ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲ್ಲೆ ಭಲ್ಲೆ! ಶ್ರೀನಾಥ್ ಭಲ್ಲೆಯವರ 'ನವರಸಾಯನ' ಅಂಕಣದ ನೂರನೆಯ ಬರಹ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಒಂದು ಅಂಕಣ ಬರೆಯಬೇಕಾದರೆ ಸಾಕಷ್ಟು ಶ್ರದ್ಧೆ, ಪ್ರತಿವಾರ ತಪ್ಪದೆ ಬರೆಯುವಂಥ ಶಿಸ್ತು ಮತ್ತು ಸಿದ್ಧತೆಯೂ ಇರಬೇಕಾಗುತ್ತದೆ. ಅದರಲ್ಲಿಯೂ, ನಮ್ಮೆಲ್ಲ ಕೆಲಸಗಳನ್ನು ಬದಿಗಿಟ್ಟು ಆಗಾಗ ನಗಿಸುವ, ಅಲ್ಲಲ್ಲಿ ಸಮೃದ್ಧ ಮಾಹಿತಿ ಹಂತಿಕೊಳ್ಳುವ, ಅನುಭವದ ಕಥಾನಕವನ್ನು ಬಡಿಸುವ ಕೆಲಸವನ್ನು ಅಮೆರಿಕದ ರಿಚ್ಮಂಡ್ ನಲ್ಲಿ ನೆಲೆಸಿರುವ ಶ್ರೀನಾಥ್ ಭಲ್ಲೆ ಅವರು ಅಚ್ಚುಕಟ್ಟಾಗಿ, ತಪ್ಪದೆ ಮಾಡಿಕೊಂಡು ಬಂದಿದ್ದಾರೆ. ನವಿರಾದ ಹಾಸ್ಯವನ್ನು ಬೆರೆಸಿ ನವರಸಾಯನವನ್ನು ಬಡಿಸುವುದು ಭಲ್ಲೆ ಅವರಿಗೆ ಲೀಲಾಜಾಲ. ಇದೀಗ ಅವರ ಅಂಕಣ ಬರಹಗಳ ಸಂಖ್ಯೆ ಶತಕ ಮುಟ್ಟಿದೆ. ಭಲ್ಲೆ ಅವರಿಗೆ ಶುಭಾಶಯಗಳು ಮತ್ತು ಪ್ರೋತ್ಸಾಹಿಸುತ್ತಿರುವ ಓದುಗರಿಗೂ ಅಭಿನಂದನೆಗಳು - ಸಂಪಾದಕ

***
ನೂರು... ಈ ಪದ ಕೇಳಲೇ ಮೈ ಝಂ ಎನ್ನುತ್ತದೆ. ಇನ್ನು ಸಂಖ್ಯೆ ನೋಡಿದಾಗ ಇನ್ನೂ ಆನಂದ. ಇದೊಂದು ದೊಡ್ಡ ಮೈಲಿಗಲ್ಲು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ಸಂಖ್ಯೆಯನ್ನು ನಮ್ಮ ಜೀವನದಲ್ಲಿ ಎಲ್ಲೆಲ್ಲಿ ಕಾಣಬಹುದು ಅಂತ ನೋಡುವ ಬನ್ನಿ...

ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ

ನೂರು ಅನ್ನೋದನ್ನ ಎಲ್ಲಾ ವಿಷಯದಲ್ಲೂ ಮೈಲಿಗಲ್ಲು ಅನ್ನಲು ಆಗೋದಿಲ್ಲ. ಯಾರ ಬಗ್ಗೆಯೋ ಮಾತನಾಡುವಾಗ "ಅವರಿಗೋ ನೂರೆಂಟು ತಾಪತ್ರಯ" ಅಂದಾಗ, ಅಥವಾ "ಅವರಿಗೆ ಬಿಡಿ ನೂರಾರು ಖಾಯಿಲೆಗಳು" ಎನ್ನುವಾಗಲೆಲ್ಲಾ ಈ ನೂರು ಖಿನ್ನತೆ ಮೂಡಿಸಬಹುದು. ಅದೇ 'ನೂರು' ಅನ್ನೋದು ಕ್ರಿಕೆಟ್'ನಲ್ಲಿ ಒಬ್ಬ ನೂರು ವಿಕೆಟ್ ಗಳಿಸಿದ, ನೂರು ರನ್ ಗಳಿಸಿದ, ಅಥವಾ ಒಂದು ಸಿನಿಮಾ ನೂರು ದಿನ ಓಡಿತು ಎಂದಾಗ ಅದು ಸಾಧನೆಯಾಗುತ್ತದೆ.

Century celebration for Navarasayana Kannada column

ನೂರು ಅನ್ನೋದು ಋಣಾತ್ಮಕವೂ ಆಗಬಹುದು ಅಥವಾ ಧನಾತ್ಮಕವಾದ ಭಾವನೆಯನ್ನೂ ಮೂಡಿಸಬಹುದು ಎಂದಾದರೆ ಬದುಕಿರುವ ಒಬ್ಬರ ನೂರನೆಯ ವರುಷದ ಹುಟ್ಟಿದ ಹಬ್ಬ ಇಂದು ಅನ್ನುವ ವಿಷಯ ಪರಿಸ್ಥಿತಿಯ ಮೇಲೆ ಅವಲಂಬಿತ.

ನೂರಕ್ಕೂ ಹೆಚ್ಚು ವರ್ಷ ಬಾಳಿ ಬದುಕಿ, ಇಂದಿಗೂ ಜನರ ಮನಗಳಲ್ಲಿ ಮನೆಮಾಡಿರುವ ಹಿರಿಯ ಚೇತನಗಳು ಎಂದರೆ ನಮ್ಮ ಸರ್ ಎಂ.ವಿಶ್ವೇಶ್ವರಯ್ಯ, ಶ್ರೀ ಶಿವಕುಮಾರ ಸ್ವಾಮೀಜಿಗಳೇ ಮುಂತಾದವರು. ಇವರುಗಳು ನೂರು ವರ್ಷಗಳು ಬದುಕಿದ್ದರೂ ಸಾಧನೆಗಳು ಮಾತ್ರ ಸಾವಿರಾರು ವರುಷಗಳಲ್ಲೂ ಸಾಧಿಸಲಾಗದಷ್ಟು ಎಂದರೆ ಅತಿಶಯೋಕ್ತಿಯಲ್ಲಾ ಅಲ್ಲವೇ?

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ತೊಂಬತ್ತೊಂಬತ್ತು (99) ವರುಷದ ಹುಟ್ಟಿದ ಹಬ್ಬದ ಸಮಾರಂಭಕ್ಕೆ ಒಬ್ಬ ಶ್ರೀಮಂತ ಪ್ರೆಸ್'ನವರನ್ನೂ ಕರೆಸಿದ್ದನಂತೆ. ಕಾರ್ಯಕ್ರಮ ಮುಗಿದು ತೆರಳುವ ಮುನ್ನ ಪ್ರೆಸ್'ನ ಒಬ್ಬಾತ ಸಿರಿವಂತ ಅಜ್ಜನ ಬಳಿ ಹೋಗಿ 'ನಿಮ್ಮನ್ನು ಮುಂದಿನ ವರ್ಷವೂ interview ಮಾಡುವ ಸೌಭಾಗ್ಯ ನನಗೆ ಸಿಗಲಿ' ಅಂತ ಮಾರ್ಮಿಕವಾಗಿ ನುಡಿದ. ಅಜ್ಜ ಅಷ್ಟೇ ಮಾರ್ಮಿಕವಾಗಿ "ಯಾಕಪ್ಪಾ? ಮುಂದಿನ ವರ್ಷ ನೀನು ಇಲ್ಲ ಇರದೇ ಇರುವ ಹಾಗೆ ನಿನಗೇನಾದರೂ ತೊಂದರೆ ಇದೆಯಾ?' ಅಂತ ಕೇಳಿದರಂತೆ. 99 ಅನ್ನೋದೂ ಒಂದು ಸಂಖ್ಯೆ ಮತ್ತು ವಯಸ್ಸು ಅಷ್ಟೇ! ವಯಸ್ಸಾದಂತೆ ಯಾವಾಗಲೋ ಗೊಟಕ್ ಅನ್ನುತ್ತಾರೆ ಎಂಬ ಋಣಾತ್ಮಕ ಮನೋಭಾವ ಯಾಕೆ? ಇಷ್ಟಕ್ಕೂ ಸಾಯಲು ಇಂಥಾ ವಯಸ್ಸು ಅಂತ ಇದೆಯೇ?

Century celebration for Navarasayana Kannada column

"ನೂರು ವರುಷವಾಗಲಿ ಮರೆಯಲಾರೆನು" ಎಂಬ ಮಾತಲ್ಲೇ ಅರಿವಾಗುತ್ತೆ ನೂರು ಎಂಬುದು ದೊಡ್ಡ ಸಂಖ್ಯೆ ಎಂದು. "ನೂರೊಂದು ನೆನಪು ಎದೆಯಾಳದಿಂದ.." ಎಂದಾಗ 'ನೂರೊಂದು' ಎಂಬೋದು ಒಂದು ದೊಡ್ಡ ಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅರ್ಥವಾಗುತ್ತದೆ.

ಹಿರಿಯರು ಕಿರಿಯರನ್ನು ಆಶೀರ್ವದಿಸುವಾಗ "ನೂರ್ಕಾಲ ಸುಖವಾಗಿ ಬಾಳು" ಅಂತಲೇ ಆಶೀರ್ವದಿಸುತ್ತಾರೆ. ಇಲ್ಲಿ ಸುಖವಾಗಿ ಅನ್ನೋದು subjective ಅನ್ನೋಣ. ಸುಖ ಯಾವುದರಿಂದ ಸಿಗುತ್ತೆ? ಆರೋಗ್ಯದಿಂದ ಅಲ್ಲವೇ? ನೂರ್ಕಾಲ ಆರೋಗ್ಯವಾಗಿ ಸುಖವಾಗಿರು ಅಂಬೋದೇ ಆಶೀರ್ವಚನದ ಇಂಗಿತ. ನೂರೂ ವರುಷ ಆರೋಗ್ಯ ಹಾಳಾಗದೇ ಇರಲು ಸಾಧ್ಯವೇ? ಈ ಆಶೀರ್ವಚನಕ್ಕೆ ಅರ್ಥವಿದೆಯೇ? ಎಂಬೋದು ಇತ್ತಂಡವಾದ ಅಷ್ಟೇ!

ನಿಂತ್ಕೊಂಡೇ ನನ್ನ ಪರಿಚಯ, ಕೂತ್ಕೊಂಡೇ ನೀವು ಓದಿರಿ!ನಿಂತ್ಕೊಂಡೇ ನನ್ನ ಪರಿಚಯ, ಕೂತ್ಕೊಂಡೇ ನೀವು ಓದಿರಿ!

ಕಳೆದ ವಾರ sslc ಪರೀಕ್ಷೆ ಫಲಿತಾಂಶ ಬಂತು. ಕುಮಟಾ'ದ ಹೆಣ್ಣುಮಗಳೊಬ್ಬಳು 625ಕ್ಕೆ 625 ಗಳಿಸಿದಳು ಅಂತ ತಿಳೀತು. ಸಾಧನೆಯನ್ನು ಮಾತ್ರ ಗಮನಿಸಿದರೆ ಬಹಳ ದೊಡ್ಡ ಸಾಧನೆ ಅಂತಲೇ ಹೇಳಬೇಕು. ಅರ್ಥಾತ್ ಪ್ರತೀ subject ನಲ್ಲೂ 100% ಅಂಕವನ್ನು ಗಳಿಸಿದ್ದಾಳೆ. ಆಕೆಗೆ ಶುಭವಾಗಲಿ. ಇದೇ ನಿಟ್ಟಿನಲ್ಲಿ ಆಲೋಚಿಸಿದಾಗ ಹಲವು ವಿದ್ಯಾರ್ಥಿಗಳಿಗೆ ನೂರಕ್ಕೆ ಒಂದಂಕ ಕಡಿಮೆ ಬಂದಿದ್ದರೂ ತಾವೊಬ್ಬ failure ಎಂಬಂತೆ ಖಿನ್ನರಾಗುತ್ತಾರೆ. ಈ ನೂರು ಅನ್ನೋ ಸಂಖ್ಯೆಯ ಮಾಯೆಯೇ ಇದು. ಒಂದು ಮನಸ್ಸನ್ನು ಹೇಗೆ ಬೇಕಾದರೂ ಆಡಿಸಬಲ್ಲದು.

Century celebration for Navarasayana Kannada column

ಕ್ರಿಕೆಟ್'ನಲ್ಲಿ ಈ ನೂರು ಎಂಬುದು ಎಂಥಾ ಮಾಯೆ ಮಾಡುತ್ತದೆ ಎಂದರೆ, ಒಬ್ಬ batsman 90 ದಾಟಿದ ಎಂದ ಕೂಡಲೇ ಪುಕಪುಕ ಆರಂಭವಾಗುತ್ತದೆ. ಎರಡು ರನ್ ತೆಗೆದುಕೊಳ್ಳುವ ಸಂದರ್ಭದಲ್ಲೂ ಒಂದೇ ರನ್ ಓಡಿ ತಣ್ಣಗಾಗುತ್ತಾನೆ. ಬೌಂಡರಿ ಹೊಡೆಯಲು ಧೈರ್ಯ ತೋರಿದರೂ sixer ಅನ್ನು ಯತ್ನವನ್ನೇ ಮಾಡುವುದಿಲ್ಲ. ಕೆಲವೊಮ್ಮೆಯಂತೂ ಪಾಪ 99ಕ್ಕೆ ಔಟ್ ಆಗಿರುವವರೂ ಇದ್ದಾರೆ. ಇನ್ನು ಬೌಲರ್ ಕಥೆ ಇನ್ನೊಂದು ರೀತಿ. ಈವರೆಗೆ 99 ವಿಕೆಟ್ ಗಳಿಸಿದ್ದಾನೆ ಎಂದುಕೊಳ್ಳಿ. ಆತ ಬೌಲ್ ಮಾಡುವ ಪ್ರತೀ ಬಾಲ್ ಅವನಿಗೆ ಮಹತ್ತರವಾಗಿರುತ್ತದೆ. ಬ್ಯಾಟ್ಸಮನ್ ಕ್ಯಾಚ್ ಕೊಡಬಹುದು ಆದರೆ fielder ಹಿಡಿಯದೇ ಹೋಗಬಹುದು, ವಿಕೆಟ್ ಗಳಿಸಬಹುದು ಆದರೆ ಅದು noball ಆಗಬಹುದು ಹೀಗೆ. ಅದೃಷ್ಟ ಕೈಕೊಟ್ಟರೆ ಆ matchನಲ್ಲಿ ಮತ್ತೊಂದು ವಿಕೆಟ್ ಗಳಿಸದೆಯೇ ಹೋಗಬಹುದು. ಹೀಗೇ ಈ ನೂರು ಎಂಬುದು ಮಸ್ತಾಗಿ tension ಕೊಡುವ ಒಂದು ಸಂಖ್ಯೆ.

ವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನ

ಪ್ರಸಿದ್ಧ ಪುರುಷರು ಇಲ್ಲವಾಗಿದ್ದಾಗಿಯೂ ಅವರ ಜನ್ಮ ಶತಮಾನೋತ್ಸವವನ್ನು ಅದ್ದೂರಿಯಾಗಿಯೇ ಆಚರಿಸುತ್ತೇವೆ. ಅದು ಅವರಿಗೆ ಸೇರುತ್ತದೆಯೇ ಎಂಬ ವಾದ ಎಷ್ಟೋಸಾರಿ ಬಂದು ಸತ್ತಿದೆ. ಇಂಥವರು ಇದ್ದಿದ್ದರೆ ಅವರಿಗೆ ನೂರು ವರುಷ ತುಂಬುತ್ತಿತ್ತು ಎಂಬ ಸಂಭ್ರಮ ಮತ್ತು ಸಾಧನೆಯ ಸ್ಮರಣೆ ಎಂದಷ್ಟೇ ಇಲ್ಲಿ ಗಮನಿಸಬೇಕಾದುದು.

ಅಮೇರಿಕದ ಇತಿಹಾಸದಲ್ಲಿ ಇಂಥ ಒಂದು 'ನೂರರ' ಸಂಭ್ರಮ ಮುಂದಿನ ವರ್ಷ ನಡೆಯಲಿದೆ. ಆಗಸ್ಟ್ 18, 1920 ಅಮೇರಿಕಾದ ಕಾಂಗ್ರೆಸ್, ಹೆಂಗಳೂ ಮತದಾನಕ್ಕೆ ಅರ್ಹರು ಎಂದು ಘೋಷಿಸಿತು. ಹೆಣ್ಗಳನ್ನು ತುಳಿಯದ ದೇಶವೇ ಇಲ್ಲ ಎನಿಸುವುದಿಲ್ಲವೇ? ಇರಲಿ, ಇಂಥಾ ಒಂದು amendment ಬಂದು ನೂರು ವರ್ಷವಾಯಿತು ಅನ್ನೋದು ದೊಡ್ಡ ಸಂತಸ ಸುದ್ದಿ.

ಅದರಂತೆಯೇ ನಮ್ಮಲ್ಲೂ ಒಂದು ಶತಮಾನೋತ್ಸವ ಕೆಲವೇ ವರ್ಷಗಳಲ್ಲಿ ಬರಲಿದೆ. ಮೇ 1, 1923'ರಂದು ಇಂದಿನ ಚೆನ್ನೈ'ನಲ್ಲಿ ಮೊದಲ ಬಾರಿಗೆ labour day ಆಚರಿಸಲಾಯ್ತು. 2023'ರ ಮೇ ಒಂದನೆಯ ತಾರೀಖು 'ಶ್ರಮಿಕ್ ದಿವಸ್'ನ ಶತಮಾನೋತ್ಸವ.

ಆಂಗ್ಲದ ಸಂಖ್ಯೆ 100 ಎಂಬುದನ್ನು ರೋಮನ್ ಸಂಖ್ಯೆಯಲ್ಲಿ "C" ಎಂದು ಬರೆಯಲಾಗುತ್ತದೆ. ಸೆಂಚುರಿ ಎಂದರೆ 100 ಇದಕ್ಕೆ ಮೂಲ ಲ್ಯಾಟಿನ್ ಪದವಾದ centum. ಶತಮಾನೋತ್ಸವ ಎಂದರೆ centenary ಎಂದೆಲ್ಲಾ ನಮಗೆ ಗೊತ್ತಿದೆ. ಈಗ ಹೇಳಿ, ಒಂದು ಅಂಕಣ ಬರಹಕ್ಕೆ ಅರ್ಥಾತ್ ಒಂದು ಅಂಕಣಕ್ಕೆ ಅಂತ ಬರೆದ ನೂರನೆಯ ಬರಹಕ್ಕೆ ಏನಂತಾರೆ?

ಈ ನನ್ನ ಬರಹ ದಟ್ಸ್ ಕನ್ನಡದ (ಒನ್ಇಂಡಿಯಾ ಕನ್ನಡ) 'ನವರಸಾಯನ' ಅಂಕಣದ ಅಡಿಯಲ್ಲಿ ಮೂಡಿ ಬಂದಿರುವ ನೂರನೆಯ ಬರಹ. ನೂರು ವಾರಗಳಲ್ಲಿ ಎಲ್ಲಿಯೂ ಬ್ರೇಕ್ ತೆಗೆದುಕೊಳ್ಳದೇ ಅರ್ಥಾತ್ ಅವಿರತವಾಗಿ ಬರೆದುಕೊಂಡು ಬಂದಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಓದುಗರು. ಬರಹಕ್ಕೆ ಮೆಚ್ಚುಗೆ ಸೂಸಿದ್ದಾರೆ, ಬರಹದಲ್ಲಿ ಹೇಳಿರುವ ವಿಷಯಗಳನ್ನು ಸೂಕ್ಷ್ಮವಾಗಿ ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ಓದಿದ್ದನ್ನು ಮತ್ತೊಬ್ಬರಲ್ಲಿ ಹಂಚಿಕೊಂಡಿದ್ದಾರೆ, ಮತ್ತು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

ಪ್ರತೀ ಗುರುವಾರದಂದು "ನವರಸಾಯನ'ವನ್ನು ಉಣಬಡಿಸಲು ಸಹಕರಿಸಿದವರು ಸಂಪಾದಕ ವರ್ಗದ ಪ್ರಸಾದ ನಾಯಿಕ. ಇವರ ಅನುಪಸ್ಥಿತಿಯಲ್ಲಿ ತೆರೆಯಮರೆಯಲ್ಲಿ ಸಹಕರಿಸಿದವರು ಶ್ರೀನಿವಾಸ್ ಮಠ ಅವರು. ನನ್ನಲ್ಲಿ ವಿಶ್ವಾಸವಿರಿಸಿ, ಅಂಕಣದಲ್ಲಿ ಬರೆಯುವಂತೆ ಪ್ರೋತ್ಸಾಹಿಸಿದ ಪ್ರಸಾದ್ ಅವರಿಗೆ ಅನಂತಾನಂತ ವಂದನೆಗಳು.

ಹಲವಾರು ವರ್ಷಗಳ ಹಿಂದೆ, ನಾನು ಲೇಖನಿ ಕೈಗೆತ್ತಿಕೊಂಡು ಬರೆಯಲು ಆರಂಭಿಸಿದ್ದೇ ದಟ್ಸ್ ಕನ್ನಡದ ತಾಣದಲ್ಲಿ. ಅಲ್ಲಿ ಮೂಡಿಬರುತ್ತಿದ್ದ ಶ್ರೀವತ್ಸ ಜೋಶಿ, ತ್ರಿವೇಣಿ ರಾವ್ ಮುಂತಾದವರ ಅಂಕಣ ಲೇಖನಗಳನ್ನು ಓದಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದೆ. ಆದರೆ ಒಂದು ಲೇಖನ ಬರೆಯಲು ಭಯ ಇತ್ತು. ನನ್ನದೇ ಒಂದು ಬರಹವನ್ನು ಅಲ್ಲಿ ಮೂಡಿಸಲು ಕೊಂಚ ಸಮಯ ತೆಗೆದುಕೊಂಡೆ. ನಂತರದ ದಿನಗಳಲ್ಲಿ ಹಲವಾರು ಹಾಸ್ಯ ಬರಹಗಳನ್ನು ಬರೆದಾಗ ಪ್ರೋತ್ಸಾಹಿಸಿದವರು ಶಾಮ್ ಸುಂದರ ಮತ್ತು ಪ್ರಸಾದ ನಾಯಿಕ. ಮುಂದೆ ಹಲವಾರು ತಾಣಗಳಲ್ಲೂ ಬರೆದು ಕೊಂಚ ಪಳಗಿದ ಮೇಲೆ ಪ್ರಸಾದ್ ಅವರು ಒಂದು ಅಂಕಣ ಬರೆಯಲು ಆಹ್ವಾನಿಸಿದಾಗ ಬಹಳ ಸಂತೋಷವಾಯ್ತು. ಇದು ಹೇಗೆ ಎಂದರೆ ನೀವು ಓದಿದ ಶಾಲೆಯಲ್ಲಿ ನಿಮಗೇ ಗೌರವಾನ್ವಿತ ವ್ಯಕ್ತಿಯಾಗಿ ಆಹ್ವಾನಿಸಲ್ಪಡುವ ಸನ್ನಿವೇಶ.

ಎರಡು ವರುಷಗಳ ಹಿಂದೆ ಆರಂಭವಾದ ಯಾನ "ನವರಸಾಯನ". ಇಂಥದ್ದೇ ಪೈಕಿಯ ಬರಹವನ್ನು ಬರೆಯುತ್ತೇನೆ ಎನ್ನದೇ, ನವ ರಸಗಳನ್ನು ಉಣಬಡಿಸುವ ಯತ್ನ ಮಾಡುತ್ತೇನೆಂದು ಅಂಕಣಕ್ಕೆ "ನವರಸಾಯನ" ಎಂದು ಹೆಸರಿಟ್ಟೆ. ಬಹುಶ: ಅಂದುಕೊಂಡಂತೆ ನಡೆದುಕೊಂಡಿದ್ದೇನೆ ಎಂದು ನಂಬಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ. ನನ್ನಿಂದ ಇನ್ನೂ ಹೆಚ್ಚು ಬರಹಗಳು ಮೂಡಿ ಬರಲಿ ಎಂದು ಆಶೀರ್ವದಿಸಿ. ಮತ್ತೊಮ್ಮೆ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರಿಗೂ ಶುಭವಾಗಲಿ.

English summary
Century celebration for Navarasayana Kannada column. Congratulations to the author, Richmond resident Srinath Bhalle. Information-rich articles with a lace of humor have enthralled, entertained the readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X