• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ವಿದಾಯ ಹೇಳೋಣ ಬನ್ನಿ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ವಿದಾಯ ಪದ ಕೇಳಿದೊಡನೆ ನನಗೆ ಬಿಪಿ ನೆನಪಾಗೋದು ಯಾಕೆ ಎಂಬ ಪ್ರಶ್ನೆ ಕೇಳುತ್ತಲೇ ಇಂದಿನ ಬರಹ ಆರಂಭಿಸುವಾ. ಕೆಲವರಿಗೆ ವಿದಾಯ ಪದ ಬಿಪಿ ಏರುತ್ತೆ, ಹಲವರಿಗೆ ಬಿಪಿ ಇಳಿಯಲೂಬಹುದು. ನಾನು ಸದಾ ಕಾಲ ಹೇಳುವಂತೆ ಇಲ್ಲೂ ಹೇಳುವುದಾದರೆ ಈ ವಿದಾಯ ಅನ್ನೋದು ಕೂಡ ಸಾಂದರ್ಭಿಕ. ಮೊದಲಿಗೆ ನನಗೆ ಈ ವಿದಾಯ ಪದ ಬಿಪಿ ಏರೋದರ ಅಥವಾ ಇಳಿಯೋದರ ಬದಲಿಗೆ ನೆನಪಾಗೋದು ಯಾಕೆ ಅಂತ ಕೇಳಿ, ನಾನು ಹೇಳ್ತೀನಿ. ಓಹ್ ! ಕೇಳಿದ್ರಾ? ಕೇಳಿಸಲೇ ಇಲ್ಲ, ಸಾರಿ.

ಬಿಪಿ ಎಂಬುದು ಬ್ಲಡ್ ಪ್ರೆಷರ್ ಅರ್ಥಾತ್ ರಕ್ತ ಒತ್ತಡದ ಆಂಗ್ಲ ಪದಪುಂಜದ ಹ್ರಸ್ವರೂಪ. ಏರುವುದು ಅಥವಾ ಇಳಿಯುವ ಬಿಪಿ ಅನ್ನೋದು ಈ ಬಿಪಿ. ಆದರೆ, ನನಗೆ ನೆನಪಾಗೋ BP - ಬೀಗರ ಪಂದ್ಯ ಚಿತ್ರ. ಆ ಚಿತ್ರದಲ್ಲಿನ ಒಂದು ಸುಮಧುರ ಗೀತೆ - ಮನಸು ಹೇಳಬಯಸಿದೆ ನೂರೊಂದು, ತುಟಿಯ ಮೇಲೆ ಬಾರದಿದೆ ಮಾತೊಂದು. ಹೀಗೆ ಆರಂಭವಾಗುವ ಈ ಹಾಡು ನಂತರದಲ್ಲಿ "ವಿದಾಯ ಗೆಳೆಯನೇ, ವಿದಾಯ ಗೆಳತಿಯೇ, ವಿದಾಯ ಹೇಳಬಂದಿಹೆನು ನಾನಿಂದು" ಎಂದಿದೆ.

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ snowball ಪರಿಣಾಮ ಎಂದರೆ ಏನು?ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ snowball ಪರಿಣಾಮ ಎಂದರೆ ಏನು?

ಈ ಹಾಡಿನ ಸನ್ನಿವೇಶ ನಾ ತಿಳಿದಂತೆ ಕಾಲೇಜಿನ ದಿನಗಳು ಮುಗಿದು ಮುಂದಿನ ದಾರಿಗೆ ಹೊರಡುವ ಮುನ್ನದ ಬೀಳ್ಕೊಡುಗೆಯ ಸಮಾರಂಭ. ವಿದ್ಯಾರ್ಥಿಗಳಲ್ಲಿ ಸರ್ವೇಸಾಮಾನ್ಯವಾಗಿ ಎರಡೂ ಬಗೆಯವರು ಇರುವುದರಿಂದ ಅಧ್ಯಾಪಕರಿಗೆ ಮಿಶ್ರಭಾವನೆ. ಆದರೆ ಕಣ್ಣೀರೊಂದೇ. ಅದು ದುಃಖವೋ, ಆನಂದಭಾಷ್ಪವೋ ಸಾಂದರ್ಭಿಕ. ಒಂದಂತೂ ನಿಜ, ಅಲ್ಲಿರುವಾಗ ವಿದ್ಯಾರ್ಥಿಗಳು ಇನ್ನಷ್ಟೇ ಮಹಾತರಳೆತನ ಮಾಡಿದ್ದರೂ, ಅಧ್ಯಾಪಕರು ಮನದಲ್ಲೇ ಬೈದುಕೊಂಡಿದ್ದರೂ, ಅವರು ಹೊರಗೆ ಹೋಗುವ ದಿನವಂತೂ ಕೆಡುಕು ನುಡಿಯಂತೂ ಆಡುವುದಿಲ್ಲ.

ಈ ವಿದಾಯವು, ಸದ್ಯ ಓದು ಮುಗೀತಲ್ಲಾ ಎಂಬ ಸಂತಸ ಕೆಲವು ವಿದ್ಯಾರ್ಥಿಗಳಲ್ಲಿ ಮೂಡಿಸಿದರೆ, ಮುಂದೇನು ಎಂಬ ಭೀತಿ ಕೆಲವರಲ್ಲಿ. ಬಿಡಿ, ಈ ವಿದಾಯ ನಮ್ಮೆಲ್ಲರ ಜೀವನದಲ್ಲೂ ಬಂದೇ ಇದೆ.

ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...

ವಿದಾಯ ಎಂದರೆ ಬೀಳ್ಕೊಡುಗೆ ಅಂತಲೂ ಅರ್ಥ. ಆಂಗ್ಲದಲ್ಲಿ goodbye ಎಂಬ ಬಳಕೆಯಿಂದ ಈ ವಿದಾಯ ಎಂಬುದನ್ನು ಕೊನೆಯ ಭೇಟಿ ಎಂಬಂತೆ ಅರ್ಥೈಸಿಕೊಳ್ಳಲಾಗುತ್ತದೆ. ಬೀಳ್ಕೊಡುಗೆ ಎಂದು ಬಳಸಿ ನೋಡಿದಾಗ send off ಎಂಬುದಾಗಿ ಅರ್ಥವಾಗುತ್ತದೆ. ಮದುವೆಯಾದ ಹೆಣ್ಣುಮಗಳನ್ನು ಆಕೆಯ ಅತ್ತೆ ಮನೆಗೆ ಕಳುಹಿಸಿಕೊಡುವುದು ಬೀಳ್ಕೊಡುಗೆಯೇ ವಿನಃ ವಿದಾಯವಲ್ಲ. ಬಹಳ ಹಿಂದಿನ ದಿನಗಳಲ್ಲಿ ಕಾಶಿಯ ಕಡೆ ಹೊರಟವರು ವಿದಾಯ ಹೇಳಿಯೇ ಹೋಗುತ್ತಿದ್ದರಂತೆ. ಬಾರದೇ ಹೋಗುವುದು ಸಾಮಾನ್ಯ ನೋಟವಾದರೆ, ಅಕಸ್ಮಾತ್ ವಾಪಸಾದರೆ ಬೋನಸ್ ಅಷ್ಟೇ. ಹಾಗೆ ವಾಪಸ್ ಬಂದವರು ಒಂದು ಸಮಾರಂಭವನ್ನು ಇಟ್ಟುಕೊಂಡು ಬಂಧುಮಿತ್ರರನ್ನು ಭೇಟಿಯಾಗುತ್ತಿದ್ದರಂತೆ.

ಶ್ರಮಜೀವನದ ಹಾದಿಯಲ್ಲಿ ಒಂದು ಕಂಪನಿಯಿಂದ ಮತ್ತೊಂದಕ್ಕೆ ಹಾರುವುದು ಇಂದಿಗೆ ಸಾಮಾನ್ಯ ನೋಟವಾದರೂ ಅಂದಿನ ಕಾಲದಲ್ಲಿ ಹಾಗಿರಲಿಲ್ಲ. ನಮ್ಮ ತಂದೆಯವರ ಉದಾಹರಣೆಯನ್ನೇ ತೆಗೆದುಕೊಂಡರೆ, ಓದು ಮುಗಿದ ನಂತರ factory ಕೆಲಸಕ್ಕೆ ಸೇರಿದವರು, ನಿವೃತ್ತಿಯವರೆಗೆ ಅಲ್ಲಿಯೇ ಇದ್ದವರು. ಎರಡು ವರ್ಷಕ್ಕೊಮ್ಮೆ ಕೆಲಸ ಬದಲಿಸುವವರಿಗೆ ಈ ವಿದಾಯ ಎಂಬ ಕಾರ್ಯಕ್ರಮವೂ ಇರಲಿಕ್ಕಿಲ್ಲ. ಇಪ್ಪತ್ತೈದು-ಮೂವತ್ತು ವರ್ಷ ಒಂದೆಡೆ ಕೆಲಸ ಮಾಡಿರುವ ಮಂದಿಗೆ ಆ ನಿವೃತ್ತಿಯ ದಿನ ಅರ್ಥಾತ್ ವಿದಾಯದ ದಿನ ಅತ್ಯಂತ ಮಹತ್ವಪೂರ್ಣದ್ದೇ ಆಗಿರುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ವಿಷಯವೇ ಇಲ್ಲದ ವಿಚಾರಗಳ ಮಂಥನಶ್ರೀನಾಥ್ ಭಲ್ಲೆ ಅಂಕಣ; ವಿಷಯವೇ ಇಲ್ಲದ ವಿಚಾರಗಳ ಮಂಥನ

ಹೋಗಿಬನ್ನಿ ಎಂದು ನುಡಿವ ಬೀಳ್ಕೊಡುಗೆ ಕಾರ್ಯಕ್ರಮವೇ ಆಗಿದ್ದರೂ, ಹಲವರಿಗೆ ಇದು ವಿದಾಯವೇ ಆಗಿದ್ದು, ಬೀಳ್ಕೊಡುಗೆ ಎನಿಸುವುದಿಲ್ಲ. ಅವರ ಅವಿಭಾಜ್ಯ ಅಂಗವೇ ಆಗಿದ್ದ ಅಲ್ಲಿನ ಮೇಜು, ಅಲ್ಲಿನ ಖುರ್ಚಿ, ಆ ಫೈಲ್, ಆ ಬೀರು ಇತ್ಯಾದಿಗಳೆಲ್ಲಾ ಅವರಿಂದ ದೂರವೇ ಆಗುವುದರಿಂದ ಅದೊಂದು ವಿದಾಯವೇ ಸರಿ.

ಇಪ್ಪತ್ತು ವರುಷಗಳ ಹಿಂದೆ ದೇಶ ಬಿಟ್ಟು ಪರದೇಶಕ್ಕೆ ಬರುವಾಗ ನನಗೆ ಸಿಕ್ಕಿದ್ದು ಬೀಳ್ಕೊಡುಗೆಯೇ ವಿನಃ ವಿದಾಯ ಅಲ್ಲ. ವಿದೇಶಕ್ಕೆ ಎಂದು ಬರುವವರೆಲ್ಲಾ ಸ್ವದೇಶಕ್ಕೆ ವಿದಾಯ ಹೇಳಿಯೇ ಬರುತ್ತಾರೆ ಎಂಬುದು ಹಲವರ ಹೃದಯದಲ್ಲಿ ಅಚ್ಚಾಗಿದೆ. ಎಲ್ಲರ ಹೃದಯದಲ್ಲೂ ನುಗ್ಗಿ ನಾನದನು ಅಳಿಸಲಾರೆ ಬಿಡಿ. ಇದ್ದ ನೆಲದಲ್ಲೇ ಉಳಿದ ಮಾತ್ರಕ್ಕೆ ಅದು ಪ್ರೀತಿ, ಹೊರಗೆ ನಡೆದರೆ ಅದು ವಿದಾಯ ಎಂಬುದು ತಪ್ಪು. ದೇಶ ಬಿಟ್ಟು ಹೊರಗೆ ಬಂದ ನಾವು ಒಂದು ರೀತಿ ತವರ ಬಿಟ್ಟು ಅತ್ತೆಯ ಮನೆಗೆ ನಡೆದ ಹೆಣ್ಣು ಮಗಳಂತೆ. ಎರಡೂ ಮನೆಯ ಜವಾಬ್ದಾರಿ ಅವರ ಹೆಗಲ ಮೇಲೆ ಇರುವಂತೆ ನಮಗೂ ಸಹ.

ಇಷ್ಟಕ್ಕೂ ಈ ವಿದಾಯದ ಆಲೋಚನೆ ನನ್ನಲ್ಲಿ ಮೂಡಿದ್ದಾದರೂ ಏಕೆ? ಕಳೆದ ವಾರದಲ್ಲಿ ರಾತ್ರಿಯ ವೇಳೆಯಲ್ಲಿ ಉಷ್ಣಾ೦ಶ ಗಮನೀಯವಾಗಿ ಇಳಿದಿತ್ತು. ಹಸಿರಾಗಿ ನಲಿದಾಡುತ್ತಿದ್ದ ಹಲವಾರು ಗಿಡಗಳು ಸೊರಗತೊಡಗಿತ್ತು. ಭುವಿಯಲ್ಲಿ ಬೇರೂರಿರುವ ಹೂವಿನ ಗಿಡಗಳು, ಬಾಳೆಯ ಗಿಡಗಳು ಮತ್ತು ತುಳಸಮ್ಮ ಎಲ್ಲರೂ ಸಮಾನರಾಗಿ ವಿದಾಯ ಹೇಳಿದ್ದರು. ಹೂವಿನ ಗಿಡಗಳ ಮತ್ತು ಬಾಳೆಯ ಗಿಡದ ಬೇರು ಇನ್ನೂ ಭುವಿಯಲ್ಲೇ ಇರುವುದರಿಂದ ಮುಂದಿನ ವರ್ಷ ಮತ್ತೊಮ್ಮೆ ಚಿಗುರೊಡೆದು ಮೂಡುತ್ತವೆ. ಇನ್ನು ಮನೆಯ ತುಳಸೀವನ ತಾನು ಹೊರಟರೂ ನೂರಾರು ಬೀಜಗಳನ್ನು ಭುವಿಗೆ ಉಣಿಸಿಯೇ ಸಾಗಿರೋದು. ಹಾಗಾಗಿ ಇವರೆಲ್ಲರಿಗೂ ವಿದಾಯ ಹೇಳಿದರೂ ಖಿನ್ನತೆ ಮೂಡಿಸಲಿಲ್ಲ. ಹಲವರ ಜೀವನದಲ್ಲಿ ಮನೆಯ ಮಗನಂತೆ ಇರುವ ಸಾಕುಪ್ರಾಣಿಗಳು ವಿದಾಯ ಹೇಳಿದಾಗ, ಖಿನ್ನತೆ ಮೂಡುವುದು ಸಹಜ.

ಹೋಗಿ ಬನ್ನಿ ಆದರೆ ಮತ್ತೆ ಬನ್ನಿ ಎಂಬುದು ನಮ್ಮ ಮನೆಯ ಗಿಡಗಳಿಗೆ ವಿದಾಯ ಹೇಳುವಾಗ ಆಡಿದ ಮಾತು. ಆದರೆ ಈ ಮಾತುಗಳನ್ನು, ತುಂಬಾ ಸಲೀಸಾಗಿ, ಜೀವನಕ್ಕೆ ವಿದಾಯ ಹೇಳಿದ ಮನುಷ್ಯ ಜೀವಗಳಿಗೆ ಆಡುವಾಗ ಕೊಂಚ ವಿಚಿತ್ರ ಎನಿಸುತ್ತದೆ. ನೀವಿರುವ ಕೊನೆಯ ಗಳಿಗೆಯವರೆಗೂ ನಿರಂತರವಾಗಿ ಮತ್ತೊಬ್ಬರ ಏಳಿಗೆಗಾಗಿಯೇ ದುಡಿದಿರಿ, ಹೋಗಿ ಬನ್ನಿ ಆದರೆ ಮತ್ತೆ ಬೇಗ ಬನ್ನಿ ಎಂದಾಗ ನನಗೆ ಅನ್ನಿಸೋದು ಹೀಗೆ. ನೀವಿರುವ ಕೊನೆಯ ಗಳಿಗೆಯವರೆಗೂ ನಿರಂತರವಾಗಿ ಮತ್ತೊಬ್ಬರ ಏಳಿಗೆಗಾಗಿಯೇ ದುಡಿದಿರಿ, ಹೋಗಿ ಬನ್ನಿ, ನೀವು ಹಾಕಿದ ಹಾದಿಯಲ್ಲಿ ನಾವು ದುಡಿಯೋದಿಲ್ಲ ನೀವು ವಾಪಸ್ ಬರುವವರೆಗೂ ಕಾಯ್ತೀವಿ ಅಂತ. ನಿಮಗೂ ಹೀಗೆಯೇ ಅನ್ನಿಸುತ್ತಾ ಅಥವಾ ಇದು ಬರೀ ನನಗೆ ಬರುವ ಆಲೋಚನೆಯೇ?

ವಿದಾಯಗಳೆಲ್ಲಾ ಕಣ್ಣೀರಿನಿಂದ ಕೊನೆಗೊಳ್ಳುವುದೇ ಆಗಬೇಕೆ? ವಿದಾಯ ಎಂದ ಕೂಡಲೇ ಮೊದಲ ಪ್ರಶ್ನೆ - ಏನಾಯ್ತು? ಅಂತಲೇ. ಚಿಕ್ಕ ಉದಾಹರಣೆ ಎಂದರೆ ಯಾರೋ ಒಬ್ಬರು ನಿಮ್ಮ ವಾಟ್ಸಾಪ್ ಗುಂಪಿನಿಂದ ಹೊರಬೀಳುವಾಗ ವಿದಾಯ ಹೇಳಿದಾಗ ಅಥವಾ ಫೇಸ್ಬುಕ್ ನಿಂದ ವಿದಾಯ ಹೇಳುವಾಗ ಹಲವಾರು ಮಂದಿಯಿಂದ ಬರುವ ಪ್ರಶ್ನೆಯೇ ಈ ಏನಾಯ್ತು? ಯಾಕೆ? ಯಾರಾದರೂ ಬೇಸರ ಮೂಡಿಸಿದರೆ? ಹೀಗೆ. ಜಗತ್ತಿನಿಂದ ತೆರಳುವಾಗ ಹೀಗೆ ವಿದಾಯ ಹೇಳಿ ಹೋಗುವ ಪ್ರಮೇಯ ಬಂದರೂ, ಬಾರದಿದ್ದರೂ ಇನ್ನೊಂದೆರಡು ದಿನ ಇದ್ದು ಹೋಗಿ ಅಂತ ಯಾರನ್ನು ಕುರಿತೂ ಹೇಳಲೇ ಆಗುವುದಿಲ್ಲ ಅಲ್ಲವೇ? ಎಂಥಾ ವಿಚಿತ್ರ ಪ್ರಾಣಿ ಈ ಮಾನವ ಅಂತೀನಿ? ನಾನೇನೂ ಅನ್ಯಗ್ರಹ ಜೀವಿ ಅಲ್ಲ ಬಿಡಿ, ನನ್ನನ್ನೂ ಸೇರಿಸಿಯೇ ಹೇಳಿದ್ದು.

ಹೇಗೆ ಗಿಡಗಳ ಕುರಿತು ವಿದಾಯ ಹೇಳಿದರೂ ಮುಂದಿನ ಬಾರಿ ಅದು ಮರುಹುಟ್ಟು ಪಡೆದು ಬರುತ್ತದೆ ಎಂಬ ಭರವಸೆ ಇರಿಸಿಕೊಳ್ಳುತ್ತೇವೆಯೋ ಹಾಗೇ, ವಿದಾಯ ಎಂಬುದನ್ನೂ ಧನಾತ್ಮಕವಾಗಿಯೇ ಸ್ವೀಕರಿಸೋಣ. ಹಾಗಂತ ಎಲ್ಲ ವಿದಾಯಗಳೂ ಮರುಹುಟ್ಟು ಪಡೆಯದಿರಲಿ. ದುಶ್ಚಟಗಳಿಗೆ ವಿದಾಯ ಹೇಳಿದ್ದು ವಾಪಸ್ ಬಾರದಿರಲಿ. ಈ ವರುಷ ಅಥವಾ ಸಂವತ್ಸರ ನಿಮ್ಮ ಜೀವನದಲ್ಲಿ ಒಳಿತು ತಂದಿಲ್ಲ ಎನಿಸಿದರೆ ಆ ಸಮಸ್ಯೆಗಳು ಮರಳದಿರಲಿ.

ಮರಳಬಹುದಾದದ್ದು ಮರಳಲಿ, ಮರಳಿ ಬಾರದಿರುವುದು ಮರಳದಿರಲಿ. ಮರಳಿದ್ದನ್ನು ಉಳಿಸಿಕೊಳ್ಳುವ ಬುದ್ಧಿ ನಮ್ಮದಾಗಲಿ, ಮರಳಲಾಗದ್ದನ್ನು ಕುರಿತು ವೃಥಾ ಸಮಯ ಕಳೆದಾಗ ಆ ಸಮಯ ಮರಳುವುದಿಲ್ಲ ಎಂಬ ಜ್ಞಾನ ನಮ್ಮಲ್ಲಿ ಮೂಡಲಿ. ಸದ್ಯಕ್ಕೆ, ಇಷ್ಟು ಹೇಳಿ, ನಾನು ಮರಳಿ ಬರುತ್ತೇನೆ ಮತ್ತೊಂದು ಕಂತಿನೊಂದಿಗೆ

English summary
Send off does'nt mean negative sense. Some send off's in life is very much needed and must for development
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X