ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಇತ್ತೀಚೆಗೆ ಬರೆದ ಹಲವು ಬರಹಗಳನ್ನು ಒಮ್ಮೆ ಹಿಂದಿರುಗಿ ನೋಡಿ, ನನ್ನ ಬರಹಗಳನ್ನೇ ಅವಲೋಕಿಸುವ ಒಂದು ವಿಭಿನ್ನವಾದ ಯತ್ನವೇ ಇಂದಿನ ಈ ಬರಹ. ಹೀಗೇಕೆ ಹೇಳಿದ್ದೆ ಎಂಬುದು ಕೆಲವೊಮ್ಮೆ, ಹೀಗೆಲ್ಲಾ ಹೇಳಬೇಕೋ ಅಂತಿದ್ದೆ ಎಂಬುದು ಕೆಲವೊಮ್ಮೆ, ಹೀಗೇಕೆ ಹೇಳಲಿಲ್ಲ ಅಂತಲೂ ಕೆಲವೊಮ್ಮೆ.

ಏನ್ ನಾಲಿಗೆ ರೀ.. ಎಂಬ ವಿಷಯ ಬರೆದಾಗ ಕೆಲವು ವಿಚಾರಗಳು ತುಟಿಯ ಮೇಲೆ ಬಂದರೂ ಅರ್ಥಾತ್ ನಾಲಿಗೆ ಮೇಲೆ ಬಂದರೂ, ಹಲವಾರು ವಿಚಾರಗಳು ಆ ನಾಲಿಗೆಯ ಮತ್ತೊಂದು ತುದಿಯಿಂದ ಜಾರಿ ಹೃದಯದ ಆಲಯದಲ್ಲಿ ಸೇರಿಹೋಯ್ತು. ನಾಲಿಗೆ ಮೃದುವಾದ ಅಂಗ. ಈ ಮೃದು ಎಂದು ಬಂದಾಗ ಒಂದು ವಿಷಯ ಹೇಳಲೇಬೇಕು.

ಶ್ರೀನಾಥ್ ಭಲ್ಲೆ ಅಂಕಣ; ಅದೇನ್ ನಾಲಿಗೆ ರೀ ಇದು?ಶ್ರೀನಾಥ್ ಭಲ್ಲೆ ಅಂಕಣ; ಅದೇನ್ ನಾಲಿಗೆ ರೀ ಇದು?

ಹಲ್ಲುಗಳ ಕೋಟೆಯ ಒಳಗೇ ನಾಲಿಗೆ ಇರೋದು, ಎಲುವುಗಳ ಗೂಡಿನ ಒಳಗೇ ಮೃದುವಾದ ಹೃದಯ ಇರೋದು. ತಲೆಯ ಬುರುಡೆಯ ಒಳಗೇ ಮೃದುವಾದ ಮೆದುಳು ಇರೋದು. ಈ ಮೂರೂ ಮೃದುಗಳು ಒಬ್ಬರಿಗಾಗಿ ಒಬ್ಬರು ಅಂತಲ್ಲದಿದ್ದರೂ, ಒಬ್ಬರಿಂದ ಒಬ್ಬರು ಎಂಬಂತಹ ಸ್ನೇಹಿತರು ಎಂದರೆ ಹೇಗಿರಬಹುದು? ಮಾತನಾಡಲು ಆಗದವರಿಗೆ ಮೆದುಳು ಮತ್ತು ಹೃದಯಗಳು ಮಾತನಾಡುತ್ತವೆ.

Columns: Sometimes We Need To Speak From The Heart

ಯಾರಿಂದ ಯಾರು ಎಂಬುದು ಬದಿಗಿರಲಿ. ಯಾರಿಗೆ ಯಾರೋ ಎಂಬ ಮಾತು ಜೊತೆಗಿರಲಿ. ಒಂದಂತೂ ಅರ್ಥ ಮಾಡಿಕೊಳ್ಳಲೇಬೇಕು. ಕೆಲವೊಮ್ಮೆ ಮೆದುಳಿನಿಂದ ಮಾತನಾಡಬೇಕು, ಕೆಲವೊಮ್ಮೆ ಹೃದಯದಿಂದ ಮಾತನಾಡಬೇಕು. ನಾಲಿಗೆ ತುದಿಯ ಮಾತಿನಿಂದ ಯಾರಿಗೂ ಒಳಿತಾಗೋದಿಲ್ಲ.

ವ್ಯಾವಹಾರಿಕ ಜಗತ್ತಿನ ಜೊತೆಗೆ ಮೆದುಳಿನಿಂದ ಮಾತನಾಡಬೇಕು. ಸಂಬಂಧಗಳ ಮಾತುಗಳು ಹೃದಯದಿಂದ ಆಡಬೇಕು. ತುಟಿಯ ಮೇಲಿನ ಮಾತುಗಳು ಬಹುಶ: ಯಾವ ಸಂದರ್ಭಕ್ಕೂ ಒಳಿತಲ್ಲ ಎನ್ನಬಹುದೇನೋ. ಈ ನಾಲಿಗೆ ಕೇವಲ ಒಂದು ಅಂಗ. ಆಡುತ್ತೆ ಆದರೆ ಆಡಿಸುವ ಸೂತ್ರಧಾರಿ ಮೇಲಿದ್ದಾನೆ. ಅವನೇ ಆ ಮೆದುಳು.

Columns: Sometimes We Need To Speak From The Heart

ಮೆದುಳಿಗೂ, ಹೃದಯಕ್ಕೂ, ನಾಲಿಗೆಗೂ ಸ್ನೇಹ ಇದ್ದರೂ ಕೆಲವೊಮ್ಮೆ ನಾಲಿಗೆಯ ಮೇಲೆ ಹತೋಟಿ ಇರಲಾರದು. ಬಹುಶ: ನಾಲಿಗೆಯು ಮೆದುಳು ಮತ್ತು ಹೃದಯದ ಮಾತು ಕೇಳದೆ ತನ್ನದೇ ಅಧಿಪತ್ಯ ಸಾಧಿಸಲು ಹೋದಾಗ ಹೀಗಾಗಬಹುದು. ಆದರೆ ಹೊರಳಿದ ನಾಲಿಗೆಯಿಂದ ಮಾತುಗಳು ತೀವ್ರತೆ ಹೊಂದಿದಾಗ ಪೆಟ್ಟು ಬೀಳುವ ಸಾಧ್ಯತೆಯೂ ಇರಬಹುದು. ಇಂಥಾ ಮಾತನ್ನ ಆಡಿದೆಯಾ? ಅಂತ ಹೇಳಿ ಯಾರೋ ಅವರ ನಾಲಿಗೆಯನ್ನು ಹಿಡ್ಕೊಂಡು ಹೊಡೆಯೋದಿಲ್ಲ ಅಲ್ಲವೇ? ಧರ್ಮದೇಟು ಬೀಳೋದು ದೇಹದ ಇತರ ಅಂಗಗಳಿಗೆ. ನಾಲಿಗೆ ಬಚ್ಚಿಟ್ಟುಕೊಂಡಿರುವ ಕೂತಿರುವ ಕೋಟೆಗೇ ಎಷ್ಟೋ ಬಾರಿ ಏಟು ಬೀಳೋದು.

ಬೇಕಿರುವಾಗ ಏಳದು ಈ ನಾಲಿಗೆ. ಬೇಕಿರುವಾಗ ಮಲಗೇ ಇರುವುದು ಈ ನಾಲಿಗೆ. ಹಾಸಿಗೆಯ ಮೇಲೆ ಹೊರಳುವಂತೆ ಹೊರಳುವುದು ಈ ನಾಲಿಗೆ. ಬಿಚ್ಚಿದ ಹಾಸಿಗೆಯಂತೆ ಚಾಚುವುದು ಈ ನಾಲಿಗೆ. ಕಾಣುವಷ್ಟು ಉದ್ದವಿರುವ ನಾಲಿಗೆ ಕಾಣದಷ್ಟು ಚಾಚಿರುವುದು ಹಿಂದಕ್ಕೆ. ನಾಲಿಗೆಯನ್ನು ಹೋಲಿಸಬಹುದು icebergಗೆ. ಕಾಣುವುದು ಇಷ್ಟಾದರೂ ಕಾಣದಂತೆ ಇರುವುದು ಅಧಿಕ. ಎಷ್ಟೋ ಬಾರಿ ನಾಲಿಗೆ ಆಡುವ ಮಾತುಗಳು ಕೆಲವಾದರೂ ಆಡದೆ ಉಳಿಯುವ ಮಾತುಗಳೇ ಅಧಿಕ.

ಮೊದಲಿಗೆ ನಮ್ಮದೇ ನಾಲಿಗೆಯ ಮೇಲೆ ನಮಗೆ ಹತೋಟಿ ಇರುವುದಿಲ್ಲ. ಅಂಥದ್ರಲ್ಲಿ ಬೇರೆಯವರ ನಾಲಿಗೆಯ ಮೇಲೆ ಹತೋಟಿ ಸಾಧಿಸುವ ಹಕ್ಕು ನಮಗಿದೆಯೇ? ಇಲ್ಲಾ ತಾನೇ? ಆಡುವ ನಾಲಿಗೆ ಆಡಲಿ ಬಿಡಿ. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬಂತೆ ನಮಗೆ ಸಲ್ಲದ ಮಾತುಗಳನ್ನು ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಆಚೆಗೆ ಕಳುಹಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆ ಸಾಗುವ ಮಾತುಗಳನ್ನು ಬುದ್ದಿಗೆ ಏರಿಸಬಾರದು ಅಥವಾ ನಾಲಿಗೆಗೆ ಇಳಿಸಬಾರದು.

Columns: Sometimes We Need To Speak From The Heart

ಕೇಳಿದ ಎಲ್ಲಾ ಮಾತುಗಳನ್ನು ಬುದ್ಧಿಗೆ ಕಳಿಸಿದರೆ ಬುದ್ಧಿ ಕೆಡುತ್ತದೆ. ಶಾಂತಿ ಕೆಡುತ್ತದೆ. ಕೇಳಿದ ಎಲ್ಲಾ ಮಾತುಗಳನ್ನು ನಾಲಿಗೆಗೆ ಇಳಿಸಿ ಪ್ರತಿಕ್ರಯಿಸಿದರೆ ಜಗಳವಾಗೋದು ಖಂಡಿತ. ಸಂಬಂಧಗಳು ಹಾಳಾಗುತ್ತವೆ. ತಲೆಗೂ ಏರದೇ, ನಾಲಿಗೆಗೂ ಇಳಿಸಿದೇ, ಹೃದಯವೆಂಬ ಗುಡಿಗೆ ಕಳುಹಿಸಿದರೆ ಕಥೆ ಮುಗಿದಂತೆ. ಅದರ ಪರಿಣಾಮವೂ ಇಡೀ ದೇಹ ವ್ಯಾಪಿಸುತ್ತದೆ. ಭಗವಂತ ಕೊಟ್ಟಿರುವ ಎರಡು ಕಿವಿಗಳನ್ನು ಸಮಪರ್ಕವಾಗಿ ಬಳಸಿಕೊಳ್ಳೋಣ.

ಮುಂದಿನ ಮಾತು ಕನಕ ನಮನದ ಕುರಿತು. ಮೊದಲಿಗೆ ಕನಕ ನಮನ ಎಂಬ ಹೆಸರಿನ ಹಿಂದಿನ ಮರ್ಮ ಏನಪ್ಪಾ ಎಂದರೆ ಕನಕ ಮತ್ತು ನಮನ ಎರಡೂ palindromeಗಳು. ಎಡದಿಂದ ಬಲಕ್ಕೆ ಓದಿದರೂ, ಬಲದಿಂದ ಎಡಕ್ಕೆ ಓದಿದರೂ ಎರಡೂ ಒಂದೇ. ಹಾಗಾಗಿ ಈ ಅಭಿಯಾನಕ್ಕೆ ಈ ಹೆಸರೇ ಸೂಕ್ತ ಎನ್ನಿಸಿದ್ದು. ನನ್ನನ್ನೂ ಸೇರಿಸಿ ಹಲವರು ಹಾಡಿದ್ದು - ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಎಂದು.

ಅತ್ಯದ್ಭುತವಾದ ಕೀರ್ತನೆ ಮತ್ತು ಸಾರ್ವಕಾಲಿಕ ಸತ್ಯದ ಕೀರ್ತನೆ. ಪ್ರತೀ ಸಾಲನ್ನೂ ಇಂದಿನ ಸನ್ನಿವೇಶಗಳಿಗೆ ಹೋಲಿಸಿದರೆ ಹಲವಾರು ಹೊಸ ಅರ್ಥಗಳನ್ನು ಹೊರಗೆಳೆಯಬಹುದು. ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು ಎಂಬ ಸಾಲನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ತಪ ಎಂಬ ಪದವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದುದು ಮುಖ್ಯ. ನನ್ನೊಂದಿಗೆ ತಪಸ್ಸಿಗೆ ಬರುವಿರಾ ಎಂದು ಒಮ್ಮೆ ಕೇಳಿದ್ದೆ. ಆ ಬರಹದಲ್ಲಿನ ಮುಖ್ಯ ಅಂಶ ಎಂದರೆ ತಪಸ್ಸು ಎಂದರೆ ಕೇವಲ ಮೂಗು ಹಿಡಿದು ಕೂರುವ ಪದ್ದತಿಯಲ್ಲ ಬದಲಿಗೆ ನಾವು ಮಾಡುವ ಕಾರ್ಯದಲ್ಲಿನ ಶ್ರದ್ಧೆ ಎಂದು.

Columns: Sometimes We Need To Speak From The Heart

ಹೆತ್ತ ತಂದೆ ಮತ್ತು ತಾಯಿಯಿಂದ ದೂರವಿದ್ದು ಕೇವಲ ದಿನಗಳೇ ಅಲ್ಲದೆ ವರ್ಷಾನುಗಟ್ಟಲೇ ತಪವನ್ನು ಆಚರಿಸುವವ ಎಂದರೆ ದೇಶವನ್ನು ಕಾಯ್ವ ಸೈನಿಕ. ಹೆತ್ತವರಿಂದ ದೂರವೇ ಇದ್ದರೂ ತನ್ನ ತಪದಲ್ಲಿ ದೈವವನ್ನು ಕಾಣುವುದನ್ನು ಕ್ಷಣ ಮಾತ್ರವೂ ಮರೆಯುವುದಿಲ್ಲ ಎಂದು ಅರ್ಥೈಸಿಕೊಳ್ಳಬಹುದು ಅಲ್ಲವೇ? ಕಾಯಕದಲ್ಲಿ ಕಾಯಜನನ್ನು ಕಾಣುವವನು ಹಾಡುವುದೇ - ಕಾಯಜಾ ಪಿತಾ ನಿನ್ನ ಅಡಿಯ ಬಿಡಲಾಗದು ಎಂದು.

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ಎಂಬ ಕನಕರ ಮತ್ತೊಂದು ಕೀರ್ತನೆಯ ಬಗ್ಗೆಯೇ ಹೇಳುವಾಗ ಈ ಹಾಡನ್ನು ಬರಹದಲ್ಲಿ ಉಲ್ಲೇಖಿಸಿ ನುಡಿಸಿದ್ದು ನಮ್ಮ ಶಾಂತಮ್ಮನವರಿಂದ. ಬಾಗಿಲಿನ ಚಿಲಕ ತುಕ್ಕು ಹಿಡಿದಿದೆ, ಸಣ್ಣಗೆ ತಗುಲಿಸಿದರೆ ಸಾಕು, ಪೂರ್ಣವಾಗಿ ಹಾಕಿದರೆ ಬಾಗಿಲಿನ ಹಿಂದೆಯೇ ನಿಂತು ಹಾಡಬೇಕಾದೀತು ಎಂಬ ಮಾತು ರಾಯರಿಗೆ ಶಾಂತಮ್ಮನವರಿಂದ ಬಂತು.

ಕರಿರಾಜನ ಕಾಲುಗಳು ಮೊಸಳೆಯ ಬಾಯಿಗೆ ಸಿಲುಕಿ, ತನ್ನ ಪರಾಕ್ರಮದಿಂದಲೇ ಬಿಡಿಸಿಕೊಳ್ಳುವ ಯತ್ನದಲ್ಲಿ ಘೀಳಿಡುತ್ತಾ ಸಾಗಿರುತ್ತದೆ. ವೃಥಾ ಯತ್ನದಲ್ಲೇ ಹಲವಾರು ವರ್ಷ ಕಳೆದ ಮೇಲೆ ಕೊನೆಗೊಮ್ಮೆ ಈ ಕೆಲಸ ತನ್ನಿಂದಾಗದು ಎಂದಾಗ ನಾಲಿಗೆಯನ್ನು ಬದಿಗಿರಿಸಿ ಹೃದಯದಿಂದ ಕೂಗಿದಾಗ ಥಟ್ಟನೆ ಬಂದ ಗರುಡವಾಹನ. ನಾಲಿಗೆಯಿಂದಾಗದ ಕೆಲಸ ಹೃದಯದಿಂದ ಆಯ್ತು ಎನ್ನಬಹುದೇ?

ತುಕ್ಕು ಹಿಡಿದ ಚಿಲುಕ ಎಂದರೆ ಕಿಲುಬು ಹಿಡಿದ ಹೃದಯ ಅಂತ. ನಾನೇ ಎಂಬ ಭಾವವೇ ಈ ಕಿಲುಬು. ಅದೇ ಕರಿರಾಜನ ಪರಿಸ್ಥಿತಿ. ಮೆಲ್ಲಗೆ ತಾಕಿಸುವ ಬದಲು ಪೂರ್ಣವಾಗಿ ಹಾಕಿಕೊಂಡಿದ್ದರಿಂದ, ಆ ಕಿಲುಬು ಬಿಡಿಸಿಕೊಳ್ಳಲು ಕರಿರಾಜನು ಹೃದಯದಿಂದ ಕೂಗಿದ್ದು ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ಎಂದು. ಆಗಲೇ ಮಹಾವಿಷ್ಣು ಬಂದಿದ್ದು. ನಾನೇ ಎಂಬ ಭಾವದ ಚಿಲುಕ ಸಡಿಲಗೊಂಡಾಗಲೇ ಹೃದಯದ ಬಾಗಿಲು ತೆರೆದುಕೊಳ್ಳೋದು. ಇದನ್ನೇ ಅಲ್ಲವೇ ಕನಕರು ಹೇಳಿದ್ದು? ನಾನು ಹೋದರೆ ಹೋದೇನು ಅಂತ?

ಕನಕರ ಕಥೆಯಲ್ಲಿನ ಒಂದು ಪ್ರಸಂಗದಲ್ಲಿ ಪಾತ್ರೆಯ ಬಗೆಗಿನ ಒಂದು ಪ್ರಸಂಗವಿದೆ. ಪಾತ್ರೆಯು ಹೊರಗೆ ಥಳಗುಟ್ಟುವ ಅವಶ್ಯಕತೆ ಇದೆಯೋ ಇಲ್ಲವೋ ಅದು ಬೇರೆಯ ವಿಷಯ ಆದರೆ ಪಾತ್ರೆಯು ಒಳಗೆ ಶುದ್ಧವಾಗಿರೋದು ಮುಖ್ಯ. ಬಹಿರಂಗ ಶುದ್ದಿ ಇರದಿದ್ದರೂ ಅಂತರಂಗ ಶುದ್ದಿಯಾದರೇನೇ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ಅಂತರಂಗ ಮತ್ತು ಬಹಿರಂಗ ಎರಡನ್ನೂ ಸಾಧಿಸಲು ಸಾಧನೆ ಬೇಕು. ಸಾಧನೆ ಅನ್ನೋದು ಸುಲಭ ಸಾಧನವಲ್ಲಾ ಅಥವಾ ಸರಳವಾದ ಕೆಲಸವಲ್ಲ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳೋಣ. ಅಂದ ಹಾಗೆ ಸರಳ ಎಂಬುದರಲ್ಲೂ ಒತ್ತಿಲ್ಲ ದೀರ್ಘವಿಲ್ಲ ಹಾಗಂತ ಸರಳವಾದುದು ಸರಳವಲ್ಲ.

ಸರಳ ಬರಲಿಲ್ಲ ಯಾಕೋ ತೊಳೆಯಾಕ ಅಂತ ಕಾಯದಿರಿ. ನಮ್ಮಲ್ಲಿನ ಸರಳಳನ್ನು ಎಚ್ಚರಿಸಿಕೊಳ್ಳೋಣ. ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ.

English summary
Sometimes it has to speak from the brain, sometimes from the heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X