ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಹಬ್ಬವೆಂದರೆ ಮರೆಯದ ನೆನಪುಗಳ ನವರಾತ್ರಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ದಸರಾ ಹಬ್ಬ ಕನ್ನಡಿಗರಿಗೆ ಅತೀ ವಿಶೇಷ ಹಬ್ಬ ಎಂದರೆ ಸುಳ್ಳಲ್ಲ . . . ಎಳ್ಳು-ಬೆಲ್ಲದ ಹಬ್ಬದಂತೆ ಸವಿ, ಬೇವು-ಬೆಲ್ಲದ ಹಬ್ಬದಂತೆ ನವನವೀನ, ಕಡುಬಿನ ಹಬ್ಬದಂತೆ ಗಲಗಲ, ಬೆಳಕಿನ ಹಬ್ಬದಂತೆ ಪ್ರಕಾಶಮಾನ. ಒಂದು ಹಬ್ಬದಲ್ಲಿ ಎಲ್ಲ ಹಬ್ಬಗಳ ಸಮ್ಮಿಲನವೇ ಈ ನವರಾತ್ರಿಗಳ ಸಮ್ಮೇಳನ - ದಸರಾ.

ಚಿಕ್ಕವನಾಗಿದ್ದಾಗಿನಿಂದ ಇಂದಿನವರೆಗೆ ದಸರಾ ಹಬ್ಬದ ಜೊತೆಗಿನ ನನ್ನ ಒಡನಾಟದ ಒಂದು ಯಾನ ಹೀಗಿದೆ.

Dasara festival and never forgettable Navaratri

ಆ ದಿನಗಳಲ್ಲಿ ಮನೆಯಲ್ಲಿ ಯಾವ ರೀತಿ ಹಬ್ಬ ಮಾಡುತ್ತಿದ್ದರು ಎಂಬ ನೆನಪು ಇಲ್ಲದಿದ್ದರೂ ಅರಿಶಿನ-ಕುಂಕುಮಕ್ಕೆ ಅಮ್ಮನನ್ನು ಕರೆದ ಮನೆಗೆ ನಾನೂ ಹೋಗಿರುತ್ತಿದ್ದೆ. ಮತ್ತಿನ್ಯಾರ ಜೊತೆಗೋ "ಗೊಂಬೆ ಕೂಡ್ಸಿದ್ದೀರಾ?" ಅಂತ ಹೋಗುತ್ತಿದ್ದುದು ನೆನಪಿದೆ. ಅವರ ಮನೆಯಲ್ಲಿ ಏನು ಗೊಂಬೆ ಕೂಡಿಸಿದ್ದಾರೆ ಅಂಬೋ ಆಸಕ್ತಿ ಅಷ್ಟರಲ್ಲೇ ಇದೆ. ಆದರೆ ಅವರು ಕೊಡೋ ಚರ್ಪು ಮುಖ್ಯ ಆಕರ್ಷಣೆ. ಅಂದು ತಿನ್ನುತ್ತಿದ್ದ 'ಶಂಕರಪೋಳಿ' ಇಂದಿಗೂ ನೆನಪಿದೆ. ಮನೆಯಲ್ಲಿ ಶಂಕರಪೋಳಿ ಮಾಡುತ್ತಿರಲಿಲ್ಲ, ಯಾಕೆ ಅಂತ ಗೊತ್ತಿಲ್ಲ. ಹಾಗಾಗಿ ಇದು ವರ್ಷಕ್ಕೊಮ್ಮೆ ತಿಂಬ ತಿಂಡಿ ಆಗಿತ್ತು.

ವೈಭವದ ದಸರಾ ವಿಶೇಷ ಪುಟ

ಮೊದಲ ಮೊದಲು ಅಮ್ಮನ ಸೆರಗು ಹಿಡ್ಕೊಂಡ್ ಹೋಗುತ್ತಾ ಇದ್ದುದು ನಂತರ ಸ್ನೇಹಿತರ ಜೊತೆಗೂ ಹೋಗುವಷ್ಟು ವಯಸ್ಸಾಯಿತು. "ಬೊಂಬೆ ಕೂಡ್ಸಿದ್ದೀರಾ" ಎಂಬ ಹೃದಯದಿಂದ ಅಲ್ಲಲ್ಲ ಹೊಟ್ಟೆಯಿಂದ ಹೊರಬರುತ್ತಿದ್ದ ಕೂಗಿಗೆ ಕೆಲವರು ಬಾಗಿಲೇ ತೆರೆಯುತ್ತಿರಲಿಲ್ಲ. 'ಗಣೇಶ ಕೂಡ್ಸಿದ್ದೀರಾ' ಅಂತ ಕೇಳ್ಕೊಂಡ್ ಕಳೆದ ತಿಂಗಳು ಹೋದ ಮನೆಗಳೇ 'ಬೊಂಬೆ ಕೂಡ್ಸಿದ್ದೀರಾ' ಮನೆಗಳೂ ಆಗಿದ್ದವು. ಕಳೆದ ತಿಂಗಳು ಗಣೇಶನ ನೋಡಲು ಬಂದಾಗ ಕಡಲೆ ಗುಗ್ಗುರಿ ಕೊಟ್ಟಿದ್ದರು. ಅದನ್ನು ತಿಂದುಕೊಂಡೇ ಹೊರಡುವಾಗ ಅವರ ಬಾಗಿಲಿಗೆ ಹಾಕಿದ್ದ ಕರ್ಟನ್'ಗೆ ಕೈ ಒರೆಸಿಕೊಂಡಿದ್ದು ನೋಡಿರಬೇಕು ಅನ್ನಿಸುತ್ತೆ, ಅದಕ್ಕೆ ಈಗ ಮನೆಗೆ ಸೇರಿಸುತ್ತಿಲ್ಲ.

ಅದೇ ಈ ಮನುಷ್ಯ ಇದ್ದಾನೆ ನೋಡಿ, ಅಬ್ಬಬ್ಬಾ!ಅದೇ ಈ ಮನುಷ್ಯ ಇದ್ದಾನೆ ನೋಡಿ, ಅಬ್ಬಬ್ಬಾ!

ಮನೆಯಲ್ಲಿ ಗೊಂಬೆ ಕೂಡಿಸುವ ಕೆಲಸಗಳಿಗೆ ಕೈಹಚ್ಚುವಷ್ಟು ವಯಸ್ಸಾದ ಮೇಲೆ ಅಂಗಡಿಯಿಂದ color ಪೇಪರುಗಳನ್ನು ತಂದು ಅಮ್ಮ ಹೇಳಿದಂತೆ ಕತ್ತರಿಸಿ ಕೊಡುತ್ತಿದ್ದೆವು. ಪಟ್ಟದ ಗೊಂಬೆಗೆ ಸೀರೆ ಉಡಿಸುವ ಕೆಲಸ ಅಮ್ಮನದು. ಮನೆಯಲ್ಲಿದ್ದ ದಶಾವತಾರ ಮತ್ತಿತರ ಗೊಂಬೆಗಳನ್ನು ಜೋಡಿಸುವುದು ನಮ್ಮ ಕೆಲಸ. ದಶಾವತಾರದ ಅವತಾರಗಳ ಸರದಿಯನ್ನು ಸರಿಪಡಿಸುವುದು ಅಮ್ಮನ ಕೆಲಸ. ರಾಮ, ಪರಶುರಾಮ ಆ ಕಡೆ ಈ ಕಡೆ ಆಗ್ತಾ ಇದ್ದುದು ಬಹಳಾ ಕಾಮನ್. ಜೋಡಿ ಹೆಸರು ಹೇಳುವಾಗ ರಾಮ-ಪರಶುರಾಮ ಎನ್ನುತ್ತಿದ್ದರಿಂದಲೋ ಏನೋ ರಾಮನ ನಂತರ ಪರುಶುರಾಮಾವತಾರ ಎಂದುಕೊಂಡಿದ್ದೆ.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

ಎಚ್.ಎ.ಎಲ್'ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಪೌರೋಹಿತ್ಯ ಬಲ್ಲ ನಮ್ಮ ತಂದೆಯವರನ್ನು ಡಿಪಾರ್ಟ್ಮೆಂಟ್ ಮತ್ತು ಫ್ಯಾಕ್ಟರಿ ಬಸ್'ಗಳ ಪೂಜೆಗೆ ಆಹ್ವಾನಿಸುತ್ತಿದ್ದರು. ಪ್ರತಿ ಪೂಜೆಯಲ್ಲೂ ಒಂದು ಸ್ವೀಟ್ ಬಾಕ್ಸ್ ಮತ್ತು ಹಣ್ಣುಗಳು ಗ್ಯಾರಂಟಿ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಅದನ್ನು ಮುಟ್ಟುತ್ತಲೇ ಇರುತ್ತಿರಲಿಲ್ಲ! ದಂತಕುಳಿಯೇ ಮೊದಲಾದ ಎಷ್ಟೋ ಕೀಟಾಣುಗಳಿಗೆ ಪ್ರಿಯವಾದ ಸಿಹಿತಿಂಡಿಯೇ ನನಗೂ ಪ್ರಿಯವಾಗಿತ್ತು. ಖಂಡಿತ ಆಗೆಲ್ಲ ಡಯಟ್ ಎಂಬ ವಿಷಯ ಗೊತ್ತಿರಲಿಲ್ಲ. ಸದ್ಯ ಬಚಾವ್! ಮೈಸೂರು ಪಾಕ್, ಲಡ್ಡು, ಸೋನ್ ಪಾಪಡಿ, ಬರ್ಫಿ'ಗಳೇ ಮೊದಲಾದ ಸ್ವೀಟುಗಳು ಹೇರಳವಾಗಿ ಹೊಟ್ಟೆ ಸೇರುತ್ತಿತ್ತು.

Dasara festival and never forgettable Navaratri

ಮತ್ತೊಬ್ಬರ ಮನೆಗಳಿಗೆ ಹೋದಾಗ ಬೊಂಬೆಗಳ ಇಡುವುದರ ಜೊತೆ ಪುಟ್ಟದಾಗಿ park ಕೂಡಾ ಮಾಡುತ್ತಿದ್ದರು. ಪಾರ್ಕ್'ನ ಹಸಿರು ಹುಲ್ಲು ಕಾಣಿಸಲು ಮಣ್ಣಿನ ಮೇಲೆ ರಾಗಿ ಹಾಕಿ ನಿಜವಾದ ಹಸಿರು ಮೂಡಿಸುತ್ತಿದ್ದರು. ಅಲ್ಲಲ್ಲೇ ಪುಟ್ಟ ಪುಟ್ಟ ಬೆಂಚು ಎಂಬ ಆಟಿಕೆ, ಗಂಡ-ಹೆಣ್ಣು ಬೊಂಬೆಗಳು ಹೀಗೆ. ಅವೆಲ್ಲಾ ಕಂಡಾಗ ಮುಂದಿನ ಬಾರಿ ನಾನೂ ಮಾಡಬೇಕು ಎನಿಸುತ್ತಿತ್ತು. ಆದರೆ ಮುಂದಿನ ವರ್ಷ ಅವರ ಮನೆಯಲ್ಲಿ ಪಾರ್ಕ್ ನೋಡಿದಾಗಲೇ ಮತ್ತೆ ನೆನಪಾಗುತ್ತಿದ್ದುದು.

ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?ನೀವು ಯಾವ ರೀತಿ ಹೊಗಳಿಕೆ ಬಯಸುತ್ತೀರಿ?

ನನ್ನ ಜೀವನದ ಅವಿಭಾಜ್ಯ ಅಂಗ ಎಂದರೆ ಕೆಂಪು ಬಿ.ಟಿ.ಎಸ್ ಬಸ್ಸು! ಕೆಲಸಕ್ಕೆ ಸೇರುವ ದಿನಗಳವರೆಗೆ ಬಸ್ಸು ನನ್ನೊಡನಾಡಿ. ಆ ದಿನಗಳಲ್ಲಿ ವರ್ತೂರು, ಪಣತ್ತೂರು, ಮುತ್ತಸಂದ್ರ, ಮಾರತ್ತಹಳ್ಳಿ ಮುಂತಾದ ಊರುಗಳ ಬಸ್ಸುಗಳು ನನಗೆ ಬಹಳಾ ಪ್ರಿಯ. ಹೆಚ್ಚು ಸಮಯ ನಾನು ಆಡುತ್ತಿದ್ದುದೇ ಬಸ್ ಆಟ. ಅಷ್ಟೊಂದು ಕ್ರೇಜ್. ಆಯುಧಪೂಜೆ ಹಬ್ಬದ ಸಮಯದಲ್ಲಿ ಮದುವಣಗಿತ್ತಿಯಂತೆ ಶೃಂಗಾರ ಮಾಡಿಕೊಂಡು ತಿರುಗುತ್ತಿದ್ದ ಬಸ್ಸುಗಳನ್ನು ನೋಡುವುದೇ ಆನಂದ. ಬಸ್ಸಿನ ಮುಂಭಾಗದ ಆಚೀಚೆ ದೊಡ್ಡ ದೊಡ್ಡ ಬಾಳೆಕಂದುಗಳನ್ನು ಕಟ್ಟಿಕೊಂಡು ಡ್ರೈವರ್'ಗೆ ರೋಡ್ ಕಾಣಲೆಂದು ಒಂದು ಕಿಂಡಿಯಂತೆ ಜಾಗ ಮಾಡಿ ಮಿಕ್ಕೆಲ್ಲ ಕಡೆ ಹೂವಿನ ಅಲಂಕಾರದಲ್ಲಿ ಮುಚ್ಚಿರುವುದನ್ನು ನೋಡುವುದೇ ಪರಮಾನಂದ.

ಬಸ್ ಅನ್ನು ಅಲಂಕರಿಸುವುದರಲ್ಲಿಯೇ ಒಂದು ಪೈಪೋಟಿ ಇತ್ತು. ನಮ್ಮೂರಿನ ಜನ ಹೆಚ್ಚು ತಮ್ಮೂರಿನ ಜನ ಹೆಚ್ಚು ಎಂಬ ಪೈಪೋಟಿ. ಬರೀ ಅಲಂಕಾರವೇ ಅಲ್ಲದೆ ಬಸ್ಸಿನಲ್ಲಿ ಸ್ಟೀರಿಯೋ ಓಡಿಸಿ ಹಾಡು ಹಾಕಿಬಿಟ್ಟರಂತೂ ಮುಗೀತು. ಆ ಬಸ್ಸು, ಆ ಊರಿನ ಜನ ಒಂದು ಲೆವಲ್ ಅಂತ. ಬಾನೆಟ್ ಬಳಿ ಒಂದು ನಾಲ್ಕು ಜನ ಆ ಊರಿನವರು. ರೆಕಾರ್ಡ್ ಬದಲಿಸುವುದು, ವಾಲ್ಯೂಮ್ ಕಂಟ್ರೋಲ್ ಮಾಡುವುದು, ಇತ್ಯಾದಿ ಅವರ ಕೆಲಸ. ರಿಚ್ಮಂಡ್ ವೃತ್ತದ ಸ್ಟಾಪ್ ಬಂದ ಮೇಲೆ ಹಾಡುಗಳು ಬಂದ್ ಮಾಡಬೇಕಿತ್ತು. ಸಿಟಿ ಏರಿಯಾದಲ್ಲಿ ಜೋರಾಗಿ ಹಾಡುಗಳನ್ನು ಹಾಕುವಂತಿರಲಿಲ್ಲವಂತೆ! ಈ ಪಡ್ಡೆ ಗ್ಯಾಂಗ್ ಬಸ್ಸಿನಲ್ಲಿ ಏರುವ ಹೆಣ್ಣುಗಳ ಮೇಲೆ ಅವಲಂಬಿತವಾಗಿ, ಅವರು ಹಾಡುಗಳ ಟ್ರ್ಯಾಕ್ ಕಂಟ್ರೋಲ್ ಮಾಡುವುದು ನಡೆಸುತ್ತಿದ್ದರು. ಹಾಡಿನೊಂದಿಗೆ ಇವರ ದನಿಯೂ ಸೇರುತ್ತಿತ್ತು. ಇವೆಲ್ಲಾ ಅಂದು ತಿಳಿಯುತ್ತಿರಲಿಲ್ಲ, ನಂತರ ಅನುಭವಕ್ಕೆ ಬಂತು.

Dasara festival and never forgettable Navaratri

ಈ ಹಬ್ಬದ ಸಾಲು ಅಂತ ಬಂದರೆ ಸ್ಕೂಲು ರಜಾ. ಇಂಥಾ ಚೆಂದದ ಬಸ್ಸಿನಲ್ಲಿ ಸ್ಕೂಲಿಗೆ ಹೋಗಬೇಕು ಎಂಬ ಆಸೆ ಈಡೇರುತ್ತಲೇ ಇರಲಿಲ್ಲ. ಹಬ್ಬ ಕಳೆದು ಶಾಲೆ ಆರಂಭವಾದ ಮೇಲೆ ಬಸ್ಸಿನಲ್ಲಿ ಹಾಡುಗಳು ನಿಂತುಹೋಗುತ್ತಿತ್ತು, ಅಲಂಕಾರಗಳು ಕಂಗೆಡುತ್ತಿತ್ತು ಅಥವಾ ತೆಗೆದೇ ಹಾಕಲಾಗುತ್ತಿತ್ತು.

ಇನ್ನು ಮನೆಯ ಗಾಡಿಗಳ ಪೂಜೆ ಕೇಳಬೇಕೆ? ಅಬ್ಬಾ, ಇದ್ದ ಒಂದು Raleigh ಸೈಕಲನ್ನೇ ಉಜ್ಜಿ ತೊಳೆದು ಕುಂಕುಮ ಹಚ್ಚಿ, ಸೇವಂತಿಗೆ ಹಾರ ಏರಿಸಿ, ಕತ್ತರಿಸಿದ ನಿಂಬೆಹಣ್ಣಿನ ಮೇಲೆ ಏರಿಸಿದರೆ ಗಾಡಿ ಪೂಜೆ ಆಯ್ತು. ಮಿಕ್ಕಿದ್ದು ಎಂದರೆ ಹಾರೆ, ಈಳಿಗೆ ಮಣೆಯಂತಹ ನಿತ್ಯೋಪಯೋಗಿ ಆಯುಧಗಳ ಪೂಜೆ.

ಕಾಲವನ್ನು ತಡೆಯೋರು ಯಾರೂ ಇಲ್ಲ ಅಲ್ಲವೇ? ವಯಸ್ಸು ಏರಿದಂತೆ ಚಿಕ್ಕಪುಟ್ಟ ಕ್ರೇಜ್'ಗಳು ಕಡಿಮೆಯಾಯ್ತು. ಇನ್ನೊಬ್ಬರ ಮನೆಗೆ ಹೋಗಿ ಬೊಂಬೆ ನೋಡುವ ಮಾತು ದೂರ ಉಳಿಯಿತು. ಏನೋ ಬಿಗುಮಾನ ಆವರಿಸಿತ್ತು. ನವರಾತ್ರಿಗೆ ಪೆಟ್ಟಿಗೆಯಿಂದ ಹೊರಬಂದು ಅಂದ ಚೆಂದ ಮೆರೆದು ಮತ್ತೆ ಪೆಟ್ಟಿಗೆ ಸೇರುತ್ತಿದ್ದ ಬೊಂಬೆಗಳು ಷೋ-ಕೇಸ್ ಸೇರಿ ನಿತ್ಯ ನವರಾತ್ರಿಯಾಯ್ತು. ಪಟ್ಟದ ಬೊಂಬೆ ಮಾತ್ರ ವರ್ಷಕ್ಕೊಮ್ಮೆ ಬಂದು ಹೋಗಿ ಮಾಡುತ್ತಿತ್ತು.

ಆ ನಂತರದ ಒಂದಷ್ಟು ವರ್ಷಗಳು ಗಾಡಿ ಪೂಜೆ, ಆಫೀಸಿನಲ್ಲಿ ಕಂಪ್ಯೂಟರ್ ಪೂಜೆಗೆ ಮಾತ್ರ ಮೀಸಲಾಗಿತ್ತು. ಆಸಕ್ತಿ ಕಡಿಮೆಯಾಗಿರಲಿಲ್ಲ ಆದರೆ ಅವಕಾಶಗಳು ಕಡಿಮೆಯಾಗಿತ್ತು. ನಂತರ ನಾ ಸೇರಿದ ಕಂಪನಿ ಬಿ.ಪಿ.ಎಲ್. ಅಲ್ಲಿ ಫ್ಯಾಕ್ಟರಿ ವಾತಾವರಣವನ್ನು ಮೊದಲ ಬಾರಿಗೆ ಕಂಡಿದ್ದೆ (ಕಡೆಯ ಬಾರಿ ಕೂಡ). HR Department ಕಂಡರೆ ಹೆದರುವ, ಮೆನೇಜರ್ ಬಂದರೆ ಬೆದರುವ, ಅಸೆಂಬ್ಲಿಯ ಲೈನ್'ನ ಮರಿ supervisor ಬಳಿಯೇ ನಿತ್ಯದ ಗೋಳನ್ನು ಹಂಚಿಕೊಳ್ಳುವ, ಇಡೀ ದಿನ ನೀಲಿ ಶರಟುಧಾರಿಗಳಾದ ಹೆಣ್ಣು-ಗಂಡುಗಳು ಆಯುಧಪೂಜೆ ದಿನ ಮಾತ್ರ ಸ್ವಚ್ಛಂದದ ಹಕ್ಕಿಗಳು. ಒಂದರ್ಥದಲ್ಲಿ ಹೇಳಬಹುದು ಎಂದರೆ ಆ ದಿನಕ್ಕಾಗಿ ಪ್ರತಿ ವರ್ಷ ಎದುರು ನೋಡುತ್ತಿದ್ದರು.

ಅವರವರ ರೂಟ್ ಬಸ್ಸುಗಳನ್ನು ಅಲಂಕರಿಸುವ, ಹಾಡುಗಳನ್ನು ಓಡಿಸುವ, ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಪರಿ ಬಾಲ್ಯದ ದಿನಗಳನ್ನು ನೆನಪಿಸಿದ್ದೆ ಅಲ್ಲದೆ ಮತ್ತೊಮ್ಮೆ ದಸರಾ ಹಬ್ಬದ ಉತ್ಸುಕತೆಯನ್ನು ಬಡಿದೆಬ್ಬಿಸಿತ್ತು. ಬಣ್ಣ ಬಣ್ಣದ ದಿರುಸುಗಳನ್ನು ಧರಿಸಿ ಎಲ್ಲ ಡಿಪಾರ್ಟ್ಮೆಂಟ್'ಗಳ ನಡುವೆ ನಿರ್ಭಿಡೆಯಿಂದ ಓಡಾಡುತ್ತ, ಫೋಟೋ'ಗಳನ್ನೂ ತೆಗೆಸಿಕೊಳ್ಳುತ್ತ ಕೊನೆಗೆ ಫ್ಯಾಕ್ಟರಿಯ ಮೇಲಧಿಕಾರಿ ಬಂದ ಮೇಲೆ assembly line ಬಳಿಯಲ್ಲಿ ದೊಡ್ಡ ಪೂಜೆ ಮತ್ತು ಹಬ್ಬದ ಊಟವಾದ ಮೇಲೆ ಮತ್ತೊಮ್ಮೆ ಬಸ್ಸನ್ನು ಏರಿ ಮನೆಗೆ ಸೇರಿದ ಮೇಲೆ ಮುಂದಿನ ವರ್ಷದ ಹಬ್ಬ ಎಂದು ಎದುರು ನೋಡುವ ಪರಿ ಅವರ್ಣನೀಯ.

ಯಾವುದೇ ಸಂಕಟವಾಗಲಿ ಸಂಭ್ರಮವಾಗಲಿ ಸನ್ನಿವೇಶಗಳು ಬದಲಾದಂತೆ, ಕಾಲ ಬದಲಾದಂತೆ ಬದಲಾಗಲೇಬೇಕು. Change is Constant ಎನ್ನುವುದು ಎಷ್ಟು ಸತ್ಯ ಅಲ್ಲವೇ?

ನಂತರ ಕಾಲಿರಿಸಿದ್ದು ಐಟಿ ಕಂಪನಿಗೆ. ಸೂಟು-ಬೂಟು-ಟೈ ಸಂಸ್ಕೃತಿ ಅಲ್ಲ. ಹಾಗಂತ ತೀರಾ ಜೀನ್ಸು, ಚಡ್ಡಿ, ಟಿ-ಶರಟೂ ಅಲ್ಲ. ದೇಶದ ನಾನಾ ಮೂಲೆಯ ಜನ ಅಲ್ಲಿದ್ದರು. ಆಗೊಮ್ಮೆ ಈಗೊಮ್ಮೆ ಪರದೇಶಿಗಳೂ ಬರುತ್ತಿದ್ದರು. ಹೀಗಾಗಿ ಇಂಥಾ ಹಬ್ಬ ಅಂತ ಸ್ಪೆಷಲ್ ಆಗಿ ಆಚರಣೆಯಲ್ಲಿ ಇರಲಿಲ್ಲ. ಎಲ್ಲವನ್ನೂ ತಕ್ಕ ಮಟ್ಟಿಗೆ ಆಚರಣೆ ಮಾಡಿದ್ದರೂ ಆ ಹಿಂದಿನ ದಿನಗಳ ನೆನಪು ಕೆದಕುವಷ್ಟು ಇರಲಿಲ್ಲ.

ನಾನು ಅಲ್ಲಿ ಪರದೇಶಿಗಳನ್ನು ಕಂಡಿದ್ದಕ್ಕೋ ಅಥವಾ ಪರದೇಶಿಗಳು ನನ್ನನ್ನು ಕಂಡಿದ್ದಕ್ಕೋ ಒಟ್ಟಿನಲ್ಲಿ ಒಂದು ದಿನ ನಾನೂ NRI ಆದೆ. NRI ಪದಕ್ಕೆ ಇಷ್ಟು ದಿನ ಒಂದರ್ಥ ಇತ್ತು, ಕಳೆದ ವಾರದಲ್ಲಿ ಅದೂ ಹಾಸ್ಯಾಸ್ಪದವಾಗಿದೆ. ಹೋಗ್ಲಿ ಬಿಡಿ.

ಪರದೇಶಿಯಾದ ಮೇಲೆ ದಸರಾ ಹಬ್ಬವನ್ನು ಇಲ್ಲೂ ಮಾಡುತ್ತಿದ್ದೇವೆ. ಸೈಕಲ್'ನಿಂದ ಆರಂಭವಾಗಿದ್ದ ಅಂದಿನ ಹಬ್ಬ ಇಂದು ಸೈಕಲ್ ಜೊತೆಗೆ ಕಾರುಗಳೂ ಸೇರಿವೆ. ಗೊಂಬೆಗಳನ್ನು ಕೂಡಿಸುತ್ತೇವೆ. ನವರಾತ್ರಿ ದಾಂಡಿಯಾ ಎಂದು ಹೊರಗೆ ನೃತ್ಯಕ್ಕೆ ಹೋಗುತ್ತೇವೆ. ಬೊಂಬೆ ನೋಡಲು ಹೋಗುತ್ತೇವೆ, ಬೊಂಬೆ ನೋಡಬನ್ನಿರೆಂದು ಮನೆಗೂ ಕರೆಯುತ್ತೇವೆ.

ಅಂದಿನ ಹಬ್ಬಕ್ಕೂ ಇಂದಿನ ಹಬ್ಬಕ್ಕೂ ಒಂದು ದೊಡ್ಡ ವ್ಯತ್ಯಾಸವಿದೆ. ಇದ್ದಕ್ಕಿದ್ದ ಹಾಗೆ ನಾವು ತುಂಬಾ ದೊಡ್ಡವರಾಗಿ ಬಿಟ್ಟಿದ್ದೇವೆ. ಅಂದು ನಮ್ಮ ಖುಷಿಗಾಗಿ ಹಬ್ಬ ಮಾಡುತ್ತಿದ್ದೆವು. ಈ ನಡುವೆ ಹಬ್ಬವನ್ನು ಬರೀ ನಮಗಾಗಿ ಅಲ್ಲದೆ ಮುಂದಿನ ಜನರೇಶನ್'ಗಾಗಿ ಮಾಡಲು ಆರಂಭಿಸಿದ್ದೇವೆ! ಏನಾದರೇನು ದಸರಾ ಹಬ್ಬ ಎಂದರೆ ಅದರ ಸೊಬಗೇ ಬೇರೆ. ಮತ್ತೊಮ್ಮೆ ನವರಾತ್ರಿ ಹಬ್ಬದ ಶುಭಾಶಯಗಳು.

English summary
Dasara is one of the biggest Hindu festival for Kannadigas in Karnataka. Srinath Bhalle recalls his childhood days when he used to celebrate Navaratri in Bengaluru. Times have changed. In earlier days we would celebrate the festival for ourselves, now we have to celebrate it for the next generation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X