• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಆಂಗ್ಲದ compare ಎಂಬ ಪದಕ್ಕೆ ಹೋಲಿಸಿ ನೋಡೋದು ಅಥವಾ ತುಲನೆ ಮಾಡೋದು ಎಂಬ ಅರ್ಥವಿದೆ. ಈ ಹೋಲಿಸಿ ನೋಡುವ ಅಥವಾ ತುಲನೆ ಮಾಡುವ ಕ್ರಿಯೆ ನಮ್ಮ ದಿನನಿತ್ಯದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ನಾವು ಈ ಕ್ರಿಯೆಯನ್ನು ಪಾಲಿಸುತ್ತಿದ್ದೇವೆ ಎಂಬ ಅರಿವೇ ಇಲ್ಲದೇ, ಹೋಲಿಸಿ ನೋಡುವುದೇ ನಮ್ಮ ಹಕ್ಕು ಅಥವಾ ನಮ್ಮ ಜೀವನ ಶೈಲಿ ಎಂಬಂತೆ ಆಗಿಬಿಟ್ಟಿದೆ.

ಈ ಹೋಲಿಸಿ ನೋಡುವುದು ಎಂದರೆ, ಒಂದೇ ರೀತಿ ಇದೆಯೇ ಅಂತ ನೋಡುವ ಕ್ರಿಯೆಯೇ ಅಥವಾ ಯಾವ ರೀತಿ ಭಿನ್ನ ಅಂತ ನೋಡುವ ಕ್ರಿಯೆಯೇ? ನಿಜವಾಗಿಯೂ ಇದು ಎರಡೂ ರೀತಿ ಎನ್ನುವುದೇ ಸರಿ. ದಿನನಿತ್ಯದ ಜೀವನದ ಒಂದಷ್ಟು ಉದಾಹರಣೆಗಳನ್ನು ಕಂಡಾಗ ಇದರ ಬಗ್ಗೆ ಖಚಿತವಾಗಿ ಅರಿವಾಗುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ವಿಷಯವೇ ಇಲ್ಲದ ವಿಚಾರಗಳ ಮಂಥನ

ಜೀವನದ ಆರಂಭದಲ್ಲೇ, ಅಂದ್ರೆ ತೊಟ್ಟಿಲಾವಸ್ಥೆಯಲ್ಲಿ ಇರುವಾಗಲೇ ಈ ಹೋಲಿಸಿ ನೋಡುವ ಕ್ರಿಯೆ ಆರಂಭವಾಗಿ ಬಿಟ್ಟಿರುತ್ತದೆ. ಅವಶ್ಯಕತೆ ಇದೆಯೋ ಇಲ್ಲವೋ ಆದರೆ ಕೂಸಿನ ಮೂಗು ಅವರಪ್ಪನಂತೆಯೇ ಚಪ್ಪಟೆ ಅಲ್ವ? ಎಂಬ ಕುಹಕ ಇರಬಹುದು ಅಥವಾ ಕೂಸಿನ ಕಣ್ಣು ಅಮ್ಮನ ಕಣ್ಣಿನಂತೆಯೇ ದೊಡ್ಡದಾಗಿದೆ ಎಂಬ ಹೊಗಳಿಕೆಯೂ ಆಗಬಹುದು. ಕೆಲವೊಮ್ಮೆ ಕೂಸಿನ ಅಪ್ಪನನ್ನು ರೇಗಿಸುವ ಉದ್ದೇಶದಿಂದ ಕೂಸಿಗೆ ದಟ್ಟವಾಗಿದೆ ತಲೆಗೂದಲು, ಸದ್ಯ ಅವರಪ್ಪನಂತೆ ಇಲ್ಲ ಅಂತ. ಇದಾವ ಸನ್ನಿವೇಶವೇ ಇರಲಿ, ಒಟ್ಟಾರೆ ಅಲ್ಲೊಂದು ಹೋಲಿಸಿ ನೋಡುವ ಕ್ರಿಯೆ ಹುಟ್ಟಿದೆ.

ಇಲ್ಲಿಂದ ಆರಂಭವಾದ ಹೋಲಿಕೆ ಜೀವನದುದ್ದಕ್ಕೂ ಸಾಗುತ್ತದೆ. ಅದೇನದು ಮಲ್ಕೊಂಡ್ ಟಿ.ವಿ ನೋಡೋದು ನಿಮ್ಮ ಮಾವನ ಥರ?, ಊಟ ಮಾಡುವಾಗ ಅದೆಷ್ಟು ತಿಂತೀಯಾ ಅನ್ನೋದರ ಕಡೆ ಗಮನವೇ ಇರೋಲ್ಲ ನಿಮ್ಮಪ್ಪನ ಹಾಗೆ, ಸ್ವಲ್ಪ ಅವಳನ್ನ ನೋಡಿ ಕಲಿ, ನಿನಗಿಂತ ಒಂದು ವರ್ಷ ಚಿಕ್ಕವಳು, ಆದರೂ ಎಷ್ಟು ಜವಾಬ್ದಾರಿ ಇದೆ ಎಂಬೆಲ್ಲಾ ಹೋಲಿಕೆಗಳು ದಿನನಿತ್ಯದ ಉಸಿರಾಟದಂತೆ ನಮ್ಮೊಡನೆಯೇ ಬೆಳೆಯುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ; ಬತ್ತಳಿಕೆಯೊಳಗಿನ ಬಾಣಗಳು

ಒಂದು ಮನೆಯಲ್ಲಿನ ಅವಳಿ-ಜವಳಿಯ ರೂಪುರೇಖೆಗಳ ಬಗ್ಗೆ ಹೇಳುವಾಗ compare ಎನ್ನುವುದು ಹೋಲಿಕೆ ಅಂತಾದರೆ, ಗುಣಾವಗುಣಗಳ ಅವಲೋಕನ ಮಾಡುವಾಗ ಅದೇಕೋ ತುಲನೆಯೇ ಮುಂದೆ ಬರುತ್ತದೆ. ಇಬ್ಬರ ಹುಟ್ಟಿನ ನಡುವೆ ಐದು ನಿಮಿಷಗಳ ಅಂತರವೇ ಇರಬಹುದು ಆದರೆ ಒಬ್ಬೊಬ್ಬ ವ್ಯಕ್ತಿಯೂ ಅನನ್ಯ.

ಮನೆಯಿಂದಾಚೆಗೆ ಈಗ ಅಡಿಯಿಟ್ಟು ಅಲ್ಲಿನ ಜಗತ್ತಿನಲ್ಲಿರುವ ತುಲನೆಯನ್ನು ನೋಡೋಣ ಬನ್ನಿ. ಒಂದು ಟೂಥ್ ಪೇಸ್ಟ್ ಕೊಂಡುಕೊಳ್ಳಬೇಕು ಅಂತ ಒಂದು ಅಂಗಡಿಗೆ ಹೋಗುತ್ತೀರಿ ಅಂದುಕೊಳ್ಳಿ. ಅಲ್ಲಿ ಎಷ್ಟು ಬಗೆಯ ಟೂಥ್ ಪೇಸ್ಟ್ ಕಣ್ಣಿಗೆ ಬೀಳುತ್ತದೆ? ಒಂದೇ, ಎರಡೇ ಅಥವಾ ಹತ್ತೇ? ಒಂದೇ ಬಗೆಯ ಟೂಥ್ ಪೇಸ್ಟ್ ಬಳಸುವವರಾಗಿದ್ದರೆ ಬಹುಶಃ ಬೇರೆ ಬಗೆಯ ಕಡೆ ತಲೆಯನ್ನೂ ತಿರುಗಿಸಿ ನೋಡದೆ ಇರುತ್ತೀರಿ.

ಶ್ರೀನಾಥ್ ಭಲ್ಲೆ ಅಂಕಣ; ತಾಳ ಬೇಕು ತಕ್ಕ ಮೇಳ ಬೇಕು

ಆದರೆ ಮಾರುಕಟ್ಟೆಗೆ ಹೋಗಿ ತರಕಾರಿಯನ್ನೋ, ಹಣ್ಣನ್ನೋ ಅಥವಾ ಹೂವನ್ನೋ ತರುವಂತೆ ಆದಾಗ ಶುರುವಾಗುತ್ತದೆ ತುಲನೆ. ಒಬ್ಬಾತ ಮಾರುವ ಸೇಬು ಮತ್ತೊಬ್ಬ ಮಾರುವ ಸೇಬಿಗಿಂತ ಚೆನ್ನಾಗಿರಬಹುದು. ಆದರೆ ಇವನ ಬಳಿ ಇರುವ ದ್ರಾಕ್ಷಿಗಿಂತ ಮತ್ತೋರ್ವನ ಬಳಿ ಚೆನ್ನಾಗಿರಬಹುದು. ಅಲ್ಲಿಗೆ ಮೂರು ಬಾರಿ ತುಲನೆ ಮಾಡಿ ಆಗಿರುತ್ತದೆ. ಇದು ತರಕಾರಿಗೂ ಆಗಬಹುದು ಅಥವಾ ಹೂವಿಗೂ ಆಗಬಹುದು ಮತ್ತು ದಿನನಿತ್ಯದಲ್ಲಿ ಆಗುತ್ತಲೇ ಇರುತ್ತದೆ. ಒಟ್ಟಾರೆ ಕೊಡುವ ಕಾಸಿಗೆ ತಕ್ಕ ಕಜ್ಜಾಯ ಬೇಕು ಎಂಬುದೇ ತುಲನೆಯ ಹಿಂದಿನ ರಹಸ್ಯ ಎನ್ನಬಹುದೇ?

ಈವರೆಗೆ ಹೇಳಿದ್ದರ ವಿಷಯ ಒಂದು ರೀತಿ. ಏಕೆಂದರೆ ಈ ತುಲನೆ ಮಾಡುವ ಗ್ರಾಹಕನಿಂದ ವ್ಯಾಪಾರ ಮಾಡುವವರಿಗೆ ಲಾಭವೂ ಆಗಬಹುದು, ನಷ್ಟವೂ ಆಗಬಹುದು. ಆದರೆ ಈ ರಿಸ್ಕ್ ಪ್ರತೀ ವ್ಯಾಪಾರಸ್ಥನಿಗೂ ಅರಿವಿರುತ್ತದೆ. ಈ ತುಲನೆಯ ವಿಚಾರ ಕಾರ್ಪೊರೇಟ್ ಜಗತ್ತಿನಲ್ಲಿ ವಿಭಿನ್ನ ರೂಪವೇ ತಳೆಯುತ್ತದೆ.

ತಾನೂ ಅಷ್ಟೇ ಕೆಲಸ ಮಾಡುತ್ತೇನೆ ಅಥವಾ ಅವನಿಗಿಂತ ಹೆಚ್ಚೇ ಕೆಲಸ ಮಾಡುತ್ತೇನೆ ಆದರೂ ಒಬ್ಬ ಗಂಡಿಗೆ ಸಿಗುವಷ್ಟು ಸಂಬಳ ತನಗೆ ಸಿಗುವುದಿಲ್ಲ ಎಂಬುದೇ ಹೆಂಗಳ ಅಳಲು. ಒಬ್ಬ ಗಂಡು ಅಭ್ಯರ್ಥಿ ಮತ್ತು ಹೆಣ್ಣು ಅಭ್ಯರ್ಥಿ ಸಮಾನ ವಿದ್ಯಾರ್ಹತೆ ಮತ್ತು ಸಂದರ್ಶನದಲ್ಲೂ ಸಮಾನವಾಗಿ ಮುಂದುವರೆದರೂ ಆಯ್ಕೆಯಾಗುವ ಸಮಯದಲ್ಲಿ ಈ ತುಲನೆ ಎಂಬುದು ಬಂದಾಗ ಗಂಡಿನ ತೂಕ ಹೆಚ್ಚುವ ಸಂಭವನೀಯತೆ ಕೊಂಚ ಜಾಸ್ತಿ. ಹೆಣ್ಣಿಗೆ ಗಂಡ-ಮನೆ-ಮಕ್ಕಳು ಎಂಬ ಜವಾಬ್ದಾರಿ ಇರಬಹುದು, ಮದುವೆಯಾಗದ ಹೆಣ್ಣಾಗಿದ್ದರೆ ಮದುವೆ ಮತ್ತು ಆ ನಂತರ ಮಕ್ಕಳು ಅಂತಾದಾಗ maternity ರಜೆ ಹಾಕಿ ಹೋಗುತ್ತಾರೆ ಎಂಬೆಲ್ಲ ವಿಚಾರಗಳು ಈ ತುಲನೆಯ ಅಂಶಗಳಾಗಿರುತ್ತದೆ. ಇಂಥ ತಾರತಮ್ಯವನ್ನು ಹತ್ತಿಕ್ಕಲು, ಇಂದು ಪ್ರತೀ ಉದ್ಯೋಗದಾತನು Equal opportunity provider ಎಂಬ ನೀತಿ ಪಾಲಿಸಲೇಬೇಕು.

ಕಾರ್ಪೊರೇಟ್ ಜಗತ್ತಿನಲ್ಲಿ performance evaluation ಅಂತ ಒಂದಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಡೀ ವರ್ಷ ಅದೇನು ಕಡೆದು ಕಟ್ಟೆ ಹಾಕಿರುತ್ತೇವೆಯೋ ಅದಕ್ಕೊಂದು ಬೆಲೆ ಕಟ್ಟುವ ಸಂದರ್ಭ ಎನ್ನಬಹುದು. ವರ್ಷವೆಲ್ಲಾ ಸಖತ್ ಕೆಲಸ ಮಾಡಿಯೂ ಕೊನೆಯಲ್ಲಿ ಏನೋ ಎಡವಟ್ಟಾಯ್ತು ಅಂದ್ರೆ ಅದೇ ಎದ್ದುನಿಲ್ಲುತ್ತದೆ. ಅಂದ್ರೆ ಒಂದು ಟೀಮಿನಲ್ಲಿ ಯಾರ್ಯಾರು ಹೇಗೆ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ತುಲನೆ ಮಾಡಿದಾಗ ಇಂಥಾ ಎಡವಟ್ಟುಗಳು ಎದ್ದೆದ್ದು ಬರುತ್ತದೆ.

ಒಂದು ಟೀಮಿಗೆ ಕಂಪನಿಯ ಒಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೂ ಇಂಥ ತುಲನೆಗಳು ಸಾಕಷ್ಟು ನಡೆಯುತ್ತದೆ. ಒಬ್ಬ ಇಂಥಾ ವಿಷಯದಲ್ಲಿ ಜ್ಞಾನಿ ಇಂಥಾದ್ರಲ್ಲಿ ಕೊಂಚ ವೀಕು, ಮತ್ತೊಂದರಲ್ಲಿ ಹೆಚ್ಚು ಅರಿವಿಲ್ಲದಿದ್ದರೂ ಕಲಿಯುವ ಹುಮ್ಮಸ್ಸಿರುವಾತ ಎಂಬೆಲ್ಲಾ ರೀತಿ ತುಲನೆಗಳನ್ನು ಮಾಡಿದ ನಂತರವೇ ತಮಗೆ ಬೇಕಿರುವ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳೋದು.

ಆದರೆ ಈ ತುಲನೆ ಅನ್ನೋದು ತಪ್ಪಲ್ಲ. ಯಾವುದೇ ರಂಗದಲ್ಲಾಗಲಿ ತುಲನೆ ಮಾಡಿದಾಗಲೇ ತಾನೇ ಆಯಾ ರಂಗದಲ್ಲಿ ಶ್ರೇಷ್ಠರು ಯಾರು ಎಂದು ಗುರುತಿಸೋದು? ಕರ್ಣಾರ್ಜುನರ ನಡುವೆ ಶ್ರೇಷ್ಠರು ಯಾರು? ದುರ್ಯೋಧನ-ಭೀಮರ ನಡುವೆ ಶ್ರೇಷ್ಠರಾರು? ಎಂದು ನೋಡುವಾಗ ಒಂದು ಅರ್ಥವಿದೆ. ಆದರೆ ಬೇರೆ ಬೇರೆ ಕ್ಷೇತ್ರದವರಲ್ಲಿರುವವರ ನಡುವೆ ಹೋಲಿಕೆ ಸರಿಯೇ? ರಾಹುಲ್ ದ್ರಾವಿಡ್ ಮತ್ತು ಪ್ರಕಾಶ್ ಪಡುಕೋಣೆ ಅವರ ನಡುವೆ ಶ್ರೇಷ್ಠರಾರು ಎಂದು ಹೋಲಿಸಿ ನೋಡುವುದನ್ನು comparing apples and oranges ಎನ್ನುತ್ತಾರೆ.

ಒಂದು ವಾಹನ ಕೊಳ್ಳುವಾಗ ಸ್ವದೇಶಿಯೇ ಅಥವಾ ವಿದೇಶಿಯೇ, ಮೈಲೇಜ್ ಹೇಗಿದೆ, ಬೆಲೆ ಎಷ್ಟು, ಸರ್ವಿಸ್ ಹೇಗಿದೆ ಇತ್ಯಾದಿ ವಿಚಾರಗಳ ತುಲನೆ, ಬಟ್ಟೆಯನ್ನು ಕೊಳ್ಳುವಾಗ ಬಣ್ಣ, ಡಿಸೈನ್, ದರ್ಜೆಯನ್ನು ತುಲನೆ ಮಾಡ್ತೀವಿ. ಹಣ ಕೊಟ್ಟು ಕೊಳ್ಳುವುದೋ ಅಥವಾ ಕ್ರೆಡಿಟ್ ಕಾರ್ಡ್ ಉಜ್ಜುವುದೋ ಎಂಬ ತುಲನೆ, ನಾಯಿ ಮತ್ತು ಬೆಕ್ಕು ಎರಡೂ ನಿಮ್ಮಿಷ್ಟದ ಸಾಕು ಪ್ರಾಣಿಯಾದರೆ ಸಾಕುವುದು ಯಾವುದನ್ನು ಎಂಬ ತುಲನೆ, ಇಂಥ ತುಲನೆಗಳು ಮತ್ತು ಹೋಲಿಕೆಗಳು ನಮ್ಮ ಜೀವನದ ಉದ್ದಕ್ಕೂ ಹಾಸಿಹೊದ್ದುಕೊಳ್ಳುವಷ್ಟಿದೆ.

ಎಲ್ಲಾ ಸರಿ ಆದರೆ ನಿಮ್ಮದೇ ಮಕ್ಕಳನ್ನು ಮತ್ತೋರ್ವರ ಮಕ್ಕಳಿಗೆ ಹೋಲಿಸುವುದು ತರವಲ್ಲ. ಒಬ್ಬೊಬ್ಬರು ಒಂದೊಂದು ವಿಧದಲ್ಲಿ ವಿಶಿಷ್ಟ. ನಿಮ್ಮ ಕೂಸಿಗೆ ಇರಬಹುದಾದ ಸಾಮರ್ಥ್ಯ ಮತ್ತೊಬ್ಬರಿಗೆ ಇರಬೇಕು ಅಂತೇನಿಲ್ಲ. ನಮ್ಮ ಕೂಸಿನಷ್ಟು ಮತ್ತೊಬ್ಬರಿಗೆ ಸಾಮರ್ಥ್ಯವಿಲ್ಲ ಎಂಬ ಹೆಗ್ಗಳಿಕೆ ಬೇಡ. ನಮ್ಮ ಕೂಸು ಪಕ್ಕದ ಮನೆಯವರ ಕೂಸಿಗಿಂತ ಓದಿನಲ್ಲಿ ಹಿಂದೆ ಎಂಬ ಕುಗ್ಗುವಿಕೆ ಅಥವಾ ಹೀಗೆಳೆಯುವಿಕೆಯೂ ಬೇಡ.

ಇದರಂತೆಯೇ ನಮ್ಮನ್ನು ನಾವು ಮತ್ತೊಬ್ಬರಿಗೆ ಹೋಲಿಸಿಕೊಳ್ಳುವುದು ಬೇಡ. ಮತ್ತೋರ್ವರ ಸಾಮರ್ಥ್ಯವನ್ನು ನಮ್ಮೊಂದಿಗೆ ತುಲನೆ ಮಾಡಿ ನೋಡಿಕೊಂಡು ಹಿಗ್ಗುವುದು ಅಥವಾ ಕುಗ್ಗುವುದೂ ಬೇಡ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೆ ಮಿಗಿಲಾಗಿ ಮತ್ತೊಬ್ಬ ಇರುತ್ತಾನೆ ಎಂಬ ವಿಚಾರ ನಮ್ಮಲ್ಲಿ ಸದಾ ಕುಳಿತಿರಬೇಕು. ಎನಗಿಂತ ಹಿರಿಯರಿಲ್ಲ ಎಂಬ ಅಜ್ಞಾನ ಸರಿದು, ಎನಗಿಂತ ಕಿರಿಯರಿಲ್ಲ ಎಂಬ ಸುಜ್ಞಾನ ಹರಿಯುತ್ತಿರಲಿ ನಿತ್ಯ.

English summary
The act of comparing has become so common in our daily life that we are following without knowing it. Comparision in everything became a lifestyle these days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X