• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲ್ಯದ ವಿಶೇಷ ದೀಪಾವಳಿ, ಅಮೆರಿಕದಲ್ಲಿಲ್ಲ ಪಟಾಕಿಯ ಹಾವಳಿ!

|

ಶ್ರೀನಾಥ್ ಭಲ್ಲೆ ಅವರ 'ನವರಸಾಯನ' ಅಂಕಣಬರಹವೆಂದರೆ ಪ್ರತಿ ವಾರ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಆ ವಿಷಯದ ಸುತ್ತ ಅವರು ನವಿರಾದ ಹಾಸ್ಯದಿಂದ ಬರೆಯುವ ರೀತಿಯೇ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಜೊತೆಗೆ, ಮುಂದಿನ ವಾರ ಯಾವ ವಿಷಯ ಆಯ್ದುಕೊಳ್ಳಬಹುದು ಎಂಬ ಕುತೂಹಲವನ್ನೂ ಹುಟ್ಟುಹಾಕುತ್ತದೆ. ಹೀಗೆ ಸತತವಾಗಿ 75 ವಾರಗಳನ್ನು ಭಲ್ಲೆಯವರು ಒನ್ಇಂಡಿಯಾ ಕನ್ನಡದಲ್ಲಿ ಪೂರೈಸಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಅವರ ಅಂಕಣವನ್ನು ಮೆಚ್ಚಿದ ಓದುಗರಿಗೆ ಧನ್ಯವಾದಗಳು. ಈ ಓದು ಬರಹದ ಸಂಬಂಧ ಹೀಗೆಯೇ ಮುಂದುವರಿಯಲಿ - ಸಂಪಾದಕ.

***

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ದೀಪಾವಳಿಯ ವಿಶೇಷತೆಯೇ ಬೆಳಕು... ಕತ್ತಲಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಒಯ್ಯೆಂದು ಭಗವಂತನಲ್ಲಿ ಬೇಡಿಕೊಳ್ಳೋಣ. ನೀರು ತುಂಬುವ ಹಬ್ಬ, ನರಕ ಚತುರ್ದಶಿಯ ಸಾಂಪ್ರದಾಯಿಕ ಸೊಬಗು, ಲಕ್ಷ್ಮೀ ಪೂಜೆ ನಂತರ ಬಲಿಪಾಡ್ಯಮಿಯ ಆಚರಣೆಯ ಸರಣಿ ಮುಗಿಯುತ್ತಲೇ ದೀಪಾವಳಿಯ ಹಬ್ಬ ತೆರೆಮರೆಗೆ ಸರಿಯುತ್ತದೆ.

ದೀಪಾವಳಿ ವಿಶೇಷ ಪುರವಣಿ

ನಾಲ್ಕು ದಿನಗಳ ಹಬ್ಬವೇ ಆದರೂ, ದೀಪಾವಳಿಯ ಸಡಗರ ಮನೆ ಶುದ್ಧ, ಸಿದ್ದ ಮಾಡುವುದರಿಂದ ಆರಂಭವಾಗುತ್ತದೆ. ಮನೆಯಲ್ಲಿ ಕೆಲಸ ಸ್ವಲ್ಪ ಹೆಚ್ಚಿದೆ ಅಂತ ಕೆಲಸದಾಕೆಗೆ ಹೇಳಿದರೆ ಆಕೆಯಿಂದ ಲಗುಬುಗೆಯ ಉತ್ತರ ಬರೋದು ಅನುಮಾನವೇ. "ಆಗಕ್ಕಿಲ್ಲ ಅಮ್ಮಾವ್ರೇ, ನಿಮಗಿಂತಾ ಮುಂಚೆ ಎದುರು ಮನೆಯವರು ಬುಕ್ ಮಾಡವ್ರೆ " ಅನ್ನಬಹುದು! ಅಥವಾ "ನಮ್ ಮನೆಯಾಗೂ ವರ್ಷಾವರಿ ಹಬ್ಬ ಅಮ್ಮಾವ್ರೇ, ಮನೆಯಾಗೆ ಕೆಲಸ ಐತೆ" ಎನ್ನಬಹುದು. ಒಟ್ಟಾರೆಯಾಗಿ ಬಡವಬಲ್ಲಿದ ಎಂಬ ವ್ಯತ್ಯಾಸವಿಲ್ಲದೆ ಆಚರಿಸೋ ಬೆಳಕಿನ ಹಬ್ಬ ಈ ದೀಪಾವಳಿ.

ದೀಪಾವಳಿ ನೆಪದಲ್ಲಿ ಬೆಂಗಳೂರಲ್ಲೊಂದು ಅತಿ ಅಮಾನವೀಯ ಘಟನೆದೀಪಾವಳಿ ನೆಪದಲ್ಲಿ ಬೆಂಗಳೂರಲ್ಲೊಂದು ಅತಿ ಅಮಾನವೀಯ ಘಟನೆ

ಬಚ್ಚಲು ಮನೆಯಲ್ಲಿನ ಹಂಡೆ, boiler, ತಂಬಿಗೆ, ಮಗ್, ಬೋಸಿ ಇತ್ಯಾದಿ ಇತ್ಯಾದಿಗಳು ಲಕ್ಷಣವಾಗಿ ಹುಣಿಸೇಹಣ್ಣಿನ ಸ್ನಾನದ ಯೋಗ ಅನುಭವಿಸುವ ದಿನವೇ ನೀರು ತುಂಬುವ ಹಬ್ಬ. ತೊಳೆದು ಶೋಭಿಸುವ ಪಾತ್ರೆಗಳಿಗೆ, ನೀರನ್ನು ತುಂಬಿ ಪೂಜಿಸಿ, ಮರುದಿನ ಬೆಳಿಗ್ಗೆಗೆ ಅಣಿಮಾಡುವುದು ವಾಡಿಕೆ. ಅಣಿ ಮಾಡೋದು ಎಂದರೆ ಏನು? ಹಂಡೆಯ ಗೂಡಿಗೆ ಹೊಟ್ಟನ್ನೋ ಅಥವಾ ಸೌದೆಯನ್ನೋ ಜೋಡಿಸಿ ಇಟ್ಟು ಸಿದ್ಧಮಾಡೋದು. ಹೊಟ್ಟು ಆದಲ್ಲಿ ರಾತ್ರಿ ಮಲಗೋ ಮುನ್ನ ಅದನ್ನು ಹೊತ್ತಿಸಿಟ್ಟಲ್ಲಿ ಬೆಳಗಿನ ಹೊತ್ತಿಗೆ ಕುದಿವ ನೀರು ಸಿದ್ದ.


ಮರುದಿನ, ಅಂದರೆ ಚತುರ್ದಶಿಯ ಮುಂಜಾನೆ ಎದ್ದು ಚಾಪೆಯ ಮೇಲೆ ತೂಕಡಿಸುತ್ತಾ ಕೂತಿರುವಾಗ, ಅಪ್ಪನ "ಬಣ್ಣಿಸಿ ಗೋಪಿ ಹರಸಿದಳು" ಪುರಂದರದಾಸರ ಪದಕ್ಕೆ, ಅಮ್ಮ ನೆತ್ತಿಯ ಮೇಲೆ ಹಚ್ಚುವ ಎಣ್ಣೆಯ ಬೊಟ್ಟಿನ ಶಾಸ್ತ್ರ ನಡೆಯುತ್ತದೆ. ಆಮೇಲೆ ಒಂದಷ್ಟು ಪಟಾಕಿ ಹಚ್ಚಿ ಆನಂದಿಸುವುದು, ನಂತರ ಎಣ್ಣೆ - ಸೀಗೆಕಾಯಿ ಹಾಕಿಸಿಕೊಂಡು ಎರೆದುಕೊಳ್ಳುವ ಶಾಸ್ತ್ರ, ಹೊಸ ದಿರುಸು, ಹೊಟ್ಟೆಗೆ ತಿಂಡಿ, ನಂತರ ಪಟಾಕಿ ಸಂಭ್ರಮ. "ತುಂಬಾ ಶಬ್ದ, ಪಟಾಕಿಯ ಹೊಗೆ ಮನೆ ಒಳಗೆಲ್ಲಾ ಬರುತ್ತೆ, ಪಟಾಕಿ ಸಿಡಿಸಿಕೊಂಡು ಹೊಸ ಬಟ್ಟೆ ಹಾಳುಮಾಡಿಕೊಳ್ಳಬೇಡ" ಎಂದೆಲ್ಲಾ ಕಿರಿಕಿರಿ ಮಧ್ಯೆ ಹಬ್ಬವೂ ಸಾಗುತ್ತಿತ್ತು.

ದೀಪಾವಳಿ ಪಟಾಕಿ ಹಾವಳಿಯಿಂದ ಬೆಂಗಳೂರಿನಲ್ಲಾದ ಮಾಲಿನ್ಯ ಅಷ್ಟಿಷ್ಟಲ್ಲ! ದೀಪಾವಳಿ ಪಟಾಕಿ ಹಾವಳಿಯಿಂದ ಬೆಂಗಳೂರಿನಲ್ಲಾದ ಮಾಲಿನ್ಯ ಅಷ್ಟಿಷ್ಟಲ್ಲ!

ಹೊಸ ಬಟ್ಟೆ ಬದಲಿಸಿ ಸಂಜೆಯವರೆಗೂ ಕಾಲ ತಳ್ಳಿ ನಂತರ ಮತ್ತದೇ ಹೊಸಬಟ್ಟೆ ಧರಿಸಿ ರಾತ್ರಿಯಲ್ಲಿ ಬೆಳಗುವ ಪಟಾಕಿಗಳನ್ನು ಉರಿಸುವ ಸಂಭ್ರಮ. Flower pot ಅರ್ಧ ಉರಿದು ಬುಸ್ ಎಂದಾಗ, ಹಾವಿನ ಮಾತ್ರೆ ಪಟಾಕಿ ಬುಸ್ ಎಂದು ಕೆಟ್ಟವಾಸನೆ ಹರಡಿದಾಗ, ಭೂಚಕ್ರ ತಿರುಗುವಾಗ ಎಲ್ಲೆಲ್ಲೂ ಓಡಿ ಮಣ್ಣಲ್ಲೋ ಇನ್ನೆಲ್ಲೋ ಸಿಕ್ಕಿಕೊಂಡು ಆರಿಹೋಗೋದು, ರಾಕೆಟ್ ಹಾರುವಾಗ ಅದನ್ನಿಟ್ಟಿದ್ದ ಬಾಟ್ಲಿ ಉರುಳಿ ಭೂ-ರಾಕೆಟ್ ಆಗಿ ಪರಿವರ್ತನೆ ಆಗೋದು ಒಂದೇ ಎರಡೇ ಅವಾಂತರಗಳು.

ಬೆಳಗ್ಗಿನಿಂದ ಪಟಾಕಿ ಸಂಭ್ರಮ ಎಂದರೆ ಸಾವಿರಾರು ರೂಪಾಯಿ ಪಟಾಕಿ ತರುತ್ತಿದ್ದೆವು ಅಂತಲ್ಲ. ಒಂದೆರಡು ಹಚ್ಚಿದರೆ ಆಮೇಲೆ ಬೇಕಾಗುತ್ತೆ ಅಂತ ಇಟ್ಟುಕೊಳ್ಳುವುದೇ ಹೆಚ್ಚು. ಸಂಜೆಯ ಪಟಾಕಿಯೂ ಮುಗೀತು ಎಂದರೆ ಮಿಕ್ಕ ಢಮ್ ಢಮ್ ಪಟಾಕಿಗಳನ್ನು 'ಉತ್ಥಾನದ್ವಾದಶಿಗೂ ಇಟ್ಕೊಳ್ಳಿ' ಎಂಬ ಆದೇಶ ಬರುತ್ತಿತ್ತು.


ಶಾಲಾ ದಿನಗಳಲ್ಲಿ ಮಹಾ ಸಂಕಟ ಏನಪ್ಪಾ ಎಂದರೆ 'ನಮ್ಮ ಮನೆಯಲ್ಲಿ ಇಷ್ಟು ದುಡ್ಡಿಗೆ ಪಟಾಕಿ ತಂದ್ವಿ ಅಷ್ಟು ದುಡ್ಡಿಗೆ ಪಟಾಕಿ ತಂದ್ವಿ' ಅಂತ ಕೊಚ್ಚಿಕೊಳ್ಳುವ ಕೆಲವು ಸ್ನೇಹಿತರು, 'ಪ್ರತಿ ವರ್ಷ ನಮ್ ಮಾವ ಊರಿಂದ ಒಂದು ದೊಡ್ಡ ಪೆಟ್ಟಿಗೆ ಪಟಾಕಿ ತಂದಿದ್ದಾರೆ ಗೊತ್ತಾ' ಅನ್ನೋ ಹುಡುಗರು ಭಾಳಾ ಹಿಂಸೆ ಮಾಡೋವ್ರು. ನಮಗೂ ಅಂಥಾ ಮಾವಂದಿರನ್ನು ಬರೀ ದೀಪಾವಳಿಗೆ ಸೃಷ್ಟಿಸಿ ಕಳಿಸಪ್ಪ ದೇವರೇ ಅಂದುಕೊಳ್ಳುತ್ತಿದ್ದುದು ಸುಳ್ಳಲ್ಲ. ಸ್ವಲ್ಪ ಬುದ್ದಿ ಬಂದ ಮೇಲೆ 'ನಿಜವಾಗ್ಲೂ ಅಂಥಾ ಮಾವಂದಿರು ಇದ್ರೋ ಅಥವಾ ರೀಲ್ ಬಿಡ್ತಿದ್ರೋ ಆ ಹುಡುಗರು' ಅನ್ನುವ ಆಲೋಚನೆ ಬರುತ್ತಿತ್ತು.

ಆಹಾ! ದೀಪಾವಳಿಯ ಸಂಭ್ರಮ: ಹೀಗಿದೆ ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಡಗರ ಆಹಾ! ದೀಪಾವಳಿಯ ಸಂಭ್ರಮ: ಹೀಗಿದೆ ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಡಗರ

ಬೀದಿಯಲ್ಲಿ ಢಮ್ ಢಮ್ ಎಂದು ಸದ್ದು ಮಾಡುವ ಪಟಾಕಿ ಹೊಡೆಯೋ ಮುನ್ನ ಆ ಕಡೆಯೂ ಈ ಕಡೆಯೂ ಗಾಡಿ ಬರ್ತಿದ್ಯಾ ಅಥವಾ ಯಾರಾದ್ರೂ ಬರ್ತಿದ್ದಾರೆ ಅಂತ ಒಮ್ಮೆ ಪಟಾಕಿ ಹಚ್ಚುತ್ತಿದ್ದೆವು. ಖಂಡಿತ ಈ ಪರಿಯ ಟ್ರಾಫಿಕ್ ಅಂದು ಇರಲಿಲ್ಲ ಬಿಡಿ. ಹಾಗೂ ಒಮ್ಮೊಮ್ಮೆ ಪಟಾಕಿ ಹಚ್ಚಿ ವಾಪಸ್ ಓಡಿ ಬರುವಾಗ ಆ ಕಡೆಯಿಂದ ಬಂದವರಿಗೆ ಗುದ್ದಿದ್ದೂ ಉಂಟು.

ಮನೆಯ ಹಿರಿಯರು ತೀರಿಕೊಂಡಿದ್ದ ವರ್ಷದಲ್ಲಿ ಆ ಮನೆಯವರು ಹಬ್ಬಗಳನ್ನು ಆಚರಿಸದೇ ಇರುವುದು ನಿಮಗೆಲ್ಲಾ ಗೊತ್ತೇ ಇದೆ. ಅವರನ್ನು ಇತರ ಬಂಧುಗಳು ತಮ್ಮ ಮನೆಗೆ ಕರೆದು ತಮ್ಮೊಂದಿಗೆ ಅವರು ಸಂಭ್ರಮಿಸುವಂತೆ ನೋಡಿಕೊಳ್ಳುವುದು, ಒಟ್ಟಾಗಿ ಊಟ ಮಾಡುವುದು ಸಂಪ್ರದಾಯ ಎನ್ನುವುದಕ್ಕಿಂತ ಮಾನವೀಯತೆ ಆಗಿತ್ತು. ಈಗ ಈ ಆಚರಣೆಗಳು ಇವೆಯೋ ಇಲ್ಲವೋ ಗೊತ್ತಿಲ್ಲ.


ದೀಪಾವಳಿಯ ಮತ್ತೊಂದು ವಿಶೇಷ ಎಂದರೆ ಆ ವರ್ಷದಲ್ಲಿ ಮದುವೆಯಾದ ದಂಪತಿಗಳಿಗೆ ಅದರಲ್ಲೂ ಅಳಿಯನಿಗೆ ವಿಶೇಷ ಪೀಠ. ಮೊದಲ ದೀಪಾವಳಿಯ ಹೆಸರಿನಲ್ಲಿ ಅಳಿಯನು ಮಾವನ ಮನೆಗೆ ಹೋಗುವುದು ಮತ್ತು ರಾಜೋಪಚಾರ ಸ್ವೀಕರಿಸುವುದೂ ನಡೆಯುತ್ತಿತ್ತು. ಆ ಮಾವನ ಮನೆಯಲ್ಲಿ ಅವನ ಹೆಂಡತಿಗೆ ತಮ್ಮಂದಿರು ಇದ್ದಲ್ಲಿ ಮುಗೀತು, ತಮ್ಮ ಭಾವ ಪಟಾಕಿ ತರ್ತಾನೆ ಅನ್ನೋ ನಿರೀಕ್ಷೆಯಲ್ಲೇ ಇರ್ತಾರೆ. ಭಾವ ಎಷ್ಟು ಪಟಾಕಿ ತರ್ತಾನೆ ಅನ್ನೋದರ ಮೇಲೆ ಅವನಿಗೆ 'ಗ್ರೇಟ್' ಅಥವಾ 'ಕಂಜೂಸ್' ಅನ್ನೋ ಹಣೆಪಟ್ಟಿ ಬೀಳುತ್ತೆ.

ಚಿತ್ತಾಕರ್ಷಕ ಗೂಡು ದೀಪ ಸ್ಪರ್ಧೆ ನೋಡಲು ಹರಿದುಬಂತು ಜನಸಾಗರಚಿತ್ತಾಕರ್ಷಕ ಗೂಡು ದೀಪ ಸ್ಪರ್ಧೆ ನೋಡಲು ಹರಿದುಬಂತು ಜನಸಾಗರ

ತಾನು ಈ ಮನೆಯ ಅಳಿಯ ಎಂಬ ಹುಂಬತನದಿಂದ ಹೆಚ್ಚಾಗಿ ಬೆರೆಯದೇ distance maintain ಮಾಡುವ ಅಳಿಯಂದಿರು, ತಾನು ಸಕತ್ social ಅಂತ ತೋರಿಸಿಕೊಳ್ಳಲು ಅತಿಯಾಗಿ ಬೆರೆಯೋ ಅಳಿಯಂದಿರು ಹೀಗೆ ಹತ್ತು ಹಲವಾರು ವೆರೈಟಿ ಅಳಿಯಂದಿರನ್ನು ಕಾಣಬಹುದು. ಆ ಮುಂದಿನ ವರ್ಷದಿಂದ ಅವರನ್ನು ಕರೆಯದೆ ಹೋದಾಗ ಅರ್ಥೈಸಿಕೊಳ್ಳಬೇಕಾದ್ದು ಧರ್ಮ. ಅವನ ಹೆಂಡತಿಯ ತಂಗಿಗೆ ಮುಂದಿನ ವರ್ಷದಲ್ಲಿ ಮದುವೆಯಾಗಿ ಮುಂದಿನ ದೀಪಾವಳಿಗೆ ಹೊಸ ಅಳಿಯನಿಗೆ ರಾಜೋಪಚಾರವಾದರೆ ತನಗೆ ಮರ್ಯಾದೆ ಕೊಡಲಿಲ್ಲ ಅಂತ ಹಾರಾಡೋದಂತೂ ಸಲ್ಲದು. ಈಗ ಹೇಗೋ ಗೊತ್ತಿಲ್ಲ.

ಹೋಗಲಿ ಬಿಡಿ, ಈಗ ದೇಶದಿಂದ ವಿದೇಶಕ್ಕೆ ಹೋಗೋಣ.

ಅಮೇರಿಕದಲ್ಲಿನ ಹಲವಾರು ಕಡೆ ಸಾರ್ವಜನಿಕವಾಗಿ ಪಟಾಕಿ ಸಿಡಿಸುವುದಕ್ಕೆ ನಿಷೇಧವಿದೆ. ಇಲ್ಲಿನ ಸ್ವಾತಂತ್ರ್ಯದ ದಿವಸದ ಸಂಭ್ರಮದ ದಿನದಂದು ನಿರ್ದಿಷ್ಟ ಜಾಗಗಳಲ್ಲಿ ಸುಡುವ ಪಟಾಕಿಗಳನ್ನು ಒಂದೆಡೆ ಕೂತು ನೋಡಿ ಆನಂದಿಸಬೇಕು. ಅದರಂತೆಯೇ ನಮಗೂ ದೀಪಾವಳಿಯ ಹಬ್ಬದಂದು ಮನೆಯ ಬಳಿ ಸದ್ದು ಮಾಡುವ ಪಟಾಕಿಯನ್ನು ಸುಡುವುದಕ್ಕೆ ಅನುಮತಿ ಇರುವುದಿಲ್ಲ. ಹಾಗೂ ಸಿಡಿಸಿದಲ್ಲಿ ಸುತ್ತುಮುತ್ತಲಿನ ಮಂದಿ ಪೊಲೀಸ್ ಕಂಪ್ಲೇಂಟ್ ಕೊಟ್ಟರೂ ಕೊಡಬಹುದು.

ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?ಹೆಣ್ಣು ನಿಜಕ್ಕೂ ಸಂತಸದಿಂದ ಇದ್ದಿದ್ದರೆ ಇಂಥದೊಂದು ದಿನ ಬೇಕಿತ್ತೇ?

ಮರದ ಮನೆಗಳಾದ್ದರಿಂದ ಬೆಳಕಿನ ಪಟಾಕಿಗಳನ್ನು ಸುಡುವುದಕ್ಕೂ ಅನುಮತಿ ಬೇಕು ಮತ್ತು ಅತೀ ಎಚ್ಚರಿಕೆವಹಿಸಬೇಕು. ದುರಾದೃಷ್ಟವಶಾತ್ ನಾವು ಸುಡುವ ಪಟಾಕಿಯಿಂದ ಏನಾದರೂ ವ್ಯತ್ಯಾಸವಾದರೆ ಪರಿಸ್ಥಿತಿ ವಿವರಿಸೋದು ಕಷ್ಟ, ಅನುಭವಿಸೋದು ಬೇರೆ ಮಾತು ಬಿಡಿ. ಕೆಲವಡೆ ಅನುಮತಿ ಕೇಳಿ ಪಟಾಕಿ ಸಿಡಿಸಬಹುದು. ಅನುಮತಿ ಇದ್ದ ಕಡೆ ದೀಪಾವಳಿಯ ಸಂದರ್ಭದಲ್ಲಿ ಕೆಲವು ಪಟಾಕಿ ಅಂಗಡಿಗಳನ್ನು ತೆರೆಯುತ್ತಾರೆ.


ಪ್ರತಿವರ್ಷವೂ ಇಲ್ಲಿಯೂ ದೀಪಾವಳಿಯು ಮಹತ್ವ ಪಡೆಯುತ್ತಿದೆ. ಅಮೆರಿಕಾದ ಪ್ರಸಿದ್ಧ ಮಳಿಗೆಯಾದ ಕೆಲವು ನಗರಗಳಲ್ಲಿನ 'Macy's' ನಲ್ಲಿ, ಹಬ್ಬದ ಸಮಯದಲ್ಲಿ ಸೀರೆಗಳು, ಚೂಡಿದಾರ ಇತ್ಯಾದಿ ಭಾರತೀಯ ದಿರುಸುಗಳು ಲಭ್ಯ. ದೀಪಾವಳಿ ಹಬ್ಬದ ಸಮಯದಲ್ಲಿ ಇಲ್ಲಿನ indian stores'ನಲ್ಲಿ ಬೇಳೆ'ಗಳೇ ಮೊದಲಾದ ಹಲವಾರು ದಿನಸೀ ಸಾಮಾನುಗಳ ಮೇಲೆ ರಿಯಾಯಿತಿ ಇರುತ್ತದೆ.

ಅಮೆರಿಕವೇ ಅಲ್ಲದೇ ಬೇರೆ ದೇಶಗಳಲ್ಲೂ ಕಚೇರಿಗಳಲ್ಲಿ ದೀಪಾವಳಿಯ ಆಚರಣೆ ನಡೆಸುವುದು ಸರ್ವೇಸಾಮಾನ್ಯವಾಗಿದೆ. ಆ ದಿನದ ಅಲ್ಲಿನ ಹಬ್ಬದೂಟವನ್ನು ಸವಿಯಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಲು ವಿದೇಶೀಯರು ಕಾದಿರುತ್ತಾರೆ ಎಂದರೆ ಸುಳ್ಳಲ್ಲ. ಹಲವು ವಿದೇಶೀ ಗಂಡಸರು ಕುರ್ತಾ ಪೈಜಾಮದಲ್ಲಿ ಕಂಡು ಬಂದರೆ, ಹೆಣ್ಣುಗಳು ಸೀರೆ ಅಥವಾ ಚೂಡಿದಾರ ಧರಿಸಿ ಆನಂದಿಸುತ್ತಾರೆ. ಗಾಯನ, ವೀಣಾವಾದನ ಇತ್ಯಾದಿ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತದೆ.

ಹಾಗೆಯೇ ಹಲವಾರು ಕುಟುಂಬಗಳು ಒಟ್ಟಾಗಿ ಸೇರಿ ಬೆಳಕಿನ ಪಟಾಕಿಗಳನ್ನು ಸಿಡಿಸಿ ನಂತರ ಒಟ್ಟಾಗಿ ಊಟ ಮಾಡುತ್ತಾರೆ. ಆಯಾ ಪ್ರದೇಶಗಳ ದೇವಸ್ಥಾನಗಳಲ್ಲಿ ನಡೆಯುವ ಸಾಮೂಹಿಕ ಪೂಜೆ / ಪಟಾಕಿ ಸಿಡಿಸುವ ಕಾರ್ಯಕ್ರಮಗಳು ವಿದೇಶಗಳಲ್ಲೂ ದೀಪಾವಳಿಯ ಹಬ್ಬದ ಸೊಬಗನ್ನು ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿ ಏನಲ್ಲ.

ಅಸತೋ ಮಾ ಸದ್ಗಮಯಾ . . . ತಮಸೋ ಮಾ ಜ್ಯೋತಿರ್ಗಮಯ . . .

English summary
Deepavali - celebration of festival of lights in India and America. Buying new cloths, bursting firecrackers, savoring delicious food, enjoying with friends and relatives is highlight of Deepavali in India. But, it's not so in America. You are not allowed to burst firecrackers anywhere in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X