ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಬೆಂಕಿಯಲ್ಲೂ ತಂಪು ಕಂಡೆನಾ? ಅಥವಾ ತಪ್ಪು ಕಂಡೆನಾ?

By ಶ್ರೀನಾಥ್ ಭಲ್ಲೆ
|
Google Oneindia Kannada News

'ನಿನ್ನಾಣೆ ನಾನು ಬೆಂಕಿಯಲ್ಲೂ ತಪ್ಪು ಕಂಡೆನು, ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು' ಎಂಬ ಹಾಡು ರೇಡಿಯೋದಲ್ಲಿ ಕೇಳುತ್ತಿದ್ದೆ. ಯಾವ ಚಿತ್ರದ್ದು, ಈ ಹಾಡಿನ ಅರ್ಥವೇನು ಅಂತೆಲ್ಲಾ ಮನವು ಆಲೋಚಿಸಲು ಹೊರಟಿತ್ತು. ಮೊದಲಿಗೆ ಆ ಬಗ್ಗೆ ಒಂದೆರಡು ಮಾತು ಹೇಳಿ ಮುಂದೆ ಸಾಗೋಣ ಆಯ್ತಾ?

'ಬಿಂಕದ ಸಿಂಗಾರಿ, ಮೈ ಡೊಂಕಿನ ವೈಯ್ಯಾರಿ' ಎಂಬ ಹಳೆಯ ಹಾಡಿಗೆ ಹೋಲಿಸಿದಾಗ ಡೊಂಕಿನಲ್ಲೇ ಸೌಂದರ್ಯ ಇರೋದು ಅನ್ನಿಸುತ್ತದೆ. ಹೌದಲ್ಲವೇ? ಭುಜದಿಂದ ಹೊಟ್ಟೆಯ ಭಾಗದವರೆಗೆ ಚೌಕಾಕೃತಿಯಂತೆ ಕಂಡರೆ ಏನು ಚೆನ್ನಾಗಿರುತ್ತೆ ಅಲ್ಲವೇ? ಡೊಂಕಿದ್ದರೇ ಚೆನ್ನಾ ಅನ್ನೋದು ತುಂಬಾ ವಿವರಿಸಲು ಹೊರಟರೆ ಈ ಬರಹ ಶೃಂಗಾರ ಕಾವ್ಯಕ್ಕೆ ಹಾದಿಯಾದೀತು.

ಶ್ರೀನಾಥ್ ಭಲ್ಲೆ ಅಂಕಣ: ಕೊನೆಯ ಬೆಂಚಿನ ಮಹಿಮೆ ಬಲ್ಲಿರಾ ಬಲ್ಲಿರಾ...ಶ್ರೀನಾಥ್ ಭಲ್ಲೆ ಅಂಕಣ: ಕೊನೆಯ ಬೆಂಚಿನ ಮಹಿಮೆ ಬಲ್ಲಿರಾ ಬಲ್ಲಿರಾ...

ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ಪ್ರತೀ ಬಾರಿ ಹಾಡು ಕೇಳಿದಾಗಲೂ 'ಬೆಂಕಿಯಲ್ಲೂ ತಪ್ಪು ಕಂಡೆನು' ಅಂತ ಕೇಳಿಸುತ್ತಿತ್ತು. ರೋಷದಿಂದ ಹಾಡುವ ಹಾಡಲ್ಲ ಹಾಗಾಗಿ ಈ ಸಾಹಿತ್ಯ ಪ್ರೇಮಗೀತೆಗೆ ಹೊಂದುತ್ತಿಲ್ಲ ಅಂತ ತಲೆ ಕೋರೆದಾಗ, ಸೂಕ್ಷ್ಮವಾಗಿ ಹಾಡನ್ನು ಕೇಳಿದಾಗ ಅರಿವಾಗಿದ್ದು 'ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು, ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು'. ಪ್ರೇಮಗೀತೆ ಅನ್ನಿಸಿಕೊಳ್ಳಲು ಈ ಸಾಹಿತ್ಯ ಈಗ ಸರಿ ಹೋಯಿತು ಅಂತ ಅನ್ನಿಸಿದರೂ 'ಬೆಂಕಿಯಲ್ಲೂ ತಪ್ಪು ಕಂಡೆನು' ಎಂಬುದು ತಲೆಯಿಂದ ಹೋಗಲೇ ಇಲ್ಲ. ಬೆಂಕಿ ತಪ್ಪು ಮಾಡಿದೆಯೇ? ಮಾಡಿದ್ದರೆ ಯಾವ ಸಂದರ್ಭದಲ್ಲಿ? ಆ ಸಂದರ್ಭದಲ್ಲಿ ಅದು ಬೆಂಕಿಯ ತಪ್ಪೇ? ಅಥವಾ ಆ ಸನ್ನಿವೇಶದ ತಪ್ಪೇ? ಇಷ್ಟೆಲ್ಲಾ ತಲೆ ಕೊರೆದಾಗಲೇ ಈ ಲೇಖನ ಹುಟ್ಟಿದ್ದು.

Srinath Bhalle Column: Did Seen Cool in Fire? Or Did Seen Wrong?

ಬೆಂಕಿಯು ತಪ್ಪು ಮಾಡಿತೇ
ವೃತ್ರಾಸುರನ ವಧೆಗಾಗಿ ವಿಶೇಷ ಆಯುಧ ಬೇಕಾಗಿತ್ತು. ಅದೊಂದು ಸಾಮಾನ್ಯ ಆಯುಧವಾಗಿರದೇ ವಜ್ರ ಅಥವಾ ಸಿಡಿಲಿನಿಂದ ಕೂಡಿದ ಆಯುಧವಾಗಿರಬೇಕಿತ್ತು. ಅದು ವಜ್ರದಷ್ಟು ಕಠಿಣವೂ ಆಗಿರಬೇಕಿತ್ತು. ಈ ಹಿಂದೆ ದಧೀಚಿ ಮಹರ್ಷಿಯು ಪಡೆದ ವರದಾನದ ರೀತಿ ಆತನ ದೇಹ ಮೂಳೆಗಳು ವಜ್ರದಷ್ಟು ಕಠಿಣವಾಗಿದ್ದವು. ಅದರಿಂದ ಆಯುಧ ಮಾಡಿಕೊಳ್ಳುವುದು ಎಂದು ಸಮಾಲೋಚಿಸಿ, ಮಹರ್ಷಿಯಲ್ಲಿ ಬೇಡಿಕೊಂಡಾಗ, ಅವರಾದರೂ ಒಂದು ವಿಶೇಷವಾದ ಶಕ್ತಿಯುಳ್ಳ ಜ್ವಾಲೆಯಲ್ಲಿ ಮಿಂದು ದಗ್ದರಾಗಿ ಮೂಳೆಗಳನ್ನು ಮಾತ್ರ ಉಳಿಸಿ ಪರಮಾತ್ಮನಲ್ಲಿ ಐಕ್ಯರಾದರು ಎಂಬುದು ಕಥೆ.

ಅತ್ಯಂತ ವಿಶೇಷ ಶಕ್ತಿಯುಳ್ಳ ಒಬ್ಬ ಮಹರ್ಷಿಯನ್ನು ಬೆಂಕಿಯು ನುಂಗಿದ್ದು ಒಳಿತೋ? ಅಥವಾ ಬೆಂಕಿಯು ತಪ್ಪು ಮಾಡಿತೇ? ಯಾವ ವೃತ್ರಾಸುರನು ತಪವನ್ನು ಆಚರಿಸಿ, ಬೇಡಿ ಸಲ್ಲಿಸಿದನೋ ಆಗ ವರವನ್ನು ಕೊಂಚ ತಿರುಚಿ ಕೊಟ್ಟಿದ್ದರೆ ಬೆಂಕಿ ತಪ್ಪು ಮಾಡುತ್ತಿರಲಿಲ್ಲ ಎನ್ನಬಹುದೇ? ಪರೋಪರಾರ್ಥಂ ಇದಂ ಶರೀರಂ ಎಂದು ಸಾಬೀತು ಮಾಡಲು ಬೆಂಕಿ ಸಹಾಯ ಮಾಡಿತು ಹಾಗಾಗಿ ಇದು ತಪ್ಪಲ್ಲ ಎಂದು ವಾದಿಸಬಹುದೇ ?

ಬೆಂಕಿಯು ತಪ್ಪು ಮಾಡಿದ್ದರೆ ಸೀತಾಮಾತೆಯ ಗತಿ?
ಸೀತಾಮಾತೆಯ ಅಗ್ನಿಪರೀಕ್ಷೆಯ ಕಥೆ ಒಂದೇ ಕಥೆಯಾಗಿರದೇ, ಹಲವಾರು ರೂಪದಲ್ಲಿದೆ. ರಾವಣನಿಂದ ಕದ್ದೊಯ್ದ ಸೀತೆಯನ್ನು ನೇರವಾಗಿ ತನ್ನೊಂದಿಗೆ ಕರೆದೊಯ್ಯದೇ ಅಗ್ನಿಪರೀಕ್ಷೆಗೆ ಒಳಪಡಿಸಿದನು ಶ್ರೀರಾಮ ಎನ್ನಲಾದ ಕಥೆಯನ್ನು, ಸೀತೆಯು ಅಗ್ನಿಯಲ್ಲಿ ಪ್ರವೇಶ ಮಾಡಿ, ಕಿಂಚಿತ್ತೂ ತೊಂದರೆಯಾಗದೆ ಹೊರಬಂದಳು, ಹಾಗಾಗಿ ಆಕೆ ಪರಿಶುದ್ದಳು ಎನ್ನಲಾಗಿದೆ. ಇಲ್ಲಿ ಸೀತಾಮಾತೆಯು ಏನೂ ತೊಂದರೆಯಿಲ್ಲದೇ ಹೊರಗೆ ಬರುತ್ತಾಳೆ ಎಂಬುದು ಖಚಿತವೇ ಆದರೂ ಅಲ್ಲೊಂದು ಭೀತಿಯ ವಾತಾವರಣ ಮೂಡಿದ್ದು ಸಹಜವೇ ಅಲ್ಲವೇ? ತನ್ನಲ್ಲಿ ಪ್ರವೇಶ ಮಾಡಿಸಿಕೊಳ್ಳುವಲ್ಲಿ ಆ ಬೆಂಕಿ ತಪ್ಪು ಮಾಡಿತೇ? ಏನೂ ತೊಂದರೆಯಾಗದಂತೆ ಕಾಪಾಡಿದ್ದು ಬೆಂಕಿಯ ಉತ್ತಮ ಕೆಲಸವೇ ಸರಿ. ಆದರೆ ಆ ಸಮಯದಲ್ಲಿ ಬೆಂಕಿಯು ತಪ್ಪು ಮಾಡಿದ್ದರೆ ಆ ಮಾತೆಯ ಗತಿ?

ಶ್ರೀನಾಥ್ ಭಲ್ಲೆ ಅಂಕಣ: ಬರೀ ಒಂದು ಕರೆಯ ದೂರವಷ್ಟೇ ಅಂದ್ರೆ Just a phone call away ಶ್ರೀನಾಥ್ ಭಲ್ಲೆ ಅಂಕಣ: ಬರೀ ಒಂದು ಕರೆಯ ದೂರವಷ್ಟೇ ಅಂದ್ರೆ Just a phone call away

ಮತ್ತೊಂದು ಕಥೆಯಲ್ಲಿ ರಾವಣ ರಾಜ್ಯಕ್ಕೆ ಹೋಗಿದ್ದು ಮಾಯಾಸೀತೆ. ಆಕೆ ರಾವಣನ ಲಂಕೆಯಲ್ಲಿ ಇರುವ ತನಕ ನಿಜ ಸೀತಾಮಾತೆಯು ಅಗ್ನಿದೇವನ ಆಶ್ರಯದಲ್ಲಿ ಇದ್ದಳು ಎನ್ನಲಾಗಿದೆ. ಅಗ್ನಿಪರೀಕ್ಷೆಯ ಸಮಯದಲ್ಲಿ ಮಾಯಾ ಸೀತೆ ಬೆಂಕಿಯಲ್ಲಿ ಪ್ರವೇಶವಾಗಲು, ನಿಜ ಸೀತಾಮಾತೆ ಹೊರಬಂದಳು ಎನ್ನಲಾಗಿದೆ. ಇಂದಿನ ಜಾದೂಗಾರರು ಇದರಿಂದ ಕಲಿತಿದ್ದಾರೆ ಎನಿಸುವುದಿಲ್ಲ? ಈ ಕಥೆಯ ಪ್ರಕಾರ ನೋಡಿದರೆ, ಮಾಯಾ ಸೀತೆಯ ಉಪಕಾರಕ್ಕೆ ಸಿಕ್ಕ ಬಳುವಳಿ ಬೆಂಕಿಯ ಪ್ರವೇಶವೇ? ಬೆಂಕಿಯೇ ನೀನು ತಪ್ಪು ಮಾಡಿದೆಯಾ?

ಇಂದ್ರಪ್ರಸ್ಥ ಮತ್ತು ಹಸ್ತಿನಾಪುರಗಳ ನಡುವೆ ಜಗಳ
ಮಹಾಭಾರತದಲ್ಲಿ ಬರುವ ಖಾಂಡವವನ ದಹನ ಎಂಬುದು ಒಂದು ವಿಶಿಷ್ಟ ಭಾಗ. ಒಂದು ಕಥೆಯ ಪ್ರಕಾರ, ಒಂದು ಹಂತದಲ್ಲಿ ಅಗ್ನಿದೇವನು ವಿಪರೀತ ಹವಿಸ್ಸನ್ನು ಸ್ವೀಕರಿಸಿ ಹೊಟ್ಟೆ ಕೆಡಿಸಿಕೊಂಡಿದ್ದನಂತೆ. ಅವನಿಗೆ ಔಷದ ರೂಪದಲ್ಲಿ ಈ ಖಾಂಡವವನದಲ್ಲಿ ಗಿಡಮೂಲಿಕೆಗಳನ್ನು ಸ್ವಾಹ ಮಾಡಬೇಕಿತ್ತಂತೆ. ಮೊದಲಿಗೆ ಅಗ್ನಿದೇವನ ಔಷಧಿಗೆ ಇಡೀ ಅರಣ್ಯವೇ ನಾಶವಾಯಿತು. ಬೆಂಕಿಯೇ ನೀನು ತಪ್ಪು ಮಾಡಿದೆಯಾ? ಅಲ್ಲಿದ್ದ ನಾಗರನ್ನು ನುಂಗಿ, ಅವರ ಕೋಪಕ್ಕೆ ತುತ್ತಾಗಿ, ಇಂದ್ರಪ್ರಸ್ಥ ಮತ್ತು ಹಸ್ತಿನಾಪುರಗಳ ನಡುವೆ ಜಗಳವನ್ನೇ ತಂದಿಟ್ಟೆಯಾ? ಬೆಂಕಿಯೇ ನೀನು ಮತ್ತೆ ಮತ್ತೆ ತಪ್ಪು ಮಾಡಿದೆಯಾ?

ಬೆಂಕಿಯೇ, ನಿನ್ನಿಂದ ಉದ್ಭವಿಸಿದವಳು ದ್ರೌಪದಿ. ಈಗ ವಿಷಯಕ್ಕೆ ಬರೋಣ. ಚಿಕ್ಕ ಕೂಸಾಗಿ ಜನಿಸದೇ ನೇರವಾಗಿ ಮದುವೆಗೆ ಸಿದ್ಧಳಾಗಿಯೇ ಹುಟ್ಟಿದವಳು ಈ ದ್ರೌಪದಿ. ಆಟಪಾಠಗಳನ್ನು ಆಡದೇ, ರೀತಿ-ನೀತಿಗಳನ್ನು ಕಲಿಯದೇ ನೇರವಾಗಿ ಮದುವೆಗೆ ಸಿದ್ಧಳಾದವಳು ದ್ರೌಪದಿ. ಹೀಗಿದ್ದೇ ಅರಣ್ಯದಲ್ಲಿನ ಒಂದು ಪ್ರಸಂಗದಲ್ಲಿ ಒಮ್ಮೆ ಸರಿಯಾಗಿ ಪಾತ್ರೆಯನ್ನೂ ತೊಳೆಯಲಿಲ್ಲ. ಅಂದೇ ಅಲ್ಲಿಗೆ ದೂರ್ವಾಸ ಮಹರ್ಷಿಗಳ ಆಗಮನವಾಯ್ತು. ನಮ್ಮ ಚೆಲುವ ಶ್ರೀಕೃಷ್ಣ ಇಲ್ಲದಿದ್ದರೆ ಏನಾಗುತ್ತಿತ್ತೋ ಬಲ್ಲವರಾರು? ಶಿಷ್ಟಾಚಾರ ಅರಿಯದ ದ್ರೌಪದಿ ಏನೋ ನುಡಿದಳು ಎಂಬುದೇ ಕುರುಕ್ಷೇತ್ರದ ಯುದ್ದಕ್ಕೂ ಕಾರಣವಾಯಿತು. ಕೌರವ- ಪಾಂಡವರ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ನೀನಾದೆಯಾ? ದ್ರುಪದ ರಾಜ ಯಜ್ಞ ಮಾಡಿದಾಗ ಒಂದು ಕೂಸನ್ನು ಅವನಿಗೆ ವರಪ್ರದಾನ ಮಾಡಬಹುದಿತ್ತು. ಬೆಂಕಿಯೇ, ನೀನು ದ್ವಾಪರದಲ್ಲೂ ತಪ್ಪು ಮಾಡುತ್ತಲೇ ಹೋದೆಯಾ?

ಸಹಗಮನ ಪದ್ಧತಿ ಕಲಿಯುಗದಲ್ಲೂ ಮುಂದುವರೆಯಿತು
ಸಹಗಮನ ಪದ್ದತಿಯಲ್ಲಿ ಪಾಂಡುರಾಜನ ಕಿರಿಯ ಪತ್ನಿ ಮಾದ್ರಿಯನ್ನೂ ಸೇರಿಸಿಕೊಂಡು ಅದೆಷ್ಟು ನಾರಿಯರನ್ನು ನುಂಗಿರುವೆಯೋ ಬೆಂಕಿಯೇ? ನೀನು ಮಾಡಿದ್ದು ತಪ್ಪಲ್ಲವೇ? ಈ ಸಹಗಮನ ಪದ್ಧತಿ ಕಲಿಯುಗದಲ್ಲೂ ಮುಂದುವರೆಯಿತು ಅಲ್ಲವೇ? ತಪ್ಪು ಮಾಡುವವರಿಗೆ ಯಾವ ಯುಗವಾದರೇನು ಅಲ್ಲವೇ? ಇಲ್ಲಿಯೂ ಬಹಳಷ್ಟು ವರ್ಷಗಳ ಕಾಲ ಇಷ್ಟವಿದ್ದು ಹಾರಿದವರು, ಇಷ್ಟವಿಲ್ಲದೆ ನೂಕಿಸಿಕೊಂಡವರು ಎಂಬ ಭೇದ- ಭಾವವಿಲ್ಲದೆ ನುಂಗಿದ್ದೆಯಲ್ಲಾ, ನೀನು ಮಾಡಿದ್ದು ತಪ್ಪಲ್ಲವೇ?

ಒಣಮರಗಳ ನಡುವಿನ ತಿಕ್ಕಾಟಕ್ಕೆ ಹೊತ್ತುರಿದು ಕಾಳ್ಗಿಚ್ಚಾಗಿ ಹಬ್ಬಿ, ಜೀವಿಗಳು ಅಲ್ಲಿಂದ ಓಡಿಹೋಗುವಂತೆ ಮಾಡುವೆಯಲ್ಲಾ ತಪ್ಪಲ್ಲವೇ? ಓಡಿ ಹೋಗುವವರು ಓಡುತ್ತಾರೆ ನಿಜ, ಆದರೆ ತೆವಳುವವರು ಬೂದಿಯಾಗುವುದಿಲ್ಲವೇ? ನೀನು ಮಾಡೋದು ತಪ್ಪಲ್ಲವೇ?

ಹೆಂಡತಿ ಹೇಳಿದಂತೆ ನಡೆಯುವ ನಾವು ನಿತ್ಯ ಅಗ್ನಿಗಳೇ ಸರಿ
ಅಂದ ಹಾಗೆ, ನಾವೆಲ್ಲರೂ ನಿನ್ನ ಸ್ವರೂಪವೇ ಅಲ್ಲವೇ? ಛೇ! ಈ ವಿಷಯ ನಾನೇಕೆ ಮರೆತೆ? ಯಾವುದೇ ಯುಗದಲ್ಲೂ ನೀನೊಂದು ಸೂತ್ರದ ಬೊಂಬೆಯೇ ಆಗಿದ್ದಿ ಅಷ್ಟೇ! ಬೆಂಕಿ ಹಚ್ಚಿ ಉರಿಯುವಂತೆ ನಿನಗೆ ಹೇಳಿದ ಮೇಲೆ ನಿನ್ನ ಕರ್ತವ್ಯ ನೀನು ಮಾಡಿದ್ದು ತಪ್ಪು ಅಲ್ಲವೇ ಅಲ್ಲ. ಉರಿಯುವುದು ಒಣಮರವೇ ಆಗಲಿ, ಪ್ರಾಣಿಪಕ್ಷಿಗಳೇ, ಜೀವಿಸಿರುವ ಮನುಜರೇ ಆಗಲೇ, ಜೀವವಿಲ್ಲದ ದೇಹಗಳೇ ಆಗಲಿ ನಿನಗೆ ಯಾವ ವ್ಯತ್ಯಾಸವೂ ಕಾಣುವುದೇ ಇಲ್ಲ ಅಲ್ಲವೇ? ಒಬ್ಬರು ಹೇಳಿದಂತೆ ಕೇಳುವುದಷ್ಟೇ ನಿನ್ನ ಕೆಲಸ ಅಂದ ಮೇಲೆ ನಿನ್ನಂತೆಯೇ ನಾವೂ ಸಹ.

ಮನೆಯಲ್ಲಿ ಹಿರಿಯರು ಹೇಳಿದಂತೆ, ಕಚೇರಿಯಲ್ಲಿ ಬಾಸ್ ಹೇಳಿದಂತೆ, ಕೆಲವೊಂದು ಹಂತದಲ್ಲಿ ಮಕ್ಕಳು ಹೇಳಿದಂತೆ, ಗಂಡ ಹೇಳಿದಂತೆ, ಹೆಂಡತಿ ಹೇಳಿದಂತೆ ನಡೆಯುವ ನಾವು ನಿತ್ಯ ಅಗ್ನಿಗಳೇ ಸರಿ. ನಿನ್ನದೇನೂ ತಪ್ಪಿಲ್ಲ, ಬದಲಿಗೆ ನೀನು ನಿರ್ವಹಿಸಿದ್ದು ನಿನ್ನ ಕರ್ತವ್ಯ ಅಷ್ಟೇ. ನಿನ್ನಂತೆಯೇ ನಾವೂ ಸಮಯದ ಗೊಂಬೆಗಳು.

English summary
Srinath Bhalle Column: Did you Seen Cool in Fire? Or Did you Seen Wrong?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X