ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನವೊಂದರಲ್ಲಿ ನಾವೆಲ್ಲಾ ಬರೀತೀವಿ, ಹಾಗಂತ ನಾವು ಬರಹಗಾರರೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಬರಹಗಾರ ಎಂದರೆ ಯಾರು? ಎಂಥಾ ದಿವಿನಾದ ಪ್ರಶ್ನೆ ಅಲ್ಲವೇ? ತುಂಬಾ ಸರಳವಾಗಿ ಹೇಳುವುದಾದರೆ ಬರೆಯುವವರೆಲ್ಲಾ ಬರಹಗಾರರೇ ಸರಿ. ಈ ಲೇಖನ ಬರೆದವ ನಾನೊಬ್ಬ ಬರಹಗಾರ, ಇದನ್ನು ಓದಿದವರಾದ ನೀವು ಓದುಗರು, ಪ್ರತಿಕ್ರಿಯೆ ಬರೆದಿರಾದರೆ ನೀವೂ ಬರಹಗಾರರು. ಆಂಗ್ಲದಲ್ಲೇ ಸರಳವಾಗಿ ಹೇಳಿದರೆ one who writes is a writer... ಅಕ್ಷರ ಬರೆದಾತ ಬರಹಗಾರ. ಆದರೆ ಇದು ಸರಿಯೇ? ಮುಂದೆ ನೋಡೋಣ...

ಮೊದಲಿಗೆ ದಿನವೊಂದರಲ್ಲಿ ನಾವು ಏನೆಲ್ಲಾ ಬರೆಯುತ್ತೇವೆ ಅಂತ ನೋಡೋಣ.

 ಸಮಯದ ಬಗ್ಗೆ ಓದೋಕೆ ನಿಮ್ಮ ಬಳಿ ಸ್ವಲ್ಪ ಟೈಮ್ ಇದೆಯಾ? ಸಮಯದ ಬಗ್ಗೆ ಓದೋಕೆ ನಿಮ್ಮ ಬಳಿ ಸ್ವಲ್ಪ ಟೈಮ್ ಇದೆಯಾ?

ಅಂದಿನ ದಿನಗಳಲ್ಲಿ ತಿಂಗಳಾರಂಭದಲ್ಲಿ ದಿನಸಿ ಸಾಮಾನು ತರಬೇಕು ಎಂದರೆ ಅಮ್ಮ ಏನೇನು ಎಷ್ಟೆಷ್ಟು ಬೇಕು ಎಂದು ಪಟ್ಟಿ ಹಾಕುತ್ತಿದ್ದರು. ಒಂದು ಲಿಸ್ಟ್ ಹಾಕಿ ಅಂಗಡಿಗೆ ಹೋಗಿ ತರೋದು ಅಥವಾ ಆ ಅಂಗಡಿಯವನಿಗೆ ಕೊಟ್ಟರೆ ಅವನೇ ತಂದು ಮನೆಯಲ್ಲಿರಿಸುತ್ತಾನೆ. ಯಾರು ತರುತ್ತಾರೆ ಅಥವಾ ದುಡ್ಡು ಕೊಡುತ್ತಾರೆ ಇಲ್ಲಿ ಮುಖ್ಯವಲ್ಲ, ಆದರೆ ಸಾಮಾನಿನ ಪಟ್ಟಿ ಬರೆಯುವ ಅಮ್ಮ ಒಬ್ಬ ಬರಹಗಾರ್ತಿ. ಅಂಗಡಿಯಲ್ಲಿನ ಮತ್ಯಾರೋ ಅವುಗಳಿಗೆ ಬೆಲೆ ಬರೆಯುತ್ತಾರೆ. ಅವನೊಬ್ಬ ಬರಹಗಾರ. ಅಂಗಡಿಯ ಮಾಲೀಕನು ಗ್ರಾಹಕ ಹೇಳಿದ ಸಾಮಾನುಗಳು, ಅವುಗಳ ಪ್ರಮಾಣ ಮತ್ತು ಬೆಲೆಗಳನ್ನು ಪರಿಶೀಲಿಸಿ, ಅದಕ್ಕೇನಾದರೂ ರಿಯಾಯಿತಿ ಕೊಡುವುದು ಇತ್ಯಾದಿಗಳನ್ನು ಬರೆಯುತ್ತಾನೆ. ಅವನೂ ಒಬ್ಬ ಬರಹಗಾರನೇ ಸರಿ. ಕೊನೆಯಲ್ಲಿ ತಿಂಗಳ ಖರ್ಚಿನ ಲೆಕ್ಕ ಬರೆದಿಡುವ ಅಪ್ಪನೂ ಬರಹಗಾರ. ಇಂದಿಗೂ ಮನೆಗೆ ಏನೇನು ಸಾಮಾನು ಬೇಕು ಅಂತ ಒಂದು ಚೀಟಿಯಲ್ಲಿ ಬರೆದುಕೊಂಡು ಬಂದವರು, ಅವುಗಳನ್ನು ಕೊಳ್ಳುತ್ತಾ, ಕೊಂಡಿದ್ದಕ್ಕೆ ಟಿಕ್ ಮಾಡಿಕೊಳ್ಳೋದನ್ನು ನಾನು ಇಲ್ಲಿ ಕಂಡಿದ್ದೇನೆ. ಕೆಲವರು ಬೇಕಿರುವ ಲಿಸ್ಟ್ ಅನ್ನು ಮೊಬೈಲಿನಲ್ಲಿ ನೋಟ್ ಮಾಡಿಕೊಂಡು ಬರುವುದನ್ನು ನೋಡಿದ್ದೇನೆ. ಇವರೆಲ್ಲರೂ ಬರಹಗಾರರೇ.

Different Types Of Authors In Our Daily Life

ಬೆಳಗಿನ ಕೆಲಸ ಒಂದು ಕಡೆಯಾದರೆ ಸಂಜೆ ಮತ್ತೊಂದು ಕಡೆ ಕೆಲಸಕ್ಕೆ ಹೋಗುವುದು ಎಷ್ಟೋ ಮಧ್ಯಮವರ್ಗದ ಮನೆಗಳಲ್ಲಿ ನೋಡಿದ್ದೇವೆ. ಹಲವಾರು ಬಾರಿ ಈ ರೀತಿ ಎರಡನೆಯ ಕೆಲಸ ಮಾಡುವವರು 'ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸ' ಮಾಡುತ್ತಾರೆ. ಯಾವುದೇ ಒಂದು ಅಂಗಡಿಯಲ್ಲಿನ ಅಂದಂದಿನ ವ್ಯವಹಾರವನ್ನು ಲೆಕ್ಕ ಇಡುವವ ಈತನೂ ಒಬ್ಬ ಬರಹಗಾರನೇ ಸರಿ.

ಅಂದು ಕೈಬರಹಗಳು ಇದ್ದಂತೆ, typewriterಗಳೂ ಚಾಲ್ತಿಗೆ ಬಂತು. ಒಂದು ಸರಕಾರೀ ಕೆಲಸಕ್ಕೆ ಅರ್ಜಿ ತಯಾರಾಗಬೇಕು ಎಂದಾಗ ಅದಕ್ಕೆ ಸಂಬಂಧಪಟ್ಟವರ ಬಳಿ ಕೂತು ಆತನಿಗೆ/ಆಕೆಗೆ ಮಾಹಿತಿ ನೀಡಿದಾಗ ಅವರು ಆಯಾ formatಗೆ ತಕ್ಕಂತೆ ತಮ್ಮ typewriterಗಳಲ್ಲಿ ಕುಟ್ಟುತ್ತಾರೆ. ಬರೆದರೇನು ಅಥವಾ ಕುಟ್ಟಿದರೇನು? ಇವರೂ ಬರಹಗಾರರೇ ಅಲ್ಲವೇ? proof reading ಮಾಡುವವರು, ಆ ಅರ್ಜಿಗೆ ಸಹಿ ಹಾಕುವವರು ಎಲ್ಲರೂ ಬರಹಗಾರರೇ! ನಾವು ಅವಿದ್ಯಾವಂತರು, ಹಾಗಾಗಿ ಹೆಬ್ಬೆಟ್ಟು ಎಂದು ಮೂಗೆಳೆಯದಿರಿ... ವಿದೇಶಗಳಲ್ಲಿ citizenship ಪಡೆಯುವಾಗ, ನಿಮ್ಮದು ಯಾವುದೇ ರೀತಿಯ ಅತ್ಯುನ್ನತ ಮಟ್ಟದ ವಿದ್ಯೆ ಆಗಿದ್ದರೂ ಅಲ್ಲಿ ಕೆಲಸಕ್ಕೆ ಬರೋದೇ ನಿಮ್ಮ ಬೆರಳಚ್ಚುಗಳು. ಹಣೆಬರಹದ ಬರಹಗಾರನಾದ ಚತುರ್ಮುಖ ಬ್ರಹ್ಮ ಪ್ರತಿಯೊಬ್ಬರ finger printನ ಬರಹವನ್ನೂ ವಿಭಿನ್ನವಾಗಿಯೇ ಬರೆದಿರುತ್ತಾನೆ.

 ದೃಷ್ಟಿಕೋನ ಬದಲಿಸಿ ನೋಡುವ ಅವಶ್ಯಕತೆ ಇದೆ! ದೃಷ್ಟಿಕೋನ ಬದಲಿಸಿ ನೋಡುವ ಅವಶ್ಯಕತೆ ಇದೆ!

ಹೆಚ್ಚುಕಮ್ಮಿ ನಾವೆಲ್ಲರೂ ಪತ್ರ ಬರೆದಿದ್ದಿದೆ. ಕೆಲವೊಮ್ಮೆ ಪತ್ರ ಬರೆಯಲು ಅಮ್ಮ ಬ್ಯುಸಿ ಇದ್ದರೆ, ಅವರು ಕೆಲಸ ಮಾಡಿಕೊಂಡೇ ವಿಷಯ ಹೇಳೋದು ನಾನು ಕಾಗದ ಬರೆಯುವುದು ನಡೆಯುತ್ತಿತ್ತು. ಅಮ್ಮ ಹೇಳುತ್ತಿದ್ದ "ಉ।।ಕು।ಸಾಂ।।, ಕ್ಷೇಮ, ಚಿ!ಸೌ" ಇತ್ಯಾದಿಗಳು ಇಂದಿಗೂ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ... ನಾನು ಅಂದು ಬರಹಗಾರನಾಗಿದ್ದೆ... ಅಮೆರಿಕಕ್ಕೆ ಬಂದ ಮೇಲೆ ಅಮ್ಮ ಇರೋ ತನಕ ಆಗಾಗ ಬರುತ್ತಿದ್ದ ಅಮ್ಮನ ಪತ್ರಗಳು ಮುದ ನೀಡುತ್ತಲಿತ್ತು ... ಆ ಬರಹಗಾರ್ತಿ ನನಗೆ ಕಲಿಸಿದ್ದ ಬರಹ ಇಂದಿಗೂ ನಿರಂತರ ಎನ್ನುವುದಕ್ಕಿಂತ ಹೆಚ್ಚಿನ ಅಕ್ಷರನಮನ ನನ್ನಲ್ಲಿಲ್ಲ.

ನಮ್ಮ ಶಾಲೆಯ ದಿನಗಳಲ್ಲಿ ಟೀಚರ್ ಗೆ leave ಲೆಟರ್ ಬರೆದುಕೊಡುವ ಮನೆಯ ಹಿರಿಯ ಮಂದಿ ಕೂಡ ಬರಹಗಾರರೇ! ಒಂದೂರಿಂದ ಮತ್ತೊಂದು ಊರಿಗೋ ಅಥವಾ ಶಾಲೆಗೋ ಹೋಗಬೇಕು ಎಂದಾಗ ಬಹುಶಃ ಟಿಸಿ (transfer certificate) ಬೇಕು ಎಂದು request letter ಬರೆದಿರುತ್ತೇವೆ.

ವಿದ್ಯಾರ್ಥಿಗಳಾದ ನಮ್ಮಲ್ಲಿನ ಬರಹಗಾರ ಎದ್ದೆದ್ದು ಬರುತ್ತಿದ್ದುದು ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ... ಕೆಲವರಿಗೆ ಏನೇನೂ ಉತ್ತರ ಗೊತ್ತಿಲ್ಲದೇ ಹೋದಾಗ "ಗೌರವಾನ್ವಿತ teacher ... ನನ್ನ ಮದುವೆ ಗೊತ್ತಾಗಿದೆ ... ಏನಾದರೂ ಮಾಡಿ ದಯವಿಟ್ಟು ಪಾಸ್ ಮಾಡಿ" ಎಂದೆಲ್ಲಾ ಬರೆಯುವ ಬರಹಗಾರರು ಇದ್ದಾರೆ... ನನ್ನ ಸ್ನೇಹಿತ ಒಮ್ಮೆ geometry ಪರೀಕ್ಷೆಯಲ್ಲಿ ಪ್ರಶ್ನೆ ಕೇಳದೆ ಇದ್ದರೂ ಎರಡು ಪುಟಗಳ pythagoras theorem ಬರೆದಿದ್ದ... marks ಕೊಟ್ಟರೆ ಕೊಡಲಿ ಅಂತ... ಕೊಟ್ಟರೋ ಅಥವಾ ಮಿಕ್ಕ ಮಾರ್ಕ್ಸ್ ಗೂ ಕೊಡಲಿ ಬಿತ್ತೋ ಗೊತ್ತಿಲ್ಲ ಬಿಡಿ...

Different Types Of Authors In Our Daily Life

ಪರೀಕ್ಷೆ ಎಂದಾಗ ನೆನಪಾಗೋದು ಮುಂದಿನ ಸೀಟಿನಲ್ಲಿ ಕೂತಿರುವವನ ಹಾಳೆಯಲ್ಲಿರುವುದನ್ನು ನೋಡಿಕೊಂಡು ಯಥಾವತ್ತಾಗಿ ತನ್ನ ಹಾಳೆಯಲ್ಲಿ ಇಳಿಸುವ ಬರಹಗಾರ... ನಮ್ಮಲ್ಲೊಬ್ಬ ಮುಂದಿನವನ ಹೆಸರು ಮತ್ತು registration number ಸಮೇತ ಕಾಪಿ ಹೊಡೆದು ಸೊನ್ನೆ ತೆಗೆದುಕೊಂಡಿದ್ದ.

ಒಬ್ಬರನ್ನು ನೋಡಿಕೊಂಡು ಬರೆಯುವುದು, ಯಾವುದೋ ಪುಸ್ತಕದಿಂದ ವಿಷಯವನ್ನು ತೆಗೆದುಕೊಂಡು ನೇರವಾಗಿ ಇದ್ದ ಹಾಗೆಯೇ ಬರೆಯುವುದು, ಅಂತರ್ಜಾಲದಿಂದ ಹೆಕ್ಕಿ ಹಾಗೆಯೇ ಬರೆಯುವುದು, ಸಾಮಾಜಿಕ ತಾಣದಿಂದ ಮತ್ಯಾರೋ ಬರೆದಿದ್ದುದನ್ನು ತಮ್ಮದೇ ಎಂದು ಬರೆಯುವುದು ಇತ್ಯಾದಿಗಳು ಕೃತಿಚೌರ್ಯ... ಕೆಲವೊಮ್ಮೆ ಪ್ರಾಮಾಣಿಕ ಬರಹಗಾರ ವಿಷಯಕ್ಕೆ ಮತ್ತೊಬ್ಬರು 'ಇಂಥಾ ಪತ್ರಿಕೆಯಲ್ಲಿ ಇಂಥದ್ದೇ ಬರಹ ಓದಿದ್ದೆ' ಎಂದಾಗ ಅವರ ಜಂಘಾಬಲವೇ ಉಡುಗಿಹೋಗುತ್ತದೆ.

ಚೌರ್ಯದಲ್ಲೇ ಚೌರ್ಯ ನಡೆಯೋದು ಅಂದ್ರೆ ಸಾಮಾಜಿಕ ತಾಣದಲ್ಲಿ. ವಾಟ್ಸಾಪ್ ವಿಷಯವನ್ನೇ ತೆಗೆದುಕೊಂಡರೆ ವಿಷಯವನ್ನು copy paste ಮಾಡಿ ಹಾಕಿದಾಗ ಅದು ಮಹಾಚೌರ್ಯ... ತಿಳಿದೂ ತಿಳಿದೂ ಮಾಡುವ ಈ ಕ್ರಿಯೆ ಮಹಾಚೌರ್ಯವೇ ಸರಿ... ಫೇಸ್ಬುಕ್ ನಲ್ಲೂ ಇಂಥಾ ಮಹಾನ್ ಬರಹಗಾರರಿದ್ದಾರೆ...

ಬರೆದ ವಿಷಯವನ್ನೇ ತಿದ್ದಿ ಬರೆಯುವುದು ಅಪರಾಧವೇ ಸರಿ. ಈ ವಿಷಯದಲ್ಲಿ ನೆನಪಿಗೆ ಬರುವ ಕಥೆ ಎಂದರೆ ಚಂದ್ರಹಾಸನ ಕಥೆ. ದುಷ್ಟಬುದ್ಧಿ ಬರೆದ ಪತ್ರದಲ್ಲಿ 'ವಿಷ' ಅಂತಲೇ ಇತ್ತು ಆದರೆ 'ವಿಷಯೇ' ಅದನ್ನು ತನ್ನ ಹೆಸರಾಗಿ ತಿದ್ದಿ ಚಂದ್ರಹಾಸನನ್ನು ಮದುವೆಯಾದಳು... ಇದು ತಿದ್ದಿದ್ದಲ್ಲ ಬದಲಿಗೆ ಸೇರಿಸಿದ್ದು ಎನ್ನಬಹುದು ಆದರೂ ಅಪರಾಧವೇ ಸರಿ. ಪತ್ರದ ಮೂಲ ವಿಷಯ ತೆಗೆದುಕೊಂಡಾಗ ಅದೊಂದು ಕೊಲೆಯ ತಂತ್ರವೇ ಆಗಿತ್ತು. ಅದಕ್ಕೆ ಹೋಲಿಸಿದರೆ ವಿಷಯೇ ಮಾಡಿದ್ದು ತಪ್ಪಲ್ಲ ಬಿಡಿ.

ಶಾಲೆಯಲ್ಲಿ ತರಲೆ ಮಾಡಿದಾಗ 'ನಾನು ತಪ್ಪು ಮಾಡೋದಿಲ್ಲ' ಅಂತ ನೂರು ಬಾರಿ ಬರೆಯುವ ಬರಹಗಾರರು, ಮೀಟಿಂಗ್ 'ಗಳಲ್ಲಿ ನೋಟ್ಸ್ ಬರೆದುಕೊಳ್ಳುವ ಅಥವಾ shorthand ಲಿಪಿ ಬರೆದುಕೊಳ್ಳುವ, ಕ್ಯಾಲಿಗ್ರಫಿ ಧೀರರು ಹೀಗೆ ದಿನನಿತ್ಯದಲ್ಲಿ ಎಲ್ಲೆಲ್ಲೂ ಬರಹಗಾರರು ಹೇರಳವಾಗಿ ಕಾಣ್ತಾರೆ...

ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಬರೆಯೋದು ಅಂದಾಗ ನೆನಪಿಗೆ ಬರೋದು ಏನು? ಹೌದು, ಕೃಷ್ಣ ದ್ವೈಪಾಯನ ವೇದವ್ಯಾಸರು ನಿರರ್ಗಳವಾಗಿ ಮಹಾಭಾರತ ಶ್ಲೋಕಗಳನ್ನು ಹೇಳುತ್ತಾ ಸಾಗಲು ಮಹಾಗಣಪತಿ ಅರ್ಥೈಸಿಕೊಂಡು ಬರೆಯುತ್ತಾ ಸಾಗಿದ್ದ.

'ಬರಹಗಾರ' ಎಂಬ ವಿಷಯಕ್ಕೆ ನಿಜವಾದ ಅರ್ಥ ಬರೋದು ಇಲ್ಲಿ... ಯಾರನ್ನಾದರೂ ಮಹಾಭಾರತ ಬರೆದವರು ಯಾರು ಎಂದರೆ ಉತ್ತರ ಬರೋದೇನು? "ವೇದವ್ಯಾಸರು" ಅಂತಲೇ ತಾನೇ? ಮಹಾಗಣಪತಿ ಎಂದರೆ ಯಾವ ಮೇಷ್ಟ್ರೂ ಅಂಕ ನೀಡುವುದಿಲ್ಲ. ಬರೆದಾತ ಗಣಪನೇ ಇದ್ದರೂ ಕರ್ತೃ ವೇದವ್ಯಾಸರೇ ! ಹಾಗಾಗಿ ಬರಹಗಾರರು ವ್ಯಾಸರೇ ಅಂತಾಯ್ತು...

ಹಾಗಿದ್ದರೆ ಬರಹಗಾರ ಎಂದರೆ ಯಾರು? ಮತ್ತೊಂದೆಡೆ ಇದ್ದ ವಿಷಯವನ್ನು ಓದಿಕೊಂಡು ಅಥವಾ ತಮಗಾದ ಅನುಭವವನ್ನು ತಮ್ಮದೇ ಧಾಟಿಯಲ್ಲಿ ಮಂಡಿಸುವುದು ಅಥವಾ ಮತ್ತೊಬ್ಬರ ಬರಹವನ್ನು ಓದಿ ಅದಕ್ಕೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಯಾವುದೇ ಬರಹವನ್ನು ಬರೆದವರೂ ಬರಹಗಾರರೇ ಆಗಿರುತ್ತಾರೆ... ಬರವಣಿಗೆಗೆ ಬರೀ ಅಕ್ಷರಗಳಿದ್ದರೆ ಸಾಲದು ಬದಲಿಗೆ ಅವಕ್ಕೆ ಅರ್ಥವಿರಬೇಕು, ತೂಕವಿರಬೇಕು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ತಾಕತ್ ಇರಬೇಕು.

ಬರವಣಿಗೆಯ ಬಗೆ/ಪೈಕಿ ಯಾವುದಿರಬೇಕು? ಬರಹಗಾರನ ಶೈಲಿಯು ಆತ/ಆಕೆ ಯಾವ ರೀತಿ ವ್ಯಕ್ತಪಡಿಸಬೇಕು ಅಂತ ಅಂದುಕೊಳ್ಳುವರೋ ಹಾಗೆ ಇರಬಹುದು, ಇಂಥದ್ದೇ ಆಗಿರಬೇಕು ಅಂತೇನಿಲ್ಲ. ಕಥೆ, ಕವನ, ಕಾದಂಬರಿ, ನಾಟಕ ಹೀಗೆ ಯಾವುದು ಬೇಕಾದರೂ ಆಗಬಹುದು. ಬರವಣಿಗೆ ಯಾವುದೇ ಒಂದು ರಸವನ್ನು ಅಥವಾ ಸಾಧ್ಯವಾದರೆ ನವರಸಗಳನ್ನೂ ಹೊಂದಿರಬಹುದು.

ಇಷ್ಟೆಲ್ಲಾ ಹೊಂದಿದ್ದರೂ ಬರೆದವ ಬರಹಗಾರ ಅನ್ನಿಸಿಕೊಳ್ಳದೇ ಇರಬಹುದು. ನನ್ನ ಅನಿಸಿಕೆಯ ಪ್ರಕಾರ, ಬರೆದಿದ್ದನ್ನು ಒಬ್ಬ ಓದುಗನು ತಾ ಓದಿಕೊಂಡು ತನ್ನನ್ನು ಅದರಲ್ಲಿ ಕಂಡುಕೊಂಡು ಅದನ್ನು ಅನುಭವಿಸುವುದೋ ಅಥವಾ ಅನುಭವಗಳನ್ನು ಹಂಚಿಕೊಳ್ಳಲು ಮುಂದಾಗುವುದೋ ಮಾಡಿದಾಗ ಬರೆದವನೊಬ್ಬ 'ಬರಹಗಾರ' ಎನಿಸಿಕೊಳ್ಳುತ್ತಾನೆ.

ಪ್ರತೀ ಬರಹ ಚಿಂತನೆಗಳ ತರಂಗವನ್ನೇ ಎಬ್ಬಿಸದಿದ್ದರೂ, ಅಶಾಂತಿಯ ಅಲೆಗಳನ್ನು ಎಬ್ಬಿಸದಿದ್ದರೆ ಸಾಕು. ದ್ವೇಷದ ಕಿಚ್ಚನ್ನು ಹಚ್ಚದಿದ್ದರೆ ಸಾಕು. ಸುಳ್ಳುಸುದ್ದಿಗಳನ್ನು ಹಬ್ಬದಿದ್ದರೆ ಸಾಕು. ಬರೆಯಲು ಸ್ವಾತಂತ್ರ್ಯ ಇದೆ ನಿಜ ಆದರೆ ಮತ್ತೊಬ್ಬರ ಮನದಲ್ಲಿ ಕ್ಷೋಭೆ ಹುಟ್ಟಿಸುವುದಕ್ಕೆ ನಮಗೆ ಸ್ವಾತಂತ್ರ್ಯವಿಲ್ಲ. ಏನಂತೀರಿ?

English summary
Who is a writer? In Simple sense, one who writes are all writers. There are different types of writers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X