ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಹೀಗೊಂದು ಡಬ್ಬ ಬರಹ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಹಾಸ್ಯರೂಪದ ಪ್ರಸಂಗಗಳಲ್ಲಿ ಸರ್ವೇಸಾಮಾನ್ಯವಾಗಿ ಗುಂಡ-ಗುಂಡಿ, ಸುಬ್ಬ-ಸುಬ್ಬಿ ಅಂತೆಲ್ಲಾ ಕೇಳಿರ್ತೀವಿ. ಇದ್ಯಾವುದು ಡಬ್ಬ-ಡಬ್ಬಿ ಜೋಡಿ? ಸುಬ್ಬ-ಸುಬ್ಬಿ ರೀತಿಯೇ ಆಲೋಚಿಸಿದರೆ ಈ ಡಬ್ಬ ಗಂಡು, ಡಬ್ಬಿ ಹೆಣ್ಣು ಇರಬಹುದೇ? ತರ್ಕಬದ್ಧವಾಗಿ ನೋಡಿದರೆ ಹೌದು ಅನ್ನಿಸುತ್ತೆ. ಮಧ್ಯಮವರ್ಗದ ಸನ್ನಿವೇಶವನ್ನೇ ತೆಗೆದುಕೊಂಡರೆ, ಅಡುಗೆ ಮನೆಗಳಲ್ಲಿ ಇರುವುದು ಏನು? ಡಬ್ಬಿ ಅಲ್ಲವೇ? ಹಣಕಾಸು ಇಡೋದೆಲ್ಲಿ? ಡಬ್ಬದಲ್ಲಿ. ಇಷ್ಟೇ ಸಿಂಪಲ್ ಲಾಜಿಕ್ ಬಳಸಿದರೆ ಡಬ್ಬ ಗಂಡು, ಡಬ್ಬಿ ಹೆಣ್ಣು.

ಡಬ್ಬ ಗಂಡೋ, ಡಬ್ಬಿ ಹೆಣ್ಣೋ ಅನ್ನೋದು ಸುಮ್ನೆ ಐಸ್ ಬ್ರೇಕರ್ ಪ್ರಶ್ನೆ ಅಷ್ಟೇ. ಡಬ್ಬಿ ಅಂದರೆ ಪುಟ್ಟದು, ಡಬ್ಬ ಎಂದರೆ ಸೈಜಿನಲ್ಲಿ ದೊಡ್ಡದು ಅಂದುಕೊಳ್ಳಿ ಸಾಕು. ಈಗ ಈ ಡಬ್ಬ, ಡಬ್ಬಿ ಬಗ್ಗೆ ಒಂದಷ್ಟು ಮಾತುಕತೆ ಆಡೋಣ. ಮೊದಲಿಗೆ ನನ್ನದೇ ಜೀವನಾನುಭವ. ನಮ್ಮ ಮನೆಯಲ್ಲಿ ದೈನಂದಿನ ಖರ್ಚಿಗೆ ಅಂತ ಅಪ್ಪ ಬೀರುವಿನಲ್ಲಿ ಒಂದು ಡಬ್ಬಿಯಲ್ಲಿ ಹಣ್ಣ ಇಟ್ಟಿರುತ್ತಿದ್ದರು. ಒಂದು ಚಿಕ್ಕ ಕೆಂಪು ಕ್ಯೂಬಿಕಲ್ ಡಬ್ಬಿ. ಆ ಡಬ್ಬಿಯ ಮೇಲೆ ಶ್ರೀರಾಮ ಪರಿವಾರದ ಚಿತ್ರವಿತ್ತು. ಹಾಗಾಗಿ ಆ ಡಬ್ಬಿಯ ಹೆಸರೇ ರಾಮನ್ ಡಬ್ಬಿ ಅಂತಾಗಿತ್ತು.

ಶ್ರೀನಾಥ್ ಭಲ್ಲೆ ಅಂಕಣ; ತಪಸ್ಸು ಮಾಡೋಣ ಬರ್ತೀರಾ?ಶ್ರೀನಾಥ್ ಭಲ್ಲೆ ಅಂಕಣ; ತಪಸ್ಸು ಮಾಡೋಣ ಬರ್ತೀರಾ?

ಮತ್ತೊಂದು ಎಂದರೆ, ಮುಖ್ಯವಾದ ಕಾಗದ ಪತ್ರಗಳನ್ನು ಇಡುತ್ತಿದ್ದ ಒಂದು ತಗಡಿನ ಟ್ರಂಕ್. ಕಾಗದ ಪತ್ರಗಳು ಎಂದರೆ ಅದು ಆ ಡಬ್ಬದಲ್ಲೇ ಇಡಬೇಕು ಎನ್ನುವಷ್ಟು ನಮ್ಮ ಮನೆಯಲ್ಲಿ ಆ ಡಬ್ಬ ಒಂದಾಗಿ ಸೇರಿಹೋಗಿತ್ತು. ಇದರೊಂದಿಗೆ ಇದ್ದ ಮತ್ತೊಂದು ವಸ್ತು ಎಂದರೆ ಒಂದು orange color leather ಡಬ್ಬ. ಅಮ್ಮನ ರೇಷ್ಮೆ ಸೀರೆಯಂತಹ ಬೆಲೆಬಾಳುವ ವಸ್ತುಗಳು ಆ ಡಬ್ಬದಲ್ಲಿತ್ತು ಅಂತ ನೆನಪು. ಏಕೆಂದರೆ, ಆ ಡಬ್ಬವನ್ನು ಸಾಮಾನ್ಯವಾಗಿ ನಾವುಗಳು ಮುಟ್ಟುತ್ತಿರಲಿಲ್ಲ ಬಿಡಿ.

Concept Of Using Different Boxes For Different Purpose

ನಮ್ಮ ದೊಡ್ಡಪ್ಪನ ಮನೆಯಲ್ಲಿ ಒಂದು ಡಬ್ಬಿ ಇತ್ತು. ಆ ಡಬ್ಬಿಯಲ್ಲಿ ಅವರು ಸಾಮಾನ್ಯವಾಗಿ ಚಿಕ್ಕಪುಟ್ಟ ಮಾತ್ರೆಗಳನ್ನು ಇಟ್ಟುಕೊಳ್ಳುತ್ತಿದ್ದರು. ತಲೆನೋವು, ಮೈಕೈ ನೋವು, ನೆಗಡಿ, ಜ್ವರ ಇತ್ಯಾದಿಗಳ ಮಾತ್ರೆಗಳು ಅವರಲ್ಲಿ ಸದಾ ಸ್ಟಾಕ್ ಇರುತ್ತಿದ್ದವು. ಆ ಡಬ್ಬಿಯ ಮೇಲೆ ಒಂದು ಹೆಂಗಸಿನ ಚಿತ್ರವಿತ್ತು. ಅದ್ಯಾವ ಡಬ್ಬಿಯ ಮರುಬಳಕೆಯೋ ಗೊತ್ತಿಲ್ಲ ಆದರೆ ಆ ಡಬ್ಬಿಯ ಹೆಸರು ಯಮ್ಮನ ಡಬ್ಬಿ ಅಂತ ಹಚ್ಚ ಹಸಿರಾಗಿ ನೆನಪಿದೆ.

ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?

ಎಚ್.ಏ.ಎಲ್ ಕ್ವಾಟರ್ಸ್ ನಲ್ಲಿ ನಮ್ಮ ಮನೆ ಇತ್ತು. ಅಪ್ಪ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಕ್ವಾರ್ಟರ್ಸ್ ಅದು. ನಮ್ಮ ಮನೆಯಿಂದ ಐದು ಮನೆಯನ್ನು ದಾಟಿದರೆ ಈಶ್ವರ್ ಎಂಬುವವರ ಮನೆ ಇತ್ತು. ಅವರ ಬಳಿ ಒಂದು ಸ್ಕೂಟರ್ ಇತ್ತು. ಪ್ರತೀ ಭಾನುವಾರವೂ ಅದೇನೋ ರಿಪೇರಿ ಮಾಡುತ್ತಲೇ ಇರುತ್ತಿದ್ದರು. ಗಾಡಿ ಅಪರೂಪಕ್ಕೆ ಓಡುವಾಗಲಂತೂ ಕೆಟ್ಟ ಸದ್ದು ಬರುತ್ತಿತ್ತು. ಇಷ್ಟು ಇತಿಹಾಸ ಹೊತ್ತ ಆ ಸ್ಕೂಟರ್ ಅನ್ನು ನಮ್ಮ ಮನೆಯಲ್ಲಿ ಕರೆಯುತ್ತಿದ್ದುದು ಡಬ್ಬ ಸ್ಕೂಟರ್ ಅಂತ. ನಿಮ್ಮ ಜೀವನದಲ್ಲೂ ಇಂತಹ ಡಬ್ಬ ಸ್ಕೂಟರ್, ಡಬ್ಬ ಕಾರು ಅಥವಾ ಇನ್ಯಾವುದಾದರೂ ಡಬ್ಬ ಗಾಡಿಯ ಅನುಭವಿರಬಹುದಲ್ಲವೇ? ಹಾಗಿದ್ದರೆ ನಿಮ್ಮ ಅನುಭವ ಹಂಚಿಕೊಳ್ಳಿ. ಅಂದ ಹಾಗೆ ಡಬ್ಬ ಗಾಡಿ ಅಂತ ಹೇಳುವಾಗ ಕೊಂಚ ದೀರ್ಘವಾಗಿ ಡಬ್ಬಾ ಗಾಡಿ ಅಂತಲೇ ಹೇಳೋದು.

Concept Of Using Different Boxes For Different Purpose

ಅಡುಗೆ ಮನೆಯಲ್ಲಿ ಅಡುಗೆ ಪದಾರ್ಥಗಳನ್ನು ಇಡುವ ಡಬ್ಬಿಗಳದ್ದೇ ಒಂದು ಸಾಮ್ರಾಜ್ಯ ಎಂದರೆ ನೀವು ನಂಬಲೇಬೇಕು. ಮನೆಯಾಕೆಗೆ ಯಾವ ಪದಾರ್ಥ ಯಾವ ಡಬ್ಬಿಯಲ್ಲಿರುತ್ತದೆ ಎಂಬ ಸಂಪೂರ್ಣ ಚಿತ್ರಣವಿರುತ್ತದೆ. ಒಂದು ಸಣ್ಣ ಉದಾಹರಣೆ ಎಂದರೆ 'ಪರಮೇಶಿ ಪ್ರೇಮ ಪ್ರಸಂಗ' ಸಿನಿಮಾದಲ್ಲಿ ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಅವರ ಮೇಲೆ ಚಿತ್ರಿತವಾಗಿರುವ ಒಂದು ಹಾಡಿದೆ. ರಮೇಶ ಭಟ್ ಅಡುಗೆ ಮಾಡುವ ಸಂದರ್ಭ. ಯಾವ ಡಬ್ಬದಲ್ಲಿ ಏನಿದೆ ಎಂಬ ಪ್ರಶ್ನೆ ಮತ್ತು ಅದಕ್ಕೆ ಉತ್ತರ ಈ ಹಾಡಿನ ಒಂದು ಚರಣದಲ್ಲಿನ "ನಾಲ್ಕನೇ ಸಾಲಲ್ ಜೀರಿಗೆ ಡಬ್ಬ, ಮೂರನೇ ಸಾಲಲ್ ಸಾಸಿವೆ ಡಬ್ಬ, ಅಲ್ಲಿ ನೋಡಪ್ಪ ಮೊದಲು ಬೇಳೆ ಹಾಕಪ್ಪ' ಎಂಬ ಸಾಲು, ಆ ಹೆಣ್ಣು ತನ್ನ ಸಾಮ್ರಾಜ್ಯವಾದ ಅಡುಗೆ ಮನೆಯ ಮೇಲಿನ ಹಿಡಿತವನ್ನು ಎತ್ತಿ ತೋರಿಸಿದ್ದಾಳೆ.

ಇದು ಬರೀ ಇಷ್ಟೇ ಅಲ್ಲ. ಒಬ್ಬ ಹೆಣ್ಣು ತನ್ನ ಸೇವಿಂಗ್ಸ್ ಹಣವನ್ನು ಬಚ್ಚಿಡಲು ಬಳಸುವ ತಿಜೋರಿಯೇ ಈ ಡಬ್ಬಿಗಳು. ಕೆಲವರು ಒಂದೇ ಡಬ್ಬಿಯಲ್ಲಿ ಹಣ ಇಡುವುದು ಮಾಡಿದರೆ, ಕೆಲವರು ಒಂದೊಂದು ದಿನ ಒಂದೊಂದು ಡಬ್ಬಿಗೆ ಆ ಹಣವನ್ನು ವರ್ಗಾಯಿಸುತ್ತಾ ಇರುತ್ತಾರೆ. ಮನೆಯಲ್ಲಿನ ಯಜಮಾನನಿಗೆ ದುಡ್ಡಿನ ಮೇಲೆ ಹಿಡಿತ ಇಲ್ಲದಿದ್ದಾಗ ಅಥವಾ ದುರ್ವ್ಯಸನಿಯಾಗಿದ್ದಾಗ, ಮಕ್ಕಳು ಹಣವನ್ನು ಪೋಲು ಮಾಡುವವರಾಗಿದ್ದರೆ, ಸಂಸಾರ ತೂಗಿಸಲು ಹಣವನ್ನು ಹೀಗೆ ತೆಗೆದಿರಿಸಿಕೊಳ್ಳುತ್ತಾಳೆ ಆ ಹೆಣ್ಣು.

ಶ್ರೀನಾಥ್ ಭಲ್ಲೆ ಅಂಕಣ; ಕರದ ವಿಷಯ ನಿಮಗೆ ಕರತಲಾಮಲಕ ಆಗಿದೆಯೇ?ಶ್ರೀನಾಥ್ ಭಲ್ಲೆ ಅಂಕಣ; ಕರದ ವಿಷಯ ನಿಮಗೆ ಕರತಲಾಮಲಕ ಆಗಿದೆಯೇ?

ಸಿನಿಮಾ ಜಗತ್ತಿನಲ್ಲಿ ಈ ಡಬ್ಬ ಶಬ್ದದ ಪ್ರಯೋಗ ಹೇಗಿದೆ ನೋಡೋಣವೇ? ಡಬ್ಬ ಎಂದರೆ ಬಾಕ್ಸ್. ಮೊದಲಿಗೆ ಬಾಕ್ಸ್ ಆಫೀಸ್ ಅಂದ್ರೇನು ನೋಡೋಣ. ಬಾಕ್ಸ್ ಆಫೀಸ್ ಎಂಬುದು ಒಂದು ಚಿಕ್ಕ ರೂಮು. ಆ ರೂಮಿನಲ್ಲಿ ಕೂತವರಿಂದಲೇ ನಾವು ಸಿನಿಮಾಕ್ಕೆ ಟಿಕೆಟ್ ಖರೀದಿಸುವುದು. ಸಿನಿಮಾ ಶುರುವಾಗಿ ಅರ್ಧ ಗಂಟೆ ಆಗಿದ್ದರೂ ಈಗ ತಾನೇ ಶುರುವಾಯ್ತು ಎಂಬ ಮಾತು ಬರುವುದು ಈ ಬಾಕ್ಸ್ ಆಫೀಸ್ ನಿಂದಲೇ. ಅಲ್ಲಿ ಹಣದ ವ್ಯವಹಾರ ಇರುವುದರಿಂದ ಅಲ್ಲಿರುವವರು ಆ ಪುಟ್ಟ ರೂಮಿನ ಬಾಗಿಲು ಜಡಿದುಕೊಂಡು ಕೂರೋದು. ನಮ್ಮಲ್ಲಿ, ಮೊದಲ ಬಾರಿಗೆ ಸಿನಿಮಾ ಮಂದಿರದಲ್ಲಿ ಕನ್ನಡ ಸಿನಿಮಾ ತರಿಸಿದ್ದ ಸಮಯದಲ್ಲಿ ನಮಗೆಂದೇ ಬಾಕ್ಸ್ ಆಫೀಸ್ ಕೆಲಸ ಬಿಟ್ಟುಕೊಟ್ಟಿದ್ದರಿಂದ ಸ್ವಲ್ಪ ಹೊತ್ತು ಅಲ್ಲಿ ಕುಳಿತು ಟಿಕೆಟ್ ಹಂಚಿದ್ದು ನೆನಪಿದೆ.

ಎಷ್ಟರ ಮಟ್ಟಿಗೆ ಟಿಕೆಟ್ ಸೇಲ್ ಆಗುತ್ತದೆ ಎಂಬುದರ ಆಧಾರದ ಮೇಲೆ ಆ ಸಿನಿಮಾ ಯಶಸ್ವಿಯೋ ಅಥವಾ ತೋಪು ಹೊಡೆಯುತ್ತೋ ನಿರ್ಧಾರವಾಗುತ್ತದೆ. ಒಂದು ಸಿನಿಮಾ, ಹಣ ಸಂಗ್ರಹಣೆಯಲ್ಲಿ ಕಳಪೆಯಾಗಿದ್ರೆ ಅದು ಫ್ಲಾಪ್ ಎನ್ನುತ್ತಾರೆ. ಗುಣಮಟ್ಟವೇ ಕಳಪೆಯಾಗಿದ್ರೆ ಅದೊಂದು 'ಡಬ್ಬ ಸಿನಿಮಾ' ಅಂತಲೇ ಹೇಳೋದು. ನೀವು ನೋಡಿರುವ ಡಬ್ಬಾ ಸಿನಿಮಾ ಹೆಸರಿಸಿ ಆಯ್ತಾ? ಹಲವಾರು ದಿನಗಳು 'ಚಿತ್ರಮಂದಿರ ತುಂಬಿದೆ' ಎಂಬ ಫಲಕ ಹೊತ್ತು ಸಾಗುತ್ತಿದ್ದರೆ ಅದು ಬಾಕ್ಸ್ ಆಫೀಸ್ ಹಿಟ್ ಅಥವಾ ಸೂಪರ್ ಹಿಟ್. ಕೆಲವೊಂದು ಸಿನಿಮಾಗಳಿಗೆ ಬಿಡುಗಡೆಯ ಭಾಗ್ಯವೇ ದೊರೆಯುವುದಿಲ್ಲ. ಅಂಥವನ್ನು ಡಬ್ಬದಲ್ಲೇ ಉಳಿದ ಸಿನಿಮಾ ಎಂದು ಹೇಳುತ್ತಾರೆ. ಆದರೆ ಈ ಡಬ್ಬ ಬೇರೆ. ಇದು ರೀಲ್ ಗಳನ್ನೂ ತುಂಬಿಟ್ಟಿರುವ ಡಬ್ಬದ ವಿಷಯ. ಈ ವಿಷಯವನ್ನೇ ಸ್ಥೂಲವಾಗಿ ಮುಂದೊಮ್ಮೆ "ಒಂದು ಡಬ್ಬದ ಕಥೆ" ಅಂತ ಬರೆಯುತ್ತೇನೆ.

ನಮ್ಮ ಜೀವನದಲ್ಲಿ ಕಂಡಿರುವ ಇತರೆ ಡಬ್ಬಗಳು ಹಲವಾರು. ಶಾಲಾ ದಿನಗಳಿಗೆ ಹೋದರೆ ಪೆನ್ಸಿಲ್ ಮತ್ತು ರಬ್ಬರ್ ಇಟ್ಟುಕೊಳ್ಳಲು ಒಂದು ಡಬ್ಬ. ಸ್ವಲ್ಪ ದೊಡ್ಡವರಾದರೆ ಜಾಮೆಟ್ರಿ ಡಬ್ಬ. ಊಟ ತಿಂಡಿಗೆಂದು ಮನೆಯಿಂದ ತರುತ್ತಿದ್ದ ಟಿಫನ್ ಮತ್ತು ಲಂಚ್ ಡಬ್ಬ. ಮೂರನೆಯ ತರಗತಿಯಲ್ಲಿ ಮ್ಯೂಸಿಕಲ್ chair ಆಟದಲ್ಲಿ ನನಗೆ ಪ್ರಥಮ ಬಹುಮಾನ ಬಂದಾಗ ನನಗೆ ಸಿಕ್ಕಿದ್ದು ನೀಲಿ ಬಣ್ಣದ ಲಂಚ್ ಬಾಕ್ಸ್. ಬ್ಯಾಗಿನಲ್ಲಿ ಪುಸ್ತಕಗಳನ್ನು ಇಟ್ಟುಕೊಂಡು ಹೋಗುತ್ತಿದ್ದುದು ಸಾಮಾನ್ಯ ನೋಟ ತಾನೇ. ನಮ್ಮಲ್ಲೊಬ್ಬ ಸಿರಿವಂತರ ಹುಡುಗ ಪುಟ್ಟ briefcase ನಂತಹ ಅಲ್ಯೂಮಿನಿಯಂ ಡಬ್ಬ ತರುತ್ತಿದ್ದ. ನನಗೂ ಬೇಕು ಎಂಬ ಆಸೆಯಿತ್ತು, ಮಧ್ಯಮವರ್ಗ ನೋಡಿ, ಆಸೆಯಾಗಿಯೇ ಕಳೆಯಿತು ಆ ದಿನಗಳು.

ಇನ್ನು ಮದುವೆ, ಮುಂಜಿ, ಗೃಹ ಪ್ರವೇಶದ ಶುಭ ಸಂದರ್ಭಗಳ ಸಮಯದಲ್ಲಿ ನಮ್ಮ ಕೈ ಏರುವುದೇ ಗಿಫ್ಟ್ ಬಾಕ್ಸ್ ಗಳು. ಪುಟ್ಟ ಮಕ್ಕಳ ಹುಟ್ಟುಹಬ್ಬಕ್ಕೆ ಅಂತ ಉಡುಗೊರೆ ನೀಡುವಾಗ ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ದೊಡ್ಡ ಡಬ್ಬಗಳೇ ಇರುತ್ತವೆ. ಹಳೆಯ ಮನೆಯಿಂದ ಹೊಸಮನೆಗೆ ತರುವ ಸಾಮಾನುಗಳನ್ನು ತು೦ಬುವುದಕ್ಕೆ ಕಾರ್ಟನ್ ಡಬ್ಬಗಳು. ಅಂಗಡಿಯಿಂದ ಮನೆಗೆ ಬರುವ ಎಲೆಕ್ಟ್ರಾನಿಕ್ ವಸ್ತುಗಳು ಬರುವುದೇ ಡಬ್ಬದಲ್ಲಿ.

ಈಗೊಂದು ಪ್ರಶ್ನೆ ನಿಮಗೆ. ಭಗವಂತ ನಿಮ್ಮ ಮುಂದೆ ಪ್ರತ್ಯಕ್ಷನಾಗಿ "ಮುಂದಿನ ಜನ್ಮದಲ್ಲಿ ನೀನೊಂದು ಡಬ್ಬವಾಗಿ ಜನಿಸುವೆ. ನೀನು ಯಾವ ಡಬ್ಬವಾಗಲು ಬಯಸುವೆಯೋ ಆ ನಿನ್ನ ಇಚ್ಛೆ ನೆರವೇರಲಿ ಎಂದು ಆಶೀರ್ವದಿಸಿದ್ದೇನೆ" ಅಂತ ಹಾರೈಸಿದಾಗ, ನೀವು ಯಾವ ಡಬ್ಬವಾಗಲು ಬಯಸುವಿರಿ?

ನನ್ನ ಬೇಡಿಕೆ ಏನೂ ಅಂತ ಕೇಳಿದ್ರಾ? ಯುದ್ಧಭೂಮಿಯಲ್ಲಿ ತಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟ ಒಬ್ಬ ಯೋಧನನ್ನು ಹೊತ್ತು ತರುವ ಡಬ್ಬವಾಗಲು ಬಯಸುತ್ತೇನೆ. ಪುಣ್ಯದ ಕೆಲಸ ಅಲ್ಲವೇ?...

English summary
We use different types of boxes in our daily life. Here is a light article on boxes...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X