ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಾಗ್ರಹದ ನಿಜವಾದ ಅರ್ಥ ಏನೆಂದು ನಿಮಗೆ ಗೊತ್ತಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊದಲಿಗೆ ನೀವು 'ಸತ್ಯಾಗ್ರಹ' ಪದ ಕೇಳಿಯೇ ಇರುತ್ತೀರಿ ಅನ್ನೋದು ಸತ್ಯ. ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಬಗ್ಗೆ ಕೇಳಿ ಅಥವಾ ಪಠ್ಯದಲ್ಲಿ ಓದಿ ಬಲ್ಲೆವು.

ಸತ್ಯಾಗ್ರಹ ಎಂದರೆ ಸತ್ಯಕ್ಕಾಗಿ ಆಗ್ರಹಿಸೋದು ಅಂತರ್ಥ. ಒಂದು ಚಿಕ್ಕ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳೋಣ. ಒಬ್ಬ ತಾನು ಕೂಡಿಟ್ಟ ಹಣವನ್ನು 'ಸ್ನೇಹಿತ' ಎಂದುಕೊಂಡವನಲ್ಲಿ ಕೊಟ್ಟು ತೀರ್ಥಯಾತ್ರೆಗೆ ಹೋಗಿ ವರ್ಷದ ನಂತರ ಹಿಂದಿರುಗುತ್ತಾನೆ. ಬಂದ ಮೇಲೆ ಹಣವನ್ನು ವಾಪಸ್ ಪಡೆಯಲು ಆ ಸ್ನೇಹಿತನಲ್ಲಿ ಹೋದಾಗ ಅವನು 'ನನ್ನಲ್ಲಿ ನೀನು ಯಾವ ಹಣವನ್ನೂ ನೀಡಿಲ್ಲ' ಎಂದು ಅಸತ್ಯವನ್ನು ನುಡಿಯುತ್ತಾನೆ. ಹಣ ಕೊಟ್ಟವನು ನ್ಯಾಯದ ಮೊರೆ ಹೋಗುತ್ತಾನೆ. ಯಾವಾಗ ಅಸತ್ಯವು ಸೋತು, ಸತ್ಯ ಗೆಲ್ಲುತ್ತೋ ಆಗ ನ್ಯಾಯ ದೊರಕಿತು. ನಾನು ಹೇಳಲು ಹೊರಟಿದ್ದು ಇಷ್ಟೇ, ಸತ್ಯಕ್ಕೂ ನ್ಯಾಯಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಹಾಗಾಗಿಯೇ ಸತ್ಯಾಗ್ರಹವನ್ನು ನಡೆಸುವವರು, "ಬೇಕೇ ಬೇಕು ಸತ್ಯ ಬೇಕು" ಎನ್ನದೇ "ಬೇಕೇ ಬೇಕು ನ್ಯಾಯ ಬೇಕು ಅನ್ನೋದು", ಒಪ್ಪುತ್ತೀರಾ?

ದಿನವೊಂದರಲ್ಲಿ ನಾವು ಏನೇನೆಲ್ಲಾ ಕಟ್ಟುತ್ತೇವೆ ಅಲ್ಲವಾ?ದಿನವೊಂದರಲ್ಲಿ ನಾವು ಏನೇನೆಲ್ಲಾ ಕಟ್ಟುತ್ತೇವೆ ಅಲ್ಲವಾ?

ಇತಿಹಾಸ ಹೇಳುವ ಪ್ರಕಾರ ಸತ್ಯಾಗ್ರಹ ಅನ್ನುವುದನ್ನು ಗಾಂಧೀಜಿಯವರೇ ಶುರು ಮಾಡಿದ್ದು. ಸತ್ಯಾಗ್ರಹ ಅನ್ನೋದು ಅಹಿಂಸಾತ್ಮಕ ರೂಪದಲ್ಲಿ ನಡೆಸುವ ನ್ಯಾಯಕ್ಕಾಗಿಯ ಹೋರಾಟ. ಶಾಂತ ರೀತಿಯಲ್ಲೇ, ಅಂದರೆ ಪ್ರಜೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮೆರವಣಿಗೆ ಹೊರಡುವುದೂ ಆಗಬಹುದು ಅಥವಾ ಆಮರಣಾಂತ ಅನ್ನ- ನೀರು ಸ್ವೀಕರಿಸದ ಉಪವಾಸ ಸತ್ಯಾಗ್ರಹವೂ ಆಗಬಹುದು. ಇಲ್ಲಿ ಯಾವುದೇ ರೀತಿ ಕೂಗಾಟ ಅರಚಾಟ ಇರುವುದಿಲ್ಲ ಎಂದುಕೊಳ್ಳಬಹುದು.

Different Type Of Protest In World

ಮೌನ ಅಸಹನೀಯ... ಒಂದು ಮನೆಯಲ್ಲಿ ಏನೋ ಒಂದು ಅಸಮಾಧಾನ ಹರಡಿದಾಗ ರೇಗಾಡಿ ಕೂಗಾಡಿ ತಮ್ಮ ಆಕ್ರೋಶ ಹೊರಗೆ ಹಾಕೋದು ಒಂದು ರೀತಿ. ಇದಕ್ಕೆ ವಿರುದ್ಧವಾಗಿ ಸೂಜಿ ಬಿದ್ದರೂ ಕೇಳಿಸುವಂಥಾ ಮೌನ ಅಲ್ಲಿ ಏರ್ಪಟ್ಟಿತು ಎಂದಾಗ ಅರಚಾಟಕ್ಕಿಂತಲೂ ಭೀಕರ. ಮೌನ ಒಂದು ಅಗ್ನಿಪರ್ವತದಂತೆ. ಯಾವಾಗ ಸ್ಫೋಟವಾಗುತ್ತೋ ಅರಿವೇ ಆಗೋದಿಲ್ಲ. ಮೌನ ರಣಬಿಸಿಲಿನಿಂದ ಒಣ ಹವೆ ಹೊತ್ತ ಗಾಳಿಯಂತೆ. ಒಂದು ಸಣ್ಣ ಕಿಡಿ ಸಾಕು ಭುಗಿಲೆದ್ದು ಕಾಳ್ಗಿಚ್ಚಾಗಲು. ಇದೇ ಸತ್ಯಾಗ್ರಹದ ಮೂಲ ಸೂತ್ರ.

ಇದರಂತೆಯೇ ಉಪವಾಸ ಸತ್ಯಾಗ್ರಹ ಕೂಡ. ಅನ್ನ ನೀರು ಬಿಟ್ಟು ಮೌನವಾಗಿ ಒಂದೆಡೆ ಕೂತವರು ಅಶಕ್ತರಾಗುತ್ತಾ ಸಾಗುತ್ತಾರೆ. ದಿನಗಳು ಏರುತ್ತಾ ಸಾಗಿದಂತೆ ಉಪವಾಸ ಕೂತ ವ್ಯಕ್ತಿ ಮರಣವನ್ನೂ ಹೊಂದಬಹುದು ಎಂಬ ಭೀತಿಯೇ ಆ ಸನ್ನಿವೇಶದ ಮೂಲ ಸೂತ್ರ. ಅರ್ಥಾತ್ ಉಪವಾಸ ಕೂತ ವ್ಯಕ್ತಿ ಇದೇ ಕಾರಣಕ್ಕೆ ಮರಣ ಹೊಂದಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಮತ್ತು ಜನ ರೊಚ್ಚಿಗೇಳಬಹುದು ಎಂಬ ಆಲೋಚನೆಯೇ ಇಂಥಾ ಸತ್ಯಾಗ್ರಹಗಳು ಮಾಮೂಲಿಗಿಂತ ಬೇಗ ಒಂದು ಒಪ್ಪಂದಕ್ಕೆ ಬರುತ್ತದೆ. ಮನೆಯಲ್ಲೇ ತೆಗೆದುಕೊಂಡರೆ ಕೆಲವರಿಗೆ ಸಿಟ್ಟು ಬಂದಾಗ ಮೊದಲು ಊಟ ಬಿಡ್ತಾರೆ.

ನಾಟಕ ಮುಗಿದ ಮೇಲೆ ಕಳಚಿ ಇಡುವ ಪರಿ; ಎಲ್ಲದರಲ್ಲೂ ಶಿಸ್ತಿರಲಿನಾಟಕ ಮುಗಿದ ಮೇಲೆ ಕಳಚಿ ಇಡುವ ಪರಿ; ಎಲ್ಲದರಲ್ಲೂ ಶಿಸ್ತಿರಲಿ

ಭೈಠಕ್ ಅಥವಾ ಧರಣಿ ಮುಷ್ಕರ ಎನ್ನುವುದು ಕೂತು ನ್ಯಾಯಕ್ಕಾಗಿ ಹೋರಾಡುವುದು. ಬಹುಶಃ ವಿಧಾನಸೌಧದ ಸುತ್ತಮುತ್ತ ಧರಣಿಯ ಡೇರೆಗಳನ್ನು ನೋಡಿರಬಹುದು. ಯಾವುದೋ ಒಂದು ಬೇಡಿಕೆಗಾಗಿ ಅಲ್ಲಿ ಜನ ಮುಷ್ಕರ ಹೂಡಿ ಕುಳಿತಿರುತ್ತಾರೆ. ಸರದಿಯ ಪ್ರಕಾರ ಅಲ್ಲಿ ಧರಣಿ ಕುಳಿತು, ಡೇರೆಯ ಮುಂದೆ ಘೋಷಣೆಗಳನ್ನೂ ಕೂಗಿಕೊಂಡು ಧರಣಿಯ ಉದ್ದೇಶವನ್ನು ಜನರಿಗೆ ತಿಳಿಯಪಡಿಸುತ್ತಾರೆ. ಕೆಲವೊಮ್ಮೆ ಪ್ರಿಂಟೆಡ್ ಕರಪತ್ರ ಹಂಚುತ್ತಾರೆ. ಹಲವೊಮ್ಮೆ 'ನ್ಯಾಯ ಬೇಕು' ಎಂಬ ಕೂಗಾಟ ಇರುತ್ತೆ. ತಮ್ಮ ಅಹವಾಲನ್ನು ರಾಜಕೀಯ ಮುಖಂಡರಿಗೆ ತಲುಪುವಂತೆ ನಿರಂತರ ಯತ್ನ ನಡೆಸುತ್ತಾರೆ.

Different Type Of Protest In World

ಕೆಲವೊಮ್ಮೆ ಮುಷ್ಕರ ರೂಪದಲ್ಲಿ ನದಿ ಇರುತ್ತದೆ. ಒಂದು ಸ್ಥಳದಿಂದ ಗುಂಪಾಗಿ ಜನರು ಹೊರತು ಇನ್ನೊಂದೆಡೆ ಸೇರುವ ತನಕ "ಬೇಕೇ ಬೇಕೇ ನ್ಯಾಯ ಬೇಕು... ಎಲ್ಲೀವರೆಗೆ ಹೋರಾಟ? ನ್ಯಾಯ ಸಿಗೋವರೆಗೂ ಹೋರಾಟ. downwith..." ಇತ್ಯಾದಿ ಘೋಷಣೆ ಕೂಗುತ್ತಾ, ರಸ್ತೆಯ ಒಂದು ಬದಿಯಲ್ಲಿ bannerಗಳನ್ನು ಹಿಡ್ಕೊಂಡು ಸಾಗುತ್ತಿರುತ್ತಾರೆ. ಅವರನ್ನು ಒಂದು ಬದಿಗೆ ಸಾಗುವಂತೆ ನಿಯಂತ್ರಿಸುವ ಪೊಲೀಸರು. ಸಾಮಾನ್ಯವಾಗಿ ಇದು ಶಾಂತಿಯುಕ್ತ ರಾಸ್ತಾ ಮಾರ್ಚ್. ಇದರ ಮುಂದಿನ ಹೆಜ್ಜೆ ಎಂದರೆ ಜನರಿಗೆ ತೊಂದರೆಯಾಗುವಂತೆ ಮಾಡೋದು. ರಾಸ್ತಾ ರೋಕೋ ರಸ್ತೆಯ ಅಡೆತಡೆ. ರಸ್ತೆಯ ಮೇಲೆ ಕೂಡೋದು ಅಥವಾ ಮಲಗೋದು ಇತ್ಯಾದಿ ರೀತಿಯಲ್ಲಿ ಹರತಾಳ. ಇದರಿಂದ ಗಲಾಟೆ ಆಗುವ ಸಂಭವ ಹೆಚ್ಚು.

ಇವೆಲ್ಲಕ್ಕಿಂತ ಒಂದು ಹಂತ ಮೇಲೆ ಎಂದರೆ "ಬಂದ್". ಸಾರ್ವಜನಿಕರ ಆಸ್ತಿಯನ್ನು ಹಾಳು ಮಾಡುವುದೇ ಮುಖ್ಯ ಉದ್ದೇಶ ಎಂದು ಅಂದುಕೊಂಡಿರುವ ಪೈಕಿ. ಬೆಂಗಳೂರು ಬಂದ್, ಮೈಸೂರು ಬಂದ್, ಮಂಗಳೂರು ಬಂದ್, ಕರ್ನಾಟಕ ಬಂದ್, ಭಾರತ್ ಬಂದ್ ಒಂದೇ ಎರಡೇ?

ಸಂಜೆಯ ವಾರ್ತಾಪ್ರಸಾರದಲ್ಲಿ "ಬಂದ್ ಯಶಸ್ವಿ" "ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಿದ್ದವು" ಇತ್ಯಾದಿ ಸುದ್ದಿ ತುಣುಕುಗಳು ಮತ್ತು ಖಾಲಿ ಹೊಡೆಯುವ ಬೀದಿಗಳ ಚಿತ್ರಗಳು. ಇವು ಸರ್ವೇಸಾಧಾರಣ. ಇದಕ್ಕೆ ವಿರುದ್ಧವಾಗಿ "ಬಂದ್ ಸಮಯದಲ್ಲಾದ ಗಲಭೆ ತೀವ್ರ ಸ್ವರೂಪಕ್ಕೆ ತಿರುಗಿ ..." ಅಂತೆಲ್ಲಾ ಆದರೆ ಒಂದಷ್ಟು ಕಡೆ ಅಗ್ನಿದೇವ ಕೂಡ ಕಾಣಿಸಿಕೊಂಡಿರುತ್ತಾನೆ ಅಂತರ್ಥ.

'ಪ್ರತಿಭಟನೆ' ಮುಷ್ಕರದ ಮತ್ತೊಂದು ರೂಪ. ಆದರೆ ಸದಾ ಸರ್ವದಾ ಪ್ರತಿಭಟನೆಗಳು ಗಲಭೆಯಲ್ಲೇ ಕೊನೆಗೊಳ್ಳುತ್ತೆ. ಗಲಭೆ ಎಂದಾದಾಗ ನಷ್ಟ ಕಟ್ಟಿಟ್ಟ ಬುತ್ತಿ. ಹಲವೊಮ್ಮೆ ಸಾರ್ವಜನಿಕರ ಆಸ್ತಿಯ ನಷ್ಟದಿಂದ ಮುಂದೆ ಸಾಗಿ ತಪ್ಪನ್ನೇ ಎಸಗದವರಿಗೆ ಪೆಟ್ಟು ಬೀಳೋದಿದೆ, tear gas ಸಿಡಿಯೋದಿದೆ, ಕರ್ಫ್ಯೂ ಆಗೋದಿದೆ, ಲಾಠಿ ಏಟು ತಿಂದು ರಕ್ತ ಸುರಿಸಿಕೊಳ್ಳೋದಿದೆ ಅಥವಾ ಆಸ್ಪತ್ರೆಗೆ ಸೇರುವುದೂ ಇದೆ. ಪ್ರತೀ ಬಾರಿ ಬಂದ್ ಶುರುವಾಗಿ ಮುಗಿಯಿತು ಎಂದಾದಾಗ, ಒಂದಷ್ಟು ಬೀದಿ ದೀಪಗಳು, ಒಂದಷ್ಟು ಅಂಗಡಿ ಮುಂಗಟ್ಟಿನ ಗಾಜುಗಳು, ಬೀದಿ ಬದಿಯಲ್ಲಿ ನಿಲ್ಲಿಸಿರುವ ಕಾರಿನ ಗಾಜು, ಇನ್ನೂ ಹೆಚ್ಚು ತೀವ್ರವಾದರೆ ಬೈಕು, ಕಾರು ಮತ್ತು ಬಸ್ಸುಗಳಿಗೆ ಬೆಂಕಿ.

ಸಾರ್ವಜನಿಕರ ಆಸ್ತಿ ಹಾಳು ಮಾಡುವುದಕ್ಕೆ ಇವರುಗಳಿಗೆ ಅಧಿಕಾರ ಕೊಟ್ಟವರಾರು? ಮೊದಲಿಗೆ ಇವರೂ ಸಾರ್ವಜನಿಕರೇ ಅಲ್ಲವೇ? ನ್ಯಾಯಕ್ಕಾಗಿ ಹೋರಾಡುವ ನೆಪದಲ್ಲಿ ಸಾರ್ವಜನಿಕರ ಆಸ್ತಿಯನ್ನು ಹಾಳು ಮಾಡುವ ಇವರು ತಮ್ಮ ತಮ್ಮ ಮನೆಗಳಲ್ಲಿ ವಸ್ತುಗಳನ್ನೂ ಹೀಗೆಯೇ ಹಾಳುಗೆಡವುತ್ತಾರೆಯೇ? ಕೆಲವೊಮ್ಮೆ ಪ್ರಾಣಹಾನಿ ಆಗುತ್ತಲ್ಲಾ ಅದಕ್ಕೆ ಹೊಣೆಯಾರು? ನನ್ನ ಜೀವನದ ಒಂದು ಅನುಭವ ಹೀಗಿದೆ.

Different Type Of Protest In World

ನಾವು ಎಚ್ ಎಎಲ್ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ದಿನಗಳಲ್ಲಿ, ನಾನು ಅಕ್ಕನೊಡನೆ ಸಿಟಿಯಲ್ಲಿದ್ದ ಸ್ಕೂಲಿಗೆ ಹೋಗಿ ಬರುವುದು ನಡೆದಿತ್ತು. ನಾನು ಆಗಿನ್ನೂ ಬಹುಶಃ ಆರನೆಯ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಹೀಗೇ ಒಮ್ಮೆ ಸಿಟಿ ಮಾರ್ಕೆಟ್ ನಲ್ಲಿ ಬಸ್ ಹತ್ತಿಕೊಂಡು ಬರುವ ಮಾರ್ಗ ಮಧ್ಯೆ ಇದ್ದಕ್ಕಿದ್ದ ಹಾಗೆ ಯಾವುದೋ strike. ಎಲ್ಲ ಬಸ್ಸುಗಳೂ ನಿಂತಲ್ಲೇ ನಿಂತು ಬಿಡ್ತು. ಚಾಲಕನಿಗೆ ವಿಧಿಯಿಲ್ಲ, ಪ್ರತಿಭಟನೆ ನಡೆಸುವವರಿಗೆ ಸಾರ್ವಜನಿಕರ ಬಗ್ಗೆ ಕಾಳಜಿಯಿಲ್ಲ. ದೊಮ್ಮಲೂರಿನಿಂದ ಸ್ಕೂಲ್ ಬ್ಯಾಗ್ ಸಮೇತ ಮನೆಯೆಡೆ ನಡಿಗೆ ಶುರು. ಸಂಜೆ ಐದೂವರೆಯಿಂದ ನಡೆಯಲು ಶುರುಮಾಡಿದ್ದಕ್ಕೆ ಬಹುಶಃ ಏಳೂವರೆಗೆ ಮನೆ ತಲುಪಿದೆವು ಅನ್ನಿಸುತ್ತೆ. ಆದರೆ ಇದೇ ಗಲಾಟೆಯ ಸಮಯದಲ್ಲಿ ದೊಮ್ಮಲೂರಿನ ಸುತ್ತಲಿನ ಒಂದು ಸಣ್ಣ ಊರಿನ ಕ್ಲಿನಿಕ್ ನ ವೈದ್ಯರು ಬಲಿಯಾದರು ಅಂತ ಆಮೇಲೆ ಗೊತ್ತಾಯ್ತು. ಕಾರಣ? ಕ್ಲಿನಿಕ್ ಮುಚ್ಚುವುದನ್ನು ಬಿಟ್ಟು ರೋಗಿಗಳನ್ನು ನೋಡುತ್ತಿದ್ದರು ಅಂತ! ಇದು ಯಾವ ಸೀಮೆ ಗಲಭೆ ಅಂತೀನಿ? ಸಾರ್ವಜನಿಕರ ಆಸ್ತಿಗೆ ಬೆಲೆಯಿಲ್ಲ, ಕೊನೆಗೆ ಜೀವಕ್ಕೂ ಬೆಲೆಯಿಲ್ಲ.

ದೇವನೊಬ್ಬ ನಾಮ ಹಲವು ಎಂಬಂತೆ ಈ ಸತ್ಯಾಗ್ರಹ ಪದ್ಧತಿಗೆ ಹಲವಾರು ನಾಮಗಳು. ಈಗಾಗಲೇ ಕಂಡಿರುವಂತೆ ಮುಷ್ಕರ, ಹರತಾಳ, ಧರಣಿ ಮುಷ್ಕರ, ಬಂದ್, ಸ್ಟ್ರೈಕ್. ಹಲವು ರೂಪಗಳು ಎಂದರೆ ಪ್ರತಿಭಟನೆ, ರಸ್ತೆಯ ತಡೆ, ಅಂಗಡಿ ಮುಂಗಟ್ಟು ವಹಿವಾಟು ಮುಚ್ಚುವುದು ಇತ್ಯಾದಿ. ಇದರಿಂದಾಗಬಹುದಾದ ನಷ್ಟಗಳು ಎಂದರೆ ಗಾಜು ಒಡೆಯುವಿಕೆ, ಬೀದಿ ದೀಪಗಳ ಪ್ರಾಣಾರ್ಪಣೆ, ಕರ್ಫ್ಯೂ, teargas, ಲಾಠಿ ಬಡಿತ, ಕಂಡಲ್ಲಿ ಗುಂಡು, ರಕ್ತ ಹರಿಯುವಿಕೆ ಮತ್ತು ದುರದೃಷ್ಟವಶಾತ್ ಪ್ರಾಣ ಹಾನಿ ಕೂಡ.

ದಿನನಿತ್ಯದಲ್ಲಿ ನಮ್ಮ ಸುತ್ತ ನಡೆಯುವ ವಿಷಯಗಳಲ್ಲಿ ಎಲ್ಲವನ್ನೂ ನಾವು ಸಹಿಸಲೇಬೇಕು ಅಂತಿಲ್ಲ. ಸುಮ್ಮನೇಕೆ ಉಸಾಬರಿ ಅಂತಾದ್ರೆ ಅದು ಬೇರೆ ವಿಷಯ, ಆದರೆ ನ್ಯಾಯ ಬೇಕು ಎಂದು ಹೋರಾಡುವ ಇರಾದೆ ಇದ್ದರೆ ಅದು ಶಾಂತಿಯುತವಾಗಿ ಇಲ್ಲದೇ ಹೋದರೂ ಅಹಿಂಸಾತ್ಮಕವಾಗಿರಲಿ. ಒಗ್ಗಟ್ಟಿನಲ್ಲಿ ಬಲವಿದೆ ಆದರೆ ಆ ಬಲ ನ್ಯಾಯಕ್ಕಾಗಿ ಹೋರಾಡುವ ಒಗ್ಗಟ್ಟಿಗೆ ಸೀಮಿತವಿರಲಿ, ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವಂಥಾ ಬಲ ಆಗದಿರಲಿ.

"ತಮಸೋ ಮಾ ಜ್ಯೋತಿರ್ಗಮಯ" - ಈ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮನಗಳಲ್ಲಿ ಗೂಡು ಕಟ್ಟಿರುವ ಅಂಧಕಾರ ತೊಲಗಲಿ. ಬೆಳಗುವ ಬೆಳಕು ಜ್ಞಾನದ ಜ್ಯೋತಿಯಾಗಿ ನಮ್ಮ ಅಂಧಕಾರವನ್ನು ತೊಡೆದು ಹಾಕುವುದೇ ಅಲ್ಲದೆ ಬೇರೆಯವರ ಬಾಳಲ್ಲಿ ಒಂದು ಸಣ್ಣ ಭರವಸೆಯ ಬೆಳಕು ಮೂಡಿಸಿದರೂ ನಮ್ಮ ಜೀವನ ಸಾರ್ಥಕವಾದಂತೆ.

ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು !!!

English summary
Satyagraha means seeking for truth. Truth and justice are closely related.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X