ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಈ ಮಾತು ಇಂದಿನ ಜೀವನದಲ್ಲಿ ಬಹಳ ಹೊಂದುತ್ತೆ ಅಂತ ಭಾವುಕರಾದರೆ ಮಹಾ ತಪ್ಪು. ಆದರೆ ಕೃತಜ್ಞರಾಗಿರಬೇಕಾಗಿರೋದು ಸದಾ ಕಾಲಕ್ಕೂ ಸತ್ಯ. ಇದು ಕೃತಯುಗದಿಂದ ಹಿಡಿದು ಕಲಿಯುಗದವರೆಗೆ ನಿತ್ಯಸತ್ಯ.

ಮೊದಲಿಗೆ ಅರ್ಥಮಾಡಿಕೊಳ್ಳಬೇಕಾದ್ದು 'ಕೃತಜ್ಞತೆ' ಮತ್ತು 'ಕೃತಘ್ನತೆ' ವಿರುದ್ಧ ಪದಗಳು. ಜೀವನದಲ್ಲಿ ಒಬ್ಬರಿಗೆ ಕೃತಜ್ಞರಾಗುತ್ತೇವೆಯೋ ಇಲ್ಲವೋ ಕೃತಘ್ನರಾಗಿರಬಾರದು. ಈಗೇಕೆ ಈ ಮಾತು ಅಂತ ಅನ್ನಿಸಿರಬಹುದು. ಬೆಳಿಗ್ಗೆ ವಾಟ್ಸಪ್ ನಲ್ಲಿ ಒಂದು ವಿಡಿಯೋ ನೋಡಿದೆ. ಈ ವಿಷಯ ಬಹಳ ಹಿಂದೆ ಕೇಳಿದ್ದೆ. ಆದರೆ ಇಂದು ಅದನ್ನೇ ನೋಡಿದಾಗ ಹಲವು ಆಲೋಚನೆಗಳನ್ನು ಒರೆಗೆ ಹಚ್ಚಿತು ಎನ್ನಬಹುದು.

ನಾ ನೋಡಿದ ವಿಡಿಯೋ "10th Apple Effect". ಇದರ ಬಗ್ಗೆ ಗೊತ್ತಿಲ್ಲದವರಿಗೆ ಕಥೆಯನ್ನು ಚಿಕ್ಕದಾಗಿ ಹೇಳುತ್ತೇನೆ. ಒಬ್ಬ ವ್ಯಕ್ತಿ ಕಾಡಿನಲ್ಲಿ ಸಿಲುಕಿಕೊಳ್ಳುತ್ತಾನೆ. ಮೂರು ದಿನಗಳ ಕಾಲ ಅಲೆದಾಡಿ ಹೊಟ್ಟೆಗೇನೂ ಸಿಗದೇ ತನ್ನ ಅವಸಾನ ಹತ್ತಿರವಾಯ್ತು ಎಂದೇ ಅನ್ನಿಸಿಬಿಟ್ಟಿರುವಾಗ ಅವನಿಗೊಂದು ಸೇಬಿನ ಮರ ಕಾಣಿಸುತ್ತದೆ. ತಿನ್ನಲು ಯೋಗ್ಯವಾದ ಬೇರೇನೂ ಸಿಗದ ದಿನಗಳಲ್ಲಿ ಸೇಬಿನ ಮರ ಕಂಡಾಗ ಅವನ ಆನಂದ ಹೇಳತೀರದು. ಧಡಧಡ ಒಂದು ಸೇಬಿನಹಣ್ಣನ್ನು ಕಿತ್ತು ತಿನ್ನಲು ಆರಂಭಿಸುತ್ತಾನೆ.

ಅತ್ಯಂತ ಸಂತಸಭರಿತವಾದ ಅವನ ಮನಸ್ಸಿನಿಂದ ಮರವನ್ನು ಹುಟ್ಟುಹಾಕಿದ ದೈವಕ್ಕೆ ವಂದಿಸುತ್ತಾನೆ. ಮರಕ್ಕೆ ನೀರೆರೆದ ವರುಣಾ ದೇವನನ್ನು ವಂದಿಸುತ್ತಾನೆ. ಹೀಗೆ ಅವನ ಕೃತಜ್ಞತೆಗೆ ಕೊನೆಯೇ ಇಲ್ಲದಂತೆ ಸಾಗಿ ಮತ್ತೊಂದು ಮಗದೊಂದು ಸೇಬು ಹೊಟ್ಟೆಗೆ ಹೋಗುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲ

ಆದರೆ ಪ್ರತೀ ಸೇಬನ್ನು ತಿಂದು ಮುಗಿಸುತ್ತಾ ಬಂದಂತೆ ಆ ಕೃತಜ್ಞತೆಯ ಭಾವ ಕಡಿಮೆಯಾಗುತ್ತಾ ಬರುತ್ತದೆ. ಯಾವ ಮಟ್ಟಿಗೆ ಎಂದರೆ ಎಂಟು, ಒಂಬತ್ತು, ಹತ್ತನೆಯ ಸೇಬಿನ ಹೊತ್ತಿಗೆ 'ಥೂ ಇದೂ ಒಂದು ಹಣ್ಣಾ' ಎಂದು ಒಮ್ಮೆ ಅಗಿದು ಉಗಿವ ಮಟ್ಟಕ್ಕೆ ಇಳಿದಿರುತ್ತಾನೆ. ಆಮೇಲೇನಾಯ್ತು ಅನ್ನೋದು ಇಲ್ಲಿನ ವಿಷಯಕ್ಕೆ ಮುಖ್ಯವಲ್ಲ. ವಿಷಯ ಅರಿಯಬೇಕಾದ್ದು ಮೊದಲ ಮತ್ತು ಹತ್ತನೆಯ ಸೇಬಿನ ಹಣ್ಣು ಒಂದೇ ಮರದಿಂದ ಬಂದ ಉತ್ತಮ ಫಲಗಳೇ ಆಗಿದ್ದರೂ ಬದಲಾಗಿದ್ದು ಮಾತ್ರ ಮರ್ಕಟ ಮನದ ಭಾವನೆ ಮಾತ್ರ.

ಮೊದಲನೆಯ ಸೇಬು ತಿನ್ನುವಾಗ ಆಹಾರದ ಅತ್ಯವಶ್ಯಕತೆಯ ಸನ್ನಿವೇಶ ಕಾಣುತ್ತದೆ. ಹತ್ತನೆಯ ಸೇಬಿನ ಹೊತ್ತಿಗೆ ಬಂದಾಗ ಅವನದ್ದು ತುಂಬಿದ ಹೊಟ್ಟೆ. ಹಸಿದ ಹೊಟ್ಟೆಗೂ ತುಂಬಿದ ಹೊಟ್ಟೆಗೂ ಭಾವನೆಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ ಎಂಬುದು ವೇದ್ಯವಾಗುತ್ತದೆ. ನಾವು ಕೆಳವರ್ಗದವರೋ, ಮಧ್ಯಮ ವರ್ಗದವರೋ, ಸಿರಿವಂತ ವರ್ಗದವರೋ ಅನ್ನುವುದು ಒಂದು ಬದಿಗಿರಿಸಿ demand ಮತ್ತು supply ಅನ್ನುವುದನ್ನು ಮಾತ್ರ ತಲೆಗೆ ತೆಗೆದುಕೊಳ್ಳಿ.

Coronavirus Lock Down Teaches The Value Of Many Things

ಗಾಳಿ, ಬೆಳಕು, ನೀರು ಇತ್ಯಾದಿಗಳು ಹೇರಳವಾಗಿದ್ದಾಗ ಅವುಗಳ ಬೆಲೆಯೇ ಅರಿವಾಗೋದಿಲ್ಲ. ನಲ್ಲಿ ಬಿಟ್ಟ ಕೂಡಲೇ ನೀರು ಕಾಣ್ವ ಜನರ ಮುಂದೆ ಒಂದು ಮೈಲಿ ದೂರದಿಂದ ನೀರು ತರಬೇಕು ಎಂದು ನುಡಿದರೆ ಅವರಿಗೆ ಅರ್ಥವೇ ಆಗೋದಿಲ್ಲ. ವರ್ಷಕ್ಕೆ ನಾಲ್ಕು ತಿಂಗಳು ಮಾತ್ರ ಬೆಳಕ ಕಾಣುವ ಅಲಾಸ್ಕಾದ ಪ್ರದೇಶಗಳಲ್ಲಿನ ಜನರಿಗೆ ಬಿಸಿಲಿನ ಮಹತ್ವ ಗೊತ್ತು. ಕಲುಷಿತ ಗಾಳಿಯ ನಾಡಿನಲ್ಲಿರುವವರಿಗೆ ಶುದ್ಧ ಗಾಳಿಯ ಬೆಲೆ ಗೊತ್ತು. ಇಂದು ನಮ್ಮೆಲ್ಲರಿಗೂ ಹೊರಗೆಲ್ಲಾ ನಿರ್ಭಿಡೆಯಿಂದ ಓಡಾಡುವ ಸ್ವಾತಂತ್ರ್ಯದ ಬೆಲೆ ಅರಿವಾಗುತ್ತಿರುವಂತೆ.

ಶ್ರೀನಾಥ್ ಭಲ್ಲೆ ಅಂಕಣ: ಹಾಸಿಗೆಯ ಬಗ್ಗೆ ಒಂದಷ್ಟು ಕಲಿಯೋಣ ಬನ್ನಿ ಶ್ರೀನಾಥ್ ಭಲ್ಲೆ ಅಂಕಣ: ಹಾಸಿಗೆಯ ಬಗ್ಗೆ ಒಂದಷ್ಟು ಕಲಿಯೋಣ ಬನ್ನಿ

ವರ್ಷಾರಂಭದಲ್ಲಿ sanitizer ಬಳಕೆ ಭಾರತದಲ್ಲಂತೂ ಹೆಚ್ಚು ಇರಲಿಲ್ಲ. ಇಂದು ಬೇಕೆಂದರೂ ಸಿಗೋದಿಲ್ಲ. ವಾರಕ್ಕೊಂದು ಸಿನಿಮಾ ನೋಡದೇ ಇದ್ರೆ ಜೀವನವೇ ನಡೆಯೋಲ್ಲ ಎಂಬಂತಿದ್ದ ಜೀವಗಳು ಸಿನಿಮಾ ಮಂದಿರಕ್ಕೆ ಕಾಲಿಡಲೂ ಹೆದರುತ್ತಿವೆ. ನಟನಟಿಯರನ್ನು ದೇವರಂತೆ ಪೂಜಿಸುತ್ತಾ ಆರಾಧಿಸುತ್ತಿದ್ದ ಜನ ಇಂದು ಅವರ glamour ಅನ್ನು ನೆನಪಿಸಿಕೊಳ್ಳುತ್ತಾ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಜೀವನಕ್ಕೆ ಏನು ಅವಶ್ಯಕ, ಏನು ಅಲ್ಲ ಎಂಬುದರ ಅರಿವು ಮಾಡುತ್ತಿದೆ ಎಂಬ ಭಾವನೆ ಇದೆ.

ಅವಶ್ಯಕ ಎಂದರೆ necessity ಅಂತ ನಿಮಗೂ ಗೊತ್ತು. ಈ ದಿನಗಳಲ್ಲಿ ಮೂಡಿರುವ ಅರಿವು ಎಂದರೆ need ಮತ್ತು wantಗಳ ನಡುವೆ ಇರುವ ವ್ಯತ್ಯಾಸ. ಅರ್ಥಾತ್ ಅಗತ್ಯಕ್ಕೂ ಮತ್ತು ಬೇಕುಗಳಿಗೂ ಇರುವ ಅಗಾಧ ವ್ಯತ್ಯಾಸ. ಇಂಥಾ ವಸ್ತು/ಆಹಾರ ಪದಾರ್ಥ ಇಲ್ಲದೆ ಬದುಕಬಲ್ಲೆನೇ ಎಂಬುದನ್ನು ಅಗತ್ಯ ಮತ್ತು ಬೇಕು ತಿಳಿಸುತ್ತದೆ.

ಖಾನಾವಳಿಗಳು ಮುಚ್ಚಿದಾಗ ಅಡುಗೆಮನೆ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಹಲವರು ಕಂಡುಕೊಂಡರು. ಒಂದು ಕಾಫಿ ಅಥವಾ ಟೀ ಮಾಡಿಕೊಳ್ಳಲು ಬಾರದ ಮಂದಿ ತಕ್ಕಮಟ್ಟಿಗೆ ಅಡುಗೆ ಕಲಿತಿದ್ದಾರೆ ಎನ್ನುವುದು ನಿಮಗೂ ಗೊತ್ತಿದೆ. ಮನೆಯಲ್ಲೂ ಒಂದು ಜಗತ್ತಿದೆ, ಮನೆಯ ಮಂದಿಗೂ ಹೊರಗೆ ಹೋಗಿ ದುಡಿವ ನಮ್ಮಷ್ಟೇ ಕೆಲಸವಿದೆ ಎಂಬುದರ ಅರಿವು ಮೂಡಿದೆ. ನಮ್ಮ ಬೀದಿ, ನಮ್ಮ ನಾಡು, ನಮ್ಮ ದೇಶವು ನಾವು ದಿನನಿತ್ಯ ಹಾಳುಗೆಡವುವ ಮುನ್ನ ಹೀಗಿತ್ತು ಅಂತ ಕಾಣಿಸಿಕೊಳ್ಳತೊಡಗಿದೆ.

ಎಲ್ಲೆಡೆಯೂ ಒಂದಲ್ಲಾ ಒಂದು ರೀತಿ ಅತೀವೃಷ್ಟಿ ಅನಾವೃಷ್ಟಿಗಳು ಆಗಾಗ ನಡೆದೇ ಇದೆ. ಕೆಲವೊಮ್ಮೆ ಈರುಳ್ಳಿಯ ಬೆಲೆ ಚಿನ್ನಕ್ಕಿಂತ ಹೆಚ್ಚಾಗಿ ಹೋಗಿರುತ್ತದೆ. ಅದರಂತೆಯೇ ಕಾಲಕಸವಾಗಿ ಬಿದ್ದದ್ದೂ ಇದೆ. ಇದೇ ರೀತಿ ಟೊಮೆಟೊ ಕೂಡ. ಇಂದು ತೋಟದಲ್ಲಿ ಹಣ್ಣುಹಂಪಲು ಹಣ್ಣಾಗಿ ನೆಲಕ್ಕೆ ಬಿದ್ದು ಕೊಳೆಯುತ್ತಿದೆ. ಕೊಯ್ದು ಮಾರಲಾಗುತ್ತಿಲ್ಲ. Demand ಇಲ್ಲ ಅಂತೇನಿಲ್ಲ, ಬೇಕಾದಷ್ಟಿದೆ ಆದರೆ ಅವುಗಳನ್ನು 'Want'ಗಳ ಲಿಸ್ಟ್ 'ಗೆ ಹಾಕಿರಿಸಿ ಜೀವನ ನಡೆದಿದೆ. ಅವು 'ಅಗತ್ಯ'ವಲ್ಲ. ನಾಲ್ಕು ದಿನ ಹಣ್ಣು ತಿನ್ನದಿದ್ದರೆ ಏನೀಗ ಎಂಬ ಭಾವನೆ ಮೂಡಿದೆ ಎನ್ನುವುದಕ್ಕಿಂತ ಯಾರಿಂದ ವೈರಾಣು ನಮಗೂ ಬಂದೀತೋ ಎಂಬ ಭೀತಿ ಉಂಟಾಗಿದೆ. ಹಲವಾರು ವಸ್ತುಗಳು ನಮಗೆ ಬೇಕು. ಆದರೆ ಕೊಳ್ಳಲು ಭೀತಿ. ಭೀತಿಯಿಂದಾಗಿ ಹಲವಾರು ಅಗತ್ಯಗಳೂ ಇಂದು 'want'ಗಳ ಸಾಲಿಗೆ ಸೇರಿವೆ.

ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ... ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ...

ಇದರಿಂದ ನಾವು ಕಲಿಯಬೇಕಾದ್ದು ಏನು? ವೆಂಟಿಲೇಟರ್ ದೊರೆಯದೇ ಒದ್ದಾಡುವಾಗ ಅಥವಾ ವೆಂಟಿಲೇಟರ್ ದೊರಕಿ ಅದಕ್ಕೆ ಎಷ್ಟೆಲ್ಲಾ ದುಡ್ಡು ಸುರಿಯುವಾಗ ಅನ್ನಿಸೋದು ಜೀವನವಿಡೀ ಹತ್ತು ಪೈಸೆಯೂ ತೆರದೆ ಭಗವಂತ ನೀಡಿರುವ ಗಾಳಿಯನ್ನು ಬಳಸುತ್ತಿದ್ದೆವಲ್ಲಾ ಅದಕ್ಕೆ ಕೃತಜ್ಞತೆ ಸಲ್ಲಿಸಬೇಕು ಅಂತ. ದಿನವೊಂದರಲ್ಲಿ ಒಂದು ಹನಿಯನ್ನೂ ನೀರು ಹಾಕದೇ ಇದ್ದರೂ ಫಲವೀವ ಮರಗಳನ್ನು ಕೃತಜ್ಞತೆಯಿಂದ ಕಾಣಿರಿ. ಇದರಂತೆಯೇ ತರಕಾರಿ ಹೂವುಗಳನ್ನು ನೀಡುವ ಮರಗಿಡ ಬಳ್ಳಿಗಳನ್ನು ಕೃತಜ್ಞತೆಯಿಂದ ಕಾಣಿರಿ. ನಮ್ಮ ಜೀವನದಲ್ಲಿ ಒಂದಲ್ಲಾ ಒ೦ದು ರೀತಿ ತಮ್ಮ ಪಾತ್ರವನ್ನು ವಹಿಸಿರುವ ಪ್ರಾಣಿಪಕ್ಷಿಗಳನ್ನು ಕೃತಜ್ಞತೆಯಿಂದ ನೋಡುವ ಪರಿ ಬೆಳೆಸಿಕೊಳ್ಳಬೇಕಾಗಿದೆ.

ಆದರೆ ನಾವು ಕಲಿತಿದ್ದನ್ನು ಬಳಕೆಗೆ ತರುತ್ತೇವೆಯೇ? ಅಥವಾ ನಾಯಿಬಾಲ ಡೊಂಕು ಎಂಬಂತೆ ಆಡುತ್ತೇವೆಯೋ? ಮೊದಲನೆಯ ಸೇಬನ್ನು ತಿಂದ ನಂತರದ ಸ್ಥಿತಿಯಲ್ಲಿ ನಾವು ಹೆಚ್ಚು ದಿನ ಬಾಳುವುದಿಲ್ಲ. ಎಲ್ಲಾ ಸರಿಹೋಯ್ತು ಎಂದಾಗ ಬಲುಬೇಗ ಎಂಟನೆಯ ಸೇಬು ತಿಂದ ಸ್ಥಿತಿಗೆ ತಲುಪಿಬಿಡುತ್ತೇವೆ.

ಬಿಲ್ಲಿಗೆ ಬಾಣವನ್ನು ಹೂಡಿ ಚಿಮ್ಮಿಸುವ ಮುನ್ನ ಇರುವ ಸ್ಥಿತಿ ನಮ್ಮದು. ಒಂದು rubberband ಅನ್ನು ಹಿಗ್ಗಲಿಸಿ ಬಿಡುವ ಮುನ್ನದ ಸ್ಥಿತಿ ನಮ್ಮದು. ಆಕ್ಷೀ ಎಂದು ಜೋರಾಗಿ ಸೀನುವ ಮುಂಚಿನ ಸ್ಥಿತಿ ನಮ್ಮದು. ಕೆಂಪು ದೀಪ ತೋರಿರುವ ಟ್ರಾಫಿಕ್ ದೀಪದಲ್ಲಿ ನಿಂತಿರುವ ಗಾಡಿಗಳು ನಾವು. ಒಂದು ಈ ಕ್ಷಣ ದಾಟಿದ ಮೇಲೆ, ನಾವು ಮತ್ತೆ ನಾವೇ! ನಿಂತಿಹ ಜೀವನದ ಬಂಡಿಗಳು ಮುನ್ನುಗ್ಗಿ ಸಾಗುತ್ತದೆ. ಆವರೆಗಿನ ಕಲಿಕೆಗಳೆಲ್ಲಾ ಧೂಳೀಪಟ.

ಕೃತಜ್ಞತೆಯನ್ನು ಸಲ್ಲಿಸಬೇಕಾದ್ದು ನಿಜ. ಆದರೆ ಅವು ನಾಲಿಗೆಯ ತುದಿಯಿಂದ ಬರುವಂಥದ್ದಾಗಿರಬಾರದು. ರಿಯಾಲಿಟಿ ಷೋಗಳಲ್ಲಿ ಮಾತುಮಾತಿಗೂ "thank you so much" ಎನ್ನುವಂತೆ ಅದೂ ಒಂದು ಮಾತು ಅಷ್ಟೇ ಆಗಿರುತ್ತದೆ. ಏನನ್ನೇ ಪಡೆದುದನ್ನು ಸ್ಮರಿಸುವ ಕೃತಜ್ಞತೆಯು ಸದಾ ಕಾಲ ನಮ್ಮದಾಗಬೇಕು. ಒಬ್ಬರಿಂದ ಪಡೆದ ಸಹಾಯವನ್ನು ಅವರಿಗೇ ನೀಡಲಾಗದ ಪರಿಸ್ಥಿತಿ ಇದ್ದರೆ, ಅವಶ್ಯಕತೆ ಇರುವ ಮತ್ತೊಬ್ಬರಿಗೆ ಸಹಾಯಹಸ್ತ ನೀಡಿ ಋಣ ಕಡಿಮೆ ಮಾಡಿಕೊಳ್ಳಬಹುದು. ಕೃತಜ್ಞತೆಯನ್ನು ಸೂಚಿಸಲು ಹಲವಾರು ದಾರಿಗಳಿವೆ.

ಕಲಿಯೋಣ, ಕಲಿಸೋಣ ಎನ್ನುವಂತೆ ಕಲಿಕೆಯನ್ನು ಉಳಿಸಿಕೊಳ್ಳೋಣ, ಬಳಸಿಕೊಳ್ಳೋಣ... ಬೆಳೆಸೋಣ... ಏನಂತೀರಿ?

English summary
This is a time to thank everything we have. We came to know the value of many things by this coronavirus lockdown. but we have to keep this in mind forever,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X