• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೃಷ್ಟಿಕೋನ ಬದಲಿಸಿ ನೋಡುವ ಅವಶ್ಯಕತೆ ಇದೆ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಬಹಳ ಹಿಂದೆ ನಾನೊಂದು ವಿಷಯ ಬರೆದಿದ್ದೆ. ಅದನ್ನೇ ನಿಮ್ಮ ಮುಂದೆ ಇಡುತ್ತೇನೆ. ಬಹಳ ವರುಷಗಳ ನಂತರ ಸ್ನೇಹಿತರಿಬ್ಬರ ಭೇಟಿಯಾಗುತ್ತದೆ. ಒಬ್ಬಾತ ಕೇಳುತ್ತಾನೆ "ಏನ್ ಮಾಡ್ಕೊಂಡಿದ್ದಾರೆ ಮಕ್ಕಳು?". ಮಗದೊಬ್ಬ ಹೇಳ್ತಾನೆ "ಒಬ್ಬ ಜಯದೇವ'ದಲ್ಲಿ radiology department ನಲ್ಲಿದ್ದಾನೆ, ಮತ್ತೊಬ್ಬ ಜೈಲಿನಲ್ಲಿದ್ದಾನೆ". ಮೊದಲನೇಯವನು "ಛೇ ಛೇ... ಮನಸ್ಸಿಗೆ ಒಂದು ಸಂತೋಷ ಮತ್ತೊಂದು ದುಃಖ ಅಲ್ವಾ? so ಸಾರೀ..." ಆಗ ಆ ಪಿತೃ ಹೇಳ್ತಾನೆ "ನನ್ನ ಮಾತು ನಿನಗೆ ಹೇಗೆ ಅರ್ಥವಾಯ್ತೋ ಗೊತ್ತಿಲ್ಲಾ, ಆದರೆ ಜಯದೇವಾ'ನಲ್ಲಿ ಕೆಲಸಕ್ಕೆ ಇರೋನು ಅಲ್ಲಿನ facility helper, ವೈದ್ಯ ಅಲ್ಲ... ಇನ್ನು ಜೈಲಿನಲ್ಲಿರುವವನು ಕಳ್ಳ ಅಲ್ಲ, ಅಲ್ಲಿನ ಜೈಲರ್..."

ಇದೇ ಸನ್ನಿವೇಶವನ್ನು ಯಾರ ಮುಂದೆ ಇಟ್ಟರೂ, ಜೈಲು ಅಂದ ತಕ್ಷಣ ಅವನೊಬ್ಬ ಕಳ್ಳ ಅಥವಾ ಕೊಲೆಗಾರ ಅಂತ ಅಂದುಕೊಳ್ಳೋದು, ಬ್ಯಾಂಕಿನಲ್ಲಿ ಕೆಲಸಕ್ಕೆ ಇದ್ದಾರೆ ಅಂದ ಕೂಡಲೇ ಆತ/ಆಕೆ manager/officer ಆಗಿರಬೇಕು ಅಂದುಕೊಳ್ಳೋದು, ಆಸ್ಪತ್ರೆಯಲ್ಲಿ ಕೆಲಸ ಅಂದುಕೂಡಲೇ ಆತನೊಬ್ಬ ವೈದ್ಯ ಅಂದುಕೊಳ್ಳೋದು perception ಅಥವಾ ಗ್ರಹಿಕೆ. ಈ ಗ್ರಹಿಕೆಯನ್ನು ಬದಿಗಿರಿಸಿ ಬೇರೊಂದು ದೃಷ್ಟಿಕೋನದಿಂದ ಆಲೋಚಿಸಿ ಅರ್ಥೈಸಿಕೊಳ್ಳೋದು ಅಥವಾ ಪ್ರಶ್ನಿಸೋದು ಮಾಡಿದಾಗ ಅಲ್ಲೊಂದು ಬೇರೆ ಲೋಕವೇ ತೆರೆದುಕೊಳ್ಳಬಹುದು.

ಸತ್ಯಾಗ್ರಹದ ನಿಜವಾದ ಅರ್ಥ ಏನೆಂದು ನಿಮಗೆ ಗೊತ್ತಾ?

ಇದೇ ಧಾಟಿಯಲ್ಲೇ ಅಮಿತಾಬ್ ಅವರ ಪಿಂಕ್ ಸಿನಿಮಾದ ವಿಷಯ ನೆನಪಿಸಿಕೊಂಡರೆ ಅಲ್ಲಿ ಹೇಳ್ತಾರೆ "ಒಂದು ಹೆಣ್ಣು ಬಾರಿನಲ್ಲಿ ಕೂತು ಕುಡೀತಿದ್ದಾಳೆ ಅಂದ್ರೆ ಆಕೆ ಆಹ್ವಾನ ನೀಡುತ್ತಿದ್ದಾಳೆ ಅಂತಲ್ಲ" ಆಹ್ವಾನ ನೀಡುತ್ತಿದ್ದಾಳೆ ಅಂದುಕೊಳ್ಳೋದು ಗ್ರಹಿಕೆ... ಅವಳತ್ತ ಏನೋ ಉದ್ದೇಶ ಇಟ್ಟುಕೊಂಡು ಮುಂದುವರೆದಾಗ ಆಕೆಯಿಂದ ನಕಾರ ಬಂದಾಗ, ಅಲ್ಲಿ ಪ್ರತಿಷ್ಠೆಗೆ ಪೆಟ್ಟುಬಿದ್ದಂತಾಗಿ ವಿಕೋಪಕ್ಕೂ ಹೋಗಬಹುದು. ಇಲ್ಲಿ ತಪ್ಪು ಯಾರದ್ದು? "ಗ್ರಹಿಕೆ"ಯನ್ನು ನಿಯಂತ್ರಿಸಿಕೊಂಡು ದೃಷ್ಟಿಕೋನ ಬದಲಿಸಿಕೊಂಡು ಮುಂದುವರೆದಾಗ ಪ್ರೀತಿಯೇ ಹುಟ್ಟಬಹುದು, ಯಾರಿಗೆ ಗೊತ್ತು?

ಮನೆಮನೆಗಳಲ್ಲಿ ದಿನನಿತ್ಯದಲ್ಲಿ ನಡೆಯುವ ಮಾನಸಿಕ ಯುದ್ಧ ಅಥವಾ ಶೀತಲ ಯುದ್ಧಗಳಿಗೂ ಇದೆ perception ಮೂಲ. ಅಸಲಿ ವಿಷಯ ಏನಿದೆಯೋ ಆಲೋಚಿಸುವ ಗೋಜಿಗೂ ಹೋಗದೇ ಮನಸ್ಸಿಗೆ ಬಂದಿದ್ದೇ ಸರಿ ಎಂದು ನಂಬಿಕೊಂಡು ಮನಸ್ಸು ಮತ್ತು ಸಂಬಂಧಗಳನ್ನು ಹಾಳುಮಾಡಿಕೊಳ್ಳೋದು. ಒಬ್ಬರ ಕಳೆದು ಹೋದ ಆಭರಣ ಮನೆಯಲ್ಲಿರುವ ಮತ್ತೊಬ್ಬರ ಕೈಯಲ್ಲಿ ನೋಡಿದ ತಕ್ಷಣ ಅವರೇ ಕಳ್ಳರು ಎಂದು ತೀರ್ಮಾನಿಸಿ ಜಗಳ ಕಾಯೋದು ಸಾಮಾನ್ಯ ದೃಶ್ಯ. ಬದಲಿಗೆ ಇದನ್ನೇ ಮತ್ತೊಂದು ದೃಷ್ಟಿಕೋನದಿಂದ ನೋಡುವ ಮನೋಭಾವ ಇದ್ದರೆ ಬಹುಶಃ ವಿಷಯಗಳು ಅಲ್ಲೇ ಇತ್ಯರ್ಥವಾಗುತ್ತೋ ಏನೋ!

ದಿನವೊಂದರಲ್ಲಿ ನಾವು ಏನೇನೆಲ್ಲಾ ಕಟ್ಟುತ್ತೇವೆ ಅಲ್ಲವಾ?

ಈ ಸಣ್ಣ ಜೋಕು ನಿಮಗೆಲ್ಲ ಗೊತ್ತಿರಬಹುದು. ಶಾಲೆಯಲ್ಲಿ ಟೀಚರ್ ಒಬ್ಬ ಹುಡುಗನಿಗೆ ಲೆಕ್ಕದ ಪ್ರಶ್ನೆ ಕೇಳುತ್ತಾರೆ "ಮೊದಲಿಗೆ ನಿನಗೆ ನಾಲ್ಕು ಆಪಲ್ ಕೊಡ್ತೀನಿ. ಆಮೇಲೆ ಮೂರು ಆಪಲ್ ಕೊಡ್ತೀನಿ. ನಿನ್ನಲ್ಲಿ ಒಟ್ಟು ಎಷ್ಟು ಆಪಲ್ ಗಳು ಇವೆ?" ವಿದ್ಯಾರ್ಥಿ ಹೇಳ್ತಾನೆ "ಎಂಟು" ಟೀಚರ್ 'ಗ್ರಹಿಕೆ'ಯಲ್ಲಿ ಈ ಹುಡುಗ ದಡ್ಡ ಅಂತ. ಆದರೆ ಹುಡುಗನ ಲೆಕ್ಕ ಸರಿ, ಏಕೆಂದರೆ ಅವನ lunch bagನಲ್ಲಿ ಆಗಲೇ ಅಮ್ಮ ಕೊಟ್ಟ ಒಂದು ಆಪಲ್ ಇತ್ತು. ಅವನು ಅದನ್ನೂ ಸೇರಿಸಿ ಎಂಟು ಅಂದಿದ್ದ. ತಪ್ಪು ಉತ್ತರ ನೀಡಿದ್ದಕ್ಕೆ ಪೆಟ್ಟು ಬಿತ್ತು. ಟೀಚರ್ ತಮ್ಮ ಗ್ರಹಿಕೆಯನ್ನು ಬದಿಗಿರಿಸಿ ಬೇರೆಯೇ ದೃಷ್ಟಿಕೋನ ಇರಬಹುದು ಎಂದು ಆಲೋಚಿಸಿ "ಎಂಟು ಅನ್ನೋ ಉತ್ತರ ಹೇಗೆ?" ಅನ್ನೋ ಪ್ರಶ್ನೆ ಇಟ್ಟಿದ್ದರೆ ಹುಡುಗನಿಗೆ ಪೆಟ್ಟು ಬೆಳೆಯುತ್ತಿರಲಿಲ್ಲ.

ಒಬ್ಬ ಚಿತ್ರಕಾರ ತನ್ನ ದೃಷ್ಟಿಕೋನದಿಂದ, ತನ್ನ ಅನುಭವದಿಂದ, ತಾನು ಕಂಡಿದ್ದನ್ನು ಅಥವಾ ಕಾಣಬೇಕು ಎಂಬುದನ್ನು ಆ ಒಂದು ಚಿತ್ರಕಲೆಯಲ್ಲಿ ಅಳವಡಿಸಿರುತ್ತಾನೆ. ಆದರೆ, ಆತನ ದೃಷ್ಟಿಕೋನ ಮತ್ತೊಬ್ಬನದ್ದೂ ಆಗಿರಬೇಕು ಅಂತೇನಿಲ್ಲ. ಆತನ ಚಿತ್ರವನ್ನು ನೋಡುವ ಒಬ್ಬ ಕಲಾವಿದ, ಮತ್ತೊಬ್ಬ ಚಿತ್ರಕಾರ ಅಥವಾ ಒಬ್ಬ ಶ್ರೀಸಾಮಾನ್ಯ ತಾನುದಯಿಸಿ ಕಂಡ ಜಗತ್ತಿನ ದೃಷ್ಟಿಕೋನದಿಂದ ಆ ಚಿತ್ರವನ್ನು ಕಂಡು ಆನಂದಿಸುತ್ತಾನೆ. ತನ್ನದೇ ಅನುಭವವನ್ನು ಅದಕ್ಕೆ ಸೇರಿಸಿ ಅರ್ಥೈಸಿಕೊಳ್ಳುತ್ತಾನೆ. ಚಿತ್ರಕಲೆಯನ್ನು ಅರ್ಥೈಸಿಕೊಳ್ಳುವ ವಿಷಯದಲ್ಲಿ ಮತ್ತೊಂದು ವಿಷಯವೂ ಅಡಕವಾಗುತ್ತದೆ. ಉದಾಹರಣೆಗೆ ಮೊನಾಲಿಸಾ ಚಿತ್ರ ಎಂದುಕೊಳ್ಳೋಣ. ಈಗಾಗಾಲೇ ಅತ್ಯಂತ ಜಗತ್ಪ್ರಸಿದ್ಧವಾಗಿರುವ ಆ ಚಿತ್ರವನ್ನು ನೋಡುವಾಗ "ಚೆನ್ನಾಗಿದೆ, ಅದ್ಭುತವಾಗಿದೆ" ಅಂತೆಲ್ಲಾ ಹೇಳಲೇಬೇಕು. ಇಲ್ಲಿ ನಮ್ಮ perception ಗಿಂತ ಮುಂಚೆ ಜಗತ್ತಿನ ಗ್ರಹಿಕೆ ಮುಂಚಿತವಾಗಿ ನಿಂತು ನಮ್ಮ ಗ್ರಹಿಕೆಗೆ ಬೆಲೆಯೇ ಇಲ್ಲದಂತೆ ಆಗುತ್ತದೆ. ಇಂಥಾ ಸನ್ನಿವೇಶದಲ್ಲಿ ವಿಭಿನ್ನ ದೃಷ್ಟಿಕೋನದಿಂದ ನೋಡಿ ಹೇಳೋದಕ್ಕೆ ಧೈರ್ಯಬೇಕು. ಯಾವ ಪೊಲೀಸ್ ಕೇಸ್ ಆಗುತ್ತೆ ಅಂತ ಹೇಳ್ತಾ ಇಲ್ಲ ಬದಲಿಗೆ ಜಗತ್ತು ನಿಮ್ಮ ಕಡೆ ನೋಡಿ 'ಪಾಪ ಈತನಿಗೆ ಏನೋ ಪ್ರಾಬ್ಲಮ್ ಇದೆ" ಅಂತಲೇ ನೋಡೋದು.

ನಾಟಕ ಮುಗಿದ ಮೇಲೆ ಕಳಚಿ ಇಡುವ ಪರಿ; ಎಲ್ಲದರಲ್ಲೂ ಶಿಸ್ತಿರಲಿ

ಚಿತ್ರಕಲೆಯಲ್ಲಿರುವಂತೆ ಸಾಹಿತ್ಯ ಕ್ಷೇತ್ರದಲ್ಲಿ ದೃಷ್ಟಿಕೋನಕ್ಕೆ ಒಂದು ವಿಶಿಷ್ಟ ಸ್ಥಾನವಿದೆ ಎನ್ನಬಹುದು. ಒಬ್ಬ ಕವಿ ತನ್ನ ಅನುಭವಗಳಿಗೆ, ಮನದಾಳದ ಅನಿಸಿಕೆ ಅಥವಾ ಬಯಕೆಗಳಿಗೆ ಅಕ್ಷರರೂಪ ಕೊಟ್ಟಿರುತ್ತಾನೆ. ಆತ ಅನುಭವಿಸಿ ಬರೆದದ್ದನ್ನು ಮತ್ತೊಬ್ಬರೂ ಅನುಭವಿಸಿ ಅರ್ಥೈಸಿಕೊಳ್ಳೋದು ಕಷ್ಟ. "ಇಳಿದು ಬಾ ತಾಯಿ ಇಳಿದು..." ಎಂದ ಬೇಂದ್ರೆ ಅಜ್ಜರ ಕವನದ 'ಅಂಬಿಕಾತನಯನತ್ತೆ ಬಾ' ಅಂತಿದೆ. ನನಗಂತೂ ಬಹಳ ವರ್ಷಗಳ ಕಾಲ ಇದು ಅರ್ಥವೇ ಆಗಿರಲಿಲ್ಲ. 'ಅಂಬಿಕಾತನಯನತ್ತ ಬಾ' ಎಂದೇ ಅಂದುಕೊಂಡಿದ್ದೆ. ಎಲ್ಲೋ ಒಂದು ಕಡೆ ಇದರ ಒಂದು ಚರ್ಚೆ ಓದಿದೆ. ಬೇಂದ್ರೆ ಅಜ್ಜರ ಅತ್ತೆಯ ಹೆಸರು "ಗಂಗಮ್ಮ" ಅಂತ ಅರ್ಥವಾಯ್ತು. ಈ ವಿಷಯದಲ್ಲೇನಾದರೂ ತಪ್ಪಿದ್ದಲ್ಲಿ ಬಹುಶಃ ಚರ್ಚೆ ಮಾಡಿದವರಿಗೂ ಸರಿಯಾದ ಮಾಹಿತಿ ಇರಲಿಲ್ಲ ಎಂದುಕೊಳ್ಳುತ್ತೇನೆ.

ಕಥೆಯನ್ನೇ ತೆಗೆದುಕೊಂಡರೆ 'ನಾಗರಹಾವು' ಚಿತ್ರ ಬಹಳ ಸೊಗಸಾಗಿತ್ತು ಎಂದಿದ್ದರು ಅಂದಿನ ವಿಮರ್ಶಕರು. ಆದರೆ ಚಿತ್ರ ನೋಡಿದ ಮೂಲಕಥೆಗಾರರಾದ ತರಾಸು ಅವರು 'ಇದು ನಾಗರಹಾವಲ್ಲ ಕೆರೆಹಾವು' ಎಂದರು. ಕಥೆಗಾರರು ಯಾವ ದೃಷ್ಟಿಯಿಂದ ಒಬ್ಬ ರಾಮಾಚಾರಿಯನ್ನು ಸೃಷ್ಟಿಸಿದ್ದರೋ ಆ ರಾಮಾಚಾರಿಯನ್ನು ಪುಟ್ಟಣ್ಣಕಣಗಾಲರು ಕೆತ್ತಿಡಲಿಲ್ಲ ಎಂಬುದೇ ಅವರ ಇಂಗಿತ. ಕಥೆಯೊಂದೇ, ಆದರೆ ದೃಷ್ಟಿಕೋನ ಬೇರೆ. ಒಬ್ಬೊಬ್ಬರದ್ದು ಒಂದೊಂದು ದೃಷ್ಟಿಕೋನ.

ಅರ್ಧ ತುಂಬಿದ ಗ್ಲಾಸ್ ಕಂಡಾಗ ಆಶಾವಾದಿಯ ದೃಷ್ಟಿಕೋನ ಹೇಳೋದು 'ಇನ್ನೂ ಅರ್ಧ ಗ್ಲಾಸ್ ಇದೆ' ಅಂತ. ಅದೇ ನಿರಾಶಾವಾದಿಯ ದೃಷ್ಟಿಕೋನವು "ಅಯ್ಯೋ ಆಗಲೇ ಅರ್ಧ ಖಾಲಿ ಆಗಿದೆ" ಅಂತ.

ಸಿನಿಮಾ ಜಗತ್ತು ಒಂದು ಮಾಯಾಜಾಲವೇ ಸರಿ. studioದಲ್ಲಿ ಒಂದು ಗ್ರೀನ್ ಸ್ಕ್ರೀನ್ ಮುಂದೆ ಅಭಿನಯಿಸುವುದನ್ನು ಸಿನಿಮಾದಲ್ಲಿ ನೋಡಿದಾಗ ಅದ್ಯಾವುದೋ ಬೆಟ್ಟದ ತುದಿಯ ಬಂಡೆಯ ಮೇಲೆ ಮೇಲಿನ scene ಆಗಿರುತ್ತದೆ. ಮೊದಲಿಗೆ ಗ್ರೀನ್ ಸ್ಕ್ರೀನ್ ಮುಂದೆ ಚಿತ್ರೀಕರಣ ನಡೆಸಿ ಆಮೇಲೆ ಅದಕ್ಕೆ ಅದಕ್ಕೆ ಬೇಕಿರುವ scenary ಓಡಿಸಿ ಮಿಕ್ಸ್ ಮಾಡಿ ಕೊನೆಗೆ ಅಭಿನಯಿಸಿದವರೇ ಆ ದೃಶ್ಯ ಕಂಡಾಗ ಇದನ್ನೇನಾ ನಾವು ಅಭಿನಯಿಸಿದ್ದು ಎನ್ನುವಷ್ಟು ಬದಲಾಗಿರುತ್ತದೆ. ಒಂದು ಸಾಧಾರಣ ಸನ್ನಿವೇಶ ನೋಡುವಾಗಿನ ನೀರಸತೆಯು ಆಮೇಲೆ ಜೋಡಿಸುವ ಇತರೆ ಸನ್ನಿವೇಶಗಳು ಮತ್ತು ಸಂಗೀತಗಳ ಜೊತೆ ಬೆಳ್ಳಿತೆರೆಯ ಮೇಲೆ ನೋಡುವಾಗ ಪ್ರೇಕ್ಷಕನ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಅದರಂತೆಯೇ ಒಬ್ಬ ಸಾಮಾನ್ಯ ನಟ ಅಭಿನಯಿಸುವ ದೃಶ್ಯವನ್ನೇ ನಮ್ಮ ನೆಚ್ಚಿನ ನಟ ಅಭಿನಯಿಸಿದಾಗ ನಾವು ಆ ದೃಶ್ಯ ನೋಡುವ ದೃಷ್ಟಿಕೋನ ಬೇರೆ. ನೋಡುವ ದೃಷ್ಟಿ ಒಂದೇ ಆದರೂ ದೃಷ್ಟಿಯ ಜೊತೆಗೆ ಸೇರುವ ಮಸಾಲೆ ನೋಡುವ ದೃಶ್ಯಕ್ಕೆ ಬೇರೆಯೇ ಅರ್ಥ ನೀಡಿರುತ್ತದೆ.

ಹೊರನೋಟಕ್ಕೆ ಕಾಣೋದೆಲ್ಲಾ ಮಿಥ್ಯ, ಒಳಹೊಕ್ಕು ನೋಡಿದಾಗ ಎಲ್ಲವೂ ಸತ್ಯ ಅನ್ನೋದು ಸರ್ವವೇದ್ಯ... ಜೂಲು ಬಟ್ಟೆ ಧರಿಸಿರುವವರು ಕೆಟ್ಟವರು, ಉತ್ತಮ ಬಟ್ಟೆಯನ್ನು ಧರಿಸಿರುವವರು ಒಳ್ಳೆಯವರು ಅಂದುಕೊಳ್ಳೋದು perception. ಅಂದಿಗೂ ಇಂದಿಗೂ ಸತ್ಯ. ಕಾವಿ ಉಟ್ಟರೆಂದರೆ ಸಾಕು, ಆತನೊಬ್ಬ ಧರ್ಮಗುರು ಆತನನ್ನು ಅನುಸರಿಸಿದರೆ ಮೋಕ್ಷ ಕಟ್ಟಿಟ್ಟಬುತ್ತಿ ಅನ್ನೋ perception ಇಂದಿಗೂ ಹಚ್ಚ ಹಸಿರು. ಇಂಥ ಸನಿವೇಶಗಳಲ್ಲಿ ಬಗೆದು ನೋಡಲು ಹೋಗದಿದ್ದರೂ ಕೊಂಚ ದೃಷ್ಟಿಕೋನ ಬದಲಿಸಿ ನೋಡಿದಾಗ ಆಯಾ ವಿಷಯದ ಅರಿವಾಗುತ್ತದೆ. ವಿಶ್ಲೇಷಣೆ ಮಾಡಿ ಜಗತ್ತಿಗೆ ಡಂಗೂರ ಬಾರಿಸಬೇಕು ಅಂತೇನೂ ಹೇಳುತ್ತಿಲ್ಲ, ಬದಲಿಗೆ ಆ ಗ್ರಹಿಕೆಯ ಜಾಲಕ್ಕೆ ಬೀಳುವ ಮುನ್ನ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಾದರೆ ಈ ವಿಭಿನ್ನ ದೃಷ್ಟಿಕೋನ ಅತ್ಯಗತ್ಯ.

ಪರಮಾತ್ಮ ಎಲ್ಲೆಲ್ಲೂ ಇರುತ್ತಾನೆ ಅನ್ನೋದನ್ನು ನಾವು ಕಂಡು ಕೇಳಿ ಬೆಳೆದಿದ್ದೇವೆ. ವ್ಯಾವಹಾರಿಕವಾಗಿ ಗುಡಿಯಲ್ಲಿ ಕೂತು ನೋಡಿದರೆ ಕಾಣೋದು ಕಲ್ಲು. ವ್ಯವಹಾರದ ದೃಷ್ಟಿ ಬದಲಿಸಿ ನೋಡಿದಾಗ ಕಾಣೋದು ಶಿಲೆ. ಇಹವನ್ನೇ ಮರೆತು ಆ ಮೂರ್ತಿಯನ್ನೇ ನೋಡುತ್ತಿದ್ದರೆ ಆಗ ಕಾಣೋದು ಸ್ವರೂಪ. ಆ ದೈವವನ್ನೇ ನಮ್ಮ ಹೃದಯದಲ್ಲಿ ಮೂಡಿಸಿಕೊಂಡು ನೋಡಿದಾಗ ಭಗವಂತ ಕಾಣುತ್ತಾನೆ. ಅದೇ ಭಾವನೆಯಲ್ಲೇ ನಮ್ಮನ್ನು ತೊಡಗಿಸಿಕೊಂಡು ಜಗತ್ತನ್ನು ನೋಡಿದಾಗ ಆ ಭಗವಂತ ಎಲ್ಲೆಲ್ಲೂ ಕಾಣುತ್ತಾನೆ.

ಪರಮಾತ್ಮನಂತೆ ಎಲ್ಲೆಲ್ಲೂ ಇರುವ ಮತ್ತೊಂದು ಎಂದರೆ 'ಸಮಸ್ಯೆ'. ದಿನನಿತ್ಯದಲ್ಲಿ ಸಮಸ್ಯೆ ಅನ್ನೋದು ನಮ್ಮ ನೆರಳಾಗಿಯೇ ಇರುತ್ತದೆ. ಪ್ರತೀ ಬಾರಿ ಸಮಸ್ಯೆ ಎದುರಾದಾಗ reactive ಆಗಿ ಸಿಡಿದೇಳುವ ಬದಲಿಗೆ ಅದನ್ನೇ ಸವಾಲಾಗಿ ಸ್ವೀಕರಿಸಿ ಎದುರಿಸುವುದೇ 'ವಿಭಿನ್ನ ದೃಷ್ಟಿಕೋನ'.

ಹೊರಗಣ್ಣ ದೃಷ್ಟಿಕೋನದಿಂದ ನೋಡೋಣ, ಒಳಗಣ್ಣ ದೃಷ್ಟಿಕೋನ ಬಳಸಿ ಅರ್ಥೈಸಿಕೊಳ್ಳೋಣ. ಏನಂತೀರಿ?

English summary
Putting aside our common perception and thinking from a different perspective can open up a different world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X