ಏಳುತ್ತವೆ, ಹಾಗಾಗಿ ಪೂಜೆಯ ವೇಳೆಯಲ್ಲಿ ಶಂಖವನ್ನು ಬಳಸಲಾಗುತ್ತದೆ ಎಂಬುದೂ ನಿಮಗೂ ಗೊತ್ತೇ ಎಂದು ಕೇಳುವುದೇ ಈ ಬರಹದ ಉದ್ದೇಶ. ಶಂಖದಿಂದ ಧನಾತ್ಮಕ ತರಂಗ ಉಂಟಾಗುವುದೇ ಆಗಿದ್ದರೆ, ಯುದ್ಧದಲ್ಲಿ ಬಳಸುವುದೇಕೆ ಅಂತ ಕೇಳುವುದೇ ಈ ಬರಹದ ಉದ್ದೇಶ.

ಇದೆಲ್ಲದರ ಜೊತೆಗೆ, ನಿಮಗೆ ಪಾಂಡವರ ಶಂಖದ ಹೆಸರುಗಳು ಗೊತ್ತೆ? ಕೌರವರು ಶಂಖ ಬಳಸಿದ್ದರೇ? ರಾಮನೇನೋ ಅರಣ್ಯದಲ್ಲೆಲ್ಲಾ ಓಡಾಡಿ ಯುದ್ಧಕ್ಕೆ ನಿಂತವನು ಸರಿ, ಆದರೆ ರಾವಣ ಅರಮನೆಯಿಂದ ನೇರವಾಗಿ ಯುದ್ಧಭೂಮಿಗೆ ಬಂದವನು. ಅವನು ಶಂಖ ಬಳಸಿರಬಹುದು ಅಲ್ಲವೇ? ಹಾಗಿದ್ದರೆ ಆ ಶಂಖದ ಹೆಸರೇನು?

ಅರವಿಂದ ಎಂದರೆ ಮಹಾವಿಷ್ಣು. ಅರವಿಂದ ಎಂಬ ಹೆಸರಿನವರೇ ಶಂಖನಾದ ಸಿನಿಮಾದ ಹೀರೋ ಎಂಬುದು ಕಾಕತಾಳೀಯವೇ ಎಂದು ಕೇಳುವುದೂ ಉದ್ದೇಶವಾಗಿತ್ತು.

ಇಷ್ಟೆಲ್ಲಾ ಪೀಠಿಕೆ ಕೊಟ್ಟು ಬರಹ ಶುರು ಮಾಡಲೇ ಅಂತ ಕೇಳೋಣಾ ಅನ್ನೋದೂ ಬರಹದ ಉದ್ದೇಶ. ನೀವೇನಂತೀರಾ?

English summary
The conch is like a spiral or tower at the top, the abdomen in the center and the end is sharp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X