• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ಇನ್ನೇನು ಮುಗೀತಾ ಬಂತು, almost ಆಯ್ತು

|
Google Oneindia Kannada News

ಈ ರೀತಿಯ ಮಾತುಗಳನ್ನು ನಮ್ಮ ಜೀವನದಲ್ಲಿ ಅದೆಷ್ಟು ಕೇಳಿರ್ತೀವೋ ಅಥವಾ ಹೇಳಿರ್ತೀವೋ ಗೊತ್ತಿಲ್ಲ. ಒಂದಷ್ಟು ಸನ್ನಿವೇಶಗಳತ್ತ ನೋಡೋಣ, ಈ ಮಾತುಗಳನ್ನು ಆಡುವುದರಿಂದ ಅದ್ಯಾವ ರೀತಿಯ ಆಶಯ ಅಥವಾ ಸಮಾಧಾನ ನಮ್ಮ ಮನಸ್ಸಿಗೆ ಬರಬಹುದು ಅಂತ.

ಮೊದಲಿಗೆ ಗಂಭೀರವಾಗಿಯೇ ಆಲೋಚಿಸುವ. ಆಮೇಲೆ ಹೇಳಿದರೆ ಅದೇ ಉಳಿದುಹೋಗುತ್ತದೆ ಮನಸ್ಸಿನಲ್ಲಿ. ಈ ಶಾರ್ವರಿ ನಾಮ ಸಂವತ್ಸರದ ಮುನ್ನ ಈ pandemic ಎಂಬ ಭೂತ ಎಂಟ್ರಿ ಕೊಟ್ಟರೂ, ಕೋವಿಡ್ ತಟ್ಟಿರಲಿ ಅಥವಾ ತಟ್ಟದಿರಲಿ, ಒಂದಲ್ಲಾ ಒಂದು ರೀತಿ ಎಲ್ಲರಿಗೂ ಕೋವಿಡ್ ಪರಿಣಾಮ ಬೀರಿದೆ.

ಕೆಲವರಿಗೆ ದೇಹ ಬೆಳೆದಿರಬಹುದು, ಕೆಲವರ ಲಲಿತಕಲೆಗಳು ಮತ್ತೆ ಜೀವ ತಳೆದಿರಬಹುದು. ಹಲವರಿಗೆ ಮನೆಯೇ ಮಂತ್ರಾಲಯ ಅರ್ಥಾತ್ ವರ್ಕ್ ಫ್ರಮ್ ಹೋಂ. ಕೆಲವರಿಗೆ ಕಚೇರಿಗೆ ಹೋದರೆ ಸಾಕು ಎಂಬಂತೆ ಆಗಿರಬಹುದು. ಒಟ್ಟಾರೆ ಹೇಳೋದಾದರೆ ಒಬ್ಬೊಬ್ಬರದ್ದು ಒಂದೊಂದು ಕಥೆ.

ಶ್ರೀನಾಥ್ ಭಲ್ಲೆ ಅಂಕಣ: ನಿದ್ದೆ ಬರ್ಲಿಲ್ಲ ಅಂತ ಅನ್ಬೇಡಿ ನೀವುಶ್ರೀನಾಥ್ ಭಲ್ಲೆ ಅಂಕಣ: ನಿದ್ದೆ ಬರ್ಲಿಲ್ಲ ಅಂತ ಅನ್ಬೇಡಿ ನೀವು

ಪ್ಲವ ನಾಮ ಸಂವತ್ಸರದಿಂದ ಎಲ್ಲವೂ ಸರಿ ಹೋಗುತ್ತದೆ

ಇದರಲ್ಲಿ ಒಂದು ವರ್ಗದವರು ಈ ಅನಿಷ್ಟ ನಮ್ಮಿಂದ ದೂರವಾದರೆ ಸಾಕು ಎಂದು ಕಾದಿದ್ದಾರೆ. ಒಂದೆಡೆ ಕೂತು ಕೈಕಾಲು ಕಟ್ಟಿಹಾಕಿದಂತೆ ಇರುವುದರಿಂದ ಹೀಗೆ. ಬರೀ ಕಾದಿರುವುದೇ ಅಲ್ಲದೆ, ಈ ಸಂವತ್ಸರ ಮುಗಿದು ಹೋದರೆ ಸಾಕು, ಮುಂಬರುವ "ಪ್ಲವ ನಾಮ ಸಂವತ್ಸರ'ದಿಂದ ಎಲ್ಲವೂ ಸರಿ ಹೋಗುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದಾರೆ. ನಂಬಿಕೆ ಇರಿಸಿಕೊಂಡವರಿಗೆ ಜಗ ಆಡುವ ಮಾತು "ಈ ತಿಂಗಳ ಹದಿಮೂರನೆಯ ತಾರೀಖಿನ ಸೂರ್ಯ ದರುಶನವಾದಂತೆ ಪ್ಲವ ಕಾಲಿಟ್ಟಿತು ಅಂತರ್ಥ. ಇನ್ನೇನು ಮುಗೀತಾ ಬಂತು ತಡೀರಿ."

ಈ ಮಾತುಗಳ ಹಿಂದಿನ ಆಶಯ ಏನು? ಕಷ್ಟಗಳು ಕರಗಿಹೋಗುತ್ತದೆ ಎಂಬ ಆಶಯ, ಏನೂ ಚಿಂತಿಸಬೇಡಿ ಎಂಬ ಭರವಸೆ. ಆದರೆ ಈ ಮಾತುಗಳಲ್ಲಿ ಆಡದ ಮಾತುಗಳೂ ಇವೆ. ಇಂದಿನ ಬವಣೆಗೆ "ಶಾರ್ವರಿ' ಸಂವತ್ಸರದ್ದು ತಪ್ಪಲ್ಲ. ಹಾಗೊಂದು ವೇಳೆ ಎಲ್ಲ ಬವಣೆಗಳೂ ಮುಂದಿನ ಸಂವತ್ಸರದಲ್ಲಿ ಮಾಯವಾದರೆ ಅದಕ್ಕೆ "ಪ್ಲವ' ಕಾರಣ ಅಂತೇನೂ ಅಲ್ಲ. ಹಾಗೊಂದು ವೇಳೆ ಈ ಬವಣೆ ಮುಂದುವರೆದರೆ "ಪ್ಲವ'ವನ್ನು ಮೂದಲಿಸದಿರಿ. ಇಷ್ಟೆಲ್ಲಾ ಮೂಟೆಯನ್ನು ಹೊತ್ತು ಮುಂದೆ ಸಾಗುವ.

ಊಟಕೆ ಬಾರೋ ಕೃಷ್ಣಪ್ಪ

ಈಗ ಏಕ್ದಂ ವಿಭಿನ್ನವಾದ ವಿಚಾರಕ್ಕೆ ಬರೋಣ. ಈ ಸನ್ನಿವೇಶದಲ್ಲಿ ಮಗುವೇ ಆಗಿ, ಅಥವಾ ತಾಯಿಯೇ ಆಗಬಹುದು, ಅದು ನಿಮಗೆ ಬಿಟ್ಟದ್ದು. ಮಗುವಿನ ಹಿಂದೆ ಓಡಿ ಓಡಿ ಊಟವನ್ನು ಮಾಡಿಸುವುದು ತಾಯಿಯ ಜೀವನದ ಒಂದು ಪ್ರಮುಖ ಅಂಗವೇ ಆಗಿರುತ್ತದೆ. ಯಶೋದೆಯನ್ನೂ ಬಿಟ್ಟಿರದ ಒಂದು ಹಂತವೆನ್ನಿ.

"ಉಂಡಾಡಬಹುದು ಓಡಿ ಬಾ ಎನ್ನಪ್ಪ, ಊಟಕೆ ಬಾರೋ ಕೃಷ್ಣಪ್ಪ' ಎಂಬ ಹಾಡನ್ನು ಕೇಳದವರಾರು? ಈ ಊಟೋಪಚಾರದ ಸನ್ನಿವೇಶದ ಒಂದು ಹಂತದಲ್ಲಿ ಕೂಸಿನ ಹೊಟ್ಟೆ ತುಂಬಿರುತ್ತದೆ. ಬೇಡಾ ಅಂದ್ರೆ ಬೇಡಾ ಎಂಬಂತೆ ತಲೆ ಆಡಬಹುದು ಅಥವಾ ತುಟಿಯನ್ನೇ ಹೊಲೆದು ಕೂರಬಹುದು. ಆಗ ಅಮ್ಮ ಆಡುವ ಮಾತು "ನೋಡಿಲ್ಲಿ, ಆಗೋಯ್ತು. ಎರಡೇ ತುತ್ತು ಅಷ್ಟೇ'.

ಓಹೋ! ಎರಡೇ ತುತ್ತು ಅಷ್ಟೇ

ಇನ್ನೇನು ಮುಗೀತು ತಟ್ಟೆ ಖಾಲಿಯಾಗಿ ಹೋಯ್ತು ಎಂಬ ಭರವಸೆ. ಓಹೋ! ಎರಡೇ ತುತ್ತು ಅಷ್ಟೇ, ಊಟ ಆಗಿ ಹೋಯ್ತು ಅಂತ ಬಹುಶಃ ಕೂಸು ಬಾಯಿ ತೆರೆಯಲೂಬಹುದು, ಅಥವಾ ಇಷ್ಟೂ ಹೊತ್ತು ತಿಂದಾಯ್ತಲ್ಲ ಅಮ್ಮ ಬೇಕಿದ್ರೆ ಮುಗಿಸಲಿ ಅಂತ ಧರಣಿ ಕೂರಬಹುದು. ತಿನ್ನಿಸಿಯೋ ಅಥವಾ ತಿಂದೋ ಅಮ್ಮ ಖಾಲಿ ತಟ್ಟೆಯಿಂದ ಅಥವಾ ಬಟ್ಟಲಿನಿಂದ ನಿವಾಳಿಸಿ ದೃಷ್ಟಿ ತೆಗೆಯುವಲ್ಲಿ ಕ್ರಿಯೆ ಪೂರ್ಣ.

ಒಂದು ಹಾಡಿನ ಕಾಂಪಿಟಿಷನ್ ಅಂದುಕೊಳ್ಳಿ. ಹಾಡುಗಾರರಿಗೆ ಟೆನ್ಷನ್ ಆಗೋದು ಸಹಜ. ಮೂರು ಚರಣಗಳ ಹಾಡು ಅಂದುಕೊಳ್ಳೋಣ. ಮೂರನೆಯ ಚರಣ ಮುಗಿದು ಮತ್ತೊಮ್ಮೆ ಪಲ್ಲವಿಗೆ ಬಂದಾಗ, ಮನಸ್ಸಿನ ಟೆನ್ಷನ್ ಕಡಿಮೆಯಾಗುತ್ತಾ ಬರುವುದೇ, ಇನ್ನೇನು ಮುಗೀತು ಎಂಬುದು ಮನಸ್ಸಿನಲ್ಲಿ ಮೂಡುವ ಅಂಶ. ಇಲ್ಲಿನ ಈ ವಿಚಾರದ ಹಿಂದಿರುವ ಒಂದು ಭಾವನೆ ಏನೆಂದರೆ "ನಾನು ಸಾಧಿಸಿದೆ' ಎಂಬ ಭಾವವೂ ಇರಬಹುದು ಅಥವಾ "ನನ್ನ ಕೆಲಸ ಆಯ್ತು' ಮಿಕ್ಕಿದ್ದು ನಿರ್ಣಾಯಕರಿಗೆ ಬಿಟ್ಟಿದ್ದು ಎಂಬುದೂ ಆಗಬಹುದು.

ಜ್ಯೂಸ್, ಕಾಫಿ ಅಥವಾ ಪೆಪ್ಸಿ ಕುಡಿಯುತ್ತಾ

ಒಂದು ದೂರದ ಪಯಣದ ಸನ್ನಿವೇಶದಲ್ಲಿ ಇನ್ನೇನು ಮುಗೀತಾ ಬಂತು ಎಂಬುದನ್ನು ಎರಡು ವಿಭಿನ್ನವಾದ ವಿಚಾರಗಳ ಮೂಲಕ ಗಮನಿಸೋಣ. ಮೊದಲಿಗೆ ಬೇರೆಡೆಯಿಂದ ಬರುವಾಗ, ಮನೆ ಹತ್ತಿರ ಬರುತ್ತಾ ಇದೆ. ಆರಾಮವಾಗಿ ಹಾದಿಯುದ್ದಕ್ಕೂ ಜ್ಯೂಸ್, ಕಾಫಿ ಅಥವಾ ಪೆಪ್ಸಿ ಕುಡಿಯುತ್ತಾ ಖುಷಿಯಾಗಿ ಬರುವಾಗ, ದೇಹದೊಳಗೆ ಸೇರುತ್ತಾ ಸಾಗಿದ ಆ ದ್ರವ ಹೊರಗೆ ಬರಬೇಕು ಎಂದು ಬಯಸಿದರೆ ತಪ್ಪೇನಿದೆ. ಒತ್ತಡ ಹೆಚ್ಚಾದಂತೆ, ಮನೆ ಇನ್ನೂ ಎಷ್ಟು ದೂರವಪ್ಪಾ ಎಂಬುದು ಮನಸ್ಸನ್ನು ಕಾಡಲು ಆರಂಭಿಸುತ್ತದೆ. ಇನ್ನೇನು ಮೂರೋ ನಾಲ್ಕೋ ಕಿಲೋಮೀಟರು ಅಷ್ಟೇ, ಮನೆ ಬಂದೇ ಬಿಡ್ತು ಎಂಬುದು ಅತೀ ದೊಡ್ಡ ಸಮಾಧಾನವೂ ತರಬಹುದು ಅಥವಾ ಒತ್ತಡ ಹೆಚ್ಚು ಕೂಡಾ ಆಗಬಹುದು.

ಟ್ರಾಫಿಕ್ ಜಾಮ್ ಯಾರಪ್ಪನ ಮನೆಗಂಟು?

ದೂರವೇನೋ ಮೂರು ಅಥವಾ ನಾಲ್ಕು ಕಿಲೋಮೀಟರು ಇರಬಹುದು ಆದರೆ ಮಧ್ಯೆ ಮಧ್ಯೆ ಸಿಗ್ನಲ್ ಲೈಟುಗಳು ಕೆಂಪು ತೋರುವುದು ಯಾರ ಕೈಲಿದೆ. ಇದರ ಮೇಲೆ ಟ್ರಾಫಿಕ್ ಜಾಮ್ ಯಾರಪ್ಪನ ಮನೆಗಂಟು? ಒತ್ತಡ ಹೆಚ್ಚಾದಾಗ ಮೂರು ಕಿಲೋಮೀಟರು ಕೂಡಾ ಮುನ್ನೂರಿನಂತೆ ಆಗಬಹುದು. ಇದೆಲ್ಲಾ ಸರಿಯಪ್ಪಾ, ಮನೆಯೂ ಬಂತು. ಕೀ ಕೈಗೆತ್ತಿಕೊಂಡು ಗಾಡಿ ಇಳಿಯುವಾಗಲೇ ಪಕ್ಕದ ಮನೆ ನರಸಮ್ಮನವರು "ಓ! ಬ೦ದ್ರಾ? ಹೇಗಾಯ್ತು ಟ್ರಿಪ್ಪು' ಅಂತೆಲ್ಲಾ ಮಾತು ಶುರು ಮಾಡಿದಾಗ ಒತ್ತಡ ಇನ್ನೂ ಏರುತ್ತೆ. ಇದು ಒಂದು ಸನ್ನಿವೇಶ.

"ಇನ್ನೂ ಅದೆಷ್ಟು ದೂರಾ?' ಎಂಬ ಪ್ರಶ್ನೆ

ಈ ದೂರದ ಪಯಣದ ಮತ್ತೊಂದು ಸನ್ನಿವೇಶ ಏನಪ್ಪಾ ಎಂದರೆ ಮನೆಯಿಂದ ಹೊರಟು ಅದೆಲ್ಲಿಗೆ ಹೋಗಬೇಕೋ ಅಂತಿದ್ದೀರೋ ಅಲ್ಲಿಗೆ ಸೇರುವ ಸ್ಥಳ ಬರುವಾ ತನಕ, ಹಿಂದಿನ ಸೀಟಿನಲ್ಲಿ ಕೂತಿರುವ ಮಕ್ಕಳ "ಇನ್ನೂ ಅದೆಷ್ಟು ದೂರಾ?' ಎಂಬ ಪ್ರಶ್ನೆ ಬರುತ್ತಲೇ ಸಾಗಿದಂತೆ ಅವರನ್ನು ಸುಮ್ಮನೆ ಕೂರಿಸುವುದೇ ದೊಡ್ಡ ತಲೆಬಿಸಿ. ಇನ್ನೇನು ಹತ್ತಿರ ಬಂತು ಅಂತ ಹಲವಾರು ಬಾರಿ ಹೇಳಿರುತ್ತೇವೆ ಅಲ್ಲವೇ? ಆಂಗ್ಲದ "are we there yet' ಎಂಬ ಸಿನಿಮಾದಲ್ಲಿ ಮನೆಯಿಂದ ಹೊರಟ ಒಂದೈದು ನಿಮಿಷದಲ್ಲೇ ಮಕ್ಕಳು "are we there yet' ಅಂತ ಕೇಳುತ್ತಾ ಸಾಗುತ್ತಾರೆ. ಗಾಡಿ ಓಡಿಸುವ ಆ ತಂದೆಗೆ ತಲೆಕೆಟ್ಟು ಹೋಗುವುದಷ್ಟೇ ಅಲ್ಲದೇ ಚಲನಚಿತ್ರ ನೋಡುವ ನಮಗೇ ತಲೆಕೆಟ್ಟು ಹೋಗುತ್ತದೆ.

ಇನ್ನೇನು ಮುಗೀತಾ ಬಂತು

ಪಯಣ ಅನ್ನೋದು ಕೇವಲ ಗಾಡಿಯಲ್ಲಿ ಹೋಗುವಾಗಿನ ಅನುಭವ ಅಷ್ಟೇ ಅಲ್ಲ. ಒಂದು ಮ್ಯಾರಥಾನ್ ಓಟ ಕೂಡ ಒಂದು ಪಯಣವೇ! ಇನ್ನೇನು ಹತ್ತಿರ ಬರುತ್ತಿದ್ದಂತೆಯೇ "ಇನ್ನೇನು ಮುಗೀತಾ ಬಂತು' ಎಂಬುದು ಮನಸ್ಸಿಗೆ ಆ ಸಮಾಧಾನ ಮೂಡಲು ಆರಂಭವಾಗುತ್ತದೆ. ಇನ್ನೇನು ಒಂದು ಪರೀಕ್ಷೆ ಮುಗಿದರೆ ನಿನ್ನ ಪಬ್ಲಿಕ್ ಪರೀಕ್ಷೆ ಮುಗೀತು ಎಂಬ ಧೈರ್ಯ ತುಂಬುವ ಕ್ರಿಯೆ ಕೂಡಾ ನಿತ್ಯೋತ್ಸವ. ಮರುದಿನ ಒಂದು project ಮುಗಿಸಿಕೊಡಬೇಕು ಆದರೆ ಹಿಂದಿನ ರಾತ್ರಿಯಾದರೂ ಕೆಲಸ ಆಗುತ್ತಲೇ ಇದೆ. ಸಮಯ ಕಳೆಯುತ್ತಾ ಸಾಗಿದಂತೆ ಹತಾಶೆ ಏರುತ್ತದೆ. ಆ ಹತಾಶೆಯನ್ನು ತಮಣೆ ಮಾಡುವ ಉದ್ದೇಶವೇ "ಇನ್ನೇನು ಮುಗೀತಾ ಬಂತು'. ಇದು ಕೆಲಸ ಮಾಡುವ ವ್ಯಕ್ತಿಗೆ ಉತ್ತೇಜನ ನೀಡುವ ಮಾತುಗಳೇ ಆಗಿವೆ.

ಕರೆಸಬೇಕಾದವರನ್ನು ಕರೆಸಿಬಿಡಿ

ಈ "ಇನ್ನೇನು ಮುಗೀತಾ ಬಂತು' ಅನ್ನೋದು ಕೂಡ ಒಂದು ರೀತಿ ಆನಂದ ಅಥವಾ ದುಃಖ ಮೂಡಿಸುವ ಏಕವಾಕ್ಯವಾಗಿದೆ. "ಇನ್ನೇನು ಮುಗೀತಾ ಬಂತು, ಕರೆಸಬೇಕಾದವರನ್ನು ಕರೆಸಿಬಿಡಿ' ಎಂಬ ಮಾತು ವೈದ್ಯರಿಂದ ಬಂದಾಗ ಮನಸ್ಸಿಗೆ ಮಹಾಹಿಂಸೆಯಾಗುತ್ತದೆ. ಹಲವಾರು ದಿನಗಳ ಕಾಲ ರಜೆ ಹಾಕಿ ತಾಯ್ನಾಡಿಗೆ ಬಂದು ಬಂಧು-ಬಳಗ-ಸ್ನೇಹಿತರೊಡನೆ ಸಮಯ ಕಳೆಯುವಾಗ ವೆಕೇಷನ್ "ಇನ್ನೇನು ಮುಗೀತಾ ಬಂತು' ಅಂತ ನೆನಪಾದಾಗ ದುಃಖವಾಗುತ್ತೆ.

ನಿಮ್ಮ ಜೀವನದಲ್ಲೂ ಈ "ಇನ್ನೇನು ಮುಗೀತಾ ಬಂತು' ಅನ್ನೋದು ಹಲವಾರು ಬಾರಿ ಇಣುಕಿ ನೋಡಿರುತ್ತದೆ. ಹಂಚಿಕೊಳ್ಳುವಿರಾ?

English summary
Srinath Bhalle Column: Covid-19 has affected on everyone. Some may have body grown up and some may have improved fine arts in Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X