ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಪ್ರತೀ ಯಶಸ್ವಿ ಗಂಡಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಪ್ರತೀ ಯಶಸ್ವಿ ಗಂಡಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎಂಬುದನ್ನು ಆಂಗ್ಲದಲ್ಲಿ ಹೀಗೆನ್ನುತ್ತಾರೆ Behind the success of every man there is a woman ಈ ಮಾತನ್ನು ಯಾರು ತಾನೇ ಕೇಳಿಲ್ಲ ಅಲ್ಲವೇ? ಈ ಮಾತಿನಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಒಂದೆರಡು ಮಾತುಗಳನ್ನಾಡೋಣ ಬನ್ನಿ. ಸತ್ಯಾಸತ್ಯತೆಗಳು ಎಂದರೆ ಎಲ್ಲ ವಿಷಯಗಳಲ್ಲೂ exceptions ಅಥವಾ ವಿನಾಯಿತಿ ಇರುವಂತೆ ಈ ವಿಷಯದಲ್ಲೂ ಇದೆ ಎಂಬುದು.

ಮೊದಲಿಗೆ ಈ ಗಂಡು ಮತ್ತು ಹೆಂಗಸಿನ ಬಗ್ಗೆ ಒಂದೆರಡು ಮಾತು. WOMAN ಎಂದರೆ ಹೆಂಗಸು, MAN ಎಂದರೆ ಗಂಡಸು. ಸೂಕ್ಷ್ಮವಾಗಿ ನೋಡಿದರೆ ಹೆಣ್ಣಿನಲ್ಲೇ ಗಂಡು ಅಡಕ. ಒಬ್ಬ ಹೆಣ್ಣಿನ ಬೆನ್ನಲ್ಲೇ ಗಂಡು ಇರೋದು. ಆದರೂ ಮಾತು "ಗಂಡಿನ ಹಿಂದೆ ಹೆಣ್ಣು ಇರುತ್ತಾಳೆ' ಎಂಬುದು. ನಿಮ್ಮ ಅನಿಸಿಕೆ ಏನು? ಈಗಾಗಲೇ ಅರಿವಿರುವಂತೆ ಇದೊಂದು ತರಲೆ ಆಯ್ತಾ? ಆದರೆ ಪೂರ್ಣ ತರಲೆ ಅಲ್ಲ. ಇಲ್ಲೊಂದು ಸತ್ಯವೂ ಅಡಗಿದೆ, ಅಸತ್ಯವೂ ಅಡಗಿದೆ.

ಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾ

ಕೆಲವು ವರುಷಗಳ ಹಿಂದೆ ಟಿವಿ ಚಾನಲ್'ನಲ್ಲಿ ಒಬ್ಬರ ಸಂದರ್ಶನ ಬಂದಿತ್ತು. ವಿಷಯ ಇಷ್ಟೇ, ಮನೆಯಾಕೆ ಒಂದು ಕಂಪನಿಯ ದೊಡ್ಡ ಹುದ್ದೆಯಲ್ಲಿದ್ದಾಳೆ. ಗಂಡನಾದವನು HOMEMAKER ಅಂದ್ರೆ house husband. ಇದೊಂದು ವಿಶಿಷ್ಟ ಎಂಬುದೇ ಸುದ್ದಿಯಾಗಿ ಒಂದು ಸಂದರ್ಶನದ ವಸ್ತುವಾಗಿದ್ದು ವಿಶೇಷ. ಒಬ್ಬ ಮನೆಯಾಕೆ ಏನೇನು ಕೆಲಸ ಮಾಡುವಳೋ ಅಷ್ಟೂ ಕೆಲಸವನ್ನು ಆತ ಮಾಡುತ್ತಿದ್ದು. ಚಿಕ್ಕ ಮಕ್ಕಳನ್ನು ಮಧ್ಯಾಹ್ನದ ವೇಳೆಗೆ ಪಾರ್ಕ್'ಗೆ ಕರೆದುಕೊಂಡು ಹೋಗುವುದನ್ನೂ ಮಾಡುವಾಗ ಅಲ್ಲಿ ನೆರೆದಿರುವ housewife ಗಳಿಗೆ ಸೋಜಿಗವಾಗಿದ್ದೇ ಸಂದರ್ಶನದ ವಿಷಯವಾಯಿತು.

Column: Behind The Success Of Every Man There Is A Woman

ಅಡುಗೆ ಕೆಲಸ, ಮಕ್ಕಳ ಲಾಲನೆ ಪಾಲನೆ ಇತ್ಯಾದಿಗಳನ್ನು ಹೆಮ್ಮೆಯಿಂದ ಮಾಡುತ್ತಿದ್ದಾತನಲ್ಲಿ ಯಾವುದೇ ಕೀಳರಿಮೆ ಇರಲಿಲ್ಲ. ಇದೇ ವಿಷಯವನ್ನು ಆತನಲ್ಲಿ ಪ್ರಶ್ನೆಯಾಗಿ ಕೇಳಿದಾಗ, "ನನಗೆ ಕೀಳರಿಮೆ ಇದ್ದರೆ ಈ ಕೀಳರಿಮೆ ಹೆಣ್ಣಿಗೂ ಇರಬೇಕಲ್ಲವೇ?" ಎಂದಿದ್ದ. ಈತನ ಸಂಪೂರ್ಣ ಸಹಕಾರವೇ, ಆಕೆಯ ಸಾಧನೆಯ ಹಾದಿಗೆ ಹೂವಿನ ಹಾಸಿಗೆಯಾಗಿದ್ದು. ಈತನ ಉದಾಹರಣೆಯಿಂದ ತಿಳಿಯಬಹುದಾದುದು ಎಂದರೆ "ಪ್ರತೀ ಯಶಸ್ವಿ ಹೆಣ್ಣಿನ ಹಿಂದೆ ಗಂಡು ಇರುತ್ತಾನೆ' ಎಂದು.

ನವಕೋಟಿನಾರಾಯಣನಾದ ಶ್ರೀನಿವಾಸನ ಪತ್ನಿ ಧಾರಾಳಿ ಆದರೆ ಶ್ರೀನಿವಾಸ ಮಹಾಜಿಪುಣ. ಇವನ ಕಣ್ಣು ತೆರೆಸಲೆಂದೇ ಶ್ರೀಹರಿಯು ಮಾರುವೇಷದಲ್ಲಿ ಬಂದು ಅವನಲ್ಲಿ ಬೇಡುತ್ತಾನೆ. ಅವನು ಏನನ್ನೂ ನೀಡದೆ ಹೋದಾಗ ಆ ದೀನ ಶ್ರೀನಿವಾಸನ ಪತ್ನಿಯ ಬಳಿ ಹೋಗಿ ಬೇಡುತ್ತಾನೆ. ಆಕೆಯೋ ತನ್ನ ಮೂಗುತಿಯನ್ನೇ ನೀಡುತ್ತಾಳೆ.

ದೀನನು ಅದೇ ಮೂಗುತಿಯನ್ನು ತಂದು ಶ್ರೀನಿವಾಸನಲ್ಲಿ ಅಡ ಇಡುತ್ತಾನೆ. ಶ್ರೀನಿವಾಸನಿಗೆ ಆ ಮೂಗುತಿಯನ್ನು ನೋಡಿದ ಕೂಡಲೇ ಅರಿವಾಗುತ್ತದೆ ಅದು ತನ್ನ ಹೆಂಡತಿಯದ್ದೇ ಅಂತ. ಜೊತೆಗೆ ಹೆಂಡತಿಯ ಗುಣವನ್ನೂ ಬಲ್ಲವನಾದುದರಿಂದ ತಕ್ಷಣವೇ ಮನೆಗೆ ಹೋಗಿ ಆಕೆಯನ್ನು ಮೂಗುತಿಯ ಬಗ್ಗೆ ಕೇಳುತ್ತಾನೆ. ಒಳಗೆ ಹೋಗಿ ತಂದುಕೊಡುವೆ ಎಂದು ಒಳ ನಡೆದವಳು, ಬಟ್ಟಲಿನಲ್ಲಿ ವಿಷವನ್ನು ಹಾಕಿಕೊಂಡು ಕುಡಿಯಲು ಹೋದಾಗ ಅದೇ ಬಟ್ಟಲಿನಲ್ಲಿ ಮೂಗುತಿಯನ್ನು ಕಾಣುತ್ತಾಳೆ.

Column: Behind The Success Of Every Man There Is A Woman

ಆ ಮೂಗುತಿಯನ್ನು ತಂದು ಶ್ರೀನಿವಾಸನಿಗೆ ಕೊಟ್ಟು ಎಲ್ಲ ಕಥೆಯನ್ನೂ ಹೇಳುತ್ತಾಳೆ. ಆ ದೀನನನ್ನು ಹುಡುಕುತ್ತಾ ಹೊರಟವನಿಗೆ ದೀನನಾಗಿ ಬಂದಿದ್ದ ಶ್ರೀಹರಿ ಕಣ್ಣಿಗೇ ಬೀಳುವುದಿಲ್ಲ. ಅಲ್ಲಿಗೆ ಅವನಿಗೆ ಸಂಪೂರ್ಣ ಚಿತ್ರಣ ಬಂದು ಇದ್ದುದನ್ನೆಲ್ಲಾ ದಾನ ಮಾಡಿ ಹೆಂಡತಿಯೊಡನೆ ಹೊರಡುತ್ತಾನೆ. "ಆದದ್ದೆಲ್ಲಾ ಒಳಿತೇ ಆಯಿತು' ಎಂದು ರಚಿಸುವಲ್ಲಿ "ಹೆಂಡತಿ ಸಂತತಿ ಸಾವಿರವಾಗಲಿ' ಎಂದು ತನಗೆ ಬೆಂಬಲವಿತ್ತ ಹೆಂಡತಿಯ ಸಂತತಿಯನ್ನೇ ಹಾಡಿಹೊಗಳುತ್ತಾರೆ ಪುರಂದರದಾಸರು. ಕರ್ನಾಟಕ ಸಂಗೀತ ಪಿತಾಮಹ ನಮಗೆ ದೊರೆಯಲು ಆ ಹೆಂಡತಿಯ ಪಾತ್ರ ಬಹಳ ಮುಖ್ಯವಾಗಿದೆ ಎಂಬುದರ ಅರಿವು ಮೂಡುತ್ತದೆ.

ನಮ್ಮ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳನ್ನೇ ಉದಾಹರಣೆ ತೆಗೆದುಕೊಂಡರೆ, ಇನ್ಫೋಸಿಸ್ ಎಂಬ ಸಂಸ್ಥೆ ಹುಟ್ಟುಹಾಕಲು ಅವರ ಪರಿಶ್ರಮ ಎಷ್ಟಿದೆ ಎಂಬುದರ ಅರಿವು ಮೂಡುತ್ತದೆ. ಇಬ್ಬರೂ ಪ್ರತಿಭಾವಂತರೇ ಆದರೆ ಅಲ್ಲಿ ಇಲ್ಲದೇ ಇದ್ದ ಬಹು ಮುಖ್ಯ ಅಂಶ ಎಂದರೆ ಅಹಮಿಕೆ. ಇಬ್ಬರಲ್ಲೂ ಈ ಅಂಶ ಇಲ್ಲದೇ ಇದ್ದು, ಒಬ್ಬರಿಗೊಬ್ಬರು ಸಹಕಾರ ನೀಡಿ ಪೋಷಿಸಿದ ಸಂಸ್ಥೆಯೇ ಇಂದು ವಿಶ್ವವ್ಯಾಪಿಯಾಗಿ ನಿಂತಿದೆ.

ಒಂದೆಡೆ ಸುಧಾಮೂರ್ತಿಯವರೇ ಹೇಳಿರುವಂತೆ, ನಾರಾಯಣ ಮೂರ್ತಿಯವರಿಗೆ ಇವರು ಸಂಪೂರ್ಣವಾಗಿ ಬೆಂಬಲವಾಗಿ ನಿಂತರು ಎಂದು. "ಒಬ್ಬ ಯಶಸ್ವೀ ಗಂಡಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ' ಎನಿಸಿದರೂ, ನಮ್ಮ ಸುಧಾ ಮೂರ್ತಿಯವರ ಸಾಧನೆ ಕಡಿಮೆಯೇ? ಇವರ ಸಮಾಜ ಸುಧಾರಣೆ ಕೆಲಸಗಳಿಗೆಲ್ಲ ನಾರಾಯಣ ಮೂರ್ತಿಯವರ ಬೆಂಬಲವೂ ಇದ್ದೇ ಇದೆ ಎಂದಾಗ "ಒಬ್ಬ ಯಶಸ್ವಿ ಹೆಣ್ಣಿನ ಹಿಂದೆ ಒಬ್ಬ ಗಂಡು ಇರುತ್ತಾನೆ' ಎಂಬುದೂ ಸುಳ್ಳಲ್ಲ.

ತನ್ನ ಗಂಡನ ಏಳಿಗೆಗಾಗಿಯೇ ದುಡಿದ ಹೆಣ್ಣಿಗೂ ಒಂದು ಅವಕಾಶ ಒದಗಿ ಬಂದು ಅವಳೂ ಖ್ಯಾತಿಯ ಶಿಖರವೇರಿ ನಿಂತಾಗ ಅದನ್ನು ಸಹಿಸದ ಗಂಡಿನ ಕಥೆಯನ್ನು "ಅಭಿಮಾನ್' ಮತ್ತು "ದಿಲ್ ವಿಲ್ ಪ್ಯಾರ್ ವ್ಯಾರ್' ಸಿನಿಮಾಗಳಲ್ಲಿ ನೋಡಿದ್ದೇವೆ. ಈ ಚಿತ್ರಗಳನ್ನು ಉಲ್ಲೇಖಿಸಿದ್ದು ಯಾಕೆ ಎಂದರೆ ಕನಿಷ್ಠ ಈ ಎರಡು ಕಥೆಯಲ್ಲಾದರೂ ಒಂದು ಸುಖಾಂತ್ಯವಿದೆ. ಎಷ್ಟೋ ಸಂಸಾರಗಳಲ್ಲಿ ದುಃಖ ನಿತ್ಯೋತ್ಸವ.

ಕೊನೆಯೇ ಇಲ್ಲದ ಅಥವಾ ಸುಖವನ್ನೇ ಕಾಣದೇ ಆ ಹೆಣ್ಣಿನ ಜೀವನ ಮುರುಟಿಯೇ ಹೋಗಬಹುದಾದ ಸನ್ನಿವೇಶಗಳೇ ಹೆಚ್ಚು. ಇದು ಕೇವಲ ಹೆಣ್ಣಿನ ಜೀವನಕ್ಕಷ್ಟೇ ಅಲ್ಲದೇ ಗಂಡಿನ ಜೀವನದಲ್ಲೂ ಆಗುತ್ತದೆ. ಗಂಡನ ಹಣದ ಹಿಂದೆ ಬಿದ್ದ, ದುರಾಸೆಯ ಹೆಂಡತಿ ಆತನ ನೆಮ್ಮದಿಯನ್ನೇ ಹಾಳುಗೆಡವಬಹುದು ಅಲ್ಲವೇ? ಈ ಸನ್ನಿವೇಶದಲ್ಲಿ ಬೆಂಬಲವೇ ಶೂನ್ಯ ಎಂದ ಮೇಲೆ ಅಲ್ಲಿ ಯಶಸ್ಸು ಎಂಬುದು ಕೈಯಲ್ಲಿದ್ದರೂ ಅದನ್ನು ಅನುಭವಿಸುವ ಸಂತೋಷವೇ ಶೂನ್ಯವಾಗಿರುತ್ತದೆ. ಹೀಗಿದ್ದ ಮೇಲೆ ಯಾರೂ ಯಾರ ಹಿಂದೆಯೂ ಇಲ್ಲ.

ಹಲವೊಮ್ಮೆ ಈ ಸಮಾನತೆಯ ಭೂತ ಎಂಬುದು ಮೆಟ್ಟಿಕೊಂಡಾಗ, ಇಬ್ಬರೂ ಒಬ್ಬರಿಗೊಬ್ಬರು ಸೋಲದೇ ಇದ್ದಾಗ, ಅವರೂ ಸೋಲುತ್ತಾರೆ, ಜೀವನವೂ ಸೋಲುತ್ತದೆ. ಒಬ್ಬರು ಮತ್ತೊಬ್ಬರ ಹಿಂದೆ ಎಂಬುದು ಸತ್ತು, ಅಕ್ಕಪಕ್ಕದಲ್ಲಿಯೂ ನಿಲ್ಲಲಾಗದೇ ಯಶಸ್ಸು ಎಂಬುದು ಇಲ್ಲವಾಗಿ ಶಾಂತಿಯು ಮರೀಚಿಕೆ ಆಗುತ್ತದೆ.

ಈಗ "ಪ್ರತೀ ಯಶಸ್ವಿ ಗಂಡಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ' ಎಂಬ ವಿಷಯ ಹೇಗೆ ಬಂತು ಎಂಬುದನ್ನು ಒಂದು ಉದಾಹರಣೆಯ ಸಹಿತ ನೋಡುವ. ಸಾಹಿತ್ಯಲೋಕದಲ್ಲಿ ಕಂಡಿರುವಂತೆ ಪ್ರಖ್ಯಾತ ಸಾಹಿತಿಯರ ಪತ್ನಿ ಮನೆಯಿಂದ ಹೊರಗೇ ಬಂದಿರುವುದಿಲ್ಲ. ಪತಿಯನ್ನು ಕಾಣಲು ಬರುವ ಮಂದಿಗೆ ಕಾಫಿ-ತಿಂಡಿ ಎಂಬೆಲ್ಲಾ ಉಪಚಾರ ಮಾಡುವುದರಲ್ಲೇ ಅರ್ಧ ಸೋತರೆ, ಮಿಕ್ಕ ಅರ್ಧ ಜೀವನ ಗಂಡನ ಆರೈಕೆ. ಆತನಿಗೆ ಅದ್ಯಾವಾಗ ಮೂಡ್ ಬಂದು ಬರೆಯಲು ಕೂರುವರೋ, ಅದ್ಯಾವಾಗ ಏಳುವರೋ, ಅದ್ಯಾವಾಗ ಊಟ ಮಾಡುವರೋ ಹೀಗೆ ಪ್ರತೀ ನಿಮಿಷ ಕಾಯುವಿಕೆಯಲ್ಲೇ ಆಕೆಯ ಇನ್ನರ್ಧ ಜೀವನ ಮುಗಿದಿರುತ್ತದೆ.

ಇಂಥಾ ಸಾಧಕರು, ತಮ್ಮದೇ ಲೋಕದಲ್ಲಿ ಮೇಲೆ ಏರುತ್ತಾ, ಅದಕ್ಕೆ ಆಧಾರವಾಗಿ ಪತ್ನಿ ಬೆನ್ನೆಲುಬಾಗಿ ಇರಬೇಕು ಎಂದು ಬಯಸುತ್ತಾ ಸಾಗುತ್ತಾರೆ. ಇದು ಕೇವಲ ಸಾಹಿತ್ಯಲೋಕದವರಿಗೆ ಮಾತ್ರವಲ್ಲದೇ ಇನ್ನೂ ಹಲವಾರು ಕ್ಷೇತ್ರಕ್ಕೂ ಸಲ್ಲುತ್ತದೆ. ಸಾಧನೆ ಮಾಡುವವರ ಹೆಸರು ಹೊರಗೆ ಎಲ್ಲೆಲ್ಲೂ ಕಂಡರೂ ಅವರ ಯಶಸ್ಸಿನ ಹಿಂದಿರುವ ಆ ಬೆನ್ನುಲುಬು ಗೂಗಲ್'ನಲ್ಲೂ ಉಲ್ಲೇಖವಾಗಿರೋದಿಲ್ಲ.

ಜೀವನದಲ್ಲಿ ಯಶಸ್ಸು ಹೊಂದಿರುವ ನಮ್ಮಲ್ಲೊಬ್ಬರು ಮದುವೆಯೇ ಆಗಿಲ್ಲವಲ್ಲಾ? ಎನ್ನುವವರೂ ಇದ್ದಾರೆ. ನುಡಿಗಟ್ಟಿನಲ್ಲಿ ಗಂಡು-ಹೆಣ್ಣು ಎಂದು ಹೇಳಲಾಗಿದೆಯೇ ಹೊರತು ಗಂಡ-ಹೆಂಡತಿ ಅಂತ ಹೇಳಿಲ್ಲ. ಈ ಗಂಡು-ಹೆಣ್ಣು ಎಂಬುದರ ವ್ಯಾಪ್ತಿ ಬಹಳ ದೊಡ್ಡದು. ತಾಯಿ-ಮಗ, ಅಕ್ಕ-ತಮ್ಮ, ಅಣ್ಣ-ತಂಗಿ ಹೀಗೆ ಏನೆಲ್ಲಾ ಸಂಬಂಧಗಳೂ ಆಗಿರಬಹುದು. ಇಷ್ಟೇ ಯಾಕೆ, ಇಬ್ಬರ ನಡುವೆ ಸ್ನೇಹ ಯಾಕೆ ಇರಬಾರದು. ಸಂಬಂಧವೇ ಆಗಿರಬೇಕೇ?

ನಾವು ನಮ್ಮಿಷ್ಟದ ಯಾವುದೇ ಒಂದು ಕ್ಷೇತ್ರದ ಗೂಡಿನಡಿ ಇರುವಾಗ ಒಬ್ಬರಿಗೊಬ್ಬರನ್ನು ಬೆಂಬಲಿಸಿ ನಿಲ್ಲೋಣ. ಒಬ್ಬರ ಯಶಸ್ಸಿಗೆ ಮತ್ತೊಬ್ಬರು ಕಾರಣರಾಗೋಣ. ಹಾಗೆ ಕಾರಣವಾದಾಗ ಅದರಿಂದ ನಿಮಗೆ ಕೀರ್ತಿ ಬರುತ್ತದೆ ಎಂಬ ನಿರೀಕ್ಷೆ ಬದಿಗಿರಿಸಿ. ನಿಸ್ವಾರ್ಥ ಸೇವೆ ಮುಂದಾಗಲಿ. ಏನಂತೀರಾ?

English summary
The wife is in the big job of a company. her Husband is housekeeper. This was a unique, exclusive news item.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X