ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಮನಸ್ಸಿಗೆ ಮುದ ನೀಡುವ ಜಾಹೀರಾತು ಎಂಬ ಜಗತ್ತು

|
Google Oneindia Kannada News

ಇದೇನಿದು ಹೀಗೆ? ಒಂದಾನೊಂದು ಕಾಲದಲ್ಲಿ ಟಿವಿ ಕಾರ್ಯಕ್ರಮದ ಮಧ್ಯೆ ಜಾಹೀರಾತು ಅಂತ ಇರುತ್ತಿತ್ತು. ಆ ನಂತರದ ದಿನಗಳಲ್ಲಿ ಹೇಗಪ್ಪಾ ಅಂದ್ರೆ ಜಾಹೀರಾತುಗಳ ಮಧ್ಯೆ ಕಾರ್ಯಕ್ರಮ ಅಂತ ಆಗಿದೆ. ಅಂತಹದರಲ್ಲಿ ಮುದ ನೀಡುವ ಅಂತ ಹೇಳುತ್ತಿರೋದು ನೋಡಿದರೆ ಇದು ಬಹುಶಃ ಮುದ್ರಾರಾಕ್ಷಸನ ಕಾಟ ಇರಬೇಕು. ಮನಸ್ಸನ್ನು ಮುದುರುವ ಜಾಹೀರಾತು ಎಂಬ ಜಗತ್ತು ಇರಬೇಕಿತ್ತು ಸ್ವಲ್ಪ ನೋಡಿ ಅಂದ್ರಾ? ಇಲ್ಲ ಬಿಡಿ, ಹಾಗೇನಿಲ್ಲ ನಾನು ಹೇಳ ಹೊರಟಿರುವ ವಿಷಯಕ್ಕೆ ಈ ಶಿರೋನಾಮೆ ಸೂಕ್ತವಾಗಿದೆ.

ಆದರೂ ಅನುಮಾನ ಇದೆ. ಈಗ ಯೂಟ್ಯೂಬ್‌ನಲ್ಲಿ ಆಡಿಯೋ/ ವಿಡಿಯೋ ಅಂತೆಲ್ಲಾ ಹಾಕಿದಾಗ ಸ್ಕಿಪ್ ಆಡ್ಸ್ ಅಂತ ಒಂದು ಅವಕಾಶ ಕೊಡ್ತಾರೆ ಅಂದ ಮೇಲೆ ಈ ಜಾಹೀರಾತು ಪಾಯಸದಲ್ಲಿ ಕಡ್ಡಿಯಂತೆ ಅಲ್ಲವೇ? ಯಾರಿಗೂ ಸೇರುವುದಿಲ್ಲ ಅಂತ ತಾನೇ? ಅಂದ್ರಾ? ಅನುಮಾನ ಬಿಡಿ, ಮೊದಲು ನನಗೆ ಮಾತನಾಡೋದಕ್ಕೆ ಬಿಡಿ. ನೀವು ಇಷ್ಟೆಲ್ಲಾ ಪ್ರಶ್ನೆ ಕೇಳಿದ್ದಕ್ಕೆ ನಾನೂ ಒಂದು ಪ್ರಶ್ನೆ ಕೇಳ್ತೀನಿ ತೊಗೊಳ್ಳಿ. ನೀವು ಯೂಟ್ಯೂಬ್ ಅಂದ್ರಿ. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಮೇಲೆ ಯೂಟ್ಯೂಬ್ ಓಡಿಸಿ ಆಡಿಯೋ ಅಥವಾ ವಿಡಿಯೋ ನೋಡಿದ ಮೇಲೆ ಅದು yourtube ಅಂತ ಆಗಬೇಕಿತ್ತು ಅಲ್ಲವೇ? ಯೂಟ್ಯೂಬ್ ಅಂತ ಹೇಳಿದರೆ ತಪ್ಪಾದ ಆಂಗ್ಲ ಬಳಕೆ ಆಯಿತು ಅಲ್ಲವೇ? ಯೋಚಿಸಿ ಹೇಳಿ ಆಯ್ತಾ? ಗೊತ್ತಿಲ್ಲಾ ಅಂದ್ರೆ ಆಮೇಲೆ ಹೇಳ್ತೀನಿ. ಈಗ ಸದ್ಯಕ್ಕೆ ಮುಂದೆ ಸಾಗುವಾ.

Srinath Bhalle Column: The World Of Mind-boggling Advertisment

ಚೆನ್ನಾಗಿ rhymes ಹೇಳ್ತಾಳೆ ಗೊತ್ತಾ
ನಿಮ್ಮ ಮನೆಗೆ ಬಂದವರಾರೋ ತಮ್ಮ ಕೂಸಿನ ಬಗ್ಗೆ ಹೇಳಿಕೊಳ್ಳುತ್ತಾ 'ನನ್ನ ಬೇಬಿ ಏನ್ ಚೆನ್ನಾಗಿ rhymes ಹೇಳ್ತಾಳೆ ಗೊತ್ತಾ' ಅಂತ ಮಗುವಿನ ಬಾಯಲ್ಲಿ ಟ್ವಿಂಕಲ್ ಟ್ವಿಂಕಲ್ ಹೇಳಿಸುವ ಯತ್ನ ಮಾಡ್ತಾರೆ. ಮಗು ಟ್ವಿಂಕಲ್ ಹೇಳುತ್ತೋ ಇಲ್ಲವೋ ಆದರೆ ಮನೆಗೆ ಬಂದಿದ್ದ ಆ ಅಂಕಲ್ ಹೆಚ್ಚು ಕಮ್ಮಿ ತಾವೇ ಹಾಡಿರುತ್ತಾರೆ. ಅಲ್ಲಾ ಸ್ವಾಮಿ ಅದೇನೋ ಜಾಹೀರಾತು ಅಂದ್ರಿ ಈಗ ನೋಡಿದ್ರೆ ಅಂಕಲ್- ಟ್ವಿಂಕಲ್ ಅನ್ನುತ್ತಾ ಇದ್ದೀರಲ್ಲಾ, ಏನಿದು? ಅಂದ್ರಾ? ಹೋಗಿಬಂದ ಕಡೆಯಲ್ಲೆಲ್ಲಾ ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದೂ ಒಂದು ಬಗೆಯ ಜಾಹೀರಾತು ಅಲ್ಲವೇ? ತಮ್ಮ ಬಗ್ಗೆ ಹೇಳಿಕೊಳ್ಳಲು ಅವರಿಗೆ ಬಹಳ ಮುದ ಅಲ್ಲವೇ? ದಿನನಿತ್ಯದಲ್ಲಿ ಇಂಥಾ ಎಷ್ಟು ಮಂದಿಯನ್ನು ನೋಡಿರುತ್ತೀರಾ ಹೇಳಿ? ಅರ್ಥಾತ್ ಜಾಹೀರಾತು ಮುದ ನೀಡುವ ಜಗತ್ತು ತಾನೇ?

advertising ಅನ್ನೋದಕ್ಕೆ ಮಾಧ್ಯಮ ಬೇಕು
ಇರಲಿ ಬಿಡಿ, ಅಸಲೀ ವಿಷಯ ಇದಲ್ಲಾ. ಸೂಕ್ಷ್ಮವಾಗಿ ಯಾಕೆ ಬಳಸಿಕೊಂಡೇ ಅಂದ್ರೆ ಜಾಹೀರಾತು ಅಂದ್ರೇನು ಅಂತ ಹೇಳಲು ಅಷ್ಟೇ. ತಮ್ಮ ಕಂಪನಿಯ ಉತ್ಪನ್ನ ಅಥವಾ ಪ್ರಾಡಕ್ಟ್ ಇಷ್ಟು ಸೊಗಸು, ಅಷ್ಟು ಒಳಿತು, ಇದು ಹೀಗೆ, ಅದು ಹಾಗೆ ಅಂತೆಲ್ಲಾ ಮಾರ್ಕೆಟಿಂಗ್ ಮಾಡಲು ಬಳಸುವ ಸಾಧನವೇ ಜಾಹೀರಾತು. ಒಬ್ಬರಿಂದ ಉತ್ಪತ್ತಿಯಾದ ಕೂಸು ಕೂಡಾ ಅವರ ಉತ್ಪನ್ನ ತಾನೇ? ಹೋಗ್ಲಿ ಬಿಡಿ, ಮುಂದೆ ಸಾಗುವ. ಈ advertising ಅನ್ನೋದಕ್ಕೆ ಮಾಧ್ಯಮ ಬೇಕಾಗುತ್ತದೆ. ಒಬ್ಬರು ಮತ್ತೊಬ್ಬರಿಗೆ ಏನಾದರೂ ತಿಳಿಸಬೇಕು ಎಂದರೆ ಇಬ್ಬರ ನಡುವೆ ಮಾಧ್ಯಮ ಬೇಕೇ ಬೇಕಲ್ಲವೇ? ಈ ಮಾಧ್ಯಮ ಯಾವ ಬಗ್ಗೆಯೂ ಆಗಿರಬಹುದು. ಉದಾಹರಣೆಗೆ 'ತುಂಬಾ ಚೆನ್ನಾಗಿದೆ ರೀ ನಿಮ್ಮ ಕೆಂಪು ಮುತ್ತಿನ ಸರ, ಎಲ್ಲಿ ಕೊಂಡಿದ್ದು?' ಅಂತ ಒಂದು ಪ್ರಶ್ನೆ ಎಸೆದರೆ ಮಿಕ್ಕಿದ್ದೆಲ್ಲಾ ಜಾಹೀರಾತೇ ಸರಿ. ಬರೀ ಜಾಹೀರಾತು ಕೂಡ ಅಲ್ಲ, ಕೆಲವೊಮ್ಮೆ ಜಗಜ್ಜಾಹೀರಾತು. ಈಗ ನಿಜವಾಗ್ಲೂ ಅಸಲೀ ವಿಷಯಕ್ಕೆ ಬರ್ತೀನಿ.

ಮನಸ್ಸು ತಂತಾನೇ ಜಾಗೃತವಾಗುತ್ತದೆ
ಮೊನ್ನೆ ಒಂದು ಕಾರಿನ ಜಾಹೀರಾತು ನೋಡುತ್ತಿದ್ದೆ. ಕಾರನ್ನು ಓಡಿಸುವ ತಾಯಿ ಬೀದಿಯಲ್ಲಿ ಸಾಗುವಾಗ, ನಾವೆಲ್ಲರೂ ನೋಡುವಂತೆಯೇ, ಹಲವಾರು ಮಂದಿಯನ್ನು ನೋಡುತ್ತಾಳೆ. ಉದಾಹರಣೆಗೆ ಬೀದಿ ಬದಿಯಲ್ಲಿ ಕೆಲಸ ಮಾಡುವ ಶ್ರಮಜೀವಿ, ಟ್ರಾಫಿಕ್ ಅನ್ನು ಕಂಟ್ರೋಲ್ ಮಾಡುವ ಪೊಲೀಸು, ಶಾಲೆಗೇ ಹೋಗುವ ಹೆಣ್ಣು, ಹೀಗೇ ಹತ್ತು ಹಲವಾರು ಮಂದಿ. ಇದರಲ್ಲೇನು ವಿಶೇಷ ಅಂದಿರಾ? ಆಕೆ ನೋಡುವ ಪ್ರತಿಯೊಬ್ಬರಲ್ಲೂ ಅವಳ ಮಗಳೇ ಕಾಣಿಸುತ್ತಾಳೆ. ಹಾಗಾಗಿ ಅವಳು ಗಾಡಿ ಓಡಿಸುವಾಗ ಅತೀ ಎಚ್ಚರಿಕೆಯಿಂದ ಸಾಗುತ್ತಾಳೆ. ಕೊನೆಯಲ್ಲಿ ಹಾಗೆ ಸಾಗುವಾಗ ಮೊಬೈಲ್ ನೋಡಿಕೊಂಡೇ ಬೀದಿ ಕ್ರಾಸ್ ಮಾಡುವವನ್ನು ನೋಡಿದ ಕೂಡಲೇ ಗಕ್ಕನೆ ಬ್ರೇಕ್ ಒತ್ತುತ್ತಾಳೆ. ಅವನಲ್ಲೂ ಅವಳ ಮಗಳೇ ಕಾಣಿಸುತ್ತಾಳೆ. ಪ್ರತಿಯೊಂದೂ ಹಂತದಲ್ಲೂ ಕಾರು ಆಕೆಗೆ ಸಹಕರಿಸುತ್ತದೆ ಎಂಬುದನ್ನು ಬಿಂಬಿಸಲಾಗಿದೆ. ಈ ಜಾಹೀರಾತನ್ನು ನೋಡಿದಾಗಲೆಲ್ಲಾ ಮನ ಮುದಗೊಳ್ಳುತ್ತದೆ. ನಮ್ಮಲ್ಲಿ ಒಬ್ಬೊಬ್ಬರಲ್ಲೂ ಈ ಭಾವನೆ ಮೂಡಿದಾಗ ಮನಸ್ಸು ತಂತಾನೇ ಜಾಗೃತವಾಗುತ್ತದೆ ಅಲ್ಲವೇ?

ಎಲ್ಲರ ಜೀವನದಲ್ಲೂ ಹೊಸ ಉದಯ
ಒಂದು ಕಾಲದಲ್ಲಿ sunrise ಕಾಫಿಯ ಜಾಹೀರಾತು ಮೂಡಿಬರುತ್ತಿತ್ತು. ಹಗಲಿನಲ್ಲಿ ಅಡುಗೆಯ ಮನೆಯಲ್ಲಿ ಉತ್ತಮವಾದ ಕಾಫಿ ತಯಾರಾಗುತ್ತಿರುತ್ತದೆ. ಕಾಫಿಯ ಹಬೆ ಮತ್ತು ಪಸರಿಸಿದ ಸುವಾಸನೆಯಿಂದಾಗಿ ಗಂಡ ಧಡಧಡ ಮಹಡಿಯಿಂದ ಇಳಿದು ಬರುತ್ತಾನೆ. ಇಬ್ಬರೂ ಕಾಫಿ ಸೇವಿಸಬೇಕು ಎನ್ನುವಷ್ಟರಲ್ಲಿ ಬಾಗಿಲ ಬಳಿ ಸದ್ದಾಗುತ್ತದೆ. ಗಂಡ ಎದ್ದು ಹೋಗಿ ನೋಡಲು ಹೊರಗೆ ಮಳೆ. ಬಾಗಿಲು ತೆರೆದು ನೋಡಲು ಅಲ್ಲೊಂದು ಪುಟ್ಟ ಬಿಳಿ ನಾಯಿಮರಿ. ಅದನ್ನು ಒಳಗೆ ತಂದು, ಕಾಫಿ ಸೇವಿಸುತ್ತಾ ಕೂರುತ್ತಾರೆ. ಕಾಫಿ ಸೇವನೆಯೊಂದಿಗೆ 'ಎಲ್ಲರ ಜೀವನದಲ್ಲೂ ಹೊಸ ಉದಯ' ಎಂಬ ಸಂದೇಶ. ಬೆಳಗಿನ ಕಾಫಿಯಾದೊಡನೆ ನಮ್ಮಲ್ಲೂ ಅದೇನೋ ಹೊಸ ಚೈತನ್ಯ ಮೂಡುತ್ತದೆ ನೋಡಿ. ಹಾಗಾಗಿ ಈ ಜಾಹೀರಾತಿನಂತೆಯೇ ನಮ್ಮ ಮೊದಲ ಕಾಫಿಯೂ ನಿರ್ವಿಘ್ನವಾಗಿ ಅದಾವ ಧಾವಂತವೂ ಇಲ್ಲದೇ ಇರುವಂತೆ ನೋಡಿಕೊಂಡಿದ್ದೇವೆ. ನೀವು?

ಬೀದಿ ಬದಿಯ billboardಗಳೂ ಜಾಹೀರಾತುಗಳೇ
ಜಾಹೀರಾತು ಎಂದರೆ ಟಿವಿಯಲ್ಲಿ ಮೂಡಿಬರುವುದೇ ಆಗಬೇಕಿಲ್ಲ ಅಲ್ಲವೇ? ಭಾರತದಲ್ಲಿ ರಾಷ್ಟ್ರೀಯ ಪ್ರಸಾರ ಶುರುವಾಗಿ ನಲವತ್ತು ವರ್ಷ ಆಯಿತಷ್ಟೇ. ಆ ಮುಂಚೆಯೂ ಜಾಹೀರಾತುಗಳು ಇದ್ದೇ ಇತ್ತಲ್ಲಾ? ಹಾಗಾಗಿ ಈ ಜಾಹೀರಾತು ಜಗತ್ತು ಎಂದರೆ ಕೇವಲ ಟಿವಿ ಅಲ್ಲದೇ ರೇಡಿಯೋ, ವಾರ್ತಾಪತ್ರಿಕೆ, ದೈನಿಕಗಳು, ವಾರಪತ್ರಿಕೆ, ಮಾಸಪತ್ರಿಕೆ, ಗೋಡೆ ಬರಹ, ಗೋಡೆಯ ಮೇಲಿನ ಭಿತ್ತಿಚಿತ್ರ ಎಂದಲ್ಲದೆ ಬೀದಿಯ ಬದಿಗಳಲ್ಲಿನ billboard ಗಳೂ ಜಾಹೀರಾತುಗಳೇ.

ಚಿಕ್ಕಂದಿನಲ್ಲಿ ಅರ್ಥಾತ್ ಪ್ರೈಮರಿಯಲ್ಲಿ ಓದುವಾಗಲೂ ಬಸ್ ಪಯಣ ಮಾಡುತ್ತಿದ್ದ ನನಗೆ, ಎಚ್ಎಎಲ್ ಕಡೆಗೆ ಹೋಗುವಾಗ ಅಲ್ಲೊಂದೆಡೆ ವಿಶೇಷವಾದ billboard ನೋಡುತ್ತಿದ್ದೆ. ವಿಲ್ಸ್ ಸಿಗರೇಟ್ ಜಾಹೀರಾತು ಮೂಡಿಬರುತ್ತಿತ್ತು. ಒಮ್ಮೆ ಸ್ಕ್ರೀನ್ ತುಂಬಾ ಒಂದು ಚಿತ್ರ ಮೂಡಿ ಬಂದರೆ, ಸ್ವಲ್ಪ ಸಮಯದ ನಂತರ ಅದು ರೋಲ್ ಆಗಿ ಮತ್ತೊಂದು ವಿಲ್ಸ್ ಜಾಹೀರಾತು ಮೂಡಿಬರುತ್ತಿತ್ತು. ನನಗದು ಬಹಳ ಆಕರ್ಷಣೀಯವಾಗಿ ಕಂಡಿತ್ತು.

ಒಂದರ್ಥದಲ್ಲಿ ಪದಗಳೊಡನೆ ಆಟವಾಡುವುದು
ಇಂಥಾ billboard ಗಳಲ್ಲೇ ಇಂದಿಗೂ ಉತ್ಕೃಷ್ಟ ಅಂತ ನನಗೆ ಅನ್ನಿಸಿರುವುದೇ Amul ಬೆಣ್ಣೆಯ ಜಾಹೀರಾತು. ಅವರು ಆಯಾ ಕಾಲದ ಮಹತ್ವದ ವಿಷಯವನ್ನೇ ಒಂದು ಸಾಲಿನಲ್ಲಿ ಹೇಳುವ ಪರಿ ನಿಜಕ್ಕೂ ಖುಷಿ ಕೊಡುತ್ತಿತ್ತು. ಒಂದರ್ಥದಲ್ಲಿ ಪದಗಳೊಡನೆ ಆಟವಾಡುವುದನ್ನು ಅಲ್ಲಿಂದ ಕಲಿತೆ ಎಂದರೆ ಅಚ್ಚರಿಯೇನಲ್ಲ. ಒಂದೆರಡು ಉದಾಹರಣೆ ನೀಡುವುದಾದರೆ, ಆಗ ಅಜರುದ್ದೀನ್ ಭಾರತದ ಟೆಸ್ಟ್ ಕ್ರಿಕೆಟ್ ರಂಗಕ್ಕೆ ಕಾಲಿಟ್ಟ ದಿನಗಳು. ಮೊದಲ ಮೂರು ಪಂದ್ಯಗಳಲ್ಲಿ ಮೂರು ಸೆಂಚುರಿ ಬಾರಿಸಿದ ಧೀರ. ಅಮುಲ್‌ನವರು 'A Zhar is born' ಅಂತ billboard ಮೇಲೆ ಹಾಕಿದ್ದರು. ಉಚ್ಛರಿಸಿದಾಗ Czar ಎಂದು ಕೇಳಿಸುವ ಈ ಪದದ ಅರ್ಥ ಚಕ್ರವರ್ತಿ ಅಂತ. ಎಂಥಾ ಜಾಣ್ಮೆ ಅಲ್ಲವೇ?

ತು ಬೀಸ್ ಬಡೀ ಹೇ ಮಸ್ತ್ ಮಸ್ತ್
2020ರ ಹೊಸ್ತಿಲಲ್ಲಿ ಅಮುಲ್‌ನವರು ಹೇಳಿದ್ದು 'ತು ಬೀಸ್ ಬಡೀ ಹೇ ಮಸ್ತ್ ಮಸ್ತ್' ಅಂತ. ಅಮುಲ್ ಎಂಬುದು ಮೇಡ್ ಇನ್ ಇಂಡಿಯಾ ಎಂಬುದನ್ನು ಬಿಂಬಿಸುವ 'Exit the dragon' ಎಂದು ಚೀನಾಕ್ಕೆ ಹೇಳುವಂತೆ ಚಿತ್ರಿಸಿ ಭೇಷ್‌ಗಿರಿ ಪಡೆದಿದ್ದರು. ಮತ್ತೊಮ್ಮೆ "ಕಭಿ ಬ್ರೆಡ್ ಕಭಿ ಬನ್' ಎಂದು ಹೇಳುತ್ತಾ ಕಚುಗುಳಿ ಇಟ್ಟಿದ್ದರು. ಒಟ್ಟಾರೆ ಹೇಳೋದಾದ್ರೆ billboard ಜಾಹೀರಾತನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ಅಮುಲ್ ಅಮೂಲಾಗ್ರವಾಗಿ ಅರಿತಿದ್ದಾರೆ ಎನ್ನಬಹುದು.

ಕೆಲವೊಮ್ಮೆ ಕಚುಗುಳಿ ಇಡುವ ಹಾಸ್ಯ
ಮುದ ನೀಡುವ ಜಾಹೀರಾತಗಳ ಬಗ್ಗೆ ಹೇಳುತ್ತಾ ಅದರಲ್ಲಿರುವ ಸೊಬಗನ್ನು ಮಾತ್ರ ಗುರುತಿಸಿದ್ದೆ, ಆದರೆ ಉತ್ಪನ್ನಗಳ ಬಗ್ಗೆ ಮಾತನಾಡಿಲ್ಲ. ಕೆಲವು ಜಾಹೀರಾತುಗಳಲ್ಲಿ ಸಮಾಜದ ಬಗ್ಗೆ ಎಚ್ಚರಿಕೆ ಕಾಣಬಹುದು, ಕೆಲವೊಮ್ಮೆ ಕಚುಗುಳಿ ಇಡುವ ಹಾಸ್ಯ ಕಾಣಬಹುದು, ಹಲವು ಬಾರಿ ಬಳಕೆಯಾಗಿರುವ ತಂತ್ರಜ್ಞಾನ ಕಾಣಬಹುದು, ಆದರೆ ಅತೀ ಹೆಚ್ಚು ಬಾರಿ ಕಾಣುವುದೇ ಕಿವಿಯ ಮೇಲೆ ಹೂವು ಇಡುವ ಜಾಹೀರಾತುಗಳು. ನಮ್ಮ ಸೋಪನ್ನು ಹಚ್ಚಿಕೊಳ್ಳಿ ಕಾಲೇಜು ಕನ್ಯೆಯಂತೆ ಕಾಣುವಿರಿ, ನಿಮ್ಮ ತಲೆಗೂದಲಿಗೆ ನಮ್ಮ ತೈಲ ಹಚ್ಚಿಕೊಳ್ಳಿ ಹೂತಿರುವ ಗಾಡಿಯನ್ನೂ ಮೆಲ್ಲಕ್ಕೆ ಎತ್ತುವ ತಾಕತ್ತು ಬರುತ್ತದೆ, ನಮ್ಮ bulb ಬಳಸಿ ಕಪ್ಪಗಿರುವವರೂ ಬೆಳ್ಳಗೆ ಕಾಣುತ್ತಾರೆ ಎಂಬೆಲ್ಲಾ ಜಾಹೀರಾತುಗಳು ಹೆಚ್ಚುವರಿ ಹಾಸ್ಯ ಎಂದೇ ನನಗೆ ಅನ್ನಿಸುತ್ತದೆ.

ಅದೇನೇ ಇರಲಿ, ಒಟ್ಟಾರೆ ಹೇಳೋದಾದರೆ ದಿನನಿತ್ಯದಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ರೀತಿ ನಮ್ಮ ಬಗ್ಗೆ ಜಾಹೀರಾತು ನೀಡುತ್ತಲೇ ಇರುತ್ತೇವೆ. ಬಾಹ್ಯ ಸ್ವರೂಪದಲ್ಲಾಗಲಿ, ವಾಕ್ ಪ್ರವಾಹದಿಂದಾಗಲಿ ನಮ್ಮ ಬಗ್ಗೆ ನಾವು ಹೇಳಿಕೊಳ್ಳದೆ, ನಮ್ಮ ನಡತೆ ಮತ್ತು ಕಾರ್ಯಗಳೇ ನಮ್ಮ ಬಗ್ಗೆ ಜಾಹೀರಾತು ನೀಡುವಂತೆ ಇರುವುದಕ್ಕೆ ಶ್ರಮಪಡಬೇಕು, ಅಲ್ಲವೇ? ನೀವೇನಂತೀರಾ?

English summary
Srinath Bhalle Column: There was an advertise in the middle of a TV show. But now the program is in the midst of advertising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X